Saturday, February 23, 2013

ಅವನ ಕರಿಯೇ ತಾಯೀ...

--------------------
ಬೀದಿ ಕೊನೆಯಲ್ಲಿ ಸಾಣೆ ಹಿಡಿವಾತನ
ಮಶೀನಿನ ಕಿರ್ರನೆ ಶಬ್ಧ...
ರೇಜಿಗೆ ತರುತ್ತಿದ್ದುದು, ಇಂದು ತಾರದೆ
ಬೇಗ ಬಳಿಬರಲೆನಿಸಿತ್ತು...
ಕಾದು ಕೂತ ಕಾಲು ಮೇಲೇಳಲೊಲ್ಲವು
ಎಲ್ಲಕ್ಕಿಂತ ತುರ್ತಿದೆಂಬಂತೆ.

"ಚೂರಿ, ಚಾಕು, ಕತ್ತಿ, ಮಚ್ಚು.. ಸಾಣಾ..ರಿಪೇರಿ..."
ನನ್ನೆದುರೇ, ನನ್ನೆದೆಗಿಳಿದ ಶಬ್ಧಗಳು.
ನೂರು ಮಾತಿದ್ದರೂ ಬಿಟ್ಟಬಾಯಿ ಮೂಕ,
ಒಳಗೆ ಗುಂಯ್ಗುಡುವ ಪ್ರಶ್ನೆ ದುಂಬಿಹಿಂಡಂತೆ-
"ಆಗಲೇ ಬಿಡದೆ ಮುರಿಯುತಿವೆ, ಕೊಚ್ಚುತಿವೆ
ಇನ್ನಷ್ಟು ಚೂಪಾಗಿಸಬೇಕೇನಪ್ಪಾ?
ಕಳೆದ ಆಯುಧಪೂಜೆಗೆ ತೊಳೆದು ಕೈಮುಗಿದಾಗ
ಹೊಳೆಯುತಿದ್ದವು, ಈಗ ತುಕ್ಕೂ ಹಿಡಿದಿಲ್ಲ..
ನಾ ಮುರಿವವಳಲ್ಲ, ಕೊಚ್ಚುವಳಲ್ಲ,
ನೀನವನೀಗ ಚೂಪಾಗಿಸಬೇಕಿಲ್ಲ..."

ಕಣ್ಣೋದಿದವನಂತೆ ಮುಂದೆ ಸಾಗಿದ್ದ...
ಮತ್ತದೇ ಶಬ್ಧಗಳು ನೆರೆಮನೆಯೆದುರಿಗೆ....
ಮನ ವಿಹ್ವಲ - ಅವರು ಚೂಪಾಗಿಸಿದರೆ?!
ಬೇಡ, ಮುರಿವವು-ಕೊಚ್ಚುವವು ಯಾರದಾದರೂ
ಚೂಪಾಗುವುದೇ ಬೇಡ, ಅವನ ಕೂಗಿದೆ- "ಬಾಪ್ಪಾ..".
ಕೇಳಿದೆ- ನನಗರಿವಿಲ್ಲದೇ ದಯನೀಯವಾಗಿ..

"ಬಡ್ಡಾಗಿದೆ ಭ್ರಾತೃತ್ವ, ತುಕ್ಕಾಗಿದೆ ಸಮಾನತೆ,
ಅಂತಃಕರಣ, ಕರುಣೆ ಹರಿದು ಚಲ್ಲಾಪಿಲ್ಲಿ,
ಸಂಪರ್ಕಕೊಂಡಿ ಕಳಚಿ ಸಂಬಂಧ ಸಡಿಲವಿಲ್ಲಿ,

ಚೂಪಾಗಿಸಿ, ತುಕ್ಕು ಕೆರೆದು,
ಮುರಿದವಕೆ ರಿಪೇರಿ ಸಾಧ್ಯವೇ?
ಬಂಧ ಬಿಗಿಯಾಗಿಸುವೆಯಾ?
ಮನುಷ್ಯತ್ವ ಮೊಂಡಾಗಿದೆ, ಸಾಣೆಹಿಡಿಯಬಲ್ಲೆಯಾ?"

ಎಂದೂ ಎತ್ತದವ ಅಂದು ಮುಖವೆತ್ತಿದ,
ನನ್ನ ಕಂಬನಿಯ ಮರಿ ಅವನ ಕಣ್ಣಲ್ಲಿ.
ಕಣಕಣದಿ ಪ್ರತಿಫಲಿಸಿ ಸಹಾನುಭೂತಿ,
ಅವನ ನಿತ್ಯಮೌನ ಮಾತಾಗಿತ್ತು...
"ಹೀಗೆ ಸಾಣೆ ಹಿಡಿವ ಮಶೀನಿದಲ್ಲ ಅವ್ವಾ,
ಈ ರಿಪೇರಿಗಾಗೋ ಉಪಾಯವೆನ್ನಲಿಲ್ಲ.."
ಜೋಡಿಸಿದ ಕೈಯ್ಯೆತ್ತಿ ಅಕಾಶ ತೋರಿದ
ಅಸಹಾಯ ನಗು ಗುಣುಗುಣಿಸಿದಂತಿತ್ತು...
"ಅವನ ಕರಿಯೇ ತಾಯೀ".

2 comments:

  1. ಚೂರಿ, ಚಾಕು, ಕತ್ತಿ, ಮಚ್ಚು.. ಸಾಣಾ..ರಿಪೇರಿ... ಗೂ
    ತುಕ್ಕು ಹಿಡಿಯುತ್ತಿರುವ ಮನುಷ್ಯನ ಬಾಂಧವ್ಯಗಳ ಮಾಡಲಾಗದ ರಿಪೇರಿಗೂ
    ಮಧ್ಯೆ ಮೂಡಿರುವ ಸದ್ದಿಲ್ಲದಾರ್ಥನಾದದ ಕವನ...
    "ಅವನ ಕರೀ ತಾಯೀ..."

    ನಿಜವಾಗಿಯೂ ಮನಸ್ಗೆಸಿಗೆ ಬೇಸರವಾಗಿದೆ ಅಂದರೆ ತುಂಬಾ ಚನ್ನಾಗಿದೆ... ಅಂತಲೇ....

    ReplyDelete
  2. ಸಾಣೆ ಹಿಡಿಯಲೇಬೇಕಾದ ನಮ್ಮೊಳಗಣ ಮನುಜ ಭಾವಗಳಿಗೆ ಸಾಣೆ ಹಿಡಿಯಬೇಕಾದದ್ದು ನಾವೇ...
    ಆದರೆ ನಮ್ಮಲ್ಲಿ ಸಾಣೆ ಹಿಡಿಸಿಕೊಂಬ ಮನಸಿದೆಯಾ ಅಥವಾ ಅವ ಸಾಣೆ ಹಿಡಿದರೆ ತಡೆದುಕೊಂಬ ಶಕ್ತಿ ಇದೆಯಾ...
    ಎಲ್ಲ ಅಯೋಮಯ...
    ತುಂಬ ಚಂದದ ಬರಹ....

    ReplyDelete