Sunday, February 24, 2013

ಓ ಮೈ ಗಾಡ್ ಎಂಬ ನನಗೆ ತುಂಬಾ ಹಿಡಿಸಿದ ಹಿಂದಿ ಚಿತ್ರವೊಂದರ ಮೇರೆ ನಿಶಾನ್ ಎಂಬ ಹಾಡು ಮನಸಲ್ಲಿ ಅಚ್ಚೊತ್ತಿದೆ. ಕುಮಾರ್ ಅನ್ನುವವರ ಸಾಹಿತ್ಯವನ್ನು ಕೈಲಾಶ್ ಖೇರ್ ತುಂಬಾ ಆಪ್ತವೆನಿಸುವ ರೀತಿ ಹಾಡಿದ್ದಾರೆ. ಹೀಗೂ ಇರಬಹುದಾದ ದೇವರ ಮನೋಸ್ಥಿತಿಯ ಬಗ್ಗೆ ಯಾವತ್ತಾದರೂ ನಾವು ಚಿಂತಿಸಿದೀವಾ?! ಭಾವಾನುವಾದದ ಪ್ರಯತ್ನ ಮಾಡಿದೀನಿ, ಓದಿನೋಡಿ.






ಲೋಕ ಮನುಷ್ಯರ ನಡುವೆ ನನ್ನ ಕಾಣೆ ಮಾಡಿ

ಅಂಗಡಿಯ ಚಿತ್ರಗಳಲಿ ವಿರಾಜಮಾನ ಮಾಡಿದೆ.

ನನ್ನಿವೇ ಕೈಗಳಿಂದ, ಅಲ್ಲ, ಮಣ್ಣಿಂದಲ್ಲ,

ಭಾವರಸಗಳಿಂದ ನಾ ಸೃಜಿಸಿದ ಈ ಲೋಕದಲ್ಲಿ

ಇಂದು ಹುಡುಕುತ್ತಾ ಅಲೆಯುತ್ತಿದ್ದೇನೆ

ನಾನೆಲ್ಲಿ, ನನ್ನ ಗುರುತೆಲ್ಲಿ?!



ನಡೆವಾಗ ಬಿಡದೆ ಹಿಂದೆ ಛಾಯೆಯಾಗಿ

ನಿನ ತಾಪಕೆ ತಂಪೆರೆಯುವ ನೆರಳಾಗಿ,

ಬಾಳಪಥದುದ್ದಕೂ ಸಂಗಾತಿಯಾಗೊದಗಿದೆ,

ನೀ ಮಾತ್ರ ಉತ್ತರಕೇ ಪ್ರಶ್ನೆ ಹುಡುಕಿದೆ,

ಬೆಳಕ ಸ್ಪಷ್ಟತೆಯಲೂ ತಡಕಾಡಿದೆ,

ಎಲ್ಲಿ, ಯಾಕೆ ಕಳೆದು ಹೋದೆ?!

ನಾನೆಲ್ಲಿ, ನನ್ನ ಗುರುತೆಲ್ಲಿ?!



ಈ ಹಕ್ಕಿ, ಹರಿವ ನೀರು ನೋಡು

ನನ್ನಿಂದ ಹುಟ್ಟಿ, ನೆಲಮುಗಿಲ ನಡುವೆ

ನನ್ನ ಮತವನೇ ಸಾರಿ ಬಾಳಿವೆ.

ನೀನು, ನಿನ್ನ ಹಣೆಬರಹ, ಬಾಳಪಟದ ಭಾವಚಿತ್ರಗಳು

ನನ್ನಿಂದಲೇ ಮೂಡಿಯೂ ಯಾಕೆ ಮೂಕವಾಗಿವೆ?!

ನಾನೆಲ್ಲಿ, ನನ್ನ ಗುರುತೆಲ್ಲಿ?!

2 comments:

  1. ನಂಗೂ ಈ ಹಾಡು ಇಷ್ಟ
    ಭಾವಾನುವಾದ ಚೆನ್ನಾಗಿದೆ

    ReplyDelete
    Replies
    1. ಹೌದಾ ಸ್ವರ್ಣ, ನಾನು ಅದೆಷ್ಟು ಸಲಹಾಡ್ತಾ ಇರ್ತೇನೆ ಇದನ್ನ ಅಂದ್ರೆ, ನನ್ನ ೯ ವರ್ಷದ ಮಗಳೂ ಪ್ರಭಾವಿತಳಾಗಿ ಹಠ ಹಿಡಿದು, ಬಾಯಿಪಾಠ ಮಾಡ್ಕೊಂಡು ಹಾಡ್ತಾಳೆ.

      Delete