Wednesday, February 27, 2013

ಅವನಲ್ಲ, ಅಕ್ಷರವಿಳಿದವು.

--------------------
ಅದೇ ರಾತ್ರಿ, ಅದೇ ಚಂದ್ರ,
ಅದೇ ಚಂದ್ರಿಕೆ...ಬಂದಾಗೆಲ್ಲ
ಒಮ್ಮೊಮ್ಮೆ ಮುದ್ದು ಸುರಿಸಿ,
ಒಮ್ಮೊಮ್ಮೆ ಕಾಡಿ ಬಿಡುವವು...

ಬರೀ ಕತ್ತಲೆಯೇ ಇರುಳು,
ಅಸ್ಪಷ್ಟತೆಯಷ್ಟೇ ಹೊರಲು?
ಸಂಧ್ಯೆ ರವಿಯ ಸಾರುವ ರಥ,
ಚಂದ್ರ ಮಲಗೋ ಮಡಿಲು,
ರಾತ್ರಿರಾಣಿಯ ಉಯ್ಯಾಲೆ,
ತಾರೆ ಜೋಗುಳದ ಶ್ರುತಿ
ಕಣ್ಣು-ನಿದಿರೆಯ ಕಳ್ಳಭೇಟಿಯ ತಾಣ,
ಜಗಕೆ ಕಪ್ಪಿನ ಸಾಕ್ಷಾತ್ಕಾರ
ಹೀಗೆ ಹಲ ಕಾರ್ಯಗಳ ಸರದಾರ.

ಬರೀ ದರ್ಪಣವೇ ಚಂದ್ರ,
ನಮ್ಮೊಳಗ ಬಿಂಬಿಸಲು?
ಇರುಳ ಮುದ್ದಿನ ಕಂದ,
ತಾರೆಗಳ ಮನದಿನಿಯ,
ಚಂದ್ರಿಕೆಯ ಬಾಳಸಖ,
ಇಳೆಯ ಪ್ರೇಮಾರ್ಥಿ,
ರವಿಪ್ರಭೆಯ ಬಾಡಿಗೆದಾರ,
ಹಲ ಪಾತ್ರಗಳೊಡೆಯನವ...

ಬರೀ ಬೆಳಕೇ ಚಂದ್ರಿಕೆ
ನಮ್ಮಿರುಳ ದಾರಿಗೊದಗಲು?
ಕಪ್ಪಲಡಗಿದ ಬಿಳಿ,
ಚಂದ್ರನ ಪೂರ್ಣತೆಗೆ ಬೇಲಿ,
ಕತ್ತಲೊಡಲಿಗೊಂದು ಸಾಂತ್ವನ,
ತಾರೆ ತೂತಾಗಿಸಿದ ಬಿಳಿ ಚಾದರ,
ರಾತ್ರಿಯಟ್ಟಹಾಸಕೆ ಕಟೆಚ್ಚರ
ಹೀಗೆ ಹಲ ರೂಪಗಳೊಡತಿ.

ಹುಣ್ಣಿಮೆಯೊಂದು ರಾತ್ರಿ ಚಂದ್ರ
ಜಾಜಿಯೆಲೆಯ ಜಾರುಬಂಡೆಯಾಗಿಸಿ
ಜಾರುತಿದ್ದ ಎಲ್ಲ ಮರೆತು..
ನಾ "ಬಿದ್ದ ನೋಡೀಗ" ಎನುತ
ಧರೆಗಿಳಿವುದನೇ ಕಾಯುತಿದ್ದೆ
ಎಲ್ಲ ಮರೆತು...
ಅವ ನೆಲಕಿಳಿಯದ ಅಳಹೀಗಷ್ಟು
ಅಕ್ಷರ ಹಾಳೆಗುದುರಿ ಸಂತೈಸಿದವು.








4 comments:

  1. ಹಲವು ಚಿತ್ರಗಳನ್ನು ಕಟ್ಟಿಕೊಟ್ಟ ಅಮೋಘ ಕವನ.

    "ಸಂಧ್ಯೆ ರವಿಯ ಸಾರುವ ರಥ,
    ಚಂದ್ರ ಮಲಗೋ ಮಡಿಲು,
    ರಾತ್ರಿರಾಣಿಯ ಉಯ್ಯಾಲೆ,
    ತಾರೆ ಜೋಗುಳದ ಶ್ರುತಿ"
    ಎಲ್ಲಿಯೋ ತೇಲಿ ಹೋದೆ....



    ReplyDelete
    Replies
    1. ನಿಮ್ಮನ್ನ ತನ್ನ ಲಹರಿಯಲ್ಲಿ ತೇಲಿಸಿದರೆ ಕವನಕ್ಕೆ ಅದಕ್ಕಿಂತ ಸಾರ್ಥಕತೆ ಬೇಕಾ ಸರ್, ಧನ್ಯವಾದಗಳು.

      Delete
  2. ಕಣ್ಣು-ನಿದಿರೆಯ ಕಳ್ಳಭೇಟಿಯ ತಾಣ,

    ತಾರೆ ತೂತಾಗಿಸಿದ ಬಿಳಿ ಚಾದರ,

    ಜಾಜಿಯೆಲೆಯ ಜಾರುಬಂಡೆಯಾಗಿಸಿ

    ನಿಮಗೇ ಇಂತಹ ಕಲ್ಪನೆಗಳು ಹೊಳೆಯಬೇಕು...
    ಕಣ್ಣು-ನಿದಿರೆಯ ಕಳ್ಳಭೇಟಿಯ ತಾಣ.. ತುಂಬಾ ಚಂದದ ಸಾಲು

    ಶುಕ್ರಿಯಾ.....

    ReplyDelete
    Replies
    1. ಧನ್ಯವಾದಗಳು ರಾಘವ, ನಿಮ್ಮ ಪ್ರೋತ್ಸಾಹದ ಮಾತುಗಳೇ ನನ್ನ ಬರವಣಿಗೆಯ ಬಂಡವಾಳ, ಬರ್ತಾ ಇರಿ.

      Delete