Thursday, February 7, 2013

ಒಳನೋಟ


--------------------

ಹಕ್ಕಿ ನಾನಲ್ಲವೆಂದು ಅರಿವಾದ ಕ್ಷಣವೇ,

ರೆಕ್ಕೆಯಿಲ್ಲವೆಂಬ ಅಳಲು ದೂರಾಗಿ,

ನೆಲಕೂರಿದ ಕಾಲೆಡೆಗಿನ ದೃಷ್ಟಿ ಬದಲಾಗಿ,

ನಡಿಗೆ ಹಾರಾಟದ ಪ್ರತಿಬಿಂಬವೆನಿಸಿತು.



ಒಲವು ಜಡವಲ್ಲ ಎಂದರಿವಾದ ಕ್ಷಣವೇ,

ಉಳಿಸಿ ಬೆಳೆಸಿ ಕೊಟ್ಟುಪಡೆವ ಭ್ರಮೆಯಳಿದು

ಒಳತಿರುಗಿದ ದೃಷ್ಟಿಯಲ್ಲೇ ದೃಢವಾಗಿ,

ಭಾವಮಥಿಸಿದ ನವನೀತವೇ ಪ್ರೇಮವೆನಿಸಿತು.



ಗುರಿಸಾಧನೆಯೆ ಹಿರಿದಲ್ಲವೆನಿಸಿದ ಕ್ಷಣವೇ,

ಓಡಿ ಮುಟ್ಟಿ ವಶವಾಗಿಸುವ ಧಾವಂತವಳಿದು,

ಯತ್ನದ ಹಾದಿ ಹಿಡಿದ ಹೆಜ್ಜೆ ನಿರಾಳವಾಗಿ,

ಕ್ಷಣದ ತಪಕೆ ಮುಂದಿನ ಕ್ಷಣವೇ ವರವೆನಿಸಿತು.



ನೋವು-ನಲಿವು ಸ್ಥಿರವಲ್ಲವೆನಿಸಿದ ಕ್ಷಣವೇ,

ನಕ್ಕಳುತ ಏರಿಬೀಳುವ ಜಾಯಮಾನವಳಿದು,

ಬಂದದ್ದೆಲ್ಲ ಬರಲೆಂದು ಮನ ಸಜ್ಜಾಗಿ,

ನಿರ್ಲಿಪ್ತತೆ ತೋರಣವಾದ ಪರಿ ಪಕ್ವವೆನಿಸಿತು.



ಗುರುವೂ ಅರಿವೂ ಹೊರಗಿಲ್ಲ,  ಎಲ್ಲಾ ಒಳಗೇ.

ಗಳಿಗೆಗಳಿಗೆಗು ಕಲಿಯಲೆಷ್ಟೋ ಪಾಠಗಳು...

ಪೂರ್ವತಯಾರಿ ಬೇಕಿರದ ಪರೀಕ್ಷೆಗಳು....

ಒಳಗಿನ ಪ್ರಶ್ನೆಗೆ ಒಳಗೇ ಉತ್ತರ...ಆಪ್ತವೆನಿಸಿತು.





2 comments:

  1. ಭಾವ ಮಥಿಸಿದ..
    ಇಷ್ಟವಾದ ಪ್ರಯೋಗ...

    ReplyDelete
  2. ಸೊಗಸಾದ ಕವಿತೆ, ನಿಜವಾಗಿಯೂ ಆಪ್ತವೆನಿಸಿತು :-)

    ReplyDelete