Monday, February 25, 2013

ಅತ್ತ ನಡೆವಾಗ ಪ್ರಶ್ನೆ ತಡೆದಿದೆ...

-------------------
ಇಂದು ರಕ್ತಸುರಿದ ಗಾಯದ ನೋವು ಕಾಡಿ,
ಹರಿಯದ ಕಣ್ಣೀರ ಪಸೆ ಮಿದುಮಾಡಿ ಎದೆನೆಲವ
ಸದ್ದಿಲ್ಲದೊಂದು ಪ್ರಶ್ನೆಯಲ್ಲಿ ಮೊಳೆತಿದೆ...
ನನ್ನೆಲ್ಲಾ ಪ್ರಶ್ನೆಯೂ ನಿನಗೇ, ಉತ್ತರವೂ...
ಸಂಶಯದ ಬೀಜದ ಮೊಳಕೆ,
ಸಂಶಯಿಸಿಯೇ ತಲೆಯೆತ್ತಿದೆ....

ಹಿಂದಡಿಯಿಟ್ಟೀತು, ಒಮ್ಮೆ ಕಣ್ಹಾಯಿಸಿಬಿಡು
ಇದ್ದರೆ ಉತ್ತರದ ಹನಿಯುಣಿಸು,
ವಿಚಿತ್ರ ಬೆಳೆಯಿದು, ನೀ ಹನಿಯಿಸೆ
ಮುರುಟಿ ಇಲ್ಲವಾದರೂ ಆದೀತು, ಅಥವಾ
ದಟ್ಟವಾಗೆದ್ದು ನನನೇ ಮರೆ ಮಾಡೀತು.
ಹಾದರದ ಕೂಸಂತೆ ಅಲ್ಲದೆಡೆ ಮೂಡಿಬಿಟ್ಟಿದೆ
ಳಿಸುವುದು-ಉಳಿಸುವುದು ನಿನಗೆ ಬಿಟ್ಟದ್ದು..

ನಾಳೆ ನಾನಳಿವ ಕ್ಷಣ ಹೇಳಿಕಳಿಸದೆಯೂ
ಮರೆಯಿಂದೀಚೆ ಬರುವೆಯಾ?
ಸುಕ್ಕುಚರ್ಮ, ಸಿಕ್ಕಿ ಹಾಕಿಕೊಂಡ ಉಸಿರಿಗೆ
ಉಕ್ಕಿ ಬರುವ ವಾಕರಿಕೆ ಅಡಗಿಸಿ,
ನಡೆಯಿರದ ಕಾಲು, ಹಾಡಿರದ ಬಾಯಿಗೆ
ತಡೆದು ತಿರುಗಿಸುವ ಅಸಹ್ಯ ಮೆಟ್ಟಿ,
ಕಣ್ಣಲಿ ಕಣ್ಣ ನೆಡುವೆಯಾ ಅಂದಿನಂತೆ?
ಕಣ್ಣೀರ ಮುತ್ತಲೊರೆಸುವೆಯಾ ಅಂದಿನಂತೆ?
ಮುಂದಿಗೂ ನೀನೇ ಬೇಕೆಂಬೆಯಾ ಅಂದಿನಂತೆ?

ಉಳಿದುಸಿರಿನ ಲೆಕ್ಕ ಜಟಿಲವಾಗುತ ಸಾಗಿದೆ
ಗುಣಿಸಿ ಭಾಗಿಸಿ ಶೇಷ ಶೂನ್ಯವಾಗಿಸುವೆಯಾ?
ಸುಳ್ಳಿನಿಂದಲೇ ಸರಿ, ಲೆಕ್ಕ ಮುಗಿಸಿಬಿಡು,
ಪೊಳ್ಳಾದರೂ ಆಶ್ವಾಸನೆಯ ಸಾಲ ಕೊಡು,
ಸಾವು ಸಾಲ ತೀರಿಸೀತು...
ಚಿತೆಯ ಬೂದಿ ಕರುಳಕುಡಿಗಂತೆ,
ನನ್ನದದಿಲ್ಲ, ಬರೆದು ಬಿಡುವೆ ನಿನ್ನ ಹೆಸರಿಗೆ.
ಒಯ್ಯುವೆಯಂತೆ ಬೇಕಾದಷ್ಟು,
ನಿನ್ನರಮನೆಯ ನಂದನ ಹೂವರಳಿಸುವಷ್ಟು..





6 comments:

  1. "ಚಿತೆಯ ಬೂದಿ ಕರುಳಕುಡಿಗಂತೆ,
    ನನ್ನದದಿಲ್ಲ, ಬರೆದು ಬಿಡುವೆ ನಿನ್ನ ಹೆಸರಿಗೆ.
    ಒಯ್ಯುವೆಯಂತೆ ಬೇಕಾದಷ್ಟು,
    ನಿನ್ನರಮನೆಯ ನಂದನ ಹೂವರಳಿಸುವಷ್ಟು"
    ಕಾಡುವ ಸಾಲು, ನಿಮ್ಮ ರಚನೆಗಳ ವೈಶಿಷ್ಟ್ಯ . ಬರೆಯುತ್ತಿರಿ

    ReplyDelete
    Replies
    1. ಧನ್ಯವಾದ ಸ್ವರ್ಣ, ಬರ್ತಾ ಇರಿ, ನಿಮ್ಮ ಪ್ರತಿಕ್ರಿಯೆಗಳೇ ನನಗೆ ಮುನ್ನಡೆಯುವ ಉತ್ತೇಜನವಾಗಬಲ್ಲವು.

      Delete
  2. ತುಂಬ ಚೆನ್ನಾಗಿ ಬರೆದಿದ್ದೀರಿ. ಕವನದ ಭಾವ ಹಾಗು ಛಂದಗಳು ಇಷ್ಟವಾದವು.

    ReplyDelete
  3. "ಉಳಿದುಸಿರಿನ ಲೆಕ್ಕ ಜಟಿಲವಾಗುತ ಸಾಗಿದೆ
    ಗುಣಿಸಿ ಭಾಗಿಸಿ ಶೇಷ ಶೂನ್ಯವಾಗಿಸುವೆಯಾ?"

    ಈ ಪ್ರಶ್ನೆಯೇ ಬದುಕಿನಲಿ ಪದೇ ಪದೇ ಕಾಡುವುದು ಎನಗೂ...

    ಅದ್ಭುತ ಪ್ರಸ್ತುತಿ...

    ReplyDelete