Monday, May 20, 2013

ಸ್ಪಷ್ಟವಾಗದಿರು ಸತ್ಯವೇ...


ಇಂದು ಬೆಳಗಾಗಲಿಲ್ಲ,
ಬರೀ ಸೂರ್ಯನಷ್ಟೇ ಬಂದ.
ಭಾವಗಳಿಗಸ್ಪರ್ಶೆ ಉಷೆ
ಬಣ್ಣವುಟ್ಟರೂ ಒಪ್ಪವೆನಿಸದ
ಗೆಜ್ಜೆ ತೊಟ್ಟರೂ ಲಯವಿಲ್ಲದ
ನಗು ಇದ್ದರೂ ಸೊಗವೆನಿಸದ
ಸಪ್ಪೆ ನಡೆ, ಗೈರು ಅಂದಚಂದ.

ಕೋಳಿ ಕೂಗು ಕರ್ತವ್ಯವೆಂಬಂತೆ,
ಹಕ್ಕಿಯಿಂಚರ ಪಸೆ ಕಳಕೊಂಡಂತೆ
ದೂರ ದೇಗುಲದ ಗಂಟೆಯೂ,
ಗಡಿಯಾರದೆಚ್ಚರಿಕೆಯೂ ಒಂದೇ ಎಂಬಂತೆ,
ದಪ್ಪ ಚರ್ಮದ ಮನಕಿಂದು ಭಾವಜಾಡ್ಯತೆ.

ಒಳಗೆಲ್ಲ ಏನೋ ಆವರಿಸಿದಂತೆ
ತನುಮನದ ಪರಿಧಿ ತಿಳಿವು ದಾಟಿದಂತೆ
ಚಾಚಿ ಕರೆಯಲಾಗದ ಕೈ,
ಹೆಸರಿಟ್ಟು ಕೂಗಲಾಗದ ಬಾಯಿ..
ಅಂಗ ಮತ್ತರಿವಿನ ಸೇತು ಕಡಿದು ಹೋದಂತೆ...

ವಿಸ್ತರಿಸುತಾ ನಿರ್ವಾತ ಉಸಿರ ಕೊಲ್ಲುತಿದೆ,
ತುಂಬಿದ್ದೆಲ್ಲ ಮೊಗೆಮೊಗೆದು ಹೊರಚೆಲ್ಲುತಿದೆ,
ನಿನ್ನೆಯೊಳ ಬಗಿದು ಕರುಳ ಮಾಲೆಯುಡುವ ಸಿಟ್ಟು,
ಅಳಿಸಿ ಪಡೆವಾತುರದಿ ಶೂನ್ಯದಲೆ ಹೊಸಹುಟ್ಟು.

ಪ್ರಶ್ನೆ ಹುಟ್ಟಿಯೇನೋ ಬಿಟ್ಟಿದೆ, ದನಿಯಾಗಲಿಲ್ಲ..
ನೆನಪ ಹೊತ್ತ ರಥಕೀಗ ಚಕ್ರಗಳೇ ಇಲ್ಲ,
ದೂಡುತಿಹ ತೀವ್ರತೆಗೆ ನಾ ನಿಲಲಾಗುತಿಲ್ಲ,
ಖಾಲಿಯಾಗಿಸುವ ನಡೆಗಿಲ್ಲಿ ವೇಗಮಿತಿಯಿಲ್ಲ...

ಅಸ್ಪಷ್ಟತೆಯ ಬಸಿರಲಿ ಅಂಥ ಬೀಜದ ಕುರುಹು,
ಕಂಡೂ ಕಾಣದಂತೆ ಬಿತ್ತಿದ ಕೈಗಳದೂ ಅಚ್ಚು,
ಮಂದ ದೃಷ್ಟಿ ಬೇಡವೆನುತಿದೆ ಇನ್ನೂ ಸ್ಪಷ್ಟತೆ,
ಆ ಕೈರೇಖೆಯಲಿ ನನ್ನ ನಿನ್ನೆ-ನಾಳೆ ಬರೆದಂತಿದೆ.

2 comments:

  1. ಅನೂ... ನೀನ್ಹೇಗೆ ಓದ್ತಿ ನನ್ನ ಮನದ ಭಾವ! ಅನೂ ಅನೂ....

    ReplyDelete
    Replies
    1. ಮೊನ್ನೆಯ ಒಂದು ದಿನ ನೀನೇ ನಿನ್ನೊಳಗಿನ ಕೀಲಿಕೈ ಕೊಟ್ಟಿದ್ದೆ ಅಲ್ಲ್ವಾ...ನಾನಲ್ಲೆಲ್ಲ ಓಡಾಡಿ ಓದಿಬಿಟ್ಟೆ...

      Delete