ಆ ಎತ್ತರ ಎತ್ತರವೇ,
ನಾನಲ್ಲಿರಿಸಿದ್ದು ನಿನ್ನ,
ನೀನಿರುವುದಲ್ಲಿಯೇ...
ನೀ ಬಾಗುವುದಾದರೆನ್ನ
ಹಣೆ ಚುಂಬಿಸಲಿಕಿರಬೇಕು,
ತಪ್ಪು ಹೊರಲಾರದ್ದಕ್ಕಲ್ಲ.
ತಪ್ಪುಸರಿಗಳ ಸಾಪೇಕ್ಷತೆ
ಇಂದ್ದು ನಿನ್ನೆಯದಲ್ಲ,
ನಾಳೆಯಳಿವದ್ದೂ ಅಲ್ಲ..
ಇಂದು ಹೌದೆನಿಸಿದ್ದು ನಾಳೆ,
ನಿನಗೆ ಹಾಗನಿಸಿದ್ದು ನನಗೆ,
ಹಾಗನಿಸುವುದಿಲ್ಲ.
ಸತ್ಯಮಿಥ್ಯ, ಧರ್ಮಾಧರ್ಮಗಳೂ
ಹೀಗೆ ವೈದೃಶ್ಯ ಜೋಡಿಗಳೆಲ್ಲವೂ
ಸಾಪೇಕ್ಷ ಸಿದ್ಧಾಂತದಡಿಯಾಳುಗಳು..
ಒಂದಷ್ಟೇ ಇಂಥದ್ದು ನೋಡು ಜಗದಿ
ವೈದೃಶ್ಯ ಜೋಡಿಪದ ಬಂಧವಿಲ್ಲದ್ದು..
ಅದು ಪ್ರೇಮ... ಹಾಂ ಅದೇ..
ನನ್ನ ನಿನ್ನಲ್ಲಿ ಹಂಚಿಹೋದದ್ದು
ಹಂಚಲ್ಪಟ್ಟು ಇಮ್ಮಡಿಸಿದ್ದು...
ನೀಡಿದಷ್ಟೂ ವೃದ್ಧಿಯಾದದ್ದು..
ಬೆಳೆಯುತಾ ಆಯುಷ್ಯ
ಹೆಚ್ಚಿಸಿಕೊಳುವದ್ದು..
ಲೋಕರೂಢಿಗೆಂದೂ ಅರ್ಥವಾಗದ್ದು
ಜಟಿಲವೂ ಹೌದು, ಸರಳವೂ..
ನೋವೂ ಹೌದು, ನಲಿವೂ..
ನನದೂ ಹೌದು ನಿನದೂ...
ಏನನಾದರೂ ಸಾಗಿಸಬಲ್ಲುದು
ಒಂದುಗೂಡಿಸುವ ಸೇತುವದು,
ನಿರಾಕರಣೆಯೊಂದು ಬಿಟ್ಟು...
ಬಾಗದಿರು ಒಲವೇ...
ಇರು ನಿನ್ನೆತ್ತರಕೆ ನಾನೇರಲಿರುವೆ,
ತೂಕ ಕಳಕೊಳತಿರುವೆ,
ಹಗುರಾಗುತಿರುವೆ, ನಾ ಬರುತಿರುವೆ..
ಒಂದೇ ಮಾತು.. ಒಲವಿನ ಮಹಾ ಕಾವ್ಯ! An ultimate definition of eternal LOVE!!!
ReplyDeleteನಂಗೇನೂ ಬೇಜಾರಾಗೊಲ್ಲ.. ಪ್ರತೀ ಸಲ ಅದೇ ಮಾತು ಮತ್ತೆ ಮತ್ತೆ ಹೇಳೊಕೆ ಖುಷಿಯಾಗೊತ್ತೆ.. ಹೆಮ್ಮೆಯಾಗುತ್ತೆ.. ಬಹಳ ಬಹಳ ಚೆನ್ನಾಗಿದೆ ಕಾವ್ಯ ಅನೂ!
ನಂಗೂ ಅದನ್ನೇ ಮತ್ತೆ ಮತ್ತೆ ಕೇಳಲಿಕ್ಕೆ ಖಂಡಿತಾ ಸಂತೋಷವೇ ಶೀಲಾ.. thank you so much.
Delete