Monday, May 6, 2013

ನಿನಗೆಲ್ಲ ದಕ್ಕಲಿ.

---------------

ನಿಂತಲ್ಲೆ ನಿಶ್ಚಲ ನಿಂತಿದ್ದೆ,
ಕನಸು ನನಸಾದಿನ್ನೊಂದು ಕನಸಲ್ಲಿ.
ಅಲುಗಾಡಿಸಿತ್ತು, ಉಸಿರಾಗಿ ಹೊಕ್ಕಿತ್ತು,
ಮೈಯ್ಯೆಲ್ಲ ಕಂಪಾಗಿಸಿತ್ತು ನೀ ಬಂದ ಘಮ..

ಗಾಳಿಯಲೆ ಹೊತ್ತು ತಂದಿತ್ತು
ನೀ ಹೇಳಿದ್ದು, ಹೇಳದೆ ಅರುಹಿದ್ದು,
ಭಾವಿಸಿದ್ದು, ಭಾವಿಸದೆ ಅನುಭವಿಸಿದ್ದು,
ಯೋಚಿಸದೆ ಅನಾಯಾಸ ಕಳಚಿ ಕಳಿಸಿದ್ದು.

ನಿರೀಕ್ಷಿಸಿರಲಿಲ್ಲ, ಬಲು ಭಾರದುಡುಗೊರೆಗೆ ಕೈ ಜಗ್ಗಿದೆ.
ಹೌದು-ಅಲ್ಲಗಳ, ಇದೆ-ಇಲ್ಲಗಳ, ಪ್ರಶ್ನೆಗಳ,
ಎಲ್ಲಕ್ಕಿಂತ ಹೆಚ್ಚು ನಿಟ್ಟುಸಿರ ರಾಶಿಯೊಳಗೆ
ಕುಸಿದು ಹೂತೇ ಹೋಗಿದೆ ನೀ ನೆಲೆಸಿದ್ದ ಮನ..

ಇರಬಹುದು,
ಕಳುಹುವ ಮುನ್ನ ಪರೀಕ್ಷಿಸಿಲ್ಲದೆ,
ಆರಿಸಿಲ್ಲದೆ, ತಿದ್ದುಪಡಿ ಮಾಡಿಲ್ಲದೆ,
ದುಡುಕಲಿ ನೀ ದೂಡಿದ್ದೇ ಇರಬಹುದು.

ಆದರೂ ನೋಡು...
ಬಂದುಬಿಟ್ಟಿದೆ ಬಾಣ, ಇಲ್ಲವೆನಲಾಗದು.
ಮುಟ್ಟಿಬಿಟ್ಟಿದೆ ಗುರಿಯ ವಿಷಲೇಪಿತ ಅಲುಗು.
ನೀಲಿ ತಿಳಿಮನಸು, ರಾಡಿ ಉಳಿದ ಬದುಕು..

ನೀನೆಂದೂ ನೀನೇ ಇಲ್ಲಿ, ಬಹುಶಃ ನಾನುಳಿದಿಲ್ಲ ನಾನಾಗಲ್ಲಿ.
ಸಿಕ್ಕಿದ್ದು ಭಾಗ್ಯ, ಸಿಕ್ಕದ್ದು ನನದಲ್ಲದ್ದೇ ಸರಿ.
ದಕ್ಕಿದ್ದು-ದಕ್ಕದ್ದು ನನಗಿಲ್ಲಿ, ಎಲ್ಲ ದಕ್ಕಲಿ ನಿನಗಲ್ಲಿ.
ಹಾಗೋ, ಹೀಗೋ.. ಹೇಗೋ ಒಂದು ತರದಲ್ಲಿ.





5 comments:

  1. ಅಕ್ಕಾ ನಿನ್ನ ೆಷ್ಟೋ ಕವಿತೆ ಓದುವಾಗ ನಂಗೆ
    ವೇದನೆಯಂಥದ್ದೇನೋ ಭಾಸವಾಗ್ತು....
    ನನಗೊಬ್ಬನಿಗೆ ಮಾತ್ರವೋ ಏನೋ....

    ಎಲ್ಲಕ್ಕಿಂತ ಹೆಚ್ಚು ನಿಟ್ಟುಸಿರ ರಾಶಿಯೊಳಗೆ
    ಕುಸಿದು ಹೂತೇ ಹೋಗಿದೆ ನೀ ನೆಲೆಸಿದ್ದ ಮನ..

    ಮುಟ್ಟಿಬಿಟ್ಟಿದೆ ಗುರಿಯ ವಿಷಲೇಪಿತ ಅಲುಗು.
    ನೀಲಿ ತಿಳಿಮನಸು, ರಾಡಿ ಉಳಿದ ಬದುಕು..

    ಕೊನೆಯ ಸಾಲುಗಳೂ ಸಹ ಜೊತೆಗೆ....

    ಯೋಚಿಸಿದರೆ ತುಂಬಾ ಆಳವಾಗಿದೆ....

    ನನಗಂತೂ ದಕ್ಕಲಿಲ್ಲ... ನಿನಗಾದರೂ ದಕ್ಕಲಿ ಎನ್ನುವ ಭಾವವೇ....?

    superb ಅಕ್ಕಾ.....

    ReplyDelete
    Replies
    1. ಹೇ ತಮ್ಮಾ ಅಂಥದ್ದೇನೂ ಇಲ್ಲಪ್ಪಾ.. ಇದೊಂದು ರಂಗೋಲಿ ಅಂದ್ಕೋ. ಎಲ್ಲ ಚುಕ್ಕಿಗಳೂ ನನದೇ ಕೈಯ್ಯವಲ್ಲ. ಅಲ್ಲೊಂದಷ್ಟು ಅವರ ಕೈಯ್ಯದ್ದು, ಇಲ್ಲೊಂದಷ್ಟು ಇವರ ಕೈಯ್ಯದ್ದು... ಕೊನೆಗೆ ಎಲ್ಲ ಸೇರಿಸಿ ಎಳೆದ, ಒಂದುಗೂಡಿಸಿದ ಭಾವದ ಗೆರೆ, ಅದರ ನಡೆ ಮಾತ್ರ ನನ್ನದ್ದು. ಈ ವೇದನೆಯ ಸಂಪೂರ್ಣ ರೂಪ ಅಲ್ಲಿಂದ ಇಲ್ಲಿಂದ ಹೆಕ್ಕಿದ ಹಲಚೂರುಗಳನ್ನು ಸೇರಿಸಿ ಹೊಲಿದ ಒಂದು ಕರವಸ್ತ್ರದ್ದು ಅಂತಿಟ್ಟುಕೋ. ಅದು ನಿನಗೂ ಕಣ್ಣೊರೆಸುವಲ್ಲೋ ಇನ್ನೆಲ್ಲೋ ಸ್ವಲ್ಪ ಒದಗಿದರೆ ಅಲ್ಲೇ ಅದರ ಸಾರ್ಥಕತೆ. ಇನ್ನು ನನಗೆ ದಕ್ಕಿದ್ದೂ ಜೊತೆಗೆ ದಕ್ಕದ್ದೂ ನಿನಗೆ ಸಿಕ್ಕಲಿ ಅನ್ನುವದ್ದು ಅದು ನನ್ನದ್ದೇ ಭಾವ. ನನ್ನ ಆತ್ಮೀಯತೆಯ ಪರಿಧಿಯೊಳಗೆ ಬರುವ ಎಲ್ಲರಿಗೂ ನಾನು ಮನಸಾರೆ ಹಾರೈಸುವ ಮಾತದು. ಧನ್ಯವಾದ ಕಣೋ, ನನ್ನೆಲ್ಲ ಪ್ರಯತ್ನಗಳಿಗೆ ಜೀವತುಂಬುವ ನಿಮ್ಮೆಲ್ಲರ ಭಾಗವಹಿಸುವಿಕೆ ಮತ್ತು ಅದರ ಆತ್ಮೀಯತೆಗೆ.

      Delete
    2. ಖಂಡಿತಾ.....
      ನೀ ನೇಯ್ದ ಕರವಸ್ತ್ರ ಉಪಯೋಗವಾಗಿದೆ....
      ಮಾತೇ ಇಲ್ಲಾ....

      ಎಷ್ಟೆಷ್ಟೋ ದಿನಗಳಿಗೊಂದು ಸಾರಿ
      ನಿನ್ನ ಕವನಗಳ ಪುಟ ತಿರಿಸುತ್ತಿರುತ್ತೇನೆ ಮತ್ತೆ ಮತ್ತೆ...
      ಆನಂದಕ್ಕಿಷ್ಟು... ದುಃಖಕ್ಕಿಷ್ಟು.... ಒಂಟಿತನಕ್ಕಿಷ್ಟು....
      ಬೇಸರಕ್ಕಿಷ್ಟು.....

      Delete
  2. ಸಾವಿರ ಹಿಂಸೆಗಳ ನಡುವೆಯೂ ಅರಳುವಂತೆ ಜೀವಜೀಲ, ತಮ್ಮ ಈ ಕವನದ ಹೂರಣ ಕ್ಷಮಾಯಾ ಮನಸ್ಸನ್ನು ಹೇಳಿಕೊಡುತ್ತದೆ. "ಸಿಕ್ಕಿದ್ದು ಭಾಗ್ಯ, ಸಿಕ್ಕದ್ದು ನನದಲ್ಲದ್ದೇ ಸರಿ." ನಮಗೆ ಸಿಕ್ಕ ಮಾನವ ಜೀವನವನ್ನು ತೋರುವ ದಾರಿ.

    ReplyDelete
  3. ಧನ್ಯವಾದಗಳು ಬದರಿನಾಥ್ ಸರ್. ಸುಮಾರು ನಲವತ್ತರ ಹತ್ತಿರ ವಯಸ್ಸು ಬರುತ್ತಿದ್ದಂತೆ ಬಹುಶಃ ಬದುಕು ಅಪ್ರಯತ್ನವಾಗಿ ಕಲಿಸಿಕೊಡುವ ಅತಿ ಅನಿವಾರ್ಯವಾದ ಪಾಠಗಳಲ್ಲಿ "ಬದಲಾಯಿಸಲಾಗದ ಅಸಹನೀಯ ಸಂದರ್ಭಗಳಲ್ಲಿ ನಾವೇ ಅದಕ್ಕೆ ತಕ್ಕಂತೆ ಬದಲಾಗಬೇಕು" ಅನ್ನುವುದೂ ಒಂದು, ಆ ಪಾಠದ ಸಹಾಯಕ ಅಭ್ಯಾಸಗಳಲ್ಲಿ "ದಕ್ಕಿದ್ದು ನಮ್ಮ ಭಾಗ್ಯ, ದಕ್ಕದ್ದು ನಮ್ಮದಲ್ಲದ್ದು" ಅನ್ನುವದ್ದೂ ಒಂದು.

    ReplyDelete