Wednesday, May 22, 2013

ಬುದ್ಧನ ಬೋಧಿವೃಕ್ಷ ಬಾಡಿದ್ದು.




ಬುದ್ಧನ ಬೋಧಿವೃಕ್ಷ ಬಾಡುತಿದೆಯಂತೆ..

ಮರ ಮರುಗದು ಇರದುದಕೆ
ಪ್ರತಿ ಕೇಳದು ತಾನಿತ್ತುದಕೆ.
ನರಗರ್ಥವಾಗದು ನಿಸ್ವಾರ್ಥತೆ,
ನಿರ್ಲಿಪ್ತತೆ, ನಿರಾಕಾರತೆ ಮತ್ತು ನಿರ್ಮಮತೆ...
ಅವ ಬಯಸುತಾನೆ.
ಕೀಳಿ, ಕಿತ್ತು, ಕೆತ್ತಿ, ಕೊನೆಗೆ ಕಡಿದೇ ಬಿಡುತಾನೆ ಖಾಲಿಯಾಗಿಸಿ.
ಇಲ್ಲ ಅತಿ ನಂಬುತಾನೆ,
ಮೆಚ್ಚಿ, ಮೆಚ್ಚಿಸಿ, ಅಪ್ಪಿಒರಗಿ, ಒಳಗಿಳಿದು,
ಆವರಿಸಲ್ಪಟ್ಟು ಕೊನೆಗೆ ತಾನಿಲ್ಲವಾಗುತಾನೆ ಖಾಲಿಯಾಗಿ.

ತನ್ನಂತೆ ಪರರ ಬಗೆದ ನರಮನಸು
ಮರಕೂ ಈವೆನೆಂದು ಹೊರಟಿದೆ.
ಸಿದ್ಧಾರ್ಥ ಬುದ್ಧನಾದೆಡೆಯ ಮಣ್ಣಿಗೆ
ತಾನೆರೆಯತೊಡಗಿದೆ,
ನೆಲೆಯ ಬೆಳಗತೊಡಗಿದೆ,
ಉದ್ಧಾರಕತೃವ ಉಪಕೃತವಾಗಿಸಿ
ತಾನೆತ್ತರಕೇರಬಯಸಿದೆ.

ಅಲ್ಲ......
ತಂಪಿತ್ತುದಕೆ ಕಂಪೀವುದಕೆ,
ಬೆಳಕಿತ್ತ ನೆಲೆಯ ಬೆಳಗಲಿಕೆ,
ಮಳೆಹೊತ್ತ ಬಸಿರ ತಣಿಸಲಿಕೆ,
ಉಸಿರಿತ್ತ ಹಸಿರಿಗೆ ನಮಿಸಲಿಕೆ
ಧಾವಿಸಿ ಬಹ ನರಜಾತ್ರೆಯಬ್ಬರಕಲ್ಲ....

ಬುದ್ಧನ ಹಿಂಬಾಲಿಸಿ,
ನುಡಿಗಳನುಚ್ಛರಿಸಿ,
ಮಂತ್ರ ಬದಲಾಯಿಸಿ,
ತಂತ್ರಗಳ ಅರಗಿಸಿ,
ಏನೇನು ಮಾಡಿದರೂ
ಮುಂದೊಬ್ಬ ಬುದ್ಧ ಹುಟ್ಟದುಳಿದುದಕೆ...

ನಾಳೆಯ ರೂಪಿಸುತಾ, ಕೂಡಿಕಳೆದು,
ವೇಳಾಪಟ್ಟಿ ಬರೆದು, ಅಕಾಶಕೇಣಿ ಹಾಕುತಾ
ಇಂದುಗಳ ಬದಿಸರಿಸುವ,
ಆಸೆಯ ಕೊನೆಯ ಸಾರುವಲ್ಲಿ
ಆಸೆಯನೇ ದಿಕ್ಸೂಚಿ ಮಾಡಿ ಸಾಗುವ,
ಆಸೆಗಾಸೆಯದೇ ಛದ್ಮವೇಷ ತೊಡಿಸುವ,
ಮೌಢ್ಯದ ಬಿರುಸ ನಾಲ್ಕು ತಲೆಮಾರಲೂ
ತಂಗಾಳಿ-ನೆರಳಿತ್ತು ಶಾಂತವಾಗಿಸಲಾಗದ ಕೊರಗಿಗೆ...

ಬುದ್ಧನ ಬೋಧಿವೃಕ್ಷ ಬಾಡುತಿದೆಯಂತೆ..











4 comments:

  1. "ಆಸೆಯನೇ ದಿಕ್ಸೂಚಿ ಮಾಡಿ ಸಾಗುವ,
    ಆಸೆಗಾಸೆಯದೇ ಛದ್ಮವೇಷ ತೊಡಿಸುವ,
    ಮೌಢ್ಯದ ಬಿರುಸ ನಾಲ್ಕು ತಲೆಮಾರಲೂ" ಮೆಚ್ಚಿಗೆಯಾಯಿತು.

    ReplyDelete
  2. ಧನ್ಯವಾದಗಳು ಸರ್.. ಬುದ್ಧಗಯಾದಲ್ಲಿ ಬೋಧಿವೃಕ್ಷ ಬಾಡುತ್ತಿರುವುದಕ್ಕೆ ಜನಸಂದಣಿಯ ಕ್ಯಾಂಡಲ್ ಗಳ ಬೆಳಗುವಿಕೆ, ರಾಸಾಯನಿಕಯುಕ್ತ ಊದಿನಕಡ್ಡಿ, ಅರಿಸಿನಕುಂಕುಮ ಹಾಕುತ್ತಿರುವುದು, ಮತ್ತೆ ಜನದಟ್ಟಣೆಯ ಉಸಿರ ಬಿಸಿ- ಇವೆಲ್ಲಾ ಕಾರಣವೆಂದು ಆರೋಪಿಸಿ ಬರೆಯಲಾಗಿತ್ತು ಒಂದು ದಿನಪತ್ರಿಕೆಯಲ್ಲಿ. ನಾನು ಅದಿರಲಿಕ್ಕಿಲ್ಲ ಕಾರಣ, ಇದು ಇದ್ರೂ ಇರಬಹುದು ಅಂತ ಬರೆಯುವ ಪ್ರಯತ್ನ ಮಾಡಿದೆ.

    ReplyDelete