Thursday, May 23, 2013

ಎಚ್ಚರಿಕೆ!!

ಬೆಂಕಿಯುರಿಯುತಿತ್ತು ಧಗಧಗ
ಗಾಳಿ ಬೀಸುತಿತ್ತು ಸರಾಗ
ಅದಕೆ ಶಂಕೆಯಿಲ್ಲ, ಇದಕೆ ಅಂಕೆಯಿಲ್ಲ.

ಎರಡು ಸಂಧಿಸಿದ ಗಳಿಗೆ
ತುಣುಕೊಂದು ಬೆಂಕಿಯದು
ಗಾಳಿಯೊಂದಲೆಯ ಮೇಲೇರಿ
ಒಮ್ಮೆ ಸೀದ, ಒಮ್ಮೆ ಸೊಟ್ಟ
ಏರುತೊಮ್ಮೆ, ಇಳಿಯುತೊಮ್ಮೆ
ಸುತ್ತುತಾ, ಮತ್ತೊಮ್ಮೆ ರೇಖೆಯಾಗುತಾ
ಹೀಗೆ ಸಾಗಿದವು
ಒಂದನೊಂದು ಸಂಭಾಳಿಸುತಾ..

ಗಾಳಿ ಹೊತ್ತ ಚೂರು
ಉರಿದು ಬೆಂಕಿಗಿಂತ ಜೋರು
ಪ್ರಕಾಶವೇ ತಾನೆಂದು ಬೀಗುತಿತ್ತು
ಹಳದಿಯ ಹುಮ್ಮಸ್ಸೆಲ್ಲ ಹೊತ್ತಿತ್ತು.
ಗಾಳಿ ಮೆಚ್ಚಿ ಮುದ್ದಿಡುತಿತ್ತು.
ಕಿಡಿಯಿನ್ನಷ್ಟು ಪ್ರಜ್ವಲಿಸುತಿತ್ತು.

ಉದುರಿದ್ದ ತರಗೆಲೆಯೆನುತಿತ್ತು
"ಕಾಲಾಯತಸ್ಮೈನ್ನಮಃ"
ಗಾಳಿತೇರಲಿ ಜ್ವಾಲೆ ಪೂಜೆ,
"ನಾನು" ಎಂಬುದೇ ಬೀಜಮಂತ್ರ
ಕಿಡಿಯೆಲೆಯ ಬಳಿಸಾರಿತು
ಅದಿದಕೆ ಇದದಕೇನೋ ಹೇಳಬಯಸಿತ್ತು.

ಎಲೆ ಕೊನೆ ಕೇಳುತಿತ್ತು,
ಜ್ವಾಲೆ ಉತ್ಥಾನ ಬಯಸಿತ್ತು
ಒಂದಕೊಂದು ತಾಗಿದ ಕ್ಷಣ
ಬಯಸಿದ ತಾಣಕಾಹ್ವಾನ
ಎಲೆ ಸುಟ್ಟ ಕಿಡಿಯವತಾರ
ಭಗಭಗನುರಿದು ಬೂದಿಯಲಿ ಸಮಾಪ್ತಿ.

ಗಾಳಿ ಬೀಸುತಿದೆ,
ಬೆಂಕಿಯುರಿಯುತಿದೆ.
ಇನ್ನೊಂದು ಕಿಡಿಯೆದ್ದೀತು,
ಗಾಳಿ ಹೊತ್ತು ಸಾಗೀತು, ಎಚ್ಚರಿಕೆ!







5 comments:

  1. ಎಷ್ಟು ಎಚ್ಚರಿಕೆಯಿತ್ತರೂ ಮತ್ತೆ ಕಿಡಿಯೇಳುತ್ತದೆ.. ಮತ್ತೆ ಮತ್ತೆ ಒಣಗಿದ ಎಲೆ ಸುಟ್ಟು ಬೂದಿಯಾಗುತ್ತದೆ.. ಯಾರೂ ತಪ್ಪಿಸಲಾರರು.. ಅದೇ ಅವನ ಲೀಲೆ... ಬಲಿಪಶುಗಳು ನಾವು!
    ಅನೂ,
    ಅಕ್ಷರ ಮಾತೆಯ ಅನುಗ್ರಹದ ಬಲವು ಸದಾ ಜತೆಯಿರಲಿ,..

    ನೀ ನಮ್ಮೆಲ್ಲರ ಭಾವದ ದನಿಯಾಗಿ ಬರೆಯುತ್ತಲೇ ಇರು!

    ReplyDelete
  2. ಖಂಡಿತಾ ಶೀಲಾ.. ಹೀಗೇ ನೇನು ಗಾಳಿಯೂದಿ ನನ್ನನ್ನ ಉಬ್ಬಿಸ್ತಾ ಇರು, ನಾನು ಬರೀತಾ ಇರ್ತೇನೆ ಆಗಬಹುದಾ?

    ReplyDelete
  3. ಯಾವುದಕ್ಕೋ ಕವಿತೆಯ ಹೂರಣ ಅನ್ವಯಿಸಿನೋಡಿದೆ, ಇಲ್ಲಿ ಎಳೆಗೂ ನನಗೂ ಮತ್ತು ವಿಧಿಯೆಂಬ ಬೆಂಕಿಯಲ್ಲಿ ಬೇಯುವ ನನ್ನ ಪ್ರತಿಭೆಗೂ ವ್ಯತ್ಯಾಸವಿಲ್ಲ ಅನಿಸಿತು.

    ReplyDelete
    Replies
    1. ನೀವು ಯಾವುದಾದರೊಂದಕ್ಕೆ ಅನ್ವಯಿಸಿಕೊಂಡು ಕವನದ ಹೂರಣಕ್ಕೆ ಕಲ್ಪನೆಯ ಒಂದು ಮೂರ್ತಭಾವ ಆರೋಪಿಸುವುದು ನಂಗೆ ತುಂಬಾ ಖುಶಿ ಕೊಡುವ ವಿಷಯ. ನಿಮ್ಮ ಈ ಪ್ರೋತ್ಸಾಹಕ್ಕೆ ನಾನು ಋಣಿ ಬದರಿನಾಥ್ ಸರ್. ನಾನು ಇಲ್ಲಿ ಬೆಂಕಿಯನ್ನ ನಮ್ಮ ಅಹಂ ಅಥ್ವಾ ಅತಿ ಅಭಿಮಾನಕ್ಕೆ ಹೋಲಿಸಿ, ಮತ್ತೆ ಗಾಳಿಯನ್ನ ನಮ್ಮ ಪರಿಸರಕ್ಕೆ ಹೋಲಿಸಿ ಬರೆದೆ. ತರಗೆಲೆ ನಮ್ಮ ಹಿಂದಿನ ಅನುಭವ ಅಂತ ಇಟ್ಟುಕೊಂಡು ಬರೆದೆ.

      Delete