ಇಕ್ಕೆಲ ವೃಕ್ಷ ತೂಗಾಡಿ ಕರಚಾಚಿ ಹಾಡಿವೆ,
"ರತ್ತೋರತ್ತೋ ರಾಯನ ಮಗಳೆ..."
ರಸ್ತೆದೀಪದ ಸುತ್ತ ಹಾತೆ ಹಾರಾಡಿ ಆಡಿವೆ
ಪಾರಾದವೆಷ್ಟೋ, ಸತ್ತವೆಷ್ಟೋ...
ಅಲ್ಲೆಲ್ಲೋ ಬುಧ್ಧನ ಶಾಂತಮುಖ
"ಆಸೆಯೇ ದುಖಃಕ್ಕೆ ಮೂಲ"
ಪಕ್ಕದಲೇ ದಾಸರ ಲಯಬಧ್ಧ ರಾಗ
"ಈಸಬೇಕು ಇದ್ದು ಜೈಸಬೇಕು,
ಸಂಸಾರವೆಂಬಂಥ ಭಾಗ್ಯವಿರಲಿ.."
ಅಶೋಕ ಕಳಿಂಗದಿ ಹೊಂದಿದ ವಿರಾಗ,
ಅರ್ಜುನಗೆ ರಣದಿ ಸುಳ್ಳೆನಿಸಿದ ಜಯದ ವೈಭೋಗ,
ವಿರೋಧವನೆತ್ತಿ ಕುಕ್ಕುವ ಕ್ಷಣ ಬಾಹುಬಲಿಯ ತ್ಯಾಗ
ಬಹಳ ಕಾಡುತಾವೆ, ನಶ್ವರತೆಯೇ ಹೌದಾದರೆ ತೋರುವ
ನಿಮಿತ್ತವೆಲ್ಲಿಹುದೋ, ಎಂದೊದಗುವುದೋ?!
ಸವೆದ ದಾರಿ ಹಳತೆನಿಸಿ, ಭೋಧನೆ ಸವಕಲೆನಿಸಿ,
ನೇಮಾದಿಗಳು ಬೂಟಾಟಿಕೆ, ಕಟ್ಟುಪಾಡು ಪೊಳ್ಳೆನಿಸಿ,
ಇಕ್ಕೆಲ ವೃಕ್ಷ ತೂಗಾಡಿ ಹಾಡಿದ್ದು, ಹಾತೆ ಹಾರಾಡಿದ್ದು,
ಬೀಳಿಸಿ ನೋಡುವಾಟಕೊಂದು ನಾಂದಿಯಾದಂತೆ,
ಪ್ರಕೃತಿಯೇ ಸೆರೆಹಿಡಿವ ಜಾಲ ಬೀಸಿದಂತೆ...
ಸತ್ಯವೆಂದಾದರೆ ಅದರ ಶಕ್ತಿ,
ಸುಳ್ಳೆಂದಾದರೆ ಅದರ ನೈಜಾವತಾರ
ತೋರುವ ದಾರಿದೀಪ ಬೇಕೀಗ,
ರಸ್ತೆದೀಪದ ಸೆಳೆತಕೊಳಗಾದ ಹಾತೆಗಳಿಗೀಗ,
ಜ್ಞಾನೋತ್ಕರ್ಷ ಬೇಕಿದೆ, ಬರೀ ಆಕರ್ಷಣೆಯಲ್ಲ.
ಹಲವು ಚಿತ್ರಗಳನ್ನು ಬಿಡಿಸಿಡುತ್ತಾ ಸಾಗುವ ಈ ಕವನ ಹೂರಣ ಮನೋ ಚಿಕಿತ್ಸಕ.
ReplyDelete