Sunday, May 12, 2013

ಅಕ್ಕಾ, ನೀನೊಂದು ಪ್ರಶ್ನೆಯೆನಗೆ


ಅಕ್ಕಾ, ನೀ ಪಕ್ಕಾ ಹಾಗೇ ಇದ್ದೆಯೇನೇ?!
ಒಪ್ಪಲಾಗದೊಂದಪ್ಪಟ ಸೋಜಿಗ ನೀನೆನಗೆ.

ಜಗದ ಜಾಣಕುರುಡು ಆಗಿಂದೀಗಿಗೂ
ಪರಿಶುದ್ಧತೆಯೆಡೆಗೇ ಹೌದು.
ಮತ್ತದರ ಅತ್ಯುತ್ಸಾಹ ಬಗೆಬಗೆದು
ಕೆಡುಕ ಕಾಂಬೆಡೆಗೂ ಹೌದು.
ನಿರೂಪಿಸಿ ನಿನ್ನ ಅಕ್ಕನಾಗೇ ಹೇಗುಳಿದೆ?!

ನಿಷ್ಪಾಪ ಮನವೇನೋ ಸರಿ,
ಬಾಣ ಚುಚ್ಚಿದ ಗಾಯ ಮುಚ್ಚಬಹುದು.
ನಿರ್ವಸ್ತ್ರ ಮೈಯ್ಯ ಹೇಗೆ ಸಂಭಾಳಿಸಿದೆ?!
ದೃಷ್ಟಿ ಬಟ್ಟೆಯ ದಾಟಿಯೂ ಚುಚ್ಚುತಾವೆ,
ನೇರ ಚರ್ಮವ ಹೇಗೆ ಕಾಪಾಡಿದೆ?!

ಶಕ್ತಿ ನಿನದಿದ್ದರೆ ಲೋಕಕೂ ಇತ್ತು,
ದಿವ್ಯ ನಿನದಾದರೆ, ಅದಕೂ ಶೌರ್ಯವಿತ್ತು.
ಧನಬಲ, ಜನಬಲವದರದು ದಿಕ್ಕೆಡಿಸದಿತ್ತೇ?!
ತನು ಬೇಡಿಬೇಡಿ ನಿನದು ಕಂಗೆಡಿಸದಿತ್ತೇ?!
ಬರೆದು ವೈರಾಗ್ಯ ತಾರುಣ್ಯವ ಹೇಗೆ ತುಂಬಿದೆ?!

ನೀನೀಗ ಇಲ್ಲ, ಅಳಿದುದ ಹೊಗಳಲಿಕೆ ಜಗಕಳುಕಿಲ್ಲ,
ಇದ್ದಾಗಲೂ ಹೀಗೆಯೇ ಹಾಡಿ ಹರಸಿತ್ತೇನೇ?
ಬಲ್ಲೆ, ಅದಕಷ್ಟು ದೊಡ್ದ ಬಾಯಿಲ್ಲ, ಇರಿದಿರಿದು
ಸಂಶಯದಕ್ಷಿ ನಿನ್ನತನ ಚೂರಾಗಿಸಿರಬಹುದು,
ಜೋಡಿಸಿ ಮತ್ತದ ಹೇಗೆ ಇಡಿಯಾಗಿಸಿದೆ?!

ಇಂದೇ ಏನು, ಪ್ರತಿ ಹೆಜ್ಜೆಗೂ ನೀ ಕಾಡಿರುವೆ ನನ್ನ,
ನನ್ನನೇ ಏನು, ಪ್ರತಿ ಹೆಣ್ಣುಮನವನ್ನ.
ಪ್ರಶ್ನೆಯಾಗೊಮ್ಮೆ, ಇರುಳಂಥ ಅಸ್ಪಷ್ಟತೆಯಲಿ
ಹಿಂಬಾಲಿಸಲಾಗದ ವೇಗದ ನಡೆಯಾಗೊಮ್ಮೆ.
ಕಾಡುತಲೇ ಒಮ್ಮೆ ಉತ್ತರವಾಗು, ಓಡಿ ಬರುತಿರುವೆ,
ಸಿಕ್ಕೊಮ್ಮೆ ಇಲ್ಲೊಳಗೆ ಪ್ರತಿಷ್ಠಾಪನೆಯಾಗು.



(ನಮ್ಮ ಊರಿನ ಅಕ್ಕನ ಬಳಗದವರು ಇವತ್ತು ಅಕ್ಕನ ಜಯಂತಿಯನ್ನ (ಚುನಾವಣಾ ನೀತಿಸಂಹಿತೆಯ ಪ್ರಯುಕ್ತ ಮುಂದೂಡಲ್ಪಟ್ಟದ್ದು) ಇವತ್ತು ಇಲ್ಲಿನ ಬಸವಸಮಿತಿಯಲ್ಲಿ ಆಚರಿಸಿದರು, ನಾನೂ ಆಕೆಯ ಕೆಲವಚನಗಳನ್ನ ಹಾಡಿದೆ, ಹಾಡುತ್ತಲೇ ಮೂಡಿದ ಕೆಲ ಭಾವನೆಗಳಿವು.)











1 comment:

  1. ಅಕ್ಕನ ವಚನಗಳ ತಿದ್ದುವಿಕೆಯಿಂದ ನಾವೆಲ್ಲ ಆಕ್ಗೆ ಚಿರರುಣಿಗಳು ಮತ್ತು ಆಕೆಯನ್ನು ಕೇಂದ್ರವಾಗಿಟ್ಟು ನೀವು ರಚಿಸಿದ ಈ ಕವನ ಮೆಚ್ಚುಗೆಯಾಯಿತು.
    'ಕಾಂಬೆಡೆ' ನನಗೆ ಹೊಸ ಪದ. :)

    ReplyDelete