ಉದುರಿ ಬಿದ್ದಿವೆ ಅಂಗಳದ ತುಂಬ
ಹಳದಿ ರತ್ನಗಂಧಿಯ
ಹಳದಿ ಒಣಗಿದೆಲೆಗಳು
ಹಳದಿ ಪೂಸಿದ ಬಾಣಂತಿ ಹಸಿಮೈ
ಮಿಂದಿಳಿಸಿದ ಹೊನಲಧಾರೆಯಂತೆ...
ಕವುಚಿ ಬಿದ್ದಿವೆ ಅಲ್ಲೇ ಸ್ವಲ್ಪ ಪಕ್ಕ
ಕಳಚಿ ಅರಳಿಸಿದ ಋಣ
ಬಿಳಿ ಪಾರಿಜಾತ ಹೂಗಳು
ಇರುಳುಟ್ಟ ತಾರೆಸೀರೆ ಕಂಡಿಂದು
ಇಳೆಯುಟ್ಟ ಹೂಬುಟ್ಟದ ಸೀರೆಯಂತೆ...
ಮೆಲುಗಾಳಿ ತುಸುವೇ ಬೀಸಿದ್ದಕೆ
ಎಲೆ-ಹೂ ಹಾರಿ ದೂರಾಗುತಿವೆ.
ಮೈಮನ ತಣಿಸಿದರೂ ತಂಗಾಳಿ ಹೊತ್ತಿದೆ
ಹಳದಿ ಹೊಳೆ, ಬಿಳಿ ಸೀರೆ ಕಲ್ಪನೆ ಕದಡುವ,
ಗುಡಿಸಿಟ್ಟ ಅಂಗಳ ರಾಡಿಯಾಗುವ ಭಯ.
ಕಲ್ಪನೆಯ ಪಲ್ಲಕ್ಕಿಯಲಿ ಸಾರಿ
ನಗು ಚಂದದ ರಾಜಕುಮಾರಿ
ಮುಖ ಮಂಟಪಕಿಳಿದವಳು,
ಜೀಕಿ ಉಯ್ಯಾಲೆಯಾಡಿದವಳು
ತಂಗಾಳಿಯ ಸಂಚಿಗೆ ಬಿಳಿಚಿದಂತೆ....
ಹೆದರಬೇಡವೇ ನಗೆಯೇ....ನಾನಿಲ್ಲವೇ?!
ನೆಲಕಂಟಿಸಿದರಾಯ್ತು, ಅಲ್ಲ ಗೋಂದಿನಿಂದಲ್ಲ
ಹಾರಗೊಡದಿದ್ದರಾಯ್ತು, ಅಲ್ಲ ಭಾರವಿಟ್ಟಲ್ಲ,
ವಿಶ್ವಾಸದ, ನಂಬಿಕೆಯ ಹಸಿಹನಿ ಹಲವಿವೆಯಲ್ಲಾ...
ಕಲ್ಪನೆಯಾದರೂ, ವಾಸ್ತವವಾದರೂ
ನನದಾಗಿದ್ದು, ನನ್ನೊಳಗಿನದು
ನಾ ಹಾರಗೊಡದೆ, ಬೀಳ್ಕೊಡದೆ
ಹೊರಗೆಂತು ಹಾರೀತು?!
ಬಿಟ್ಟೆಂತು ಹೋದೀತು?!
ಇಲ್ಲವೆಂದೆಂತಾದೀತು!?
ಹೆದರಬೇಡವೇ ನಗೆಯೇ....ನಾನಿಲ್ಲವೇ?!
ReplyDeleteನಂಬಿಕೆಯ ಹಸಿಹನಿ ಹಲವು
ಹನಿಸುವೆ... ಕಲ್ಪನೆ, ಹೂ, ಎಲೆ ಯಾವುದೂ ಚದುರದಂತೆ.....
ಅದ್ಭುತ ಸಾಲುಗಳು ಅಕ್ಕಾ....
Thanks Raghav
Deleteತಂಗಾಳಿಯಾದರೂ ಬಿರುಗಾಳಿಯಾದರೂ ಎರಡೂ ಸುಂದರವಾಗಿ ವಿನ್ಯಾಸಗೊಳಿಸಿದ ಮನದ ಅಂಗಳವನು ರಾಡಿ ಮಾಡುವ ಭಯವಿದ್ದೇ ಇದೆ.. ಹ್ಮೂಂ..ಕಲ್ಪನೆಗೆ ಮನ ಸೋತೆ.
ReplyDeleteಅನು,
ಹೌದಲ್ಲ... ನನ್ನೊಳಗಿದನ್ನು ನಾ ಹಾರಗೊಡದೆ, ಬೀಳ್ಗೊಡದೇ ಭದ್ರವಾಗಿ ಕಾಪಾಡಿಕೊಂಡು ಬಂದರೆ ಎಂದೂ ಅದು ನಮ್ಮನ್ನು ತ್ಯಜಿಸುವುದಿಲ್ಲ.. ಇದು ನಿತ್ಯ ಸತ್ಯ!
ಎಂದಿಂತೆ ಕವನ ಕವಯತ್ರಿ ಇಬ್ಬರೂ ಮತ್ತಿಷ್ಟು ನನ್ನಾತ್ಮಕ್ಕೆ ಸನಿಹ..
ಕವಿತೆಯ ಮೂಲಕ ಸತ್ಯವನ್ನು ಮತ್ತು ಸತ್ಯದ ಮೂಲಕ ಸಹೃದಯಿ ಸ್ನೇಹವನ್ನು ಸಮೀಪಿಸುವುದೇ ನನ್ನ ಉದ್ದೇಶ ಶೀಲಾ...
ReplyDelete