ಅಂಗಡಿ ತೆರೆದು ಕೂತಾಗಿದೆ ಮನವೇ,
ಬಂದು ಹೋದೆಲ್ಲರಿಗೂ ಅಳುವುದಾದೀತೇ?!
ನಿನ್ನ ಮಾಲು ಬಯಸುವವ ಬಂದಾನು
ಕೊಂಡು, ಬೆಲೆತೀರಿಸಿ, ಹೋದಾನು..
ಹೋದನೆಂದಳುವುದಾದೀತೆ?!
ಆ ದಿನ ನಾನೂ ನೀನೂ ಹೋಗದುಳಿವುದುಂಟೇ?!
ಹೆಚ್ಚೆಂದರೆ ಲೆಕ್ಕದ ಪುಸ್ತಕದಲೊಂದು
ದಾಖಲೆಯಾದಾನು..
ನಿನ್ನಲ್ಲಿಲ್ಲದ್ದ ಬಯಸುವವನು
ಹಾಗೇ ದಾಟಿ ಮುನ್ನಡೆದಾನು..
ಒಳಬರಲಿಲ್ಲವೆಂದಳುವುದಾದೀತೇ?!
ಇಲ್ಲದ್ದಕ್ಕೆ ನೀ ಕ್ಷಣ ವ್ಯಯಿಸುವೆಯಾ, ಮತ್ತವನೇಕೆ?!
ಹೆಚ್ಚೆಂದರೆ ನಿನ್ನೊಳಗೊಂದು
ಖಾಲಿನೋಟವೆಸೆದಾನು...
ಒಳಗರಿಯದವ, ಸಮಯ ಕೊಲುವವ,
ಮಾಲು ತೆಗೆಸಿ, ಮುಟ್ಟಿ ತಿರುವಿ, ಅಂದಗೆಡಿಸಿ, ಬೆನ್ನಿಕ್ಕಿ ನಡೆದಾನು.
ಒಪ್ಪದ್ದಕ್ಕೆ ಅಳುವುದುಂಟೇ?!
ತೆರೆದ ಅಂಗಡಿ, ತೂಗಿ ಒಳಕರೆವುದಾದೀತೆ?!
ಹೆಚ್ಚೆಂದರೆ ಒಳನಡೆದ ಹೆಜ್ಜೆಯಂಕೆಸಂಖ್ಯೆ
ಹೆಚ್ಚಿಸಿಯಾನು.
ದುಗುಡ ಬಿಡು, ಬಾಗಿಲಂತೆ ಮುಕ್ತ ತೆರೆದುಕೋ..
ಆಗುಹೋಗಿಗೆ ಕಣ್ಣಷ್ಟೇ ಆಗು
ಬಂದುದ ಒಳಬಿಡು, ಹೋದುದ ಬಿಟ್ಟುಬಿಡು..
ವಸ್ತುವಾದರೂ, ಭಾವವಾದರೂ ಜಗ ಮೆಚ್ಚುವದ
ಹೊಂದುವುದೊಂದು ಅಸಾಧ್ಯ ವ್ಯಾಪಾರ..
ಒಪ್ಪುವುದು ಬಿಡುವುದು ಲೋಕದ್ದು, ಅಂಗಡಿಯಷ್ಟೇ ನಿನ್ನದ್ದು.
ವಾವ್ ವಾಹ್....
ReplyDeleteಸಖತ್ತಾಗಿದೆ ಮೇಡಮ್...
ಕಲ್ಪನೆ ಇಷ್ಟ ಆಯ್ತು...
thank you chinmay.
Deleteಅನು, ಬದುಕಿನ ಮರ್ಮವ ಎಷ್ಟು ಚಂದ ಮಾಡಿ ಬಿಚ್ಚಿಟ್ಟಿದಿರಿ. ಈಸಬೇಕು ಇದ್ದು ಜಯಿಸಬೇಕು. ತಾವರೆಯ ಮೇಲಿನ ಹನಿಯಂತೆ ಬದುಕಿನಲ್ಲಿ ನಮ್ಮದಲ್ಲದನ್ನು ಒಂದೊಮ್ಮೆ ಎಲ್ಲೋ ತಪ್ಪಿ ತಂಗಾಳಿ ಹೊತ್ತು ನಮ್ಮ ಮಡಿಲಲಿ ಚೆಲ್ಲಿದರೆ ಅದನ್ನು ಬೀಳ್ಕೊಡುವ ತಾಕತ್ತನ್ನು ಬೆಳೆಸಬೇಕು... ಗಟ್ಟಿಯಾಗಬೇಕು ಒಳಗಿನಿಂದ ಹೊರಗಿನಿಂದಲೂ.. ಗುಲಾಬಿ ಎಷ್ಟೇ ಆಕರ್ಷಕವಾಗಿರಲಿ ಜತೆಗಿರುವ ಮುಳ್ಳು ತಾಗದಂತೆ ಜಾಗ್ರತೆವಹಿಸಬೇಕು. ಮುಳ್ಳು ಚುಚ್ಚಿ ನೋವಾದರೂ ಮದ್ದನ್ನು ಹಚ್ಚಿ ಗುಣ ಪಡಿಸಬೇಕೇ ವಿನಾ ಅಳುತ್ತಾ ಕೂರುವುದಲ್ಲ. ಅಲ್ವೇ ಅನೂ.
ReplyDeleteಕವನವಂತೂ ಹೃದಯದೊಳಗೆ ಸರಾಗವಾಗಿ ಇಳಿಯಿತು.
ನಿಜ ಶೀಲಾ...
Delete