Saturday, June 15, 2013

ಅಲ್ಲೂ ಅದೇ... ಇಲ್ಲೂ ಅದೇ

ವಿಗ್ರಹದ ಮುರಿದ ಮೂಗು-ಮೊಲೆಗಳಲ್ಲಿ
ಘಜನಿ, ಘೋರಿ ಹಿಡಿದ ಖಡ್ಗ, ಕುದುರೆಯ ಹೇರವ
ಕ್ರೌರ್ಯದ ಕೇಕೆ ವಿಜೃಂಭಿಸಿದವು.

ಶೃಂಗಾರ ಭಾವದುತ್ಪತ್ತಿಯ ಭಂಗಿ
ಕಲ್ಲಲಿ ಕಲ್ಲಾದಂತೆ ಕಂಕಣ್ಣಿನೆದೆಯಲಿ
ಶೋಕ ಕ್ರೋಧವಷ್ಟೇ ಸ್ಫುರಿಸುವವು.

ಸಂಜೆ ಟೌನ್ ಹಾಲ್ ನೆದುರು ಲಿಪ್ಸ್ಟಿಕ್ ನಡಿ
ಹೂತುಹೋದ ಮನೆಕೆಲಸದವಳ ನಗುವಲ್ಲಿ
ನನ್ನಪ್ಪ, ಅಣ್ಣ, ಗಂಡ, ಮಗನ ಮೀಸೆಯೂ,
ಕಂಡೂ ಕಾಣದಂತಿಣುಕುವವು!

ಹೆಗಲಲೊಂದು ಕಂಕುಳಲೊಂದು ಹೊತ್ತು
ನಸುಕಲಿ ನನ್ನೆಡೆ ನಡೆದುಬಂದ ಹೆಣ್ತನವೂ
ಹಾಗೇ ಇತ್ತು, ಕಲ್ಲಮೂರ್ತಿಯಂತೆ..

ಮಾತು-ನಗುವ ಕೆತ್ತಿ ತೆಗೆದ ಖಡ್ಗವಲ್ಲದ
ಆ ಪುರುಷತ್ವವೂ ಅವನ್ನೇ ಸ್ಫುರಿಸಿದ್ದು
ಆಶ್ಚರ್ಯವೇನಲ್ಲವೆನಿಸುತ್ತದೆ.


1 comment:

  1. ಹಲವು ಚಿತ್ರಗಳನ್ನು ಪೋಣಿಸುತ್ತಾ ಮೀಸೆ ತಿರುವುವ ಅಹಂಕಾರವನ್ನು ಕಟ್ಟಿಕೊಟ್ಟಿದ್ದೀರಿ.

    ReplyDelete