Monday, June 24, 2013

ಎಲ್ಲವೂ ಅಡಕವೇ ಎಲ್ಲೆಡೆ ..


ಕಣ್ಣು ಎಷ್ಟೆಂದರೂ ಕಣ್ಣೇ
ಏನೆಲ್ಲಾ ಹುಡುಕಬಹುದಲ್ಲಿ?!

ನಿರ್ಮಲ ನೀರಸೆಲೆ
ಎರಡು ತಿಳಿಗೊಳಗಳು
ಅಡಕವೆಷ್ಟೋ ಅಡಿ ತಳಮಳದಲೆ
ಅದಕಡಗುದಾಣ ಮೆದುಳು..

ಮಾತು ಎಷ್ಟಂದರೂ ಮಾತೇ
ಏನೆಲ್ಲಾ ನಿಜವಿರಬಹುದಲ್ಲಿ?!

ಮುತ್ತು ಮೂಡುವುದಕಿಲ್ಲಿ
ಚಿಪ್ಪಿಲ್ಲ, ಸ್ವಾತಿಹನಿ ಬೇಕಿಲ್ಲ...
ಸತ್ಯಸುಳ್ಳಲ್ಲದ ಗೊಂದಲ
ಆಡಿದ ಬಾಯಿಗೂ ಅಪರಿಚಿತವಿಲ್ಲಿ..

ನಡೆ ಎಷ್ಟಂದರೂ ನಡೆಯೇ
ಎಷ್ಟರಮಟ್ಟಿಗೆ ನೇರವಿರಬಹುದಲ್ಲಿ?!

ಗೂನುಬೆನ್ನು, ಕುಂಟುಕಾಲಲೂ
ಸದೃಢಕಾಯದ ಪ್ರತಿಚರ್ಯೆಯಲೂ
ಗುಟ್ಟೊಂದೊಳಗೇ.. ಬಲು ನಾಚಿಕೆಯದಕೆ
ಎಳೆದಿತ್ತ ತರುವ ಬಗೆ ತಿಳಿದಿಲ್ಲ ಜಗಕೆ..

ಮುಗ್ಧಕಣ್ಣಲಿ, ಮುಕ್ತ ಮಾತಲಿ
ಮುಂದಿರುವ ದಿಟ್ಟ ನಡೆಯಲಿ
ಕಿತ್ತುಕೊಂಡುಂಡ ಹಸಿವೆಯ ಗುಟುಕು
ಚಿಂದಿಮಾಡಿದ ಹೆಣ್ಣಮಾನದ ಮುಸುಕು
ಮುರಿದಿಟ್ಟ ಕಂದನ ನಾಳೆಯ ಕನಸು
ಇಣುಕಿಯಾವೇ, ಕತೆ ಹೇಳಿಯಾವೇ...
ಸುಳಿವಾದಾವೇ...

(ಮಣಿಪಾಲ ರೇಪ್ ಕೇಸ್ ನ ಅಪರಾಧಿಗಳ ರೇಖಾ(ಭಾವ)ಚಿತ್ರ ಕೊಟ್ಟಿದ್ದುದರಲ್ಲಿ ಅಪರಾಧಿಗಳೆನಿಸಿಕೊಂಡವರ ಮುಖ ನೋಡಿ ಅನ್ನಿಸಿದ್ದು)







2 comments:

  1. ಅಮಾನವೀಯ ಅತ್ಯಾಚಾರಿಗಳು ಬೇಗ ಸೆರೆ ಸಿಕ್ಕಲಿ. ಭಾರತೀಯ ಕಾನೂನುಗಳು ಇನ್ನೂ ಕಠಿಣವಾಗಿ ಇವರನ್ನು ಶಿಕ್ಷಿಸಲಿ.

    ReplyDelete