Saturday, June 22, 2013

ಹುಶಾರು ಕಣೇ....

ಹುಶಾರು ಕಣೇ..

ಇನ್ನೇನಲ್ಲ, ಪಾಚಿಗಟ್ಟಿದ ನೆಲ,
ತಾ ತಾನಾಗಿಲ್ಲದ ಹೊದಿಕೆಯಡಿ
ಏಕಾಂಗಿಯಲ್ಲ, ಅದಕೊಂಟಿತನ ನೋಡು
ಒಳಗುದಿ ಕೇಳಲು ಯಾರೋ ಬೇಕೆನಿಸಿ
ಸೆಳೆದು ಬೀಳಿಸಿಕೊಳ್ಳುತದೆ,
ಕಾಲಲಿರಲಿ ಎಚ್ಚರದ ಮನ.

ಇನ್ನೇನಲ್ಲ, ಅಲ್ಲೊಂದಿದೆ ಪಾಳುಬಾವಿಯೂ..
ಖಾಲಿತನ ತುಂಬಿಸುವ ಚಪಲವದಕೆ
ಹುಡುಕಿ ಸೆಳೆವ ಮಂಕುಬೂದಿಯೆರಚಿ
ಬೇಕಾದ್ದು, ಬೇಡದ್ದು ಎಲ್ಲ ಕೇಳುತದೆ.
ಬೇಡದ್ದು ಕೊಟ್ಟುಬಿಡು, ಬೇಕಾದ್ದನಡಗಿಸಿಡು
ತೆರಕೊಳುವಲ್ಲಿರಲಿ ಎಚ್ಚರದ ಮನ...

ನೀ ಶ್ರೀಗಂಧ,
ಹಣೆಗೊತ್ತಿಕೊಳುವರಂತೆ
ಮೆಟ್ಟಲಿ ಮೆಟ್ಟಿ ನಡೆವವರಿದ್ದಾರೆ

ನೀ ಪಾರಿಜಾತ, ಮುತ್ತಿಕ್ಕಿ ಮುಡಿಗಿಡುವರಂತೆ
ಕೆಂಪುಚೊಟ್ಟು ತಿಕ್ಕಿ
ಅಂಗೈ ಕಂಪಾಗಿಸುವರಿದ್ದಾರೆ.

ಹುಶಾರು ಕಣೇ..
ನೀನೀಗ ಕನ್ನಡಿ
ತಮ್ಮನೇ ಕಂಡುಕೊಳುವವರಂತೆ,
ಅಪ್ಪಳಿಸಿ ಚೂರಾಗಿಸಿ ನಡೆವರಿದ್ದಾರೆ.













2 comments:

  1. ಅನು, ತುಂಬಾ ತುಂಬಾ ಇಷ್ಟವಾಯಿತು... ಈ ಪರಿಯ ಅಕ್ಕ, ಗೆಳತಿ, ಅಮ್ಮ ಇದ್ದರೆ ಯಾರೂ ಇನ್ನು ಮುಂದೆ ಪಾಚಿ ನೆಲದ ಮೇಲೆನೇ ನಡೆಯೊಲ್ಲ, ಜಾರಿ ಬೀಳುವ ಮಾತೆಲ್ಲಿ ಮತ್ತೆ!
    ಇಂತಹ ಗೆಳತಿ ಸಿಗಲು ಪುಣ್ಯ ಮಾಡಿರಬೇಕು.
    ಎಷ್ಟು ಚಂದ ಚಂದ ಚಂದ ಕಾವ್ಯ!

    ReplyDelete