Friday, June 28, 2013

ಕತ್ತಲೆ, ಅದರ ಮೇಲೆ ಮಳೆ


ಸಿಡಿಲ ಹೊಳಪಿಗೆ
ಝುಮ್ಮೆಂದ ಕಣ್ಣು,
ಕ್ಷಣಕಾಲದ ವಿಭ್ರಮೆ..

ನಿಂತಲ್ಲೇ ನಿಂತ ಪಾಡು
ಮೈ ಜೋಮು ಹಿಡಿದು
ಕ್ಷಣಕಾಲದ ಸ್ಪರ್ಶಹೀನತೆ..

ಭ್ರಮಾಪ್ರವಾಹದಾಸ್ತಿಯೊಂದು
ಹರಿದು, ತಾಕಿ,
ಸರಿದು ಹೋದದ್ದು,

ಮೆತ್ತಗಿದ್ದು, ಹಿತವಿತ್ತು
ಆಪ್ತವಿತ್ತು, ಆರ್ದ್ರವಿತ್ತು...
ಹಾವೋ ಹೂವೋ
ಗೊತ್ತಾಗಲೇ ಇಲ್ಲ...

ಯಾರೋ ಕಿವಿಯಲ್ಲಿ
ಪಿಸುನುಡಿದಂತಾಯಿತು.
ಗುಡುಗ ಸದ್ದಲೂ
ಸ್ಪಷ್ಟ ಒಳಗಿಳಿದ ಮಾತು-

"ಬಿಡು..ಹೋಗಿಯಾಯಿತಲ್ಲ..
ತಾಕಿದ್ದೆಲ್ಲ ಏನು-
ಎತ್ತ ಎಂಬುದು
ಗೊತ್ತಾಗಲೇಬೇಕೆಂಬುದೇನಿಲ್ಲ..."

4 comments:

  1. ಅಕ್ಕಾ ಇದಕ್ಕೆ ಎಷ್ಟು ಅರ್ಥ ಹುಡುಕಬಹುದು ವಿಚಾರ ಮಾಡುತ್ತಿದ್ದೇನೆ....
    ಏನೇನೋ ಅರ್ಥೈಸಿಕೊಂಡಿದ್ದೇನೆ....
    ಕವಿಭಾವ ಎನ್ನುವುದು ನನಗೆ ಎಟುಕಿದೆಯೋ ಇಲ್ಲವೋ ಗೊತ್ತಿಲ್ಲ....
    ಕವಿಬಾವವೇನೋ ನೀನೇ ಹೇಳಬೇಕು...

    "ಕತ್ತಲೆ ಅದರ ಮೇಲೆ ಮಳೆ" ತಲೆಬರಹ ನೋಡಿ ಸೋಜಿಗವಾಯ್ತು...

    ReplyDelete
    Replies
    1. ಮೊದಲನೇದಾಗಿ ಅದು ತಲೆಬರಹ ಅಲ್ಲ ಮೊದಲ ಲೈನ್ ರಾಘವ್.. ಮತ್ತೆ ಕವಿಭಾವ ನಿನಗೆ ಖಂಡಿತಾ ಎಟುಕಿರ್ತದೆ, ಇಲ್ಲದಿದ್ರೆ ಕಾಮೆಂಟ್ ಬರೆಯುವ ಪ್ರೇರೇಪಣೆಯಾಗುತ್ತಿರಲಿಲ್ಲ.. ನಾನು ಬರೆದ ಭಾವವೇ ಅದಾಗಿರಬೇಕಿಲ್ಲ , ನನ್ನ ತಲೆಯಲ್ಲಿದ್ದದ್ದು ಇಷ್ಟು.. ಬದುಕು ಕತ್ತಲೆ, ನಾ ಮುಂಚೆನೇ ಹೇಳಿದಂತೆ ಅಯೋಮಯ ಅಂತ ನಾನು ನಂಬ್ತೇನೆ.. ಅದರ ಮೇಲೆ ನಾವು ಸಮಾಜಕ್ಕೆ ನಮ್ಮನ್ನ ನಮ್ಮ ಅಭಿವ್ಯಕ್ತಿಗಳ ಮೂಲಕ ತೆರಕೊಂಡಾಗ ಪರಿಚಯಗಳ ಸುರಿಮಳೆ... ತಬ್ಬಿಬ್ಬಾಗಿರುವಂತಿರುತ್ತದೆ. ಆಗ ಅನಾಯಾಸ, ಅಪ್ರಯತ್ನ ಒಮ್ಮೊಮ್ಮೆ ಕೆಲವು ಪರಿಚಯಗಳು ತಮ್ಮ ಭಾವನೆ ವ್ಯಕ್ತಪಡಿಸುತ್ತಾ ಆರ್ದ್ರತೆಯ ಮೂಲಕ ಹತ್ರ ಬಂದು ಆಪ್ತವಾದವೇನೋ ಅನ್ನಿಸುತ್ತವೆ, ಹಿತ ಕೊಡುತ್ತವೆ.. ಏನೋ ಮಿದುವಾದದ್ದು ಹತ್ರ ಬಂದು ತಾಕಿದಂತನ್ನಿಸುವಷ್ಟರಲ್ಲೇ ಕಳಚಿಕೊಳ್ತವೆ, ಆಗ ಒಳಗಿಂದ ನನ್ನನ್ನೇ ನಾನು ಕೇಳಿಕೊಳ್ತೇನೆ ಸಾಮಾನ್ಯ- "ಇದು ಏನು?" ಅಂತ.. ಹಾಗಾದಾಗ ನನ್ನೊಳಗಿಂದ ಬಂದ ಉತ್ತರವೇ ಕೊನೆಯ ಸಾಲುಗಳ ಮಾತು. ಮತ್ತದೇ conclusion... ಬದುಕು ಅಂದರೆ ಬಂದಂತೆ ಬದುಕುತ್ತಾ ಹೋಗುವುದು ಅಷ್ಟು ಬಿಟ್ಟರೆ ಮತ್ತೇನೋ ದೊಡ್ಡ ಕುಂಬಳಕಾಯಿಯಲ್ಲ ಅಂತ ನನ್ನೊಳಗಿಂದ simplify ಮಾಡಿದ ಉತ್ತರ ಬಂತು ಅಂತ..

      Delete
  2. ಬದುಕಿನಲ್ಲಿ ನಡೆದವೆಲ್ಲವುಗಳನ್ನು ಪ್ರಶ್ನಿಸಿಕೊಳ್ಳುತ್ತಾ, ತರ್ಕಿಸುತ್ತ, ತನ್ನ ಬದುಕನ್ನು ಮುಂದಿನ ಕ್ಷಣಕ್ಕೆ ಪರ್ಫೆಕ್ಟ್ ಮಾಡ್ಕೊಳ್ತೇನೆಂದು ನರಕ ಮಾಡಿಕೊಳ್ಳುವವರೊದೊಂದು ವರ್ಗವೇ ಇದೆ! ಅವುಗಳಲ್ಲಿ ಭಿನ್ನವಾಗಿ ನಿಲ್ಲುವ ಈ ಪ್ರಯತ್ನ, ’ಬದುಕು ನಡೆಸಿದಂತೆ ನನ್ನ ನಡಿಗೆ’ ಎನ್ನುವ ಮಾತಿನಂತಿದೆ ಈ ಕವನ.

    "ಬಿಡು..ಹೋಗಿಯಾಯಿತಲ್ಲ..
    ತಾಕಿದ್ದೆಲ್ಲ ಏನು-
    ಎತ್ತ ಎಂಬುದು
    ಗೊತ್ತಾಗಲೇಬೇಕೆಂಬುದೇನಿಲ್ಲ..."

    ಈ ಸಾಲುಗಳು ನನ್ನ ಕಿವಿಯೊಳಗಿಳಿದು, ಎದೆಗಿಳಿದವು.

    - ಪ್ರಸಾದ್.ಡಿ.ವಿ.

    ReplyDelete
    Replies
    1. ಪ್ರಸಾದ್, ಒಳಾರ್ಥಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಕ್ಕೆ ಧನ್ಯವಾದಗಳು.

      Delete