Sunday, March 17, 2013

ನೀನೇ ಹೇಳು...


---------

ನೀ ನೆಟ್ಟ ದಿನವೂ ಹೀಗೇ ಇತ್ತು

ಏನೋ ನೋವು...

ಕಲ್ಲಾಗಿದ್ದುದಕೆ ಮನಸು,

ಬಲವಾಗಿಯೇ ನೀ ಹೊಡೆಯಬೇಕಿತ್ತು,

ಮೊದಲ ಕೆಲ ಹೊಡೆತಗಳು ನಿನ್ನ ಬೆವರಿಳಿಸಿತ್ತು....

ಒಂದು ಗೀರಾದದ್ದೇ ಸರಿ ನೋಡು,

ಆಮೇಲೆಲ್ಲ ಸರಾಗ,

ನೀ ತೋಡುತಲೇ ಹೋದೆ,

ಗುಳಿಯಾಗುತಲೇ ಹೋಯಿತು..

ನೀ ನೆಟ್ಟೆ, ಅದು ತೆಕ್ಕೆಯೊಳ ಸೇರಿಸಿಕೊಂಡಿತು....



ನೀ ಕಿತ್ತ ದಿನವೂ ಹಾಗೆಯೇ ಇದೆ,

ಒಂದಲ್ಲ, ನೂರು ನೋವು..

ಇಂದೂ ಅದೇ ಹರಿಯುತಿದೆ,

ಕಣ್ಣೀರಲ್ಲ, ಕೆಂಪು, ಬಿಸಿಬಿಸಿ ರಕ್ತ....

ಅಂದು ನೀ ಆಳಕಿಳಿಸಿದೆ ಅಂದುಕೊಂಡೆ,

ಅದು ಹೊರಭಿತ್ತಿಯಷ್ಟೇ ಹೊಕ್ಕಿತ್ತು...

ಆಮೇಲೆ ಬೇರಿಳಿದದ್ದು, ನಾ ನನ್ನನೆರೆದದ್ದು,

ಅದು ಜೀವವಾಗಿದ್ದು, ಅರಳಿ, ಹೂವಾಗಿದ್ದು.

ಕಂಪು ಬೀರಿ ಇರುವು ಜಗಜ್ಜಾಹೀರಾಗಿದ್ದು,

ಜೊತೆಗೆ ನನ್ನ ಹೆಸರಳಿಸಿ ತಾನೇ ತಾನು ಮೆರೆದದ್ದು...



ಕೀಳುವುದೇ ಆಗಿದ್ದರೆ ಇಷ್ಟೇಕೆ ಬೆಳೆಯಬಿಟ್ಟೆ?

ಆಳಕಿಳಿವ ಮುಂಚೆ ಸುಲಭವಿತ್ತು ನಿನಗೂ, ನನಗೂ..

ಇರಲಿಬಿಡು,

ನೆಟ್ಟಾಗಲೂ ಬಾಗಿಲ ಬಡಿದು, ಕಾವಲನತ್ತ ಕಳಿಸಿ

ಹೊಡೆದು ಗುಳಿ ತೋಡಿ ಶ್ರಮಪಟ್ಟು ನೋಯಿಸಿದೆ,

ಕಿತ್ತಾಗಲೂ ಮುಚ್ಚಿದ್ದ ಗಾಯಗುಳಿ

ಮತ್ತೆ ಹಸಿಮಾಡಿ

ಹೆಪ್ಪುಗಟ್ಟಿದ್ದ ರಕ್ತಧಾರೆಯಿಳಿಸಿ,

ಕೆಡಿಸಿ ಶ್ರಮಪಟ್ಟೇ ನೋಯಿಸಿದೆ...



ಅದರೀಗ ನನದಿಲ್ಲ, ನೀನೂ ಇಲ್ಲದೆ

ನಾ ಹೆಸರಿಲ್ಲದವಳಾಗಿರುವೆ,

ಮನಸೀಗ ಕಲ್ಲಲ್ಲ, ಹೂವಷ್ಟು ಮಿದು,

ನಾ ಜಗದೆದುರು ನಿಂದಿರುವೆ,

ನೀನಿರದೆ ಒಡ್ಡಿಕೊಂಡಿರುವೆದೆಗಿಂದು

ಕಾವಲಿಲ್ಲ, ಬಾಗಿಲೂ ಇಲ್ಲ, ಎಲ್ಲ ನೀ ಮುರಿದಿರುವೆ...

ಹೇಗೆನ್ನ ರಕ್ಷಿಸಿಕೊಳಲಿ,

ನೆನಪುಗಳಿಂದ, ಕನಸುಗಳಿಂದ,

ಆಸೆಗಳಿಂದ ಮತ್ತೆ ನಿನ್ನಂಥವರಿಂದ?!





12 comments:

  1. ಚೆನಾಗಿದೆ ಮೇಡಮ್...
    ಎರಡು ಹಂತಗಳನ್ನು ತುಲನಾತ್ಮಕವಾಗಿ ನೋಡಿ,ಅದರ ಹಿಂದಿನದೆಲ್ಲಾ ಒಂದೇ ಎನ್ನುವ ಭಾವ ಇಷ್ಟವಾಯ್ತು...ನಿರೂಪಣೆ ಇನ್ನೂ ಚೆನ್ನಾಗಿರಬಹುದಿತ್ತೇನೋ...ಗೊತ್ತಿಲ್ಲ..ಒಮ್ಮೆ ನೋಡಿ ದಯವಿಟ್ಟು...
    ನನಗೇಕೋ ಕವನಗಳು ಒಂದು ಆಕಾರವನ್ನು ಹೊಂದಿದ್ದರೆ ಜಾಸ್ತಿ ಇಷ್ಟವಾಗುತ್ತವೆ...
    ಇದು ನನ್ನ ವೈಯಕ್ತಿಕ ಅಭಿಪ್ರಾಯ ಅಷ್ಟೇ...

    ReplyDelete
  2. ತುಂಬಾ ಚೆನ್ನಾಗಿ ಮೂಡಿ ಬಂದಿದೆ ಅನು. ಎದೆಯಾಳದಲ್ಲಿ ಆಳವಾಗಿ ಹೊಕ್ಕಿತು. ನನ್ನ ಹಿಂದಿನ ಜೀವನದ ಕೆಲ ಕ್ಷಣಗಳನ್ನು ಮರುಕಳಿಸಿತು.ಶುಭವಾಗಲಿ ಹೀಗೆ ಬರೆಯುತ್ತಿರಿ.

    ReplyDelete
  3. ಅಬ್ಬಾ... ಅನೂ,
    ಎರಡೆರಡು ಬಾರಿ ಓದಿದೆ!

    ReplyDelete
    Replies
    1. ನಿಮ್ಮಿಂದ ಎರಡು ಬಾರಿ ಓದಿಸಿಕೊಂಡರೆ ನಾನು ಬರೆದದ್ದು ಸಾರ್ಥಕ ಅಂತ ಅಣ್ಣ, ಧನ್ಯವಾದಗಳು

      Delete
  4. ಅರ್ಥ ಹುಡುಕಹೋದರೆ ನೂರಿದೆ...
    ಆಳವಾಗಿದೆ ಕವನ...
    ಭಾವನೆಯಷ್ಟೇ ಮೃದುವಾಗಿದೆ...

    ಪ್ರತಿಯೊಂದು ಶಬ್ಧವನ್ನೂ ಜತನದಿಂದ
    ಜೋಡಿಸಿದಂತಿದೆ...
    ಒಂದು ಶಬ್ಧ ಆಚೀಚೆಯಾದರೂ ಅರ್ಥ
    ಕೆಟ್ಟೀತೇನೋ ಅನ್ನೋ ಹಾಗೆ...

    ಅಕ್ಕಾ ನಿನ್ನ ಬತ್ತಳಿಕೆಯಲ್ಲಿನ ಭಾವಗಳ.. ಶಬ್ಧಗಳ
    ಗೊಂಚಲಿಗೆ ನನ್ನದು ಸದಾ ಒಂದು ಶರಣು...

    ReplyDelete
    Replies
    1. ದೊಡ್ಡ ಮಾತು ರಾಘವ, ಧನ್ಯವಾದ

      Delete
  5. ಆದಿ ಮತ್ತು ಅಂತ್ಯ ಸಂಬಂಧಗಳ ಪರಿಮಿತಿಯಲ್ಲಿ ಸಮರ್ಥವಾಗಿ ಚಿತ್ರಿಸಿದ ಕವನ.

    ReplyDelete
    Replies
    1. ಧನ್ಯವಾದ ಬದರಿ ಸರ್.

      Delete