Tuesday, March 5, 2013

ಅವನ ಲೆಕ್ಕಿಸಬೇಕಿಲ್ಲ.

--------------------
ತನ್ನ ಹಸುವನ್ನು ಹೂಳಿ ಬಂದಾತ,
ಮಿಂದು, ಉಂಡು, ಮಲಗೆದ್ದವ
ಪಕ್ಕದ ಮನೆಯ ಬೆಕ್ಕಿನ ಸಾವಿಗೆ
ಶೋಕಾಚರಣೆಯಿಲ್ಲದ್ದಕೆ ಧಿಕ್ಕಾರ ಹಾಕಿದ.

ಪಕ್ಕದಂಗಳದ ಕಸಕೆ ಮುಖ ಮುರಿವಾತ,
ವಾಸನೆಯೆನುತ ಮೂಗು ಮುಚ್ಚುವಾತ,
ಮಗುವಿನ ಬಹಿರ್ದಶೆಯ ಅವಸರಕೆ
ಅದೇ ಅಂಗಳದ ಬೇಲಿಯ ಮರೆ ಬಳಸಿದ.

ಪಕ್ಕದವನ ಗಾಯಕೆ ಅಸಡ್ಡೆಯ ಉರಿಯಿತ್ತಾತ
ನೋವಿಗುಪೇಕ್ಷೆಯೇ ಮದ್ದೆಂದಾತ
ಕಣ್ಣಲಿ ಬಿದ್ದ ಪುಟ್ಟ ಕೀಟ ಚುಚ್ಚಿದ್ದಕೆ,
ಅದ ಹಿಚುಕಿ ಕೊಡ ಕಣ್ಣೀರಲಿ ಮುಳುಗಿಸಿದ.

ಪರರ ತಪ್ಪು ಹೆಕ್ಕಿ,
ಭೂತಕನ್ನಡಿಯಿಟ್ಟು ವಿಶ್ಲೇಷಿಸಿ,
ಅಭ್ಯಸಿಸಿ, ವಿವರಿಸಿ, ಜಗದೆದುರು
ಸಂಶೋಧನೆಯನೇ ನಡೆಸಿ ತೋರುವನದು
ದೊರೆತ ಶೂನ್ಯ ಫಲಿತಾಂಶಕೆ ದಿವ್ಯ ನಿರ್ಲಕ್ಷ್ಯ.

ತಾ ಹೇತುದು ಅದಲ್ಲ,
ಪರರದಷ್ಟೇ ಅಮೇದ್ಯವೆನುವವ,
ನರ ಹೇಗಾದಾನು?!
ನಾಲಿಗೆ ಬೇಕಾಬಿಟ್ಟಿ ಹರಿಯ ಬಿಟ್ಟವ,
ಬೋಧಕ ಹೇಗಾದಾನು?!
ಕಣ್ಣಿಗೆ ಬೇಧದ ಪಟ್ಟಿಕಟ್ಟಿದವ,
ನಾಯಕ ಹೇಗಾದಾನು?!
ಸ್ವರತಿಯಲಿ ಸದಾ ನಿರತನವ,
ಮುಂದಾಳು ಹೇಗಾದಾನು?!
ಗುಣವ ಮತ್ಸರದಿ ತೂಗುವವ,
ಸಹೃದಯಿ ವೀಕ್ಷಕ ಹೇಗಾದಾನು?!







2 comments:

  1. ತಾನೇ ಸರಿ - ಇತರರು ಸರಿಯಲ್ಲ. ತನ್ನ ಮೂಗಿನ ನೇರಕ್ಕೇ ಜಗತ್ತು ಇರಬೇಕು. ಒಳ್ಳೆಯದೆಲ್ಲ - ಕೆಟ್ಟದು, ಹಾಗೇ ರಂಗು ಪೂಸಿದ ಡಾಂಭಿಕವೆಲ್ಲ ಶಾಶ್ವತ ಎನ್ನುವ ಮನುಜನ ಪರಿಧಿಯೊಳಗೆ ಬಾವಿಯೊಳ ಕಪ್ಪೆಯಾಗುವ ಅಲ್ಪಬುದ್ಧಿವಂತಿಕೆಗೆ ಈ ಕವನವೂ ಛಡೀ ಏಟಿನಂತಿದೆ.

    "ತಾ ಹೇತುದು ಅದಲ್ಲ,
    ಪರರದಷ್ಟೇ ಅಮೇದ್ಯವೆನುವವ,
    ನರ ಹೇಗಾದಾನು?!"

    ಯಾವತ್ತು ಸಾಹಿಸೋದು ಕಲಿಯುವನೋ ಮನುಜ!

    ReplyDelete
    Replies
    1. ನಿಮ್ಮ ಪ್ರೋತ್ಸಾಹಕ್ಕೆ ಅಭಾರಿ ಸರ್.

      Delete