Saturday, March 9, 2013

ನಿನ್ನೆ (ಮಾರ್ಚ್ ೮) ಅನ್ನಿಸಿದ್ದು, ಇವತ್ತು ಬರೆದದ್ದು...

--------------------
ಅದೊಂದು ಉರಿವ ಬೆಂಕಿಗೋಳ..
------------------------

ಚರ ಜಡದ ಮಿಲನದಲಿ
ಸೃಷ್ಟಿಯ ಓಂಕಾರ.
ಹೆಸರಿಲ್ಲ, ಗುರುತಿಲ್ಲದ
ಬರೀ ಮಾಂಸದ ಮುದ್ದೆ.
ಒಳಗೆ ಮಾರ್ದನಿಸಿದ ಅದೇ
ಓಂಕಾರದ ಮೆಲು ಬಾಲಗಾನ.
ಪಟಪಟನೆ ಮುಚ್ಚಿತೆಗೆವ
ಎವೆಗಳ ನಡುವದೇ ಕಣ್ಣು,
ಸಂವೇದನೆ ನೂರು.
ನಿದ್ದೆಯಲೂ ಜಾಗೄತಿ,
ಮುಖ ಸಮ್ಮಿಶ್ರ ಭಾವತೇರು..
ನಿರಾಕಾರ, ನಿರ್ಲಿಂಗ ಆತ್ಮ
ತೊಟ್ಟುಡುಗೆಯ ಹೆಸರಷ್ಟೆ ಸ್ತ್ರೀ...

ಬೆಳೆದ ಚೈತನ್ಯಕೆ
ಮೊಲದ ವೇಗ, ಚುರುಕು..
ಪುಟ್ಟ ಹೆಜ್ಜೆಯ ಪುಟುಪುಟು ಓಟ,
ಬೀಳದಂತೆ ಎಡವಂತೆ ನಡೆಸುವ
ಜವಾಬ್ದಾರಿಗೆ, ಕೈಜಾರುವ ಭಯಕೆ,
ಹಿಡಿಯಬಯಸುವ ಜನಕ,
ಪ್ರಶ್ನೆ, ತಡೆ, ಮಿತಿ ಸಂಹಿತೆ
ಮೀರಿದ ಶಕ್ತಿಯ ಪರಿಗೆ ಚಕಿತ,
ಒಳಗೊಳಗೇ ದಣಿಯುತಾನೆ.
ಅದು ಹುಮ್ಮಸ್ಸೇ ಅಸ್ತಿತ್ವವಾದ ಚೇತನ!

ಚೈತನ್ಯ ಬೆಳೆಯುತಿದೆ,
ಅಕಾರ, ಆಚಾರ-ವಿಚಾರದಲ್ಲೂ,
ಸೌಂದರ್ಯದ ಸಾಕಾರದಲ್ಲೂ..
ಜಿಂಕೆಯಂತೆ ನೆಗೆವ,
ಪುಟಿದು ಚಿಮ್ಮುವ ಉತ್ಸಾಹ.
ಅದೃಶ್ಯ ಸರಪಳಿ ಹಿಡಿದು
ಹಿಂಬಾಲಿಸುವ ಜನಕ.
ಹಿಡಿಯಲಾಗದ, ತಡೆಯಲಾಗದ
ಓಟಕೆ ಸೋಲುತಾನೆ.
ಅದು ಚಲನಶೀಲತೆಯ ನಿತ್ಯೋತ್ಸವ!


ಹಲವು ಅಡೆತಡೆ ಮೀರಿ,
ಪ್ರಶ್ನೆಗುತ್ತರಿಸಿ, ದಾಟಿ,
ಹಾರಿ ಬಂದ ಚೈತನ್ಯವೀಗ
ತನ್ನ ಸಮರ್ಥಿಸಿ, ಬೆಂಬಲಿಸಿ
ನಿರೂಪಿಸಿ, ಕಾಪಿಟ್ಟುಕೊಳುವ
ಘರ್ಷಣೆಯಲಿ ಹತ್ತಿ ಉರಿದು
ನೊಂದು, ಬೆಂದು ಕೆಂಪು ಬಿಸಿಗೋಳ....
ಮಾತು ಕಿಡಿ, ಉಗುಳು ಬೆಂಕಿ,
ಉಸಿರುಸಿರೂ ಹೊಗೆಯಾಡುತಿದೆ...
ಅದು ಬೂದಿಮುಚ್ಚಿದ ನಿಗಿನಿಗಿ ಕೆಂಡದುಂಡೆ!

ಹಕ್ಕ ಭಿಕ್ಷೆಯಂತೀವ ಸೋಗಲಿ
ಚೈತನ್ಯಕೆ ಸರಪಳಿಯ ವರ
ಕರಿಮಣಿಯ ವೇಷಾಂತರ...
ಚಿನ್ನದ ಲೇಪಕೆ ಉರಿವ ಚರ್ಮ,
ಕತ್ತ ಬಿಗಿತಕೆ ಉಸಿರು ಭಾರ...
ಗೋಳವನಾವರಿಸುವ ಕೈ, ಬಿಸಿ ತಾಳದೆ
ಆ ಹಿಡಿಯಿಂದ ಈ ಹಿಡಿಗೆ...
ಬಿಸುಡಲ್ಪಟ್ಟು ಗಾಳಿಗಾಡಿ
ಗೋಳವಿನ್ನೂ ಧಗ ಧಗ...
ಅದು ತನ್ನುರಿಗೇ ಬೂದಿಯಾಗುವ ಒಳಗುದಿ..

ಆಗದೆ ಕೈಚೆಲ್ಲಿ ಕೂತಿದೆ ಜಗ,
ಹಿಂತಿರುಗದೆ ಮುನ್ನಡೆದಿದೆ ಗೋಳ
ತೂಕ ಕಳಕೊಂಡು ಗಾಳಿಗೇರಿದೆ,
ಮೇಲೇರುತಾ ಕೆಂಪಳಿದು
ಕಾಮನಬಿಲ್ಲ ಬಣ್ಣದ ಗಾಳಿಪಟವಾಗಿ,
ಪಟದ ಮೈಯೆಲ್ಲ ಹೂವರಳಿ,
ಮತ್ತೆ ಓಂಕಾರ ಅನುರಣಿಸಿದೆ...
ಜಗ ಅಲವತ್ತುಕೊಳ್ಳುತಿದೆ
ಛೇ.. ಕೈಯ್ಯೊಳಗಿರಿಸಿಯಲ್ಲ,
 ಕೈಹಿಡಿದು ನಡೆಯಬೇಕಿತ್ತು...

2 comments:

  1. "ಆ ಹಿಡಿಯಿಂದ ಈ ಹಿಡಿಗೆ...
    ಬಿಸುಡಲ್ಪಟ್ಟು ಗಾಳಿಗಾಡಿ
    ಗೋಳವಿನ್ನೂ ಧಗ ಧಗ...
    ಅದು ತನ್ನುರಿಗೇ ಬೂದಿಯಾಗುವ ಒಳಗುದಿ.."

    ಇಡಕಿಂತಲೂ ಬೇಕೇ ವಿವರಣೆ?

    ReplyDelete
    Replies
    1. ಹೆಣ್ಣು ಅಂಕೆಯೊಳಗಿರಬಲ್ಲಳು. ಆದರೆ ತನ್ನ ಸಾಮರ್ಥ್ಯಕ್ಕೆ ತಕ್ಕದ್ದೊಂದು ಅಸ್ತಿತ್ವ, ತನ್ನನ್ನು ಸಮರ್ಥವಾಗಿ ನಿಭಾಯಿಸಬಲ್ಲ ಶಕ್ತಿಯದಷ್ಟೇ ವಶವಾಗಿ ಇರಲು ಇಷ್ಟ ಪಡ್ತಾಳೆ, ಸಿಕ್ಕಿಸಿಕ್ಕಿದ ಕೈಗಳು ಆವರಿಸಿ ಮುಷ್ಟಿಯೊಳಗಿಟ್ಟುಕೊಳ್ಳಬೇಕೆಂದು ಬಯಸಿದಾಗ ಹೀಗೆಯೇ ಆಗುವುದು ಅನ್ನಿಸಿತು, ಬರೆದೆ.thanks for encouraging sir.

      Delete