Sunday, March 31, 2013

ನೀ ತೆರಳಿದ ವೇಳೆ..


-------------------
ಬೆಳ್ಳಂಬೆಳಗ್ಗೆ ಖಾಲಿಗೂಡು ನೇತಾಡಿದೆ,
ನೇಣಿಗೊಡ್ಡಿದ ಕೊರಳಂತೆ.
ಚಲಿಸದ, ನೀರವ ಚರಮಗೀತೆ.
ಗಾಳಿಯ, ತೂಗಿದೆಲೆಯ ನೆಪದಲಿ
ಮತ್ತೆಮತ್ತೆ ನೆನಪು ತೂಗಾಡಿಸಿದೆ,
ಚುಚ್ಚಿಚುಚ್ಚಿ ಹೆಣವ ಸಾಯಿಸುತಿದೆ.

ಅದೇ ಪಾರಿಜಾತದ ಗಿಡ,
ಅದೇ ಒಣ ಕಸಕಡ್ಡಿ ಗೂಡು,
ನಿನ್ನೆವರೆಗೆಷ್ಟು ಸೆಳೆದು,
ಕ್ಷಣಕೊಮ್ಮೆ ಬಳಿ ಕರೆದಿತ್ತು!
ಈಗರ್ಥವಾಗಿದೆ ಕಣ್ಣು-ಕಿವಿಯನಲ್ಲ,
ಮನಸನೊಳಗು ಸೂರೆಗೈದದ್ದು...

ಇಂದೊಳಗೆ ಹಸಿದ ದನಿ,
ಬಂದು ತಾ ತಣಿಸೋ ಹನಿ,
ಹೊರಚಾಚುವ ಎಳೆಕೊಕ್ಕು,
ಒಳಗಿಣುಕುವ ಆ ಕೊರಳಿಲ್ಲ.
ಹಾರಿದ್ದೋ, ಆಹಾರವಾದದ್ದೋ...
ಗೂಡು ತೆರವು, ಮರಿ ಕಾಣುತಿಲ್ಲ,

ನಿನ್ನೆ ಹೊಳಪಿತ್ತು, ಇಂದು
ಪಾರಿಜಾತದೆಲೆ ಶುಷ್ಕಪಚ್ಚೆ,
ಹೂವರಳಿದ್ದು ಕನಸಂತೆ, ಉದ್ದಗಲಕೂ
ಒಣಬೀಜ, ಕಾಣೆ ಜೀವಂತಿಕೆ.
ಬಣ್ಣಬಣ್ಣದ ತೋಟದಾವರಣ ಗೌಣ,
ಎದ್ದೊದೆದಿದೆ ಖಾಲಿ ಬಣಬಣ..

ಮರಿ ನೆಲೆಸದ ಗೂಡಲಿ
ಜೀವಯಾನದ ಶೋಕರಾಗ,
ನೀನಿರದ ಕಾಲನಡೆಯ ತಾಳದಿ
ನುಡಿದ ಮರಣಮೃದಂಗ,
ನನ್ನೆದೆಗೂಡೂ ದನಿ ಸೇರಿಸಿ,
ಅಸಹನೀಯ ವೃಂದಗಾನ...

2 comments:

  1. ನಿನ್ನೆ ಹೊಳಪಿತ್ತು, ಇಂದು
    ಪಾರಿಜಾತದೆಲೆ ಶುಷ್ಕಪಚ್ಚೆ,
    ಹೂವರಳಿದ್ದು ಕನಸಂತೆ, ಉದ್ದಗಲಕೂ
    ಒಣಬೀಜ, ಕಾಣೆ ಜೀವಂತಿಕೆ... ಈ ಸಾಲುಗಳು ತುಂಬಾ ಇಷ್ಟವಾಯಿತು. ತುಂಬಾ ಚೆನ್ನಾಗಿದೆ . ಅಭಿನಂದನೆಗಳು.

    ReplyDelete
  2. ಈ ಕಾವ್ಯವನ್ನು ಮತ್ತೆ ನನ್ನ ನಿಜ ಜೀವನಕ್ಕೆ ಹೋಲಿಕೊಳ್ಳುತ್ತೇನೆ,ಸತ್ಯ ಹೇಳುವುದಕ್ಕೆ ಭಯವೇಕೆ. ಹೆಚ್ಹಿಗೆ ಹೇಳೊದರ ಬದಲು ನಾನೊಬ್ಬ ಹಾಡುಗಾರ, ಕವಿಗಳ ಹ್ರಧಯವನ್ನು ಹಂತಿರದಿಂದ ಅನುಭವಿಸಿ ಹಾಡುವಂತ ಬಯಕೆ. ಮತ್ತೊಮ್ಮೆ ಈ ಹಾಡನ್ನು " ನೀನಿಲ್ಲದೆ ನನಗೇನಿದೆ ಮನಸ್ಸೆಲ್ಲಾ ನಿನ್ನಲ್ಲೆ ನೆಲೆಯಾಗಿದೆ" ಹಾಡಿಕೊಂಡು ಮನಸ್ಸಿನಲ್ಲಿ ತ್ರುಪ್ತಿ ದೇಹದಲ್ಲಿ ಶಕ್ತಿ ತುಂಬಿಕೊಳ್ಳುತ್ತೇನೆ. ಧನ್ಯವಾದಗಳು ಒಳ್ಳೆಯ ಕವನ ನೀಡಿದಕ್ಕೆ.

    ReplyDelete