Friday, March 29, 2013

ಹಳದಿ ಗುಲ್ಮೊಹರ್ ಮರದ ಸಾಲಿನಡಿ..




ಹಳದಿ ಹೊತ್ತು ಹಳದಿ ಚೆಲ್ಲಿದ
ಕಪ್ಪು ತೊಗಟೆಯ ಒಣಕಾಂಡವೇ,
ಎಲ್ಲಿತ್ತು ಇಷ್ಟು ಹುರುಪು, ಹುಮ್ಮಸ್ಸು,
ಮತ್ತಿನ್ನೂ ಹೇಗುಳಿದಿದೆ ಹೊಸತಾಗಿ?!
ಎಲ್ಲಿದೆ ಹಳದಿ ಹೊರಗಟ್ಟಿದ ಹಸಿರು,
ಮತ್ತಿನ್ನೂ ಹೇಗೆ ಜಾಗೃತ ಮರೆಯಾಗಿ?!

ಅದೇ ಮಣ್ಣಲಿ ನಾನೂ ನಿಂತಿರುವೆ,
ನೀರು, ಗಾಳಿ, ಹಗಲು-ರಾತ್ರಿಗಳು..
ಕುಡಿಯೊಡೆದರೂ ಉತ್ಸಾಹ ಹಲಬಾರಿ,
ಕ್ಷಣಕ್ಷಣಕು ಗರ್ಭಪಾತ ನನ್ನೊಳಗೆ.
ಎಚ್ಚೆತ್ತರೂ ಹಸಿರು ನನ್ನಲ್ಲಿ ಕೆಲಬಾರಿ,
ಕಣ್ಮುಚ್ಚುವುದಲ್ಲೇ ಹೊದ್ದು ಮತ್ತೆ.

ಯಾವ ಪಂಚಾಂಗ, ಯಾವ ಶುಭಗಳಿಗೆ
ಅವನಾಗಮನಕೆ, ನಿಮ್ಮ ಮಿಲನಕೆ?!
ಮಾಸವೊಂದರ ಅರಳುವಿಕೆಗೆ
ಹನ್ನೊಂದರ ನಿರೀಕ್ಷೆ...
ಬರೀ ಹಸುರಾಗೇ ಕಾಯುವೆ,
ಹೊಸ ಹಳದಿ ಹೊತ್ತು ಹೆರಲಿಕೆ...

ಬಿಸಿಲ ಬಿಸಿಯೆನ್ನದೆ,
ಮಳೆಗೆ ಮರೆ ಹುಡುಕದೆ,
ಚಳಿಗೆ ಖಾಲಿಯಾದರೂ ಅಳದೆ,
ಬಿಡದೆ ಸೆರಗಂಚಿಗೇ ಅಂಟಿದ್ದಕೆ,
ತೆರಕೊಂಡದ್ದಕೆ ಇತ್ತಳೇ ತಾಯಿ,
ತನ್ನೆದೆಯ ತಾಳ್ಮೆಯಮೃತವ?!

ನನಗೂ ಸ್ವಲ್ಪ ಕೊಡೇ,
ನಾನೂ ಹೊಸತ ಹೆರುವಾಸೆ.
ಅದೇ ಭಯ, ಸಂಶಯ, ಕೋಪತಾಪ,
ಹೆತ್ತ ನಿಷ್ಫಲ ಮಾತೃತ್ವ ಸಾಕಾಗಿದೆ.
ತಾಳ್ಮೆ ಹೊತ್ತು, ನಂಬಿಕೆಗೆ ತುತ್ತಿತ್ತು,
ವಿಶ್ವಾಸಕೆ ರಕ್ತ ಹಂಚಿ, ಪ್ರೀತಿ ಹೆರಬೇಕು.

2 comments:

  1. ಬೇಂದ್ರೆಯವರ ‘ಯುಗಾದಿ’ ನೆನಪಿಗೆ ಬರುತ್ತದೆ!

    ReplyDelete
  2. ತಾಳ್ಮೆ ಹೊತ್ತು, ನಂಬಿಕೆಗೆ ತುತ್ತಿತ್ತು,
    ವಿಶ್ವಾಸಕೆ ರಕ್ತ ಹಂಚಿ, ಪ್ರೀತಿ ಹೆರಬೇಕು....
    ಈ ಭಾವಕೆ ಶರಣು...

    ReplyDelete