Tuesday, March 26, 2013

ಅವ ಹೇಳೇ ಇಲ್ಲ..

---------------

ಬರೆದಾತಗಷ್ಟೇ ಗೊತ್ತು ಚಿತ್ರ ಯಾತರದೆಂದು
ಹಾಳೆ, ಲೇಖನಿ, ಬಣ್ಣ, ಈ ಕಣ್ಣಿಗೂ ಅಲ್ಲ.
ಜೀವತುಂಬಿದ ಬೆರಗು ಆತನದೆ ಕೈಚಳಕ,
ಚಲಿಸುತಿವೆ ಒಳಗೆಲ್ಲ, ತಳಕಚ್ಚಿ ಕೂತಿಲ್ಲ...

ಗಂಡೊಂದು ಹೆಣ್ಣೊಂದರಂತಿದೆ,
ಹಕ್ಕಿಯೋ, ಮೃಗವೋ,
ಚಿಟ್ಟೆಯೋ ನರನೋ ತಿಳಿಯುತಿಲ್ಲ..
ದೇಹ, ಕೈಕಾಲು, ತಲೆ, ಮುಖ ಎಲ್ಲ ಇವೆ
ಮನಸಿದೆಯೇ... ಕಾಣುತಿಲ್ಲ.

ಕಣ್ಣೆರಡಿವೆ, ಅಳುವದೋ ನಗುವದೋ..
ಬಾಯ್ದೆರೆದಿವೆ, ಮಾತಿಗೋ, ತುತ್ತಿಗೋ..
ಗಂಟಲುಬ್ಬಿವೆ, ಹಾಡಿಗೋ, ದುಗುಡಕೋ...
ದೇಹ ಬಾಗಿವೆ ಭಾರಕೋ, ಶರಣಾಗಿಯೋ
ಗೊತ್ತಾಗುತಿಲ್ಲ.

ನಡುವಲೇನೋ ಹುಯ್ದಾಡಿದಂತಿದೆ-
ಅತ್ತಿಂದಿತ್ತ-ಇತ್ತಿಂದತ್ತ, ಇದ್ದಂತೆ-ಮತ್ತಿಲ್ಲದಂತೆ.
ಜಲದಲೆ ಈಜಾಡಿಸುವ ಖಾಲಿಬುರುಡೆಯಂತೆ.
ಗಾಳಿಯಲೆ ಹೊತ್ತ ದೂರದ ಕೊಳಲುಲಿಯಂತೆ..
ದೃಢವಾಗಿ ನಿಲುತಿಲ್ಲ...

ಒಮ್ಮೆ ತೇಲುತ, ಒಮ್ಮೆ ಮುಳುಗಿ.
ಒಮ್ಮೆ ಕುಂಟುತ, ಒಮ್ಮೆ ರಭಸದಿ.
ಒಮ್ಮೆ ಬೆಳಗುತ, ಒಮ್ಮೆ ಮಸುಕಾಗಿ.
ಒಮ್ಮೆ ನೀಡುತ, ಒಮ್ಮೆ ಬರೀ ಬೇಡಿ.
ಒಮ್ಮೆ ತೀವ್ರಕೇರುತ, ಒಮ್ಮೆ ಮೌನವಾಗಿ..
ಸ್ಥಿರವಾಗಿ ಉಳಿದಿಲ್ಲ....

ಪ್ರೀತಿಯೋ, ಭ್ರಾಂತಿಯೋ...
ನಿರ್ನಾಮದಾಸೆಯೋ, ನಿಸ್ಸೀಮ ಪ್ರೇಮವೋ..
ಇದ್ದುಸಿರಗಟ್ಟಿಸಿ, ತನ್ನುಸಿರ ತುಂಬುವಾಸೆಯೋ..
ಸಾವೋ, ಜೀವಾಮೃತದ ಗುಟುಕೋ..
ತುಂಬಿ ತುಳುಕುತಿರುವುದು ಸತ್ಯ,
ಸಾರ ಸ್ಪಷ್ಟವೆನಿಸುತ್ತಿಲ್ಲ...

ಬಣ್ಣಬಣ್ಣದ್ದು, ನೂರು ರೇಖೆ, ಬಿಂದುಗಳ,
ಅಷ್ಟೇ ಬಾಗುಬಳುಕುಗಳ, ಅಸೀಮ ವೃತ್ತ, ಚೌಕಗಳ
ಅಪ್ರತಿಮ ಸಮಾಗಮ..
ಚಿತ್ರ ಸುಂದರವೇನೋ ನಿಜ,
ಸರಿಯೋ-ತಪ್ಪೋ ಹೋಲಿಸಬಹುದಾದದ್ದಿಲ್ಲ,
ಲೌಕಿಕವೋ-ಅಲೌಕಿಕವೋ ಅವ ಹೇಳೇ ಇಲ್ಲ...



8 comments:

  1. ತುಂಬಾ ಚೆನ್ನಾಗಿದೆ. ಅಭಿನಂದನೆಗಳು.

    ReplyDelete
  2. ಅವ ಹೇಳುವುದೂ ಇಲ್ಲ...
    ಇಷ್ಟವಾಯಿತು...

    ReplyDelete

  3. ಕಣ್ಣೆರಡಿವೆ, ಅಳುವದೋ ನಗುವದೋ..
    ಬಾಯ್ದೆರೆದಿವೆ, ಮಾತಿಗೋ, ತುತ್ತಿಗೋ..
    ಗಂಟಲುಬ್ಬಿವೆ, ಹಾಡಿಗೋ, ದುಗುಡಕೋ...
    ದೇಹ ಬಾಗಿವೆ ಭಾರಕೋ, ಶರಣಾಗಿಯೋ
    ಗೊತ್ತಾಗುತ್ತಿಲ್ಲ

    ಅದ್ಭುತ ಭಾವಗಳು ಜೊತೆಗೆ
    ಶಬ್ಧ ಜೋಡಣೆಯೂ ಅಷ್ಟೇ ಮಜಕೂರು....

    ಮೇಲಿನ ಸಾಲುಗಳನ್ನು ತುಂಬಾ ಸಲ ಓದಿಕೊಂಡಿದ್ದೇನೆ...
    ಯಾವುದೋ ಹಳೆಯ ನೆನಪುಗಳನ್ನ ಬಲವಂತವಾಗಿ
    ಮನಸ್ಸಿಗೆ ಎಳೆದುಕೊಂಡಿದ್ದೇನೆ.....

    ಓದಿ ಎಷ್ಟೋ ಹೊತ್ತಾಗಿದೆ....
    ತಲೆಯಲ್ಲಿ ಮಾತ್ರ ಮತ್ತೆ ಮತ್ತೆ ಅದೇ...

    really its too00000 go00000ood...




    ReplyDelete
    Replies
    1. ಧನ್ಯವಾದ ರಾಘವ..ಬರಹವೊಂದು ಇಷ್ಟರಮಟ್ಟಿಗೆ ನಿಮ್ಮನ್ನ ಪ್ರಭಾವಿಸಿದ್ರೆ ಅದು ಮೂಡಿದ್ದು ಸಾರ್ಥಕ ಆಯ್ತು

      Delete
  4. ತುಂಬಾ ಚೆನ್ನಾಗಿ ವಿಶ್ಲೇಶಿಸಿದ್ದೀರಿ ಅನು. ಪ್ರೀತಿ, ಸ್ನೇಹ ಮಧುರ ಭಾವನೆಗಳನ್ನು ಹ್ರದಯದಿ ಅನುಭವಿಸುಬಹುದೇ ಹೊರತು ಯಾವುದಕ್ಕೂ ಹೋಲಿಸಿಯೋ ಅಥವಾ ನಿರ್ಧರಿಸಿಯೋ ,ತುಲನೆ ಮಾಡಿಯೋ ಹೇಳಲಾಗವುದಿಲ್ಲ ಎಂಬುದು ಸತ್ಯ. ತುಂಬ ಬುದ್ದಿವಂತಿಕೆ ಬೇಕು ನಿಮ್ಮ ಕವನ ಅರಗಿಸಿಕೊಳ್ಳಲು ಅನು. ಏನೇ ಇರಲಿ ವಾಸ್ತವಿಕತೆಯನ್ನು ಬರವಣಿಗೆಯಲ್ಲಿ ತರುತ್ತೀರಿ, ತುಂಬಾ ಇಷ್ಟ ಆಯ್ತು ಅನು.

    ReplyDelete