Wednesday, March 27, 2013

ಅಡಗುವಿಕೆಗಳು


--------------------
ಭುಗಿಲೇಳುವ ಜ್ವಾಲೆಯಲೂ ಪುಟ್ಟಪುಟ್ಟ
ಕಿಡಿ ನಕ್ಷತ್ರಗಳಿವೆ, ಬಿಡುಬಿಡುವಾಗಿವೆ.
ಶಾಖದೆಡೆಯಲಿ ಮುದ ತರುವ ನೋಟ.

ಗಟ್ಟಿ ಉರುಟು ಬಿಳಿಮುತ್ತಲೂ ಹಳೆಯ
ಸ್ವಾತಿಹನಿಯಿದೆ, ಬಳಬಳ ಬಳುಕುತಿದೆ.
ಆಕಾರದೊಳು ಆಕಾರವೇ ಇರದ ಸಾರ.

ಮುಳ್ಳುಕಂಟಿಯ ಬೇಲಿಪೊದೆಯಲೂ ಸಣ್ಣ
ಹಳದಿ ಹೂವ ಹುಟ್ಟಿದೆ, ಮೊಗ್ಗು ಹೊನ್ನಾಗಲಿದೆ.
ಚುಚ್ಚುವಿಕೆಯೊಡಲಲಿ ಅರಳುವ ಸೆಳೆತ.

ಜಗವೇ ಹೀಗಲ್ಲವೇ..
ಕಂಡಂತಿಲ್ಲ, ಕಂಡದ್ದಲ್ಲಿ ಹೊಂದುವದ್ದಲ್ಲ..
ನಾನೂ ಹಾಗೇ...
ಇಲ್ಲೊದಗುವುದಿಲ್ಲ, ಅಲ್ಲಿಗೆ ದಕ್ಕುವುದಿಲ್ಲ.
ನೀನೂ ಹಾಗೇ...
ಬರುವುದಿಲ್ಲ, ಇರುವಲ್ಲಿ ನೀನೆನಿಸುವುದಿಲ್ಲ.

ಮನಸೇ, ಕಣ್ಣು ನಂಬುವ ಕ್ಷಣ,
ನೀನೊಳಗೊಳುವುದಿಲ್ಲ,
ನೀ ನಂಬುವ ನೋಟ,
ಈ ಕಣ್ಣು ಕಾಣುವುದಿಲ್ಲ.

ಪ್ರೇಮಚಂದ್ರಮನ ಶುಭ್ರಬಿಳಿಯಲೂ
ಬಯಕೆಯ ಕಲೆಯಿದೆ, ಕುಳಿಯಾಗುವಷ್ಟಿದೆ.
ಪರಿಪೂರ್ಣತೆಯಲಿ ಸಾಲದೆಂಬ ಅಪವಾದ.

.

5 comments:

  1. ಅಡಗುವಿಕೆ ಸವಿವಾರ ಚಿತ್ರಣ. ಮತ್ತು ಆ ಕಡೆಯ ಸಾಲುಗಳ ಅಂತರ್ಗತ ನೋವೂ..."ಪ್ರೇಮಚಂದ್ರಮನ ಶುಭ್ರಬಿಳಿಯಲೂ
    ಬಯಕೆಯ ಕಲೆಯಿದೆ, ಕುಳಿಯಾಗುವಷ್ಟಿದೆ.
    ಪರಿಪೂರ್ಣತೆಯಲಿ ಸಾಲದೆಂಬ ಅಪವಾದ."

    ReplyDelete
    Replies
    1. ಹೂಂ ಸರ್...ನಿಜ...ಎಲ್ಲೆಲ್ಲೋ ಸುತ್ತಾಡಿ ಮತ್ತೆ ಬಳಿಸಾರುವುದು ನೋವನ್ನೇ ಅಲ್ಲವಾ...

      Delete
  2. ಉಪಮೆಗಳ ಸರಮಾಲೆಯಿದೆ ಹೊರ ನೋಟದಲಿ
    ಭಾವ ತುಂಬಿದೆ ಪ್ರತಿಯೊಂದು ಉಪಮೆಯಲಿ
    ಈ ಎಲ್ಲ ನೋಟಗಳ ಆಂತರ್ಯದಲಿ ಅಡಗಿದೆ
    ಸತ್ಯ! ಸತ್ಯ ಅಡಗಿದೆ ನಿಮ್ಮ ಕವನದಲ್ಲಿ!

    ReplyDelete