Friday, March 8, 2013

(ನಮ್ಮಂಗಳದ ಗಿಡದಲ್ಲಿ ಹಕ್ಕಿಯೊಂದು ಕಟ್ಟಿದ ಗೂಡಿನ ಬಗ್ಗೆ ನಾನೂ ಮಗಳೂ, ಮಾತಾಡಿಕೊಂಡ ಮಾತುಗಳೇ ಇವು.)

------------------------------------------

ಹಕ್ಕಿಗೂಡು
------------------
"ಪುಟ್ಟಿ ನೋಡು ಹಕ್ಕಿ ಗೂಡು
ಕಟ್ಟಿ ಹೇಗೆ ಕೂತಿದೆ!
ಕೊಕ್ಕನಷ್ಟೆ ಚಾಚಿ ಹೊರಗೆ,
ಕಣ್ಣ ಹೇಗೆ ಮುಚ್ಚಿದೆ!"

"ಅಮ್ಮ ಬಿಡೇ, ಅತ್ತ ನಡೆದು
ಒಮ್ಮೆ ಒಳಗೆ ಇಣುಕುವೆ,
ಹಕ್ಕಿಗೂಡು ಎಷ್ಟು ಚೊಕ್ಕ,
 ನಾನೂ ನೋಡಬಯಸುವೆ."

"ಬೇಡ ಚಿನ್ನಿ, ಗೂಡ ಸನಿಹ
ಸಾರಬಾರದೀಗಲೇ.
ಇಣುಕಬಹುದು ಒಳಗೆ ಹಕ್ಕಿ
ಖಾಲಿ ಮಾಡಿದಾಗಲೇ..

ಹಕ್ಕಿನೋಡು, ಬಿಸಿಲುಮಳೆಗೆ
ಚಳಿಗೆ ತಾನು ಅಳುಕದೆ,
ಮೊಟ್ಟೆಯಿಡುವ ವೇಳೆಗಷ್ಟೆ
ಪೊರೆಯೆ ಗೂಡು ಕಟ್ಟಿದೆ.

ನಾಳೆ ಮೊಟ್ಟೆಯೊಡೆದು ಬರುವ
ಮರಿಗಳ ಸಲುವಾಗಿಯೇ,
ಹುಡುಕಿ, ಹೆಕ್ಕಿ ಕಸ ಕಡ್ಡಿಯ
ಸೂರು ಸಜ್ಜು ಮಾಡಿದೆ.

ಇದ್ದರಲ್ಲಿ ಇರಲುಬಹುದು
ಹಕ್ಕಿ ತತ್ತಿ ಒಂದೆರಡು,
ಇಟ್ಟರತ್ತ ಹೆಜ್ಜೆ ನೀನು,
ಹಕ್ಕಿಯೆದೆಯೆ ಹಾರುವುದು..

ಕಂದ ಭೂಮಿ ನಮ್ಮದೆಷ್ಟೋ,
ಎಲ್ಲ ಜೀವಸಂಕುಲದ್ದು.
ನಿರ್ಭಯ ನಿರಾಳ ಬಾಳು,
ಅವಕಷ್ಟೇ ಹಕ್ಕಿನದ್ದು..

ತಾಳು ಕೆಲದಿನದ ಕಾಲ,
ತತ್ತಿಯು ಮರಿಯಾಗುವುದು,
ಮರಿ ಹಾರಿದ ದಿನವೇ ಹಕ್ಕಿ
ಗೂಡು ಖಾಲಿ ಮಾಡುವುದು

ಕಣ್ಣಿನಾಸೆ, ತಿನ್ನುವಾಸೆಗೆಂದೂ
ಹಿಂಸೆಯಪ್ಪದಿರು,
ಸಣ್ಣಪುಟ್ಟ ಹೆಜ್ಜೆಗಳಲೇ,
ಮಾನವತೆಯ ಮೆರೆಯುತಿರು."

"ಬೇಡ ಬಿಡೇ ಅಮ್ಮ ಇಂದು
ಗೂಡನಂದೇ ನೋಡುವೆ,
ಅಟ್ಟಿ ಬೆಕ್ಕು, ಕಾಗೆ, ಗಿಡುಗ
ತತ್ತಿ ನಾನೂ ಕಾಯುವೆ."

10 comments:

  1. ಕಣ್ಣಿನಾಸೆ, ತಿನ್ನುವಾಸೆಗೆಂದೂ
    ಹಿಂಸೆಯಪ್ಪದಿರು,
    ಸಣ್ಣಪುಟ್ಟ ಹೆಜ್ಜೆಗಳಲೇ,
    ಮಾನವತೆಯ ಮೆರೆಯುತಿರು
    ಸುಂದರವಾಗಿದೆ. ಮಕ್ಕಳಿಗೆ ಖಂಡಿತಾ ಹೇಳಲೇ ಬೇಕಾದ ಪಾಠ

    ReplyDelete
  2. ಇದೊಂದು ಅತ್ಯುತ್ತಮ ಬಾಲಗೀತೆ. ಸರಳವಾದ ಛಂದದಲ್ಲಿ, ಬಾಲರಿಗೆ ಜೀವನಪಾಠವನ್ನು (--ದೊಡ್ಡವರಿಗೂ ಹೌದು--) ತಿಳಿಯಪಡಿಸಿದ್ದೀರಿ!

    ReplyDelete
  3. 2 ಸಂಗತಿಗಳು.
    ಮೊದಲ್ನೆಯದಾಗಿ ಇಂದಿನ ಬೆಂಗಳೂರಿನ ಕಾಣೆಯಾಗುತ್ತಿರುವ ಮರಗಳ ಬಗೆಗೆ ಚಿಂತೆಯಾಯಿತು.
    ಎರಡನೆ ಸಂಗತಿ ಎಂದರೆ ನನ್ನ ಬಾಲ್ಯ ನೆನಪಾದದ್ದು.

    ಅತ್ಯುತ್ತಮ ಶಿಶು ಗೀತೆ.

    ReplyDelete
  4. ಚನ್ನಾಗಿದೆ ಹಕ್ಕಿಯ ಹಾಡು...

    ReplyDelete
  5. ಧನ್ಯವಾದಗಳು raaghav

    ReplyDelete
  6. ಮನೋಜ್ಞ ಶಿಶು ಕವಿತೆ ... ಮಾಗಿದ ಕವಿಯಿತ್ರಿ ನೀವು ... ಕೊನೆಗೆ ಬರುವ ನೀತಿ ಪಾಠ ಕವಿತೆಯ ತೂಕವನ್ನು ಹೆಚ್ಚಿಸಿದೆ ...ಅಭಿನಂದನೆಗಳು ಅಕ್ಕಾ
    ಹುಸೇನ್

    ReplyDelete