Thursday, August 1, 2013

ಸ್ವಪ್ನದೂಟದ ಮೆಲುಕು


ಅಂಕೆಯಿರದೆ ಚಾಚಿದೆ
ಆಗಸ ಕರಿಹಂದರ,
ಅದರುದ್ದಕು ಹಬ್ಬಿದೆ
ದೃಷ್ಟಿಬಳ್ಳಿ ಸುಂದರ.
 
ಹಗಲ ಮಡಿಲಿಂದ ಜಾರಿ
ಜಗವಿರುಳ ಜೋಲಿಗೆ,
ತೂಕಡಿಸಿದೆ ಜೀವರಾಶಿ
ತಂಪುತಂಪು ಲಾಲಿಗೆ..
 
ತಡವಿಲ್ಲ, ನೂರು ತಾರೆ
ಹೂವರಳಿ ಹೊಳೆದಿವೆ.
ನಡುವೆ ದುಂಡುಹಣ್ಣು
ಚಂದ್ರ ಬಿಡದೆ ಸೆಳೆದಿದೆ..
 
ಕನಸದುಂಬಿ ತಾರೆಸುತ್ತ
ಸುತ್ತಿಸುಳಿದು ಹಾರಿದೆ.
ಸೊಗದ ಮಧುವ ಕಣ್ಗೆ ಸುರಿದು
ಮೈ-ಮನದಿ ಹರಡಿದೆ...
 
ಮುಚ್ಚಿದೆವೆಯ ಒಳಗೆ ಹುಟ್ಟಿ
ಮಿನುಗು-ಹೊಳಪ ಸಾಮ್ರಾಜ್ಯ
ಕಣ್ಣ ಕಪ್ಪುಬೊಂಬೆಗಂತು
ನಗೆ; ಜೊತೆಗೆ ಆಶ್ಚರ್ಯ!
 
ನೋವಿಲ್ಲ, ಕಾವಿಲ್ಲ,
ವಿರಹದುರಿ ಮೊದಲಿಲ್ಲ;
ಸಿಟ್ಟು-ಕಟ್ಟುಪಾಡಿಲ್ಲ,
ದೂರು-ದುಮ್ಮಾನವಿಲ್ಲ...
 
ಬೆಳಕು ಹರವಿಟ್ಟಿದೆ
ಸ್ಫಟಿಕಸದೃಶ ನಗು,
ಸೇತುವಾಗಿ ಒಳ-ಹೊರಗಿಗೆ
ಕಪಟವಿರದ ಸೊಬಗು.
 
ತನ್ನದೊಂದೂ ಅಲ್ಲಿಲ್ಲ,
ಅಲ್ಲವೆನಿಸಿದ್ದೂ ಇಲ್ಲ.
ಹೊತ್ತು ನಡೆವವರಿಲ್ಲ,
ಧೊಪ್ಪನೆಸೆವವರಿಲ್ಲ...
 
ಆತ್ಮಸಖ್ಯದ ನಡೆ
ಸ್ನೇಹ-ಪ್ರೀತಿ ದಿಕ್ಸೂಚಿ.
ಮಿಲನ ದೂರದ ಗುರಿ
ಅಲ್ಲಿವರೆಗಿರದ ತಡೆ..
 
ದ್ವೇಷ ದಮನಕೆ
ಪ್ರೇಮ ಸಾಧನ.
ಗೆರೆಯ ಗಾಯಕೆ
ಹಣೆಗೆ ಚುಂಬನ..
 
ಕಾಲ ಬಡಿಸಿದೆ
ಸಿಹಿ ಸ್ವಪ್ನದೂಟ
ಚಪ್ಪರಿಸಿ ಮೆಲುಕಿನಲಿ
ಹಾರೈಸಿದೆ ಒಳಗಣ್ಣು..
 
ಹಗಲಿಗೂ ಹರಡಲಿ
ಈ ಇರುಳ ಕನಸು
ಅಲ್ಲಾಗಿ ಅದು ನಿಚ್ಚಳ,
ನಿರಾಳವೊಂದು ನನಸು...

3 comments:

  1. ಆಗಾ ಚಿಕ್ಕ ಚಿಕ್ಕ ಸಾಲುಗಳ ಮಾಲೆ...
    ಚಂದದ ಕವನ ಮಾಲಿಕೆ....
    ಎಷ್ಟು ಚಂದ.....
    ಹಗಲ ಮಡಿಲಿಂದ ಜಾರಿ
    ಜಗವಿರುಳ ಜೋಲಿಗೆ,
    ತೂಕಡಿಸಿದೆ ಜೀವರಾಶಿ
    ತಂಪುತಂಪು ಲಾಲಿಗೆ.

    ತುಂಬಾ ಸಹಜ ಮತ್ತು ಅಷ್ಟೇ ಸುಂದರ....

    ReplyDelete
    Replies
    1. ಓ... ಏನ್ ಭಾರೀ ಅಪೂರ್ಪ ಆಗ್ಬಿಟ್ರಿ ತಮ್ಮಾ... thank you..

      Delete
  2. ನನಗೂ ಅಂತಹ ಸಿಹಿ ಸ್ವಪ್ನದೂಟದ ಕನಸು ನೆರವೇರಲಿ. ಅಪರೂಪದ ಕವಿತಾ ಸಂಚಯವಿದು.

    ReplyDelete