Friday, August 2, 2013

ಉಳಿವ ದೀಪ ಬಯಸುವ ಮೊದಲು...

ಅಂದೂ ಅನ್ನದಂತೆ
ಪಡೆದೂ ಪಡೆಯದಂತೆ
ಹೊಂದಿಯೂ ಹೊಂದದಂತೆ
ಇಲ್ಲಿನದೆಲ್ಲವ ಸಂಬೋಧಿಸಿ ಮತ್ತೆಮತ್ತೆ
ನೀನಾಡಿದ್ದೆಲ್ಲ ಅಡ್ಡಗೋಡೆಯ ಮೇಲಿನ ದೀಪ.
ನನಗೆ ಕೇಳಿದ್ದು ಅದು ಹರಡಿದ ಬೆಳಕಿನಾಲಾಪ..
 
ಇರಲಿಬಿಡು ಯಾವುದಿದೆ ಶಾಶ್ವತ ನಾವಿರುವಲ್ಲಿ?!
ನಾನೇ, ನೀನೇ, ಸತ್ಯವೇ, ಸುಳ್ಳೇ, ಒಲವೇ, ದ್ವೇಷವೇ..?
ತೂಗುತಕ್ಕಡಿ ಸಮಭಾರವೆರಡೂ ಕಡೆ ಹೊತ್ತಾಡಿದಂತೆ...
ಒಮ್ಮೆ ಅದು ಕೊಂಚ ಮೇಲೆ, ಒಮ್ಮೆ ಇದು.
ಅವರವರ ಪಾಲು ಬೇರೆಬೇರೆಯಾದ ಮೇಲೆ
ಮತ್ತೊಮ್ಮೊಮ್ಮೆ ಎರಡೂ ತಟ್ಟೆ ಖಾಲಿಯುಳಿವ ಹಾಗೆ.
 
ಉರಿವಷ್ಟು ಕಾಲ ಅನಿಶ್ಚಿತತೆಯನಾದರೂ ಬೆಳಗಲಿಬಿಡು
ದೀಪವದು, ಬೆಳಗುವಾಸೆಯದಕೆ ಪಾಪ!!
ಮಿಣುಕುಮಿಣುಕೆನುತಲೇ ಆಗಲಿ,
ಎಣ್ಣೆ ಚೆಲ್ಲುತಲೇ ಆಗಲಿ,
ಅನಿರ್ದಿಷ್ಟತೆಯ ಪರಮಾವಧಿಯಲೇ ಆಗಲಿ,
ತುಸುಹೊತ್ತಾದರೂ ಬೆಳಗಿದ ಗರಿಮೆ ಹೊತ್ತಾರಲಿ.
 
ಇಲ್ಲ, ನಾ ಅಂಜಲಿಕೋಟೆ ಕಟ್ಟಲಾರೆ,
ಏನಿದ್ದರೂ ಅದಿದ್ದಷ್ಟು ಹೊತ್ತು ಕಣ್ಣೊಡ್ಡಬಲ್ಲೆ,
ಎದೆ ತುಂಬಿಸಿಕೊಂಡಿಟ್ಟುಕೊಳಬಲ್ಲೆ,
ಅರಸುವುದ ಬೇಗಬೇಗ ಅರಸಿ
ಹೊಂದಬಲ್ಲೆ, ಮುದಗೊಂಡದರ
ಕುಣಿದಾಟವನೂ ಮನದುಂಬಿ ಮೆಚ್ಚಿ,
ನಾನಳಿವವರೆಗೆ ಮಾಸದಿರುವ ಭಾವಚಿತ್ರ
ಮನಕಿಳಿಸಬಲ್ಲೆ, ಮತ್ತಾ ಸಾನ್ನಿಧ್ಯವಿತ್ತವಗೆ
ಮನಸಾರೆ ನಮಿಸಬಲ್ಲೆ...ಅಷ್ಟೇ;
ಆರುವುದ ಮುಂದೂಡಲಾರೆ...
 
ಅಡ್ಡಗೋಡೆಯ ಮೇಲಿಟ್ಟು ದೀಪ
ಉಳಿಸುವ ಮಾತಾಡುವುದುಂಟೇ?
ಉರಿದುಳಿವುದು ಅದರ ಜಾಯಮಾನವಲ್ಲ,
ನಾ, ನೀ ಬಯಸಿದರದು
ತನ್ನತನ ಬಿಟ್ಟುಕೊಡುವುದೂ ಇಲ್ಲ.
ನಿಗದಿಯಾಗಿದೆ ಉರಿವ ಮತ್ತಾರುವ ಗಳಿಗೆ
ಒಂದು ಕ್ಷಣವೂ ಹೆಚ್ಚುಕಮ್ಮಿ ಉಳಿವುದಿಲ್ಲ.
 
ಉಳಿವ ದೀಪ ಬಯಸುವುದಾದರಿಲ್ಲಿ ಬಾ.
ತೆರೆದಿದೆ ಕದ, ಎದೆಹಣತೆ ಕಾದಿದೆ ಸದಾ.
ನಂಬಿಕೆಯೆಣ್ಣೆ ಸುರಿದು, ಸ್ನೇಹದೀಪ ಹಚ್ಚಿನೋಡು..
ಬೆಳಗುತಿರುವುದ ನೋಡಬಯಸುವ
ಕಣ್ಮುಚ್ಚಿದ ಮೇಲೂ ಉರಿಯುತಿರಬಲ್ಲದ್ದು.
ಇದು ಇದರ ಜಾಯಮಾನ,
ನಾ, ನೀನೆಷ್ಟೇ ಬಯಸಿದರೂ
ಇದೂ ತನ್ನತನ ಬಿಟ್ಟುಕೊಡದೆ
ಉರಿಯುತಲೇ ಉಳಿದು ತೋರುವುದು...

4 comments:

  1. ಸ್ನೇಹದೀಪದ ಬೆಂಬೆಳಕಲ್ಲಿ ಅಳಿಸುವುದು ಅನಿರ್ದಿಷ್ಟತೆಯ ಪರಮಾವಧಿ. ಒಳ್ಳೆಯ ಪರಿಕಲ್ಪನೆ.

    ReplyDelete
  2. ಯಾರ್ಯಾರ ಮನಸಲ್ಲಿ ಏನೇನು ಗಂಟಾಗಿ
    ಉಳಿದುಬಿಟ್ಟಿದೇಯೋ.....
    ಒಬ್ಬರಿಗೆ ಸಾದಾ ಸೀದಾ ಅನಿಸಿದ್ದು ಇನ್ನೊಬ್ಬರಿಗೆ
    ಸಿಕ್ಕು ಸಿಕ್ಕು......
    ಏಕತಾನತೆಯಿಲ್ಲದ ಬದುಕ ತಾಳಕ್ಕೆ ಪ್ರಶ್ನೆಯೆಸೆದು ನೋಡಿ....
    ನೀನು ಹೇಳಿದ ಅದೇ ಅಡ್ಡ ಗೋಡೆಯ ಮೇಲೆ ದೀಪ...ದಂತಹುದೇ
    ಉತ್ತರ.....
    ಅಕ್ಕಾ ಉರಿಯಲು ದೀಪಕ್ಕೆ ಎಣ್ಣೆಯೊಂದೇ ಸಾಕೆ....
    ಬೀಸುವ ಗಾಳಿಯ ಸಂಯಮವೂ ಜೊತೆಯಾಗಬೇಕು ತಾನೇ?.....
    ದೀಪ ಉರಿದುಕೊಂಡು ಹೋಗಲು ನಾವೇನಾಗಬಹುದು...
    ಸಂಯಮದ ಗಾಳಿಯೋ.... ಉರಿಸುವ ಎಣ್ಣೆಯೋ...
    ಏನವಶ್ಯಕಥೆಯೋ ನಾವದಾಗೋಣ.....

    ತುಂಬಾ ಒಳ್ಳೆಯ ಸಾಲುಗಳು.....

    ReplyDelete
    Replies
    1. ನಂಬಿಕೆಯ ಮಾತನ್ನ ಅದಕ್ಕೆ ಅಲ್ಲಿ ತಂದದ್ದು ತಮ್ಮಾ.. ಗಾಳಿ, ಮಳೆ, ಉರಿದು ಕರಕಾಗುವ ಬತ್ತಿ ಎಲ್ಲವೂ ಉರಿವ ದೀಪಕ್ಕೆ ಸವಾಲುಗಳೇ.. ಅಲ್ಲಿ ನಂಬಿಕೆಯ ತಳಹದಿಯ ಮೇಲೆ ದೀಪ ಹಚ್ಚುವುದು ನಮ್ಮ ಕೆಲಸ... ಆಮೇಲಿದ್ದು ನಡೆಯುವದ್ದೇ ನಡೆಯುವುದು. ಆದರೆ ನಂಬಿಕೆಯ ಎಣ್ಣೆಯಿದ್ದಷ್ಟು ಹೊತ್ತು ದೀಪವು ನಿನ್ನದೇ, ಗಾಳಿಯು ನಿನ್ನದೇ, ಆರದಿರಲಿ ಬದುಕು ಎಂಬ ಹಾರೈಕೆಯೂ ದೀಪವಾರಲಾರದೆಂಬ ಆಶಯವೂ ನಮ್ಮದಾಗುಳಿದೀತು. ಎಣ್ಣೆಯೇ ಇಲ್ಲದಿದ್ದರೆ ಹಣತೆಯೊಂದರ ಪಾಲಿಗೆ ದೀಪ ಬರೀ ಕನಸಾಗುಳಿದೀತು. ಆಮೇಲಿನ ಸವಾಲುಗಳನ್ನು ನಂಬಿಕೆಯ ಪಾಲಿಗೆ ಬಿಟ್ಟುಬಿಡೋಣ.. ಆಗದಾ...

      Delete
  3. ಜೀ ಹುಜೂರ್.... ಆಗಬಹುದು..............

    ReplyDelete