Thursday, August 22, 2013

ಸ್ವಲ್ಪ ಅವನಳಲೂ ಕೇಳಿ...

ದಾಟಿ ಬಾರೆಯಾ ರಾಧೆ ಎಲ್ಲ ಎಲ್ಲೆ
ಅರಳಿಸಲು ನನ್ನೆದೆಯ ಮೊಗ್ಗುಮಲ್ಲೆ
 
ಕಾಯುತಿರುವುದು ನೀನು
ಕಾಣುವ ದೇಹವಂಟಿಸಿ
ನಾ ನಡೆದ ಹಾದಿಗೆ
ಲೋಕವೆಂದಿಗೂ ವಿರಹಿ ನಿನ್ನ ಪರವೇ
 
ಬೇಯುತಿರುವುದು ನಾನು
ಕಾಣದೆನ್ನ ಮನವ ಕಾಯಿಸಿ
ನೀನಿರದ ಉರಿಗೆ..
ಲೋಕದರಿವಿಗೆ ನಿನ್ನ ಕಾಯಿಸುವ ಪಾಪಿ ನಾನೇ..
 
ನೂರು ಕಾರ್ಯಕಾರಣ
ಗಮನಿಸಲಾಗಿಲ್ಲ;
ನನಗಪರಿಚಿತ ಇತ್ತೀಚೆಗೆ
ನನ್ನದೇ ಮನ.
 
ಮುಚ್ಚಿರುವೆ ಮೇಲೊಂದು
ಉಪೇಕ್ಷೆಯ ಕಲ್ಲುಚಪ್ಪಡಿ;
ಕಾಣುತಿಲ್ಲವಾದರೂ ಗೋರಿಯಂತೆ
ಮಲಗಿರಬಹುದಲ್ಲಿ ಸಾವೇ, ಸದ್ದಿಲ್ಲದಂತೆ.
 
ಅತ್ತೆ ಮಕ್ಕಳ, ಅವರ ಮಡದಿಯ
ಸಂಧಾನದ, ಯುದ್ಧವಿಧಾನದ
ವಿದುರನಾತಿಥ್ಯದ
ಅಳಿಯನಳಿವಿನ
ಕರ್ಣನನೊಲಿಸುವ
ಪಾಪ ತೊಲಗಿಸುವ
ಹೀಗೇ ಕರೆವ ನೂರುಕರೆಗಳಬ್ಬರದಲಿ
ನುಡಿಸಿದರೂ ಕೊಳಲು ನುಡಿಯುತಿಲ್ಲ..
ಭಯವೆನಗೆ, ಮರೆತೇ ಬಿಟ್ಟೇನು...
 
ಅಭಯ, ಆಶ್ವಾಸನೆ,
ಆಣೆ, ಅಪ್ಪಣೆ,
ಭರವಸೆ, ಒತ್ತಾಸೆ,
ಒತ್ತಾಯ, ಉಪಾಯ
ಗುಟ್ಟುಬಯಲು, ಮತ್ತೆ ಕೆಲಸುಳ್ಳು
ಹೀಗೇ ನೂರುಮಾತಿನ ಭರಾಟೆಗೆ
ಸವಿ ಗುರುತಿಸುತಿಲ್ಲ ನಾಲಿಗೆ
ಬೆಣ್ಣೆ ಬೆಣ್ಣೆಯೆನಿಸುತಿಲ್ಲ ಅದಕೆ
ಭಯವೆನಗೆ ಮರೆತಿರುವೆನೇ ನಾನು?
 
ಬಿತ್ತಲ್ಲಿ ಬಂದಿರುವೆ ಆಸೆಬೀಜ
ಮತ್ತೆ ಕೊಳಲೂದುವುದಕೆ
ಕದ್ದುಮುಚ್ಚಿ ಬೆಣ್ಣೆ ಸವಿಯುಣುವುದಕೆ
ಕಣ್ಮುಚ್ಚಿ ಅಂದ ಸವಿವುದಕೆ
ಮುಟ್ಟದೆಯೇ ಅನುಭವಿಸಲಿಕೆ
ಆಡದೆಯೇ ವರ್ಣಿಸಲಿಕೆ
ಮಾತಿರದ ಅನುಭೂತಿಯಲೆಲ್ಲ
ಕ್ಷಣ ತುಂಬಲಿಕೆ..
 
ನೀರುಣಿಸುತಿರು ನೀನು
ಅದು ಮೊಳೆತು ಬೆಳೆಯಲಿ
ನಾ ಮರೆತರೂ ಆಗೊಮ್ಮೆ
ಕೊಳಲೂದುವುದು, ಬೆಣ್ಣೆಯುಣುವುದು
ಮತ್ತಿನ್ನೇನೋ ಎಲ್ಲ,
ಕಲಿಸಬೇಕು ನೋಡು ನೀ ಮತ್ತೆ
 
ಖಾಲಿ ಕಾಯುತಲೇ ಕೂರದಿರು
ಮೆಲುಕು ಹಾಕುತಿರು
ಜಾರದಿರಲಿ ನಮ್ಮ ಆ ಹೊತ್ತು
ನಿನ್ನ ಈ ಹೊತ್ತಿನ ಮರೆವಿನಾಳಕೆ..
ಕರ್ತವ್ಯದೊಳಗಿದ್ದರೂ ನಾನು
ಕಾಯುತಿರುವುದು ಬರೀ ಆ ಮಿಲನಕೆ...
 
 

No comments:

Post a Comment