ನೆಲದ ಮೇಲಿನ ಮನಸೇ,
ಎಷ್ಟೆತ್ತರ ಹಾರಿದರೂ ಮತ್ತಲ್ಲಿಗೇಹೊರಳಿ ಮುಟ್ಟುವ ಪಾದ ನಿನ್ನವೇ
ನಿನಗಷ್ಟೊಂದು ಸೋಜಿಗವೇ?!
ಚಿಂತಿಸಿ, ಯೋಚಿಸಿ ನಿಂತವಳ ಮೇಲೇ
ಗುರುತ್ವಾಕರ್ಷಣೆ ಅದವಳದೇ ಎಂದೆ
ಎದೆಯ ಕೇಂದ್ರ ಸೆಳೆತದ ಮೂಲವೆಂದೆ
ನಿನ್ನ ಹೊಂದುವ ದಾಹ ಅವಳದೆಂದೆ...
ತುಸು ನೆಲೆ ಬದಲಿಸಿ ನೋಡು,
ಅವಳ ತೂಕವೈಶಾಲ್ಯದೆದುರು
ನಿನ್ನ ಕಿರುಗಾತ್ರ;
ಆ ಪರಿಧಿ ಬಿಟ್ಟು ಹೊರನಡೆಯದ
ನಿನ್ನ ಸೀಮಿತ ಪಾತ್ರ;
ಇದಲ್ಲವೇ ಸತ್ಯ; ಮತ್ತದೇ ಕಾರಣಕೆ
ನೀ ಸೆಳೆತಕೊಳಪಡುವುದು ತಾನೇ ?!
ನೀರು-ಹಸಿರು ಮಣ್ಣು-ಕಲ್ಲಂತೇ
ಪ್ರೀತಿ ಸೆಳೆತವವಳಿಗೆ ಜನ್ಮದತ್ತ.
ಒಮ್ಮೆ ಸ್ಪರ್ಶಿಸಲವಳ ನಿನ್ನದಾಗುವುದೆಲ್ಲ ..
ಅಡಿಯಿಟ್ಟು ನೋಡೊಮ್ಮೆ ಅವಳ ಬಿಟ್ಟತ್ತ
ಆಕರ್ಷಣೆಯೂ ಇಲ್ಲ, ನೀ ಮರಳಬೇಕಿಲ್ಲ...
ಮರಳಿದರೆ ಪ್ರೀತಿಯಿಲ್ಲಿಲ್ಲದೆಯೂ ಇಲ್ಲ..
ಪ್ರೀತಿ ಶಾಶ್ವತ, ನಿಯಮಕೆ ನಿಲುಕದೆ, ಶುದ್ಧ.
ಸೆಳೆತ ನಿಯಮಿತ, ನಿಯಮಬದ್ಧ ...
ಅವಳು ನಿನ್ನ ಹಿಂದಿಲ್ಲ, ನೀನವಳಿಗೆ ಬದ್ಧ
ತೊರೆದುದೆಲ್ಲ ಸೆಳೆತಮುಕ್ತ ಮಾಡಲವಳು ಸಿದ್ಧ
ದೂರದಿರು, ದೂರಿ,ದೊಡ್ಡವನಾಗಲಾರೆ
ಪ್ರೀತಿಯವಳದು, ಸಂಶಯಿಸಿ ಗೆಲ್ಲಲಾರೆ
ಸೆಳೆತ ನಿನದು, ಅವಳೊಳಗಿದ್ದು ಎದುರಿಸಲಾರೆ...
ಮರಳಿದರೆ ಪ್ರೀತಿಯಿಲ್ಲಿಲ್ಲದೆಯೂ ಇಲ್ಲ..
ReplyDeleteಎನ್ನುವಾಗಲೇ ನಮ್ಮ ಪರಿಧಿ ಅರಿತೇ ನಾವು ಗಮನಿಸಬೇಕಾಗುತ್ತದೆ.
the best : ಪ್ರೀತಿಯವಳದು, ಸಂಶಯಿಸಿ ಗೆಲ್ಲಲಾರೆ