Tuesday, August 27, 2013

**

ಕಣ್ಣು ವಿಹಂಗಮಕೆ ನೆಟ್ಟದ್ದೇ
ತಪ್ಪೆನುವಂತೆ ರೆಕ್ಕೆ ಮುರಿದೊಂದು ಹಕ್ಕಿ.
ಊರಲ್ಲದೊಂದೂರಿಗೆ ವಲಸೆಯ ಸ್ವಪ್ನಜಾಲ
ನಡೆವ ಕಾಲ್ಬೆರಳು ಸಿಕ್ಕಿಬಿದ್ದು
ರೆಕ್ಕೆಗೆ ಚಾಲನೆ ಜಾಲ ಸಮೇತ.
ಇದ್ದ ಶಕ್ತಿಯೆಲ್ಲಾ ಹೊರದಬ್ಬಿ
ನೆಲದ ಕಾಳ ಸೆಳೆತ ಮೀರಿ
ಇತ್ತೋ ಇಲ್ಲವೋ ಇದ್ದಂತನಿಸಿದ
ನೆಲಬಿಟ್ಟ ನೆಲೆಯ ಸೆಳೆತಕೆ ಶರಣಾಗಿ..
ಕಂಡ ಕ್ಷಣ, ಸೆಳೆದ ಕ್ಷಣ
ಅದು ನಂಬಿಸಿ ಇದು ನಂಬಿದ ಕ್ಷಣ,
ಮತ್ತದು ನಿಲುಕಿತೆನಿಸಿದ ಕ್ಷಣವಷ್ಟೇ ದಕ್ಕಿದ್ದು,
ತನ್ನದೆನುವದೇನೋ ಹರಿದು ಚಿಂದಿ..
ನೆಲವಲ್ಲದ ನೆಲೆ ಗಾಳಿಗುದುರೆಯ ಬೆನ್ನೇರಿ
ದೂರ ದೂರ ವಿಹಂಗಮ, ಕ್ಷಿತಿಜದತ್ತ..
ಕಾಲ್ಬೆರಳು ನಡೆಯಗೊಡದೀಗ,
ಹರಿದ ರೆಕ್ಕೆ ಹಾರಗೊಡದು..
ಹಕ್ಕಿ ಕಾದೇ ಕಾದಿದೆ ಹಾರಲಿಕಾದರೂ ಹೌದು,
ಮತ್ತೆ ಹಾರುಹಕ್ಕಿಯಲ್ಲ, ಅದಲ್ಲಿಲ್ಲವೆನಿಸಲಿಕೆ
ಇನ್ನಿಲ್ಲವೆನಿಸಲಿಕಾದರೂ ಹೌದು...
ಇನ್ನೊಮ್ಮೊಮ್ಮೆ ಅದು ಹೀಗಂದಂತಿದೆ..
ರೆಕ್ಕೆ ಮುರಿದರೇನು, ಇನ್ನೊಂದಿದೆ ಹರಿಯಲಿಕೆ,
ಅದೂ ಮುರಿದ ಕ್ಷಣ ಇನ್ನೂ
ಹಕ್ಕಿಯದೆಂಬ ಹೃದಯವೊಂದಿದೆ
ಮತ್ತೆ ನೆಟ್ಟಿವೆ ಕಣ್ಣು ವಿಹಂಗಮಕೆ
ಇನ್ಯಾವುದೋ ಒಂದೆಡೆಯ ವಲಸೆ,
ಮತ್ತದರ ಸ್ವಪ್ನಜಾಲಕೆ...
ಬಂಧಿಸುವ ಜಾಲವೇ ಹೌದು,
ಆದರೆ ಕನಸಿಲ್ಲದೇ ಬದುಕಿಲ್ಲ,
ಕನಸಲ್ಲದ ಬದುಕಿಲ್ಲ...

2 comments:

  1. 'ಹಕ್ಕಿಯದೆಂಬ ಹ್ರದಯ ಒಂದಿದೆ ಮತ್ತೆ ನೆಟ್ಟಿವೆ ಕಣ್ಣು ವಿಹಂಗಮಕೆ' ಎಂಬ ಸಾಲು ನನಗೆ ಇಷ್ಟವಾಯಿತು.ಹಕ್ಕಿಯ ಬಗ್ಗೆ ಒಂದು ಒಳ್ಳೆಯ ಕವನ.
    ನನ್ನ ಬ್ಲಾಗಿಗೂ ಭೇಟಿ ಕೊಡಿ.

    ReplyDelete
    Replies
    1. thank you sir..i already visited ur blog.. it is very gud... have commented yestrday..

      Delete