Sunday, August 25, 2013

ಮುತ್ತು ಮಾತಾಡಿದ್ದು

"ಅದೇ ಅದೇ" ಅನ್ನುತ್ತಾ ಕಣ್ಣಲಿ
ನೂರು ಮಿಂಚರಳಿಸಿ ನಕ್ಕವನ
ಸುಮ್ಮನೇ ಕೇಳಿದೆ
, "ಅದಲ್ಲದಿದ್ದರೆ?!"
ಮಿಂಚು ಸಣ್ಣಗೆ ಗುಡುಗಾಯ್ತು
ಗುಡುಗು ಸೋನೆ ಮಳೆಯಾಯ್ತು
ತಾಕಿ ನೀರಾಗಿಸುವ ಗುಡ್ಡ ಅವನೆಂದಿದ್ದೆ
ನೀರಾಗುವ ಮೋಡವೆಂದರಿವಾದದ್ದೇ
ಮನವೀಗ ನವಿಲು
, ರೆಕ್ಕೆಬಿಚ್ಚಿ
ಒಂದೊಂದು ಕಣ್ಣಲೂ ಒಂದೊಂದು ನೋಟ
ಅಷ್ಟೇ ಭಾವ, ಅಷ್ಟೇ ಪುಳಕ...
ಗುಡುಗಿ ಸುರಿದುದಕೆ ಅವನು
ಅಡಗಿ ನೆನೆದುದಕೆ ನಾನು
ನವಿಲ ಹೆಜ್ಜೆ ತೊಟ್ಟಿದೆ ಗೆಜ್ಜೆ
..
ಕೊರಳೆತ್ತಿ ಬಿಂಕದಿ ಹಾಡಿ
ನಲಿವ ಹೆಜ್ಜೆಗುರುತೆಲ್ಲಾ
ಹಿತವಾದ ಸವಿಮಾತು
.
ಮಾತು ಹುಟ್ಟಿಸಿವೆ ಮುತ್ತು.
ಹಣೆ ಕತ್ತು ಕಿವಿ ಕೈಯ್ಯಲಂಕರಿಸಿ
ಮುತ್ತು ಮಾತಾಡಿದೆ
, ಕೂಗಿ ಹೇಳಿದೆ
"ಅವ ಹೇಳಿದ್ದು ಸರಿ
ಅದು ಅದೇ, ಈಗಿಬ್ಬರೂ ಸುಮ್ಮನಿರಿ..."  
 
 
 
 
 
 

2 comments:

  1. ಚಪ್ಪಾಳೆ... ಚಪ್ಪಾಳೆ... ಚಪ್ಪಾಳೆ... ಚಪ್ಪಾಳೆ...
    ಅದ್ಭುತ ಪ್ರತಿಮಾನವರಣ! ಅವನು ಮತ್ತು ಅವಳೇ ಪುಣ್ಯವಂತರು.
    ಆ 'ಅದು' ಮರಳಿ ಸಾಂಗತ್ಯವನ್ನು ಶ್ರುತಿ ಮಾಡುತಿರಲಿ ಅನುಗಾಲ.

    ReplyDelete