Wednesday, May 27, 2015

ಹೂವು ಬಾಡಿಬಿಟ್ಟಿದೆ.ಒಂದೊಂದು ಅರಳೂ
ಜಗದೆಲ್ಲವ ಮೀರಿದ
ವೈಶಿಷ್ಠ್ಯತೆ ತನದೆಂದುಕೊಂಡದ್ದು
ಹೂವಿನ ಸೌಂದರ್ಯದ ಗುಟ್ಟು..

ಸೂಜಿಯಲಿ ಚುಚ್ಚಿಸಿಕೊಂಡು
ಮಾಲೆ ಹೊಕ್ಕಾಗಲೂ
ಸರಣಿಯಲೊಂದು ತನ್ನ ಸ್ಥಾನದ
ಪರಿವೆಯಿಲ್ಲದ ನಂಬಿಕೆಯದರದು!

ದೇವಬಿಂಬದ ಮೇಲೇರುತಾ
ಸಾರ್ಥಕತೆಯಲರ್ಪಿಸಿಕೊಂಡಿತು.
ಕಳಚಿಕೊಂಡದ್ದು,
ಮತ್ತಾಗ ಅಲ್ಲುದುರಿದ ತನದೂ,
ತನ್ನ ನಿನ್ನೆಗಳದೂ
ಒಂದಷ್ಟು ಹನಿಗಳ ಮರೆತು
ಎದುರು ನೋಡಿಯೇ ನೋಡಿತು,
ಅವನದೊಂದು ಮೆಚ್ಚುಗೆಯ ನೋಟಕೆ.
ಅವನೋ ಕಲ್ಲುದೇವ, ಪಾಪ!!
ಮೆಚ್ಚುವುದೂ, ಮಾತಾಗುವುದೂ ಅಲ್ಲ,
ನಗುತಾ ಸುಮ್ಮನುಳಿವ
ಮೌನವಷ್ಟೇ ಅವನ ಜಾಯಮಾನ.
ಸಮರ್ಪಣೆಗಳನುಣುತಾ
ಮೇಲೇರುವುದಷ್ಟೇ ಗೊತ್ತವಗೆ.

ಈಗರಿವಾಗಿದೆ
ಹತ್ತರಲೊಂದು ಅಥವಾ
ಹತ್ತರ ಜೊತೆ ತಾ ಹನ್ನೊಂದು.
ಜಗದೆಲ್ಲರ ತಾಪ ತಣಿಸುವಷ್ಟು
ತಂಪಿನವನ ಮೈಮೇಲೆ ಕೂತಂತೆಯೇ
ಹೂವು ಬಾಡಿಬಿಟ್ಟಿದೆ. 

Thursday, May 21, 2015

ಹಾಗೆಲ್ಲ ಆಗಿ ಹೀಗಾಗಿಬಿಟ್ಟಾಗ...
--------------------
ಹೀಗೇ ಒಂದು ಮಟಮಟ ಮಧ್ಯಾಹ್ನ
ಹೊರಗೆ ಲೋಕ ಬೆವರೊರೆಸಿಕೊಳುತಿತ್ತು
ಒಳಗು ತಂಪೊಂದನೇನೋ ಒಳಗೊಳುತಿತ್ತು.
ತಾನೊಳಹೊಗುತಿತ್ತು, ಮತ್ತೊಳಗೊಳುತಿತ್ತು..

ದಿನವೊಮ್ಮೊಮ್ಮೆ  ಕ್ಷಣವೆನಿಸುವುದೂ,
ಮತ್ತೊಮ್ಮೊಮ್ಮೆ ಯುಗವೆನಿಸುವುದೂ
ಪ್ರೀತಿ-ಪ್ರೇಮದಲೇ ತಾನೇ?
ಏನೋ ಅಂಥದ್ದಾಗಿಯೇಬಿಟ್ಟಿರಬೇಕು!

ದೂರದಿಂದಲೇ ಯಾರೋ ಊದಿದ್ದು- "ಉಫ್ಫ್.."
ಮುಚ್ಚಿದ್ದಷ್ಟೂ ಹಾರಿ ಅಷ್ಟಾಚೆ, ಒಳಗು ನಿಗಿನಿಗಿ ಕೆಂಡ!
ಹಿಂದಿರದಷ್ಟು, ಇನ್ನಿರದಷ್ಟು ಬಿಸಿಯೂ, ಬೆಳಕೂ..
ಬದುಕೀಗ ಥೇಟ್ ಬೆಂಕಿ ಹಾಯುವ ಕೊಂಡ!

ಈಗೀಗ ಒಳಗಿಣುಕಿದರೆ ಇದ್ದವೆಲ್ಲ ಇಲ್ಲವಾಗುತಾ,
ಇಲ್ಲದ್ದು ನೂರಾರು ಕಾಣಸಿಗುತಾ,
ತನ್ನವರು-ಅಲ್ಲದವರು, ಭಾಗ್ಯ-ದೌರ್ಭಾಗ್ಯ
ಒಂದೂ ಅರಿಯದ ವಿಸ್ಮೃತಿ, ಬಲು ಸವಿಸವಿ ಭ್ರಾಂತಿ!

ಓಗೊಡುವುದೂ ಓಗೊಡದಿರುವುದೂ
ಒಂದೇ ಸಮ ಕಷ್ಟಸಾಧ್ಯ!
ಅಚ್ಚರಿಯೆಂದರೆ,
ತಾನಾಗಿರುವುದೂ ಇನ್ನೇನೋ ಆಗಿಬಿಡುವುದೂ
ಒಂದರೊಳೊಂದು ಮಿಳಿತವೆಂಬಂತೆ
ಅಪ್ರಯತ್ನ, ಬಲುಸುಲಭಸಾಧ್ಯ!

ಹೌದು, ಅಲ್ಲಿ ಅಂಥದ್ದೇ ಒಂದಾಗಿಬಿಟ್ಟಿತ್ತು,
ಅರಳಬೇಕಿದ್ದಲ್ಲೆಲ್ಲ ಒಂದು ನರಳು,
ನರಳುವಲ್ಲೆಲ್ಲ ನೋವಲ್ಲ, ಹಿತದಾಹದೊಂದು ನೆರಳು,
ಬದುಕಲೊಂದು ಅಯೋಮಯ ಹೊರಳು!

Saturday, May 16, 2015

ನಾನಿನ್ನೂ.....

ನಾನು ಪ್ರೀತಿಸುತ್ತಿದ್ದೇನೆಂದೇ
ಎದೆಯಾಳಕೆ ಕೈ ಹಾಕುತ್ತಾ
ಶೂರ್ಪನಖಿಯಾಗುತ್ತಾ
ಬಗೆದು ಹೊರಗೆಳೆತಂದೆ
ಸಮಾಧಾನಿಸಿ ಕುಲುಕುಲು ನಗಿಸುವಾಸೆಯಲ್ಲಿ
ಒಳಗಲ್ಲಿ ಕುಸುಕುಸು ಅನ್ನುತ್ತಿದ್ದ
ಎಳೆಗಂದನಂತಿದ್ದ ಕೆಲ ಪ್ರಶ್ನೆಗಳನ್ನು.
ಬಲು ನಿರ್ಬಲ, ಅಂಜುತಳುಕುತಲೇ
ತಲೆ ನೆಗ್ಗಲು ಹವಣಿಸುತ್ತಿದ್ದವು,
ಅಡಿಗೆ ಹಾಕಿ ಹೊಸಕಿಬಿಟ್ಟ
ದಷ್ಟಪುಷ್ಟ ಕಾಲೊಂದು ನನ್ನೆಡೆಗೆ ತಿರುಗಿತು,
ನನ್ನಲ್ಲಿ ಅಪ್ರಯತ್ನ ಪ್ರೀತಿಯುಕ್ಕಿದೆ,
ಪಾದ ತೊಳೆದು, ಮುತ್ತಿಕ್ಕುತ್ತಿದ್ದೇನೆ,
ನಾನು ಪ್ರೀತಿಸುತ್ತಿದ್ದೇನೆ.

ನಾನು ಪ್ರೀತಿಸುತ್ತಿದ್ದೇನೆಂದೇ
ಎದೆಯೆರಡರ ನಡು
ನಿರಾಳ, ನಿರರ್ಗಳ, ನಿರಾತಂಕ
ಹರಿವ ನದಿಯೊಂದರ ಕನಸಿಗೆ
ಝರಿ, ತೊರೆ, ಉಪನದಿಗಳ ಜೋಡಿಸಿಕೊಂಡೆ.
ಒಂದೊಂದಕೂ ಹೆಸರಿಟ್ಟು
ಪ್ರತಿ ಹೆಸರಲೂ ನಾನೆಂಬ ನಾನು
ಇಣುಕುವಂತಿಟ್ಟು ಸಂಭ್ರಮಿಸಿಬಿಟ್ಟೆ.
ಸಿಹಿಗಷ್ಟು ಸಿಹಿ ಸೇರಿಸಿ
ಸಿದ್ಧಿ ಪ್ರಸಿದ್ಧಿ ಹೊಂದಿದವು,
ನಾನಪರಿಚಿತವುಳಿದುಬಿಟ್ಟೆ.
ಮುಳುಗಡೆಗೆ, ಕೊರೆತಕೆ,
ಮತ್ತೊಮ್ಮೊಮ್ಮೆ ಒಣಗುವುದಕೂ
ನೀನು ನಾನೆನುವ ಹೆಸರುಗಳ ಗೋಜಿನಲಿ
ನನ್ನ ಹೆಸರು ನಾ ಮರೆತುಬಿಟ್ಟಿದ್ದೇನೆ.
ನಾನು ಪ್ರೀತಿಸುತ್ತಿದ್ದೇನೆ.

ಬೆಸೆಯೆ ಚಾಚಿದ ಅತಿದಾಹಿ ಬೆರಳುಗಳ
ತುದಿಗಳಷ್ಟೇ ತಾಕಿದ ಅಂತರದಗಲಕೂ
ರಾತ್ರಿಯ ಕಪ್ಪುಸಮುದ್ರವಿತ್ತು.
ನಾನು ಪ್ರೀತಿಸುತ್ತಿದ್ದೇನೆಂದೇ
ನಗೆಯ ಹಾಯಿದೋಣಿ ತೇಲಿಬಿಟ್ಟೆ.
ತಳವಿರದ, ಜಾರುಗೋಡೆಯ,
ದೃಷ್ಟಿಗೆ ಸ್ಪಷ್ಟವಿದ್ದ
ಕೂಪವೊಂದರ ಕಗ್ಗತ್ತಲಿನಾಳಕೊಯ್ಯುವ
ದಿಕ್ಸೂಚಿಯನೇ ಅಲ್ಲಿಟ್ಟೆ.
ಮೌನದ ಮಂಜು ಕವಿದ ಅಸ್ಪಷ್ಟತೆ,
ನಂಬುಗೆ ದೀವಿಗೆಯಾರಿಸುವ ಬಿರುಗಾಳಿಗೆ
ತಬ್ಬಲಿಯಾದ ನನ್ನ ದಾರಿಯಲೆಲ್ಲೋ
ನಗೆ ಕಳೆದುಕೊಂಡಿದ್ದೇನೆ .
ನಾನಿನ್ನೂ ಪ್ರೀತಿಸುತ್ತಿದ್ದೇನೆ.