Thursday, December 24, 2015

ಹಲ್ಲು ಕಿಸಿದು ಅಣಕಿಸಿದ ಕಾಲ
ಲೊಚಗುಟ್ಟಿ ಹೌದುಹೌದೆಂದ ಹಲ್ಲಿ
ಬೀಸುತಲೇ ಉಸಿರುಗಟ್ಟಿಸಿದ ಗಾಳಿ
ಒಪ್ಪಿಸಿಯೇ ಒಪ್ಪಿಸುತಿವೆ
ಇದೀಗ ನಿರ್ಗಮನ ಪರ್ವ!

ಸರಿದ ಪರದೆ
ಪಿಸುಗುಟ್ಟಿದೆ ಬಿಡದೆ
ಅಡಗಿಸಿಟ್ಟದ್ದಿನ್ನೂ ಬಹಳವಿದೆ
ರಟ್ಟಾಗದು ಗುಟ್ಟು ಕೈನೋಯುವಷ್ಟು ಬಗೆಯದೆ.

ಮರೆಯದ ಮಾತು
ಸಾಗರತಟದ ಮರುಳು ಮರಳಂತೆ
ಕಾಲದ ಕಾಲ್ಕೆಳಗೆ ಕುಸಿಯುತಲೇ ಸಾಗಿದೆ
ಅಳಿದಳಿದೂ ಅಳಿಯದ ಹಾಗೆ..

ನೆನೆದ ಕಣ್ರೆಪ್ಪೆ ಒಂದಕೊಂದು ಅಂಟಿ
ಕಣ್ಣು ಬೇರೆಯೇ ಕತೆ ಹೇಳುತಿದೆ.
ಮನದ ಪಟಲ ತಟಸ್ಥ
ಬೇರೆಯೇ ಕತೆ ಕೇಳಿಸಿಕೊಳುತಿದೆ!

ಹಗಲೊಡಲ ತುಂಬ
ಖಾಲಿಡಬ್ಬಗಳ ಭರಾಟೆ
ನನ್ನೊಡಲಲಿ ಪ್ರತಿಧ್ವನಿ!
ರಾತ್ರಿಯೊಡಲ ತುಂಬ
ಬರಗಾಲದ ಸ್ವಪ್ನ-
ಭರಪೂರ ಸುನಾಮಿ
ನನ್ನೊಡಲಲಿ ಭೋರ್ಗರೆತ!

ಹೋಗು ಹೋಗೆಲೋ
ಸೊಂಪುತಂಪುಗಳ ಘಟ್ಟವೇ.
ಎದುರು ನೋಡಿರಲಿಲ್ಲವೆಂದಲ್ಲ;
ಜಂಗಮವೆಂದೂ ಎಲ್ಲೂ ನಿಂತಿಲ್ಲ.
ಇಷ್ಟಾದರೂ ಕಲಿಸಿಯೇಬಿಟ್ಟಿದ್ದೀಯ,
ಕಾಲಾಂತರದಲಿ ಯಾವುದೂ ಸ್ಥಿರವಲ್ಲ!Monday, December 21, 2015

"ನೀ ಪೊಳ್ಳಲ್ಲ" ಅಂದೆ;
ನನ್ನೊಳಗಿನ ಟೊಳ್ಳು ಸರಸರನೆ ತುಂಬಿಕೊಳತೊಡಗಿತು.
"ನೀ ಸುಳ್ಳಲ್ಲ" ಅಂದೆ;
ನನ್ನೊಳಗಿನ ಸತ್ಯ ರೆಕ್ಕೆಪುಕ್ಕ ಹಚ್ಚಿಕೊಂಡು ನಿನ್ನೆಡೆ ಹಾರಿತು.
"ನೀ ಸೊಗಸುಗಾತಿಯಲ್ಲ" ಅಂದೆ;
ಒಳಗರಳಿದ ಮೊಗ್ಗು ಕಂಪಿನ ಹೆಸರಲೇ ಪ್ರಕಟವಾಯಿತು
"ನೀ ಕುರುಡಿಯಲ್ಲ" ಅಂದೆ;
ಒಳಕಿವಿ ಧೂಳುಕೊಡವಿ ಹೊರಗಿವಿ ತನಕ ಮೈಚಾಚಿತು.
"ನೀ ಒತ್ತಡವಲ್ಲ" ಅಂದೆ;
ಇಲ್ಲೊಳಗೆ ಶಂಕೆ-ಬಿಗುಮಾನ ಮುಖಮುಚ್ಚಿ ಸುಮ್ಮನಾದವು.
ನೀ ಕಮ್ಮಿಯೇನಲ್ಲ ಅಂದೆ;
ಒಳಗಿಲ್ಲಿ ಅಳುಕು ಮಗ್ಗುಲು ಬದಲಾಯಿಸಿ ನಿದ್ದೆಹೋಯಿತು.
"ನೀ ಜಾಣೆಯಲ್ಲ" ಅಂದೆ;
ಒಳಗೊಂದು ಮಗು ಕೇಕೆಹಾಕಿ ಮಣ್ಣಿಗಿಳಿದಿಳಿದು ಕೆಸರಾಯಿತು.
"ನೀ ಪೆದ್ದಿಯಲ್ಲ" ಅಂದೆ;
ನನ್ನೊಳಗಿಲ್ಲಿ ನಾ ಮೈಮುರಿದೆದ್ದು ಮೈಯ್ಯೆಲ್ಲ ಕಣ್ಣಾಗಿ ಕೂತೆ.
"ನೀನಂದರೆ ಏನೋ ಒಂದಲ್ಲ ಬಿಡು" ಅಂದೆ;
ನನ್ನ ಕಿರುನಂಬಿಕೆ ಭಕ್ತಿಯಾಯ್ತು; ನೀ ಪಟ್ಟದ ದೇವರಾದೆ.
ನೀನಂದೆ, "ನಿನ್ನೆಮೊನ್ನೆಯಿಂದೀಚೆ ನನಗರ್ಥವಾಗತೊಡಗಿದೆ."
ಅದೇ ನಿನ್ನೆಮೊನ್ನೆಯಿಂದೀಚೆಗೆ ನನ್ನೊಳಗೂ ನಿಚ್ಚಳವಾಗತೊಡಗಿದೆ.

Thursday, December 10, 2015

ಆಗೆಲ್ಲ ಹೀಗೆ ಬೆಂದದ್ದು, ನೊಂದದ್ದು ನೆನಪಿಲ್ಲ.
ಕಾಯುವುದು, ಕಾಯಿಸುವುದು ಒಂದೂ ಇಲ್ಲ.
ಕಣ್ಣೆವೆ ಬಾಗಿದಾಗೆಲ್ಲ ಅದರಡಿ ನಗುತಿದ್ದವ
ಕಣ್ಣೆವೆಯೆತ್ತಿದಾಗ ಮಾತಾಗುತಿದ್ದ.
ಮತ್ತೆರಡರ ನಡು ಸಾಲುಸಂದೇಶ!

ಸ್ವರ್ಗಸಮಾನ ಅವೇ ಆ ದಿನಗಳಲಿ
ಬೊಗಸೆಗೊಂದು ಬೀಜವುದುರಿತ್ತು;
ತಲೆಬಾಗಿಲ ಬದಿ ಬೋಳು ಚಪ್ಪರದಡಿ ಬಿತ್ತಿದ್ದೆ;
ಕಾಲೆಡವಿತ್ತು; ಅಡಿಯಲಿ ಒಣಕೊರಡಿತ್ತು;
ಅಪನಂಬಿಕೆಯಲೇ ಒಯ್ದೆಲ್ಲೋ ಊರಿದ್ದೆ.

ಬೀಜ ಮೊಳಕೆಯೊಡೆಯಿತು,
ಕೊರಡು ಇನ್ನಷ್ಟು ಒಣಗಿತು.
ನನಗೆ ಪರಿವೆಯಿಲ್ಲ;
ಉಳಿದವರಿಗರಿವಿಲ್ಲ.
ಮತ್ತತ್ತ ಇಣುಕಲಿಲ್ಲ.
ಹೊಸತು ಹಳತಾಗುತಾ
ಕೆಲವುಳಿದು, ಕೆಲವು ಬೆಳೆದು, ಕೆಲವಳಿದವು.

ಇದೀಗ ಅವ ಹೇಳುತಾನೆ,
"ಬರುಬರುತಾ ಕಾಳರಾತ್ರಿಯಾದೆ ನೀನು.
ಹತ್ತಾರು ತಿರುವುಗಳೆದುರು ನಾನು
ಮತ್ತು ನನ್ನೆದುರು ನೀನು.
ಚೆಲುವಿತ್ತು; ನಿನ್ನ ಕಣ್ಕಪ್ಪು
ನನ್ನ ಕಣ್ಗತ್ತಲಾದದ್ದು ಯಾವಾಗ?"

ನಾನೀಗ ಬೀಜವೂರಿದೆಡೆ, ಕೊರಡನೂರಿದೆಡೆ ತಿರುಗಿದ್ದೇನೆ.
"ಅಯ್ಯೋ! ಚಿಗುರು ಕಮರಿದ್ದು ಯಾವಾಗ?
ಅರರೆ! ಕೊರಡು ಕೊನರಿದ್ದು ಯಾವಾಗ?"

ಅಪ್ಪ ಹೇಳುತ್ತಿದ್ದರು,
"ಪ್ರಶ್ನೆಗೆ ಪ್ರಶ್ನೆಯೊಂದು ಉತ್ತರವಾಗಬಾರದಮ್ಮಾ.."

ಎಲ್ಲೆಲ್ಲಿಂದಲೋ ಹತ್ತಾರು ಸುಳ್ಳು ಹಾರಿಬರುತಾವೆ.
ಹುಡುಹುಡುಕಿ ಕಣ್ಣೆವೆ ಮೇಲೆಕೆಳಗೆಲ್ಲ
ಪರಪರನೆ ಗೂಡುಕಟ್ಟುತಾವೆ.
ಇನ್ನೇನು ಮೊಟ್ಟೆ-ಮರಿ ಸಂಭ್ರಮವೂ ಶುರುವಾದೀತು!
ಕಣ್ಣೆವೆ ಮತ್ತೂ ಭಾರವಾದಾವು.
ಅದಕೋ  ಇದಕೋ ಎದಕೋ
ಅಂತೂ ನಾನೀಗ ಬರಿದೇ ಕಾಯುತ್ತೇನೆ.


Tuesday, December 8, 2015

"ಮನದಾಗಸದ ನಲ್ಲಿರುಳಲಿ ಮಿಣುಮಿಣುಕೆನುವವಳು
ಎದೆನೆಲದ ಮೇಲೆಲ್ಲ ಪಾರಿಜಾತವಾಗುದುರಿದವಳು
ಉಸಿರುಸಿರಿಗೂ ತನನೇ ತೇದು ಗಂಧವಾದವಳು
ಹೇಳೋ ಯಾರವಳು, ಏನು ಹೆಸರು?
ನನ್ನ ನೆನಪಿನುದ್ದಕೂ
ತನ್ನ ಹಸಿರ ಹಾಸಿರುವವಳು?"

ತುಟಿ ಮೇಲಿನೊಂದು ಪ್ರಶ್ನೆಯ
ತುಟಿ ಮೇಲಿನದೇ ಕಿರುಹಾಸ ಹೀರುತದೆ.
ಸಶಬ್ದ ನಗೆಯೊಂದು
ನವಜಾತ ಶಬ್ದಗಳ ನುಂಗಿ ತೇಗುತದೆ.
ಒಳಹೊರಗೆ ಅಲೆಯತೊಡಗುತ್ತೇನೆ,
ಎದುರಾದೆಲ್ಲ ಆಪ್ತ ಕ್ಷಣಗಳ ಕೇಳುತ್ತೇನೆ,
"ನನ್ನ ಇನಿಯನ ಅವಳ ಬಲ್ಲೆಯೇನೇ?"

ಧುತ್ತನೇ ಬಂದೆದುರು ನಿಲ್ಲುತಾನೆ
ಮೆತ್ತನೇ ಅತಿ ಮುದ್ದುಪ್ರಶ್ನೆಯಾಗುತಾನೆ
"ಬೆಲೆಯೇನೀವೆ ಹೇಳೇ ಹೆಸರುಸುರಿದರೆ?"
ನಾನನುತೇನೆ,
"ನನದೆಲ್ಲವೂ ನಿನದೇ ದೊರೆ,
ತೋರಿ ಪಡೆಯುವೆಯಂತೆ ನೀನೇ ಹಾಗೂ ಮಿಕ್ಕಿದ್ದಿದ್ದರೆ "

"ಉಂಟೇನೇ ಸೊಂಟದ ಡಾಬು?
ಉಂಟೇನೇ ಸುವರ್ಣ ಕಂಚುಕ?
ಉಂಟೇನೇ ರತ್ನದ ತೋಳ್ಬಂಧಿ?
ಉಂಟೇನೇ ವಜ್ರದ ನೆತ್ತಿಬೊಟ್ಟು?"
ಇಲ್ಲದುದರಷ್ಟೇ ಬೆಲೆಗೆ ಪಟ್ಟುಹಿಡಿವ;
ಪಾಪ, ಅವನೂ ಬಡವ.
ಇಲ್ಲಗಳದೇ ಸಾಮ್ರಾಜ್ಯದರಸಿ;
ನಾನೂ ಬಡವಿ.

ಸಮಸ್ತಕೂ ಮೀರಿ ತೂಗುವ ಹೆಸರು
ಮತ್ತೆ ಗುಟ್ಟಿನ ಹೆಗಲೇರಿ,
ಅರ್ಧದಾರಿಗೇ ವಾಪಾಸು
ಮತ್ತದಕೋ ಅಜ್ಞಾತವಾಸ!

ಪರದೆ-ಬಾಗಿಲು-ಗೋಡೆಗಳೆಡೆ ಕಣ್ಣಾಮುಚ್ಚಾಲೆ
ಎಲ್ಲ ಬಚ್ಚಿಟ್ಟುಕೊಳುವವರೇ.
ಹುಡುಕುವ, ಸಿಗುವ ಮಾತಿಲ್ಲ;
ಕೊನೆಮೊದಲಿರದ ಬರೀ ಆಟ!

ಇಲ್ಲಿ ಬದಲಾಗದುಳಿವುದು ಅಂಥದ್ದೇನಲ್ಲ ವಿಶೇಷ!