Sunday, June 30, 2013

ಹೆಸರಾಂತ ಸಾಹಿತಿ ಶ್ರೀ ಸಿ ಪಿ ಕೆಯವರ ಗೀತಗಾಯನದ ಕಾರ್ಯಕ್ರಮಕ್ಕಾಗಿ ಹಾಡು ತಯಾರು ಮಾಡುತ್ತಿದ್ದಾಗ ಸುಮಾರು ಅವರ ೨೦ ಕವನಗಳು ಸಿಕ್ಕಿದವು. ಎಲ್ಲಾ ಕವನಗಳಲ್ಲೂ ಎದ್ದು ಕಾಣುತ್ತಿದ್ದ ಅವರ ಆಶಾವಾದಿತನ, ಸದಾಶಯದ ಭಾವ, ಅಲ್ಲಲ್ಲಿ ಹತಾಶೆಯ ಕಸಿವಿಸಿ ಕಂಡರೂ ಇನ್ನೂ ಏನೂ ಮುಗಿದಿಲ್ಲ, ಕಾಲ ನಮ್ಮ ಮುಂದಿದೆ, ಕೈಮೀರಿ ಹೋಗಿಲ್ಲ ಅನ್ನುವ ಭರವಸೆಯ ಭಾವ ಎದ್ದು ಕಂಡು ಬಂತು. ನಿನ್ನೆಯ ದಿನ ಸ್ಪರ್ಧೆ ನಡೆಯುತ್ತಿದ್ದ ಕಲಾಮಂದಿರದ ಮನೆಯಂಗಳ ಸಭಾಂಗಣಕ್ಕೆ ಪತ್ನೀಸಮೇತರಾಗಿ ಬಂದು ಇಬ್ಬರೂ ಸುಮಾರು ಎರಡೂವರೆ ಗಂಟೆಕಾಲ (ಸ್ಪರ್ಧೆ ಅಂದಮೇಲೆ ನಿಮಗೆ ಗೊತ್ತಿರಬಹುದಾದಂತೆ) ಎಲ್ಲಾ ತರಹದ ಹಾಡುವಿಕೆಯನ್ನೂ ಮುಂದೆಯೇ ಕೂತು ಆಲಿಸುವ ಸಹಿಷ್ಣುತೆ ತೋರಿದ್ದು ನೋಡಿ ಅವರ ಸರಳ ವ್ಯಕ್ತಿತ್ವದ ಬಗ್ಗೆ ಕಣ್ತುಂಬಿ ಬಂತು. ಮೊದಲಿಗೆ ಪ್ರಾಸ್ತಾವಿಕವಾಗಿ ಮಾತಾಡಿದ ಅವರು ನನ್ನ ರಚನೆಗಳು ಗಾಯನವಾಗಬಲ್ಲುವು ಅನ್ನುವ ಕಲ್ಪನೆಯಾಗಲಿ, ಆಶಯವಾಗಲಿ ಅವನ್ನು ಬರೆದಾಗ ನನ್ನಲ್ಲಿರಲಿಲ್ಲ, ಈಗ ಅದಾಗಿರುವಾಗ ಹಾಡುಗರ ಕಂಠದಲ್ಲಿ ನನ್ನ ಬರಹಗಳು ಭಾವಕ್ಕೆ ತಕ್ಕ ರಾಗದ ಹಾಡುಗಳಾಗಿ ಮೂಡುವಾಗ ಇವು ನನ್ನವೇನಾ ಅನ್ನುವ ಅಚ್ಚರಿ ತುಂಬಾ ಖುಶಿ ಕೊಡುವದ್ದಾಗಿದ್ದು, ಅದರಲ್ಲಿ ಭಾಗಿಯಾಗುವ ಆಸೆಗೆ ನಾನಿಲ್ಲಿ ಕೂತಿದ್ದು ಹೋಗುತ್ತೇನೆ ಅಂದವರು ಹಾಗೆಯೇ ಮಾಡಿ ತೋರಿಸಿದರು.
ಹಾಗೇ ಮನಸು ಅಪ್ರಯತ್ನವಾಗಿ ಅವರ ಕವನಗಳಲ್ಲಿನ ಭಾವವನ್ನು ಇಂದಿನ (ನನ್ನದೂ ಸೇರಿದಂತೆ) ನನ್ನ ಗಮನಕ್ಕೆ ಬರುತ್ತಿರುವ ಕವನಗಳಲ್ಲಿರುವದ್ದರ ಜೊತೆ ತುಲನೆ ಮಾಡಹತ್ತಿತು. ಇತ್ತೀಚೆಗೆ ಜನ ಉಘೇಉಘೇ ಎಂದು ಮೆಚ್ಚುಗೆ ತೋರುವ ಬರವಣಿಗೆಗಳು ರೋಷ, ಸಿಟ್ಟು, ಕೆಚ್ಚು, ನಿರಾಸೆ, ವ್ಯಂಗ್ಯಗಳೇ ಮೊದಲಾದ ಭಾವಗಳು ಮತ್ತು ಆಮೂಲಕ ಜಗತ್ತನ್ನು ಬರೀ ನೇತ್ಯಾತ್ಮಕವಾಗಿಯೇ ನೋಡುವ ದೃಷ್ಟಿಕೋನ ಹೊಂದಿರುವವಾಗಿವೆ ಅನ್ನಿಸಿತು. ನಾನು ನೇರವ್ಯಕ್ತಿ, ನಾನೇನಿದ್ದರೂ ವಾಸ್ತವವನ್ನು ಬರೆಯುವುದು, ನನದೇನಿದ್ದರೂ ನಿಷ್ಠುರ ಧ್ವನಿ, ನನದು ಸತ್ಯದ ಬರವಣಿಗೆ-ಹೀಗೇ ಹೇಳಿಕೊಳ್ಳುತ್ತಾ ಬರೀ ಸ್ಮಶಾನ, ಬೂದಿ, ನೇಣು, ಮೋಸ, ಮಚ್ಚು, ಕಿಚ್ಚು, ಬೆಂಕಿ, ಕತ್ತಲು, ಹಸಿವು, ಗಾಯ, ಸಾವು, ಈ ಪದಗಳ ಮೂಲಕ ಅಥವಾ ಲೈಂಗಿಕತೆಗೆ ಸಂಬಂಧಿಸಿದಂತೆ ಗೌಪ್ಯವಾಗಿದ್ದರೆನೇ ಸರಿ ಅನಿಸುವ ಕೆಲವಿಷಯಗಳ, ಕೆಲಶಬ್ಧಗಳ ಅನಾವಶ್ಯಕ ಮತ್ತು ಅನಪೇಕ್ಷಿತ ಅನಾವರಣಗಳ ಮೂಲಕ ಓದುಗನ ಮನಸನ್ನೊಂದು ಅನಾರೋಗ್ಯಕರ ಮಜಲಿಗೊಯ್ಯುವ ಕೆಲಸವನ್ನೂ, ನಿರಾಸೆ, ಹತಾಶೆಗಳನ್ನೂ, ಎಲ್ಲಾ ಮುಗಿದು ಹೋದ ಕಾಲದಲ್ಲಿ ಹುಟ್ಟಿ ಬಂದಿರುವ ನಮ್ಮದು ನತದೃಷ್ಟ ಬಾಳು ಎಂಬ ಪರಿಕಲ್ಪನೆಯಲ್ಲಿ ಒಂದು ಸ್ವಾನುಕಂಪದ ಅಲೆ ಸೃಷ್ಟಿ ಮಾಡುವುದನ್ನೂ ಮಾಡುತ್ತಿಲ್ಲವೇ ನಾವು ಇಂದಿನ ಬರಹಗಾರರು.. ಅನ್ನಿಸಿತು. ಸ್ವಾನುಕಂಪ ಅನ್ನುವದ್ದು ಬೆಳವಣಿಗೆಯ ಪ್ರಕ್ರಿಯೆಯಲ್ಲಿ ತುಂಬಾ ಅಪಾಯಕಾರಿ ಎನ್ನುವದ್ದು ನಮಗೆಲ್ಲರಿಗೂ ಗೊತ್ತಿರುವದ್ದೆ. ಸುತ್ತ ಮುತ್ತ ನಡೆಯುತ್ತಿರುವ ತೀರಾ ಅಸಹ್ಯ ಹುಟ್ಟಿಸುವ ವಿದ್ಯಮಾನಗಳು ನಮ್ಮೆಲ್ಲರ ಗಮನಕ್ಕೂ ಬಂದೇ ಇರುತ್ತವೆ. ಅದನ್ನು ಇದ್ದುದಕ್ಕಿಂತ ವೈಭವೀಕರಿಸಿ ಸಮಾಜದ ಮುಂದಿಡುವ ಕೆಲಸವನ್ನು ಮಾಧ್ಯಮಗಳಾಗಲೇ ಮಾಡುತ್ತಿವೆ. ಇನ್ನು ಕವಿಗಳೂ ಅದನ್ನೇ ವೈಭವೀಕರಿಸುತ್ತಾ, ಕೆದಕುತ್ತಾ, ತಮ್ಮ ಅಲಂಕಾರಗಳು, ಭಾವನಾತ್ಮಕ ಶೈಲಿ, ಪದಗಳ, ಉಪಮೆಗಳ ಮೂಸೆಯಲ್ಲಿಳಿಸಿ ಆಗಲೇ ಇರುವ ಕುರೂಪವನ್ನು ಇನ್ನಷ್ಟು ಕುರೂಪವಾಗಿಸಿ ಓದುಗನ ಮುಂದಿಡಬೇಕೆ? ಅಥವಾ ಅವೆಲ್ಲದದರ ಮಧ್ಯೆ ಇನ್ನೂ ಜೀವಂತವಾಗಿರುವ ಮನುಷ್ಯತ್ವ, ಸಹಜತೆ, ಸಹಿಷ್ಣುತೆ, ಪ್ರಕೃತಿ ಇನ್ನೂ ಮೊಗೆಮೊಗೆದು ಕೊಡುತ್ತಿರುವ ಅದ್ಭುತ ಉಡುಗೊರೆಗಳನ್ನು ಹುಡುಕಿ ಜಗತ್ತಿನ ಮುಂದಿರಿಸಿ, ಇಲ್ಲ, ಇನ್ನೂ ಕಾಲ ಮಿಂಚಿ ಹೋಗಿಲ್ಲ, ಕಳೆಯನ್ನು ಕಿತ್ತಿ, ಈ ಕೆಲವೇ ಸರಿ, ಉತ್ತಮ ಬೀಜಗಳನ್ನು ಮತ್ತೆಮತ್ತೆ ಬಿತ್ತಿ, ಹುಲುಸಾದ ಉಪಯುಕ್ತ ಬೆಳೆ ತೆಗೆಯಬಹುದು ಅನ್ನುವ ಅಶಾವಾದಿತನವನ್ನು ನಮ್ಮ ಬರಹಗಳಲ್ಲಿ ಮೂಡಿಸುವ ಅವಶ್ಯಕತೆ ಹೆಚ್ಚಿದೆಯಾ? ಇದು ನನ್ನ ಮನಸನ್ನು ಕಾಡುತ್ತಿರುವ ಪ್ರಶ್ನೆ.ಈ ಪ್ರಶ್ನೆ ಮೂಡಲು ನಿನ್ನೆ ನಾನು ಹಾಡಲು ಆರಿಸಿಕೊಂಡ ಸಿ ಪಿ ಕೆಯವರ ಕವನದ ಆಶಯ ನನ್ನಲ್ಲಿ ಮೂಡಿಸಿದ ಧನಾತ್ಮಕ ಭಾವ ಮತ್ತದರ ಸಶಕ್ತ ಪ್ರಭಾವವೇ ಕಾರಣ. ಆ ಹಾಡು ಇಲ್ಲಿದೆ ನಿಮ್ಮೆಲ್ಲರ ಓದಿಗಾಗಿ.ಹಸಿರಿನ ಸಿರಿಯಿದೆ ವಸುಧೆಯ ಮೇಲೆ ಇನ್ನೂ ಸತ್ತಿಲ್ಲ

ನೀರಿನ ಸೆಲೆಯಿದೆ ಈ ನೆಲದೊಡಲಲಿ ಇನ್ನೂ ಬತ್ತಿಲ್ಲಸೂರ್ಯನ ಉದಯಕೆ ಚಂದ್ರನ ಉದಯಕೆ ಇನ್ನೂ ತಡೆಯಿಲ್ಲ

ನೀಲಿಯ ಬಾನಿಗೆ ಬೀಸುವ ಗಾಳಿಗೆ ಇನ್ನೂ ತಡೆಯಿಲ್ಲ

ವ್ಯೋಮದಿ ಕಟ್ಟುವ ಕಾಮನಬಿಲ್ಲು ಇನ್ನೂ ಅಳಿದಿಲ್ಲ

ಕಡಲಿನ ತಳದಲಿ ಮುತ್ತುಹವಳಗಳು ಇನ್ನೂ ಕಳೆದಿಲ್ಲಗಗನದಿ ಹೊಳೆಯುವ ಗ್ರಹತಾರೆಗಳು ಇನ್ನೂ ಆರಿಲ್ಲ

ನೆಲದಲಿ ನವಿಲು ಹೂಮೊಲ ಚಿಗರೆ ಇನ್ನೂ ತೀರಿಲ್ಲ

ನಭದಲಿ ಹಾಡುವ ಹಕ್ಕಿಯ ಹಿಂಡಿಗೆ ಇನ್ನೂ ಬರವಿಲ್ಲ

ಜುಳುಜುಳು ಹರಿಯುವ ಹೊಳೆಗಳ ಹಾಡಿಗೆ ಇನ್ನೂ ತೆರವಿಲ್ಲಮನುಜನ ಕಣ್ಣಲಿ ಮನದಲಿ ಏತಕೆ ಈ ಎಲ್ಲಕೆ ಅರಕೆ

ಕೊಳೆಯನು ತೊಳೆಯಲಿ ಬೆಳಕನು ತುಂಬಲಿ ಪರಮಾತ್ಮನ ಹರಕೆ

ಎಚ್ಚರಗೊಳ್ಳಲಿ ಮನುಕುಲದೆದೆಯಲಿ ಉದ್ಧಾರದ ಬಯಕೆಸೂರ್ಯೋದಯ, ಚಂದ್ರೋದಯ, ಬಾನಿನ ನೀಲಿ, ಬೀಸುವ ಗಾಳಿ, ಕಾಮನಬಿಲ್ಲು, ಸಾಗರದ ಮುತ್ತುಹವಳಗಳು, ಗಗನದ ಗ್ರಹತಾರೆಗಳು, ನೆಲದ ನವಿಲು ಹೂ ಮೊಲ ಚಿಗರೆಗಳು, ನಭದ ಹಕ್ಕಿಯ ಹಿಂಡು, ಜುಳುಜುಳು ಹರಿಯುವ ಹೊಳೆಯ ಹಾಡು ಇವೆಲ್ಲವೂ ಅಂದಿನಿಂದ ಇಂದಿನವರೆಗೆ ಮನುಜನ ಪಾಲಿಗೆಂದು ಪ್ರಕೃತಿಯಿಂದ ಕೊಡಲ್ಪಟ್ಟವುಗಳು ಅದೇ ರೂಪದಲ್ಲಿ ಬದಲಾಗದೆ ಉಳಿದಿವೆ. ಅವುಗಳನ್ನು ನೋಡುತ್ತಿರುವ ನಮ್ಮ ದೃಷ್ಟಿ ಮಾತ್ರ ಬದಲಾಗಿರುವುದು ಅನ್ನುತ್ತಾ ಆರಂಭವಾಗುವ ಕವನ ನಾವಂದುಕೊಂಡಂತೆ ಹಿಂದೆ ಚಂದ ಇತ್ತು ಈಗದು ಹಾಗಿಲ್ಲ ಅನ್ನುವದ್ದಾಗಿಲ್ಲ, ನೋಡಿ ಇರಬೇಕಾದವೆಲ್ಲ ಇರಬೇಕಾದಲ್ಲೇ ಇರಬೇಕಾದ ರೀತಿಯಲ್ಲೇ ಇವೆ, ಅವಿಲ್ಲ ಅಂದುಕೊಂಡು ನಾವು ಅವನ್ನೇ ಹುಡುಕುತ್ತಾ ಹೊರಟು, ಸಮಯವನ್ನೂ ಶಕ್ತಿಯನ್ನೂ ವ್ಯಯಿಸುತ್ತಿದ್ದೇವೆ ಅನ್ನುತ್ತ ಮುನ್ನಡೆಯುತ್ತದೆ. ಈ ಮೌಢ್ಯದ ಕೊಳೆಯನ್ನು ತೊಳೆದು ನಮ್ಮಲ್ಲಿ ಇರುವ ಹಲವಾರು ವಿಷಯಗಳನ್ನು ನಮ್ಮರಿವಿಗೆ ತರುವ ಬೆಳಕನ್ನು ನಮ್ಮೊಳಗೆ ಪರಮಾತ್ಮನ ಹರಕೆ ತುಂಬಲಿ, ಮತ್ತಾವಾಗ ಮನುಕುಲದೆದೆಯಲಿ ನಿಜವಾದ ಉದ್ಧಾರದ ಬಯಕೆ ಮೂಡಲಿ ಅನ್ನುವ ಆಶಯದೊಂದಿಗೆ ಮುಗಿಯುತ್ತದೆ. ಸುಂದರವಾದ ಚಿತ್ರಣ, ಮನೋಭಾವ ಮತ್ತೆ ಆಶಯ.. ಅಲ್ಲವೇ?

Saturday, June 29, 2013

ಇಂದಿನ ಸಂಜೆ
ಹಲರಾಗಗಳ
ಹಲಭಾವಗಳ
ಹಲಸ್ವರಗಳ
ಹಲಧ್ವನಿಗಳನುಟ್ಟ
ಮಂದಮಾರುತ ಹೊತ್ತು
ಕಲಾಮಂದಿರದ ಮನೆಯಂಗಳದಲ್ಲಿ
ಹಲಬಣ್ಣಗಳ ಭ್ರಮೆಯೊಳಗೆ ತಾನಿದ್ದುದಲ್ಲದೆ
ನಮ್ಮನ್ನೂ ಮುಳುಗೇಳಿಸಿ, ಮೈಮನವೆಲ್ಲ ಬಣ್ಣಬಣ್ಣ...

(  ಸಾಹಿತಿ ಶ್ರೀ ಸಿ ಪಿ ಕೆ ಯವರ ಹಾಡುಗಳ ಗೀತಗಾಯನ ಸ್ಪರ್ಧೆಯಲ್ಲಿ ಸುಮಾರು ಐದು ವರ್ಷ ವಯಸಿನವರಿಂದ ಐವತ್ತರವರೆಗಿನವರು ಭಾಗವಹಿಸಿದ ಅಪೂರ್ವ ಕಾರ್ಯಕ್ರಮದಲ್ಲಿ ನಾನೂ ಮಗಳೂ ಹಾಡಿ ಭಾಗವಹಿಸಿದ ಸಂತೋಷದಲ್ಲಿ ಈ ಸಂಜೆ ಹಾಗೇ ಮೆತ್ತನೆ ಸರಿದು ಹೋದ ಖುಶಿಯಲ್ಲಿ...)Friday, June 28, 2013

ಒಳಗೂ ಹೊರಗೂ ಅತೀವ ಶಾಂತಿ
ತುಂಬಿಕೊಟ್ಟ
ಬಿಳಿಬಾನು ನೆಲದತ್ತ ಹಳದಿಯೆರಚಿ
ಚೆಲ್ಲಾಡಿದ
ನನ್ನ ಬರೀ ನೆನಪಲದ್ದಿ ತಣಿಸಿದ
ತಂಪುತಂಪು ಸಂಜೆ

ನಿಶೆಯ ಸಾಮೀಪ್ಯಕೆ ಹಾತೊರೆದು
ಬೆಳಕಿಗೂ ಅವಳಿಗೂ ದೂರವೆಂದರಿಯದೆ
ಗಂಟೆಗಳೆಷ್ಟೋ ಬಿರುಬೆಳಕಿನಡಿ
ಅಲೆದಾಡಿ ಸೋತು ಬಳಲಿದ
ಹಗಲ ಕೈಹಿಡಿದು ಸರಿದಾರಿಗೊಯ್ದು
ಅವಳ ಸುಪರ್ದಿಗವನನೊಪ್ಪಿಸಿದ
ಸಾರ್ಥಕ ಸಂಜೆ...


ಕತ್ತಲೆ, ಅದರ ಮೇಲೆ ಮಳೆ


ಸಿಡಿಲ ಹೊಳಪಿಗೆ
ಝುಮ್ಮೆಂದ ಕಣ್ಣು,
ಕ್ಷಣಕಾಲದ ವಿಭ್ರಮೆ..

ನಿಂತಲ್ಲೇ ನಿಂತ ಪಾಡು
ಮೈ ಜೋಮು ಹಿಡಿದು
ಕ್ಷಣಕಾಲದ ಸ್ಪರ್ಶಹೀನತೆ..

ಭ್ರಮಾಪ್ರವಾಹದಾಸ್ತಿಯೊಂದು
ಹರಿದು, ತಾಕಿ,
ಸರಿದು ಹೋದದ್ದು,

ಮೆತ್ತಗಿದ್ದು, ಹಿತವಿತ್ತು
ಆಪ್ತವಿತ್ತು, ಆರ್ದ್ರವಿತ್ತು...
ಹಾವೋ ಹೂವೋ
ಗೊತ್ತಾಗಲೇ ಇಲ್ಲ...

ಯಾರೋ ಕಿವಿಯಲ್ಲಿ
ಪಿಸುನುಡಿದಂತಾಯಿತು.
ಗುಡುಗ ಸದ್ದಲೂ
ಸ್ಪಷ್ಟ ಒಳಗಿಳಿದ ಮಾತು-

"ಬಿಡು..ಹೋಗಿಯಾಯಿತಲ್ಲ..
ತಾಕಿದ್ದೆಲ್ಲ ಏನು-
ಎತ್ತ ಎಂಬುದು
ಗೊತ್ತಾಗಲೇಬೇಕೆಂಬುದೇನಿಲ್ಲ..."

Tuesday, June 25, 2013

ಇದೋ ಅಭಿನಂದನೆ, ಅಭಿವಂದನೆ

ಸೋತ ಕಾಲು
ಮುಳ್ಳು ಚುಚ್ಚಿದ ಪಾದ
ಚೂಪುಗಲ್ಲು ಹಾಸಿದ ಹಾದಿ
ನಡೆದೀಯಾದರೂ ಹೇಗೆಂದತ್ತಿತ್ತೇ ಕಾಲ?!

ಬಾಗಿದ ಬೆನ್ನು,
ಮಣಭಾರ ಹೆಗಲಲಿ
ತಲೆಯೆತ್ತದ ಋಣಭಾರದಡಿ
ನಿಂತೀಯಾದರೂ ಹೇಗಂದತ್ತಿತ್ತೇ ಕಾಲ?!

ಅತ್ತರೂ ಅತ್ತಿರಬಹುದದು,
ಕಾಲದೆಲ್ಲಾ ನಡೆಗಳೂ ಅರಿವಿಗತೀತ...

ಹಸಿವು, ನಿದ್ದೆ, ಕನಸುಗಳೂ ಮುನಿಸಿಕೊಂಡ
ಕ್ಷಣ ಒಳೊಳಗಿಳಿದು ಹೆಕ್ಕಿತೆಗೆದವೋ ಎಂಬಂತೆ
ಮಣ್ಣೊಳಗಿನ ಕಾವಿಗೆ ಮೊದಲಹನಿ ನೆಪವಾದಂತೆ
ನೋವಿನೆಳೆಯ ಹೆಳೆ ಹಿಡಿದೆದ್ದು ಹೊರಹೊಮ್ಮಿದ
ನಿನ್ನೊಳಗಿನ ಹನಿಹನಿ ಸತ್ವ ಅಕ್ಕರಗಳಾದವು...

ನೋವು, ನಲಿವು, ದೂರು, ಕೋಪ
ಹತಾಶೆ, ನಿರಾಸೆ, ವಿರಹ, ವೇದಾಂತ
ಮೆಚ್ಚುಗೆ, ಮುನಿಸು, ನೆನಪು, ಮರೆವು
ನಿವೇದನೆ, ಅರ್ಪಣೆ, ಆರಾಧನೆ, ನಿರೂಪಣೆ
ಆವೇಗ, ಆವೇಶ, ಪ್ರೇಮ, ಕಾಮ
ಬೆಂಕಿ-ಹೂವು, ಹಣ್ಣು-ಹುಣ್ಣು
ಒಂದೂ ಬಿಡದೆಲ್ಲವೂ ಬರಹವಾದವು..

ಹುಡುಕಿ ನಾ ಸೋತ ಮಾತೊಂದೇ-
ದ್ವೇಷ... ಬಲ್ಲೆ ನೀ ನಾ ಮೆಚ್ಚಿದ ಮನಸು
ನಿನ್ನ ದ್ವೇಷ..ನಿನ್ನೊಳಗದು ಸಾಕಾರವಾಗದ ಆಕಾರ.

ಇದೋ.. ನನದೊಂದು ಅಭಿನಂದನೆ, ಅಭಿವಂದನೆ
ಅಲ್ಲ ನಿನಗಲ್ಲ...
ನಿನ್ನೊಳಗಿನ ಪ್ರೇಮಕೆ
ಅದ ಬೆಳಗಿದ ಬೆಳಕಿಗೆ
ಅದು ಸಾಕ್ಷಾತ್ಕರಿಸಿದ ಮೌನಕೆ
ಮೌನಗರ್ಭದಿ ಮೊಳೆತ ಕನಸಿಗೆ
ಕನಸು ಕತ್ತಲಲಷ್ಟೇ ಉಳಿದ ನೋವಿಗೆ
ನೋವನೇ ನಲಿವ ಹೆರುವ ಬರಹ ಮಾಡಿದ ಪ್ರೇಮನಿಷ್ಠೆಗೆ...
ಕಿತ್ತ ನೋವಿಗೂ, ತೊರೆದ ನೋವಿಗೂ


ಇಂದು ಪರಸ್ಪರ ತಕ್ಕಡಿಯಲಿಟ್ಟು ಭಾರ ನಿರ್ಧಾರ.

ರಕ್ತ ಸುರಿಸಿ ನರನಾಡಿ ಕಟಕಟ ಕತ್ತರಿಸಿ ಬಿದ್ದ ಹಲ್ಲಿನದು

ತೊಟ್ಟು ಕಣ್ಣೀರೂ ಸುರಿಸದೆ ನಿಶ್ಯಬ್ಧ ಕಳಚಿಕೊಂಡ ನೀ

ಇತ್ತುದರೆದುರು ಗಜ್ಜುಗ ಗಾತ್ರ ಕಮ್ಮಿ ಬಿತ್ತಲ್ಲ ಒಲವೇ!!

ಅಯೋಮಯ

ಕತ್ತಲ ಎದೆಯಯೊಳಗೆ
ಮುಷ್ಟಿ ಹಿಡಿದ ಬಿಗಿಯುಸಿರು
ಉಚ್ಛ್ವಾಸವಾಗಿ ಹೊಮ್ಮಿದ್ದಕೆ
ಸುರಿದಿದೆ ಕರಿಮಣಿ ಚಲ್ಲಾಪಿಲ್ಲಿ.
ಒಟ್ಟು ಹಿಡಿದಿದ್ದ ಬಂಧ ಸಡಿಲವೋ,
ತಡೆದಿದ್ದ ಉಸಿರ ತೀವ್ರತೆಗೋ,
ಕಪ್ಪಲಿ ಕಪ್ಪಾಗಿ ಕಂಡೂ ಕಾಣದ
ಸ್ವಾತಂತ್ರ್ಯ-ಸ್ವೇಚ್ಛೆಯ ನಡುವ
ಅವಕಾಶವನಾಕ್ರಮಿಸಿದ ಬಿಡುಗಡೆ..

ಹಸಿರ ಹೃದಯದೊಳಗೆ
ತೃಪ್ತ ಸಮೃದ್ಧಿಯೊರತೆ
ಮೆಲ್ಲ ಝಿಲ್ಲನೆ ಚಿಮ್ಮಿದ್ದಕೆ
ಗರಿಕೆ ಮೂಡಿದೆ ನೆಲದ ನರನಾಡಿ..
ಒಳಗುಳಿದ ಬೇರಕುಡಿಯ ಜೀವಂತಿಕೆಯೋ,
ಹೊರಗೆಳೆದ ಸೆಳೆತಕುತ್ತರವೋ,
ಎದ್ದು ಆದರೆ ನಿಂತಿಲ್ಲದೆ ಹಬ್ಬಿದ,
ಹೂ-ಕಾಯಿ-ಹಣ್ಣಿಲ್ಲದ ಸಸಿಯೆನಿಸಿದ
ಬೇರಲಡಗಿದ ಸ್ವಯಂಪೂರ್ಣಸತ್ಯ...

ಇದಮಿತ್ಥಂ ಎಂಬುದಿಲ್ಲದ ಜಗ
ಕಪ್ಪು ತೋರಲಾಗದ ಕಪ್ಪಿನಸ್ತಿತ್ವ,
ಫಲಿಸದೆ ಹಸಿರೆನಿಸೋ ಸತ್ವ..
ಕಂಡದ್ದೇ ಅಯೋಮಯ...
ಕಾಣದ್ದ ಅಂದುಕೊಂಡು
ಅರಿವ ಹೆಜ್ಜೆಯ ತೊರೆದು
ಮರುಗುವುದೂ, ನಲಿಯುವುದೂ
ಹರಿವ ನೀರಿಗೆ ಬಣ್ಣ ಮೆತ್ತಿದಂತೆ..

Monday, June 24, 2013

ಎಲ್ಲವೂ ಅಡಕವೇ ಎಲ್ಲೆಡೆ ..


ಕಣ್ಣು ಎಷ್ಟೆಂದರೂ ಕಣ್ಣೇ
ಏನೆಲ್ಲಾ ಹುಡುಕಬಹುದಲ್ಲಿ?!

ನಿರ್ಮಲ ನೀರಸೆಲೆ
ಎರಡು ತಿಳಿಗೊಳಗಳು
ಅಡಕವೆಷ್ಟೋ ಅಡಿ ತಳಮಳದಲೆ
ಅದಕಡಗುದಾಣ ಮೆದುಳು..

ಮಾತು ಎಷ್ಟಂದರೂ ಮಾತೇ
ಏನೆಲ್ಲಾ ನಿಜವಿರಬಹುದಲ್ಲಿ?!

ಮುತ್ತು ಮೂಡುವುದಕಿಲ್ಲಿ
ಚಿಪ್ಪಿಲ್ಲ, ಸ್ವಾತಿಹನಿ ಬೇಕಿಲ್ಲ...
ಸತ್ಯಸುಳ್ಳಲ್ಲದ ಗೊಂದಲ
ಆಡಿದ ಬಾಯಿಗೂ ಅಪರಿಚಿತವಿಲ್ಲಿ..

ನಡೆ ಎಷ್ಟಂದರೂ ನಡೆಯೇ
ಎಷ್ಟರಮಟ್ಟಿಗೆ ನೇರವಿರಬಹುದಲ್ಲಿ?!

ಗೂನುಬೆನ್ನು, ಕುಂಟುಕಾಲಲೂ
ಸದೃಢಕಾಯದ ಪ್ರತಿಚರ್ಯೆಯಲೂ
ಗುಟ್ಟೊಂದೊಳಗೇ.. ಬಲು ನಾಚಿಕೆಯದಕೆ
ಎಳೆದಿತ್ತ ತರುವ ಬಗೆ ತಿಳಿದಿಲ್ಲ ಜಗಕೆ..

ಮುಗ್ಧಕಣ್ಣಲಿ, ಮುಕ್ತ ಮಾತಲಿ
ಮುಂದಿರುವ ದಿಟ್ಟ ನಡೆಯಲಿ
ಕಿತ್ತುಕೊಂಡುಂಡ ಹಸಿವೆಯ ಗುಟುಕು
ಚಿಂದಿಮಾಡಿದ ಹೆಣ್ಣಮಾನದ ಮುಸುಕು
ಮುರಿದಿಟ್ಟ ಕಂದನ ನಾಳೆಯ ಕನಸು
ಇಣುಕಿಯಾವೇ, ಕತೆ ಹೇಳಿಯಾವೇ...
ಸುಳಿವಾದಾವೇ...

(ಮಣಿಪಾಲ ರೇಪ್ ಕೇಸ್ ನ ಅಪರಾಧಿಗಳ ರೇಖಾ(ಭಾವ)ಚಿತ್ರ ಕೊಟ್ಟಿದ್ದುದರಲ್ಲಿ ಅಪರಾಧಿಗಳೆನಿಸಿಕೊಂಡವರ ಮುಖ ನೋಡಿ ಅನ್ನಿಸಿದ್ದು)Sunday, June 23, 2013

ಇಳೆಯ ಇಂದಿನ ಮಾತು

ನಾನಾಗಲೇ ಹೇಳಿದ್ದೆ,
ಅಂತರ ಕಾಪಾಡಿಕೊಳ್ಳಬೇಕು,
ಮೀರಿ ಮುನ್ನಡೆಯಬಾರದು,
ಎಲ್ಲಕ್ಕೂ ನಿಯಮ ಅನ್ನೋದಿದೆಯಲ್ಲಾ..

ಮನಸಿಗೇನೋ... ತುಂಬಾ ಕೇಳುತ್ತೆ,
ಎಲ್ಲ ಪಡೆಯುವ ಹಠ ಒಳ್ಳೆಯದಲ್ಲ...
ನೀನಿದ್ದಲ್ಲಿ ನಾ, ನಾನಿದ್ದಲ್ಲಿ ನೀ ಬರುವುದು
ಅದೊಂದು ಕನಸಾಗೇ ಉಳಿವ ಕನಸು
ಹೆಚ್ಚುಕಮ್ಮಿ ನಿತ್ಯ ಭೇಟಿಯಾಗುವ
ನೀನಲ್ಲಿಂದಲೇ ಹಿಡಿದುಂಬಿ ಸುರಿಯುವ
ನಾ ಇಲ್ಲೇ ಅಂಜಲಿಯೊಡ್ಡಿ ಪಡೆಯುವ
ನಡುವೆ ಯಾರೂ, ಏನೂ ಬರದಿರುವ
ಏಕಾಂತ ನಮ್ಮದಿತ್ತಲ್ಲಾ..

ಅಷ್ಟು ಕಾಲದಿಂದಲೇ ಸುಮ್ಮನಿರುತ್ತೀ
ಒಮ್ಮೊಮ್ಮೆ ಮಾತ್ರ ತಡೆಯದೇ
ಬುದ್ಧಿ ಮನಸ ಕೈಲಿಟ್ಟುಬಿಡುತ್ತೀ....
ಮನಸಿಗೇನೋ...ತುಂಬಾ ಮಿದು ಅದು
ಹಾಗಂತ ಸದಾ ಮುದ್ದಿಸಿದರಾದೀತೇ?!
ಬುದ್ಧಿ ಕೈಲಿಟ್ಟು ಒಮ್ಮೊಮ್ಮೆ ಹಿಂದೆಳೆಯಲೇಬೇಕು

ನಾನೋಡು.. ನಾನೂ ವಿರಹಿತೆಯೇ
ನಿನ್ನತ್ತ ನನಗೂ ಸೆಳೆತವಿದೆ
ನನಗಿಲ್ಲಿ ಬದ್ಧತೆಯ ಮಿತಿಯಿದೆ
ಅದರೊಳಗಿನ ತವಕದಲೂ
ಆತುರದಲೂ ನಾನಿದ್ದಲ್ಲೇ ಇದ್ದು
ಬರದ ತೃಪ್ತಿಯ ನೆರಳ ನೆರಳಲಿ
ತೃಪ್ತಳಂತೆ ಸ್ಥಿರವಾಗಿಲ್ಲವೇನೋ...

ನೋಡೀಗ ನೀ ಬಳಿ ಬಂದೆ..
ಬೀಳಬಾರದವರೆಲ್ಲ ಉರಿದು ಬಿದ್ದರು.
ಅವನೇನೋ ಸುದ್ಧಿಗೇ ಸ್ಫೋಟಗೊಂಡ
ಇವ ನೋಡು, ಕುಸಿದುಬಿದ್ದ ನನ್ನಮೇಲೆ
ಕಲ್ಲುಮಣ್ಣೆರಚಿ ಬಯ್ಗುಳ ಮಳೆ ಸುರಿಸಿದ
ಸಾಲದ್ದಕ್ಕೆ ಅವಳುಕ್ಕಿ ಹರಿಯುತಿದ್ದಾಳೆ
ಹತಾಶೆಯೋ ಅಸೂಯೆಯೋ
ದಿಕ್ಕುತಪ್ಪಿದ ನಡೆಗೆ ಕಳವಳವೋ
ಕಣ್ಣೀರು ಕಣ್ಣೀರೆನಿಸದ ಹಾಗೆ ಹರಿಸಿಬಿಟ್ಟಳು.

ಬಗೆಬಗೆಯ ನೋವುಕ್ಕಿಸಿದ ನಡೆಗಳು
ಬೇಕಿತ್ತೇನೋ ನಿನಗೆ..
ನೋಡೆಷ್ಟೆಲ್ಲ ಆಪಾದನೆಗಳು..
ಇರಲಿ ಬಿಡು... ಹಿಂದೆ ಹೋಗೀಗ
ಇವತ್ತೇ ಕೊನೆ...ಇನ್ಯಾವತ್ತೂ
ಸಮೀಪಿಸಬೇಡ... ಕೆಲವು ಹಣೆಗಳು
ತುಂಬಿಸಲ್ಪಟ್ಟಿರುತ್ತವೆ ನಿರಾಸೆಯಿಂದ
ಆದರೆ ಯತ್ನ ಕೈಯ್ಯಲ್ಲಿದೆ, ಹಣೆಯಲಲ್ಲ, ಮನದಲಲ್ಲ...
ದೂರವೆಂಬುದ ಮರೆತು ಇರುವ ಸಂಭ್ರಮಿಸುವಾ

ನೀನಲ್ಲೇ.. ನಾನಿಲ್ಲೇ..
ಮಿಲನವಿಲ್ಲದೇ ಬೆಳದಿಂಗಳ ಮಗುವ ಹುಟ್ಟಿಸಬಲ್ಲೆ ನೀ
ನಾನದ ಭರಿಸಬಲ್ಲೆ...ನೀ ಕೊಟ್ಟು, ನಾ ಹೊತ್ತು
ಬಾಳುತಲೇ ಸಾಗುವಾ..ನಿಯಮ ಮೀರದೆ.....Saturday, June 22, 2013

ಹುಶಾರು ಕಣೇ....

ಹುಶಾರು ಕಣೇ..

ಇನ್ನೇನಲ್ಲ, ಪಾಚಿಗಟ್ಟಿದ ನೆಲ,
ತಾ ತಾನಾಗಿಲ್ಲದ ಹೊದಿಕೆಯಡಿ
ಏಕಾಂಗಿಯಲ್ಲ, ಅದಕೊಂಟಿತನ ನೋಡು
ಒಳಗುದಿ ಕೇಳಲು ಯಾರೋ ಬೇಕೆನಿಸಿ
ಸೆಳೆದು ಬೀಳಿಸಿಕೊಳ್ಳುತದೆ,
ಕಾಲಲಿರಲಿ ಎಚ್ಚರದ ಮನ.

ಇನ್ನೇನಲ್ಲ, ಅಲ್ಲೊಂದಿದೆ ಪಾಳುಬಾವಿಯೂ..
ಖಾಲಿತನ ತುಂಬಿಸುವ ಚಪಲವದಕೆ
ಹುಡುಕಿ ಸೆಳೆವ ಮಂಕುಬೂದಿಯೆರಚಿ
ಬೇಕಾದ್ದು, ಬೇಡದ್ದು ಎಲ್ಲ ಕೇಳುತದೆ.
ಬೇಡದ್ದು ಕೊಟ್ಟುಬಿಡು, ಬೇಕಾದ್ದನಡಗಿಸಿಡು
ತೆರಕೊಳುವಲ್ಲಿರಲಿ ಎಚ್ಚರದ ಮನ...

ನೀ ಶ್ರೀಗಂಧ,
ಹಣೆಗೊತ್ತಿಕೊಳುವರಂತೆ
ಮೆಟ್ಟಲಿ ಮೆಟ್ಟಿ ನಡೆವವರಿದ್ದಾರೆ

ನೀ ಪಾರಿಜಾತ, ಮುತ್ತಿಕ್ಕಿ ಮುಡಿಗಿಡುವರಂತೆ
ಕೆಂಪುಚೊಟ್ಟು ತಿಕ್ಕಿ
ಅಂಗೈ ಕಂಪಾಗಿಸುವರಿದ್ದಾರೆ.

ಹುಶಾರು ಕಣೇ..
ನೀನೀಗ ಕನ್ನಡಿ
ತಮ್ಮನೇ ಕಂಡುಕೊಳುವವರಂತೆ,
ಅಪ್ಪಳಿಸಿ ಚೂರಾಗಿಸಿ ನಡೆವರಿದ್ದಾರೆ.

ತುಂಡು ಕಿವಿ, ಮೊಂಡು ಬಾಲ, ಒಂಟಿಕಾಲ ನರಿ
ಕುಂಟುತೋಡುತಲೇ ಇದೆ ತುತ್ತೊಂದಕಾಗಿ..
ಅಲ್ಲಲ್ಲಿ ಸಿಂಹ-ಹುಲಿ-ಚಿರತೆಗಳಾಡಿದ ಘನಬೇಟೆ
ಉಳಿಸಿದ ತೇಗಿನ ನಂತರದ ಚೂರುಪಾರಿಗಾಗಿ.

ಗಂಗಮ್ಮಾ...

ಅಲ್ಲಲ್ಲಿ ನೀನು ಮುತ್ತಿಟ್ಟು ಏಳಿಸುವ
ನಸುಕಿನಮ್ಮನ ನಸುನಗುವಂತೆ ಶಾಂತ.

ಇನ್ನಲ್ಲಲ್ಲಿ ದಾಟಿ ಹೋಗದಂತುಳಿಸುವ
ಅಮ್ಮನ ಕಣ್ಣ ಪ್ರವಾಹದಂತೆ ಜುಳುಜುಳು.

ಮತ್ತಲ್ಲಲ್ಲಿ ಬಿದ್ದ ಗಾಯದುರಿಯ
ಜೊತೆ ನಾ ನಂಜಿಕೊಳಲೆಂಬಂತೆ
ಉದುರುವ ಅಮ್ಮನ ಕಿಡಿನುಡಿಯಂತೆ
ಚಟಪಟ...ಸುರುಸುರು.

ಒಮ್ಮೊಮ್ಮೆ ಮಾತ್ರ
ನನನಾಡಿಕೊಂಡೆಡೆಗೆ ಸಿಡಿಯುವ
ಅವಳ ಭಾವ-ಮೇಘಸ್ಫೋಟದ ಹಾಗೆ
ಶಬ್ಧ-ವಿವರಣೆಯ ಮೀರಿದಂತೆ ರೌದ್ರ...

ಆದರೆ ಸುರುವಿಂದ ಕೊನೆಯಿರದವರೆಗೆ
ಉದ್ದುದ್ದಕೂ ಸಾಗಿದ ನಿನ್ನ ಹರಿವು
ಕಾಲದ ಕೈಮೀರಿದ ಅವಳ ವಾತ್ಸಲ್ಯದಂತೆ
ಅಮಿತ, ಅನಂತ, ಅವಿಶ್ರಾಂತ, ಅನವರತ...

Friday, June 21, 2013

ಕೃತಿಗೆರಡು ಜೀವನ
ಮೂಡುವಾಗ ಕವಿಮನದ ಪ್ರತಿಫಲನ
ಓದಿನೊಡಲಲಿ ಬದಲಾಗಿ ರೂಪ, ಮರುಜನನ...

ಕಲಕಿದ ನೀರಲ್ಲಿ ಮೂಡುವುದು ಕದಡಿದ ಬಿಂಬವೇ..
ಅದಕಿರುವುದೊಂದೇ ಮೈ, ಒಂದೇ ಮುಖ
ಅಲೆಯ ತಾಕಲಾಟ ಅಡಗಿಸಲು ಇನ್ನೊಂದಿಲ್ಲ...
ಕ್ಷಮಿಸು ಜಗವೇ,
ತಿಳಿಗೊಳಕೆಲ್ಲಿಯೂ ರಕ್ಷಾಕವಚವಿರುವುದಿಲ್ಲ,
ಕಲಕದಿದ್ದರದು ಕನ್ನಡಿ, ಕಲಕಿದರೆ ಗೊಂದಲ


Thursday, June 20, 2013

ನಿನಗೂ ..

ಸೊಟ್ಟ ನೆಟ್ಟ ದೃಷ್ಟಿಯ ಪರೀಕ್ಷೆ
ಪಾಸು ಮಾಡಬೇಕಿಲ್ಲ ಈ ಸ್ಪಂದನೆ
ಸತ್ಯಾಸತ್ಯದ ಸಾಪೇಕ್ಷತೆಯ ಸಾಮ್ರಾಜ್ಯ
ಮೀರಿದ ಪರೀಕ್ಷಕನ ತಲುಪಿದರೆ ಸಾಕು.

ತಾ ಕಾಣದ್ದೆಲ್ಲ ಸುಳ್ಳೆನುವ ಹಾದಿ
ಹಾದು ಹೋಗಬೇಕಿಲ್ಲ ಈ ಪ್ರಾರ್ಥನೆ
ನೇರ ತಿರುಳ ನೆಚ್ಚುವವನೇ
ನನಗೆ ಸದಾ ಕಿವಿಗೊಡುವ ದೊರೆ...

ಜಗವೇ,
ಎದೆಗಿಳಿವ ಬಾಣವೆಸೆದು ನಗುವ,
ಬಿತ್ತಿದ ಬೆಳೆಗಳುವ,
ನಿಷ್ಠೆಯ ಸಂಶಯಿಸುವ,
ದ್ವೇಷಕೊದಗಿ ಪ್ರೀತಿ ಕೇಳುವ,
ನಿನ್ನ ಪರಿಗೆ ಧಿಕ್ಕಾರವಲ್ಲ,
ನನ್ನ ಮರುಕವಿದೆ, ಇದೋ...
ಅದೇ ಆತನಲಿ ನಿನಗೂ ನನದೊಂದು
ಉದ್ಧರಿಸೆನುವ ಪ್ರಾರ್ಥನೆಯಿದೆ...
ಅವಳ ಹುಚ್ಚು ತಗ್ಗಿಸೆನುವ ಇಂದಿನ ಪ್ರಾರ್ಥನೆಯೆದುರು
ಕಳೆದ ದಿನಗಳ ನನ್ನ-ನಿನ್ನವೆಲ್ಲ ತಲೆಮರೆಸಿಕೊಂಡಿವೆ...
ಅವಳ ಕೆಚ್ಚಿನ ಬಲಿಪೀಠದ ಆರ್ಭಟದೆದುರು
ಅಂಗಲಾಚುವ ನಮ್ಮ ಬೇಕುಸಾಕುಗಳು ಮೂಕವಾಗಿವೆ..ಹೀಗೊಂದು ಆಸೆಯ ಕುಡಿ

ಆ ಮನೆಯ ಗೋಡೆಯ ಮಣ್ಣು
ಇದರ ಸಿಮೆಂಟ್ ಕಲ್ಲಿನದು
ಆ ಜಗಳ ಪೆಟ್ಟು ಹೊಡೆತ
ಈ ಹುಸಿಮುನಿಸು, ಸರಸ
ಆ ದಾರಿದ್ರ್ಯ ನಿರ್ಗತಿಕತನ
ಈ ತುಳುಕುವ ತಿಜೋರಿ
ಆ ಬಿರಿದ ಹೊಟ್ಟೆಯ ತೇಗು
ಈ ಹಸಿವ ಆಕ್ರಂದನಗಳು
ಭೂತಾಯಿಯೊಂದು ಮಗ್ಗುಲಲಿ
ಯಾವುದೇ ಫರಕಿಲ್ಲದೆ
ಹರಿದ ಪ್ರವಾಹದ ರಭಸದಲ್ಲಿ
ಒಂದರೊಳಗೊಂದು ಸೇರಿ ಹರಿದುಹೋದವು.

ಆ ಮನದ ಕೋರಿಕೆ ಇದರ ಉಪೇಕ್ಷೆ,
ಅಲ್ಲಿನ ಸ್ನೇಹ ಇಲ್ಲಿನ ಮೋಸ
ಆ ನಂಬಿಕೆ ಇಲ್ಲಿನ ದ್ರೋಹ
ಅಲ್ಲಿನ ಪ್ರೀತಿ ಇಲ್ಲಿನ ಸ್ವಾರ್ಥ
ಆ ಚೆಲುವು ಅಲ್ಲಿರದ ಒಲವು
ಸತ್ಯ ಮತ್ತದರ ಸೋಲು
ಸೌಂದರ್ಯ, ಕಿತ್ತೆಸೆಯುವ ಕ್ರೌರ್ಯಗಳೂ
ಭುಗಿಲೆದ್ದ ಪ್ರಕೃತಿಯಾಕ್ರೋಶದ
ಹೊರಹರಿವಲಿ ಕೊಚ್ಚಿಹೋಗಿರಬಹುದೇ?!

ಈ ರಭಸ ತಗ್ಗಿ, ಮತ್ತೆ ಪ್ರಕೃತಿ
ಅಭಯದಾತೆ ಸುಂದರಿಯಾಗಿ
ಕಾಣಲಿರುವ ಆ ನಸುಕ ನವೋದಯ
ಅಸಮಾನತೆ-ಅತೃಪ್ತಿ ನುಂಗಿದ
ಪಾರಮ್ಯದ ಬೆಳಕು-ಬಿಸಿಲ ತಂದೀತೆ?

Wednesday, June 19, 2013

ಈ ವಿನಾಶದ ಹಿಂದೆ...

ಹೆಣ್ತನದ ಕಣ್ಣೀರ ಹರಿವ
ಗಂಗೆ ಯಮುನೆಯರು ಮೈವೆತ್ತು
ಹೆಣ್ಣ ಮೈಮನಸು ರದ್ದಿಗಿಂತ ಕಡೆ
ಅಂದುಕೊಂಡ ಮನುಜ ಸಂತತಿಯ
ಕಡೆಗಾಣಿಸಹೊರಟರೇ?!

ನೆಲದೊಡಲ ತಾಯ್ತನವ
ಗಂಗೆ ಯಮುನೆಯರು ಮೈವೆತ್ತು
ಬಗೆಬಗೆದು ಅನ್ನನೀರು, ಮತ್ತದಕು
ಮೀರಿದ ಸುಖವ ಕಕ್ಕುವಷ್ಟುಣ್ಣುವನ
ಸದ್ದಡಗಿಸಹೊರಟರೇ?!

ದಾರಿ ತೋರಿದ ಗುರುವ
ಗಂಗೆ ಯಮುನೆಯರು ಮೈವೆತ್ತು
ಕಲಿಸಿದ್ದು ಮರೆಸಿ ಅಲ್ಲದ್ದು ಕಲಿಸಿದ
ಸಿದ್ಧದಾರಿಯ ಮೇಲೆ ಹರಡಿದಡ್ಡದಾರಿಗಳ
ಕತೆ ಮುಗಿಸಹೊರಟರೇ?!

ದೈವತ್ವದ ಧನಾತ್ಮಕತೆಯ
ಗಂಗೆ ಯಮುನೆಯರು ಮೈವೆತ್ತು
ದೈವತ್ವವನಿಳಿಸಿ ಸುಳ್ಳು ಮೋಸವ
ಪೀಠಕೇರಿಸಿದ ದೇಗುಲಗಳ
ನೆಲಸಮ ಮಾಡಹೊರಟರೇ?!

ಆತ್ಮದಾತ್ಮೀಯತೆಯ ಸಹಜತೆಯ
ಗಂಗೆ ಯಮುನೆಯರು ಮೈವೆತ್ತು
ಪುಣ್ಯ-ಪಾಪದ ಅಸಹಜ ಸೋಗಿಗೆ
ಯಾತ್ರೆಯ ಬಳಸಿಕೊಂಡ ಮೌಢ್ಯಕೆ
ಕೊನೆ ಹಾಡಹೊರಟರೇ?!

ಮಾತು ಕೇಳಿ ಮನವನಳೆಯಲು ಬೇಕಾದ್ದು ನನಲಿಲ್ಲ ಸ್ನೇಹವೇ...
ನಿನ್ನೆಯಷ್ಟೇ ಗೇಣನು ಮೊಳವೆಂದಳೆದ ಆ ಮಾಪಕವನ್ನೆಸೆದು ಬಿಟ್ಟೆ...
------------------------------------------
ಸರಾಗ ಹರಿಯುವ ನೀರಿಗೆ ಮರುಭೂಮಿಯ ಕಳ್ಳಿ ಹೂವರಳಿಸುವಾಸೆ
ಮರುಭೂಮಿಗೆ ಮೃಗತೃಷ್ಣೆಯಾಗಿ ನೀರೊಂದು ಕೈಗೆಟುಕದ ಕನಸು.
-------------------------------------------
ಕಲಿಯಬೇಕು ಈ ಅಕ್ಷರಗಳಿಂದ ಒದಗುವ ಪಾಠ
ಖುಶಿಗೊದಗುವಲ್ಲೂ ಕೊರಗಿಗೊದಗಿದಷ್ಟೇ ಪ್ರಾಮಾಣಿಕತೆ...
-------------------------
ಇಲ್ಲದುದರ ಘನತೆ ಸಾರಹೊರಟವಗೆ ಗೆಲುವು ತಂದಿತ್ತದ್ದು
ಇದ್ದುದು ಎದುರಿದ್ದೂ ಕಾಣದ ಕುರುಡು


ನಿಮ್ಮಿಬ್ಬರ ಪ್ರೀತಿ ಏನು ಅರ್ಥೈಸುತ್ತೀ
ನನ್ನ ಜಗಕೆ?!
ಕುರುಡಗೆ ಚಂದ್ರನಂದ ಬಣ್ಣಿಸಿ ನೋಡು ಅಂದಂತೆ.
ಅತ್ತ ಚಾಚಿದ ನಿನ್ನ ತೋರುಬೆರಳು
ಕುರುಡುತನವನಷ್ಟೇ ಅರ್ಥೈಸುವುದು
ಚಂದ್ರಿಕೆಯ ತಂಪು ಮೈಗಡರಿ ಮತ್ತೆ
ಅಸಹಾಯಕತೆಯನಷ್ಟೇ ಅರ್ಥೈಸುವುದು
--------------------------------
ಎಂದಿಗೂ ಅವನು ಇವನಾಗನು
ಬೆಳಕವನದು, ಕತ್ತಲಿವನದು.
ಅವನಿಲ್ಲದಾಗ ಇವಗೆ ಕಣ್ಮುಚ್ಚಿದವ
ಹಗಲ ಕಾಣ್ಕೆಯನಷ್ಟೇ ನಂಬಿ,
ರಾತ್ರಿಯ ನಿಜದಿಂದ ವಂಚಿತ
--------------------------------
ನೂರೆಳೆಗಳ ಸಿಕ್ಕು ಬಿಡಿಸಲೆತ್ತಿಕೊಂಡ ಕಡ್ಡಿಯಲೊಂದೆಳೆ ಅಡಗಿತ್ತು
ಬಿಡಿಸುತ್ತಾ ಸಿಕ್ಕನು ಕಗ್ಗಂಟು ಮಾಡಿದೆಳೆಯಷ್ಟೇ ಉಳಿದು,
ಕಡ್ಡಿ ಕಳೆದೇ ಹೋಯಿತು
---------------------------
ಕುರುಡನ ಕಣ್ಣೀರು ಕಾಣಲಾರದ ಚಂದಕರ್ಪಿತ
ಅದಲ್ಲದವನದು ಕಂಡ ಚಂದದ ಕುರೂಪಕೆ.

Tuesday, June 18, 2013

ಇವು ಹೀಗೆ, ಅವ ಹಾಗೆ....

ದಾರಿಬದಿ ಹೊಂಡದ ಕೊಚ್ಚೆನೀರು
ತೇಲುವ ಕಾಗದದ ಪುಟ್ಟ ದೋಣಿ
ಹುಟ್ಟು, ಪಯಣಿಗ, ಗುರು, ಗುರಿ ಬೇಕಿಲ್ಲ,
ತನದೇ ದಾರಿ, ತಾನಲ್ಲದೇನೂ ಅರಿವಿಲ್ಲ.

ಚಂದದೊಂದು ಹಜಾರದ ಮೂಲೆ
ಅರಳಿಯೇ ಇರುವ ಬಣ್ಣದ ಸದಾಪುಷ್ಪ
ಮೊಗ್ಗಿಂದರಳುವ, ಮುದುಡುವ, ಗಂಧದ ತಿಳಿವಿಲ್ಲ
ಅರಳಿದ ನಿರ್ಜೀವ ಬಾಳುವೆ ಬಿಟ್ಟೇನೂ ಗೊತ್ತಿಲ್ಲ.

ಬಯಲುರಂಗ, ಜಗ ವೀಕ್ಷಿಸುವಾಟ
ಆಡುತಲೇ ಪ್ರಶ್ನೆಯಾಗುಳಿವ ಪೋಷಕ ಪಾತ್ರ
ಐದಂಗ ಮತ್ತೊಂದು ಮನಸಿದ್ದರೂ ಅರಿತುದೇನಿಲ್ಲ
ನೋವುಂಡು ನೋವೀವುದಷ್ಟೇ.. ಬೇರೇನಿಲ್ಲ.Monday, June 17, 2013

ಸುಮ್ಮನೆ ತಿರುಗಿದೆ ಭಾವಬುಗುರಿ, ವೇಗ ಕ್ಷಯಿಸಿ ನಿಲ್ಲುವ ಕ್ಷಣ ಕ್ಷಿತಿಜದಲ್ಲಿ
ಹೌದು ಇಲ್ಲ ಪೋಣಿಸಿದ ಮಾಲೆ ಕತ್ತ ಸುತ್ತಿ ಬೀಸಿ ಎಸೆದ ಭ್ರಮಣದಲ್ಲಿ..
ತಲೆಸುತ್ತಿ ಬವಳಿ ಬಂದರೂ ನಿರುಕಿಸುತಲೇ ಇರುವ ನಾನು..
ಅದರದೇ ದ್ವಂದ್ವ ನನದು; ಸಮಾನ ದುಃಖಿಗಳು ನಾವು.
-------------------------
ಒಗಟನೆಸೆದು ಸವಾಲೊಡ್ಡುವ ಹೊತ್ತು ಸರಿಯಿರಲಿಲ್ಲ
ಬಿಡಿಸುವಾತನ ಮನಕಾಗಲೇ ಮೋಡಿಯ ಬೀಗ ಜಡಿದಿತ್ತು.
-----------------------------------
ಕೊನೆ ಸಾರುವ ನಡೆಗೆ ದಾರಿದೀಪವಾಗುವ ಕರ್ತವ್ಯ.
ಹಗಲ ಪಾಳಿ ಸೂರ್ಯನದು, ರಾತ್ರಿ ಚಂದ್ರನದುನಾನೇನು ಬರೆದೇನು, ಅಲ್ಲೇನುಳಿದಿದೆ?!
ಬಾಳುವುದು ಎಂಬುವುದು ಕಾರ್ಯಕಾರಣವಿಲ್ಲದ್ದು,
ವ್ಯಾಖ್ಯಾನ-ವಿಮರ್ಶೆಗೆ ಹೊರತು.
ಅಕ್ಷರ, ರಾಗ, ಬಣ್ಣಕೆ ಮೀರಿದ್ದಾದರೂ
ಬಾಳುವುದ ಬಿಟ್ಟು ಅಲ್ಲೇನೂ ಬರೆದಿಲ್ಲ,
ಬರೆಯದೇ ಬಿಟ್ಟದ್ದೂ ಬಹುಶಃ ಅಲ್ಲೇನಿಲ್ಲ...
ನಾನಿನ್ನೇನು ಬರೆದೇನು, ನನಗಲ್ಲೇನುಳಿದಿದೆ?!

ನಾಲ್ಕೇನು ನೂರು ಮಾತು ಹುಟ್ಟಿಯಾವು,
ಅಕ್ಷರ ತಾಗಿದ ಮನವೆಂದೂ ಬಂಜೆಯಾಗುಳಿಯದು.
ಫಲಿತಕ್ರಿಯೆ ವೈಫಲ್ಯವೋ, ದಿನತುಂಬದ ಹೆರಿಗೆಯೋ

ಅಲ್ಲ; ನನ್ನೊಡಲೇ ದುರ್ಬಲ
ಪೋಷಿಸಿ, ಸಬಲಗೊಳಿಸಿ ಎದುರಿಡಲಾಗಲಿಲ್ಲ
ಬರಹವಾಗುವ ಮಾತು ಹೆರಲಾಗಲಿಲ್ಲ...

Sunday, June 16, 2013

ಹಾಗೇ ಸುಮ್ಮನೆ ಅವನಿಗೊಂದಷ್ಟು ಅವಳ ಮಾತುಗಳು


   ಬಿರುಸಾದ ಗಾಳಿ, ಹಿತವೂ ಅಲ್ಲದ ಅಹಿತವೂ ಅಲ್ಲದ ಶೈತ್ಯ, ಬಿಸಿಲ ಸುಳಿವೇ ಇಲ್ಲದೊಂದು ಹಗಲು, ಸುತ್ತಲಿನ ಸಂಬಂಧಗಳ ಸಂತೆಯಲ್ಲಿ ನನ್ನ ಭಾಗವಹಿಸುವಿಕೆಯ ಮೌನ, ಅಲ್ಲಿನ ಆಪ್ತತೆಯೆಡೆ ನನದೊಂದು ವಿಚಿತ್ರ ಉದಾಸೀನ, -ನಿಜವಾಗಲೂ ಜಾಡ್ಯಕ್ಕೋ, ಮಂಪರಿಗೋ ಹೀಗೆಯೇ ಒಂದು ಅಸ್ವಾಭಾವಿಕತೆಗೆ ಎಡೆ ಮಾಡ್ಕೊಡಬೇಕಾಗಿತ್ತು..ಆದರೆ ಇಂದು ಮನದಲ್ಲಿ ಹುಡುಕಿದರೂ ಅಸಹನೀಯವಾದದ್ದಕ್ಕೆ ಒಂದಿಷ್ಟೂ ಜಾಗವಿಲ್ಲ. ಯಾಕಿರಬಹುದು?! ಕ್ಷಣಕ್ಕೊಂದಷ್ಟರಂತೆ ಹಲವು ವಿಷಯಗಳು ಮನಃಪಟಲದಲ್ಲಿ ಹಾದುಹೋದವು. ಆದರೆ ಮುಚ್ಚಿದ ಕಣ್ಣ ಮುಂದಿದ್ದುದೊಂದೇ ಅಸ್ಪಷ್ಟ ಬಿಂಬ, ಅದು ನಿನ್ನದು. ನಿನ್ನೆಯಷ್ಟೇ ರಾತ್ರಿ  ಸುಂದರಸ್ವಪ್ನವಾಗಬಹುದಾದದ್ದು ನಿನ್ನಿಂದ ಎಷ್ಟು ಹೊತ್ತಿಗೆ ಮುಗಿದೀತೋ ಅನ್ನುವ ಭಯಂಕರತೆಯಿಂದ ಕೂಡಿತ್ತು ಅಂತ ದೂರಿದವಳೇನಾ ನಾನು, ಅನ್ನುವುದು ನನದೇ ಆಶ್ಚರ್ಯ.

   ಇರಲಿ ಬಿಡು, ನಿನ್ನ ಬಗೆಗೆ ಯೋಚಿಸಿದಾಗಲೆಲ್ಲಾ ನನಗೆ ಹೊಳೆಯುವುದು ಕವನ, ಅದೆಷ್ಟು ಬರೆದೆನೋ, ಅದೆಷ್ಟು ಅಳಿಸಿದೆನೋ, ಅದೆಷ್ಟು ಅರ್ಪಿಸಿದೆನೋ, ಅದೆಷ್ಟು ಅಡಗಿಸಿದೆನೋ ನನಗೇ ಲೆಕ್ಕ ಇಲ್ಲ. ಆದರೆ ಒಂದಂತೂ ನಿಜ, ನಾನೆಂದರೆ ಅದಷ್ಟೇ ಅಲ್ಲ, ಇದೂ ಹೌದು ಎಂದು ನನ್ನ ವ್ಯಕ್ತಿತ್ವದ ಅಡಗಿ ಕೂತಿದ್ದೊಂದು ಮಗ್ಗುಲನ್ನು ನನಗೆ ಪರಿಚಯಿಸಿಕೊಟ್ಟ ಇರುವು ನಿನ್ನದು. ನಿನ್ನೆಯೂ ನಿದ್ದೆ ದೂರ ಹೋದಾಗ, ಹಿಡಿಯ ಬಯಸಿ ನಾನೂ ಓಡಿಓಡಿ ಸಾಕಾಗಿ ಬಸವಳಿದಲ್ಲೇ ನಿಂತಾಗ ಹೊಳೆದದ್ದು ಮತ್ತೆ ಒಂದಷ್ಟು ಸಾಲುಗಳು. ಆ ಸೋತುಹೋದ ಗಳಿಗೆಯ ಮಾತುಗಳನ್ನೇನು ಕೇಳುತ್ತೀಯ ಬಿಡು. ಹೇಳುವುದೇನು ಬಂತು, ನಾನವನ್ನು ಹಾಳೆಯ ಮೇಲುದುರಲೂ ಬಿಡದೆ, ಹೊಸಕಿಹಾಕಿದೆ. ಯಾಕೋ, ತಂಗಿ ಆರು ತಿಂಗಳ ಮಗುವಾಗಿದ್ದಾಗ ಬಂದ ಅಮ್ಮನ ಬಸುರನ್ನು, ಅಸಮರ್ಪಕ ಮುಟ್ಟಿನ ಕಾರಣ ಮೊದಲು ಗಮನಕ್ಕೆ ತಂದುಕೊಳ್ಳದೆ, ಕೊನೆಗೆ ಮೂರು ತಿಂಗಳು ತುಂಬಿ, ತೆಗೆಸಲೇಬೇಕಾದಾಗ, ವೈದ್ಯೆ ಅಮ್ಮನ ಹೊಟ್ಟೆಯಿಂದ ಆ ಜೀವವನ್ನು   ತುಂಡುತುಂಡಾಗಿಸಿ ಹೊರತೆಗೆದ ಪಾಶವೀ ಸಂದರ್ಭವನ್ನು ಕಣ್ಣೀರಿನ ಜೊತೆ ನೆನಪಿಸಿಕೊಳ್ಳುತ್ತಿದ್ದ ಅಮ್ಮನ ಮುಖ ನೆನಪಾಯಿತು ಮತ್ತು ಅದರೊಡನೆ ನನ್ನ ಮುಖದ ಹೋಲಿಕೆ ಮನಸಿಗೆ ಬಂತು. ಸ್ವಲ್ಪ ಉತ್ಪ್ರೇಕ್ಷೆ ಅನಿಸಿದರೂ ತೀರಾ ಅಸಹಜವೆಂದನಿಸುತ್ತಿಲ್ಲ. ನನ್ನ ಕ್ರೌರ್ಯ ಆ ಗಳಿಗೆಗೇ ಏನು, ಈಗಲೂ ನನಗರ್ಥವಾಗುತ್ತಿಲ್ಲ, ಆದರೆ ಅಪರಿಚಿತವೂ ಅನಿಸುತಿಲ್ಲ.


   ಅಂದೊಮ್ಮೆ ಕೈಗೂಡಿದ ಭ್ರಮೆ ಕಳಚಿಕೊಳ್ಳುವ ಹೊತ್ತು.. ನಾ ಕೈಗೂಡಿದ್ದುದೊಂದು ಕೈಜಾರಿ ಹೋಗುತ್ತಿದೆ ಎಂಬ ದುಃಖದಲ್ಲಿದ್ದೆ, ನೀ ಕೈಜಾರಿ ಹೋದುದರ ಅಳಲನ್ನು ಸಾಲುಗಳಾಗಿಸಿ ಬರೆಯುತಿದ್ದೆ. ಸಮಾನದುಃಖಿಗಳಲ್ಲದಿದ್ದರೂ, ದುಃಖ ಇಬ್ಬರನ್ನೂ ಬಾಧಿಸುತ್ತಿದೆ ಎಂಬೊಂದೇ ಸಮಾನತೆಯಿಂದ ಪರಿಚಯದ ಪರಿಧಿಯೊಳ ಬಂದೆವು. ಅದು ಇಂದಿನ ಬೆಳವಣಿಗೆಯೋ ಅಧಃಪತನವೋ ಗೊತ್ತಿಲ್ಲ, ಈ ಹಂತಕ್ಕೆ ನಾ ಬರಲು ವಿಧಿಸಲ್ಪಟ್ಟ ವಿಧಿವಿಧಾನ ಅಂತನೇ ನಾನಿಂದು ಹೇಳುವುದು, ಇನ್ನಾವ ಕಾರಣವನ್ನೂ ಆರೋಪಿಸಲಾರೆ. ಎದುರಾದುದು ಹೂವೋ ಹಾವೋ ಆಮೆಯಂತೆ ಚಿಪ್ಪಿನೊಳ ಸೇರಿಹೋಗುತಿದ್ದ ನನ್ನತನ ಅಂದಿನ ದಿನಗಳಲ್ಲಿ ಎಗ್ಗಿಲ್ಲದೇ ನಿನ್ನ ಕಡೆ ವಾಲತೊಡಗಿ, ಪ್ರಕಟವಾಗಿ, ತೆರೆದುಕೊಂಡು, ಮುಂದೊಂದು ಹಂತದಲ್ಲಿ ಸಮರ್ಪಿತವಾದದ್ದರಲ್ಲಿ ಯಾವ ಅದೃಶ್ಯ ಶಕ್ತಿಯ ಕೈ ಇಲ್ಲವೆಂದು ಅದು ಹೇಗೆ ಭಾವಿಸಲಿ ಹೇಳು! ಚೆಲುವಿಗಿಂತ, ಬೌದ್ಧಿಕತೆಗಿಂತ, ಪಾಂಡಿತ್ಯಕ್ಕಿಂತ, ವ್ಯಕ್ತಿತ್ವದ ಇನ್ನ್ಯಾವುದೇ ಅಂಗಕ್ಕಿಂತ ಅದರೊಳಗೆ ಹಾಸುಹೊಕ್ಕಾಗಿರುವ, ಅಡಕ ಅಥವಾ ಅಭಿವ್ಯಕ್ತ ನೋವು, ಸತ್ಯ ಮೆಚ್ಚುವವರನ್ನು ತುಂಬಾ ಆಕರ್ಷಿಸುತ್ತದೆ- ಇದು ನಾನು ನನ್ನ ಅನುಭವದ ಮೂಲಕ ಕಂಡುಕೊಂಡದ್ದು. ಯಾಕೆಂದರೆ ನೋವಿನಲ್ಲಿರುವಷ್ಟು ಸತ್ಯ ಮತ್ತು ಅದರ ಅಭಿವ್ಯಕ್ತಿಯಲ್ಲಿ ಶಕ್ತಿಯುತವಾಗಿ ಅದು ಹೊರಹೊಮ್ಮುವಲ್ಲಿನ ಪ್ರಬಲ ನೈಜತೆ, ಸಹಜತೆ ಇನ್ನೆಲ್ಲೂ ಕಂಡುಬರಲಾರದು- ಇದು ನನ್ನ ತೀರಾ ವೈಯುಕ್ತಿಕ ಅನುಭವ. ಯಾಕೆ ತೀರಾ ಅಂತ ಒತ್ತು ಅಂದರೆ ಎಂದಿನಂತೆ ಇಂದೂ ಪುನಃ ಹಾಗೇನೂ ಇರಬೇಕಾಗಿಲ್ಲ ಅಂತನೋ ಅಥವಾ ಅದು ಹಾಗಲ್ಲ ಅಂತನೋ ಅನ್ನುತ್ತೀಯ.. ನನಗೆ ಗೊತ್ತು...
   ಸಂಪರ್ಕಗಳೆಲ್ಲ ಸಂಬಂಧಗಳಾಗವೆಂಬುದು ನನ್ನ ಅನುಭವ. ಕೆಲವೊಂದು ಪರಿಚಯಗಳು ಆಪ್ತತೆಯ ಕಡೆ ಮುಖ ಹಾಕಿಯೂ ನೋಡುವುದಿಲ್ಲ, ಹೊರಳಿಕೊಂಡು, ತೆವಳಿಕೊಂಡು ಜೀವನದುದ್ದಕ್ಕೂ ಜೊತೆಗಿರುತ್ತವೆ, ಕೆಲವು ಆಪ್ತತೆಯತ್ತ ಮುಖ ಮಾಡಿ ದಯನೀಯವಾಗಿ ಯಾಚಿಸುತ್ತಲೇ ಸಾಗಿ ಬರುತ್ತವೆ, ಇನ್ನು ಕೆಲವು ಆಪ್ತತೆಯ ಆಸುಪಾಸಿನ ಇನ್ಯಾವುದೋ ಒಂದು ಘಟ್ಟ ತಲುಪಿ ಅಲ್ಲೇ ಸಂತೃಪ್ತಿ ಹೊಂದಿ ನಿಲ್ಲುತ್ತವೆ. ಕೆಲವೊಂದು ಅನೈಚ್ಛಿಕ ಕ್ಷಣವೊಂದರ ಹಿಡಿಗೆ ಸಿಕ್ಕಿ ಅಪ್ಪಚ್ಚಿಯೇ ಆಗಿ ಹೋಗುತ್ತವೆ. ಆದರೆ ಎಲ್ಲೋ ಕೆಲವು ಅಪ್ರಯತ್ನ ಆಪ್ತತೆಯನ್ನು ಬಳಿಸಾರಿ, ಹಠಾತ್ತನೆ ಅಪ್ಪುತ್ತವೆ, ಮೆಲುವಾಗಿ ಹಣೆ ಚುಂಬಿಸಿ ನಿನ್ನ ನೋವಿಗೆಂದೇ ನಾನು ಬಂದೆ ಅನ್ನುತ್ತಾ, ನೋವಿಂದ ಕುಗ್ಗಿದಾಗಲೆಲ್ಲ ಹೆಗಲಾಗಿಯೋ, ಕಣ್ಣೀರಿಗೊಂದು ಕರವಸ್ತ್ರವಾಗಿಯೋ ಒದಗುತ್ತವೆ. ಇವಿಷ್ಟರ ಬಗ್ಗೆ ಗೊತ್ತಿತ್ತು, ಇತ್ತೀಚೆಗೆ ಇನ್ನೂ ಒಂದರ ಪರಿಚಯವಾಯಿತು. ಅದೇನೆಂದರೆ ನೋವಿನ ಮೂಲಕ ಬಳಿಬಂದು ನೋವನ್ನೇ ಸೇತುವೆಯಾಗಿಸಿ ಆಪ್ತತೆಯನ್ನು ತಲುಪಿ, ಬಿಡಿಸಲಾಗದ ಬಂಧಗಳು ಅನ್ನುವುದಕ್ಕಿಂತಲೂ ಗಂಟುಗಳಾಗುತ್ತವೆ, ಬೇಕೆಂದರೂ ಬಿಡಿಸಿಕೊಳ್ಳಲಾಗದ ಕಗ್ಗಂಟುಗಳು, ಮತ್ತು ನೋವನ್ನೇ ಕೊಡುತ್ತಾ ಆಪ್ತತೆಯ ತೀವ್ರತೆ ಹೆಚ್ಚಿಸಿಕೊಳ್ಳುತ್ತವೆ. ಕಣ್ಣೀರನ್ನೀಯುತ್ತಾ ಹಣೆ ಚುಂಬಿಸುತ್ತವೆ.

   ಬಳಿಸಾರಿದ ನಿನ್ನ ನೋವನ್ನು ನಾ ಬರಸೆಳೆದಪ್ಪಿ ಮುದ್ದಿಸಿದೆ,ಎದೆಯೊಳಗೆ ಭರಪೂರ ಬೆಚ್ಚನೆಯ ಆಶ್ರಯವಿತ್ತೆ, ಮತ್ತೆ ಅಂದಿನಿಂದ ಇಂದಿನವರೆಗೆ ಅಸಾಧ್ಯ ಗೌರವದಿಂದ ನಿನ್ನನ್ನು ಪ್ರೀತಿಸುತ್ತಲೇ ಬಂದೆ. ಯಾಕೆ ...ಅನ್ನುವುದು ನನಗೇ ಗೊತ್ತಿಲ್ಲ, ಗೊತ್ತಾಗಬೇಕಿಲ್ಲ. ನನ್ನಲ್ಲಿ ಪ್ರಶ್ನೆಗಳು ಬಹುಪಾಲು ಹುಟ್ಟುವುದೇ ಇಲ್ಲ, ಹುಟ್ಟಿದರೂ ಗಲಾಟೆ ಮಾಡುವುದಿಲ್ಲ, ಉತ್ತರಕಾಗಿ ಪೀಡಿಸುವುದಿಲ್ಲ, ಕಾಯುತ್ತವೆ, ಬಲು ತಾಳ್ಮೆಸಂಯಮದಿಂದ ಕಾಯುವ ಪ್ರಶ್ನೆಗಳು ನನ್ನವು, ಒಂದುವೇಳೆ ಉತ್ತರವೇ ಸಿಗಲಿಲ್ಲ ಅಂತಿಟ್ಟುಕೋ, ಅಂಥದ್ದೇ ಒಂದೇನಾದರೂ ಕೈಗಿತ್ತರೂ ಆಟಿಕೆಯ ಮೂಲಕ ಹಳೆಯ ಹಠ ಮರೆಯುವ ಕಂದನಂತೆ ನನ್ನ ಪ್ರಶ್ನೆಗಳು. ಅದಿರಲಿ, ಆ ದಿನಗಳಲ್ಲೇ ಒಂದು ತಪ್ಪು ಮಾಡಿದೆ, ನನ್ನಮ್ಮ ಯಾವಾಗಲೂ ಹೇಳುತ್ತಿದ್ದುದನ್ನು ಮರೆತುಬಿಟ್ಟು ನಡೆದುಕೊಂಡೆ. ಅಮ್ಮ ಯಾವಾಗಲೂ ಹೇಳುವುದಿತ್ತು, "ಸಂಕಟದಲ್ಲಿರುವವರನ್ನು ನೋಡಿ ಅಯ್ಯೋ ಪಾಪ ಅನ್ನುವುದು, ಅವರ ಕಷ್ಟವನ್ನು ನಾನೇ ಹೇಗಾದರೂ ಮಾಡಿ ಕಡಿಮೆ ಮಾಡುವೆ ಎಂದು ಹೊರಡುವುದೂ ಮಾಡಿದರೆ ಆ ಕಷ್ಟ ಬಂದು ನಮ್ಮನಂಟಿಕೊಳ್ಳುತ್ತದೆ"- ಹುರುಳಿಲ್ಲದ ಮಾತೆನಿಸಿದರೂ ಅರಿವಿಗೆ ಬರಲಾರದೊಂದು ಸಾಕ್ಷಿಪೂರ್ಣ ಸತ್ಯವದರಲ್ಲಿದೆ. ಇದು ನನ್ನ ಅನುಭವಕ್ಕೂ ಬಂದಿದೆ. ನಿನ್ನ ನೋವು ನಿನ್ನ ಕಾಡುತ್ತಿದೆ, ಲೋಕದ ಅದೆಷ್ಟೋ ನಿನ್ನವರು, ನಿನಗೆ ಬೇಕಾದವರು ಮಾಡುತ್ತಿರಬಹುದಾದ ನಿನ್ನ ನೋವಿನ ಕಣ್ಣೀರನ್ನು ಸಂತೋಷದ ನಗುವಾಗಿಸುವ ಯತ್ನದಲ್ಲಿ ನನದೊಂದು ಅಳಿಲ ಸೇವೆಯಿರಲಿ ಅಂದುಕೊಂಡೆ. ನೀನೆಸೆದ ಹಲ ಬಾಣಗಳನ್ನು ನನ್ನ ಪ್ರೀತಿಯ ಮೂಸೆಯಲ್ಲಿಳಿಸಿ ಪ್ರೀತಿಯದೇ ನಮೂನೆಗಳನ್ನಾಗಿಸಿದೆ. ನೀನೆಸೆದ ಹಲ ಕಲ್ಲುಗಳಲ್ಲಿ ನನ್ನ ನಿನ್ನ ಸಂಬಂಧದ ಶಿಲ್ಪಗಳನ್ನು ಕಡೆದು ಮನಸನ್ನು ಸಿಂಗರಿಸಿದೆ. ಅಂತೂ ನಾ ಹೇಗೆ ಬಯಸಿದ್ದೆನೋ ಹಾಗೆ ನಿನಗೊದಗತೊಡಗಿದೆ. ನಿನಗದು ಬಲವಂತದ ಮಾಘಸ್ನಾನದಂಥದ್ದೇನೋ ಆಗಿದ್ದಿರಬಹುದು. ನನ್ನೊದಗುವಿಕೆ ನಿನ್ನ ಎದೆಯನ್ನು ಬಿಡು, ಆಸುಪಾಸಿನವರೆಗೂ ತಲುಪಲಿಲ್ಲ ಅನ್ನುವುದೇ ನನ್ನ ದೊಡ್ಡ ನೋವಿಗೆ ಕಾರಣವಾದದ್ದು ಆಮೇಲಿನ ಮಾತು ಬಿಡು.

   ನಾನು ನಿನ್ನ ಹಚ್ಚಿಕೊಳ್ಳುತ್ತ ನಡೆದೆ, ನೀ ಒಂದು ಕೈ ನೋಡಿ ಕಳಚಿಕೊಳುವ ಹಂತದಲ್ಲಿದ್ದೆ. ನನಗಿದು ಅರಗಲಾಗದಾಯಿತು. ದಕ್ಕುವ, ದಕ್ಕದೇ ಉಳಿಯುವ ಮಾತೆಲ್ಲಿ ಬಂತು, ನಮ್ಮ ಕೈಯ್ಯಡುಗೆಯೇ ಹೊಟ್ಟೆಗೊಮ್ಮೊಮ್ಮೆ ದಕ್ಕದೇ ಹೋಗುವುದುಂಟು, ಅಂಥದ್ದರಲ್ಲಿ ಇನ್ನೊಂದು ಜೀವ ನಮಗೆ ದಕ್ಕುವ ಮಾತೆಲ್ಲಿಯದು? ಬಹುಶಃ ನಿನ್ನರ್ಥದಲ್ಲಿ ದಕ್ಕದುಳಿದ ಕಾರಣ ನಾ ಕೂತಿದ್ದ ಜಾಗವನ್ನು ದಕ್ಕುವ ಸಾಧ್ಯತೆಯಿರುವ ಇನ್ನೊಂದು ವ್ಯಕ್ತಿತ್ವಕ್ಕಾಗಿ ನಾನು ಖಾಲಿ ಮಾಡಬೇಕು ಎಂಬ ಅಪೇಕ್ಷೆಯನ್ನು ನೀನು ವ್ಯಕ್ತ ಮಾಡುತ್ತಾ ನಡೆದೆ, ನಾನು ನನ್ನಿಂದ ಅದಾಗದು ಎಂದು ನಿನ್ನ ಮುಂದೆ ನನ್ನನುಳಿಸಿಕೊಳ್ಳಲು ಗೋಗರೆಯುತ್ತಲೇ ನಡೆದೆ. ಎಷ್ಟು ಮೂರ್ಖಳಾಗಿದ್ದೆ ನಾನು!!

   ಬರಬೇಕಲ್ಲ ಎಂದು ಬರುವದ್ದು ನನ್ನುಸಿರೇ ಆಗಿದ್ದರೂ ಅದು ಬಾರದುಳಿಯಲಿ ಎಂದು ಬಯಸುತ್ತಿದ್ದ ನಾನು ಬಲವಂತವಾಗಿ ನನ್ನುಸಿರಲ್ಲಿ ನಿನ್ನ ಆವಾಹಿಸಿಕೊಳ್ಳಲು, ನಿನ್ನ ಕುತ್ತಿಗೆಗೆ ಹಗ್ಗ ಹಾಕಿ ಎಳೆದಾದರೂ ಕರೆ ತಂದಿಲ್ಲಿ ನನ್ನೆದೆಯಲ್ಲಿ ಬಂಧಿಸಿಟ್ಟುಕೊಳ್ಳಲು, ಎಲ್ಲದಕ್ಕಿಂತ ಹೆಚ್ಚಾಗಿ
ನಿನ್ನ ನೋವಿಂದ ಪಾರಾಗುವಲ್ಲಿ ನಾನು ಉಪಯೋಗಕ್ಕೆ ಬರಬಲ್ಲೆನೇ ಎಂದಷ್ಟೇ ಯೋಚಿಸುತ್ತಿದ್ದ ನಿನ್ನ ನೇರ ಮನಸನ್ನು ನನ್ನ ವಕ್ರ ಸಾಲುಗಳೊಳಗೆ ಪ್ರತಿಷ್ಠಾಪಿಸಿ ಅತಿ ಆದರ್ಶದ ವೇಷ ಮೆತ್ತಬಯಸಲು ನನ್ನ ಕವನಗಳನ್ನು ಉಪಯೋಗಿಸಿಕೊಂಡು ಬಿಟ್ಟೆ.. ಶತಾಯಗತಾಯ ನನಗೆ ನೀನೇನೋ, ಅದೇ ನಿನಗೆ ನಾನೆಂದು ಸಾಧಿಸಹೊರಟು ನನ್ನನ್ನೇ ನನಗೆ ಅಪರಿಚಿತ ಸ್ಥಾನಕೊಯ್ದುಬಿಟ್ಟಲ್ಲಿ ನಿಲ್ಲಿಸಿ, ಮತ್ತೆ ನನ್ನ ಆ ಅಸಹಾಯಕತೆಗೆ ಯಾರನ್ನು ದೂರಲಿ ಎಂದು ಯೋಚಿಸುತ್ತಿದ್ದೆ. ಎಂಥಾ ಮೂಢತನವಲ್ಲವೇ?
   ಪ್ರತಿದಿನ ಮುಂಜಾನೆ ಧ್ಯಾನದ ಹೊತ್ತು ನಾನು ನನ್ನ ಶಕ್ತಿಯನ್ನು ಕುರಿತು ಚಿಂತಿಸುವಾಗ ಮನಸನ್ನು ತೀರಾ ಕಟ್ಟುಪಾಡಿಗೊಳಪಡಿಸಿ ಬಲುನಿಯಂತ್ರಿತ ಅನಿಸುವ ಬದಲು ಆಚೀಚೆ ಓಡಾಡ ಬಿಟ್ಟು, ತೀರಾ ಅಪಾಯದ ಮಗ್ಗುಲಲ್ಲಿ ಅದನ್ನು ಹಗ್ಗ ಹಿಡಿದೆಳೆದು ಇತ್ತ ತರುವಲ್ಲಿ ಒದಗು ಅಂತ ಆದೇಶಿಸುತ್ತಿದ್ದೆ. ಯಾಕೆಂದರೆ ನನ್ನ ಮನಸನ್ನು ನಾನು ತುಂಬಾ ಪ್ರೀತಿಸುತ್ತೇನೆ ಮತ್ತು ನಂಬುತ್ತೇನೆ. ಜಗತ್ತಿನ ನಾ ಕಂಡ ಅತಿ ಸುಂದರ ವಿಷಯಗಳ ಪೈಕಿ ಅದೂ ಒಂದು. ಜೊತೆಗೆ ತಾ ನೊಂದಾದರೂ ಇತರರನ್ನು ನೋಯಿಸುವುದಿಲ್ಲ ಅಂತ ಅತಿ ಪ್ರಾಮಾಣಿಕವಾಗಿ ಪ್ರಯತ್ನಿಸುವ ಸೂಕ್ಷ್ಮಪ್ರಕೃತಿಯದ್ದದು. ನನ್ನ ಆದೇಶವು ಕೈಗೂಡಿದ್ದು ನಿನ್ನೆ ನನ್ನ ಅನುಭವಕ್ಕೆ ಬಂತು ನೋಡು.

   ರಾತ್ರಿ ನಿದ್ದೆ ಬರದ ಕಾರಣ, ನನ್ನ ನಿನ್ನ ನಡುವಿನ ಗೋಡೆಯೊಂದರ ಮೇಲೆ ಇಂದಿನ ನನ್ನ ನೋವಿನ ಕಾರಣವನ್ನಾರೋಪಿಸಿ ಕವನ ರಚಿಸತೊಡಗಿದೆ. ಹಠಾತ್ತನೆ ಅವರಿವರಲ್ಲಿ, ಅದರಿದರಲ್ಲಿ ನನ್ನ ಇಂದುಗಳ ಕುರೂಪಕ್ಕೆ ಕಾರಣ ಹುಡುಕುವ ಬಗ್ಗೆ ನನಗೆ ಅಸಹ್ಯವೆನಿಸಿತು. ಅಂದಗೆಡಿಸಿಕೊಂಡ ವರ್ತಮಾನ ನನ್ನದು, ಅಂದಗೆಡಿಸಿದ್ದು ನಾನು, ಮತ್ತೊಮ್ಮೆ ಅಂದವಾಗಿಸಲು ಸಾಧ್ಯವಿರುವುದಾದರೆ ಅದೂ ನನಗಷ್ಟೇ ಅನಿಸಿತು.
ಅಷ್ಟೇ...ಏನೋ ಅದಮ್ಯ ಚೈತನ್ಯ ಒಳಹೊಕ್ಕಂತಾಯಿತು. ಇದು ಈ ಗಳಿಗೆಗೆ ಅಗತ್ಯವೂ ಹೌದು ಮತ್ತು ಪ್ರಶಸ್ತವೂ ಹೌದು. ಮತ್ತೇನೂ ಯೋಚಿಸಲಿಲ್ಲ. ಹಾಗಾಗಿ ಈಗ ನಾನು ಮತ್ತೆ ನನ್ನ ಇಂದನ್ನು ಸಿಂಗರಿಸುವ ಕಾಯಕದಲ್ಲಿದ್ದೇನೆ. ಪ್ರಯತ್ನಿಸುತ್ತೇನೆ
ಚುರುಕು ಕಳಕೊಂಡಿರುವ ಕೈ, ಮಂದವಾಗಿರುವ ಸೌಂದರ್ಯದ ಪ್ರಜ್ಞೆ, ಮಂಕಾಗಿರುವ ಮನಸುಗಳ ಜೊತೆ ಕ್ರಮಿಸಬೇಕಾದ ಹಾದಿ ತುಂಬಾ ಉದ್ದವಿದೆ, ದುರ್ಗಮವಾಗಿರುವಂತೆಯೂ ಇದೆ, ಆದರೆ ನಿಷ್ಠಾವಂತ ಪ್ರಯತ್ನ ಮತ್ತು ನನ್ನ ಇಂದು ನನ್ನ ಕೈಯ್ಯಲ್ಲೇ ಇದೆ, ಅಲಂಕರಿಸಲು ಬೇಕಾದ ಆಸಕ್ತಿಯೂ ತಾಜಾಸ್ಥಿತಿಯಲ್ಲಿದೆ. ಈಗ ಮತ್ತು ಇನ್ನು ಮುಂದೆ ಅನ್ಯರ ನೋವು ಸಂಕಟಗಳಿಗೆ ಒದಗುವ ಮಹಾನತೆಯನ್ನು ಕಳಚಿಕೊಂಡು ಆ ಜಾಗದಲ್ಲಿ ನನ್ನ ಉದ್ಧಾರಕ್ಕೆ ಬೇಕಾಗುವ ಪುಟ್ಟಪುಟ್ಟ ಪ್ರಯತ್ನಗಳನ್ನಿಡಲು ಬಯಸುತ್ತೇನೆ.
   ಹಾಗಾಗಿ ನಿನ್ನ ಮೇಲಿನ ನನ್ನ ಪ್ರೀತಿಯನ್ನು ಇಷ್ಟು ಹೊತ್ತೂ ಬಗೆಬಗೆಯ ರೂಪಗಳೊಳಗೆ ಹೊಗಿಸಿ, ನನ್ನ ಹಲವು ನಿರೀಕ್ಷೆಗಳ ಮಟ್ಟಕ್ಕದನ್ನೇರಿಸಲು ಒತ್ತಾಯಿಸಿ ಸತಾಯಿಸಿದ್ದು ಸಾಕು, ಇನ್ನು ಕೆಲ ಹೊತ್ತು ಅಲ್ಲೇ ನನ್ನೆದೆಯ ತೊಟ್ಟಿಲಲ್ಲಿ ಲಾಲಿ ಹಾಡಿ ಮಲಗಿಸುತ್ತೇನೆ. ಅದು ವಿಶ್ರಾಂತಿಯಿಂದೇಳುವಾಗ ನನ್ನ ಇಂದು ಸುಂದರವಾಗಿ ಅಲಂಕರಿಸಲ್ಪಟ್ಟಿರುತ್ತದೆ, ಆ ಅಂದದಲ್ಲಿ ಅದು ಮುಕ್ತವಾಗಿ ಬಾಳಲಿ.

Saturday, June 15, 2013

ಮನಸ ಹಕ್ಕಿ


-------------------

ಗಿರಿಕನ್ಯೆಯ ಮನ ದಿಕ್ತುದಿಯಲಿ

ನಿರೀಕ್ಷೆ ಬೀಜದ ನಿರಾಸೆ ಫಲದ ಮರದ ಹಕ್ಕಿ,

ಅದರ ಕೂಗೆದೆಯ ಸೀಳಿದೆ

ಹೋದವನ ಸಂತತಿ ಅಲ್ಲೆಲ್ಲೋ

ವೃಧ್ಧಿಯಾದ ಜಯಜಯಕಾರಕೆ

ಅತ್ತ ಇಣುಕಿದ ವಿರಹ ಹೂವ ಕಂಪು ಜೊತೆ.

ಓಲೆಗುತ್ತರ ಗಾಳಿಯೇ ತಂದಿದೆ

"ಯಾವ ಬದಲಾವಣೆಗಳುತಿರುವೆ,

ನಾನೆಂದು ನಿನ್ನವನಿದ್ದೆ?

ನೀನಷ್ಟೇ ನನ್ನವಳಿದ್ದೆ,

ಮತ್ತಿಂದೂ ಅದು ಹಾಗೇ ಇದೆ.."

ಮುಗುದೆ ನಗುತಾಳೆ, ಮತ್ತಳುತಾಳೆ

ಬರದವನ ಗುಂಗಲಿ ಕಣ್ಮುಚ್ಚಿದ ನಡೆ,

ಇನ್ಯಾವಗೋ ಎದುರಾಗುತಾಳೆ,

ಇವ ತಾಗುತಾನೆ, ಇವಳೊದಗುತಾಳೆ

ಮತ್ತಳುತಾಳೆ, ಮಳೆಯಾಗುತ್ತದೆ...

ಮೈಗುಡುಗೊರೆ ಇವನಿತ್ತ ಹಸುರು ಸೀರೆ

ಮಧ್ಯೆ ಮಧ್ಯೆ ಬಗೆಬಣ್ಣದ ಹೂ ಚುಕ್ಕಿ..

ಮನಸು ಮಾತ್ರ ದಿಕ್ತುದಿಯ ಅದೇ ಮರದ ಹಕ್ಕಿ..
"ನಾ ಹಾಡದ ಹಾಡಿಗೆ ನಿನ್ನೆದೆ ಲಯವಿತ್ತುದೇಕೆ?" ಎಂದೆ..
"ನಾ ನಿನ್ನವ, ನನ್ನೆದೆ ನಿನದು, ಎದೆಬಡಿತವೂ ನಿನದು,
ಲಯ ಮಾತ್ರ ಜಗದಾಸ್ತಿ, ಪ್ರಶ್ನೆ-ಮಿತಿಗದು ಹೊರತು" ಎಂದ...

ಕನಸೇನಾದಾವು?!

-----------------
"ಮುಟ್ಟಬೇಡ" ಅಮ್ಮನ ಕೂಗು,
ಮುಟ್ಟುವೆನೆಂದು ರಚ್ಚೆ ಹಿಡಿವ ನನ್ನ ಅಳು
ಕನಸಾಗಿ ಬಂದು ಕಾಡುತ್ತವೆ..

ಮುದ್ದೆ ಮಾಡಿ ಅಮ್ಮ ತೋಡಿಗೆಸೆದ
ಕಲೆಗೆ ಕಳೆಗಟ್ಟಿದ ಕೆನೆಬಣ್ಣದ ಪ್ರೀತಿಯ ಅಂಗಿ
ಮತ್ತೆ ಮತ್ತೆ ಕನಸಾಗಿ ಬಂದು ಕಾಡುತ್ತದೆ...

ಮೂಲೆಯ ಉಪ್ಪರಿಗೆ ಮೆಟ್ಟಿಲ ಕತ್ತಲಲಿ,
ಅಜ್ಜನ ಪೂಜೆಯ ಘಂಟೆ ನಿಲ್ಲುವವವರೆಗೆ
ತಡೆಹಿಡಿದ ಭಯದುಸಿರ ಕನಸಿಗೆ ಕಣ್ಣಗುಡ್ದೆ ಮೇಲು...

ಹೊಟ್ಟೆ ನೋವಿನ ತಳಮಳ ಶಮನಕೆ
ಗೋಡೆಗಂಟಿ ಮುರುಟಿ ಮಲಗುವಾಸೆ
ಮಲಗಲು ಅಲ್ಲದ ಹೊತ್ತೆನುವ ಅಪ್ಪನ ದನಿಯ ಕನಸು..

ಮಾತ್ರೆಗೆ ಬಗ್ಗದ ಆ ದಿನದಾರ್ಭಟ
ಮನೆಯೆಲ್ಲ ಶುಭಗಳಲೂ ಹಾಜರೀವ ಇರಿಸುಮುರುಸು
ಕನಸಲೂ ರಕ್ತ ಒಸರುವಂತೆ ಚಿವುಟುವುದು....

ಬಗೆಬಗೆ ಬಣ್ಣದ ಹೊದಿಕೆಯಡಿಯ ಪ್ಯಾಡ್
ಒಗೆದೊಣಗಿಸುವ ಅದೇ ಮಾಸಿದ ಬಟ್ಟೆತುಂಡು
ಕನಸಲಿ ಒಂದನೊಂದು ಬೆನ್ನಟ್ಟಿ ಓಡುವವು..

ಮಿತಿಮೀರಿದ ಬೆವರು, ಮೈಬಿಸಿ, ಆತಂಕ
ಹೀಗೇ ಇನ್ನೇನೋ ವಿನಾಕಾರಣ ಕಾಯಿಲೆಗೆ
ಮುಟ್ಟು ನಿಲ್ಲುವುದರಾರಂಭ ಎಂದರಾಕೆ..

ನಾ ಕೇಳಿದ್ದಿಷ್ಟೇ...
"ಕನಸುಗಳಿನ್ನು ಕರಗಿಯಾವೇ;
ಇಲ್ಲ ಗಾಢವಾದಾವೇ?!"

ಅಲ್ಲೂ ಅದೇ... ಇಲ್ಲೂ ಅದೇ

ವಿಗ್ರಹದ ಮುರಿದ ಮೂಗು-ಮೊಲೆಗಳಲ್ಲಿ
ಘಜನಿ, ಘೋರಿ ಹಿಡಿದ ಖಡ್ಗ, ಕುದುರೆಯ ಹೇರವ
ಕ್ರೌರ್ಯದ ಕೇಕೆ ವಿಜೃಂಭಿಸಿದವು.

ಶೃಂಗಾರ ಭಾವದುತ್ಪತ್ತಿಯ ಭಂಗಿ
ಕಲ್ಲಲಿ ಕಲ್ಲಾದಂತೆ ಕಂಕಣ್ಣಿನೆದೆಯಲಿ
ಶೋಕ ಕ್ರೋಧವಷ್ಟೇ ಸ್ಫುರಿಸುವವು.

ಸಂಜೆ ಟೌನ್ ಹಾಲ್ ನೆದುರು ಲಿಪ್ಸ್ಟಿಕ್ ನಡಿ
ಹೂತುಹೋದ ಮನೆಕೆಲಸದವಳ ನಗುವಲ್ಲಿ
ನನ್ನಪ್ಪ, ಅಣ್ಣ, ಗಂಡ, ಮಗನ ಮೀಸೆಯೂ,
ಕಂಡೂ ಕಾಣದಂತಿಣುಕುವವು!

ಹೆಗಲಲೊಂದು ಕಂಕುಳಲೊಂದು ಹೊತ್ತು
ನಸುಕಲಿ ನನ್ನೆಡೆ ನಡೆದುಬಂದ ಹೆಣ್ತನವೂ
ಹಾಗೇ ಇತ್ತು, ಕಲ್ಲಮೂರ್ತಿಯಂತೆ..

ಮಾತು-ನಗುವ ಕೆತ್ತಿ ತೆಗೆದ ಖಡ್ಗವಲ್ಲದ
ಆ ಪುರುಷತ್ವವೂ ಅವನ್ನೇ ಸ್ಫುರಿಸಿದ್ದು
ಆಶ್ಚರ್ಯವೇನಲ್ಲವೆನಿಸುತ್ತದೆ.


Friday, June 14, 2013


ಪಂಚಮಿಯ ಚಂದ್ರನ ತೋರಿಸಿ ಅಂದೆ.."ಥೇಟ್ ನಿನ್ನಂತೆ"
ತುಂಡುಚಂದ್ರನಿಂದಿಳಿದು ಮುನಿಸವನ ಕಣ್ತುಂಬಿತು...
ಮುತ್ತಿಕ್ಕಿ ಹೇಳಿದೆ... "ಕಣ್ಬಿಟ್ಟು ನೋಡೋ ದೊರೆ,
ಉರುಟು ಚಂದ್ರನ ತುಂಡು ಬಿಳಿಯಲಿ ಸೊಂಪಿದೆ,
ಇನ್ನರ್ಧಕ್ಕಿಂತ ಹೆಚ್ಚು ಕಪ್ಪಲಿ ಹುಣ್ಣಿಮೆಯ ಭರವಸೆಯಿದೆ..."

ಕಣ್ಣಾಮುಚ್ಚಾಲೆಯಾಟ; ಬಚ್ಚಿಟ್ಟುಕೊಂಡ, ಅರಸಹೊರಟ ಭಾವಗಳಸ್ಪಷ್ಟ..
ಕಣ್ಮುಚ್ಚಿ, ಬಿಟ್ಟು, "ಬಿಟ್ಟೇ ಬಿಟ್ಟೇ" ಅಂದದ್ದು ನೀನೆಂಬುದಷ್ಟೇ ದಿಟ
-----------------------
ಹಾಗೇ ಸುಮ್ಮನೆ... ಅವನನೊಮ್ಮೆ ಕೇಳಿದೆ- "ನಾ ನಿನಗೇನು?"
ಕಣ್ಣಲಿ ಕಣ್ಣ ನೆಟ್ಟು ಕೇಳಿದ- "ಇನ್ನೇನಾನಾದರೂ ಕಂಡಿತೇನು?!"
-----------------------------------
ಚಂದ್ರ ಅಣಕಿಸುತ್ತಿರುವಂತಿದೆ
"ನನ್ನ ಬೆಳಗುವುದವನ ಛವಿ ಅಂದೆಯಲ್ಲಾ, ನಿನ್ನ ಕತೆಯಿನ್ನೇನು".. ಅಂದನೇ?!
-----------------------------------------------
ತಳದ ತೂತು ಲೆಕ್ಕಕಿರಲಿಲ್ಲ ನೋಡು, ತುಂಬಿಸುತಲೇ ನಡೆದಿದ್ದೆ,
ಕುಂಭದ್ರೋಣ ಮಳೆಯ ಭರವಸೆಯಿತ್ತು, ಅಕಾಲ ಬರದ ಸುಳಿವೆಲ್ಲಿತ್ತು?!Thursday, June 13, 2013

ತೋಟದ ಹೂ ಕಾಯುವ ಬೇಲಿಯಲಿ ಹೂವರಳಿ ಬಿಟ್ಟಿದೆ
ಒಳಗೀಗ ಅತಂತ್ರ ಸಂತೆ, ಬೇಲಿಗೆ ದುಂಬಿಯದಷ್ಟೇ ಚಿಂತೆ...
-------------------------
ನಿನ್ನ ಕನಸಿನೂರಿನಲ್ಲಿ ನನಗೀಗ ಬಹಿಷ್ಕಾರ
ತಿರುಗಾಡ ಬಂದು ಮನೆ ಮಾಡಹೊರಟದ್ದು ತಪ್ಪಲ್ಲವೇ?!

ಚದುರಂಗದಾಟ ಶುರುವಾಗಿದೆ, ನನ್ನ ನಿನ್ನ ಕೈಲೇನಿದೆ, ಬರೀ ದಾಳ
ಆರೇ ಮುಖದಿ ಹಂಚಿಕೆಯಾದ ನಡೆಯಲಿ ನೂರು ಬವಣೆಯ ಗಾಳ...
-------------------------------------
ಎದುರಿನ ನಡೆಯೇನಿದ್ದರೂ ದಾಳ ಚಿಮ್ಮುವದಷ್ಟೇ ನನ್ನ ವಶ
ಪ್ರಕಟ ಮುಖದಿ ಆರರಲೊಬ್ಬ ವೈರಿಯ ಪ್ರತಿಷ್ಠಾಪನೆ ಕಾಲದ ಕೆಲಸ
--------------------------------------------------
ರೋಗ ಹತ್ತಿಸಿಕೊಂಡ ಭಾವ ನನ್ನದೇ
ತೊರೆದು ಬಿಟ್ಟಾಕ್ಷಣ ನಾ ನಿರೋಗಿಯೆಂದರ್ಥವೇ?!

Wednesday, June 12, 2013

ಪಡಿಮೂಡಿಸಿಕೊಂಡ ಬಿಂಬ ಕಪ್ಪುಬಿಳಿ ಚಿತ್ರ ; ಚಂದವೇ ಇತ್ತು.
ರಂಗು ತರಲು ಮಳೆಬಿಲ್ಲ ಕಡೆಹೋದ ಕಾಲದೆಲ್ಲಾ ರೆಕ್ಕೆ ಮುರಿದುಬಿದ್ದವು.
-----------------------------
ಕೈ ತಪ್ಪಿ ಹೋದ ಸೋಲಿನ ಕಣ್ಣೀರು ಆಸೆಗರಿಕೆ ಹಬ್ಬಿಸುವ ಮಳೆಯಾಯಿತು...
ಕೈಗೂಡಿದ ಸಮಾಧಾನದ ಉಸಿರು ನಂಬಿಕೆದೀಪವಾರಲು ನೆಪವಾಯಿತು...
----------------------------------
ನೀನಿಲ್ಲದಿದ್ದರೇನಂತೆ, ನನ್ನ ತಪ್ಪು ನನ್ನೆದುರೇ ಇದೆ.
ಕಣ್ಬಿಟ್ಟಾಗಲೆಲ್ಲ ನಿನ್ನ ವೇಷವನೇ ತೊಟ್ಟಿರುತ್ತದೆ.

ನಿರಾಶ್ರಿತ

ಪುಸ್ತಕದೆರಡು ಪುಟದ ನಡು
ಭದ್ರ ನವಿಲುಗರಿ, ಳೆಯೊಂದು
ಕಳಚಿಕೊಂಡು ಕಾಲದ ಸೊತ್ತಾಗಿ
ದೂರದೂರ, ಎತ್ತರೆತ್ತರ....

ಗರಿಗೂ ಅರಿವಿಲ್ಲ, ಪುಸ್ತಕಕೂ...
ಲೋಕಕೂ ಗೊತ್ತಿಲ್ಲ, ಗಾಳಿಗೂ...
ಒಂಟಿ ಎಳೆಗಷ್ಟೇ ಗೊತ್ತು
ಬೇರ್ಪಟ್ಟದ್ದು, ಅಂಟಿಕೊಂಡದ್ದು..

ಹೊರಗಿಣುಕಿದ ಗಳಿಗೆ ಕಣ್ಕಟ್ಟು
ಗ್ರಹಿಸುವ ಮುನ್ನ ಕಾಲ್ಕಿತ್ತಿತ್ತು.
ಒಳಗೂ ಹೊರಗೂ ಒಂದೇ ಮಾಯೆ
ಇದೆಯೆಂದರಿದೆ, ಇಲ್ಲವೆಂದರಿಲ್ಲ..

ಮೇಲೇರುವ ನಡೆ, ಗುರಿ ಕಾಣುತಿಲ್ಲ.
ಸೆರಗ ಕೆಂಡ, ಕಾಲ ಹೊತ್ತಾಡಿಸುತಿಲ್ಲ.
ಪುಸ್ತಕ ಮುಚ್ಚಿದೆ, ವಾಸ್ತವ ದೂಡಿದೆ
ಸ್ವಾತಂತ್ರ್ಯ ಭಯ ಹೆತ್ತು ಕಣ್ಮುಚ್ಚಿದೆ

Tuesday, June 11, 2013

ಮುಸಲಧಾರೆಯೂ ನಿರಂತರ ತುಂತುರೂ
ಹೊಸತುಡಲು ಮಣ್ಣನೊಲಿಸಿದಂತೆ ಕಲ್ಲನೊಲಿಸಲಾಗಲಿಲ್ಲ
ಕಲ್ಲು... ಒಳಗಿಳಿಯಗೊಡದೆಂದು ಕೈ ಚೆಲ್ಲಿದವು
ಒರಟು ಮೈಯ್ಯನೇ ಮುತ್ತಿಕ್ಕಿ ಮೆದು ಪಾಚಿ ಒಳಗಿಳಿಯದೆಯೂ
ನಗ್ನ ಕಲ್ಲಿಗೆ ಪಚ್ಚೆಯುಡಿಸಿಯೇ ಬಿಟ್ಟಿತು.

ಹೂವಂತಿರದ ಹೂವು

ನೇರ ನೆಲದಿಂದುದಿಸಿದದ ಬರೀ ಬಿಳಿ ನಿರ್ಗಂಧಪುಷ್ಪ ನಾನು
ಕಾಂಡ ಎಲೆ ಕೊಂಬೆ ತೊಟ್ಟುಗಳ ಬಲವಿಲ್ಲ
ಬಣ್ಣವಷ್ಟೂ ಇದ್ದರೂ ತೋರುವ ಪರಿಯರಿತಿಲ್ಲ
ದಪ್ಪ ಒರಟು ಪಕಳೆ, ಮೃದು ಸೆಳೆತವಿಲ್ಲ
ಹಾಂ...ಎದೆಯಷ್ಟೇ ಕೆಂಪಿದೆ, ಸೆಳೆವ ನಯನಾಜೂಕಿಲ್ಲ..
ಅರಳಿದ್ದಷ್ಟೇ ಗೊತ್ತು, ಮೊಗ್ಗಾಗಿರಲಿಲ್ಲ,
ಮುದುಡುವುದೂ ಗೊತ್ತಿಲ್ಲ...
ಇನ್ನೇನಿದ್ದರೂ ಉಳಿದರೆ ನೇರ‍ ಒದಗುವುದು,
ಒದಗುವುದು, ಮತ್ತೊದಗುವುದು...
ಇದಷ್ಟೇ ಗೊತ್ತಿರುವ ,
ದುಂಬಿ ಕಾಡದ, ಹೆಣ್ಣು ನೋಡದ
ಚೆಲುವಾಗದ, ಮಾಲೆ ಸೇರದ,
ಹಾಡಾಗದ ಪಾಡು..
ಹೆಸರಿಗಷ್ಟೇ ಪುಷ್ಪ ನಾನು

ಊರಿಗೆ ಬೆಂಕಿ ಬಿದ್ದಾಗ ಬಾವಿಯ ಹುಡುಕಾಟ


ಗಾಳಿಗಿಂತ ಹಗುರ ಮತ್ತು ಕಲ್ಲಿಗಿಂತ ಭಾರ
ಹೂವಿನಂತೆ ಸೊಗಸು ಮತ್ತು ಮುಳ್ಳಿನಂತೆ ಚೂಪು
ಭೂಮಿಯಂತೆ ಮೌನ ಮತ್ತು ಗುಡುಗಿನಂತೆ ಜೋರು

ಒಮ್ಮೊಮ್ಮೆ ಪ್ರತ್ಯಕ್ಷ ಮತ್ತೊಮ್ಮೆ ಅಡಗಿದಂತೆ
ಒಮ್ಮೊಮ್ಮೆ ಅರ್ಪಣೆ ಒಮ್ಮೊಮ್ಮೆ ಹೀರುವಂತೆ
ಒಮ್ಮೊಮ್ಮೆ ಉತ್ಕರ್ಷ ಒಮ್ಮೊಮ್ಮೆ ಪಾತಾಳಮುಖಿ

ಅವಲಂಬನೆಯ ನೆರಳೇ ನಿರಾಕರಣೆಯಾದಂತೆ
ಅನುನಯದ ದನಿಯೇ ಆಪಾದನೆಯೆಂಬಂತೆ
ಸಾಮೀಪ್ಯ ಬಯಸುವ ವಿಮುಖತೆಯಂತೆ

ಬರೀ ಗೋಜಲಾಗಿರುವದರ ಬೆನ್ನಟ್ಟಿ
ಇಲ್ಲಿಯವರೆಗೂ ಬಂದಾಯ್ತು,
ಮುಟ್ಟಿದ ಭ್ರಮೆಗೆ ನೈವೇದ್ಯವಾಗಿದ್ದಾಯ್ತು..

ಈಗೊಂದು ಪ್ರಶ್ನೆ..
ನಾ ಬೆನ್ನಟ್ಟಿದ್ದೇನನ್ನು,
ನನ್ನ ಮುನ್ನಡೆಸಿದ್ದೇನು,
ಮುಟ್ಟಿದ್ದೇ ಹೌದಾದರೂ, ಅಲ್ಲವಾದರೂ
ತಾಕಿದ ನಿಜವೇನು???

Monday, June 10, 2013

ನಿನ್ನಕ್ಷರಗಳು..

ಆ ಹೊಸಿಲಿಂದ ಹೊರನಡೆವಾಗ
ಅಪ್ಪನಿತ್ತದ್ದೊಂದೇ ಪ್ರತ್ಯಕ್ಷ ಆಸ್ತಿ
ಅದೇ ನನ್ನ ಜಾತಕದ ಪುಸ್ತಕ..
ನೂರು ಬಾರಿ ಪ್ರತಿಯಿಳಿಸಿಕೊಂಡ
ಜನ್ಮಕುಂಡಲಿಯ ಪುಟ
ಆ ಬವಣೆ ಕಳೆಯಿತೆಂಬಂತೆ
ನನ್ನ ಮದರಂಗಿಯ ಕೈಯ್ಯಲ್ಲಿ
ನಿರಾಳ ನಿಟ್ಟುಸಿರಿಟ್ಟಿತ್ತು...

ಜೋಪಾನ ಧಾರೆಸೀರೆಯ ಗಂಟಲಿತ್ತು
ಒಂಟಿಯಾಗಿತ್ತು...
ಇಂದು ನೀ ಬರೆದ ನನ್ನ ಹೆಸರಿನಕ್ಷರದ ಹಾಳೆ
ಜಂಟಿಯಾಗ ಬಂದಿದೆ...
ನಿನ್ನೆ ನಾಳೆಯ ಹೊತ್ತುದರ ಕೈಗೆ
ನನ್ನ ಇಂದನಾವರಿಸಿದ ಆ ಹಾಳೆಯೊಪ್ಪಿಸಿ ಬಂದೆ
ಮರವನಪ್ಪಿ ಬಾಳುವ ಬನ್ನಳಿಗೆಯಂತೆ
ಅಲ್ಲೇ.. ಹಾಗೇ... ಒಂದಕ್ಕೊಂದು ಬೆಸೆದಾವು

ನಾಳೆ ಸುಡುವಾಗ ಜಾತಕವನೂ ಸುಡುವರಂತೆ..
ಹುಟ್ಟುಗುಣ ನಿನ್ನಕ್ಷರದ ಹುಚ್ಚು
ಸುಟ್ಟರೂ ಹೋಗದೆಂಬರು
ಸುಟ್ಟರೇನು ಸುಟ್ಟಾರು.. ನನ್ನ ಹೊರಗ ತಾನೇ?
ನಿನ್ನಕ್ಷರದ ಪ್ರೀತಿ ನನ್ನೊಳಗು.
ಮತ್ತದು ನಿನ್ನೊಳಗೇ ಭದ್ರವಾಗಿರುವುದಲ್ಲಾ......

-----------------------

ಹೆಚ್ಚೇನೂ ಅಲ್ಲವೆಂದೆಯಾ...
ನಾ ನಾನಾಗುಳಿದಿಲ್ಲ ಒಲವೇ.....
ಸ್ವಾನುಕಂಪ ಸ್ವವಿಮರ್ಶೆಗಳು ಜೀವಮಾನವಿಡೀ
ಸಾಧಿಸಲಾಗದ್ದನ್ನ ನೀನಾಗಲೇ ಮಾಡಿಬಿಟ್ಟಿರುವೆ!!!
------------------------------------------
ಓದು ಪ್ರಭಾವ ಸ್ವೀಕಾರ ಅನುಕರಣೆಗಳನ್ನಲ್ಲ,
ಒಳಗೆ ಪ್ರೇಮವನಷ್ಟೇ ಬಂಡವಾಳವಾಗುಳಿಸಿತು.....
ಬರೆಯಹೊರಟಾಗ ಕವನ, ಕಾವ್ಯ, ಕತೆಗಳಲ್ಲ,
ಬಗೆಬಗೆಯ ಆಕಾರದಲದೇ ಅಕ್ಷರವಾಗಿಳಿಯಿತು....

ಇದೋ...

ಕಿರಿದಾಗಲಾರೆ ಎಂದೆಯಾ ಇದೋ..
ಎದುರೇ ಇದ್ದೂ ನನ್ನ ಕಾಣದಷ್ಟಾಗಿರುವೆ

ಛಾಪೊತ್ತಲಾರೆ ಎಂದೆಯಾ ಇದೋ..
ನಿನ್ನೆಲ್ಲ ಸಾಧನೆಯಲೂ ನನ್ನ ಕುರುಹಿದೆ

ಬೆಳೆಯಲಾರೆ ಎಂದೆಯಾ ಇದೋ...
ನಿನ್ನೆತ್ತರದ ನೆರಳನಾಕ್ರಮಿಸಿರುವೆ.

ಉಳಿಯಲಾರೆ ಎಂದೆಯಾ ಇದೋ...
ನಿನ್ನೆಲ್ಲ ಕ್ಷಣಗಳೊಂದು ಮೂಲೆಯಲಿರುವೆ

ನಿಜ....ನೀನಿಲ್ಲದೆಡೆ ನನದೇನೂ ಇಲ್ಲ,
ಮತ್ತದು ನನಗೆ ಬೇಕಿಲ್ಲ ದೊರೆಯೇ,

ಇದೋ... ನಾ ಗುರಿಯ ಮುಟ್ಟಿರುವೆ
ನೀನಿರುವರೆಗೆ ನಾನಿದ್ದೇ ಇರುವೆ.

---------------------------------------

Sunday, June 9, 2013

ಅರ್ಥ ಹುಡುಕುತ ಸಾಗುವ ನಡೆಗೆ ನೂರು ಕಾಲು
ಎದುರು ನೋಡಿದ್ದಲ್ಲಿ ಕಾಣದ ಹತಾಶೆಗೆ ಮಾತ್ರ ಕುಂಟುಕಾಲು
-------------------------
ನಾನೇನು ಹೇಳಿದೆ?
ನೀನೇ ಹೇಳಿಸಿದ್ದು...
ನಿನಗಿಷ್ಟವಾದರೂ ಆಗದಿದ್ದರೂ
ನಾ ನಿನ್ನೆದುರಿನ ಬಯಲಾದಾಗಿನಿಂದ
ನೀ ನನ್ನೆದುರಿನ ಬಂಡೆಯಾದಂದಿನಿಂದ
ನನ್ನಲಿರುವುದು ನೀ ಹೊರಡಿಸುವ
ಪ್ರತಿಧ್ವನಿಯೇ ಹೌದು...

-------------------------------

ನಿನ್ನಿಂದ ನಿನಗೆ.....

ತಿರುಚಿದ ಅಕ್ಷರಗಳನ್ನು ನೀ ಕಳಿಸಿದೆ,
ನಾ ಹಾಡುವವಳು, ರಾಗ ಸಂಯೋಜಿಸಿದೆ.
ಹಾಳೆಯಿಂದೆದೆಗೆ ಇಳಿದವುಗಳು
ಪ್ರೇಮದಲದ್ದಿ ರಾಗರಂಜಿತವಾಗಿ
ಕೋಗಿಲೆ ಕಂಠಕಷ್ಟು,
ದುಂಬಿ ರೆಕ್ಕೆಬಡಿತಕಷ್ಟು,
ತೊರೆಯ ಹರಿವಿಗಷ್ಟು,
ಮಲಯಮಾರುತಕಷ್ಟು,
ಕಂದನ ಕಾಲ್ಗೆಜ್ಜೆಗಷ್ಟು,
ಕರುಕೊರಳ ಗಂಟೆಗಷ್ಟು..
ಇಳಿದವು ಮತ್ತು ನೇರ
ಜಗದ ಮೂಲೆಮೂಲೆ ತಲುಪಿದವು
ಆ ಜಗದಲೇ ನೀನಿರುವುದಾದರೆ,
ನಿನ್ನನೂ ನೇರ ತಲುಪಿರಬಹುದು..
ಅಚ್ಚರಿಯೇನಿಲ್ಲ ಬಿಡು...
ಅವು ತಲುಪಲಾರದ ಸ್ಥಳವಿಲ್ಲ,
ಯಾಕೆಂದರೆ,
ಮೂಡಿಸಿದ್ದು ನೀನು, ಹಾಡಿದ್ದು ನಾನು....

ಸಿದ್ಧಿಸಿತೆಂದು ಕುಣಿದಾಡಿದವನ ಮನೆದೇವರ

ಪಾದದಲಿ ಹೂವ ಬದಲು ದೂರುಗಳ ಸರಮಾಲೆಯಿತ್ತು.
--------------------------------------
ನೆತ್ತರ ನೆಕ್ಕಿಯಾದರೂ ಇಂಗ ಬಯಸುವ ದಾಹವೇ,
ನಿಮಿತ್ತ ಮಾತ್ರವಷ್ಟೇ ನೀನು, ಒಡಲು ನನ್ನದೇ.
---------------------------------
ಸಿಡಿಲ ಹೊತ್ತ ಬೆಳಕ ಬಳ್ಳಿಯೇ ,
ಬಯಲಲಿದ್ದವರ ಎಚ್ಚರಿಸುವುದ ನೀ
ಮರೆಯಲಿದ್ದರೂ ಮರೆಯುವುದಿಲ್ಲವಲ್ಲೇ?!
-----------------------------
ಇನ್ನೂ ದೋರ್ಗಾಯಿಯದು.. ಕಿತ್ತು ಕಡಿದರೆ,
ಅಲ್ಪ ಸಿಹಿ ತುಂಬ ಹುಳಿಯಷ್ಟೇ ನಿನ್ನ ಪಾಲು
ಬೆಳೆಯಲಿ ಬಿಡು ಬುಡದಲೇ ನಿಂತು ಕಾದರೆ,
ಕಳಿತ ಭಾರಕ್ಕೆ ಕಳಚಿ ನಿನ್ನ ಪದಕೇ ಉದುರೀತು

ಗಾಳಿ ಬೀಸಿದ್ದೇನೋ ನಿಜ, ಆದರೆ
ಬೀಳಿಸಿದ್ದು ನೀನೇ ಎಂಬಂತಿತ್ತು
ಹಸಿರು ಹಳದಿಯಾದದ್ದೇನೋ ನಿಜ, ಅದರೆ
ಉಸಿರೆನಿಸಿದ್ದಿಂದು ಹೊರೆಯಾದಂತಿತ್ತು
-------------------------------------------------
ಭಾವವೆಲ್ಲಿ ಭಾರವಿತ್ತು?! ಅಂತಃಕರಣ ಬಿಟ್ಟೇನಿರಲಿಲ್ಲ.
ಅನುವಾಗಿ ತಲುಪಿದೆಡೆ ಸರಿಯಿರಲಿಲ್ಲ,
ಭರ್ತಿಯಾಗಿದ್ದು ಅಲ್ಲಿ ಅಣುವಿಗೂ ಜಾಗವಿರಲಿಲ್ಲ....
------------------------------------
ಎಲ್ಲೂ ಎಡವಲಿಲ್ಲ, ಬೀಳಲಿಲ್ಲ, ಏನೂ ತಾಗಲಿಲ್ಲ
ಗಾಯ ಮಾತ್ರ ಎರಡೂ ಕಡೆ ಮೂಡಿದೆ
ಅಲ್ಲಿಯ ಮುಲಾಮು ಇಲ್ಲಿ, ಇಲ್ಲಿಯದು ಅಲ್ಲಿ.
ಹಚ್ಚುವ ಕೈಗಳಷ್ಟೆ ಮುನಿಸಿಕೊಂಡು ಕೂತಿವೆ
---------------------------Saturday, June 8, 2013

ನೇತುಹಾಕಿದ ಮೊಳೆಯಾಧಾರ ನೆಟ್ಟಗಿದೆ ಚಿತ್ರಪಟಕೆ
ಮೊಳೆಯನಾಧರಿಸಿದ ಗೋಡೆಯಲ್ಲಿನ ಬಿರುಕು ಮರೆಯಲ್ಲಿದೆ
-------------------------------
ಸ್ವಲ್ಪ ಹಿಂದುಮುಂದಿರಬಹುದು ಸಾವ ಸಾರುವ ನಡಿಗೆಯಲ್ಲಿ
ಕಡಿಯ ಬಂದ ಸೊಳ್ಳೆಗೂ ನನಗೂ ಹೆಚ್ಚು ಅಂತರವಿಲ್ಲ.
------------------------
ಇಲ್ಲಿ ಮಹಾತ್ಮನಾಗುವುದಲ್ಲ, ನಗುವಾಗುಳಿವುದು ಕಷ್ಟ
ಮಹಾನತೆಯನಲ್ಲ, ನಗೆಯ ಮೆಟ್ಟುವರೇ ತುಂಬಿರುವ ಜಗವಿದು
---------------------------
ಇಜ್ಜಲಿನ ತುಂಡೊಂದು ಕಪ್ಪೆಂದರೆ ತಾನೇ ಎಂದು ನಿರೂಪಿಸಹೊರಟಿತ್ತು
ಎಲ್ಲರನೂ ಒಪ್ಪಿಸಿತು, ಕತ್ತಲಿಗೆ ತನ್ನ ತೋರಲಾರದೆ ಸೋಲೊಪ್ಪಿತು.

ಕೈಯೇನೋ ತುಂಬಿತು

ಇಲ್ಲೇ ಎಲ್ಲೋ ಅಂದೊಮ್ಮೆ
ಬಿದ್ದಿತ್ತೊಂದು ತುಣುಕು
ಮೆತ್ತಿ ಕೆಸರು ಅಂಕುಡೊಂಕು
ಕೈಗೆತ್ತಿಕೊಂಡೆ, ಕಾಲೊಸು.

ಹಾರುಹಾರುತ್ತ ಹಕ್ಕಿಯುದುರಿಸಿದ
ರೆಕ್ಕೆಪುಕ್ಕ, ಕೈಗೆತ್ತಿಕೊಂಡೆ..

ಪೊರಕೆಯುದುರಿಸಿದ ಅರ್ಧಂಬರ್ಧ
ಚೂಪಿರದ ಕಡ್ಡಿ, ಕೈಗೆತ್ತಿಕೊಂಡೆ...


ಮಾಂಸಲ ತಿರುಳು ತಿಂದುಗುಳಿದ
ಗಟ್ಟಿ ಮಾವಿನಗೊರಟು, ಕೈಗೆತ್ತಿಕೊಂಡೆ..

ಆಟಿಕೆಯ ಒಳಗಿಟ್ಟು ರಕ್ಷಿಸಿದ ಖಾಲಿ
ಚಿತ್ರದ ರಟ್ಟಿನ ಡಬ್ಬ, ಕೈಗೆತ್ತಿಕೊಂಡೆ...

ಮತ್ತೇರುವಂತೆ ಕುಡಿದು ರಿಕ್ತವಾಗಿಸಿದ
ಅವಳಾಕಾರದ ಕುಪ್ಪಿ, ಕೈಗೆತ್ತಿಕೊಂಡೆ...

ಮೆತ್ತನೆ ಕಾಲ ತೊಡರಿತು ಹೂವೊಂದು
ಎರಡೂ ಕೈ ಚಾಚಿದೆ
ಕೈ ತುಂಬಿ ಹೋಗಿತ್ತು
ಬೋಳು ತುರುಬು ಅಣಕಿಸಿತು.


Friday, June 7, 2013

ಮಾತು, ಮೌನ

ನಾಳೆ ಅನಿಶ್ಚಿತವಿದ್ದಾಗಲೂ,
ಇಂದಿನ ಸಂಧಿಗ್ಧತೆ ತಂದದ್ದಾದರೂ,
ಇತ್ತೀಚೆಗೆ ಮಾತಿಗಿಂತ ಮೌನ ಪ್ರಿಯವೆನಿಸುತ್ತಿದೆ.

ಯಾಕೆಂದರೆ, ಬೆಳ್ಳಿ ಬಂಗಾರದ ಮಾತಿಗೂ ಮೀರಿ....

ಮಾತು ಮಿತಿ, ಮೌನ ವಿಸ್ತಾರ.
ಮಾತು ಸ್ಪಷ್ಟ, ಮೌನ ಸಾಧ್ಯತೆ.
ಮಾತು ನೇರ ಮೌನ ಸಮೀರ
ಮಾತು ಘಾತ, ಮೌನ ಹಿತ
ಮಾತು ಆಕ್ರಮಣ, ಮೌನ ಮಂಜುಳಗಾನ.
ಮಾತು ಚಿತ್ರ, ಮೌನ ಕಲ್ಪನೆ
ಮಾತು ಹಾಡು, ಮೌನ ಭಾವ
ಮಾತು ನಿರ್ಧಾರ, ಮೌನ ಅವಕಾಶ.
ಮಾತು ನಿವೇದನೆ, ಮೌನ ಸ್ವೀಕಾರ.

ಮಾತು ಗುರಿಯಿಟ್ಟ ಬಾಣ, ಮೌನ ಹಂಗಿಲ್ಲದ ಯಾನ
ಮಾತು ಕೆದಕುವುದು, ಮೌನ ಉರಿಶಮನದ ಲೇಪ
ಮಾತು ಬೆಳೆಸುತ್ತದೆ, ಮೌನ ಉಳಿಸುತ್ತದೆ
ಮಾತು ಸಿಂಗರಿಸುತ್ತದೆ, ಮೌನ ಪೋಷಿಸುತ್ತದೆ
ಮಾತು ತೋರಿಸುತ್ತದೆ, ಮೌನ ಒಪ್ಪಿಕೊಳ್ಳುತ್ತದೆ.
ಮಾತು ನುಡಿಯುತ್ತದೆ, ಮೌನ ಮಿಡಿಯುತ್ತದೆ.

ಹೀಗೆ....

ಮಾತು ಮುಖದ ವೈಭವ.
ಮೌನ ಒಡಲಾಳದ ಜೀವ.

ನಡೆದದ್ದ ಅಲ್ಲವಾಗಿಸುವುದು ಅಸಾಧ್ಯ


ಗೊತ್ತಿದ್ದೂ ನಡೆವುದೆಲ್ಲದರ ಭಾಗವಾಗುವುದೇಕೆ?

ಹೊಕ್ಕೊಮ್ಮೆ ಮತ್ತೆ ಹೊರಗಿನದಾಗುವುದು ಕಷ್ಟಸಾಧ್ಯ

ಗೊತ್ತಿದ್ದೂ ತೆರೆದೆಲ್ಲ ಬಾಗಿಲ ಹೊಗುವುದೇಕೆ?

ಬಂದದ್ದು ಹಾರಿ ಹೋದೀತೆಂದು ಕಳವಳಿಸದಿರು ಮನಸೇ,


ತುಂಬಿಸಲು ತೆರಕೊಂಡ ನಿನಗೆ

ಉಳಿಸಿಕೊಳಲು ಮುಚ್ಚುವುದೂ ಗೊತ್ತಿರಬೇಕಲ್ಲವೇ?

ನೂರು ಮಾತುಗಳೂ ಚುಚ್ಚಲಾರೆವೆನ್ನ

ನಾ ಹೊದ್ದಿರುವೆ ಅದೇ ಒಲವ ಕವಚವನ್ನ.

ಅಲ್ಲ, ಯಾರೂ ಇತ್ತದ್ದಲ್ಲ, ನಾ ಹಿಂದಿರುಗಿಸಬೇಕಿಲ್ಲ,

ಇದು ಸ್ವಯಾರ್ಜಿತ, ನಾ ಬಯಸದೇ ಕಳಚಿಕೊಳುವುದಿಲ್ಲ.

ನಾನಿಲ್ಲದೆಡೆ ಸ್ಫೂರ್ತಿ ಸಿಕ್ಕಿತೇ ಕೋಗಿಲೆಯೇ,


ಬಹುದೂರ ಹಾರಿ ಹಾಡಿರುವೆಯಲ್ಲಾ,

ವಸಂತವಿಲ್ಲೂ ಇದೆ, ಮಾವೂ ಚಿಗುರಿದೆಯಲ್ಲಾ..

ನಾನೇನು ಮಾಡಿದ್ದೆನೇ?! ಹೆಚ್ಚೆಂದರೆ ಅನುಕರಿಸಹೊರಟಿದ್ದೆ.

ದಟ್ಟವಾಗಿಳಿದು ನೆಲೆಯೂರಿದ್ದೆಲ್ಲವ ಅಲುಗಾಡಿಸಿತೆಂದು


ಹೊಸಗಿಡದ ಬೇರು ಕೇಳಲಾರಂಭಿಸಿದೆ,

ಸುರಿದದ್ದು ನನದೇ ರಕ್ತ, ನನದೇ ಕಂಬನಿ..

Thursday, June 6, 2013

ಸ್ನೇಹವೇ


ಇಲ್ಲವಾದರಾದೀತು ದನಿ ಸಖೀ,
ಮಾತೆಲ್ಲಿ ಹೋದೀತು?!

ಇಲ್ಲವಾದರಾದೀತು ಹಾಡು ಸಖೀ,
ರಾಗವೆಲ್ಲಿ ಹೋದೀತು?

ಇಲ್ಲವಾದರಾದೀತು ಪದ ಸಖೀ,
ಭಾವವೆಲ್ಲಿ ಹೋದೀತು?!

ಇಲ್ಲವಾದರಾದೀತು ನೋಟ ಸಖೀ,
ದೃಷ್ಟಿಯೆಲ್ಲಿ ಹೋದೀತು?!

ಇಲ್ಲವಾದರಾದೀತು ಚೌಕಟ್ಟು ಸಖೀ,
ಚಿತ್ರವೆಲ್ಲಿ ಹೋದೀತು?!

ದರ್ಪಣಗಳಾಗೆದುರಾದಾಗ
ಬಿಂಬ ಪ್ರತಿಬಿಂಬದ ವಿಂಗಡಣೆಯ ಗೋಡವೆಯೆಂತು?!

ತಿರುಗಿ ನಡೆವ ಮಾತೇ ಇಲ್ಲ,
ಅಲ್ಲಿ ನೆರಳುಗಳೂ ಕನ್ನಡಿಯಾಗೆದುರಾಗಿವೆ.

ಮಾತಲ್ಲದ ಮೌನವೂ ಅಲ್ಲದ ಸಂಚಾರವೊಂದು
ನಿನ್ನೊಳಗೆ ಮೆಲುವಾಗಿ ಸುಳಿವುದಿಲ್ಲವೇನೇ?

ನೆನಪಲ್ಲದ ಮರೆವೂ ಅಲ್ಲದ ಸ್ಮೃತಿಯೊಂದು
ನಿನ್ನೊಳಗೆ ಮನೆ ಮಾಡಿಲ್ಲವೇನೇ?

ಅರಿವಲ್ಲದ ಅಜ್ಞಾನವೂ ಅಲ್ಲದ ಸುಳಿವೊಂದು
ನಿನ್ನೊಳಗೆ ಜೀವಂತವಿಲ್ಲವೇನೇ?

ಅದೇ ಕಾಣದ, ಕೇಳದ, ಅರಿವಿಗೊಳಪಡದ
ಅನುಭೂತಿಯ ತುಣುಕು ಕಣೇ ನಾವು.

ಕತ್ತಲಲಿ ಪ್ರಕಟ, ಬೆಳಕಲ್ಲಿ ಮರೆಯಾಗೇ
ಸಾಗುವ ಮಿಂಚುಹುಳದ ಬೆಳಕು ಕಣೇ ನಾವು.

ತಿಳಿವಿನೊಳಗೂ ಹೊರಗೂ ಸದಾ ಬೆಳಗುತಲೇ
ಇರುವ ಸ್ನೇಹಪ್ರಕಾಶದ ಮೆರುಗು ಕಣೇ ನಾವು.

ಎಲ್ಲವೂ ಅಷ್ಟೇ..

ಬರೆದುದೂ ಅಷ್ಟೆ, ನುಡಿದುದೂ ಅಷ್ಟೆ
ತುಂಡುಖಂಡಗಳ ತೇಪೆ
ಅಪೂರ್ಣ ಕೃತಿ, ಪೂರ್ಣಕೃತಿಯೆಂಬುದೆಲ್ಲಿದೆ?!

ತೊರೆದುದೂ ಅಷ್ಟೆ, ಜರೆದುದೂ ಅಷ್ಟೆ
ಹೌದು ಅಲ್ಲಗಳು ನೇಯ್ದ ಚಾಪೆ
ಅರೆನಿದ್ರೆ, ಅರೆಜಾಗೃತಿ, ಶುದ್ಧನಿದ್ದೆಯೆಲ್ಲಿದೆ?!

ಸತ್ಯವೂ ಅಷ್ಟೆ, ಸುಳ್ಳೂ ಅಷ್ಟೆ
ನಿತ್ಯಾನಿತ್ಯತೆ ಪೋಣಿಸಿದ ದಾರ
ಕೊಂಡಿಗಂಟಿಲ್ಲ, ಇಡೀ ಸರವಾದೀತೆ?!

ಪಡೆದುದೂ ಅಷ್ಟೆ, ಕಳೆದುದೂ ಅಷ್ಟೆ
ಬೇಕು ಬೇಡಗಳ ಕಣ್ಣಾಮುಚ್ಚಾಲೆ
ಅರೆಗಣ್ಣಷ್ಟೇ ತೆರೆದ ಪಾಡು, ಅಖಂಡ ಅರಿವೆಲ್ಲಿದೆ?!

ನಾನೂ ಅಷ್ಟೇ, ನೀನೂ ಅಷ್ಟೇ
ಇಂದು ನಿನ್ನೆಯ ಆಗುಹೋಗಿನ ಮೊತ್ತ
ತೋರಿ ಮಡಚಿದ ಬೆಟ್ಟು ನೋಡು, ಸಮರ್ಪಣೆಯೆಂಬುದೆಲ್ಲಿದೆ?!

ಕೂಗಬೇಡವೇ ಹಕ್ಕಿ

ಅತಂತ್ರ ಬಾಳನೋವೇ, ಹೋದಾತನ ವಿರಹವೇ
ಮರಿ ಸತ್ತ ಶೋಕವೇ, ಗೂಡು ಬಿದ್ದ ತಾಪವೇ
ಕೋಪವೇ, ಅಪಾದನೆಯೇ, ನಿವೇದನೆಯೇ,
ಯಾವುದೂ ಅಲ್ಲದೊಂದು ಬರೀ ವೇದನೆಯೇ...

ಕೂಗಬೇಡವೇ ತಂತಿ ಮೇಲಿನ ಒಂಟಿ ಹಕ್ಕಿ

ಲೋಕವ್ಯಾಪಾರದ ಅಸಂಖ್ಯ ದನಿಗಳಿಣುಕದೆ ಹಾಯ್ವ
ಈ ಕಿವಿಯೊಳಗಿನೊಳಗನೂ ಇರಿಯುತಿದೆ ದನಿ..
ಕೊರತೆ ಯಾವುದೂ ಘಾಸಿ ಮಾಡದ ಮನದೊಂದು ಭಾಗವ
ಅದೆಲ್ಲಿಯದೋ ತೋರ್ಬೆರಳೊಂದು ಕಿರುತುದಿಯಿರಿದಂತೆ.Wednesday, June 5, 2013

ಅದೇ ಸಂಜೆ


ಸಂಜೆಯಿದು ಅದಷ್ಟೇ ಅಲ್ಲ,
ನಾಳಿನೆಲ್ಲ ಕನಸುಗಳ ಮುನ್ನುಡಿ
ಅದು ನನಸಾಗದುಳಿವ ನಿರಾಸೆಯ ಕನ್ನಡಿಯೂ..

ಸಂಜೆಯಿದು ಅದಷ್ಟೇ ಅಲ್ಲ
ಮರೆವಿನಾಶ್ರಯ ನಿದ್ದೆಗೆ ರಹದಾರಿ
ನೆನಪೇ ಕಾಡುವ ಕಾರಿರುಳ ರಾಯಭಾರಿಯೂ..

ಸಂಜೆಯಿದು ಅದಷ್ಟೇ ಅಲ್ಲ
ಇಂದಿನ ಸೋಲು ನಾಳೆ ಗೆಲುವಾಸೆಯಂಜನ
ನಾಳೆ ಮತ್ತೊಂದು ಇಂದೇ ಆಗುವ ಸತ್ಯದರ್ಶನವೂ..

ಸಂಜೆಯಿದು ಅದಷ್ಟೇ ಅಲ್ಲ
ತಾರೆತಾರಿಣಿಯರಿಗೆ ಸ್ವಾಗತ ಗೀತೆಯಾಲಾಪ
ರಸದಭಾವದಲಿ ಕ್ಷತಮನಕದೊಂದು ಪ್ರಲಾಪವೂ..

ಸಂಜೆಯಿದು ಅದಷ್ಟೇ ಅಲ್ಲ
ದಿನದ ದಣಿವಿಗೆ ವಿರಾಮದ ಸಾಂತ್ವನದ ಲೇಪ
ಬೆಳಕು ಗತಿಸುವಾಗ ಕುರುಡು ಕಣ್ಣಿಗೆಲ್ಲ ಮುಗಿದ ತಾಪವೂ..


ಎಷ್ಟು ಬಿಚ್ಚಿಕೊಂಡರೇನು ನಿನ್ನ ಪದಗಳಲಿ
ಭೂಮಿ ಹರಡಿಕೊಂಡಂತೆ
ಯಾರಿಗಾಗಿ ತೆರಕೊಂಡೆಯೋ
ಆತ ತೆರಳಲೆಂದೇ ಬರುವವನು

ಎಷ್ಟು ಸಿಂಗರಿಸಿದರೇನು ನಿನ್ನ ಮಾತನು
ನೇಣುಗಂಭದ ಸಿಂಗಾರದಂತೆ
ಯಾರಿಗಾಗಿ ಕಾಯುತಿದೆಯೋ
ಆತ ಮುಸುಕು ಧರಿಸಿಯೇ ಬರುವವನು.

ಕಾಯಬೇಕಷ್ಟೆ

ಕೋಶದೊಳಗಣ ಕತ್ತಲಲಿ
ಅಂದಚಂದದ ಹೆಸರಿಲ್ಲದಲಿ
ಆಕಾರವಿಲ್ಲದ ಬಳುಕು ಕಾಯದಲಿ
ಬಣ್ಣ ಚಿತ್ರವಿಲ್ಲದ ಅಂಟು ತೊಗಲಲಿ
ಮುನ್ನಡೆಯಲ್ಲದ ಮಂದ ತೆವಳುಗತಿಯಲಿ
ಅಡಗಿ ಹಲಕಾಲ ತಾಳ್ಮೆಯದೇ ತುತ್ತುಂಡು
ಕಾಯುವಾತ್ಮಕೂ ನಿಜರೂಪ ಬೇರುಂಟು
ಕಣ್ಸೆಳೆವ ರೂಪಿನ, ಹಾರ್ನಡಿಗೆಯ ವೇಗದ
ಚಿತ್ರವಿನ್ಯಾಸದುಡುಗೆಯ, ಮಧುಪುಷ್ಪಮಿಲನದ
ನಾಳೆಗಳುಂಟು, ಅದೂ ಚಿಟ್ಟೆಯಾಗಲಿಕುಂಟು
ಕಾಯಬೇಕಷ್ಟೆ ಆ ನಾಳೆಗಳಿಗೆ...
ನನ್ನೊಳಗಿನ ನಗುವಿನಂತೆ.ನಿಶೆ ರವಿಯ ವಿರಹಕುದುರಿಸಿದ ಕಂಬನಿಯೋ,
ಉಷೆ ಮಿಂದು ಕೇಶವುದುರಿಸಿದ ಹನಿಯೋ,
ಇನ ಬರಲು ಇಳೆ ನಾಚಿ ಬೆವತುದೋ,
ಮಳೆ ಪಳೆಯುಳಿಕೆಯುಳಿಸಿ ಹೋದುದೋ
ಎಳೆಬಿಸಿಲಲಿ ಎಲೆಎಲೆ ಹೊತ್ತ ಇಬ್ಬನಿ
ರವಿಕಿರಣ ಸೆಳೆದು ಸೆರೆ ಮಾಡಿಟ್ಟ ಪರಿ
ಬಿಳಿ ಬಯಲಾಗಿದೆ ನೀರಹನಿ ಬೆಳಕಕಣ ಮಿಲನದಲಿ
ಮೈ ಮರೆತಿದೆ ನಿರ್ವರ್ಣ ಸಪ್ತವರ್ಣವಾದ ಬೆರಗಲಿ


Tuesday, June 4, 2013

ನನ್ನೊಡಲಲಿ ಪಡಿಮೂಡಿದ
ನಿನ್ನಡಿ ಗುರುತು ಅಳಿಸಲಾಗದ್ದಕ್ಕೆ ಕಳವಳಿಸದಿರು
ಅದೋ ಆ ಗೂಡಿನಲ್ಲೀಗ ಮೊಟ್ಟೆಗಳು
ಕಾಗೆ ಕಾವಿಗೆ ಬಿರಿದು ಕೋಗಿಲೆ ಮರಿಗಳಾಗಿವೆ
ವೃತ್ತದೊಳಗಿನ ವ್ಯಾಸ ತ್ರಿಜ್ಯ ಬಿಂದು ಅನಂತವಿದ್ದರೂ
ಪರಿಧಿಯಳತೆಯೊಳಗೆ ಸೆರೆ
ನನ್ನೊಳಗಿನ ಅಸಂಖ್ಯ ಭಾವವಿಶೇಷಗಳೂ
ನಿನ್ನ ಕನಸಳತೆಯೊಳಗೆ ಸೆರೆ

Monday, June 3, 2013

ಹಗಲ ಚಂದ್ರ


ಶಶಿಗೊಮ್ಮೊಮ್ಮೆ ರವಿಯ ಸಾಮೀಪ್ಯದಾಸೆ
ಹಗಲಲೂ ಕದ್ದು ಮೂಡುವುದುಂಟು
ನೆರಳಂಥ ಬಲು ತೆಳು ಅಸ್ತಿತ್ವದಲಿ
ಪುಷ್ಟಿಯಿಲ್ಲದ ಅಸುವಂತೆ ಕೃಶರೂಪಲಿ

ಇತ್ತದ್ದವನೇ ಗುರುತು
ಧರಿಸಿದ್ದವನದೇ ಹೊಳಪು
ಹೊರೆ ಸ್ಮರಿಸಿ ಎರಗಲಿಕಾದರೂ
ಬರುವೆನೆಂದರೆ ಧಗಧಗನುರಿಯುತಾನೆ
ನಿರಾಕರಿಸುತಲೇ ಪ್ರಕಾಶಿಸಿ
ಕಳೆಗೆಡಿಸಿ ಮುಖಮುರಿಯುತಾನೆ.

"ಇದ್ದೂ ಕಾಣದಿರುವಂತಿರುವುದಾದರಿರು
ಹೊಳಪು, ಆಕಾರ, ಕೊನೆಗಿರುವೇ ಇಲ್ಲದೆ.
ನೀನಿರುವೆಡೆ ನಾ ನಿರಾಳನಲ್ಲ,
ನಾ ಬೆಳಗುವೆಡೆ ನೀನಿರುವುದು ಸಲ್ಲ"
"ಬರಲೇ" ಅನ್ನುತಳುಕುವ ಇವಗೆ ಅವನುತ್ತರ..

ಚಂದ್ರ ಬೆಪ್ಪಾಗಿ ಸಪ್ಪಗಾಗುತಾನೆ
ಕತ್ತಲಲಷ್ಟೇ ಹೊಳೆಯುತಾನೆ
ಬೆಳಕನೇ ಬೆಳಗಿಸುವ ಸೂರ್ಯನ ನೇರ ನೋಡುವ
ತಂಪಷ್ಟೆ ಅಲ್ಲ, ಉರಿಯನೂ ಹೊರುವ
ಆಸೆ ಹತ್ತಿಕ್ಕಿ ಹಿಂತಿರುಗುತಾನೆ.
ಅವಗಿವನು ಬೇಕಿಲ್ಲ, ಇವಗವನ ಸನಿಹದ ಋಣವಿಲ್ಲ.

ಆಕಾಶ, ಕಡಲು ಮತ್ತು ನಾನು


ಆಕಾಶ ನೋಡು..
ಸೂರ್ಯ ಚಂದ್ರ ತಾರೆ
ಮಿಂಚು ಮೋಡ ಮಳೆಬಿಲ್ಲು ಹೀಗೇ
ಎಷ್ಟೆಲ್ಲ ತನದೇ ಆಗಿದ್ದರೂ
ಒಮ್ಮೊಮ್ಮೆ ಅವಿರಲೇ ಇಲ್ಲವೆಂಬಂತೆ
ಬರೀ ನೀಲಿ ಖಾಲಿಖಾಲಿ.

ಸಾಗರ ನೋಡು..
ಮುತ್ತು ರತ್ನ ಉಪ್ಪು
ಮೀನು ಮೊಸಳೆ ಹಾವು ಹೀಗೇ
ಎಷ್ಟೆಲ್ಲ ತನ್ನಾಸ್ತಿಯಿದ್ದರೂ
ಓಡಿ ಬರುವುದು ಮರಳೇ ಮಿಗಿಲೆಂಬಂತೆ
ದಡದ ಸ್ಪರ್ಶ ಬೇಡಿ.

ನಾನು ನೋಡು..
ನೀನು, ಅವಳು, ಅವನು
ಬಯಸಿ ಪಡೆದ, ಬಯಸದೊದಗಿದ ಹೀಗೇ
ಎಷ್ಟೆಲ್ಲ ಸಂಬಂಧಗಳಿದ್ದರೂ
ಒಟ್ಟಾರೆ ಅದೆಲ್ಲ ಭ್ರಮೆಯೆಂಬಂತೆ
ಒಮ್ಮೊಮ್ಮೆ ಆ ಆಕಾಶ, ಒಮ್ಮೊಮ್ಮೆ ಆ ಕಡಲು.
ನಿಧಾನಿಸಿ ನೋಡು..ಹೊಗೆ ನೋಡಿ ನಿರ್ಧರಿಸಬೇಡ
ಸುಡುವ ಬೆಂಕಿಯಂತರಾಳದಂತೆ
ಕೊರೆವ ಮಂಜುಗೆಡ್ಡೆಯದೂ ಹೊಮ್ಮಿಸಬಲ್ಲುದು.
ಹಾಗೇ ಸುಮ್ಮನೆ ಸೋಕಲು ಬಿಡು
ಅದೇ ಮುಟ್ಟೀತು..
ನೇರ ಕಣ್ಣ ದಾಟಿ ತೊಗಲ ತಲುಪಲಿ..
ಆ ಸ್ಪರ್ಶವದನರಿತೀರು...

ಸುಲಭಸಾಧ್ಯ ಸತ್ಯದ ವ್ಯಾಖ್ಯೆ ನಂಬಬೇಡ
ನಿಷ್ಠೆಯುದರದ ಆಸ್ತಿಯಂತೆ
ಮೋಸದ ತಟ್ಟಿರಾಯನೊಳಗೂ ಇದ್ದೀತು
ಹಾಗೇ ಸುಮ್ಮನೆ ಸಮೀಪಿಸಬಿಡು
ಅದೇ ನುಡಿದೀತು...
ಪಂಚೇಂದ್ರಿಯವ ಮೀರಿದ್ದದ ಕೇಳಲಿ
ಆ ಆತ್ಮವದನರಿತೀತು...Sunday, June 2, 2013

ಅದೇ ಮಳೆಯಲಿ.. ಅದೇ ನೆಲದಲಿ..


ಜೋರು ಮಳೆ ಸುರಿದು
ಖಾಲಿಯಾದ ಬೆಳ್ಮುಗಿಲ ಪ್ರತಿಬಿಂಬ
ನೋಡು ನನ್ನೆದೆಯಿಂದು
ಮುಗಿದಾಗಿನ ಕ್ಷುದ್ರಶಾಂತಿಯ ಕುಂಭ...

ನೀನೆನ್ನ "ನೀನ್ಯಾರೋ.." ಅಂದ ದಿನ
ಬರೀ ಕಾರ್ಮೋಡ ಕವಿದಿತ್ತು
ಮತ್ತೆ ನಾನ್ಯಾರೆಂದು ನಾ ಹೇಳಿದ ದಿನ
ಗಾಳಿ ಸ್ವಲ್ಪ ಹೊತ್ತೊಯ್ದಿತ್ತು.
ಮತ್ತದೇ ವಿಮುಖತೆ ಮೋಡ ತಂದಿತ್ತು
ನೀ ದೂಡಿ ಕೆಲವ, ನಾ ಬೇಡಿ ಕೆಲವ,
ಒತ್ತಡವಲ್ಲಿ ಹೆಚ್ಚಿತ್ತು.
ಮೋಡ ನೀರಾಗುತಿತ್ತು,
ಮಳೆ ಸುರಿಯತೊಡಗಿತ್ತು.

ಆಶ್ಚರ್ಯ ನೋಡು ಈ ಮಳೆ
ತೊಳೆದಿಲ್ಲ, ಸೆಳೆದಿಲ್ಲ, ತಣಿಸಿಲ್ಲ,
ಬರೀ ಎಡೆಬಿಡದೆ ಸುರಿದಿತ್ತು...
ಹನಿಹನಿಯ ರಭಸ
ತಾಕಿದ ನೆಲ ಕೊರೆಯುತಿತ್ತು...

ಹಲಕಾಲ ಕಾಡಿಸಿತು, ಪೀಡಿಸಿತು
ಕೊನೆಯೆಲ್ಲಕೂ ಇರಲೇಬೇಕಲ್ಲಾ..
ಕಾಲಚಕ್ರದ ಅರೆಕಾಲಾಗ ಮೇಲಿದ್ದವು
ನಗುವಿನ ಸಾಮ್ರಾಜ್ಯಶಾಹಿ.
ಮತ್ತೆ ಕೆಳಗಿಳಿದವು
ಅಳು ರಾಜ್ಯ ಗೆದ್ದಿತು.
ಮತ್ತೀಗ ಮೇಲೆ ಸಾಗುತಿವೆ
ಆಳುವ ಸ್ಥಿರ ಭಾವವಿಲ್ಲದೆ
ಎಲ್ಲೆಲ್ಲೂ ಅರಾಜಕತೆ..

ಮೌನ ಮೆಲ್ಲನೇಳುತಿದೆ
ಖಾಲಿ ಗದ್ದುಗೆಯತ್ತ ನೋಟ ನೆಟ್ಟಿದೆ..
ಶಾಂತಿಯ ಮುಖವಾಡವದನು
ಸಿಂಗರಿಸಿದಂತಿದೆ
ಅಸಹಾಯ ನೆಲವೆಂದಿಗೂ
ಗೆದ್ದವರ ಕೈಯ್ಯಡಿಯಾಳು..
ಅದೇ ನೆಲದಲಿ ನನ್ನಸ್ತಿತ್ವದ ಬೇರಿದೆ..
ಚಿಗುರದ, ಹೂವು ಕಾಯಿ ಹಣ್ಣಾಗದ
ವಿಧಿ ಬರಹ ನೆಲದಡಿಯೇ ಹುಗಿದಿದೆ...

ನೀ ನಡೆಯುತಿರು..
ಅದೇ ಮಳೆ ತಣಿಸಲಿ
ಹನಿಹನಿ ರೋಮಾಂಚಗೊಳಿಸಲಿ
ಚಿಗುರುತಿರು, ಮೊಳೆತು ಬೆಳೆಯುತಿರು..
ಅಲ್ಲೇ ನಿನ್ನ ಬೇರಿನ ಪಕ್ಕ ನನ್ನವು
ಹಾರೈಸಿವೆ ಎಂದೆಂದಿಗೂ ಹಾಯಾಗಿರು.

ಏಕೆ?!


ನಿದ್ರೆಗೂ ಎಚ್ಚರಕೂ ಕಣ್ಮುಚ್ಚಿ ತೆಗೆವಷ್ಟೇ ಅಂತರ,
ನಡುವೆ ನೋಡು ಏನೇನೆಲ್ಲಾ ಅವಾಂತರ!
ಹಾಲು ಮೊಸರಾಗಿದೆ, ಅನ್ನ ಹಳಸಾಗಿದೆ.
ಚಿಗುರು ಎಲೆಯಾಗಿ, ಮೊಗ್ಗು ಹೂವಾಗಿದೆ.
ಶಶಿಯಿಳಿದು ಆಕಾಶ ಭಾನುವಿನದಾಗಿದೆ.
ಕರಿಬಾನು ಬಿಳಿಯಾಗಿದೆ, ಕನಸು ಮುಗಿದಿದೆ.
ರಾತ್ರಿಯರಳಿದ್ದು ಮುದುಡಿದೆ, ಮುಚ್ಚಿದ್ದು ಅರಳಿದೆ..
ನಿನ್ನೆ ಇಂದಾಗಿದೆ, ತೇದಿ ಬದಲಾಗಿದೆ..
ಎಲ್ಲ ಸಹಜವೇ ಎನಿಸುವಾಗ ಅಲ್ಲೇ.. ,
ಅಲ್ಲೇ ಬಂಧ ಬದಲಾದರದು ಅಸಹಜವೇ?!
ಮನಸಿಗದೇ ಕಣ್ಣಲ್ಲವೇ,
ಶಾಂತವಾಗಿದ್ದಲ್ಲಿ ಇಲ್ಲಳುವುದೇಕೆ?!
ಭಾವದ್ದದೇ ಅರಿವಲ್ಲವೇ,
ಅಲ್ಲೊಪ್ಪಿದ್ದು ಇಲ್ಲೊಪ್ಪದೇಕೆ?!

Saturday, June 1, 2013

ಅಂಗಡಿಯೊಳಗಿನ ಮನಸು ಮತ್ತು ಸಂದರ್ಶಕ


ಅಂಗಡಿ ತೆರೆದು ಕೂತಾಗಿದೆ ಮನವೇ,
ಬಂದು ಹೋದೆಲ್ಲರಿಗೂ ಅಳುವುದಾದೀತೇ?!

ನಿನ್ನ ಮಾಲು ಬಯಸುವವ ಬಂದಾನು
ಕೊಂಡು, ಬೆಲೆತೀರಿಸಿ, ಹೋದಾನು..
ಹೋದನೆಂದಳುವುದಾದೀತೆ?!
ಆ ದಿನ ನಾನೂ ನೀನೂ ಹೋಗದುಳಿವುದುಂಟೇ?!
ಹೆಚ್ಚೆಂದರೆ ಲೆಕ್ಕದ ಪುಸ್ತಕದಲೊಂದು
ದಾಖಲೆಯಾದಾನು..

ನಿನ್ನಲ್ಲಿಲ್ಲದ್ದ ಬಯಸುವವನು
ಹಾಗೇ ದಾಟಿ ಮುನ್ನಡೆದಾನು..
ಒಳಬರಲಿಲ್ಲವೆಂದಳುವುದಾದೀತೇ?!
ಇಲ್ಲದ್ದಕ್ಕೆ ನೀ ಕ್ಷಣ ವ್ಯಯಿಸುವೆಯಾ, ಮತ್ತವನೇಕೆ?!
ಹೆಚ್ಚೆಂದರೆ ನಿನ್ನೊಳಗೊಂದು
ಖಾಲಿನೋಟವೆಸೆದಾನು...

ಒಳಗರಿಯದವ, ಸಮಯ ಕೊಲುವವ,
ಮಾಲು ತೆಗೆಸಿ, ಮುಟ್ಟಿ ತಿರುವಿ, ಅಂದಗೆಡಿಸಿ, ಬೆನ್ನಿಕ್ಕಿ ನಡೆದಾನು.
ಒಪ್ಪದ್ದಕ್ಕೆ ಅಳುವುದುಂಟೇ?!
ತೆರೆದ ಅಂಗಡಿ, ತೂಗಿ ಒಳಕರೆವುದಾದೀತೆ?!
ಹೆಚ್ಚೆಂದರೆ ಒಳನಡೆದ ಹೆಜ್ಜೆಯಂಕೆಸಂಖ್ಯೆ
ಹೆಚ್ಚಿಸಿಯಾನು.

ದುಗುಡ ಬಿಡು, ಬಾಗಿಲಂತೆ ಮುಕ್ತ ತೆರೆದುಕೋ..
ಆಗುಹೋಗಿಗೆ ಕಣ್ಣಷ್ಟೇ ಆಗು
ಬಂದುದ ಒಳಬಿಡು, ಹೋದುದ ಬಿಟ್ಟುಬಿಡು..
ವಸ್ತುವಾದರೂ, ಭಾವಾದರೂ ಜಗ ಮೆಚ್ಚುವದ
ಹೊಂದುವುದೊಂದು ಅಸಾಧ್ಯ ವ್ಯಾಪಾರ..
ಒಪ್ಪುವುದು ಬಿಡುವುದು ಲೋಕದ್ದು, ಅಂಗಡಿಯಷ್ಟೇ ನಿನ್ನದ್ದು.