Monday, December 31, 2012

ಹೊಸದಾರಿಯ ತಿರುವಲಿ...


------------------------

ನಡೆದು ಬಂದ ದಾರಿ, ಎಡವಿದ್ದೆಷ್ಟೋ ಸಲ,

ತಡೆದದ್ದದೇ ಬೀಳು, ತೊಡರಿದ್ದದೇ ಬೇರು.

ಸರಾಗ ನಡೆದು, ತೇಲಿ ಸಾಗಿದ್ದೂ ಇದೆ,

ನಡೆಸಿದ್ದದೇ ಭಾವ, ಸಾಗಿಸಿದ್ದದೇ ಮನ.

ಅದೇ ನಡೆ, ಅದೇ ಏಳುಬೀಳು..

ಸಾಕೆನಿಸಿ ನಿಲುವಂತಿಲ್ಲ, ಆಯ್ಕೆಯಿಲ್ಲ.

ಕಾಲ ತೋರಿದ ದಿಶೆ, ನಡೆಯುತಿರಬೇಕು.ಭಯದಿಂದಲ್ಲ ಭರವಸೆಯಿಂದ,

ನಿರೀಕ್ಷೆಯಿಂದಲ್ಲ ಅರ್ಪಣೆಯಿಂದ,

ಅಪೇಕ್ಷೆಯಿಂದಲ್ಲ ಪ್ರಾರ್ಥನೆಯಿಂದ,

ಸಂಶಯದಿಂದಲ್ಲ ನಂಬಿಕೆಯಿಂದ

ಈ ಹೆಜ್ಜೆ ಊರುವಾಸೆ...

ಒತ್ತಡಕಲ್ಲ ಹಿಗ್ಗುವಲ್ಲಿಗೆ,

ಒಪ್ಪಂದಕಲ್ಲ ಒಪ್ಪುವಲ್ಲಿಗೆ,

ಕೆಡುಕಿಗಲ್ಲ ಸಂಭ್ರಮಕೆ,

ಅಳುಕಿಗಲ್ಲ ನಿರಾಳತೆಗೆ

ತೆರೆದುಕೊಳುವಾಸೆ....

ನಿನ್ನೆನಾಳೆಗಲ್ಲ ಇಂದಿಗೆ,

ಬೇಡುವವಕಲ್ಲ ದುಡಿವವಕೆ,

ಬೆಳೆದುದಕಲ್ಲ ಮೊಳೆತುದಕೆ,

ಅರಳಿದ್ದಕಲ್ಲ ಮುದುಡಿದ್ದಕೆ

ಒದಗುವಾಸೆ....

--------------

ಮುಂಬರುವ ೨೦೧೩ರ ದಿನಗಳು ನನ್ನಾಸೆಗಳಿಗೂ, ನಿಮ್ಮೆಲ್ಲರಾಸೆಗಳಿಗೂ ಸಫಲತೆಯ ತಾಣಗಳಾಗಲಿ...

ನಿರಾಸೆ, ಹತಾಶೆ, ಅಸಹಾಯಕತೆಗಳಿಗೆ, ಅನ್ಯಾಯ, ಅತ್ಯಾಚಾರ, ಅಸಮಾನತೆಗಳಿಗೆ ಸೋಲು ತರಲಿ...

ನೋವಿಗೆ ಸಾವು ತರಲಿ.... ಎಲ್ಲರಿಗೂ ಒಳ್ಳೆಯದಾಗಲಿ...

ಅಳಿಯದುಳಿಯುವ ಪರಿ


------------------------

ಎದೆನೆಲದ ಕಣ್ಣೀರ ಸಾಗರಕೆ

ಭಾವ ಮರಳಿನ ತಟದಾವರಣ.

ಧಾವಿಸಿ ಬರುವಲೆಗಳು,

ಮರಳಿನಕ್ಷರವೆಲ್ಲ ನುಂಗುವವು.

ಅಂತಃಶಕ್ತಿ ಬೆರಳದೂಡಿ ಬರೆಸುತಿದೆ..

ಮೊದಲೊಂದಕ್ಷರ.. ನಾ,

ಕಣ್ಣೀರಲೆ ಬಂದಳಿಸಿತು.

ಮುಂದಿನದೂ ಒಂದಕ್ಷರವೇ.. ನೀ,

ಮತ್ತದೇ ಬಂದಳಿಸಿತು.

ಎರಡಕ್ಷರ, ಮೂರು ಮತ್ತೆ ನಾಲ್ಕು..

ಅಳುವಿನಲೆಯದದೇ ಮರ್ಜಿ ಅಳಿಸುವುದು..ಬೆಚ್ಚಿಬೀಳುತಲೊಮ್ಮೆ, ಹೆಚ್ಚಿದಾಸೆಯಲೊಮ್ಮೆ..

ಕನಸಗೋಪುರ ಕಟ್ಟಿ ಮರುಳುಮನ..

ಭವ್ಯವಾಗಿತ್ತು, ತುದಿಗೊಂದು ಮಿಂಚುತಡೆ,

ಪ್ರೀತಿ ಬಾವುಟವಿಟ್ಟು, ಬಾಗಿಲತೋರಣ,

ಮುಂದೊಂದು ರಂಗೋಲಿ...

ಅಲೆಗಳದು ಮತ್ತದೇ ಹುಚ್ಚಾಟ,

ಶಾಂತವಾದಂತೊಮ್ಮೆ,

ರೊಚ್ಚಿಗೆದ್ದಂತೊಮ್ಮೆ.

ಮರಳಗೋಪುರ ನಿಂತೀತೆ,

ಕನಸು ಫಲಿಸೀತೆ?ಸಾಗರತಟವೇನೋ ಸರಿ,

ಬರೆದುದಳಿಸುವಲೆ ತಡೆವ,

ತಡೆಗೋಡೆಯಿರಬೇಕು..

ಬೆರಳೊಂದೇ ಅಲ್ಲ,

ಅಳಿಯದಕ್ಷರ ಮೂಡಿಸಲು ಬೇಕು,

ಮೆತ್ತಗಿದ್ದು ಮತ್ತೆ ಗಟ್ಟಿಯಾಗೋ ತಳ.

ಮರಳೊಂದೇ ಅಲ್ಲ,

ಜೊತೆಗಷ್ಟು ಗಟ್ಟಿಕಲ್ಲೂ ಬೇಕು,

ಬಂಧಿಸುವ ಒಲವ ಪದಾರ್ಥವೂ...

ಗೋಡೆ ಮೆತ್ತಗಿದ್ದು ಗಟ್ಟಿಯಾಗುವಲ್ಲಿ

ಆತ್ಮದೊಳಗಿಂದ ಹೊತ್ತು ತಂದು

ಅಂತಿಂಥದಲ್ಲ, ಸಿಹಿನೀರುಣಿಸಬೇಕು.

ಹಿನ್ನೆಲೆಯರಿತು, ನೆಲೆಯ ನಿರ್ಮಿಸಿ,

ಒಳಗಡಿಯಿಟ್ಟು, ಭಾವವಾವರಿಸಿದ ಕಣ್ಣೀರ

ಜೊತೆಗಿದ್ದೂ ಇಲ್ಲದಂತಿರಬೇಕು..

ಮುಂದಡಿಯೂರುವ ಗಳಿಗೆ


---------------------

ತಂತಾನೇ ಕಳಚಿಕೊಳಹೊರಟಿದೆ,

ತಡೆಯಲಾಗದು ಹಳತನು.

ಹೊಸತೂ ಬರುತಿದೆ, ಅದನೂ...ಹೆಜ್ಜೆಯೆತ್ತಿಸಿದ ಕಾಲ ಮುಂದಡಿಯೂರಿಸಲಿದೆ...

ಈ ಕ್ಷಣವೇಕೋ ನಿಂತಲ್ಲೆ ನಿಲುವಾಸೆ,

ಹಿಂದಿನವೆಲ್ಲಾ ಮುನ್ನಡೆದೂ ಹಾಗನ್ನಿಸದೆ,

ಹಿನ್ನಡೆಯೂ ಅಲ್ಲದ, ಎಡೆಬಿಡಂಗಿಗಳಾದಾಗ,

ಅನಿಸುತಿದೆ...."ಮುಂದಡಿ ಬೇಡ"..ಹೊಸತೆಲ್ಲಕೂ ನಿರೀಕ್ಷೆಯ ಜೊತೆ,

ಹಳತೆಲ್ಲಕೂ ಕಣ್ಣೀರ ಹೊದಿಕೆ.

ಅದೇ ನಾಳೆ ಇದಾಗುವ ತಿಳಿವಿದ್ದರೂ,

ಹೊಸತಿನಾಸೆಗೆ ಅದನಪ್ಪಿ,

ನಾಳಿನಳುವಿಗೆ ಇನ್ಯಾರನ್ನೋ ದೂಷಿಸಿ,

ನಿನ್ನೆಯ ನೆನೆಯುವ ಮುಂದಡಿ ಬೇಡ....ಹೊಸತೆಲ್ಲಕೂ ಅನಿಶ್ಚಿತತೆಯ ಜೊತೆ,

ಹಳತರೊಡನೆ ಅನುಭವದೆಚ್ಚರಿಕೆಯ ಗಂಟೆ,

ಅದೇ ನಾಳೆ ಇದ ಮೊಳಗಿಸುವುದಾದರೂ,

ಹೊಸತಿನಾಸೆಗೆ ಅದನಪ್ಪಿ,

ನಾಳಿನ ಅದರ ಸದ್ದಿಗೆ ಕಿವಿಮುಚ್ಚಿಸಿ,

ನಿನ್ನೆಯ ನೆನೆಯುವ ಮುಂದಡಿ ಬೇಡ....ಹಳತೂ ಅಂದೊಮ್ಮೆ ಹೊಸದಿದ್ದಾಗ,

ಭರವಸೆಯ ತೊಟ್ಟಿಲಿನ ಕನಸ ಕಂದ,

ತೊಟ್ಟಿಲ ಮುರುಕುಕಂಬಿ, ಹರಕು ಹಾಸಿನ

ಏಕತಾನತೆಗಳುತ್ತಾ, ಏಳದೆ, ಬೆಳೆಯದೆ

ಇಂದೂ ಹಾಗೇ ಮಲಗಿದೆ...

ಏಳಲೆಳಸದ, ಬೆಳೆಸದ, ಹಾಗೇ ಉಳಿಸುವ

ಮುಂದಡಿ ಬೇಡ....ಹೊಸತಿಗೆ ಹಳತ ಕಳಚುವ,

ಬೇಕಿರಲಿ, ಇಲ್ಲದಿರಲಿ- ಖಾಲಿ ಮಾಡಿ,

ಏನೇನೋ ತುಂಬಿಸುವ ಚಾಳಿ.

ಸಿಹಿಯೋ ಕಹಿಯೋ ನನ್ನದಾದ

ಹಳತೇ ಇಂದು ನನ್ನ ಪರಿಚಯ....

ಗುರುತಳಿಸಿ, ಇನ್ನೇನೋ ತರಲಿರುವ

ಮುಂದಡಿ ಬೇಡ..

Thursday, December 27, 2012

ಸರದಿ...


------------------------

ಹೀಗೆಂದೂ ನಾ ನಿಂತಿರಲಿಲ್ಲ,

ತಾಯಿತಂದೆ, ಕರುಳಬಳ್ಳಿ,

ಪತಿ(ತ್ನಿ), ಮಗು, ಸಂಬಂಧಗಳು,

ಹೊಟ್ಟೆಪಾಡು, ಕಟ್ಟುಪಾಡುಗಳು,

ಸ್ವಾರ್ಥ-ಪರಹಿತ, ಲೋಕೋದ್ಧಾರ,

ಮನರಂಜನೆ, ಲೋಕಾನುರಾಗಗಳು,

ಅಧ್ಯಾತ್ಮ, ಆತ್ಮೋದ್ಧಾರ, ಕರ್ತವ್ಯ,

ಅಭಿಮಾನ, ಗೆಳೆತನ, ಸಿದ್ಧಿಗಳು...

ಎಲ್ಲೆಡೆ ನಿಂತ ನಿನ್ನ ಗಡಿಯಾರದ ಮುಳ್ಳು,

ಹೊರಟಲ್ಲಿಗೆ ಮತ್ತೆ ಬಂದಾಗಿತ್ತು....

ಪರಿಭ್ರಮಣದೊಂದು ಬಿಂದಲೂ ನಾನಿಲ್ಲ.

ಕೊನೆಯಲಿದ್ದೆ ಭಿಕ್ಷಾಪಾತ್ರೆಯಂತೆ,

ಬಾಯ್ದೆರೆದು ಸಾವು ಹನಿಯೊಂದು ಬೇಡಿದಂತೆ.

ತಿರುಗಿ ನೋಡದ್ದು ನಂಬಿಕೆಯೇ,

ತಲುಪದ್ದು ಉಪೇಕ್ಷೆಯೇ?

ಮತ್ತೆ ಮತ್ತೆ ಬಾಯಾರಿದ ಸಾವಿನನುಭವ,.

ಇಂಚಿಂಚೆ ಕ್ಷೀಣಿಸಿ ನಾನು, ಇನ್ನೂ ಸತ್ತಿಲ್ಲ....

ಹೀಗೆ ನಿಂತಿರಲಿಲ್ಲ....ಮಂಚೂಣಿಯಲಿದ್ದೆ,

ಎಲ್ಲ ಕಾಲಲೊದ್ದಿದ್ದೆ, ನಿನ್ನ ಹೊತ್ತಿದ್ದೆ,

ನನ್ನುಸಿರಾದ ನಿನದರಲಿ ನನ್ನ ಹೆಸರಿಲ್ಲ.

ಎಲ್ಲಿ ಜಾರಿತೋ ...ಬಿಡು...

ಇಷ್ಟು ಅವೇ ಕಳಚಿದ್ದು..ಇದೋ ಕೊಂಡಿ

ಇನ್ನೊಂದೆರಡು ನಾನೇ ಕಳಚುವೆ.

ಬಂಧನದ ಸರಪಳಿ ಕಡಿಯಲಿ..

ನೀನೂ ಮುಕ್ತ, ನಾನೂ ಮುಕ್ತ ಮುಕ್ತ.

ಎದುರು ನೋಡದೆ ಶುರುವಾದದ್ದು.

ಎದುರು ನೋಡಿದ ಕೊನೆಯೇ ಬರಲಿ..


ಮುಗಿಸಲಾದರೂ ಬಿಡು ನನ್ನ ಮೊದಲು.


ಸರದಿಯ ಕೊನೆ ಯಾರದೂ ಆಗದಿರಲಿ.Wednesday, December 26, 2012

ಮನದ ಹಾರಾಟ


-----------------------

ಮೊದಲೇ ಮಂಗ, ಸೆರೆ ಬೇರೆ ಕುಡಿದು,

ಮನದ ಹುಚ್ಚೆದ್ದ ಹಾರಾಟ...

ಮೆಚ್ಚುಗೆಗೆ..ನೆಲದ ಮೇಲಿಲ್ಲ ನಡೆ..

ನಿರ್ಬಲ ಕೊಂಬೆಯಲೇ ತೂಗಾಟ ತೊನೆದಾಟ....

ಜರೆದುದಕೂ ನೆಲದ ಮೇಲಿಲ್ಲ...

ಜರಿದು ಪಾತಾಳಕೆ...ಕಣ್ಣೀರ ಕಡಲ ದೋಣಿ...

ಯತಾರ್ಥ ಮರೆ, ಅಪಾರ್ಥದ್ದೇ ಕಾರುಬಾರು...

ಸತ್ಯದೆದುರು ಬೆಪ್ಪಾಗಿ ತಲೆಕೆರೆದು,

ಸುಳ್ಳ ಬಿಗಿದಪ್ಪಿ ತಲೆಹೇನು ತಿಂದು,

ಆತ್ಮರತಿ ಕಂದನಂತೆ ಎದೆಗವಚಿ,

ನಂಬಿಕೆಯಲಿ ನಿಲದೆ, ನಿಂತಲ್ಲಿ ನೆಲವಿರದೆ...

ತುದಿಗಾಲ ಪಯಣ...ಕಾಲೂರದು...

ತಟ್ಟನೊಂದು ನಿರ್ಧಾರ... ಈ ಮರ ಸಲ್ಲ....

ಹಣ್ಣು, ನೆರಳು, ಹಕ್ಕಿಬಳಗ, ಸ್ವನೆಲೆಯನೂ ...

ತೊರೆದು ನಡೆದೆಡೆ ನೀರಿಲ್ಲ.....

ಏನಿಲ್ಲದೆಡೆ ಇದೆಯೆನುತ,

ಇದ್ದೆಡೆ ಹಿತವಲ್ಲದ ಭ್ರಮೆಯಲಿ...

ಕಣ್ತೆರೆದುದಕಿಂತ ಮುಚ್ಚಿದ್ದೇ ಹೆಚ್ಚು...

ಹಿಂದುಮುಂದೆಲ್ಲ ಅಂಥದೇ ಸಂತೆ,

ಸೆಳೆಯುತ ನಡೆದಿತ್ತು ಅಯಸ್ಕಾಂತದಂತೆ..

ಒಮ್ಮೊಮ್ಮೆ ಜೈಕಾರ, ಒಮ್ಮೊಮ್ಮೆ ಛೀಮಾರಿ..

ಆತ್ಮದ ದನಿಯುಡುಗಿದ ಚಾಂಚಲ್ಯದಾಟ

ಮಂಗನನೂ ಮೀರಿಸಿತ್ತು.....

ಕ್ಷಮಿಸು ಜೀವವೇ......ಉತ್ತರಿಸಲಾರೆ..


ಉತ್ತರವಿಲ್ಲವೆಂದಲ್ಲ, ದನಿಯಿಲ್ಲ....

ನಗಲಾರೆ, ನಗುವಿಲ್ಲವೆಂದಲ್ಲ, ಮೊಗವಿಲ್ಲ...

ಆಡಲಾರೆ, ಮಾತಿಲ್ಲವೆಂದಲ್ಲ, ಬಾಯಿಲ್ಲ....

ಅಳಲಾರೆ, ನೋವಿಲ್ಲವೆಂದಲ್ಲ, ಕಣ್ಣೀರಿಲ್ಲ...ನಿನ್ನೆಡೆಗೇ ಹೊರಟದ್ದು, ತಲುಪಲಾಗಲಿಲ್ಲ...

ಕಾಲಿಲ್ಲವೆಂದಲ್ಲ, ದಾರಿಯಿಲ್ಲ....

ನೀನಂದದ್ದು ಕೇಳಿಸಿತು, ಅರಗಲಿಲ್ಲ,

ಮೆಚ್ಚಿಲ್ಲವೆಂದಲ್ಲ, ಕೆಚ್ಚಿಲ್ಲ....

ಲೋಕದಲಿದಕಿಂತ ಬೇರಿಲ್ಲ ಉಸಿರೇ..

ಹಾರಲೆಳಸುವ ರೆಕ್ಕೆ,

ಹಾಡಲೆಳಸುವ ನಾಲಿಗೆ,

ತುಂಡಾಗುವುದು.. ಮತ್ತು....

ಸತ್ಯ ಅಲ್ಲೆಲ್ಲ ಸೋಲುವುದುTuesday, December 25, 2012

ಅದನೇ ಎರೆಯುವೆ....


-------------

ಆಗಷ್ಟೇ ಮೊಳೆತ ಬೀಜ,

ಪುಟ್ಟ ಮೊಳಕೆ,

ದಿನದ ಕಂದಮ್ಮನ ಎಳಸು,

ಅದೇ ಪುಟ್ಟ ಬೆರಳ ಸೊಗಸು...

ಸಂಶಯಿಸಿ ತಲೆಯೆತ್ತಿ ಅಳುಕಿ

ನೀನೇ ನನಗೆಲ್ಲ.. ಎಂದಂತೆ ಆಪ್ತ...

ಯಾವುದೋ, ಯಾರು ಬಿತ್ತಿದ್ದೋ...!!

ಅರಿವಿಲ್ಲದೆಡೆಯೂ ಅರಿವಿರದ ಸೆಳೆತ....

ಎದೆಯ ನೆಲದಲ್ಲಿಟ್ಟು ಜೋಪಾನ

ಪ್ರೀತಿ ಸುರಿದೆ, ಅದೇ ಉಣಿಸಿದೆ...

ಕಾಂಡವೆದ್ದು ಎಲೆಚಿಗಿತು, ಕೊಂಬೆರೆಂಬೆ..

ಗಿಡವಾಗಿ ಕಾಳಜಿ ಕೇಳುತಿತ್ತು...

ದಿನವೊಂದೂ ಅಗಲುವಂತಿಲ್ಲ, ಬಾಡುತಿತ್ತು.

ಈಗ ಮರವಾಗಿದೆ,

ಹೂಕಾಯಿಹಣ್ಣು ತಿಳಿದಿದೆ...

ಮುಡಿವದ್ದಲ್ಲ, ತಿನುವದ್ದಲ್ಲ...

ಕಸ ಉದುರಿಸಿ ನೆಲಕೆ, ಬಾವಿಗೆ...

ಚಾಚಿ ತೂಗಾಡೊ ಕೊಂಬೆ,

ಗಾಳಿ ಆಡಿದಂತಾಡಿ ಭರ್ರೋ...ಎನುತ

ಮನೆಮಾಡು ಮುರಿವ ಬೆದರಿಕೆ...

ಕಡಿಸಲಾರೆ...ಬಾಡಿಸಲಾರೆ..

ಅಂದಿನಂತೆ ನೇವರಿಸಿ ಮೈಮರೆವುದು,

ಕಣ್ಮುಚ್ಚಿ ಆತು ನಿಲ್ಲುವುದು,

ಭದ್ರತೆಯ ಮೆಲುಕಾಡುವುದು.. ಈಗಾಗುತಿಲ್ಲ...

ಎರೆದದ್ದು ಪ್ರೀತಿ, ಅದೇನೇ ಇತ್ತರೂ,

ಅದರ ಹಸಿರು ನನ್ನುಸಿರು....

ನಾ ಬದುಕಬೇಕು.... ಅದಕೆ,

ಮತ್ತದನೇ ಎರೆಯಬೇಕು.

ಮತ್ತೆ...


----------------

ನನ್ನೆದೆಗೂಡು ಬೆಚ್ಚಗಿತ್ತು,

ನೀ ಬಿಟ್ಟು ಹೊರ ನಡೆದೆ,

ಚಳಿ ಇದ್ದುದೂ ಲೆಕ್ಕಿಸದೆ.ನೋವಲಿ ಮನ ಹರಿದು ಚೂರು,

ಸಿಟ್ಟು ಚೂರ ಹರಡಿ ಬಿಸುಟಿತು.ಮಮತೆ ಮತ್ತೆಲ್ಲ ಒಟ್ಟು ಸೇರಿಸಿ,

ಪ್ರೀತಿ ಜೊತೆಗಿಟ್ಟು ಹೊಲಿಯಿತು.ಅಕ್ಕರೆ ನಿನ್ನ ನಡುಕಕೆ ಹೊದೆಸಿತು,

ಮನ ಮತ್ತೆ ನಿನ್ನನಾವರಿಸಿತು.

ಕ್ಷಮಿಸಿ... ನಾ ಜಾಣನಲ್ಲ....


--------------------------------

ದಡ್ಡ ಮನಸು ಕಾಣಲಿಲ್ಲ ದೊಡ್ಡ ಮಾತು,

ಕಣ್ಣಷ್ಟೇ ನೋಡಿ, ಮನ ಹಿಂಬಾಲಿಸಿತು.

ಸೊನ್ನೆಯೆಷ್ಟು, ಅಂಕಿಯೆಷ್ಟು ಲೆಕ್ಕವಿಲ್ಲ..

ಕಂಡದ್ದು ಬರೀ ಚಿತ್ರ....ಕಾಮನಬಿಲ್ಲು ,ನವಿಲುಗರಿ ಬಣ್ಣ,

ಅಮ್ಮನ ತುರುಬಿನ ಹೂವಿನ ಬಣ್ಣ.....

ಅಪ್ಪನ ಸೈಕಲ್, ಅಜ್ಜನ ನಶ್ಯದಡಬ್ಬಿ,

ಅಜ್ಜಿಯ ಬಳೆ, ಮುತ್ತಜ್ಜಿಯ ಕುಟ್ಟಾಣಿ.....

ಬೀಜ ಗಿಡವಾಗಿ, ಮೊಟ್ಟೆ ಮರಿಯಾಗಿ,

ಮೋಡ ಮಳೆಯಾಗಿ, ಅಕ್ಕಿ ಅನ್ನವಾಗಿ.....

ತಮ್ಮನ ನಗು, ಅಕ್ಕನ ಹಾಡು,

ಅಣ್ಣನ ದುಡಿಮೆ, ಗೆಳೆಯನೆದೆಗೂಡು....

ಇಷ್ಟೇ ಇದ್ದ ಚಿತ್ರ....

ನೋಟದಂತೆ, ಹಾಡಂತೆ

ಪವಾಡದಂತೆ, ದೇವನಂತನಿಸಿತು....ಕಾಣದ್ದು ಊಹಿಸಿ, ಕಲ್ಪಿಸಿ,

ಕದಡಿ, ಬಡಿದೆಬ್ಬಿಸುವದ್ದು

ನನಗಾಗಲಿಲ್ಲ, ಕ್ಷಮಿಸಿ ನಾ ಜಾಣನಲ್ಲ.....

ದಡ್ಡ ಮನಸು ಕಾಣಲಿಲ್ಲ ದೊಡ್ಡ ಮಾತು,

ಕಣ್ಣಷ್ಟೇ ನೋಡಿದ್ದು,

ಮನ ಹಿಂಬಾಲಿಸಿದ್ದು.....Monday, December 24, 2012

ಇಂದು ಮಧ್ಯಾಹ್ನ...


------------------

ಚಳಿಗಾಲದ ಚುಚ್ಚುವ ಬಿಸಿಲ ಮಧ್ಯಾಹ್ನ ಮಗಳನ್ನ ಡಾನ್ಸ ಕ್ಲಾಸಿಗೆ ಕರ್ಕೊಂಡು ಹೋಗ್ತಾ ಇದ್ದೆ. ಸೂರ್ಯನ ಜೊತೆ ಅರ್ಧ ಚಂದ್ರನೂ ಕಾಣಿಸ್ತಿದ್ದದ್ದು ಅವಳ ಕಣ್ಣಿಗೆ ಬಿತ್ತು. ನಾನು ಸ್ಕೂಟರ್ ಓಡಿಸುತ್ತಾ ಅದರ ಮೇಲಿನ ನಿಗಾದಿಂದ ಗಮನಿಸಿರಲಿಲ್ಲ. "ಅಮ್ಮ, ಚಂದಮಾಮ ರಾತ್ರಿನೇ ಕಾಣಿಸ್ಕೊಳ್ಳೊದಲ್ಲ್ವಾ?" ಅಂದ್ಲು, ಹೌದಮ್ಮಾ ಅಂದೆ. "ಅಂದ್ರೆ ತಂಪಾಗಿರುವ ಹೊತ್ತಲ್ಲಿ ಮಾತ್ರ ಹೊರಬಂದು ಅಭ್ಯಾಸ ಅಲ್ಲ್ವಾ ಅವನಿಗೆ?" ಅಂದ್ಲು, ಹೂಂ ಅಂದೆ, "ಮತ್ತೆ ನೋಡು ಈಗ ಹೇಳಿದ ಮಾತು ಕೇಳದೆ ಹೊರಗೆ ಬಂದುಬಿಟ್ಟಿರಬೇಕು, ಎಷ್ಟು ಸುಸ್ತಾದಂತೆ ಕಾಣ್ತಿದಾನೆ, ಪಾಪ... ಆವತ್ತು ಊರಲ್ಲಿ ಚಂಡಿಕಾಹೋಮಕ್ಕೆ ಮಲ್ಲಿಗೆಮಾಲೆ ಹಾಕಿದಾಗ ನಿಧಾನಕ್ಕೆ ಬೆಂಕಿ ಸುಡ್ತಾ ಇದ್ದಾಗ ಕಾಣ್ತಿತ್ತಲ್ಲಾ ಹಾಗೆ ಕಾಣ್ತಾ ಇದ್ದಾನೆ ಅಲ್ಲ್ವಾಮ್ಮಾ...".ತಲೆಯೆತ್ತಿ ನೋಡಿದರೆ.. ಹೌದು... ನೀಲಾಕಾಶದ ಶುಭ್ರತೆಯಲ್ಲಿ ತುಂಡುಚಂದ್ರನ ಬಿಳುಪು ಮಸುಕಾಗಿ ಕಾಣುತ್ತಿತ್ತು...ಅವಳ ಮಾತಿನ ಪ್ರಾಮಾಣಿಕತೆಗೋ ಏನೋ ನನಗೂ ಆತ ಸುಸ್ತಾದವನಂತೆ ಕಂಡ. ಮಗಳ ಮಿಡಿದ ಮನದ ಚಂದಮಾಮನೊಡನಿನ ಆತ್ಮೀಯತೆಯ ಪರಿ ತುಂಬಾ ಆಪ್ತವೆನಿಸಿತು... ಎಷ್ಟು ಸರಳ ಮತ್ತು ನೇರ ಆಲೋಚನೆಯಲ್ಲ್ವಾ ಮಕ್ಕಳದ್ದು?!

ಜೊತೆಗೆ ಇನ್ನೊಂದು ವಿಷಯ ಮಗ್ಗುಲು ಬದಲಾಯಿಸಿತು. ದಸರಾರಜೆಗೆ ಊರಿಗೆ ಹೋಗಿದ್ದಾಗ ದೇವಸ್ಥಾನವೊಂದರಲ್ಲಿ ಚಂಡಿಕಾಹೋಮ ನಡೆಯುತ್ತಿತ್ತು. ಅಲ್ಲಿ ಹೋಮಕುಂಡಕ್ಕೆ ಆಹುತಿಯೆಂದು ಹಾಕುತ್ತಿದ್ದ ರಾಶಿ ಹೂವು, ಹಣ್ಣು, ತುಪ್ಪ, ಹಾಲು, ಬಟ್ಟೆ....ಇವೇ ಮುಂತಾದ ಜೀವನಾವಶ್ಯಕ ವಸ್ತುಗಳು ಉರಿದುಹೋಗುತ್ತಿದ್ದುದು ಮುಂಚೆಯೂ ಹಲ ಬಾರಿ ನೋಡಿದ್ದೆನಾದರೂ ಆವತ್ತು ಮೊದಲಬಾರಿಗೆ ನನ್ನ ಮನಸನ್ನ ಕಳವಳಗೊಳಿಸಿತ್ತು. ಕಣ್ಣು ಅಪ್ರಯತ್ನವಾಗಿ ಅಲ್ಲೇ ನಿಂತು ನೋಡುತ್ತಿದ್ದ ನಮ್ಮೊಂದಿಗೆ ದೇವಸ್ಥಾನಕ್ಕೆ ಬಂದಿದ್ದ ನಮ್ಮ ಕೆಲಸದವಳ ಮಗಳ ಮೇಲೆ ಹರಿಯಿತು. ಏನು ನಡೆಯುತ್ತಿರಬಹುದು ಆ ಮನದಲ್ಲಿ...?! ಅನ್ನುವ ಪ್ರಶ್ನೆ ಕಾಡಿತ್ತು...ನನ್ನ ಮಗಳ ಮನಸ್ಸಿನಲ್ಲಿ ಆ ಹೂವಿಗೆ ನೋವಾಗಿರಬಹುದು ಎಂಬ ಚಿಂತನೆಯ ಹಿನ್ನೆಲೆಯಲ್ಲಿ ಮೂಡಿದ ಆ ಚಿತ್ರ ಇವತ್ತಿನವರೆಗೂ ಅಚ್ಚಳಿಯದೇ ನಿಂತಿದೆ ಎಂದರೆ, ಇನ್ನು ಬಡತನದಲ್ಲಿ ಬೆಳೆಯುತ್ತಿರುವ ಮಗುವಿನ ಮನಸ್ಸಿನಲ್ಲಿ ತಮ್ಮನ್ನು ಕಾಡುವ ಕೊರತೆಯ ಹಿನ್ನೆಲೆಯಲ್ಲಿ ಮೂಡಿದ ಜೀವನಾವಶ್ಯಕ ವಸ್ತುಗಳನ್ನು ಸುಡುವ ಆ ಚಿತ್ರ ಇನ್ನೆಷ್ಟು ಢಾಳಾಗಿ ಪರಿಣಾಮ ಬೀರಿರಬಹುದು! ಯಾಕೋ ಕೆಟ್ಟದೆನಿಸಿತು... ಎಷ್ಟರ ಮಟ್ಟಿಗೆ ಸರಿಯೋ ಗೊತ್ತಿಲ್ಲ... ಆದರೆ ಬದಲಾಗಿರುವ ಇಂದಿನ ಪ್ರಸ್ತುತ ಪ್ರಾಕೃತಿಕ, ಸಾಮಾಜಿಕ ಸಂದರ್ಭಗಳಲ್ಲಿ ನಮ್ಮ ಆಚರಣೆಗಳೂ ಜೀವನ್ಮರಣದ ತುರ್ತಿಗೆ ಸ್ಪಂದಿಸುವತ್ತ ಹೆಚ್ಚು ಜಾಗೃತವಾಗಬೇಕು ಅನಿಸುತ್ತಿದೆ.....

Sunday, December 23, 2012

ನಾನಾಗುಳಿವುದೆ ಸಾಕು...


----------------------

ಒಂದು ಹೆಸರಿಲ್ಲದೆಡೆ,

ಮಿದು ಪಸೆ ನೆಲ,

ಮೂಡಿದಚ್ಚು ತುಸು ಆಳ.

ಅಚ್ಚು ಆಕಾರವಾಗಿ ಅಕ್ಕರ,

ಬಣ್ಣದ ಭಾವದಲದ್ದಿ,

ನಿವೇದನೆ, ಬಣ್ಣನೆಯ ಚಿತ್ರಣ.

ಹೆಸರಿಲ್ಲ ಪಾಪ...ಮೂಡಿದ ಕ್ಷಣ

ಪ್ರಶ್ನೆ- ಇರಬಹುದೇ ನಾ ಕವಿತೆ?!ಯತಿಪ್ರಾಸ, ಗೇಯತೆ,

ವಸ್ತುಗಾಂಭೀರ್ಯವಿಲ್ಲ,

ಬರೀ ಅನಿಸಿಕೆಗಳ ಮೊತ್ತ...

ಭಾವನೆಗಳ ವ್ಯರ್ಥ ವೃತ್ತ....

ಮಿಗಿಲಾಗಿ ಹುಟ್ಟಿದ್ದು ಹೆಸರಿಲ್ಲದೆಡೆ.

ಅಲ್ಲವೆನಿಸಿ, ನಾನಾರೆಂಬ ಜಿಜ್ಞಾಸೆ.ಹೊರಟ ಗುರಿ ಸ್ವಂತಕೇ ಸ್ವಪರಿಚಯ...

ಕಂಡವರ ಉದ್ಗಾರದಿ ಹೆಸರು,

ಮನದಾಳದಿ ಅಸ್ತಿತ್ವಶೋಧ.ಹೂದೋಟ ಹೊಕ್ಕು, ಹೂವು,

ಹೂ ಮೇಲಿನ ಚಿಟ್ಟೆಯಲಿ..

ಮನೆಯಂಗಳ ಹೊಕ್ಕು ಪ್ರೇಮ,

ಮುನಿಸು, ಜಗಳದಲಿ...

ಗುಡಿಸಲು ಹೊಕ್ಕು ಬೆತ್ತಲೆ ಹಸಿವಲಿ,

ದೇಗುಲ ಹೊಕ್ಕು ಭಕ್ತಿಯಲಿ,

ಹುಚ್ಚರಸಂತೆಯ ಹುಚ್ಚಲಿ...

ಸ್ಮಶಾನಮೌನ ಹೊಕ್ಕು

ಅಳಿದಾತ್ಮದ ದಿಕ್ಕೆಟ್ಟ ಪಿಸುನುಡಿಯಲಿ,

ಉಳಿದವುಗಳ ಸದ್ದಿಲ್ಲದಳುವಲಿ

ತನ್ನನೇ ಕಂಡು ಕಕ್ಕಾಬಿಕ್ಕಿ...ಮೆಚ್ಚುಗೆ, ಟೀಕೆ, ಅವಗಣನೆ, ಅವಹೇಳನ,

ತಿದ್ದುಪಡಿ, ಮಾರ್ಪಾಟುಗಳಲಿ

ಹಾದವರ ತರ್ಕದ ಮೂಸೆಯೆರಕಕೆ

ಬಿದ್ದೇಳುತ, ಏರಿಳಿಯುತ ಸಾಕಾಗಿ

ಹೆಸರಿಲ್ಲದೆಡೆಗೇ ಹಿಂತಿರುಗಿತು..

ಹೆಸರು ಬೇಡ, ಅಸ್ತಿತ್ವ ಬೇಡ...

ನಾನಾಗುಳಿವುದು ಸಾಕೆನಿಸಿತು....

Saturday, December 22, 2012

ತಾಯಾಗದ ತಾಯ್ತನ


----------------------------

ಹೆರದ ಹೆಣ್ಣ ಹೆಳವ ತಾಯ್ತನಕೆ,

ಜಗದಗಲ ನಡೆವಾಸೆ.

ಹೊತ್ತು ಮಣಭಾರದ ಹೊಟ್ಟೆ,

ಊರೆಲ್ಲ ಮೆರೆವಾಸೆ.

ಮುಳ್ಳುಹಂದಿಯ ಮುಳ್ಳ

ನೆತ್ತಿಯಲಿ ಮುಡಿವಾಸೆ.

ಮಡಿವ ನೋವುಂಡು,

ಮಿಗಿಲಿರದ ಪಟ್ಟಕೇರುವಾಸೆ.

ಮೂಡದ ಎದೆಹಾಲಲಿ

ಕುಬುಸ ನೆನೆಸುವಾಸೆ.

ಕುರುಡು ಮಮತೆಗೆ

ಹಾಲ್ತುಟಿಯ ತೃಪ್ತಿ ಕಾಂಬಾಸೆ.

ಕಚ್ಚಿ ಹಾಲುಂಡ ಕಂದನ

ಕಳ್ಳನೆನುತ ನಗುವಾಸೆ.

ಕವಳದೆಲೆಯಲಿ

ಕಪ್ಪು ತುಟಿ ಕೆಂಪಾಗಿಸುವಾಸೆ.

ಬಾಣಂತಿ ಮದ್ದಿನಾಸೆ,

ಕದ್ದು ಬಡಿಸುವ ತುಪ್ಪದಾಸೆ.

ಅಮ್ಮ ಮೈ ತಿಕ್ಕಿ ತೊಳೆವ

ಎಣ್ಣೆ ಸ್ನಾನದಾಸೆ.

ನೋಡಬಂದ ನೆಂಟರ

ಹೋಲಿಕೆಯ ಮಾತಾಸೆ.

ನೆಟ್ಟ ಆ ದೃಷ್ಟಿ ನೀವಾಳಿಸೋ

ಅಮ್ಮನ ಮುಚ್ಚಟೆಯಾಸೆ.

ಸೂರಿಲ್ಲದ ಜಗಲಿತೊಲೆಗೆ

ತೊಟ್ಟಿಲ ಕಟ್ಟುವಾಸೆ

ಮೂಕ ಬಾಯ್ತುಂಬ

ಜೋಗುಳ ಹಾಡುವಾಸೆ...

ಆ ಬೊಚ್ಚುಬಾಯಲಿ

ಅದರಜ್ಜನ ಕಾಂಬಾಸೆ..

ಅಷ್ಟಗಲ ಕಣ್ಣಲಿ ನಾದಿನಿ,

ನಗುವಲಿ ತಾಯಿ, ಅಳುವಲಿ ತಂಗಿ,

ನಿಲುವಲಿ ಅತ್ತೆ, ಹಣೆಯಲಿ ಪತಿಯ

ನಿಲಿಸಿ ನಿಟ್ಟಿಸುವಾಸೆ...ಬರಿದೇ ಕಾಯುತದೆ..

ಮರುಳು ಜೀವ, ಮರೆತಿದೆ,

ಹಣೆಮೇಲೆ ಆಸೆಯೇನೋ

ಉದ್ದ ಕವನವಾಯ್ತು..

ತೀರುವ ಕ್ಷಣ ತಾನು

ಬರೆಸಿ ತಂದಿಲ್ಲ.

ಇದಕಿಂತ ಬೇಕೇ ಪ್ರಳಯ...?


--------------------------------

ಈ ಮೂಡಣದ ಕೆಂಪು ನಿನ್ನೆಗಿಂತ ಸುಂದರ,

ನಾಚಿದ ಕೆಂಗುಲಾಬಿ ಕೆನ್ನೆಯಂತೆ ಮಧುರ

ಕೆಂಪಿದ್ದ ಕಳೆದ ಪಡುವಣದ ಕಳೆ ನೆತ್ತರಂತೆ,

ಕಂಡಿತ್ತು.. ಸುಡುಜ್ವಾಲೆಯ ಕೆನ್ನಾಲಿಗೆಯಂತೆ.ಭಯ ದಾಟಿಸಿದ ಕೆಂಪು ಭರವಸೆಯ ಹರಿಕಾರ

ಮುಳುಗಿಸುವ ದಿಶೆಯಲದೇ ಕೆಂಪು ಭಯಂಕರ....ಈ ತೇದಿ ದಾಟಿದ ನೆಮ್ಮದಿ,

ಹೇಗೋ ಏನೋ ಮುಂದೆ...ಒಳಗುದಿ

ಅನ್ನನೀರಿಲ್ಲದ ನಾಳೆಯಲು ಬದುಕುವಾಸೆ...

ಕನ್ನ ಹಾಕುತ ತಾಯೊಡಲಿಗೇ ಉಳಿಯುವಾಸೆ..ದಾಟಿದ ಕಂಟಕ ಗೆಲುವೆನಿಸದ ಆ ಒಂದು ಕ್ಷಣ,

ಮನ ಹಾಡಿದ್ದು ಜೈಕಾರವಲ್ಲ, ಕಾಡಿದ್ದು ಬುದ್ಧಿವಿನಾಶ.

ಬುದ್ಧಿ ನಶಿಸಿದ ದೇಹರಾಶಿ, ನಾಳೆ ತುಂಬೆಲ್ಲ..

ಭವಿಷ್ಯ ಕಂಡ ಕಣ್ಣು ತತ್ತರಿಸಿದ್ದು, ನಿನ್ನೆಯಂತಲ್ಲ......ಪ್ರಕೃತಿವಿಕೋಪವಿರದಿರದು, ಮಾಡಿದ್ದಕ್ಕುಣ್ಣಲೇಬೇಕು,

ಅಭೂತಪೂರ್ವ ಅತಿರೇಕ, ಅಂಥಹುದೇ ಫಲ.. ಬಹುಶಃ

ದೇಹದಳಿವಲ್ಲ, ಬುದ್ಧಿಚೇತನವಿರದ, ಗುರಿ-ಅರಿವಿರದ,

ಸತ್ಯನಿಷ್ಠೆಯಿರದ ತಳಿ ಮೊಳೆವುದಕಿಂತ ಬೇಕೇ ವಿನಾಶ....???

Friday, December 21, 2012

ಉತ್ತರವಿಲ್ಲದ ಪ್ರಶ್ನೆಗಳು


-------------------------------

ಕುಂತಿಗಂದೂ ಸಂಜೆಯಲ್ಲದ, ನಡುವಲ್ಲದ

ದಿನದ ಘಟ್ಟದಿ ಪ್ರಶ್ನೆ ಮಾಡುವಾಸೆ....

ಯಾರನ್ನು.., ಉತ್ತರವಿದೆಯೇ.., ಎಲ್ಲಿದ್ದೀತು....,

ಇದ್ದರೆ ಅರಗೀತೇ...ಒಂದೂ ಗೊತ್ತಿಲ್ಲ....

ಕಂದಮ್ಮಗಳ ಯುದ್ಧ, ಸಾವು-ನೋವು ಬಿಟ್ಟು,

ಕಳೆದ ಕಾಲದ ಗೊಡವೆಯೇಕೆ?.. ಗೊತ್ತಿಲ್ಲ...

ಬಿಟ್ಟಿನ್ನೇನೂ ಮನ ನೋಡುತಿಲ್ಲ, ಆಡುತಿಲ್ಲ...

ಸಾವಿನೆದುರು ವ್ಯರ್ಥ ಎಂಬುದಕರ್ಥ ಹುಡುಕಿದಂತೆ.ಮೇಲೆ ಸುಡದ, ಆದರೆ ಆರಿಲ್ಲದ ಸೂರ್ಯ...

ಕೆಳಗೆ ತಣ್ಣನೆ, ಆದರೆ ತಣಿಸದ ನೀರು..

ದೇಹಕೆ ವೈಶಾಖದರಿವು, ಉರಿಯಲ್ಲದ ಬಿಸಿ,

ಪುಟ್ಟಪಾದಕಷ್ಟೇ ನೀರು, ಸಾಕೆನಿಸದ ತಂಪು.ಅರಿಯದ ಪ್ರಾಯ ಗುರುವಶಕೆ ಸಂದುದೇಕೆ?

ಅರಳದ ಕಾಯಕೆ ಮರಿಮಾಡೊ ವರವೇಕೆ?

ಮೂರ್ಖಯತ್ನಕೆ ಮೇರುದೈವದ ಒತ್ತಾಸೆಯೇಕೆ?

ಕುಡಿಯೊಡೆದ ಬಂಧ ತಾಯ್ಗರುಳು ಕಡಿದುದೇಕೆ?

ತನ್ನವನೇ ತೊರೆದ ನಿರ್ವಿಕಾರಿ ತಾಯಿಗೊಪ್ಪಿಸಿದ್ದೇಕೆ?

ಗಂಡೆನಿಸದ ಗಂಡುಗಲಿ ತನ್ನ ಗಂಡನಾದುದೇಕೆ?

ಹಿಂದೆ ಮಾದ್ರಿಯೇಕೆ? ಏರುಪ್ರಾಯದಿ ವಾನಪ್ರಸ್ಥವೇಕೆ?

ಪರಬೀಜಕೆ ನೆಲವಾಗೆ ಪತಿ ನೀರೆರೆದುದೇಕೆ?

ಮುಚ್ಚಿಟ್ಟ ತೀರದಾಸೆಗಳ ತಾನಡಗಿಸಿದ್ದೇಕೆ?...

ಇನ್ನೂ ನೂರೊಂದಿತ್ತು... ಆದರಿಲ್ಲೇ... ಇಲ್ಲೇ...

ಮಾನಸತಳ ನಡುಗಿ, ಮತ್ತೆ ಒಳಗು ಮೂಕ,

ಪ್ರಶ್ನೆಮಾಲೆ ಕಡಿದು, ಭಾವ ಚಲ್ಲಾಪಿಲ್ಲಿ,

ಸೂರ್ಯ ನಿರುತ್ತರ, ಮುಖಮುಚ್ಚಿ ಮಾಯ,

ಪ್ರಶ್ನೆಯಲೇ ಬೆಳಗು ಸಂಜೆ, ರಾತ್ರಿಯಾಗಿ

ಕತ್ತಲೆಯೇನು ಉತ್ತರಿಸೀತು?

ಕೆಳಗೀಗ ಪಾದಕೆ ಕೊರೆವ ಶೈತ್ಯ,

ಬಿಸಿಯಲಿರಲಿಲ್ಲ, ಈಗ ಬೇಕಿಲ್ಲ...

ಒಳನಡೆಯಿತು ದೇಹ, ಮನಸಲ್ಲೇ...

ಮುಂದಿನ ಜೀವಿತದ ಪ್ರಶ್ನೆಮಾಲೆ ಹೆಣೆಯುತ್ತ...

ಬರಲಿರುವ ನಾಳಿನ ಆ ಘಟ್ಟಕೆ ಮತ್ತೆ ಕಾಯುತ್ತ...ಅದುರಿ ಉದುರಿ ಬಿತ್ತು ಮಾತೊಂದು,


ಮುತ್ತಾಗಲು, ಸೊತ್ತಾಗಲು ಹೊರಟಿತ್ತು,

ಆದದ್ದು ಬಾಣ...ಚುಚ್ಚಿತು.ಎದ್ದು ಬಿದ್ದು ಮೂಡಿತ್ತು ನಗುವೊಂದು,

ಛಾಪಾಗಲು, ಚೆಲುವಾಗಲು ಹೊರಟಿತ್ತು,

ಆದದ್ದು ಜೊಳ್ಳು....ಹೊರತಳ್ಳಲ್ಪಟ್ಟಿತುಕಾದು ಕದ್ದು ಹುಟ್ಟಿತ್ತು ನೋಟವೊಂದು,

ಪ್ರೀತಿಯಾಗಲು, ಭಕ್ತಿಯಾಗಲು ಹೊರಟಿತ್ತು,

ಆದದ್ದು ಸುಳ್ಳು...ನಗಣ್ಯವಾಯಿತುಮಾತ ಹಿಂದೆ ಸತ್ಯ, ನಗುವ ಹಿಂದೆ ತೃಪ್ತಿ

ನೋಟದ ಹಿಂದೆ ನಂಬಿಕೆಯಿರದೆ,

ಅವು ಅವಾಗಲಿಲ್ಲ, ಎಲ್ಲೂ ಸಲ್ಲಲಿಲ್ಲ.

ನಿನಗೆ ನೀನೇ ಸಾಟಿ....


-----------------------

ಪ್ರಾಣಿಯಂತೆನಲೇ..?

ಹೊಟ್ಟೆ ತುಂಬಿದ ಮೇಲೆ

ಹಾವು ಕಪ್ಪೆಗೂ ಪ್ರೀತಿ... ನಿನಗೆ...?

ತುಳುಕುವುದ ತುಂಬಿಸುವ ಜಾಡ್ಯ..

ದೇಹದಾಸೆಗಲ್ಲಿ ಸತ್ವ ಸಾಧಿಸಿ ತೋರಿ,

ಒಪ್ಪಿದ ಹೆಣ್ಣಲೇ ಕಾಮಕೇಳಿ... ನಿನಗೆ....?

ಕಣ್ಕಟ್ಟಿ, ಬಾಯ್ಕಟ್ಟಿ ದೇಹ ಬಳಸೋ ಆತುರ...

ಆಹಾರಕೆ, ಜೀವಭಯಕೆ ಕೊಲುವ ಅವೆಲ್ಲಿ...,

ಬಯಲಾಗುವ ಭಯಕು ಕೊಲುವ ನೀನೆಲ್ಲಿ....?!

ಪ್ರಕೃತಿನಿಯಮ ಮೆಟ್ಟಲರಿಯದ ಅವೆಲ್ಲಿ...,

ಮೀರುವುದೇ ಜೀವನಧರ್ಮವಾದ ನೀನೆಲ್ಲಿ...?!

ಮಾತಿಲ್ಲದೆ, ಸದ್ದಿಲ್ಲದೆ, ಪ್ರೀತಿಸುವ ಅವೆಲ್ಲಿ...,

ಮಾತಸದ್ದಲೇ ಅದ ತರಿವ ನೀನೆಲ್ಲಿ...?!ರಾಕ್ಷಸನಂತೆನಲೇ....?

ವರ್ಷವದೆಷ್ಟೋ ಒಪ್ಪಿಗೆಗೆ ಕಾದ ರಾವಣ,

ಕ್ಷಣವೂ ಬೇಕಿಲ್ಲ ನಿನಗೆಸಗೆ ಶೀಲಹರಣ, ಪ್ರಾಣಹರಣ.

ಚೆಲುವು ಅಮೃತವೆಂದಿತ್ತ ವಿಷಕೆ ಸೋತಸುರರು,

ನಿನಲಿದೆ ಹಾಲಾಹಲ, ಕಣ್ತಣಿಸಿದನೆಲ್ಲ ಸುಡಲು.

ಬಯಸಿದ್ದ ಗೆದ್ದುಣುವ ದುರಾಸೆಯವರದು,

ಇದ್ದುದೆಲ್ಲವ ಕದ್ದುಣುವ ಕೆಟ್ಟಕನಸು ನಿನ್ನದು.

ಸಾವ ಗೆಲಲು, ವಿಷದೆದುರು ಹೋರಾಡಿ ಸತ್ತರು.

ನಿನಗೆ ಸಾವಿಲ್ಲ, ವಿಷವುಂಡು ಉಳಿವ ತಳಿ ನಿನದು..

ಮೇಲೆ ದೈವತ್ವ, ಕೆಳಗೆ ಕಾಮ ಕಂಡವರು ದೈತ್ಯರು,

ನಿನ ಕುರುಡುಕಾಮಕೆ ಮಗಳೂ ಒಂದೆ, ಸೂಳೆಯೂ..ಮಾನವ ಜನ್ಮ ದೊಡ್ಡದು... ಯಾವಳತೆಯಲ್ಲಿ...?

ನಿನಗೆ ನೀನೇ ಸಾಟಿ, ನೀಚತನದಲ್ಲಿ...

ಆ ಕುಲದ ಮರಿ ಮುಖಮುಚ್ಚಿ, ಬೆಚ್ಚಿ ಬಾಳುವೆ,

ನಾಚಿಕೆ, ಅವಮಾನ, ನೋವು ಜೊತೆಗೆ ಭಯದಲಿ....

Thursday, December 20, 2012

ಇಲ್ಲಿ ನಾನೆಲ್ಲಿ...?!


---------------------

ಅಖಿಳಾಂಡ ಕೋಟಿ ಬ್ರಹ್ಮಾಂಡ,

ಸೌರವ್ಯೂಹದ ನವಗ್ರಹ, ಉಪಗ್ರಹಗಳು,

ಅಸಂಖ್ಯಾತ ತಾರೆ, ಧೂಮಕೇತುಗಳು

ಹೆಸರಿಟ್ಟಿಲ್ಲದ ಇನ್ನೆಷ್ಟೋ ಆಕಾಶಕಾಯಗಳು...

ನಡು ಪುಟ್ಟದೊಂದು ಅಸ್ತಿತ್ವ ಈ ಭೂಮಿ..

ನೂರಾರು ಪಥಚಲನದ ನಡು ದಾರಿ ಮಾಡಿ,

ತನದರಲಿ ಸ್ವಂತಕೂ ಅವಗೂ ಗಿರಗಿರ ಸುತ್ತಿ..

ಪೂರ್ವಕರ್ಮದ ಪುಣ್ಯ.. ಲೆಕ್ಕವಿಲ್ಲದ ಸಂತಾನ

ಅದೃಶ್ಯಜಂತುವಿನಿಂದ ಭೀಮ ಕಾಯದವರೆಗೆ...

ಕೋಟ್ಯಾಂತರ ನೆಲಜಲವಾಯುವಾಸಿ ಪ್ರಭೇದ..

ಅವಕುಸಿರು, ಅನ್ನ.. ಇನ್ನಷ್ಟೇ ಹಸಿರು, ಗಿಡಮರ.....

ಒಂದರಂತೊಂದಿಲ್ಲ, ಅದಕರದೇ ಬಣ್ಣ

ನಿರ್ದಿಷ್ಟ ಜನ್ಮ, ಕರ್ಮ...

ಊಟ ಬೇಯಿಸಿ, ಉಪ್ಪುಹುಳಿ ಬೆರೆಸಿಟ್ಟವರಿಲ್ಲ

ನೀರು ಕಾಸಿಟ್ಟವರಿಲ್ಲ, ಅಲ್ಲಲ್ಲೆ ಅನ್ನ, ನೀರು...

ಮನುಕುಲಕೇ ಲೆಕ್ಕವಿಲ್ಲದ ಗಾತ್ರ, ಮೀರಿದ ಮಿತಿ,

ಇಷ್ಟೊಂದರ ಮಧ್ಯೆ ನಾನು ನಾನೆನುವ

ನಾನೆಷ್ಟನೇಯವನು, ಎಲ್ಲಿಯವನು, ಪಾತ್ರವೇನು...?!

ಎಷ್ಟು ಪ್ರಮುಖನು, ಪ್ರಬಲನು, ಪ್ರಸಿದ್ಧನು...?!

ಸಾಗರದಿ ಹನಿ ನೀರೆಂದರೆ ತಾನೆಂದಂತೆ

ಕಂದನಾಟಕೆ ಏನಂದಾಳು ಪ್ರಕೃತಿ ಮಾತೆ?

ನಕ್ಕುಬಿಟ್ಟರಾದೀತು, ಅತ್ತರದು ಪ್ರಳಯವೇ....ಉತ್ತರ.


---------------------------

ಬಿಡು ಬಿಡು ನಾ ಹೋಗಬೇಕೆಂದ

ಕಟ್ಟಿಟ್ಟ ಮನಸನೊಂದು ದಿನ ಬಿಟ್ಟುಬಿಟ್ಟೆ...ಕೋಶಹರಿದು ಹುಳು, ಬಣ್ಣದ ಚಿತ್ರವಾದ

ಚಿಟ್ಟೆ ಕಂಡಿತು, ಹಿಂಬಾಲಿಸಿತು...

ಪುರ್ರನೇ ಹಾರಿ ಹೂವಿಂದ ಹೂವಿಗೆ,

ಅಲ್ಲೆಷ್ಟಿತ್ತೋ ಹೀರಿ, ತೇಗಿ...ಮುಂದಿನದು ಮುಂದೆ

ಯಾವ ಬಂಧವೂ ಇಲ್ಲ, ಬೆಸುಗೆಯೂ....

ಹೂವಿಗೂ, ಚಿಟ್ಟೆಗೂ....ಹಾರುತಲೇ, ಕುಡಿಯುತಲೇ..

ಬೆಳಗು ಬೈಗಾಗಿ ...ರಾತ್ರಿ ಬೆಳಗಾಗಿ....

ಚಿಟ್ಟೆ ಯಾನ ಮುಗಿಸಿತ್ತು, ಮನಸು ಹಿಂದಿರುಗಿತ್ತು...

ನೀನ್ಯಾಕೆ ಹೀಗಿಲ್ಲ ಅಂದಿತು, ನಾ ನಿನ್ನಿಂದಲೇ ಅಂದೆ.ಬಿಡು ಬಿಡು ಮತ್ತೆ ನಾ ಹೋಗಬೇಕೆಂದ

ಕಟ್ಟಿಟ್ಟ ಮನಸ ಮತ್ತೆ ಬಿಟ್ಟುಬಿಟ್ಟೆ...ನೇರವಲ್ಲದ ಗೆರೆಯಲಿ ಫಳಫಳ....

ಮಿಣುಕುಹುಳ ಕಂಡಿತು, ಹಿಂಬಾಲಿಸಿತು...

ಕತ್ತಲಲಿ ಬೆಳಗುತ್ತ, ಬೆಳಕಲಿ ಲೀನ..,

ಒಮ್ಮೆ ಕಾಣಿಸುತ್ತ, ಒಮ್ಮೆ ಮೌನ....

ತಾ ಕಾಣದ ಸೊಬಗ ಬೆನ್ನ ಹಿಂದಿಗುಣಿಸುತ್ತ...

ಯಾವ ಅಪೇಕ್ಷೆಯೂ ಇಲ್ಲ, ನಿರೀಕ್ಷೆಯೂ...

ಹುಚ್ಚೆದ್ದು ಹಿಡಿಯುವ ಆಸೆಯ ಕೈತಾಗಿ,

ಕತೆಮುಗಿದಿತ್ತು, ಮನಸು ಹಿಂದಿರುಗಿತ್ತು..

ನೀನ್ಯಾಕೆ ಹೀಗಿಲ್ಲ ಅಂದಿತು, ನಾ ನಿನ್ನಿಂದಲೇ ಅಂದೆ.ಬಿಡು ಬಿಡು ಪುನಃ ಹೋಗಬೇಕೆಂದ

ಕಟ್ಟಿಟ್ಟ ಮನಸ ಪುನಃ ಬಿಟ್ಟುಬಿಟ್ಟೆ...ಒಂದು ಗಾಳಿತೇರು, ಅಳುನಗುಗಳೇ ಚಕ್ರ...

ಮೆತ್ತೆಹಾಸಲಿ ಮುದ್ದು ರಾಜಕುಮಾರಿ, ಹೆಸರು ದೃಷ್ಟಿ.

ಮನ ತೇರನೇರಿತು.... ಗಾಳಿ ನಡೆದೆಡೆ ಪಯಣ,

ದಿಕ್ಕಿಲ್ಲ ಗುರಿಯಿಲ್ಲ,

ನಿಂತೆಡೆ ಬಂಧ-ಬೆಸುಗೆ, ವಿದಾಯದ ಗಾಯ,

ನಾಳಿನ ಆಣೆ, ಹಿಂದಿನ ದೂರು,

ಒಂದಷ್ಟು ಅಪೇಕ್ಷೆ-ನಿರೀಕ್ಷೆ, ಸೋಲು-ಗೆಲುವು,

ಮನಸ್ತಾಪ-ಪಶ್ಚಾತ್ತಾಪ...ಕ್ಷಣ ಯುಗವೆನಿಸೋ ತಾಪ

ಎಷ್ಟು ದೂರಕು ಮುಗಿಯದ ಯಾನ... ಮನಸು ಹಿಂದಿರುಗಿತು.ಈ ಬಾರಿ ಪ್ರಶ್ನೆಯಲ್ಲ... ಉತ್ತರವ ತಂದಿತ್ತು...

ದೃಷ್ಟಿಯೊಡನಿರೆ ನಾನು, ಯಾನ ನಿನದರಂತೆ...

ಜೀವನೋತ್ಸಾಹದ ಹಿಂದಿರೆ,

ಚಿಟ್ಟೆಯದರಂತೆ, ಮಿಂಚುಹುಳದಂತೆ.Wednesday, December 19, 2012

ನಾಳೆ ಬರಲಿದೆ...


----------------------------------

ಮೊದಲಸಲ ಹೂವಂತೆ ಮುಟ್ಟಿದ್ದು,

ಮಂದಮಾರುತದಂತೆ ಸವರಿದ್ದು,

ಮೈಮರೆತದ್ದು...ಕಣ್ಣ ಕಣ್ಣಲಿ ಮೀಯಿಸಿದ್ದು,

ರೆಪ್ಪೆಯಲಿ ತೋಯ್ದುದನೊರೆಸಿದ್ದು,

ಕನಸಲಿ ಅಲಂಕರಿಸಿದ್ದು..ಮುತ್ತಲಿ ಮೊಗ ಮರೆ ಮಾಡಿದ್ದು,

ಮತ್ತೆ ಮತ್ತೇರಿದಂತಾಡಿದ್ದು,

ಇನ್ನೂ ಚಂದ ನಾನೆನಿಸಿದ್ದು.....ಬೆಸುಗೆಯಿನ್ನೂ ಹಸಿಹಸಿ, ನಾ ಪ್ರೀತಿಯೆರೆದಿರುವೆ,

ಒಣಗಬಿಟ್ಟಿಲ್ಲ.......

ನೀ ಒಣಗಿಸಿರುವೆ, ಇಂದು ನಿನ್ನ ಸ್ಪರ್ಶವೇ ಹೇಳಿತು,

ಒಣಗಿ ಒರಟಾಗಿಬಿಟ್ಟಿದೆ....

ಗೊತ್ತು..... ನಾ ಮೌನವಪ್ಪಬೇಕು,

ಒಪ್ಪಬೇಕು......ಒಪ್ಪಿಸಿಕೊಳಬೇಕು...ತಾಳಿಕೊಳ್ಳುವುದ ನಾ ಬಲ್ಲೆ, ಮನಸಲ್ಲ...

ಬಹುಶಃ ಈಗದು ಹಾಗಿಲ್ಲ, ತಲೆ ಬಾಗದು...

ಸುಮ್ಮಸುಮ್ಮನೆ ನಗದು, ನುಂಗದು...

ಜಾರಿಬಿದ್ದ ತಾರೆ ನಗು, ಶುಭಕೋ ಅಶುಭಕೋ

ಕಣ್ಣಹನಿಯಾಗಿ ಉದುರಿದ್ದಕೆ....

ನಿನ್ನ ಹಣೆಗೆರೆಯ ನಡು ಕುಳಿಯಾಗಿದೆ....ನೀ ತಯಾರಿರು... ನಾಳೆ ಬರಲಿದೆ ....

ಒಣಗಿದ್ದ ಚಿಗುರಿಸುವುದೋ,

ಒಲೆಗಿಟ್ಟು ಚಳಿ ಕಾಯಿಸುವುದೋ...

ಈ ರಾತ್ರಿಯೇ ನಿರ್ಧರಿಸಬೇಕಿದೆ.....

ಯಾಕೆ ತಡ ಮಾಡಿದೆ?


--------------------------------------

ಯಾಕೆ ತಡ ಮಾಡಿದೆ?


--------------------------------------

ಒಂದಿಷ್ಟೂ ಮಸುಕಾಗಿಲ್ಲ ನೀ ಬಂದ ಗಳಿಗೆ.

ಹಾಲಾಗದ ಹಾಲ್ಗ್ರಂಥಿಗಳೂ ಸ್ರವಿಸಿದಂತೆ,

ತುಂಬದೊಡಲಿಗೂ ಮಡಿಲುತುಂಬಿದಂತೆ,

ಕುರುಡಗೆ ಕಣ್ಣು, ಹೆಳವಗೆ ಕಾಲು... ಇನ್ನೂ ಹೀಗೇ....ಕೊರತೆಪಲ್ಲಕ್ಕಿ ಆಸೆ ಹೊತ್ತ ಮೆರವಣಿಗೆಗೆ,

ಸಂತೃಪ್ತಿಸಮೃದ್ಧಿ ಛತ್ರಚಾಮರವಾದ ಹಾಗೆ.

ಕುಡಿಯೇಳದ ಗರ್ಭದಿ ಜೀವಸಂಚಲನ,

ಇರುಳ ಬಾಳಲಿ ಮಿಂಚಿನೆಳೆಯ ದರ್ಶನ.ನಿನ್ನನಪ್ಪುತಾ, ಒಪ್ಪುತಾ....

ಅದು......ಸುಲಭವಿರಲಿಲ್ಲ....ಬೇರಿಲ್ಲದ ಗೆಲ್ಲು ನೆಡುವಾಗಿನ ಸಂಶಯ,

ಕೇಳಿಲ್ಲದ್ದ ಹಾಡಿ ಒಪ್ಪಿಸುವಾಗಿನ ಭಯ.

ಗೊತ್ತಿಲ್ಲದ ದಾರಿಯಂಚಿನ ಗುರಿಸಾಧನೆ,

ನನದಲ್ಲದ್ದ ಹಾಗೆನುವ ತಪ್ಪುಸರಿ ಚಿಂತನೆ.ಕಂದಾ, ನೀ "ಅಮ್ಮಾ" ಅಂದೆ, ನಾ ಕಾದುದೆಲ್ಲ ಮರೆತೆ,

ಭಯ-ಸಂಶಯ ಸುಟ್ಟು, ಚಿಂತನೆಯ ಮೆಟ್ಟಿ ನೀ ನಿಂತೆ.

ನಿನ್ನೆಗಳ ಮರೆಸಿದ್ದೆ, ನಾಳೆಯ ಕನಸಷ್ಟೇ ತೋರಿದೆ,

ನನ್ನ ನಾ ಮರೆತಿದ್ದೆ, ನೀ ನೆನಪಿಸಿ, ಪರಿಚಯಿಸಿದೆ.

ಹೇಳೇ ಬಂಗಾರಿ...

ಇಷ್ಟು ಹೊತ್ತೆಲ್ಲಿದ್ದೆ?..... ಯಾಕೆ ತಡ ಮಾಡಿದೆ? .


Tuesday, December 18, 2012

ಅದು ಪ್ರೇಮ...


--------------------

ಅಲ್ಲೊಂದು ಹಪಹಪಿಸುವಿಕೆ,

ಬಿಟ್ಟು ಹೋದ ಬಂಧಕಾಗಿ....

ಬರುವಾಸೆ, ನಿರೀಕ್ಷೆ, ನಂಬಿಕೆಯಲಿ

ಉಸಿರುಸಿರಲೂ ಹೆಸರ ಜಪ.....ಇನ್ನೊಂದಿತ್ತು ಚಡಪಡಿಕೆ...

ಸತ್ತು ಹೂತುಹೋದ ಜೀವಕಾಗಿ....

ಆಸೆಯಿಲ್ಲ ,ನಿರೀಕ್ಷೆಯಿಲ್ಲ ನಂಬಿಕೆಯೂ..

ಉಸಿರುಸಿರೂ ನೆನಪಲಿ ಭಾರ....ಇನ್ನೂ ಒಂದಿತ್ತು ಕಾಯುವಿಕೆ....

ಕಣ್ಣೆದುರಿದ್ದೂ ಕೈಗೆಟಕದಿದ್ದುದಕಾಗಿ...

ಆಸೆ, ನಿರೀಕ್ಷೆಗಳಿವೆ, ನಂಬಿಕೆಯಿಲ್ಲ..

ತಪ್ಪಿತಾಳ ಉಸಿರುಸಿರೂ ಅಸ್ಪಷ್ಟ ...ತಾ ನೇಯ್ದ ಜಾಲದೊಳು ತಾನೇ ಬಂಧಿ..

ಬದಲಾಯ್ತು ಕಾಲ,ದೇಶ,ಹಿನ್ನೆಲೆ...ಭಾವ ಸ್ಥಾಯಿ....

ಇದ್ದುದ ಇಲ್ಲದರೊಡನೆ ಹೆಣೆದ ಮಾಯಾಬಂಧ...

ನಾಮ ಒಂದೇ ರೂಪಹಲವು, ಅದು ಬರೀ ಪ್ರೇಮ....ಸಾವೆಡೆಡೆಗಿನ ಯಾನವೂ ಜೀವಂತವಿಲ್ಲಿ,

ಅದು ಜೀವಸೆಲೆ, ಜೀವಧಾರೆ, ಜೀವಾಮೃತ...

ನೋವ ಕಂಬನಿಗು ಮಳೆಬಿಲ್ಲ ಬಣ್ಣ ಬರೆದ

ಕಲೆ, ಚೈತನ್ಯದಲೆ, ಜೀವನೋತ್ಸಾಹ....

ಕೆಡುಕಿನುತ್ಸವದಿ ಕ್ಷಮೆಯಾರತಿಯ ಜ್ಯೋತಿ

ಮನದ ರಥದಿ ದೈವತ್ವದ ಪ್ರತಿಕೃತಿ...

ಪ್ರೇಮವೇ...


----------------------------

ಕಣಿವೆಗಿಳಿದಾಗ ನಾನು,

ನೀ ಹಿಡಿದೆಳೆದೆ, ನಾ ಮೇಲೆದ್ದೆ...

ಹಿಡಿಯಷ್ಟಾದಾಗ ನಾನು,

ನೀ ಅರಳಿಸಿದೆ, ನಾ ಹೂವಾದೆ..

ಮೌನವಾದಾಗ ನಾನು,

ನೀ ದನಿಯಾದೆ, ನಾ ಮಾತಾದೆ.

ಕಳಕೊಂಡಾಗ ನಾನು,

ನೀ ಹುಡುಕಾಟವಾದೆ, ನಾ ಪಡಕೊಂಡೆ...ಕತ್ತಲಡರಿದಾಗ, ಬೆಪ್ಪಾವರಿಸಿದಾಗ

ನೀ ಬೆಳಕಾದೆ, ನಾ ಕಣ್ತೆರೆದೆ.

ಮುಳುಗುತಿದ್ದಾಗ, ಉಸಿರುಗಟ್ಟಿದಾಗ

ಪ್ರಾಣವಾಯುವಾದೆ, ನಾ ಉಳಿದುಕೊಂಡೆ.

ಜಾರಿಬಿದ್ದಾಗ, ಗಾಯಗೊಂಡಾಗ,

ಮೆತ್ತನಲ್ಲಿ ಸವರಿದೆ, ನಾನೆಲ್ಲ ಮರೆತೆ..

ನೋಯುತ್ತಿದ್ದಾಗ, ಸಾಯುತ್ತಿದ್ದಾಗ,

ನೀ ಅಮೃತವಾದೆ, ನಾ ಜೀವವಾದೆ.ಸಾಗುತಲೇ ಮುಂದೆ ಸೋತುಹೋದಾಗ,

ನೀ ಹೆಗಲನಿತ್ತೆ, ನಾನೊರಗಿಕೊಂಡೆ.

ಹಾಡುತಲೇ ಒಮ್ಮೆ ತಾಳ ತಪ್ಪಿದಾಗ,

ನೀ ಲಯವಿತ್ತೆ, ನಾ ಅನುಸರಿಸಿದೆ.

ಬಾಳಯಾತ್ರೆಯಲೊಮ್ಮೆ ದಾರಿ ತಪ್ಪಿದಾಗ,

ನೀನೆದುರಾದೆ, ನಾ ಹಿಂಬಾಲಿಸಿದೆ.

ಬೆವರಿಳಿಸಿದ ಮೈಮನ ಖಾಲಿಯಾದಾಗ,

ನೀ ಹಸಿರಾದೆ, ನಾ ಮೊಗೆದುಕೊಂಡೆ....ಪ್ರೇಮವೇ, ನಿನ್ನಂಥದ್ದಿಲ್ಲ, ಇನ್ನಿರುವುದೂ ಇಲ್ಲ..

ನೀನೊದಗುವೆಡೆ ಇನ್ನೇನೂ ಬೇಕಿಲ್ಲ....

ಸೋಲಿಗೊದಗುವ ನಿನ್ನ ಪರಿಯಿದೆಯಲ್ಲಾ...,

ಎಲ್ಲೂ ಇಲ್ಲ, ಇನ್ನೆಲ್ಲೆಡೆ ಬೇಕು ಗೆದ್ದೆತ್ತಿನ ಬಾಲ.

Sunday, December 16, 2012

ಹನಿಮುತ್ತು...


------------------

ಸರಿರಾತ್ರಿಗೆ ಘನಮೋಡದ ಕಪ್ಪಡರಿದಂತೆ...

ತಾರೆಮಿನುಗಿಗೆ ಬೆಳ್ದಿಂಗಳು ಬಿಳಿಯೆರೆದಂತೆ..

ಸಹಜತೆಗೆ ಸತ್ಯದ ಜೊತೆ ಮೆರುಗೀವುದಂತೆ ....

----------------------------------------------------

ಬೀಸೋ ಗಾಳಿ ಸುರಿವ ಮಳೆಯ ಛೇಡಿಸಿ,

ಹನಿ ಮುನಿಸ ಕಾರಂಜಿ ಸಿಡಿಸಿದಂತೆ,

ಮೆಲುಮಾರುತ ತೆಂಗಿನಗರಿಯ ಛೇಡಿಸಿ,

ಒನಪಲಿ ಗರಿಯೆಳೆ ನರ್ತಿಸಿದಂತೆ,

ನಿನ್ನ ನೆನಪೂ ನೋಡು....

ಒಮ್ಮೊಮ್ಮೆ ಜೋರಾಗಿ ಒಮ್ಮೊಮ್ಮೆ ಮೆತ್ತಗೆ

ಈ ಮನವ ಕಾಡಿಸಿ

ಒಮ್ಮೊಮ್ಮೆ ಕಣ್ಣೀರ ಕಾರಂಜಿ,

ಮತ್ತೊಮ್ಮೆ ಮಿಶ್ರಭಾವ ನರ್ತಿಸಿದಂತೆ...

----------------------------------------

ಭಾವ ಬಿದ್ದೇಳುವಾಗ ಎದೆನೆಲದ ಮೇಲೆ

ಅಕ್ಷರಕೆ ಒದ್ದಾಟ ಹಾಳೆ ಮೇಲೆ

----------------------------

ನೀಲಾಕಾಶವ ಬಣ್ಣತುಂಬಿ ಅಲಂಕರಿಸಿದ ಕಲೆಗೆ

ಭೂಮಿ ತಿರುಗಿತಿರುಗಿ ನೋಡಿ ಮೆಚ್ಚಿ ನಿಂತ ನಿಲುವಿಗೆ

ಸೂರ್ಯ ಸಂಕೋಚದಿ ಮುಖಮುಚ್ಚಿಕೊಂಡ......

---------------------------------

ಕಂದಗೊಂದು ಮಾತು


--------------

ಮೇಲೇರು ಸೂರ್ಯನಂತೆ,

ಏರಿದಂತೆ ಕಿರಿದಾಗುತ ಸಾಗುವಂತೆ.....

ಕಿರಿದಾಗು ಚಂದ್ರನಂತೆ,

ಪ್ರತಿಹೆಜ್ಜೆ ಮರುಕಳಿಸೊ ಪೂರ್ಣತೆಯೆಡೆಗಿದ್ದಂತೆ..ಕಾಡದಿರಲಿ ದೊಡ್ಡತನದ ಹಂಬಲ,

ದೊಡ್ಡದರಲ್ಲಷ್ಟೇ ಇಲ್ಲ ಹಿರಿತನ.....

ಬಾಡದಿರಲಿ ನಿನ್ನತನದ ತಾಜಾತನ,

ಗೆಲುವಲಷ್ಟೇ ಅಡಗಿಲ್ಲ ನಿಜಬಲ..ಕಂದ ನೀನೆನ್ನ ಕನಸು,

ನಾನಾಗದ್ದನಾಗಿ ತೋರಿಸು...

ಹೆಚ್ಚೇನಿಲ್ಲ, ನೀನಾಗುಳಿ ಸಾಕು,

ಇಂದು ನಾಳೆಯಲಿ ಸಮರೂಪ ಸಾಧಿಸು...ಕೊರತೆ ನೆರಳಿನ ವಿನಯ

ಸಮೃದ್ಧಿಯಲೂ ಜೊತೆಗಿರಲಿ...

ನಾಳೆ ತರುವ ಗರ್ವವಿದ್ದರೆ...

ಇಂದು ತನ್ನ ದಾರಿ ಬದಲಿಸಲಿ...ಹರಿಶ್ಚಂದ್ರನಲ್ಲ, ಸಾಂತ್ವನವಾಗಿ,

ಕೃಷ್ಣನಲ್ಲ, ಅಳಿಯದ ಸ್ನೇಹವಾಗಿ,

ಬುದ್ಧನಲ್ಲ, ಕೊನೆತನಕ ನಿಷ್ಠನಾಗಿ,

ರಾಮನಲ್ಲ, ಜಾರದ ನಂಬಿಕೆಯಾಗಿ

ಹೀಗೆ... ಅರ್ಥವಾಗುವುದಾದರೆ, ತಿಳಿ...

ದೇವರಾಗಲ್ಲ, ಮನುಜನಾಗಿ ಬದುಕು...Saturday, December 15, 2012

ಬುದ್ಧನಾಗಹೊರಟ ಭಾವ...


--------------------

ತಳಿರು ತೋರಣ ತಲೆಬಾಗಿಲಲಿ,

ಅಂಗಳಕೆ ಚೊಕ್ಕ ಚುಕ್ಕೆರಂಗೋಲಿ,

ಸ್ವಾಗತಫಲಕವಾಗಿ ನಿಂತು ನಗು,

ಖುಶಿಯಿತ್ತಿತು ಕಂಡವರಿಗಾಹ್ವಾನ.ಬಣ್ಣಬಣ್ಣದ ಹೂವರಳಿ ತೋಟದಿ

ಘಮ ಹರಡಿ ಕೈಹಿಡಿದೆಳೆ ತರುತಾ...

ಮೆಲುಗಾನ ತಂಪಸೂಸೋ ಇಂಪಲಿ,

ದಾಟಿಹೋಗಲಾಗದ ಮತ್ತಾದ ಸೆಳೆತ.ಭವ್ಯತೆಯ ನಿಲುವಿನ ಎದೆಯರಮನೆ ...

ತಲೆಯೆತ್ತಿ ನಿಂತ ನೆಲೆ ದೇಗುಲದಂತೆ..

ನಾಡಿ ಘಂಟಾನಾದ, ನುಡಿ ಶಂಖಘೋಷ...

ಪೂಜೆ ಅಲ್ಲೊಳಗಿನ ಭಾವದೇವಗೆ.....ಹೊಸಿಲ ಹೂವಿಗ್ಯಾಕೋ ನಿಶ್ಯಬ್ಧ ಕಣ್ಣೀರು...

ಭಾವ ಗಮನದ ಬಯಕೆ.., ಹೊಸಿಲ ಬಂಧ.

ಗಲ್ಲಕೆ ಕೈಯಿಟ್ಟು ಕೂತ ಭಂಗಿ...

ನಿರೀಕ್ಷೆಯೇ, ಹತಾಶೆಯೇ..ನಿರಾಸೆಯೇ...?!ಕಂಡವರೆಲ್ಲ ಪ್ರಸಾದ ಉಂಡೆದ್ದರು,

ಉಂಡೆಲೆಯ ಜೊತೆ ಬಾಡಿದ ಹೂವೂ ತಿಪ್ಪೆಗೆ...

ಕಂಡವರೂ ಇಲ್ಲ, ಕಣ್ಣಿಗೊತ್ತಿದವರೂ...ಪೂಜೆ ಮಧ್ಯ ಎದ್ದುಹೊರಟ ಭಾವ

ಬುದ್ಧನಾಗ ಹೊರಟಿತ್ತೇ?

ಹೂವದಕೆ ಆಸೆಯೆನಿಸಿತೇ....?
ತಲೆಕೆಳಗಾದ ನಿರೀಕ್ಷೆ


---------------------------

ಕಾದು ಕುಳಿತಿದ್ದೇನೆ.....

ವಸಂತವಿಲ್ಲದೆ ಹಾಡುವ ಕೋಗಿಲೆಗಾಗಿ,

ಮುಗಿಲ ಕಾಣದೆ ನಲಿವ ನವಿಲಿಗಾಗಿ.

ಹಣ್ಣಿಲ್ಲದೆಯೂ ಮೊಳೆವ ಬೀಜಕಾಗಿ,

ಬೇರಿಲ್ಲದೆ ಚಿಗುರುವ ಹಸಿರಿಗಾಗಿ.

ಸಾಗರಕಲ್ಲದೆ ಸೊಗದಿ ಸಾಗೊ ನದಿಗಾಗಿ,

ಆವಿ,ಮೋಡ,ಹಿಮವಾಗದೊಂದು ಹನಿಜಲಕಾಗಿ.

ಮುಡಿಯ ಗುರಿಗಲ್ಲದೆ ಅರಳೊ ಹೂವಿಗಾಗಿ,

ದುಂಬಿಗಲ್ಲದೆ ತುಂಬೋ ಮಧುವಿಗಾಗಿ.

ಅವನಿಲ್ಲದ ಅವಳೊಳಗ ನಗುವಿಗಾಗಿ,

ಅವಳಲ್ಲದ ಅವನ ಕಣ್ಣ ಕನಸಿಗಾಗಿ.

ಇಳೆ ಬಾನಾಚಿಗಿನ ಬಂಧವೊಂದಕಾಗಿ,

ಹೇಳಹೆಸರಿಲ್ಲದ ಇರುವೊಂದಕಾಗಿ...ಕಾದಿದ್ದೆ, ಹಾದಿಯಲಿ ಈವರೆಗೆ ನಿನಗಾಗಿ,

ನಿನ್ನ ಮಾತಿಗೆ, ಅದರ ಪ್ರೀತಿಗೆ,

ನಿನ್ನ ಹಾಡಿಗೆ, ಅದರ ಮೋಡಿಗೆ,

ನಿನ್ನಕ್ಷರಕೆ, ಮತ್ತದರ ಒಕ್ಕಣೆಗೆ

ನಿನ್ನ ಪ್ರಶ್ನೆಗೆ, ಅದರ ಪ್ರೇಮಕೆ...

ನಿರೀಕ್ಷೆಯಷ್ಟೇ ಅಲ್ಲ, ಎಲ್ಲಕುತ್ತರವಿತ್ತು,

ನೀ ಕೇಳಲಿಲ್ಲ, ನಾ ನೀಡಲಿಲ್ಲ...

ತಿರುವಿರದ, ಕೊನೆಯಿರದ, ನೆರಳಿರದ ಹಾದಿಗೆ

ನಾ ವಯಸ ಹಾಸಿದ್ದು ನಿನ್ನ ಸ್ವಾಗತಿಸಲು....

ಬಂದದ್ದು ಇಲ್ಲಗಳಷ್ಟೇ....ಎಲ್ಲ ಖಾಲಿ, ಖಾಲಿ

ಕಾಲ ನನ್ನ ನಾನಾಗುಳಿಸದ ವಿವಶತೆ....

ಕಾದದ್ದು ಬರದೆ ಬರದೆ, ನಡೆ ತಿರುಗಿದಂತೆ...

ಬರಲಾರದುದಕೆ ಕಾವುದೇ ರೂಢಿಯಾಗಿ..


ತಲೆಕೆಳಗಾಗಿದ್ದು ನಿರೀಕ್ಷೆ ಪರೀಕ್ಷೆಯಲಿ ಹೀಗೆ.
ಹಸಿವೆ


-------------------------

ಹಸಿವೆ ಪ್ರಖರವೆಂದರು,

ತಟ್ಟೆಯ ಹೊಳಪಲ್ಲಿ ನಿಸ್ತೇಜ ಕಣ್ಣ ಬಿಂಬವಿತ್ತು.

ಹಸಿವೆ ಕಿವುಡೆಂದರು,

ಉಣ್ಣುವ ಬಾಯ ಮೌನವನೂ ಅದಾಲಿಸುತಿತ್ತು.

ಹಸಿವೆ ಮೂಕವೆಂದರು,

ಚಪ್ಪರಿಸುವಿಕೆಯಲಿ ಅದರ ಬಿಕ್ಕಳಿಕೆ ಮಾತಿತ್ತು.

ಹಸಿವೆ ಕುರುಡೆಂದರು,

ತಣಿದು ತೇಗುವ ಕನಸು ನಿತ್ಯ ಕಾಣುತಿತ್ತು.

ಹಸಿವೆ ಕಹಿಯೆಂದರು,

ಅದಕೆ ಜಠರಾಮ್ಲದ ಹುಳಿಯಷ್ಟೆ ಗೊತ್ತಿತ್ತು.

ಹಸಿವೆ ನಿರಾಕಾರವೆಂದರು,

ಗುಡಿಸಲ ಕಂದನಲಿ ಮೂರ್ತಿವೆತ್ತಂತಿತ್ತು.

ಹಸಿವೆ ಬಲಶಾಲಿಯೆಂದರು,

ಚೆಲ್ಲಿ ಬಿಸುಟಗುಳಲಿ ಕಸುವಳಿದು ಕುಸಿದಿತ್ತು.

ಹಸಿವೆ ಪರಮಸತ್ಯವೆಂದರು,

ಸತ್ಯಮಿಥ್ಯದ ನಡು ತುತ್ತೊಂದಕೆ ಅಲೆಯುತಿತ್ತು.

ಹಸಿವೆಗೆಲ್ಲೆಡೆ ಗೆಲುವೆಂದರು

ಸಾವದೇವನೆದುರು ಕೈಚೆಲ್ಲಿ ಸೋತು ಮಲಗಿತ್ತು

Friday, December 14, 2012

                            ಆತ್ಮಸಖಿಗೊಂದು ಪತ್ರ ---೩
    ಸಖೀ, ನಿನ್ನೆ ಸಾಯಂಕಾಲದ ನಡಿಗೆಯಲ್ಲಿ ನಮ್ಮ ನೆರೆಯವರೊಬ್ಬರು ಜೊತೆಯಾದರು. ಅವರ ಕೈಲಿ ಅವರದೊಂದು ನಾಯಿ ಸೂಝಿ. ಬಾಂಧವ್ಯ ಬೆಸೆಯಲು ಪ್ರೀತಿಯಷ್ಟೇ ಬೇಕು ಮತ್ತು ಪ್ರೀತಿಯಷ್ಟೇ ಸಾಕು ಅನ್ನೋದು ಅಲ್ಲಿ ಮತ್ತೂ ಸ್ಪಷ್ಟವಾಯಿತು ಕಣೇ. ಅವರು ಇತ್ತೀಚೆಗಷ್ಟೇ ಕೈಗೆ ಏಟು ಮಾಡಿಕೊಂಡಿದ್ದ ಕಾರಣ ನಾಯಿಬೆಲ್ಟ್ ಹಿಡಿದುಕೊಂಡು ಹೋಗುವುದು ಕಷ್ಟ ಆಗುತಿತ್ತು. ಹಾಗಾಗಿ ಅವರ ಕಷ್ಟ ನೋಡಲಾಗದೇ "ಕೊಡಿ ಇಲ್ಲಿ" ಅಂತ ತಗೊಂಡೆ ನೋಡು... ತಿರುಗಿ ನನ್ನನ್ನೊಮ್ಮೆ ಅವರನ್ನೊಮ್ಮೆ ನೋಡಿದ್ದೇ, ಕೂಗುತ್ತಾ, ಅವರೆಡೆಗೆ ಹಾರಿ ಕುಣಿದು, ಅವರಸುತ್ತ ಮೂರು ಸುತ್ತು ತಿರುಗಿದ್ದೇ ಬಲಪ್ರಯೋಗಿಸಿ ನನ್ನಿಂದ ಬಿಡಿಸಿಕೊಳ್ಳಲೆತ್ನಿಸತೊಡಗಿತು. ಮತ್ತದನ್ನು ತನ್ನ ವಶಕ್ಕೆ ತೆಗೆದುಕೊಂಡಡು ನಸುನಕ್ಕ ಆಕೆ ತನ್ನೆಡೆಗೆ ಅದರ ಪ್ರೀತಿಯ ಪರಿಯನ್ನ ಎಳೆ ಎಳೆಎಳೆಯಾಗಿ ಬಿಚ್ಚಿಡತೊಡಗಿದರು.....

    ನಾಯಿಯನ್ನ ನಮ್ಮಕಡೆ ನಮ್ಮವರು ಮನೆಯಲ್ಲಿ ಸಾಕುವ ಪರಿಪಾಠ ಇಲ್ಲ ನೋಡು, ಅದರ ಬೌಧ್ಧಿಕತೆಯ ಪರಿಚಯ ಅಂದ್ರೆ ಅದು ತುಂಬಾ ನಿಯತ್ತಿನ ಪ್ರಾಣಿ ಅನ್ನೋದು ಬಿಟ್ರೆ, ಅದರ ನಿಸ್ವಾರ್ಥ ಪ್ರೀತಿಯ ಮಟ್ಟದ ನೇರ ಪರಿಚಯ ನನಗಾಗಿರಲಿಲ್ಲ. ಈ ನಾಯಿ ಆಕೆಯನ್ನು ತನ್ನ ತಾಯಿ ಅಂತಲೇ ಭಾವಿಸಿದಂತಿತ್ತು. ನಮ್ಮೊಡನೆ ಒಂದೈದಾರು ವಾಕ್ಯ ಮಾತಾಡಿದ ನಂತರ "ಅಲ್ಲ್ವೇನೋ ಸೂಝಿ" ಅಂತ ಆಕೆ ಆಗಾಗ ಅದನ್ನೂ ಆ ಸಂಭಾಷಣೆಯೊಳಗೆಳೆದು ತರಲೇಬೇಕಾಗಿತ್ತು ಕಣೆ. ಇಲ್ಲವಾದಲ್ಲಿ ಒಂದಷ್ಟು ಹೊತ್ತಿನ ನಂತರ ಇಲ್ಲದ ಚೇಷ್ಟೆ ಮಾಡಿ ಅವರನ್ನ ತನ್ನತ್ತ ಸೆಳೆಯುತ್ತಿತ್ತು. ಆಕೆ ಮೊನ್ನೆ ಯಾವುದೋ ಒಂದು ಧಾರವಾಹಿಯಲ್ಲಿನ ಸನ್ನಿವೇಶಕ್ಕಾಗಿ ಒಂದೆರಡುಹನಿ ಕಣ್ಣೆರು ಸುರಿಸಿದರಂತೆ ನೋಡು, ಹಾರಿ ಬಂದು ಎದೆಯ ಮೇಲೆ ಮುಖವಿಟ್ಟು ಕೂತುಬಿಡ್ತಂತೆ, ಸಮಾಧಾನಿಸುವವರ ಹಾಗೆ. ಅವರ ಕೋಣೆಯಲ್ಲಿ ಕೆಂಪು ಬಣ್ಣದ ಟ್ರಾವೆಲ್ ಬ್ಯಾಗ್ ಒಂದಿದೆಯಂತೆ, ಅದನ್ನೇನಾದರೂ ಎತ್ತಿಕೊಂಡು ಈ ಕೋಣೆಗೆ ಬಂದರೆ ಸಾಕಂತೆ, ಬಾಲ ಅಲ್ಲಡಿಸಿಕೊಂಡು ಕುಯ್ ಕುಯ್ ಅಂತ ಅವರ ಸುತ್ತಮುತ್ತಲೇ ತಿರುಗಾಡುತ್ತ ತನ್ನ ಅಸಹಾಯಕತೆ ಬಯಲು ಮಾಡುತ್ತಂತೆ ಮತ್ತು ಅದರ ಕುಯ್ಗುಡುವಿಕೆಯಲ್ಲಿ "ಬಿಟ್ಟುಹೋಗಬೇಡ" ಅನ್ನುವ ಕೋರಿಕೆಯ ಧಾಟಿಯಿರುತ್ತಂತೆ. "ಸೂಝಿ ನಾನು ಹೊರಟೆ" ಅಂತಂದರೆ ಸಾಕಂತೆ ಓಡಿ ಬಂದು ಮುಂದಿನೆರಡೂ ಕಾಲುಗಳಿಂದ ಈಕೆಯ ಕಾಲು ಬಳಸಿ ತಡೆಯುತ್ತದಂತೆ. ಹೆಮ್ಮೆಯಿಂದ ಹೇಳುತ್ತಲೇ ಹೋದ ಆಕೆಯ ಮನಸಿನ ಸಂತೋಷ ಸ್ಪಷ್ಟವಾಗಿ ಆ ಮುಖಭಾವದಲ್ಲಿ ಗೋಚರಿಸುತ್ತಿತ್ತು. ಹೀಗೆ ಇನ್ನೂ ಒಂದಷ್ಟು ಅದರ ಕತೆಗಳನ್ನು ಕೇಳಿ ಒಂದು ಕ್ಷಣ ನನಗನಿಸಿತು ಅಯ್ಯೋ ಇಷ್ಟೊಂದು ಪ್ರೀತಿಸುವ ಜೀವಿಗೆ ಅದನ್ನು ಮಾತಾಡಿ ವ್ಯಕ್ತಪಡಿಸುವ ಸಾಧ್ಯತೆಯನ್ನು ಪ್ರಕೃತಿ ಕೊಟ್ಟಿಲ್ಲವಲ್ಲಾ ಅಂತ. ಕೇವಲ ಸಂಜ್ಞೆಗಳಿಂದಲೇ ಇಷ್ಟೊಂದು ಪ್ರಭಾವಶಾಲಿಯಾಗಿ ಪ್ರೀತಿ ವ್ಯಕ್ತಪಡಿಸುವದ್ದು ಇನ್ನು ಮಾತು ಬಂದಿದ್ದರೆ ಇನ್ನೆಷ್ಟೆಲ್ಲಾ ಪ್ರೀತಿಯ ರೀತಿಯನ್ನದು ತೋರಿಸಬಹುದಿತ್ತು....ಆಕೆಗಿನ್ನೆಷ್ಟು ಖುಶಿ ಸಿಗುತ್ತಿದ್ದಿರಬಹುದು... ಅನ್ನಿಸಿತು, ಅದನ್ನಾಕೆಯೊಡನೆ ಹೇಳಿಯೂ ಬಿಟ್ಟೆ. "ಅಯ್ಯೋ ಸುಮ್ನಿರಿ ಮಾತು ಬರದಿದ್ದರೇನೇ ಒಳ್ಳೆಯದು ಬಿಡಿ... .... " ಅನ್ನುವುದೇ.....! ಒಮ್ಮೆ ನಾನು ದಂಗಾದರೂ ಮರುಕ್ಷಣ ನಿಜವೆನಿಸಿತು.

    ಈಗ ಹೇಳೇ... ಮಾತು ಬರುತಿದ್ದರೆ ಆ ನಾಯಿಯೆಂಬ ಜೀವದಲ್ಲಿ ಪ್ರತಿಫಲಿಸುತ್ತಿರುವ ಅದರೊಡತಿಯ ಪ್ರೀತಿ ಅಷ್ಟು ಬಲಿಷ್ಠವಾಗಿರಲು ಸಾಧ್ಯವಿತ್ತೇ..? ಹೋಗಬೇಡ ಎಂದು ಕಾಲನ್ನು ಬಳಸುವ ವೇಳೆ ಜೋರಾಗಿ "ಹೋಗಬೇಡ" ಅಂತ ನಾಯಿಯೊಂದು ಹೇಳಿದ್ದಿದ್ದರೆ ಅದು ಅಧಿಕಾರ ಚಲಾಯಿಸುತ್ತಿದೆ ಅನ್ನಿಸುತ್ತಿರಲಿಲ್ಲವೇನೇ...".ಮೌನ ಸಾಕು ಮಾತು ಬೇಕು"- ನಾವೆಲ್ಲ ಕಾಲೇಜು ದಿನಗಳಲ್ಲಿ ಹಾಡುತ್ತಿದ್ದ "ಮಾತನಾಡು ಮೊಗ್ಗೇ ನೀನು" ನೆನಪಿದೆಯಾ..? ಆ ಹಾಡಿನ ಈ ಮೇಲಿನ ಸಾಲು ನನಗೆ ತುಂಬಾ ಆತ್ಮೀಯವೆನಿಸುತಿತ್ತು ಸಖೀ... "ಮಾತುಗಳಲೆ ಮಿಂದು ಮಡಿಯಾಗುವಾ" ಅಂತ ನಾನೂ ಎಲ್ಲೋ ಒಮ್ಮೆ ಬರೆದ ನೆನಪು. ಮಾತು ಬಾಳ್ವೆಗೆ ತುಂಬಾ ಅಗತ್ಯದ ವಿಷಯ ಅಂತ ನಾನು ಬಲವಾಗಿ ನಂಬಿದ್ದೇನೆ. ಆದರೆ ಈ ಒಂದು ಗಳಿಗೆ ಅದೆಲ್ಲ ಸುಳ್ಳು ಅನ್ನಿಸಿತು ಕಣೆ. ಅಂದರೆ ಮಾತು ಎಷ್ಟೋ ಸಂಬಂಧಗಳಿಗೆ ಮುಳುವಾಗುತ್ತದಾ? ಒಪ್ಪುವಾ.., ತೂಕವಿಲ್ಲದ ಅಸಂಬದ್ಧ ಮಾತುಗಳು ಅಥವಾ ಕಠೋರ ಮಾತುಗಳು ಖಂಡಿತಾ ಸಂಬಂಧವೊಂದಕ್ಕೆ ಮಾರಕ ಒಪ್ಪುತ್ತೇನೆ. ಆದರೆ ಮಾತು ಬರುವುದಕ್ಕಿಂತ ಮೂಕವಾಗಿರುವುದು ಮೇಲು ಅಂತ ಈ ಸಂದರ್ಭದಲ್ಲಿ ಅನ್ನಿಸುವಷ್ಟು ಅಪಾಯಕಾರಿನಾ ಮಾತು?

    ಒಂದು ಸಂಬಂಧದ ಮತ್ತದರೊಳಗಿನ ಪ್ರೀತಿಯ ಹುಟ್ಟಲ್ಲಿ, ಬಲಿಯುವಿಕೆಯಲ್ಲಿ ಮತ್ತು ಉಳಿಯುವಲ್ಲಿ ಮಾತು ವಹಿಸುವ ಪಾತ್ರವಾದರೂ ಏನು? ಮಾತನ್ನೇ ಎಲ್ಲಾ ಅನಿಷ್ಟಗಳಿಗೂ ಕಾರಣ ಅಂತ ದೂರುವ ಹಿನ್ನೆಲೆಯಲ್ಲಿ ಮಾತು ಬರೋದಕ್ಕಿಂತ, ಇಲ್ಲದಿರುವುದೇ ಮೇಲು ಅನ್ನುವ ಮಾತು ತಾತ್ಕಾಲಿಕವಾಗಿ ಹೌದು ಅನ್ನಿಸಿದರೂ, ಅದು ಮನುಷ್ಯನಿಗೆ ದೇವರಿತ್ತ ವರ ಅನ್ನುವುದೂ ಸುಳ್ಳಲ್ಲ ಕಣೇ... ಎಷ್ಟು ಸುಂದರವಾದ ಅಭಿವ್ಯಕ್ತಿ ಮಾಧ್ಯಮ ಅದು! ಆ ಮಾಧ್ಯಮವನ್ನು ಬಳಸುವುದರ ಮೇಲೆಯೇ ಸಂಬಧಗಳ ಅಳಿವು-ಉಳಿವು ಇದೆ, ಅಲ್ಲಿ ಸ್ಪಷ್ಟವಾಗುತ್ತದೆ ಅದರ ಪಾತ್ರ...ಅಂತೀಯಾ?

    ಮಾತೇ ಮುತ್ತು, ಮಾತೇ ಮೃತ್ಯು ಅನ್ನುವ ಮಾತಿದೆ. ಹಾಗಾದರೆ, ಮಾತನ್ನು ಹಿತಮಿತವಾಗಿ, ಅಳೆದುತೂಗಿ ಬಳಸಿದಲ್ಲಿ ಮಾತ್ರ ಅದು ಜೀವನಾನಂದಕ್ಕೆ ಪೂರಕವಾ? ಹಾಗೊಮ್ಮೆ ಪ್ರತಿ ಬಾರಿಯೂ ಅಳೆದುಸುರಿದು ಮಾತುದುರಿಸುವುದು ಸಾಧ್ಯವಾಗುವ ಮಾತೇನೇ? ನಾವು ಪ್ರೀತಿಸುವ, ನಂಬಿರುವ ಜೀವಗಳೆದುರು ಮುಕ್ತವಾಗಿ ಮಾತನಾಡುವುದು ಸಹಜವಲ್ಲವೇನೇ? ಅಲ್ಲಿಯೂ ಸಂಶಯಿಸಿ ಆಡುವ ಮಾತುಗಳು ಸತ್ಯವನ್ನೊಳಗೊಂಡು, ಪ್ರಾಮಾಣಿಕವಾಗಿರುತ್ತವೇನೇ? ಮೆಚ್ಚಿಸುವ, ಒಪ್ಪಿಸುವ ಹವಣಿಕೆ ಇಣುಕುವ ಸಾಧ್ಯತೆ ಬರಲ್ಲವಾ? ಅದರಿಂದ ಹುಟ್ಟುವ ಅಸಹಜತೆ ಅನುಬಂಧಕ್ಕೆ ಮಾರಕವೇ ತಾನೇ? ಹೌದು, ಅದಕ್ಕೆ ಯಾವುದೇ ವ್ಯವಹಾರದಲ್ಲಿ ಅಸಹಜತೆ ಇರಬಾರದೆಂದರೆ ಅಲ್ಲಿ ಪೂರ್ವಾಗ್ರಹಪೀಡಿತ ಅಥವಾ ಆಷಾಡಭೂತಿತನದ ಮಾತುಗಳಿರಬಾರದು. ಅಂದರೆ ಮಾತಾಡುವ ಕಲೆಯನ್ನು ಕಲಿತುಕೊಳ್ಳಬಹುದು ಅನ್ನುತ್ತೀಯಾ? ನನಗನಿಸುತ್ತದೆ, ಮಾತುಕಲಿಯುವ ವಯಸ್ಸಿನ ಮಗು ಸುತ್ತಮುತ್ತಲಿನ ವಾತಾವರಣದ ಮಾತುಗಳಿಂದ ಪ್ರಭಾವಿತವಾಗಿ ಮಾತಿನ ಧಾಟಿಯನ್ನು ಏನು ಕಲಿಯುತ್ತದೆ ಅದೇ ಜೀವನಪರ್ಯಂತ ಉಳಿದುಕೊಳ್ಳುತ್ತದೆ... ಅಲ್ಪಸ್ವಲ್ಪ ಬದಲಾಗಬಹುದಾದ ಅದರ ಚಿಂತನೆಯ ಧಾಟಿಗನುಗುಣವಾಗಿ ಮಾತಿನ ಧಾಟಿ ಸ್ವಲ್ಪ ಮಟ್ಟಿಗೆ ಬದಲಾದರೂ ಮೂಲಭೂತ ಶೈಲಿ ಉಳಿದೇ ಉಳಿಯುತ್ತದೆ, ಏನಂತೀಯಾ?

    ನುಡಿದರೆ ಮುತ್ತಿನ ಹಾರದಂತಿರಬೇಕು......ಅಂತ ವಚನಕಾರರು ಹೇಳಿದಂತೆ, ಮಾತು ಕರ್ಣಾಮೃತವೆನಿಸಬೇಕೆಂಬುದೇನೋ ನಿಜ... ಆದರೆ ಅದನ್ನು ಸಾಧಿಸುವಲ್ಲಿ ಹಲವಾರು ಬಾರಿ ನಮ್ಮನ್ನು ನಾವು ನೋವಿಗೊಡ್ಡಿಕೊಳ್ಳಬೇಕಾಗಿ ಬರುವುದಂತೂ ನಿಜ. ಹಾಗಂತ ಕರ್ಣಕಠೋರವಾಗಿ ಮಾತನಾಡುವವರು ನಿರಾಳವಾಗಿರುತ್ತಾರೆ ಎಂದೇನೂ ಅರ್ಥವಲ್ಲ, ಎದುರಿರುವವರು ಇವರ ಮಾತುಗಳಿಗೆ ಹೆದರಿದಂತೆ ವರ್ತಿಸಿದರೂ ಅವರ ಭಾವ, "ಅಬ್ಬಾ ಇವರ ಸಹವಾಸ ಬೇಡಪ್ಪಾ "ಎನ್ನುವಂತಿರುತ್ತದೆ. ಅಲ್ಲಿ ಆತ್ಮೀಯತೆ ಸುಲಭವಾಗಿ ಚಿಗುರುವುದಿಲ್ಲ, ಹಾಗಾಗಿ ಇಂಥವರಿಗೆ ತಮ್ಮ ನೇರ ಹಾಗೂ ಮೊನಚು ಮಾತುಗಳ ಕಾರಣ ದೂರವಿಡಲ್ಪಡುವ ನೋವಿರುತ್ತದೆ. ಮತ್ತಿದೂ ಇದೆ, ನಗುತ್ತಾ ಮೆತ್ತಗೆ ಮಾತಾಡುವವರ ಆಶಯ ನಿಜವಾಗಿಯೂ ಮೃದುವ್ಯವಹಾರವೇ ಆಗಿದ್ದರೂ, ಸದಾ ನಗುವವರನ್ನ ನಂಬಬಾರದು, ಅತಿವಿನಯಂ ಧೂರ್ತಲಕ್ಷಣಂ ಮುಂತಾದ ಮಾತುಗಳನ್ನೆದುರಿಟ್ಟು ಅದನ್ನೂ ಖಂಡಿಸುವವರಿದ್ದಾರೆ. ಇನ್ನು ಸತ್ಯ ಅಸತ್ಯ ಮಾತುಗಳನ್ನು ಆಡುವುದನ್ನು ಕುರಿತು. ಇದಂತೂ ಅತ್ಯಂತ ಧರ್ಮ ಸಂಕಟದ ವಿಷಯ... ನ ಬ್ರೂಯಾತ್ ಸತ್ಯಮಪ್ರಿಯಂ ಅನ್ನುವ ಮಾತು ಅಪ್ರಿಯಸತ್ಯವನ್ನು ನುಡಿಯದಿರುವಂತೆ ಪ್ರಚೋದಿಸುತ್ತದಲ್ಲವೇ? ಅಂಥ ಸಂದರ್ಭವೊಂದು ಸುಳ್ಳು ಮಾತನ್ನು ಅಪೇಕ್ಷಿಸಿಯೇ ಇರುತ್ತದೆ. ಹಾಗೆಂದರೆ ಮಾತು ಸಮಯ ಸಂದರ್ಭಕ್ಕೆ ತಕ್ಕಂತೆ ತಾನಿರಬೇಕಾದ ಸ್ವರೂಪ ತಾಳಬೇಕು, ಮಾತು ಎನ್ನುವ ಅಸ್ತ್ರವನ್ನು ಬಳಕೆಯರಿತು ಆಯಾ ಸಂದರ್ಭಕ್ಕೆ ತಕ್ಕಂತೆ ಮಾರ್ಪಡಿಸಿ ಬಳಸುವುದೇ ಸೂಕ್ತ ಅಂತೀಯಾ?

    ಈ ಗೊಂದಲಗಳು ಕಾಡುತ್ತಿದ್ದಾಗ ಮನಸು ನಿನ್ನೊಂದಿಗೆ ಮಾತುಕತೆ ಬಯಸಿತು ಸಖೀ.... ನಿನ್ನೊಡನಂತೂ ಯಾವುದೇ ಹಿಂಜರಿಕೆಯಿಲ್ಲದೇ ಯಾವುದೇ ಸೋಸುವಿಕೆಯಿಲ್ಲದೇ ಮಾತಾಡಬಲ್ಲೆ ನಾನು. ಅಗೋ...ಮತ್ತಿಲ್ಲೊಂದು ಗೊಂದಲ... ನಾನೂ ನೀನೂ ಸ್ಪಷ್ಟವಾಗಿ ನಮ್ಮಿಬ್ಬರ ಅಂತರಾಳವನ್ನು ಮಾತುಗಳ ಮುಖಾಂತರ ಪರಸ್ಪರ ಬಿಚ್ಚಿಡುತ್ತೇವೆ ನೋಡು... ನಮ್ಮೊಳಗೆ ಭಿನ್ನಾಭಿಪ್ರಾಯಗಳಿದ್ದಾಗ್ಯೂ ನಮ್ಮ ಪ್ರೀತಿ ಸದಾ ನಳನಳಿಸುತ್ತಲೇ ಬೆಳೆದಿಲ್ಲವೇನೇ? ಇದರರ್ಥ ಸಂಬಂಧ ದೃಢವಾಗಿದ್ದಲ್ಲಿ ಅದರ ಅಳಿವು-ಉಳಿವು, ಮಾತು ಮತ್ತದರ ಹಿಂದಿನ ಭಾವಗಳನ್ನು ಅವಲಂಬಿಸಿಲ್ಲ ಅಂತೀಯಾ? ಬಿಡು...... ಮಾತು ಬಯಸಿದೆ ಮನ, ಆದರೆ ಕಾಡಿದೆ ಮಾತು ತಲುಪಲಾಗದ ದೂರ, ಇವೆರಡರ ಫಲಶ್ರುತಿಯೇ ನನ್ನೀ ಪತ್ರ.... ನಿನಗನ್ನಿಸಿದ್ದನ್ನ ಬರೆದು ತಲುಪಿಸುತ್ತೀಯಲ್ಲಾ.....? ಮುಗಿಸುತ್ತಿದ್ದೇನೆ.....

Thursday, December 13, 2012

ನಾವು ಶಾಲೆಗೆ ಹೋಗುತ್ತಿದ್ದ ದಿನಗಳಲ್ಲಿ ಸ್ವಾತಂತ್ರ್ಯದಿನಾಚರಣೆಯೇ ಮುಂತಾದ ಸಂದರ್ಭಗಳಲ್ಲಿ ಸ್ಪರ್ಧೆಗಳಿಗೆ ಹೊಸಹೊಸ ಹಾಡುಗಳು ಬೇಕಾಗಿದ್ದಾಗ ನಮ್ಮ ಅಪ್ಪನೇ ಬರೆದು ರಾಗ ಸಂಯೋಜಿಸಿ ಕೊಡುತ್ತಿದ್ದರು. ಹಾಗೆ ಗೆದ್ದು ತಂದ ಬಹುಮಾನಗಳು ನಮ್ಮಮ್ಮನ ಪುಟ್ಟಮನೆಯ ತುಂಬಾ ಇವೆ... ನೋಡಿದಾಗಲೆಲ್ಲ ನಮ್ಮ ಗೆಲುವಿನಲ್ಲಿ ಅಪ್ಪನ ಕಳಕಳಿಯ ಭಾಗವಹಿಸುವಿಕೆಗೆ ಎದೆತುಂಬಿ ಬರುತ್ತದೆ... ನನ್ನ ಪುಟ್ಟಿಗೋ ಕಣ್ಣಲ್ಲಿ ಅನುಪಮ ಹೊಳಪು... ನನ್ನಮ್ಮ, ಚಿಕ್ಕಮ್ಮ ಇಷ್ಟೊಂದು ಗೆದ್ದದ್ದು... ಅಂತ...ಅಂಥ ಹಾಡುಗಳಲ್ಲಿ ಇಂದು ಅವಳಿಗೆ ಒಂದು ಹಾಡು ಕಲಿಸಿದೆ, ಅವಳ ಶಾಲೆಯ ವಾರ್ಷಿಕೋತ್ಸವದ ಸ್ಪರ್ಧೆಗಾಗಿ....ಅದು ಹೀಗಿದೆ..ಹಂಚಿಕೊಳ್ಳಬೇಕೆನಿಸಿತು...(ಹಳೆಯ ಹಿಂದಿ ಚಿತ್ರವೊಂದರ ಹಾಡು ಏ ವತನ್ ಏ ವತನ್ ನ ಧಾಟಿಯಲ್ಲಿ..)


ನನ್ನ ಜನನಿ ನನ್ನ ನಾಡು ನನ್ನ ದೇಶ ಭಾರತಾ..

ನಿದ್ದೆ ಸಾಕು ಎದ್ದು ನೋಡು ನಿನ್ನ ಜನರ ಪಾಡನು.(ನನ್ನ ಜನನಿ).

ವೇದಕಾಲದಿಂದಲಿದ್ದ ನಿನ್ನ ವೈಭವಗಳಾ

ಆಧುನಿಕತೆ ಸುಟ್ಟು ಚಿಂದಿಚೂರು ಮಾಡಿ ಬಿಸುಟಿದೆ

ಭ್ರಷ್ಟ ಜನರ ಸ್ವೇಚ್ಛೆಯಲ್ಲಿ ನರಕಸದೃಶಳಾಗಿರುವೆ

ಅದಕ್ಷಹಿಂಸೆ ತುಂಬಿರುವ ನಿನ್ನ ಜನರ ನೋಡು ಬಾ...(ನನ್ನ ಜನನಿ)

ಎದ್ದೇಳು ಭಾರತಾ ಹಿಂದೆ ನಡೀ ನನ್ನ ತಾಯಿ

ಇಂದಿನ ಈ ನರಕಕಿಂತ ಹಿಂದಿನದೇ ವೈಭವಾ

ಭರತನಾಳ್ವಿಕೆಯಾ ಸವಿಯ ನಮಗೆ ಒಮ್ಮೆ ಉಣಿಸೆ ಬಾ

ಋಣದಿಕಣ್ಣು ಕಟ್ಟಿರುವಾ ನಮ್ಮ ಪಟ್ಟಿ ಬಿಡಿಸೆ ಬಾ

ಜನನಿಜನ್ಮಭೂಮಿಯು ಸ್ವರ್ಗಕದೋ ಅನುಪಮ

ಎಂಬ ಮಾತ ಋಜುಗೊಳಿಸೆ ಎದ್ದೇಳು ಭಾರತಾ(ನನ್ನ ಜನನಿ)

----------------------------------------

ಅಪ್ಪಾ, ನನಗೆ ನಿನ್ನ ಮಗಳೆಂಬ ಮಾತಿಗೆ ಹೆಮ್ಮೆ ಇದೆ...

ಅದು ಅದೇ ನಲ್ಲ,


ನೀ ಕೂಗಿದಾಗಲೆಲ್ಲ ನನ್ನೊಳಗೋಗೊಡುವದು,

ಕೂಗದಾಗಲೆಲ್ಲ ಕೂಗಿದ್ದ ಪ್ರತಿಧ್ವನಿಸುವದು,

ಮುಚ್ಚಿದೆವೆಯಲು ಸ್ಪಷ್ಟ ಬಿಂಬ ಮೂಡಿಸುವದು

ತೆರೆದ ಕಣ್ಣಿಗೆ ನಗೆಯ ದಿರಿಸುಡಿಸುವದು

ಒಡಲಾಳದಿ ಅರಳುವ ಅರಿವೇಳಿಸುವದು

ಮೈಮನಕೆ ತಾರುಣ್ಯ ನವೀಕರಿಸುವದು

ನಿನ್ನೆಗಿರದ ನಾವೀನ್ಯ ಪ್ರತಿ ಇಂದಿಗೀವದು

ಎದ್ದ ಗಳಿಗೆಯೆ ಮೊಗಕೆ ತೃಪ್ತಿ ನತ್ತನೀವದು

ನಿದ್ದೆಯ ಹೊರಳಾಟಕೊಂದು ಕನಸಾಗುವದು,

ಕನಸಲೊಂದು ಮೆಲುರಾಗದಾಲಾಪವಾಗುವದು

ದಣಿದ ಹೊತ್ತಲಿ ಅಲ್ಲೆ ಅಮೃತ ಹನಿಯಿಸುವದು..ನಾ, ನೀ ಎಂಬಂತರವ ಶೂನ್ಯರೂಪಕೆ ತಂದು,

ಮಿಳಿತದಾನಂದದ ಉಡುಗೊರೆಯಿತ್ತುದಕೆ,

ಹೆಸರು ಬೇಕೇನು, ಹೊತ್ತುಗೊತ್ತು ಬೇಕೇನು?

ಉಕ್ತಜಾಗ, ಸೂಕ್ತರೂಪ, ಒಪ್ಪಿಗೆಯಮುದ್ರೆ ಬೇಕೇನು?ಬೆತ್ತಲಾದಾಗ ಭಯ.....


-----------------------

ಕತ್ತಲು ಮುಸುಕಿದಂತೆ ಬೆತ್ತಲು ಭಯದೊಡಲು.ತಪ್ಪುಗಳು, ಅಲ್ಲದವು, ಅಲ್ಲದೆಯೂ ಹಾಗನಿಸಿದವು,

ಆದವು, ಆಗದಿರುವವು, ಆಗಲಿರುವವು...

ತನ್ನವು, ಅಲ್ಲದವು, ಆದಾಗ್ಯೂ ಜೋಳಿಗೆಯಲಿರುವವು.

ಉಚ್ಚ್ವಾಸಕೆ ನಿರಾಳತೆಯ ಒತ್ತಾಸೆಯಿಲ್ಲ, ಎದೆ ಬರಿದು,

ಬಿಟ್ಟುಸಿರುಗಳಾಗಿ ನಿಟ್ಟುಸಿರು, ಗೊಂದಲದ ಬಸಿರು.

ದಿನ ತುಂಬಿದೊಡಲಿನದರಂತೆ ಬಿಸಿತುಪ್ಪದ ಪಿಂಡ,

ಹೊರಬಿದ್ದರೆ ಬಯಲು, ಒಳಗುಳಿದರೆ ಭಾರ...ಮಾಡಿದ್ದುಣ್ಣೋ ..... ಮಾಡಿದ್ದಕ್ಕೂ, ಯೋಚಿಸಿದ್ದಕ್ಕೂ..

ನೀರ್ಕುಡಿಯಲೇಬೇಕು...ಉಪ್ಪುಂಡರೂ, ನೋಡಿ ಚಪ್ಪರಿಸಿದರೂ..

ಕಣ್ಮುಚ್ಚಿ ಕುಡಿವ ಬೆಕ್ಕು ನಮ್ಮನಿಮ್ಮೆಲ್ಲರೊಳಗೂ...

ಹರಿದಂತೆ ಹರಿಯಬಿಡುವ ಭಾವಪ್ರವಾಹದ ನಡೆಗೆ,

ಎದೆ ಸುಡುವ ಭಯದ ಜ್ವಾಲಾಮುಖಿಯುಗುಳು....

ಸಿಡಿದ ಕಿಡಿಗಳು ಹರಡಿ ನೋಟ ಹರಿದೆಲ್ಲೆಡೆ,

ಬರೆಮೂಡದ, ಗೆರೆಯಾಗದ ಅದೃಶ್ಯ ಚಾಟಿಯೇಟು...ನೆತ್ತಿಬಗಿದು, ಚಿಮ್ಮಿರಕ್ತ, ಸತ್ವ ಸಾಧಿಸುವ ಗುಳಿಗನಂತೆ,

ನೆತ್ತರಾಗಿಳಿಯಬೇಕು ಆಸೆ ಸೀಳಿದ ಗಾಯದಿ ನಿರಾಸೆ,

ನಾಲ್ಕರಲ್ಲ್ಯಾವುದೋ ಒಂದು ವೈರಾಗ್ಯವಾಗಿ ರೆಸಿಗೆ,

ಹುಣ್ಣಾಗಿ ಕಾಡಿ ಖಾಲಿತನದ ಇರುಳು ಕುಡಿಯೊಡೆದು...

ಭರವಸೆಯ, ಭದ್ರತೆಯ,ಆಶ್ವಾಸನೆಯ ಕಿರಣಕೆ ಕಾವ

ಕತ್ತಲು ಮುಸುಕಿದಂತೆ ಮತ್ತೆ ಬೆತ್ತಲು ಭಯದೊಡಲು.

ತರವೇ...


----------------

ಸಿಟ್ಟು ತರವೇ ದೊರೆಯೇ...

ಬಂದರೂ ಹಾಗೊಮ್ಮೆ ಮೆಟ್ಟಬೇಕಲ್ಲವೇ....ನಾನವಳೂ ಹೌದು ಮತ್ತಿವಳೂ.....

ಅದು ಒಡಲ ಗಂಟು, ನೀನೆದೆಯ ನಂಟು.

ನನ್ನ ಜಗದಿ ಎರಡಕೆರಡು ಜಾಗವುಂಟು...

ಕಣ್ಣೆರಡಿದ್ದರೂ ದೃಷ್ಟಿ ನನದೊಂದೇ...

ಅತ್ತ ಹರಿದಾಗಲೇ ಇತ್ತ ಬಯಸುವುದು ತರವೇ....ನಾನಲ್ಲೂ ಇರುವೆ ಮತ್ತಿಲ್ಲೂ....

ಅಲ್ಲಿ ಆಧರಿಸೋ ಮಡಿಲು, ಇಲ್ಲಿ ಹಿಂಬಾಲಿಸೋ ನೆರಳು..

ನನ್ನಿರುವಲೆರಡೂ ರೂಪವುಂಟು....

ಕಿವಿ ಎರಡಿದ್ದರೂ, ಕೇಳುವ ಕರೆಯೊಂದೇ...

ಅದ ಗಮನಿಸುವಾಗಲೇ ನೀ ಕರೆವುದು ತರವೇ...ನಾನದರದೂ ಹೌದು ಮತ್ತೆ ನಿನ್ನದೂ...

ಅದರೆದುರಿನ ಮಾದರಿ, ನಿನಗೆ ಪ್ರತಿಬಿಂಬವಿತ್ತ ಕನ್ನಡಿ...

ನನ್ನೊಳಗೆರಡೂ ಛಾಯೆಯುಂಟು...

ಕಾಲೆರಡಿದ್ದರೂ ನಡೆವ ದಿಶೆಯೊಂದೇ.....

ಅದರತ್ತ ನಡೆವಾಗ ನೀ ವಿಮುಖನಾಗುವುದು ತರವೇ...

ಹಾಗೇ ಸುಮ್ಮನೆ........


-----------------------

ಹಣೆ ಸ್ವಲ್ಪ ಹಿರಿದಾಯ್ತು, ಮೂಗು ತುಸು ಮೊಂಡು,

ಕಣ್ಣಷ್ಟಗಲವಿರಬೇಕಿತ್ತು, ಬಾಯಿ ದೊಡ್ಡದಾಯ್ತು,

ಹಲ್ಲು ನೇರವಾಗಿಲ್ಲ, ಗಲ್ಲ ಚೂಪಿಲ್ಲ,

ಕೆನ್ನೆ ಸೇಬಂತಿಲ್ಲ, ನೀಳವೇಣಿಯೂ ಅಲ್ಲ...

ಬಣ್ಣವಷ್ಟೊಂದಿಲ್ಲ, ಅಂಗಸೌಷ್ಟವವೂ ಇಲ್ಲ...ಮುಖದಲ್ಲೊಂದು ಮೆಲುನಗು,

ಕಣ್ಣ ನಿಟ್ಟಿಸಿ, ಕೆನ್ನೆಸವರಿ, ಮೂಗು ಮೂಗಲಿ ಮುಟ್ಟಿ,

ಗಲ್ಲ ಹಿಡಿದೆತ್ತಿ, ಹಣೆ ಚುಂಬಿಸಿ, ನಿನ್ನ ನಗು ನನಗಿಷ್ಟ,

ನಿನ್ನಂಥವರಿಲ್ಲ ಕಣೇ...ಎಂಬವರ ಸಾನ್ನಿಧ್ಯದಲಿ ,

ಕಿವುಡಲ್ಲದ ಕಿವಿ ಬೇರೆಲ್ಲೆಡೆಗೆ ಕಿವುಡಾಗಿತ್ತು

ವಿದಾಯ


-------------

ಅದೋ ಹೊರಹೊರಟಿತದು, ಹೇಳುತಿದೆ ವಿದಾಯ...

ಒಳಬಂದ ಬಾಗಿಲಲೆ ಹೊರಹೋಗುತಿದೆ.

ಉಳಿವ ಯೋಗ್ಯತೆಯಿಲ್ಲವೆಂದಲ್ಲ,

ಅಳಿವ ಸಾಧ್ಯತೆಯಿದೆಯೆಂದು....ತಿರುಗಿ ಬಹುಶಃ ಬರದು, ನೋವ ಬಯಸುವುದಿಲ್ಲ

ಬಯಸುವುದೇನು, ಸನಿಹಕೂ ಸುಳಿವುದಿಲ್ಲ...

ನೋವಹೊತ್ತು ಮೆರೆಸುವರ ಸುತ್ತಮುತ್ತಲಿ,

ನೋವು ಮರೆವುದಾಗುವುದಿಲ್ಲ....ಇಂಥ ಕಡೆ ಬಹುಶಃ ಹೊಕ್ಕುವುದೂ ಇಲ್ಲ,

ಹೊಕ್ಕುವುದೇನು, ಒಳಗಿಣುಕುವುದೂ ಇಲ್ಲ,

ಅಲ್ಲೊಳಗೆಲ್ಲ ತುಂಬಿದ ಅಸಮಾಧಾನದಿ,

ಸಮಾಧಾನ ಹುಡುಕುವುದಾಗುವುದಿಲ್ಲ.....ಅದರದಿದೆ ಅದರಂಗಳ, ಅದರದೇ ಭಾವಶರಧಿ...

ಬಂಧಗಳೇ, ಬರಬಹುದು ನೀವೂ ನೆನಪಾದಲ್ಲಿ ....

ಅತ್ಮೀಯ ಸ್ವಾಗತ ಅಲ್ಲಿದ್ದೇ ಇದೆ, ನಿರೀಕ್ಷೆಯೂ...

ಆದರೂ ಈ ಸೊಗ ಅಲ್ಲಿಹುದೇ? ಪ್ರಶ್ನೆ ಕಾಡುವುದು..ನೂರು ನಗುವ ನೋವೊಂದಿಲ್ಲಿ ನುಂಗಿಹುದು

ನೀರಲಿಲ್ಲದ ಮೀನಂತೆ ಅಲ್ಲದು ತಹತಹಿಸಬಹುದು..

ನೀವು ತರೋ ಪ್ರೀತಿಸೆಲೆ ಜೀವಜಲವಾಗಬಹುದು

ಇದೋ...ಹೊರಹೊರಟಿಹುದು, ಹೇಳುತಿದೆ ವಿದಾಯ...Saturday, December 8, 2012


ಆತ್ಮಸಖಿಗೊಂದು ಪತ್ರ...

........................................
  ಸಖೀ, ನಿನ್ನೊಡನೆ ಮನಸಲ್ಲೇ ನಿನ್ನೆ ತುಂಬಾ ಹೊತ್ತು ಮಾತಾಡಿದೆ ಕಣೇ... ಅದೇನು ಅಂತೀಯಾ....ಹೇಳ್ತೀನಿ ಇರು. ಎಷ್ಟು ವಿಚಿತ್ರ ನೋಡು, ನಾನು ನನ್ನ ಅನಿಸಿಕೆಯನ್ನು ತೋಡಿಕೊಳ್ಳಲು ಮತ್ತು ಅದಕ್ಕೆ ಪ್ರತಿಕ್ರಿಯಿಸಲು ನಿನ್ನನ್ನು ನನ್ನ ಕಲ್ಪನೆಯೊಳತಂದು ಅದೆಷ್ಟೋ ಹೊತ್ತು ನಿನ್ನೊಡನೆ ಕಳೆದೆ...ನೀನೂ ಅಲ್ಲಿ ಆ ಚಿಂತನಾಸರಣಿಗೆ ಅದೆಷ್ಟೋ ಕೊಂಡಿಗಳ ರೂಪದಲ್ಲಿ ಒದಗಿದೆ... ಆದರೀಗ ಹೇಳು ನೋಡುವಾ... ಏನು ಮಾತಾಡಿದ್ದು ನಾವು...? ಹೇಳಲಾರೆ... ಯಾಕೆಂದರೆ ಅಲ್ಲಿದ್ದದ್ದು ನಿನ್ನ ಅಮೂರ್ತವ್ಯಕ್ತಿತ್ವ....ಅದೂ ನನ್ನ ಭಾವಪ್ರಪಂಚದೊಳಗಷ್ಟೆ....ಅದು ಹೇಗೆ ಅಂತೀಯಾ....ಅದು ಹೀಗೇ ಕಣೇ......ಸ್ನೇಹ ಅಮೂರ್ತವೆಂದರೆ ನಿರಾಕಾರನನೊಪ್ಪಿದಂತೆ

ಸ್ನೇಹ ಮೂರ್ತವೆಂದರೆ ದೇಗುಲವ ಹೊಕ್ಕಂತೆ

ನಿರೂಪಣೆ, ಬಣ್ಣನೆ, ವಿವರಣೆಗದು ಹೊರತು....

ಕಾರಣ, ಉದ್ದೇಶ, ಸಾಕ್ಷಿ, ಆಧಾರಕೂ ...

ಇದೆಯೆಂದರೂ ಇಲ್ಲವೆಂದರೂ.....

ಮೂರ್ತ- ಅಮೂರ್ತಗಳ ಮೀರಿದ್ದು

ಸ್ನೇಹವೂ ಹೌದು ಮತ್ತು ದೇವನೂ....ಈ ಭಾವನೆಗಳೇ ಹಾಗೆ...ಗಾಳಿಯ ಹಾಗೆ...ಸಮುದ್ರದ ಹಾಗೆ....ಕಾಲದ ಹಾಗೆ....ತಮ್ಮಷ್ಟಕ್ಕೆ ತಾವು ಇಷ್ಟಬಂದಂತೆ ವರ್ತಿಸುತ್ತಲೇ ಸಾಗುತ್ತವೆ. ಅವು ಹಾಗಿರುವುದು ಬೇಕಿರಲಿ, ಬೇಡದಿರಲಿ,.. ಸಾಕಿರಲಿ, ಸಾಲದಿರಲಿ...ಸೂಕ್ತವಿರಲಿ, ಇಲ್ಲದಿರಲಿ...ಅವಕೆ ತಮ್ಮದೇ ದಾರಿ, ತಮ್ಮದೇ ನಿರ್ದೇಶನ ಮತ್ತೆ ತಮ್ಮದೇ ಗುರಿ. ಒಮ್ಮೊಮ್ಮೆ ನಮ್ಮೊಳಗವೇ ಬೇಡವೆನಿಸುವ ರೀತಿಯ ಅಧಿಪತ್ಯ ಸಾಧಿಸಿ ತಬ್ಬಿಬ್ಬುಗೊಳಿಸುವಷ್ಟು ಆಕ್ರಮಣಕಾರಿ.... ಒಮ್ಮೊಮ್ಮೆ ಪುಳಕಿತಗೊಳಿಸುವಷ್ಟು ಮಾರ್ದವ...ಇಲ್ಲದ್ದ ಕಲ್ಪಿಸಿ ಒಮ್ಮೊಮ್ಮೆ ದುಖಃದಾಯಕ, ಒಮ್ಮೊಮ್ಮೆ ಆಶಾದಯಕ, ...ತೀವ್ರವಾಗಿ ಒಮ್ಮೊಮ್ಮೆ ಎದುರಿದ್ದವರ ದೂರವಾಗಿಸುವಷ್ಟು ಕಠೋರ, ಒಮ್ಮೊಮ್ಮೆ ಸೀದಾ ಎದೆಗಿಳಿಸುವಷ್ಟು ಮಧುರ....ಹೀಗೆ ನಮ್ಮವೇ ಆಗಿದ್ದು ನಮ್ಮಾಧೀನಕ್ಕೆ ಹೊರತಾಗಿದ್ದರೂ ಇವು ಎಲ್ಲಾ ಹೊತ್ತಲ್ಲೂ ಸಂಗ ಬಿಡದ ಸಂಗಾತಿಗಳಂತೂ ಹೌದು...ಅದರಲ್ಲೂ ನನ್ನ ನಿನ್ನಂಥ ಸೂಕ್ಷ್ಮಮತಿಗಳು ಅವಕ್ಕೆ ತುಂಬಾ ಸದರ ಕೊಟ್ಟು ಬಿಟ್ಟಿರುತ್ತೇವೇನೋ ಹಲವು ಬಾರಿ...ಏನಂತೀಯಾ? ಅದಿರಲಿ ನಿನ್ನೆಯ ಮಾತುಕತೆಗೆ ಬರೋಣ..

ನಿನ್ನೆ ನಾನೊಂದು ಕವನ ಬರೆದು ಸಾರ್ವಜನಿಕರ ದೃಷ್ಟಿಗೆ ಅದನೊಪ್ಪಿಸಿದೆ ನೋಡು...ಅದು ಹೀಗಿತ್ತು....ಬೆಲೆ ತೆರಲೇ ಬೇಕು

---------------------------------------

ಅಲ್ಲೊಂದು ಹೃದಯ- ಎಲ್ಲರದರಂತೆ

ದೇಹಕೂ ಮನಸಿಗೂ ಜೀವನದಿಯ ಸೆಲೆಗೋಡೆ ಮಾತ್ರ ಬಹಳ ಮೆದು, ತೇವ ಸ್ವಲ್ಪ ಜಾಸ್ತಿ.

ಆರ್ದೃತೆಯುಳಿಸಿಕೊಂಡುದಕೆ ಇತ್ತ ಸೆಳೆತ ಜಾಸ್ತಿ

ಮೊದಲ ಮಳೆಯುಂಡ ಹಸಿಮಣ್ಣ ಘಮಲಂತೆ,

ತನ್ನತನ ಎಲ್ಲರಂತಿಲ್ಲೆಂಬ ಗರ್ವವಂತೆ.ದಾರಿಹೋಕರೆಲ್ಲ ಒಣಗದ್ದು ವಿಶೇಷವೆಂದರು,

ಬಳಿಸಾರಿ ಮುಟ್ಟಿದರು, ಉಗುರಿಂದ ಕೆರೆದರು,

ಬೆರಳಲಿ ಬರೆದರು, ದೂರ ಸಾಗಿ ಜೋರು ಕಲ್ಲೆಸೆದರು,

ಅಳಿಯದ ಛಾಪು ಮೂಡಿಸಿ ಅಮರರೆನಿಸಬಯಸಿದರು.ಗುರುತು ಮೂಡಿಸಲೀಗ ಸೂಜಿಮೊನೆ ಜಾಗವಲ್ಲಿಲ್ಲ.

ಹಸಿಗೋಡೆ ಜೊತೆಗಾರೂ ಇಲ್ಲ, ಇವೆ ಗುರುತು ಮಾತ್ರ.

ಗಟ್ಟಿಯಾಗಬೇಕದಕೀಗ, ಆಗಲೊಲ್ಲದು,

ಹುಟ್ಟುಗುಣ ಸುಟ್ಟರೂ ಬಿಟ್ಟು ಮಾತ್ರ ಹೋಗದು.ಗಟ್ಟಿಯಾದರೂ ಮುಂದೊಮ್ಮೆ ಗುಳಿಗಳು, ಗೀಚುಗಳು,

ಗೀರುಗಳು, ಗಾಯಗಳು ಕಲೆಯಾಗುಳಿಯುವವು.

ಸುಲಭವಲ್ಲವಲ್ಲಾ... ಎಲ್ಲರಂತಿಲ್ಲದಿರುವುದು?!

ಬೇರೆ ಎನಿಸಿಕೊಳಲಿಕೆ ಬೆಲೆಯ ತೆರಲೇಬೇಕು.ಸರಿ, ಅಭಿಪ್ರಾಯಗಳು, ಟೀಕೆಗಳು, ಮೆಚ್ಚುಗೆಗಳೂ ಬಂದವು, ಜೊತೆಗೊಂದು ಪ್ರಶ್ನೆ..."ಹಳೆಯ ಗಾಯ ಮರೆಯಲು ಹೊಸ ಸ್ನೇಹದ ಅವಶ್ಯಕತೆ ಇದೆಯಾ..." ಈ ಪ್ರಶ್ನೆ ನನ್ನ ಚಿಂತನೆಗೆ ಹಚ್ಚಿತು ಕಣೇ... ಬರಹಕ್ಕೂ ಅದರ ಬರಹಗಾರನಿಗೂ ಇರುವ ಮತ್ತು ಇರಬೇಕಾದ ಸಂಬಂಧದ ಸ್ವರೂಪ ಯಾವುದು... ನಿಜ, ಸಂಬಂಧ ಅಂದರೆ ಸಂಬಂಧ ... ಅದಕ್ಕೊಂದು ಸ್ವರೂಪ ಎಂಬ ನಿರ್ದಿಷ್ಟತೆ ಇರದು, ಮತ್ತು ಇರಬಾರದು, ಒಪ್ಪಿದೆ. ಆದರೂ ಅದಕ್ಕೊಂದು ಹೀಗಿರಬೇಕೆಂಬ ಕನಿಷ್ಠ ಹಾಗೂ ಸ್ಥೂಲನಿಯಮವಿರಬೇಕಲ್ಲವೇನೇ..ಹನ್ನೆರಡನೇ ಶತಮಾನದ ವಚನಕಾರರ ಬಗ್ಗೆ ಓದುವಾಗ ಹೀಗೆ ಓದಿದ್ದೆ- "ವಚನಚಳುವಳಿಯು ಅಷ್ಟೊಂದು ಪ್ರಭಾವಶಾಲಿಯಾಗಿ ಬೆಳೆಯಲು ಕಾರಣವೇನೆಂದರೆ ವಚನಕಾರರು ಸಾಮಾನ್ಯರ ನಡುವೆ ಬಾಳಿದರು, ಕಷ್ಟ ಸುಖಗಳನ್ನು ಅವರೊಂದಿಗೆ ಅನುಭವಿಸಿ, ಅದನ್ನು ಅನುಭಾವವಾಗಿಸಿ ಬದುಕಿದ್ದನ್ನು ಬರೆದರು, ಬರೆದದ್ದನ್ನು ಬದುಕಿದರು....." ಅಂದರೆ, ನಾವು ಅನುಭವಿಸಿದ್ದನ್ನ ಬರೆಯುವುದಷ್ಟೇ ಪ್ರಭಾವಶಾಲಿಯಾಗುವುದು ಸಾಧ್ಯವೇ... ಅಥವಾ ಕಲ್ಪಿಸಿ ಬರೆಯುವುದು , ಪರಕಾಯ ಪ್ರವೇಶದಿಂದುತ್ಪನ್ನ ಭಾವಗಳನ್ನು ಬಿಂಬಿಸುವುದು ಕೂಡಾ ಅಷ್ಟೇ ಪ್ರಭಾವಶಾಲಿಯಾಗುವುದು ಸಾಧ್ಯನಾ ಅಂತ...

ಸಾಮಾನ್ಯವಾಗಿ ಕವನಗಳ ಬಗ್ಗೆ ಮಾತಾಡುವಾಗ ಆರಿಸಿಕೊಳ್ಳುವ ಪ್ರಕಾರಗಳ ವೈವಿಧ್ಯತೆ ತುಂಬಾ ವಿಸ್ತಾರದ್ದು. ಅಲ್ಲಿ ವರ್ಣನೆಯದ್ದೊಂದು ಪ್ರಕಾರವಾದರೆ ಕಲ್ಪನೆಯದ್ದೊಂದು, ಹೇಳಿಕೆಯದ್ದೊಂದಾದರೆ ನಿವೇದಿಸಿಕೊಳ್ಳುವದ್ದೊಂದು, ಉಪದೇಶದ್ದೊಂದಾದರೆ ಪ್ರಶ್ನಿಸುವದ್ದೊಂದು, ಖಂಡನೆಯದ್ದೊಂದಾದರೆ ಹೊಗಳುವದ್ದೊಂದು...ಸಂವಾದದ್ದೊಂದಾದರೆ ಸ್ವಗತದ್ದೊಂದು ಹೀಗೆ ನೂರಾರು ತರಹದವುಗಳು... ಮತ್ತವುಗಳ ಜಾಡಿನ ರಚನೆಗಳು. ನನ್ನ ಮಟ್ಟಿಗಂತೂ ಮನಸಿನೊಳಗೆ ಒಂದು ವಿಷಯದ ಬಗೆಗಿನ ಭಾವನೆಗಳು ತುಂಬಿ ತುಳುಕಾಡಿದಾಗ ಉಳಿದವುಗಳಿಗೆಡೆ ಮಾಡಿಕೊಳ್ಳಲು, ಅಥವಾ ಭಾವನೆಗಳು ದಟ್ಟಮೋಡಗಳಂತಾದಾಗ ಸುರಿಯುವುದು ಅನಿವಾರ್ಯತೆಯಾದಾಗ...ಹೀಗೆ.. ಒಟ್ಟಿನಲ್ಲಿ ಹಗುರಾಗಲು ಒಂದು ಮಾಧ್ಯಮ ಈ ಬರವಣಿಗೆ. ಈ ಎಲ್ಲಾ ಪ್ರಕಾರಗಳಲ್ಲೂ ಮನುಷ್ಯನ ಕುರಿತಾಗಿ ಬರೆದ ಬರಹಗಳನ್ನು ತೆಗೆದುಕೊಳ್ಳುವಾ.ಅಲ್ಲಿನ ಭಾವನೆಗಳು ಸ್ವಾನುಭವದ ಶಿಶುಗಳಾಗಿಯೂ ಇರಬಹುದು ಅಥವಾ ಎದುರಾದದ್ದೊಂದು ಸಂದರ್ಭದಲ್ಲಿ ಕೇಂದ್ರದಲ್ಲಿ ತನ್ನನ್ನು ಕಲ್ಪಿಸಿಕೊಂಡು ಮೂಡಿದವೂ ಇರಬಹುದು, ಇಲ್ಲ ಪರರಿಗಾಗಿ ತುಡಿತದ ಫಲವೂ ಇರಬಹುದು. ಮುಖ್ಯವಾಗಿ ವಸ್ತುವೆಂದು ರಮ್ಯವಿಷಯವೊಂದನ್ನು ಆರಿಸಿ ಬರೆದಾಗಲಂತೂ ಅದೂ ಸ್ವಗತ ಮಾದರಿಯ ಅಥವಾ ಸಂವಾದ ಮಾದರಿಯ ಕವನಗಳಲ್ಲಿ ಬಿಂಬಿತ ಭಾವಗಳು ಮತ್ತು ಹೇಳಿಕೆಗಳು ಬಹುಶಃ ಓದುಗನ ಮನಸಿನಲ್ಲಿ ಒಂದೋ ಬರೆದವನನ್ನು ಅಥವಾ ತನ್ನನ್ನು ಆ ರಚನೆಯ ಕೇಂದ್ರವಾಗಿಸಿ ತೋರಿಸುವುದೇ ಹೆಚ್ಚು... ಏನಂತೀಯಾ...?

ಹಾಗಾದರೆ, ಕಲ್ಪಿಸಿ ಬರೆದ ಬರಹ ಅನುಭವಿಸಿ ಬರೆದದ್ದರಷ್ಟು ಪ್ರಭಾವಶಾಲಿಯಲ್ಲ ಅನ್ನುವುದಾದರೆ,ನನ್ನದಲ್ಲದ ಅನುಭವವೊಂದು ನನ್ನದೇ ಅನ್ನಿಸುವಷ್ಟು ಆ ಓದುಗನನ್ನು ಪ್ರಭಾವಿಸಿದ್ದು ಮತ್ತು ಆಮೂಲಕ ಆ ಪ್ರಶ್ನೆ ಹುಟ್ಟಿದ್ದು ಹೇಗೆ?

ಮನುಷ್ಯನಲ್ಲದ ವಿಷಯಗಳ ಬಗ್ಗೆ ಬರೆಯುವಾಗ ಪ್ರತಿಮೆಗಳು, ಉಪಮೆಗಳು ಎಷ್ಟೊಂದು ಹಿತವೆನಿಸುತ್ತವೆ!... ಉದಾಹರಣೆಗೆ ಭೂಮಿ ಬಾನುವಿನ, ಸೂರ್ಯ ಕಮಲದ, ಚಂದ್ರ ನೈದಿಲೆಯ ಪ್ರೇಮ, ಇಬ್ಬನಿಯ ಹನಿಯೊಂದು ಹಿಮಮಣಿಯೆನಿಸುವುದು, ಮೂಡಣದ ಬಾನಿನಲ್ಲಿ ರಕ್ತದೋಕುಳಿ ಚೆಲ್ಲಿದಂತನಿಸುವುದು, ಕ್ಷಿತಿಜದಲ್ಲಿ ಭೂಮಿ ಬಾನು ಸೇರಿ ಕಾಮನಬಿಲ್ಲಿನ ಜನನವೆಂದೆನಿಸುವುದು.. ಇವೇ ಮುಂತಾದ ಈ ರೀತಿಯ ಕಲ್ಪನೆಗಳು ನಮ್ಮ ಹಿರಿಯ ಕವಿಗಳ ರಚನೆಗಳಲ್ಲಿ ಪ್ರಮುಖ ಆಕರ್ಷಣೆಗಳೆನಿಸುವುದಲ್ಲದೆ, ಅವರವರ ರಚನೆಗಳ ಮೇರುಲಕ್ಷಣಗಳೆನಿಸುವುದು ಕಂಡಿದ್ದೇವೆ ಅಲ್ಲವೇ? ಅದೇ ರೀತಿ ಅವಲ್ಲದ ಆದರೆ ಅವಾಗಬಹುದಾದ ಮನುಷ್ಯನ ಗುಣಗಳು, ವರ್ತನೆಗಳು, ನಿರ್ಧಾರಗಳು, ಚಿಂತನೆಗಳು, ಲಕ್ಷಣಗಳು ಒಂದು ಕವನದಲ್ಲಿ ಕಲ್ಪನೆಯ ಫಲವಾಗಿ ಬಿಂಬಿಸಲ್ಪಟ್ಟರೆ, ಅದನ್ನೊಂದು ಸಾಧ್ಯತೆಯಾಗಿಯೇ ಅಥವಾ ನೈಜತೆಯಾಗಿಯೇ ನೋಡುವುದು ಯಾಕೆ? ಅದೊಂದು ಕಲ್ಪನೆಯಿರಬಹುದೆಂದು ಕನಿಷ್ಠ ಮೊದಲ ಓದಿನಲ್ಲಂತೂ ಅನಿಸುವುದಿಲ್ಲ..( ಹೆಚ್ಚಿನ ಸಲ ಇದು ಬೇರೆಯವರ ಬರಹಗಳ ಓದುಗಳಾದಾಗ ನನ್ನ ಚಿಂತನೆಯ ಜಾಡೂ ಹೌದು.) ಇದಕ್ಕೆ ನಮ್ಮ ಕ್ಲಿಷ್ಟ ಮನಸು ಕಾರಣ ಅಂತೀಯಾ,.. ಮನಸು ಎದುರಿಗಿನ್ನೊಂದು ಮನಸನ್ನು ಕಂಡಾಗ ಸಂಶಯದ ದೃಷ್ಟಿಯಿಂದಲೇ ನೋಡುವುದು ಅಂತೀಯಾ, ಅಥವಾ ಅನುಭವಕ್ಕೆ ಬರದ್ದು ಸತ್ಯವೇ ಅಲ್ಲ ಅನ್ನುವ ದೃಷ್ಟಿಕೋನ ಅಂತೀಯಾ..

ಹೀಗೆ ನಿನ್ನೆದುರಿಗಿಷ್ಟು ಜಿಜ್ಞಾಸೆಗಳನ್ನಿಟ್ಟು ಮುಗಿಸುತ್ತಿದ್ದೇನೆ....ನಿನಗೇನಾದರೂ ಇವಕ್ಕುತ್ತರವಾಗಿ ನಾನಿಲ್ಲಿ ಹೇಳದ್ದು ಹೊಳೆದರೆ ತಿಳಿಸುತ್ತೀಯಲ್ಲಾ.....ಇವತ್ತಿಗೆ ಮುಗಿಸಲಾ...

Tuesday, December 4, 2012ಅಪ್ಪ....


-------------------

ಸವೆದ ಚಪ್ಪಲಿ, ಮಾಸಿದ ಚೀಲ,

ಮುರಿದ ಕನ್ನಡಕ,  ಒಡೆದ ವೀಳ್ಯದ ಪೆಟ್ಟಿಗೆ,

ಮುರುಕು ನಶ್ಯದ ಡಬ್ಬಿ, ಹರಕು ಬೈರಾಸ,

ಇಂಚಿಂಚು ಕುಸಿಯಿಸುವ ಇಳಿವಯಸಲಿ

ಕಳೆಗೆಟ್ಟ ಅಂಗಿ, ತೂತು ಬನಿಯಾನಿನೊಳಗಣ

ಅಪ್ಪನದೆಲ್ಲವೂ ಈಗ ಹಳೆಯದೇ...ಆದರೆ....,

ತೊದಲಾದರೂ ನುಡಿ, ಭಾವಸ್ಪಷ್ಟತೆ,

ಭಕ್ತಿಯಲಿ ಮತ್ತೆ ಕಣ್ತುಂಬುವ ಪರವಶತೆ,

ತಪ್ಪುಸರಿಯ ಬೇರ್ಪಡಿಸುವ ಸ್ಮೃತಿದೃಢತೆ,

ಒಳಿತನಪ್ಪಿ ಕೆಡುಕ ತೊರೆವ ನೀತಿಬದ್ಧತೆ-

ಅವನಲಿ ಹೊಸತಾಗುತಲೇ ಸಾಗಿವೆ.."ಅಪ್ಪಾ" ಎಂದಾಗ ಚಿಮ್ಮೋ ಮಾರ್ದವತೆ,

ಆ ಅಸಹಾಯನಗುವಲೂ ಕಾಣೋ ಭದ್ರತೆ,

ಮುದಿಕಾಯದಲೂ ಮುದಿಯಾಗದ ಭರವಸೆ,

"ತಾ ಇಲ್ಲಿ ಭಾರ" ಎನುವ ಕೈಯ್ಯ ಒತ್ತಾಸೆ,

ಈಗಷ್ಟೇ ಹುಟ್ಟಿದ ತಾಜಾತನ ನನ್ನೊಳಗಿವಕಿವೆ....ಈಗ ಒಪ್ಪಿದೆ .....


-------------------

ಸಾಕಾರದ ಸುತ್ತ ವಿಸ್ತೃತ ನಿರಾಕಾರ ಎಂದೆಯಲ್ಲಾ...

ತಿಳಿದಿರಲಿಲ್ಲ... ಈಗ ಒಪ್ಪಿದೆ,

ನಿನ್ನ ತುಂಬುಕಣ್ಣ ಹಿಂದಿನ ಶೂನ್ಯದೃಷ್ಟಿ...

ತುಂಬು ಬಾಳ ಹಿಂದಿನ ಶೂನ್ಯ ಆಸ್ತಿಪಾಸ್ತಿ....

ನಿಸ್ವಾರ್ಥತೆಯ ಸುತ್ತಲಿನ ಸ್ವಾರ್ಥಪ್ರೀತಿ

ಸತ್ಯಪರತೆಯ ಮುಂದಿನ ಸುಳ್ಳಮಾಲೆ

ನಿಷ್ಠೆಯ ಪ್ರತಿಯ ಢಂಭಾಚಾರದ ನಗು

ಮಾತುಗಳ ಹಿಂದಿನ ಮೌನ,

ಆರೋಗ್ಯದ ಹಿಂದಿನ ಒದ್ದಾಟ,

ಏಳ್ಗೆಯಾಸೆಯ ಹಿಂದಿನ ನಿರಾಸೆ,

ಅಳಿವಳಿಸೊ ಕಳಕಳಿಗೆ ಉಪೇಕ್ಷೆ,

ಕ್ಷೇಮಹಾರೈಕೆಯ ಹಿಂದಿನ ಅಧೈರ್ಯ-

ನೀನಂದುದಕೆ ಇವೇ ಪ್ರತ್ಯಕ್ಷ ಸಾಕ್ಷಿ....

ಅಪ್ಪಾ...ಈಗನಿಸಿದ್ದಲ್ಲ......

ಈ ಧೂಳು ಹಿಡಿದ ಕನ್ನಡಿಯ

ಬಿಂಬದಂತಿದ್ದ ಅಸ್ಪಷ್ಟ ಅನಿಸಿಕೆಗಳು,

ನಿನ್ನೆ ಬೀಳ್ಕೊಟ್ಟಾಗ ಕಂಡೂಕಾಣದುದುರಿದ

ನಿನ್ನ ನಗುವಿನ ಕಂಬನಿಯಲ್ಲಿ ಸ್ಪಷ್ಟವಾದವು.....