Tuesday, July 28, 2015

ಬೇಸರದ ಕಡಲಲಿ
ನಗೆ ಹೊತ್ತು ತರುತಿದೆ
ಜೀವಂತ ದೋಣಿ!
ತಿರುತಿರುಗಿ ಹೊರಳಿ ಮರಳಿ
 ಮತ್ತರಳುವ ಹೊಸ ಹೂನಗೆ!
ಬಣ್ಣವಿಲ್ಲದ ಕಡೆಯೂ
ಸಣ್ಣ ಗಮನ ಕರೆದರೂ ಸಾಕು
ಫಳ್ಳನೆ ಮಿಂಚಬಲ್ಲ ಮೆಲುನಗೆ!
ಸಪ್ತವರ್ಣ ಅಡಗಿಸಿಟ್ಟುಕೊಂಡ
 ಬೆಳ್ಳಂಬೆಳಕು ನಸುನಗೆ!
ಒಡಲಿಂದ ಹೊಮ್ಮಿದ
ಹಸುರು ನಿನ್ನೆಗಳ
ಒಣಕಾಷ್ಠಗಳೆಷ್ಟೋ..
ಒಂದೇ ಹಕ್ಕಿರೆಕ್ಕೆಯಾಡಿದ
ಸಂದೇಶ ಸಾಕು
ಸರಿಹೋಗಲಿದೆಯೆಲ್ಲ
ಅನುತಾ ಬರುವ ಚಂದ ನಗೆ!
ಸೆಳೆವಿಲ್ಲ, ಸುಳಿಯಿಲ್ಲ,
ಗುರಿಯದೊಂದು ವಿಳಾಸವಿಲ್ಲ..
ಆದರೂ ಪಯಣದಲಿ
ದುಗುಡ, ಬೇಸರವಿಲ್ಲ.
ದೋಣಿಯಿದೆ, ಹುಟ್ಟು ಇದೆ,
ನೀರಿದೆ, ಒಳಗಷ್ಟು ಕಸುವಿದೆ,
ಜೊತೆಗೊಂದು ಸಾಂಗತ್ಯ,
ಮತ್ತೆ ಕರೆದಾಗ ಬರುವ ನಗೆ,
ಒಟ್ಟಲ್ಲಿ ಬದುಕೆಂದೂ ಬರಡಲ್ಲ.. 

Saturday, July 18, 2015

ಇನ್ನೆಂದು?

ಅಮಾವಾಸ್ಯೆ ಹುಣ್ಣಿಮೆ ಮತ್ತು ನಡುವಿನಷ್ಟು ದಿನಗಳಲೂ
ಸಮಾನ ಹೊಳೆವ,
ಸೂರ್ಯ, ಚಂದ್ರ, ತಾರೆಯಂಥದ್ಯಾವುದೂ ಅಲ್ಲದ
ನೀನೆಂದರೆ ಬರೀ ನೀನು ನನಗೆ.
ಬೆಳಕಿರದಲ್ಲಿ ಕುರುಡು ಕಣ್ಣು
ಬೆಳಗಲಿ ಅರಳುವ ಕಣ್ಣು
ಒಳಗೊಂಡಿರುವುದು ಬರೀ ನಿನ್ನ ಬಿಂಬವನ್ನು.
ಮಾತಾಗುತಾ ಮತ್ತೆ ಮೌನವಾಗುತಾ
ನಗುವುದು ನೀನಿತ್ತ ಸೊಬಗನ್ನು,
ಅಳುವುದಾದರೂ ನೀನಿತ್ತುದೇ ಅಳಲನ್ನು.
ಮುನಿಸು ಹೇಗೆ ಅಡಗಿಸೀತು ಹೇಳು
ನಿನ್ನೆದೆಯ ಹರವಲ್ಲಿ ನಾ ಬಿತ್ತಿದ ಮುತ್ತು
ನನ್ನೆದೆಯಲ್ಲಿ ಅರಳಿಸಿದ ಹೂವನ್ನು?
ನೋಡು,
ಅದ್ಯಾರದೋ ಒಲವು, ಯಾರದೋ ನೋವು
ಯಾರದೋ ಅಸಹಾಯಕತೆ, ಅದ್ಯಾರದೋ ಮಿಲನ
ನನ್ನೊಳಗೆ ಕೋಪವ ಮೀಯಿಸಿದವು.
ಕೊಳಕೆಲ್ಲ ಕಳೆದು ಮತ್ತೆ
ಮಳೆಬಿಲ್ಲಿನಷ್ಟು ಚಂದವುಟ್ಟಿದೆ ಕೋಪ,
ಆದರೂ ನಳನಳಿಸುತಿಲ್ಲ ಪಾಪ!
ಹೇಳು,
ಮೆಲುವಾಗಿ ಇನ್ನೆಂದು
ಬೊಗಸೆಯಲೆತ್ತಿ ಚುಂಬಿಸಿ
ಕಳೆಗುಂದಿದ ಕೋಪವ
ನಾಚಿಕೆಯಲಿ ಹೊಳೆಯಿಸಿ ಕೆಂಪಾಗಿಸಲಿರುವೆ? 

Saturday, July 11, 2015

ಸಂಜೆಯೊಂದು ಚಡಪಡಿಸಿ
ರಾತ್ರಿಯ ಮಡಿಲಲಿ
ಉಸ್ಸೆಂದು ಕುಸಿದು ಕೂತಾಗ
ಎಷ್ಟೆಲ್ಲ ಗುಟ್ಟುದುರಿದವಲ್ಲ!?
ಹುಡುಕುತಾ ಕಳಕೊಂಡದ್ದು,
ವರ ಸಿಕ್ಕಿತು ಅಂದುಕೊಂಡದ್ದು..
ಸಮೀಪಿಸುತಾ ತೀರವೆರಡು ಕಾಲಡಿ ಕಂಡದ್ದು,
ಕೂಡಿದೆವು ಅಂದುಕೊಂಡದ್ದು..
ತೆರಕೊಂಡು ಬಯಲಾದೆವೆನಿಸಿದ್ದು
ತೋರುಬೆರಳುಗಳಲಿ ಮೆಲ್ಲ ಚೈತನ್ಯವುಕ್ಕಿದ್ದು


ಕುಶಲ ಕಲೆಗಾರ ಬೆಳಕು
ತೋರಿ ತುಸುವೇ
ಅದೆಷ್ಟೊಂದು ಮರೆಯಿರುವಂತೆ
ಹಾಡಿತು, ಕುಣಿಯಿತು, ವರ್ಣಿಸಿತೂ ಕೂಡ.

ಸಂಜೆಯಲಷ್ಟು ಬಿಸಿಲೂ ಇತ್ತು
ಮತ್ತಿಷ್ಟೇ ಮಳೆ ಹನಿದಿತ್ತು.
ಬರಬೇಕಿತ್ತು ಮಳೆಬಿಲ್ಲು
ಕಾಯುತಲೇ ಹೊತ್ತು ಸುಸ್ತಾಗಿತ್ತು.

ಗೊಂದಲದ ಕಂಗಳು
ದಣಿದು ಸುಮ್ಮನಾದವು.
ಸಂಜೆಯೀಗ ತೆಪ್ಪಗೆ ಕರಗಿ ಕತ್ತಲ ತೆಕ್ಕೆಯಲ್ಲಿ
ಮತ್ತು ಕತ್ತಲೇ ಎಲ್ಲ ಸ್ಪಷ್ಟ ತೋರಿಕೊಟ್ಟಿತು.

ಭಾರದ ಗುಟ್ಟುಗಳಿಗೀಗ
ಈ ಜೋಳಿಗೆಯಲ್ಲದೆ ಗತಿಯಿಲ್ಲ.
ಜತನ ಗಂಟು ಕಟ್ಟಿಕೊಳಲೇಬೇಕು.
ಮುಂದೊಮ್ಮೆ ಪುರ್ರನೆ ಹಾರುವ ಹಗುರ ಚಿಟ್ಟೆಗಳಾದಾವು.
ಕಾಯಬೇಕು ಹಗುರಾಗಲಿಕೆ
ಸತ್ಯ ಅರಗಿಸುವಷ್ಟು ಹೊತ್ತು ಗಟ್ಟಿಯಾಗುವವರೆಗೆ...

Thursday, July 9, 2015

ಅದೆಷ್ಟೋ ಚಂದದ ನಿನ್ನೆಯೊಂದು
ಕ್ಷಣಮಾತ್ರದಲಿ ಎಲ್ಲ ಹೊತ್ತೊಯ್ದು
ಬೋಳುಬೋಳಾಗಿಸಿದ
ಅಷ್ಟೊಂದು ಚಂದವಲ್ಲದ
ಮೆಲ್ಲ ಮಾತಾಡುವ ಇಂದಿನ
ಕತೆ ಹೇಳುತಿರುವ ಮಿಶ್ರವರ್ಣದ ಸಂಜೆಯಲಿ
ಒಂದಷ್ಟು ಸಾಮಾನು ಹೊತ್ತುತಂದೆ
.


ಬೆನ್ನುಗಳಿಗೇ ಅಂಟುತ
ಸದಾ ಕಸವೆಂದು ಸುಳ್ಳಾಡುವ
ಕಣ್ರೆಪ್ಪೆಗೊಂದು ಅಪೂರ್ವ ನಿದ್ದೆಯಂಟಿಸುವ ಗೋಂದು..
ಬಿಟ್ಟುತೆರಳುವ ಗಳಿಗೆಯನಷ್ಟೇ ಹಾಡುವ ಕಂಠಕೆ
ಏಕಾಂತನಾದದ ರುಚಿ ಹತ್ತಿಸುವ
ಒಳಯಾನ ರಾಗದ ಆರೋಹ ಅವರೋಹ...
ನೀನು ಮತ್ತು ನಿನ್ನೆಯೊಡಲಿಂದ ನಿಷ್ಫಲ ಕ್ಷಣ ಹೆಕ್ಕಿ
ಮಾರ್ಗನಕಾಶೆ ಬರೆವ ಭಾವಕೆ,
ಅನುಸರಿಸುವ ಕಾಲಿಗೆ
ನಿಂತಲ್ಲೇ ನಿಲಿಸುವ ಸರಪಳಿ..
ಅಲ್ಲೆಲ್ಲೋ ವರ್ಷದ ಸೂಚನೆಗೇ
ನಂಬಿ ನವಿಲಾಗುವ ಹೆಜ್ಜೆಗೊಂದು
 ಮಳೆಹನಿ ಪೋಣಿಸಿದ ಗೆಜ್ಜೆ..

ಹೋ... ಸಾಕಷ್ಟಾಯಿತು!
ಒಳಗೆ ನಗೆಯ ಉದ್ಯಾನಕೆ ಬಿತ್ತಿದ್ದೇನೆ.
ನಿನಗಿದೋ ಸ್ವಾಗತ ಒಲವೇ,
ಕಣ್ಣಿಂದ ನೇರ ಬೇರಿಗೇ ಹಾದಿಯೂ ಆಗಿದೆ.
ಇನ್ನೊಂದೊಂದು ಹನಿಯೂ
ಹೂವರಳಿಸುವ ಹೊತ್ತು ದೂರವಿಲ್ಲ.
ತಾನರಳಿಸಿ
ಅವಳೊಡಲಿಗುದುರಿಸಿದ
ಪಾರಿಜಾತದ ಅರೆಬಿರಿದ ಮುಗುಳಿನಂದಕೆ
ತೃಪ್ತ ನಗುತಿದ್ದ ಭೂಮಿಯ
ದೂರದಾಗಸದಲಿ ಕೂತು ತಾ ಕೇಳುತಾನೆ..
"ನಾ ಸೂರ್ಯ, ಸುತ್ತ ನಭೋಮಂಡಲ..
ಒಂದಷ್ಟು ಗ್ರಹ,
ಮತ್ತೆಷ್ಟೋ ಉಪಗ್ರಹ,
ಲೆಕ್ಕ-ಪತ್ತೆಯಿಲ್ಲದಷ್ಟು ನಕ್ಷತ್ರ;
ಒಂದೊಂದಕೂ ಒಂದೊಂದು ಪಾತ್ರ,
ಕಾಣುವ, ಕಾಣದ ಅದೆಷ್ಟೋ ಉರಿವ ಗೋಲ,
ನುಂಗುವ ಕುಳಿ,
ಇನ್ನೆಷ್ಟೋ ತುಂಡು ಕಾಯ,
ಧೂಮಕೇತುಗಳು!
ಅನವರತ ಸುತ್ತುತಲೇ
ನೀನೆಲ್ಲ ಕಂಡೇ ಇರುವೆ.
ಹೇಳೇ ಜಗದ ಕಾಲಡಿಯ ನೆಲವೇ,
ನಿನಗೂ ನಕ್ಷತ್ರ, ಗ್ರಹ, ಉಪಗ್ರಹಗಳಾಸೆಯಿಲ್ಲವೇನೇ?"
ಭೂಮಿ ಕಿಲಕಿಲನೆ ನಗುತ್ತಲೇ
ಮತ್ತೆ ಧೋ ಎಂದಳುತ್ತಲೇ
ಎಂದೂ ಎಟುಕದವನ
ಮತ್ತೆ ಮತ್ತೆ ಸುತ್ತುತ್ತಾಳೆ.
ಅವಳಿಗಿನ್ಯಾರೂ ಇಲ್ಲ,
ಅಳಿಸಲಿಕೂ ನಗಿಸಲಿಕೂ...

ಅವಳ ಕಾಲದ ಬೊಗಸೆಯಲೀಗ
ರಾತ್ರಿಸಾಮ್ರಾಜ್ಯ.
ಆಗಸದ ಅಮಾವಾಸ್ಯೆ ಕಪ್ಪುಕಡಲಲಿ
ಅವ ಸ್ಖಲಿಸಿದ ಬೆಳಕ ತುಂಡು
ಬಿದಿಗೆ ಚಂದ್ರಮನ
ಹೊತ್ತುತರುತಿತ್ತು ಕಿರುದೋಣಿ
ಮತ್ತುಲಿಯುತಿತ್ತು ಮೆಲುದನಿ..
ರಾಗಭಾವವದರ ಘಮವೊಂದು
ಅವಳಾಳದಲಿ ಅರಳಹೊರಟೆಲ್ಲ
ಮೊಗ್ಗುಗಳೆದೆ ತುಂಬುತಿತ್ತು..
ಎಲ್ಲವೂ ಎಲ್ಲವನೂ ಕೊಡುಕೊಳುತಿರುವಂತೆ...
ನಿಧಾನ ಲೋಕ ಹುಣ್ಣಿಮೆಯೆಡೆಗೆ ನಡೆಯುತಿತ್ತು.

Wednesday, July 8, 2015

ಒಳಗಿಲ್ಲೊಂದು ತಳವಿರದ ಬಾವಿ
ಕೊರೆದು ತಣ್ಣನೆ ನಡೆದು ಹೋದವನೇ
ಅಷ್ಟುದ್ದಗಲದ ನೀರ ನಡುವೆಯೂ
ಉಕ್ಕುಕ್ಕಿಸಿ ಜ್ವಾಲೆ ಕುದಿವ ದಾಹ!
ಉರಿಯ ಶಮನಕ್ಕೇನು ಮಾಡಲಿ?

ಬರಲೇನು ಅನ್ನುತ್ತಾ
ಉದ್ವೇಗದ ಬಿರುಗಾಳಿಯ ಹುಟ್ಟುಹಾಕಿ
ಅತ್ತತ್ತ ಸಾಗಿಹೋದವನೇ,
ಕಿತ್ತೆಲ್ಲ ಬಿಸುಡುತಿರುವ ಅದರ
ಶಾಂತಿಗ್ಯಾವ ಮಂತ್ರ ಪಠಿಸಲಿ?

ಅಳಬಾರದು ಅನುತಾ
ಭೋರ್ಗರೆವ ಕಡಲ ಬಯಲಸೀಮೆಯ ಕಣ್ಣಿಗಿಳಿಸಿ
ಪ್ರೀತಿಯ ಸಂಕಟ ಬಿತ್ತಿಹೋದವನೇ,
ಒತ್ತರಿಸಿ ಬರುತಾ ಸಭ್ಯತೆಯದೆಲ್ಲ
ಪರಿಧಿ-ಮಿತಿ ಅಳಿಸುತಿರುವ ಉಬ್ಬರಕ್ಯಾವ ತಡೆ ತರಲಿ?

Tuesday, July 7, 2015

ಆಗೆಲ್ಲ ಚಿಕ್ಕದಿತ್ತು ಜಗತ್ತು
ನೀ ಕೇಳಿಸುವಷ್ಟು ನಾ ಬೆಳೆದಿರದ ಹೊತ್ತು.

ಕರಿಬಂಡೆ; ಮತ್ತಾಗೆಲ್ಲ ಹೀಗಲ್ಲ, ಬಿರುಮಳೆ.
ಪಾಚಿ ಮತ್ತು ಹೂವಷ್ಟು ಮಿದು ಹೆಜ್ಜೆ.
ಬಿಡದೆ ಸರಸರ ಹತ್ತಿಳಿಯುತಾ
ಜಾರಿ, ಸಾವರಿಸಿ, ಬೀಳದೆ ತುದಿಗೇರಿ
ಮತ್ತಿಳಿದು ಸಂಜೆಗೆ ಮನೆಹೊಗುವಾಗೆಲ್ಲ
ಕ್ಷಣವೊಂದೊಂದೂ ನಾ ನನ್ನೆದುರೇ ಇರುತಿದ್ದೆ.

ಅಜ್ಜನದೊಂದು ಅಲ್ಲದ್ದೊಂದು ಗದ್ದೆಯೆರಡು,
ಸಪೂರ ಹುಣಿಯೊಂದು ನಡು.
ಮತ್ತಾಗೆಲ್ಲ ಹೀಗಲ್ಲ, ಬಿಡದ ಆಟಿಯ ಮಳೆ
ಉಕ್ಕಿ ಹರಿವ ನೀರು ಅತ್ತಿಂದಿತ್ತ ಇತ್ತಿಂದತ್ತ
ಹವಾಯಿ ಚಪ್ಪಲ ಇನ್ನೂ ಎಳೆಗಾಲು
ಆಯ ತಪ್ಪದೆ ಸಂಭಾಳಿಸಿಕೊಂಡು ದಾಟಿ
ಹೋಗುತಾ ಬರುತಾ ಗಳಿಗೆಯೂ ಬಿಡದಂತೆ
ನಾ ನನ್ನೆದುರೇ ಇರುತಿದ್ದೆ.

ಮರ ಹತ್ತುತಾ, ಬಿದ್ದಳುತಾ,
ಹೊಂಡ ಹಾರುತಾ, ಕೊಚ್ಚೆಕೆಸರಾಗುತಾ,
ಬಾವಿಯಿಣುಕುತಾ, ಬೆಚ್ಚಿ ಕಣ್ಮುಚ್ಚುತಾ,
ಭೋರ್ಗರೆವ ನೆರೆಗೆ ಮೆಲ್ಲ ಕಾಲಿಕ್ಕಿ
ರಭಸ ಚಪ್ಪರಿಸುತಾ,
ಸೆಳೆವಿನ ತೋಡಿಗಿಳಿದು ಎಳೆವ ಹರಿವ
ಹಿಂದೆಳೆಯುತಾ
ಹೀಗೆ ಎಷ್ಟೆಷ್ಟೋ ನೆನಪಾಗುತವೆ.
ನಾ ಕಣ್ಮರೆಯಾದದ್ದು
ನನ್ನೇ ನಾ ಹುಡುಕಿದ್ದೂ
ಊಹೂಂ... ಒಮ್ಮೆಯೂ ಇಲ್ಲ.

ಈಗ ಜಗತ್ತು ದೊಡ್ಡದು.
ನೀ ಕೇಳಿಸುತ್ತಲೇ
ಎಟುಕದಿರುವಷ್ಟು ಪರಿಮಿತಿಯದ್ದು.

ಈಗೆಲ್ಲ ಹಾಗಿಲ್ಲ; ಇದ್ದರಿತ್ತು,
ಇಲ್ಲದಿರೆ ಆಟಿಯಲೂ ಮಳೆಗೆ ನೆರೆಯ ಜತೆಯಿಲ್ಲ.
ಸ್ಪಷ್ಟ ಹಾದಿ, ಸುದೃಢ ಪಾದ
ಸುಮ್ಮಸುಮ್ಮನೆ ಬೀಳುವ ಭಯ!
ನಿನ್ನ ಕಣ್ಣಲಿ, ನಗೆಯಲಿ, ಶೂನ್ಯದಾಳದಲಿ
ಮಾತಲಿ, ಪದದಲಿ, ಅಡಕವುಳಿದುದರಲಿ
ಬರುವಲಿ, ಇರುವಲಿ, ಇಲ್ಲಿಲ್ಲದಿರುವಲಿ
ವಿರಹದಲಿ, ಅಳುವಲಿ, ಆಸೆಯುತ್ಕಟತೆಯಲಿ
ಸತ್ಯದಲಿ, ಸುಳ್ಳಲಿ, ಆಣೆಪ್ರಮಾಣದಲಿ
ಹೀಗೆ ಎಲ್ಲೆಲ್ಲೂ
ಸಂಭಾಳಿಸುವ ನನ್ನ ಹುಡುಕುತ್ತೇನೆ.
ಸಿಗದೇ ಹೋದಾಗ ಮತ್ತೆ
ರಾತ್ರಿಯಾಗುತ್ತದೆ
ನನ್ನ ಚೆಹರೆಗಳ ಅವಷ್ಟೂ ಕತೆ ಹೇಳುತ್ತದೆ
ಎಲ್ಲ ಗುರುತಿಟ್ಟುಕೊಂಡು
ಮತ್ತೆ ಹುಡುಕಾಟಕೆ ಹಗಲ ಕಾಯುತ್ತೇನೆ.

Saturday, July 4, 2015

ಒಂದಷ್ಟು ನೀರು; ಆಳ ಹೆಚ್ಚಿಲ್ಲ.
ತಾವರೆಯೆಲೆಯಷ್ಟೇ; ಅರಳಿಲ್ಲ.
ಜಾರುಮೈಯ್ಯ ದುಂಡು ಬಂಡೆ; ಪಾಚಿಗಟ್ಟಿಲ್ಲ.
ಕರೆದವೋ ಇಲ್ಲವೋ
ಒಂದೇ ಸಮ ಓಗೊಟ್ಟಿದ್ದೇನೆ.
ಎಲ್ಲ ಮುಟ್ಟಿಮುಟ್ಟಿ ಅಪ್ಪಿದ ಅಂಗಾಲಿನ ಬದುಕಿಗೆ
ಜಾರುವ, ನೀರಿಗೆ ಬೀಳುವ,
ತೋಯುವ, ಮತ್ತೆಲ್ಲ ಮರೆಯುವಾಸೆ..

ಒಂದಷ್ಟು ಕಾರ್ಮೋಡ; ಮಳೆಗಾಲವಲ್ಲ.
ಆಗಸದಲಷ್ಟು ಪಚ್ಚೆಹುಲ್ಲು; ಮರದೊಳಗೆ ಹಸಿರಿಲ್ಲ.
ನೆಲದಗಲಕೂ ಅದೇ ಪಚ್ಚೆ; ಜಿಂಕೆ ಮೇಯುತಿಲ್ಲ.
ಒಂಟಿಗಾಲಿನ ಜಿಗಿತಕೆ
ಮುಗಿಲ ಮುಟ್ಟುವ,
ಬಣ್ಣವಿರದ ಮರದಮ್ಮನೆದೆಗಿಣುಕುವ,
ಸುಳ್ಳು ಸುಳ್ಳೇ ಮೋಡಕೆ ಮರುಳಾಗಿ
ಬಾನ ತುಂಬೆಲ್ಲ ಗರಿಮುಚ್ಚಿ ಹಾರಿದ
ನಿರ್ವರ್ಣ ಆಸೆಗಳ
 ಮುಟ್ಟಿ ಮುದ್ದಿಸುವಾಸೆ.ಕಾಯುವುದಿಲ್ಲ
ನವಿಲಿಗೂ ಬಣ್ಣ ಬಂದೀತೆಂದು
ಹಸಿರಿಗೂ ಮರ ಸಿಕ್ಕೀತೆಂದು
ತಾವರೆಯರಳೀತೆಂದು ಮತ್ತೆ
ಮಳೆಯೂ ಆದೀತೆಂದು.
ಒಂಟಿಕಾಲಲಿ ಎಕ್ಕರಿಸುವ ನಿಲುವು ಮಾತ್ರ
ಕಾಯುತ್ತಿದೆ ಮತ್ತು ಕಾಯುತ್ತದೆ
ಎಂದೋ ಒಮ್ಮೆ ಚಿತ್ರವಾದರೂ
ನಿನ್ನವರೆಗೆ ತಲುಪಿಸೀತು.


Thursday, July 2, 2015

ಹೋಗು ಹೋಗೋ...

ಏ ಹೋಗು ಹೋಗೋ
ನಿಧಾನಿಸಿ, ಯೋಚಿಸಿ
ಉಸಿರುಗಟ್ಟುವಷ್ಟು ಅಳು ಹರಳುಗಟ್ಟಿಸಿ
ಮತ್ತಷ್ಟೇ ಪೂರ್ವಿಕಲ್ಯಾಣಿ ಹಾಡಬೇಕಂತೆ.
ಗೊತ್ತು ನಿನಗೆ
ನಿಧಾನಿಸಿದರೆ ಇಲ್ಲೊಂದು ಸಾವಾಗುವುದು
ಒಂದು ಕೋಪದ್ದೂ ಮತ್ತೊಂದು ಸಾಸುವೆಯಷ್ಟು ಧೈರ್ಯದ್ದೂ .
ಕತ್ತಲಲಿರಿಸಿ ಮೆತ್ತಗಾಗಿಸುವುದು, ಬೆಚ್ಚಿಸಿ ಚುಚ್ಚುವುದು
ಹೀರಿ ಹೊರಗೆಳೆದು ಸತ್ವ ಬರಿದಾಗಿಸುವುದು
ನಿನದೂ, ಆ ಕೊಂಡಿಯದೂ ಜಾಯಮಾನ..
ಒಳಗುಳಿವುದಾಗದಂತೆ ಸುಮ್ಮನೆ
ಕದ ಮೊದಲು ಮೆಲ್ಲ,
ಮತ್ತಷ್ಟು ಗುಲ್ಲು ಮಾಡಿಯೇ ತಟ್ಟಿದ್ದೆ.
ಕದವೋ ಕಾದ ಕಾವಲಿಯಂತೆ
ಮರುಭೂಮಿಯ ಮರಳಂತೆ
ಚಾತಕದಂತೆ
ಹನಿಯೊಂದು ಸಾವ ಸಾಯಿಸುವ ಅಮೃತದ್ದೇನೋ ಎಂಬಂತೆ
ಯಾರು ಎತ್ತ ಎನ್ನದೆ ಊರಗಲ ತೆರಕೊಂಡಿದೆ.
ನಿನಗೋ ಒಳಗನು ಪರೀಕ್ಷಿಸುವ,
ಕೆದಕಿ ಕಣಕಣವನೂ ಒಡೆದು ಸೂಕ್ಷ್ಮದಾಳಕ್ಕೆ,
ಬಣ್ಣ, ವಾಸನೆ, ರುಚಿ ನೋಡುವ
ಎಲ್ಲ ಕೂಡಿ, ಕಳೆದು, ಭಾಗಿಸಿ, ಹರಿದು, ಹಂಚಿ
ಒಂದಷ್ಟು ಪಾತ್ರಗಳಲಿ,
ಕತೆ ಹೆಣೆವ, ಓದಿಹೇಳಿ
ಮತ್ತಿನ್ನೊಂದಷ್ಟು ಮಂತ್ರಮುಗ್ಧ
ಪಾಪಗಳ, ಪಾಪಿಗಳ ಸೆಳೆವ ಚಪಲ..
ಹೋಗೋ.. ಇಲ್ಲಾರೂ ಪಾಸಾಗಲಿಲ್ಲ
ಅಸಲು ನಿನಗುತ್ತರಿಸಲೇ ಇಲ್ಲ.
ಇಲ್ಲಾರೂ ಒಡೆಯುವುದೂ ಇಲ್ಲ
ಕೆದಕುವುದು ಬಿಡು,
ಅಸಲು ನೀ ಮುಟ್ಟುವುದೂ ಆಗಿಲ್ಲ.
ಕತೆಯಾಗಿಸುವುದು ಬಿಡು
ಒಂದಕ್ಷರಕೂ ಇಲ್ಲಾರನೂ ಎಳೆತರುವುದಾಗಿಲ್ಲ.
ಹೋಗು ಹೋಗೋ..
ಕದವಂದು ತೆರೆದದ್ದು
ಇಂದೂ ಹಾಗೇ ಇದೆ.
ಮುಂಚೆಯೂ ಬದುಕೆಂಬುದಿತ್ತು,
ನಂತರವೂ ಬದುಕಿರುವುದು.
ಕನಿಷ್ಠ ಇಲ್ಲದನು ಬಾಡಿಸುವ ಸುಳ್ಳಿನ ಕಣ್ಕಟ್ಟಿಲ್ಲ
ಸುಳ್ಳು ಬೇಟೆಯಾಡಿದ ಗಾಯದ ನಿಟ್ಟುಸಿರಿಲ್ಲ.
ಇಲ್ಲಾರ ನೋವನೂ ಗೇಲಿಯಾಗಿಸಿಲ್ಲ,
ಯಾರ ಒಲವನೂ ಆಟಿಕೆಯಾಗಿಸಿಲ್ಲ.
ಹೋಗು ಹೋಗೋ ನೋವೇ,
ಜೋಳಿಗೆಯಲಿ ನಿನದು ಸ್ವರ್ಗಸುಖವಿದ್ದರೂ
ನಿನ್ನ ಮೋಜಿಗೆ ಇಲ್ಲಾರೂ ಕುಣಿವವರಿಲ್ಲ.
ನೀ ಪ್ರೀತಿಯ ಜೊತೆ ಬರಲಿಲ್ಲ,
ಇಲ್ಲಾರೂ ನಿನನುಳಿಸಿಕೊಳುವವರಿಲ್ಲ.ಹಾರಿ ಚಿಂವ್ ಎನುತ ಕಸಕಡ್ಡಿ ಹೆಕ್ಕಿದ್ದು
"ಅಯ್ಯೋ ಹೆಚ್ಚು ಹೊತ್ತಿಲ್ಲ; ತತ್ತಿಯ ಕಾಯಿಸುವಂತಿಲ್ಲ.."
ಗ್ರಾಸ  ಸಿಗದೆ ಬರೀ ಕಸವಾಯ್ದು ತರುತಾ
ಮೈಗಿಂತ ಭಾರ ಒಮ್ಮೊಮ್ಮೆ
ಸತ್ತು ಇಲ್ಲವಾದಂತೆ ಹಗುರ ಒಮ್ಮೊಮ್ಮೆ...
ತಂದು ಒಗ್ಗೂಡಿಸಿದ್ದು, ಗೂಡಾಗಿಸಿದ್ದು
ಕಾವಿತ್ತು, ತಿನಿಸಿತ್ತು, ರೆಕ್ಕೆಗೆ ಜೀವವಿತ್ತು
ಕಾಲಿಗೆ ಧೈರ್ಯವಿತ್ತು, ಬಿದ್ದಾಗ ರೋಧಿಸಿ
ಮೊದಲ ಹಾರಿಗೆ ಕುಪ್ಪಳಿಸಿದ್ದು,
ಮತ್ತೆಲ್ಲ ಹಾರಿಯೇ ಹೋದದ್ದು
ಯಾವುದೂ ಸ್ಪಷ್ಟ ಕಣ್ಮುಂದಿಲ್ಲ.
ಖಾಲಿಗೂಡು ನೇತಾಡಿ ಮಳೆಗಾಳಿಗುದುರಿದ್ದು ಬಿಟ್ಟು..
ಈಗೀಗ ಹೆಚ್ಚು ನೆನಪುಳಿವುದಿಲ್ಲ.

ಹಸಿವಿದೆ ಹೊಟ್ಟೆಯುದ್ದಗಲ ಅದೂ ಹಸಿಹಸಿ
ಹಲ್ಲಿಲ್ಲ; ಕಣ್ಮುಂದೆ ಕಡಲೆ ರಾಶಿರಾಶಿ
ಉಮ್ಮಳಿಸುವ ಭಾವನೆರೆ
ಒಳಗಬ್ಬರಿಸುವ ಕಡಲು
ಕಣ್ಣೀರ ಚೀಲದಲಿ ಬರ.
ಒಸರದು ಹನಿಯೊಂದೂ.
ಕಣ್ಣ ನೆಲದೊಡಲು ಬರಿದು.
ಮನಸಿಗೀಗ ವಯಸಾಯ್ತು.

ಕಣ್ಣ ಕಾಮನಬಿಲ್ಲು ಕ್ಷಣ ಹೊತ್ತಷ್ಟೇ
ಬಣ್ಣ ಬಿಡಿಸಿಬಿಡಿಸಿ ತೋರಿದ್ದು.
ಬೆನ್ನಲೇ ಬದುಕು ಬಿಸಿಲಾಗಿ
ಮೋಡವೂ ಮರೆ, ಹನಿಯೊಡೆದದ್ದೂ ಮರೆ.
ಹೊತ್ತೊಯ್ದ ಗಾಳಿಗೆ ಬಣ್ಣ ವಾಸನೆ ರುಚಿ ಹೆಸರುಗಳಿರಲಿಲ್ಲ,
ಈಗ ಅವನಿಲ್ಲ.
ಹುಡುಕುವುದೆಲ್ಲಿ, ತಿರುಗಿ ಕೇಳುವುದೆಲ್ಲಿ?
ನೆನಪು ಖಾಲಿ ಡಬ್ಬ
ಬರಿದೇ ಸದ್ದು ಮಾಡುತಿದೆ,
ರಾತ್ರಿಗಳಲಿ ನಿದ್ದೆಯೂ ಇಲ್ಲ.

ನೋವು ಥೇಟ್ ದೇವನ ಹಾಗೆ.
ಅರ್ಥಾನರ್ಥಕೆಟುಕುವುದಿಲ್ಲ, ಅರ್ಥವಿಲ್ಲದ್ದಲ್ಲ.
ಬೆರಳ ತುದಿಗಂಟಿದ್ದು ಅಷ್ಟೇ ಅಷ್ಟಲೂ
ಮೈದುಂಬಿ ತುಳುಕಿಸುವಷ್ಟು ಸಮೃದ್ಧಿ!.
ಅಳತೆಗೆಟುಕುವುದಿಲ್ಲ,
ನಗುವ ಲೋಕದ ಕೈದುಂಬುವಷ್ಟೂ ಇಲ್ಲ.

ಇಲ್ಲಗಳಲಿ ಮತ್ತು ಇದ್ದು ಇಲ್ಲವಾದವುಗಳಲಿ ಬಿಟ್ಟು
ನೋವು ಇನ್ನೆಲ್ಲೂ ಇಲ್ಲ.
ನನ್ನಲ್ಲಿಲ್ಲದ್ದು, ಇಲ್ಲವಾದುದು ನಿನಗೆಂತು ತೋರಲಿ ಹೇಳು?
ಕ್ಷಮಿಸು ಗೆಳತಿ,
ನೋವ ಬರೆವುದಾಗಲಿಲ್ಲ.
ಬರೆದಲ್ಲಿ ಅಲ್ಲಲ್ಲಿ ಕಣ್ಣುಮಿಟುಕಿಸಿ
ಮಿಂಚುಹುಳದ ವಿಸ್ಮಯದಂತೆ
ನಿನ್ನೆದುರು ಸುಳಿದುಹೋಗಿಲ್ಲದಿದ್ದರೆ
ನನಗಿನ್ನೂ ನೋವಾಗಿಯೇ ಇಲ್ಲ.