Saturday, October 31, 2015

ಇದೆಂಥ ಪ್ರೀತಿ ಹೇಳು
ಮೂರ್ಲೋಕದೆಲ್ಲ ವ್ಯವಹಾರದ ಕೊನೆಗೆ
ತೀರದುಳಿದ ಒಂದೆರಡೇ ಎರಡು ಗಳಿಗೆ
ಕಳ್ಳಹೆಜ್ಜೆಯಲಿ ನೀನೊಳಗಡಿಯಿಕ್ಕುವಾಗ
ಸುಳ್ಳು ಹೊತ್ತ ಧಾವಂತದ ಆ ಕಣ್ಣು,
ಮಣ್ಣು ಮೆತ್ತಿದ ಕಾಲ ಆ ಹೆಬ್ಬೆಟ್ಟು
ನೋಡುತಾ ಸಹಸ್ರಾಕ್ಷವಾಗಿಬಿಡುವ ಮನಸಿಗೆ
ಮತ್ತೆಮತ್ತೆ ಅವೆರಡನೇ ಮುತ್ತಿಕ್ಕುವ ಕನಸು!

ಇದೆಂಥ ಪ್ರೀತಿ ಹೇಳು
ಮನೆಯ ಗೋಡೆ-ಕಿಟಕಿ-ಬಾಗಿಲ ನಡುವೆ
ಹೊಟ್ಟೆಪಾಡಿನ ಆತುರ-ಕಾತುರದ ಹೆಜ್ಜೆ ಜೊತೆಜೊತೆಗೆ
ನಡೆದುಬರುವ ನೆರಳೇ ಆದ ನಿನ್ನ ಯೋಚನೆ
ಒಮ್ಮೊಮ್ಮೆ ನಸುನಗೆಯ ಕಚಗುಳಿ,
ಒಮ್ಮೊಮ್ಮೆ ಉಸಿರುಗಟ್ಟಿಸುವ ಬಿಗುಮುಷ್ಟಿಯದಕೆ
ಪ್ರತಿತುತ್ತಲೂ ನಿನಗೊಂದು ಅಮೂರ್ತ ಪಾಲೆತ್ತಿಡುವ ತುರ್ತು;
ನೀನುಣ್ಣದೆ ಅದು ಹಳಸಿಹೋದ ದರ್ದು....

ಇದೆಂಥ ಪ್ರೀತಿ ಹೇಳು
ನಿನ್ನೆದೆ ಹರವಿನ ವಿಸ್ತಾರ ಹೇಳುವ ನಿನ್ನಕ್ಷರದೀಪ
ಕುಣಿಕುಣಿದೊಮ್ಮೆ, ಸ್ಥಿರ ನಿಂತೊಮ್ಮೆ
ಪ್ರಕಟವಾಗುವ ಬಿಸಿಬೆಚ್ಚನ್ನ ನಿಲುವಲಿ
ನನ್ನ ಛಾಯೆಯೊಮ್ಮೆಯಾದರೂ ಮಿಂಚುವ
ಗುರಿಯೆಡೆಗಿನ ನನ್ನ ನಡೆಗೆ,
ಆ ಭಾವಧಾರೆಯಡಿ ಇಷ್ಟೇ ಇಷ್ಟಾದರೂ ತೋಯ್ದು,
ಬರೆವ ಬೆರಳ ಲಾಸ್ಯಕೊಮ್ಮೆ ಲಯವಾಗುವ ಆಸೆ.

ಇದೆಂಥ ಪ್ರೀತಿ ಹೇಳು
ಸಖ್ಯ ನಿನದು, ಅದರಲಿ ಸೌಖ್ಯ ನನದು
ವಿರಹ ನಿನದು, ಅದರಲಿ ಹೊಳೆವುದು ನಾನು
ಮಾತು ನಿನದು, ಅದರಲಿ ಹುಡುಕುವುದು ನನನೇ ನಾನು
ಕಣಕಣವೂ ಆವರಿಸಿರುವ ನಿನ್ನ ಹುಚ್ಚು ಇದಕೆ
ಮುಂದೊಮ್ಮೆ ಹುಟ್ಟುತಾ
ನಿನ್ನ ಕರುಳಕುಡಿಯೋ, ಹೆತ್ತ ಮಡಿಲೋ, ಒಡಹುಟ್ಟೋ
ಒಟ್ಟಾರೆ ಸದಾ ನಿನನಾವರಿಸುವ ಬಂಧವಾಗುವ ಗುಂಗು! 
ಬಯಲಾಗುವ ಬಯಕೆಯ ಮೈತುಂಬ
ಹುಸಿಸೋಗಿನ ಹಸಿಹುಣ್ಣು!
ಗೋಡೆಯೆಬ್ಬಿಸುವ ಕಾಣದ ಕೈತುಂಬ
ಬಲುಚುರುಕಿನ ಎಚ್ಚರಗಣ್ಣು!

ಸುಲಭವಲ್ಲ ಬಯಲಾಗುವುದು!
ಸಿಗದೆ ಬಿಡುಗಣ್ಣ ಹುಡುಕಾಟಕೆ,
ದಕ್ಕಿದರೆ ಕಡುನಿದ್ದೆಗೂ ದಕ್ಕೀತು.
ಗೋಡೆಗಳ ಬಲುದಟ್ಟ ನೆರಳಲಿ
ಕಾಣ್ಕೆಯೊದಗಲೊಲ್ಲದು;
ಕುರುಡಾಗದೆ ಬೆತ್ತಲಾಗುವುದಾಗದು.

ಕ್ಷಣವೊಂದು ಸಾಕು,
ಭಾವತುಣುಕೊಂದು ಸಾಕು,
ಗಾವುದದಾಚಿನ ಪುಟ್ಟ ಪಿಸುಮಾತು ಸಾಕು
ಬಯಲಲೆಬ್ಬಿಸಿಯಾವು ಆಯ-ಆಣೆಕಟ್ಟು
ಬೆತ್ತಲಿಗುಡಿಸಿ ಭಯ-ಸಂಶಯ-ಸಿಟ್ಟು
ತಪಭಂಗ, ಗುರಿಭಂಗ,
ಭರವಸೆಯ ಪ್ರಾಣಭಂಗ!

ಬಯಲಾಗುವ ಬಯಕೆಯೋ ಹುಟ್ಟಾರೋಗಗ್ರಸ್ತ!
ಕುಯ್ದು ಭಾವ
ಹುಯ್ಯಬೇಕು ಜೀವ!
ಹುಡಿ ಮಾಡಿ, ಅರೆದು ನಸೆ ಮಾಡಿ
ನನ್ನತನವ, ಹಚ್ಚಬೇಕು ಲೇಪ.
ಬಯಕೆ ಕಣ್ಬಿಟ್ಟಾಗಲೆದುರಿಗೆ
ಗೋಡೆಯೆಬ್ಬಿಸುವ ಕೈಯ್ಯ ನೂರು ಹಸಿವೆ,
ಬಲಿಯಾಗಬೇಕು ಸ್ವಂತಿಕೆ.

ಅಲ್ಲೊಂದು ಆಗ ಕೊನರೀತು
ಎಲ್ಲ ಬಿಚ್ಚಿಡುವ
ನಿರ್ಭೀತ, ನಿರ್ಲಜ್ಜ, ನಿಸ್ಸಂಶಯ ಶಕ್ತಿ!
ಬಾಗಲೂ ಕಲಿಸಿ
ಎತ್ತಲಾಗದಷ್ಟು ಬಾಗಿಸಿ
ಮತ್ತೆ ತಲೆಯೆತ್ತುವುದನೂ ಕಲಿಸುವ
ಅಪೂರ್ವವೊಂದು ಗುರು ಪ್ರೀತಿ!
ಮತ್ತೆಲ್ಲ ಮರೆಸಿ, ಮರೆಯಾಗಿಸಿ
ಬರೀ ಸೊಗದ ಬೆಳಕಲೇ
ಬದುಕಿಸಿಬಿಡುವ ಅಸೀಮಭಕ್ತಿ!

Saturday, October 10, 2015

ಹಬ್ಬದೆಯೂ ಚಪ್ಪರ
ಜಾಜಿಯರಳೊಂದು ಮೆಲ್ಲ ಮಾತಾಡಿದ ಕಂಪು.
ಬಣ್ಣದ ಸಂತೆಯಿಂದದೆಷ್ಟೋ ದೂರ
ಹಲಬಣ್ಣ ರೆಕ್ಕೆಗೆ ತಾನೇ ತಾನಂಟಿದ ಹೊಳಪು.

ಅದೇ ಬಿಮ್ಮನೆ ಬೆಳಗು
ನಡುವಯಸಿಗೆ ಕಾಲಿಡುವ ನಿಶ್ಶಬ್ದ ಹೊತ್ತು
ಸ್ತಬ್ಧಗಾಳಿ, ಕಂಪು-ರೆಕ್ಕೆಬಡಿತವಂಟಿಸಿಕೊಂಡು
ಮೈಗಡರಿದ್ದು ನಿನ್ನೆಗಳಾವುವೂ ಕಂಡಿರದ ಮತ್ತು!
ಅದೇ ಅಲ್ಲೊಮ್ಮೆ ಇಲ್ಲೊಮ್ಮೆ ಟುವ್ವಿ ಹಕ್ಕಿ
ನಡುನಡುವೆ ಕಾಗೆಯಷ್ಟೆ ಮುರಿದ ಮೌನವೂ
ಭ್ರೂ ಮಧ್ಯೆ ನೇರಳೆಸುಳಿ ಸ್ಪರ್ಶದ ಹಾಗೆ!

ಅದೋ
ಒಂಟಿ ಕಾಂಡದ ಸಿರುಟ ಹೊರಟ ಸೀಬೆ ಮಾಗುತಿದೆ.
ಮೂಲೆಯ ಮುರುಟಿದ ಕರವೀರದಲೊಂದು ಮೊಗ್ಗು!
ಬಾಡಿದ ತುಳಸಿ ತಲೆ ತುಸುವೇ ಎತ್ತಿ ನಿಂತಿದೆ.
ಚಿಗುರು ದಂಡೆಯ ಹಸಿರಲೆಲ್ಲ ಕೆಂಪರಳಿಸುವ ಹಿಗ್ಗು!

ಕರೆದಿರಲಿಲ್ಲ, ನೀನು ಬರುವ ಸುಳಿವಿರಲಿಲ್ಲ.
ಕದ ನೂಕಿದ್ದೇ ಇಲ್ಲಿದ್ದ ಇದ್ದಿಲೆಲ್ಲ ಬಂಗಾರ!
ಪುರುಷನೆಂದು ಪ್ರೀತಿಸಿದ್ದು ಪರುಷವನ್ನೇ?!

ಹರವಾದ ಬಯಲ
ಕಡು ಮೋಡದಡಿಯಲ್ಲಿ
ಗರಿಬಿಚ್ಚಿದ ನವಿಲ ಕಣ್ಣೊಳಗಿನ
ಹೊಳಹಾಗಿದ್ದೇನೆ;
ಕನವರಿಸುತ್ತಲೇ ಹೀಗೆ ಬದುಕಿಬಿಡುವೆ.
ಇನ್ನೊಮ್ಮೆ
ಕೊರಡು ಕೊನರುವ,
ನೀ ಬರುವ ಹೊತ್ತು
ಮತ್ತು ಹಿಂತಿರುಗುವ ಹೊತ್ತು
ಹೀಗೇ ಮುಂದೆ ಹೋಗುತಿರಲಿ...

Tuesday, October 6, 2015

ಸಂಜೆಮಲ್ಲಿಗೆ ಅರಳಿ
ಮುಗಿಲಮಲ್ಲಿಗೆಯುದುರುವ ಹೊತ್ತು,
ಗಾಳಿ ತಂಗಾಳಿಯಾಗಿ
ಬಾನು ಬಣ್ಣದೋಕುಳಿಯಾಡುವ ಹೊತ್ತು,
ನೀನು ಹಾಗೆ ಬಂದು
ಹೀಗೆ ಹೋಗಿಬಿಡುವೆ.

ಹೆಜ್ಜೆಗುರುತಿನ ಜಾಡಲೇ
ಹಣೆಹಚ್ಚಿ ಹೋಗಿಬಂದ ನೋಟ
ಮೆತ್ತಿಕೊಂಡು ಪುಳಕ; ನಲ್ನಗೆಯ ಮಾಟ!
ಜಗ ನನ್ನ ಸುಳ್ಳುಸುಳ್ಳೇ ನಗುವ ಸುಳ್ಳಿಯಂತು.
ಸುಳ್ಳೆಂದೂ ನಗೆಯಾಗಿರುವುದಿಲ್ಲ
ತಿಳಿಹೇಳುವ ಪರಿಯೆಂತು?

ವಿರಹದ ಸವಿಯೊಂದೆಳೆ ಪಾಕದಲದ್ದಿ
ಕತ್ತಲು ಬೊಗಸೆದುಂಬಿ ತಂದ
ರಾತ್ರಿಯಷ್ಟುದ್ದದ ಒಂದೆಳೆ ನಿದ್ದೆ!
ಲೋಕ ಉದ್ದುದ್ದ ನಿದ್ರಿಸುವ ಎಚ್ಚರಿಲ್ಲದವಳಂತು.
ನಿದ್ದೆಯಲೂ ನೀ ಬಲುಸ್ಪಷ್ಟ; ಕಣ್ಣಲ್ಲದಿನ್ನೇನೂ ಮುಚ್ಚಿರುವುದಿಲ್ಲ
ತಿಳಿಹೇಳುವ ಪರಿಯೆಂತು?

ವಿರಸದೊಂದು ಗುಕ್ಕು ಕಹಿಗುಕ್ಕಿದ ಬಿಕ್ಕಳಿಕೆ
ಭಾವದೆಳೆ ಸಿಕ್ಕಿನಲಿ ಹರಿದ ಧಾರೆ!
ಜಗ ನನ್ನ ದುಗುಡವ ಪಾಪಿಚಿರಾಯು ಅಂತು.
ಹನಿಹನಿಯ ವರ್ಣಚಿತ್ತಾರದಲಿ ಬರಿ ನೀನೇ;
ನೀನಿರುವಲ್ಲಿ ಪಾಪವಿರುವುದಿಲ್ಲ;
ತಿಳಿಹೇಳುವ ಪರಿಯೆಂತು?

ಕಿವಿಯ ಲೋಲಾಕು ಗುನುಗಿನಲಿ
ಸೊಟ್ಟ ಹಣೆಬೊಟ್ಟ ಬಳುಕಿನಲಿ
ಕರಗಿದ ಕಣ್ಕಪ್ಪಿನ ನಾಚಿಕೆಯಲಿ
ಕುಣಿವ ಕೆನ್ನೆಕುಳಿ ಕೆಂಪಲಿ
ಸುಮ್ಮನದುರುವ ತುಟಿಯಲಿ
ನೆನಪಿಗೇ ಬೆವರುವ ಹಣೆಯ ಹನಿಯಲಿ
ಮಾರ್ನುಡಿಯುತದೆ ನೀನಂಟಿಸಿಹೋದ
ಸುಖದ ಹೆಜ್ಜೆಯುಲಿ!
ಸುಮ್ಮಸುಮ್ಮನೆ ನಗುತ, ಉದ್ದುದ್ದ ನಿದ್ರಿಸುತ,
ಮತ್ತೆಮತ್ತಳುತ ನಾನದರ ಜೊತೆಗಿರುತೇನೆ.

ನನಗೀಗೀಗ ನೀನಲ್ಲದ್ದೇನೂ ತಿಳಿಯುವುದಿಲ್ಲ.
ಲೋಕ ನನ್ನ ಅಲ್ಲದ್ದರಲಿ ಎಲ್ಲ ಮರೆತ ಹುಚ್ಚಿ ಅಂತು.
ಪ್ರೀತಿಯೆಂದರೆಲ್ಲ ಮರೆವ ಹುಚ್ಚಲ್ಲದೆ ಬೇರೆಯಲ್ಲ
ತಿಳಿಹೇಳುವ ಪರಿಯೆಂತು?

Sunday, October 4, 2015

ಮಾತು ಮೌನವೆರಡೂ ತಲುಪಿಸುತಿದ್ದುದು ನಿನ್ನನೇ.
ಒಮ್ಮೆ ಗಟ್ಟಿಕಟ್ಟೋಣವಾಗಿ ಒಮ್ಮೊಮ್ಮೆ ಒಂಟಿಹಗ್ಗಸೇತು.
ಸರಾಗ ಓಡೋಡಿ ಬರುತಿದ್ದೆ ಬಿಟ್ಟು ಹಗುರ-ಭಾರದ ಪರಿವೆ.
ಒಮ್ಮೆ ಬಹಳಷ್ಟು ಉಟ್ಟು, ಒಮ್ಮೊಮ್ಮೆ ಎಲ್ಲ ಕಳಚಿಟ್ಟು.

ಮಾತಲಿ ಶಬ್ದಾರ್ಥಗಳು ಉಮೆ-ಪರಶಿವರಾಗುತಾ
ನಾವು ಬಾರಿಬಾರಿ ನಾವಾದೆವು ಒಳಗಿಣುಕುತಾ.
ಒಮ್ಮೆ ಹೆದರಿ, ಒಮ್ಮೊಮ್ಮೆ ಗರಿಗೆದರಿ.
ಒಮ್ಮೆ ಒಕ್ಕಣ್ಣಲಿ, ಒಮ್ಮೊಮ್ಮೆ ಮೈಯ್ಯೆಲ್ಲ ಕಣ್ಣಾಗಿ.

ಮೌನದಲಿ ಮೂರ್ತಾಮೂರ್ತವು ಎದೆಗುಡಿ ಹೊಗುತಾ
ಅರಿವಿನ ಹೊಸಿಲಾಚೆ ಕಣ್ಣಾಚಿನ ಚಿತ್ರವಾದೆವು ಭಾಸವಾಗುತಾ.
ಒಮ್ಮೆ ಕಣ್ದೆರೆದು ಒಮ್ಮೊಮ್ಮೆ ಮೈಮರೆತು.
ಒಮ್ಮೆ ನಂಬಿ ತಲೆಬಾಗಿ ಒಮ್ಮೊಮ್ಮೆ ತಲೆದೂಗಿ.

ಹೊತ್ತು ಸವೆಸುವುದೇನೋ ಎಲ್ಲವನೂ!
ಶಿಥಿಲವಾದಂತೆ ಇಂದು ಮಾತು ಮೌನವೆರಡೂ
ಸುಳ್ಳೆನಿಸಿ ಒಮ್ಮೆ ನೀರ್ಗುಳ್ಳೆಯೆನಿಸಿ ಒಮ್ಮೊಮ್ಮೆ
ಹೆಜ್ಜೆ ನಿಂತ ಹಾಗೊಮ್ಮೆ ಹೂತುಹೋದ ಹಾಗೊಮ್ಮೆ.



Saturday, October 3, 2015

ಅಚ್ಚಬಿಳಿ ಹಗಲು ಕಣ್ಕುಕ್ಕಿತಂತೆ
ಕತ್ತಲರಸುತ ನೆಲಕಿಳಿದಿದೆ ನಕ್ಷತ್ರಸಂತೆ!

ತೊಲೆಯ ತೊಟ್ಟಿಲಿಂದ
ಚಂದ್ರತಾರೆ ಉಯ್ಯಾಲೆವರೆಗೆ
ಬೆಳಕಿಟ್ಟೇ ತೂಗಿದಾಕೆ ನನ ತಂಗಿ
ಸೆರಗ ಗಂಟಲಿ ಕತ್ತಲೂ ಒಂದಷ್ಟು
ಬಚ್ಚಿಟ್ಟಿದ್ದಾಳಂತೆ ನುಂಗಿ ನುಂಗಿ !

ತಕ್ಕ ಹೊತ್ತಿದೋ ಅನುತ
ಬಿಚ್ಚಿ ಗಂಟು
ಹರವಿ ಸೆರಗು
ಹಾದಿ ತೋರುತಾಳೆ ನಕ್ಷತ್ರಗಳಿಗೆ
ಅಡಗಿದ್ದ ಕಡುಕತ್ತಲೆಯೆಡೆಗೆ!

ಮಿನುಗುನಗೆಗುಚ್ಚ ತಂದೆದುರಿಡುತಾಳೆ
"ಕಾವಳವೆಲ್ಲೆಡೆಯೂ ಕಳವಳವಲ್ಲ ಕಣೇ..
ಗುಟ್ಟು ನೂರಲಿ ಅಕ್ಕಾ, ಅಡಕದಿಟ ಹೆಕ್ಕಬೇಕು.
ನೋಡದೋ ಕತ್ತಲಲಿತ್ತು ತಾರೆ ಕಂಗಳ ಮಿನುಗು;
ಮತ್ತದರಲಿತ್ತು ಸೆರಗ ಕತ್ತಲೆಯ ನಗು!

ಬಿಡಿಸಿಬಿಡೇ ಗಂಟು.
ಹರವಿಬಿಡೇ ಸೆರಗು.
ಬಿಚ್ಚಿಡೇ ಬಚ್ಚಿಟ್ಟ ಕತ್ತಲು.
ನಿನದರಲೂ ಒಂದಷ್ಟು ಅವು ಮಿನುಗಲಿ
ಒಂದಿಷ್ಟು ಇವು ನಕ್ಕುಬಿಡಲಿ!"