Thursday, January 31, 2013

ವ್ಯೆತ್ಯಾಸ ಹೆಚ್ಚೇನಿಲ್ಲ...


----------------------------------

ಊರ ನಡುವಲೊಂದು ಗುಡಿ,

ಮೂಲೆಯಲೊಂದು ಗುಡಿಸಲು.

ದೀಪ ಉರಿದಿವೆಯಲ್ಲಿ ದೀಪದೆಣ್ಣೆ ನುಂಗಿ

ಇಲ್ಲೂ ಉರಿದಿವೆ ಹೆಣ್ಣ ಕಣ್ಣೀರ ನುಂಗಿ

ವ್ಯೆತ್ಯಾಸ ಹೆಚ್ಚೇನಿಲ್ಲ...



ಅಲ್ಲಿ ಮೊಳಗಿ ಮಾರ್ದನಿಸಿವೆ

ಘಂಟೆಜಾಗಟೆ ಶಂಖನಾದ

ಇಲ್ಲೂ ಮೊಳಗಿದೆ

ನಿತ್ಯ ನಿಶ್ಯಬ್ಧ ರೋದನ.



ಅಲ್ಲಿ ಸಾರಿವೆ ಕಣಕಣವು

ಮುಕ್ತಿಸಾಧನೆಯ ಗುಟ್ಟು

ಇಲ್ಲೂ ಸಾರಿವೆ ಗೋಡೆಬಾಗಿಲು

ಅನುದಿನದ ಹುಟ್ಟುಸಾವು.



ಅಲ್ಲಿ ಅರ್ಪಣೆಯಾಗಿದೆ

ತನ್ನತನ ಭಕ್ತಿಯಡಿಯಾಳಾಗಿ.

ಇಲ್ಲೂ ಅದೇ ಆಗಿದೆ

ಹೊಟ್ಟೆಬುತ್ತಿಯ ತುತ್ತಿಗಾಗಿ.



ಅಲ್ಲಿ ಮೈಮರೆವ ತಾದಾತ್ಮ್ಯ

ನರನಾರಾಯಣ ಕೂಟ

ಇಲ್ಲಿ ಮೈಮರೆತಿದೆ ವಿಕಾರ

ದೇಹಗಳೆರಡರ ಮೇಳ.



ಅಲ್ಲಿ ಕಾಣಿಕೆ ಹುಂಡಿಗೆ..

ಕೆರೆಯ ನೀರನು ಕೆರೆಗೆ ಚೆಲ್ಲಿ

ಇಲ್ಲೂ ಚೆಲ್ಲಿದೆ ಕಾಸು

ಉಬ್ಬುತಗ್ಗಿಗಷ್ಟು ಬೆಲೆ ಕಟ್ಟಿ.



ಹೊರಹೊರಟ ಮನಸಲ್ಲಿ ಹಗುರ

ತುಮುಲ ಕಳೆದು ಶಾಂತಿ ಹೊತ್ತು.

ಇಲ್ಲೂ ಹಗುರಾಗಿದೆ, ಕೊಟ್ಟುಬಿಟ್ಟು

ಅಷ್ಟೆಷ್ಟೋ ದುಡ್ದ ಜೊತೆಗೆ ದುಗುಡ.



ಹಗುರಾಗಿಸುವ ಚೈತನ್ಯಕಲ್ಲಿ ಆರತಿ

ಇಲ್ಲದೇ ಚೇತನವಿದೆ, ಆರತಿಯಷ್ಟೆ ಇಲ್ಲ.

ಅಲ್ಲಿಯದು ನಿರ್ಜೀವ ದೈವಬಿಂಬವಾದರೆ,

ಇದು ಜೀವಂತಿಕೆ ನೇಣಿಗೇರೋ ಗಲ್ಲುಗಂಬ.











ಜಾರಿಹೋದವುಗಳು.


-----------------

ಹೇಗೆ ಸಾಗಿ ಹೋದವೋ

ಮುಷ್ಟಿಯೊಳಗಿನ ಗಾಳಿಯಂತೆ

ಆ ದಿನಗಳು...



ಚೆಲುವೆನಿಸಿದ್ದವು ಆದರೆ,

ಮನತಾಕದೆ, ಪಡಿಮೂಡದೆ, ಸುಮ್ಮನೆ

ಕಣ್ಣಿಗಷ್ಟೆ ಎಟುಕಿದ ದೃಶ್ಯದಂತೆ...



ಹಿತವೆನಿಸಿದ್ದವು ಆದರೆ,

ಸ್ಪರ್ಶವಾಗದ, ಸ್ಪಂದನೆಗೊದಗದ, ಬರೀ

ಅನಿಸಿಕೆಗಷ್ಟೇ ಗ್ರಾಸ ಭಾವದಂತೆ...



ನೋವೆನಿಸಿದ್ದವು ಆದರೆ,

ಒತ್ತಡಕೊದಗದ, ನೀರಾಗದ, ತಟ್ಟನೆ

ಗಾಳಿಹೊತ್ತೊಯ್ದ ಅತಿಥಿ ಕಾರ್ಮೋಡದಂತೆ....



ಭಯವೆನಿಸಿದ್ದವು ಆದರೆ,

ಹೆಡೆಯೆತ್ತದೆ, ಬುಸುಗುಟ್ಟದೆ ಮೆತ್ತಗೆ

ಅತ್ತಸರಿದು ಹೋದ ಹಾವಂತೆ...



ಎಣಿಕೆಗೆ ಸಿಗದ ಗಳಿಕೆ

ಕೈಸೋರಿ ಹೋದ ಲೆಕ್ಕ

ಹೆದರಿಕೆಗೆ ಹುಟ್ಟಿದ ಬೆವರು

ಬೆಳಕಲುರಿಯುವ ಸೊಡರಿನಂತೆ

ಅರ್ಥತಾರದ ನಿರರ್ಥಕತೆ ಮೀರದ

ಜಾರಿಹೋದ ಮತ್ತೆ ಬಾರದ ದಿನಗಳು.









Wednesday, January 30, 2013

ಬರೆದೂ ಬರೆದಂತನಿಸದೆ....


----------------------

ಒಣಒಣ ಬಣಬಣ ಹಾಳೆ,

ಒಳಗಿನ ನೂರರಲೊಂದೂ ಹೊರಬರದು.

ತಡೆಗೋಡೆ ಕೆಡವುವ ಪರಿಯೆಂತೋ,

ಕೈಹಿಡಿದೆಳೆತರುವ ತಂತು ಎಲ್ಲೋ,



ಇಬ್ಬನಿಯಿಂದ ಮಸಣದ ಗೋರಿವರೆಗೆ,

ಎಲ್ಲ ಬರೀ ಅಕ್ಷರಗಳಾಗಿ ಭ್ರಮನಿರಸನ.

ನೋಡಿದ್ದು, ಕೇಳಿದ್ದು, ಅನುಭವಿಸಿದ್ದು,

ಭಾವಗಳಾಗುತ್ತಿಲ್ಲ, ಬಣ್ಣ ತುಂಬುತಿಲ್ಲ.



ಲೇಖನಿಯಳುತಿದೆ ಜೀವ ಬಸಿದು

ತಾ ಚೆಲ್ಲಿದ ಹನಿಹನಿ ವ್ಯರ್ಥವಾದುದಕೆ.

ಹಾಳೆಯೂ ಅಳುತಿದೆ ತುಂಬಿದೊಡಲು

ಬರೀ ದಾಕ್ಷಿಣ್ಯಕ್ಕೆ ಬಸುರಾದುದಕೆ.



ಕೊಡವಿ ಕಿತ್ತೆಸೆವ ಕ್ಷಣಿಕ ಹತಾಶೆ

ಖಾಲಿಯಾಗಲಾಗದ ಭಾವಬಿಂದಿಗೆ

ತುಳುಕಿ ಹೊರಚೆಲ್ಲಿದ ಹನಿಹನಿ

ಅಳತೆಗೆ ಸಿಗದುಳಿದ ಬರೀ ನಿರಾಸೆ.



ತಲುಪುವ ಯತ್ನವಿರದ ಸಂವೇದನೆ,

ಬಗೆಹರಿಸುವ ಗುರಿಯಿರದ ಸ್ಪಂದನೆ,

ಆಳಕಿಳಿಯದ ನೋಟ ಮತ್ತದರ ನಿವೇದನೆ,

ಸಂವಹನ ಸಾಧಿಸದ ಮೂಕ ನಿರೂಪಣೆಯಷ್ಟೇ.



ಕೈಚೆಲ್ಲಿ ಕೂತಿದ್ದ ಸಾಮರ್ಥ್ಯ

ಹುಡುಕ ಹೊರಟಿದೆ ಸಾರ್ಥಕ್ಯ

ಬರೆವ ಕರಗಳಿಗಷ್ಟು ಸ್ವಾತಂತ್ರ್ಯ

ಬರೆಸುವ ಮನಕೊಂದಷ್ಟು ಸತ್ಯ.





ನೀ ಮಾಯೆಯೊಳಗೋ...


--------------

ನಿನ್ನೆಗಳೆದುರು ನಿಂತು ನನ್ನ ಕಂಡೆ

ನಾನಲ್ಲವೆನಿಸಿತು

ನಾಳೆಗಳ ಒಳಹೊಕ್ಕು ಕಲ್ಪಿಸಿ ಕಂಡೆ

ನಾನಲ್ಲವೆನಿಸಿತು

ಇಂದಿನೊಳಗಿಂದಲೂ ಅದೇ ಅನಿಸಿದ್ದು..

ಹಾಗಾದರೆ ನಾ ಬಲ್ಲ ನಾನೆಲ್ಲಿ?



ಮುಂಜಾವಿನ ಭರವಸೆಯಲಿ ಆಸೆಯಾಗಿ,

ನಡುದಿನದ ಅನುಭವದಲಿ ಕಲಿಕೆಯಾಗಿ,

ಸಂಜೆಯ ಸಾಂತ್ವನದಲಿ ಶಾಂತಿಯಾಗಿ,

ಮುಳುಗೆದ್ದದ್ದೇ ಬಂತು, ಆದರಲ್ಲಿ ನಾನೆಲ್ಲಿ?



ಸತ್ಯದ ಬೆನ್ನತ್ತಿ ಸುಳ್ಳುಗಳಿಂದ,

ನಿಷ್ಠೆಯ ಬೆನ್ನತ್ತಿ ಆಮಿಷಗಳಿಂದ,

ಸಹಜತೆಯ ಬೆನ್ನತ್ತಿ ಮುಖವಾಡಗಳಿಂದ,

ಓಡಿ ಸಾಗಿದ್ದೇ ಬಂತು, ಆದರಿಲ್ಲಿ ನಾನೆಲ್ಲಿ?



ಹುಡುಕಾಟವೇ ಕಳಕೊಳುವ ಪ್ರಕ್ರಿಯೆಯಾಗಿ

ಸಿಕ್ಕು ಬಿಡಿಸುತ ಮತ್ತಷ್ಟು ಗೋಜಲಾಗಿ,

ನಿಂತನೆಲೆಯೂ ಕದ್ದದ್ದೆನಿಸಿ, ಅಯೋಮಯ ದೃಷ್ಟಿ..

ನನ್ನ ತೋರುವ ಕನ್ನಡಿಯೆ ಇಲ್ಲ, ನಿಮ್ಮನೆಂತು ಕಾಣಲಿ?



Monday, January 28, 2013

ಮಾಡಿದ್ದುಣ್ಣೋ.....


---------------------

ನೀ ಆಟಿಕೆಯಾಗಿಸಿದೆ, ಅದು ಆಟವಾಯಿತು

ಸರಕಾಗಿಸಿದೆ, ಅದು ಮಾರಾಟಕ್ಕೊದಗಿತು

ಅಕ್ಷರವಾಗಿಸಿದೆ, ಅದು ಹಾಳೆಯಷ್ಟೆ ತುಂಬಿತು

ಶಬ್ಧವಾಗಿಸಿದೆ, ಅದು ಬರೀ ಸದ್ದಾಗುಳಿಯಿತು

ಸ್ವಪ್ನವಾಗಿಸಿದೆ, ಅದು ಭ್ರಮೆಯಾಗುಳಿಯಿತು

ನೀ ಬೆಂಬತ್ತಿದೆ, ಅದು ಮೃಗತೃಷ್ಣೆಯಾಯಿತು.



ಮನಸೇ,

ಎದುರು ಹುಟ್ಟುವುದು ಬೇರೇನಲ್ಲ,

ನಿನದೇ ಕ್ರಿಯೆಗೊಂದು ಪ್ರತಿಕ್ರಿಯೆಯಷ್ಟೇ...

ನೂರಕ್ಕೆ ನೂರು ನಂಬಿಕೆ ಸಾಕಷ್ಟೇ,

ನಂಬಿಕೆಯ ಸಾಕ್ಷಾತ್ಕಾರಕಿನ್ನೇನಲ್ಲ.



ಒಂದೇ ಬಾರಿ,

ನಿಂತಲ್ಲಿ ನಿನ್ನನೇ ನೋಡಬೇಕಿತ್ತು.

ಅದು ನೆರಳಾಗುತಿತ್ತು.

ಅಕ್ಷರಗಳು ಕವನಗಳಾಗಿ,

ಶಬ್ಧಗಳು ಸರಿಗಮವಾಗಿ,

ಸ್ವಪ್ನ ಕೈಗೂಡಬಹುದಿತ್ತು.



ಈಗಾಗದು...

ಈಗಲ್ಲಿರುವುದು ನೀ ಮಾಡಿದ

ಭಾವಾನುವಾದ, ಶಬ್ಧಾನುವಾದಗಳಷ್ಟೆ.

ರೂಪಾಂತರ ಮೂಲಕ್ಕೊಯ್ಯದು,

ಮೂಲ ರೂಪಾಂತರಕ್ಕೊದಗದು.



ಬಿಡು..

ದಾಟಿಸಿ ನುಣುಚಿಕೊಳಲಾಗದು

ನೀ ಬಿತ್ತಿದ್ದೇ ಮರುಕ್ಷಣದ ಫಸಲು

ಆಗದ್ದನಲ್ಲ, ನೀನಾಗಿಸದ್ದ ಜಪಿಸು

ನೀನೊದಗದೆ ಅದು ನಿನಗೊದಗದು.

Friday, January 25, 2013

ಒಂದು ಪಂದ್ಯ, ಒಂದು ಬಹುಮಾನ.


---------------------------

ನಡೆಯಲಿದೆ ಪಂದ್ಯ, ಗಣಪನಲ್ಲ,

ಮೊದಲಿಗಿಲ್ಲಿ ಬಲವೇ ವಂದ್ಯ.



ಸಾಮಾನ್ಯವಲ್ಲ, ಕುಸ್ತಿ- ಕರಾಟೆಯಲ್ಲ,

ವಸ್ತುವಿಷಯವಿನ್ನೂ ಗೋಪ್ಯ, ಬಹಿರಂಗವಾಗಿಲ್ಲ,

ನೋಡಬಂದವರು ಓಡಿಹೋಗಬಾರದಲ್ಲಾ...



ಫಲಕ ತೂಗುಬಿದ್ದಿದೆ- "ಬಲಪ್ರದರ್ಶನ"

ಕೆಳಗೊಂದಷ್ಟು ಹೆಸರಿವೆ, ಹಲವು ಬಣ.

ದಾರಿ ಸೂಚಿತ, ಚಪ್ಪರದಡಿ ಸಿದ್ಧ ಕಣ.



ಪಾರಿವಾಳ-ಗಿಣಿಗಳ ಕಾಲಿಗೆ ಬಿಗಿದು ಹಗ್ಗ

ಹಾರಿಬಿಡಲಾಗಿದೆ, ಅಳತೆಯೊಳಗವು ಕುಣಿದು

ಹಾಡಿದಂತೆ ಕೂಗಿ, ಕಣ್ಮನ ತಣಿಸಬೇಕಿದೆ.



ಅಲಂಕಾರ ಕಮ್ಮಿಯಿಲ್ಲ, ಗೋಡೆಗಷ್ಟು ಸುಣ್ಣ

ಕೃತಕ ಹಸಿರು ಹೂ, ಬಣ್ಣ ವಾಸನೆ ತೀಕ್ಷ್ಣ

ಅತಿಥಿಗಳಿಗೆ ಜಿಂಕೆಚರ್ಮದ ಹಾಸು, ಸುಖಾಸನ.



ಘಂಟೆ ಢಣ್ ಅಂತು, ಕಣ್ಣುಕಿವಿ ನಿಮಿರಿದವು

ತೊಡೆತಟ್ಟಿದ ಕಣ್ಣುಮನದಲಿ ಕ್ರೌರ್ಯದ ಕಾವು

ಮೈಕೈಗೆ ಮೆತ್ತಿದ್ದು ಮಣ್ಣಲ್ಲ, ಕೊಚ್ಚುವ ಕೆಚ್ಚು.



ಕಣದ ನಡುವೊಂದು ಬುಟ್ಟಿ...

ಆಟಿಕೆಗಳು, ಕಂದನದೊಂದು ತೊಟ್ಟಿಲು

ಮೈನರೆದ ಹೊಟ್ಟೆನೋವಿನ ಸಂಗಾತಿ ಚಾಪೆ,

ಕಂಬನಿ ಹೊದ್ದ ಮೊದಲ ಪ್ರೇಮಪತ್ರ,

ಗೆಳತಿಗಾಗಿ ಹೆಣೆದ ಮಲ್ಲಿಗೆ ಮಾಲೆ,

ಮದುಮಕ್ಕಳ ಹಾರ, ಅರಳುತಿರುವ ಗುಲಾಬಿ,

ಬೆವರುವಾಸನೆಯ ಮೊದಲ ಸಂಬಳದ ಲಕೋಟೆ

ಮಧುಚಂದ್ರವ ನೆನಪಿಸಿದ ತುಂಬು ಚಂದ್ರಬಿಂಬ,

ಕಣ್ಣೊರೆಸಿದ ಸಾಂತ್ವನದಾಗರ ಅಮ್ಮನ ಸೆರಗು

ಬಾಳಿನುದ್ದಕೂ ಆಧರಿಸಿದ ಅಪ್ಪನ ದುಡ್ಡಿನಚೀಲ,

ಅಜ್ಜನದೊಂದೇ ಆಸರೆಯಾದ ಊರುಗೋಲು,

ಅಜ್ಜಿಯ ಸಾಗದ ಕ್ಷಣವ ನುಂಗುವ ಮುರುಕು ಕನ್ನಡಕ..

ಇನ್ನೂ ಹೀಗೇ ಕೆಲಸಕ್ಕೆ ಬಾರದವು ಅನೇಕ..

ಹೊಸಕಬೇಕಂತೆ,ಇವು ಹುಟ್ಟಿಲ್ಲ ಅನಿಸಬೇಕಂತೆ.



ಜಟ್ಟಿಗಳಲ್ಲ, ಮಲ್ಲರಲ್ಲ, ನಮ್ಮ ನಿಮ್ಮಂಥ ಸ್ಪರ್ಧಿಗಳು

ವೀಕ್ಷಕರಿಗಿಂತ ಗೆಲ್ಲಬಂದವರೆ ಹೆಚ್ಚು..

ಬಹುಮಾನದ ಜಾಗದಲಿತ್ತು - ನೋವು ತಾಕದ

ದಪ್ಪಹೊದಿಕೆಯ, ಸ್ಪರ್ಶಸ್ಪಂದನರಹಿತ ಮೈಮನದ ಕವಚ.











Thursday, January 24, 2013

ವಿಮುಖತೆಯ ಮುಖಾಮುಖಿ


---------------

ನಡೆಯುತ್ತಿದ್ದೇವೆ ನಾನಿತ್ತ ನೀನತ್ತ,

ಭೂತ ಮೈಮೇಲೆ ಬಂದಂತೆ

ವಿಮುಖತೆಯನಪ್ಪಿ.

ಗುರಿಯಿಲ್ಲ, ಗುರುವಿಲ್ಲ,

ಇದ್ದುದನೆಲ್ಲ ಗಾಳಿಗೆ ತೂರಿ.

ಬೇಡವೆನಿಸುತಿಲ್ಲ, ಆದರೆ

ಬೇಕಾದುದರ ಅರಿವಿಲ್ಲ.



ನಡುವೊಂದು ಗೂಟವಿದೆ

ದೇವಳದ ಗರ್ಭಗುಡಿಯ ಆತ್ಮದಂತೆ.

ಎರಡು ಹಗ್ಗಗಳೂ ಬಿಗಿದಿವೆ,

ನನ್ನ ಕಾಲಿಗೊಂದು, ನಿನದಕೊಂದು.

ಅಕ್ಷಯವಾಗುವ ಉದ್ದದಳತೆಯವು,

ಉತ್ತರಕೊಂದು ದಕ್ಷಿಣಕೊಂದು.

ಎಷ್ಟೇ ಎಳೆದರೂ ಬಿಡಿಸಿಕೊಳ್ಳವು

ಗಂಟು ಭದ್ರ, ಹಾಕಿದ್ದು ನಾನು ನೀನು



ಕಾಲಸಾಗರದ ಮುನಿಸಿನಲೆಗಳು

ಅಳಿಸಿದ್ದು ಮರಳ ಅಕ್ಷರವಷ್ಟೆ,

ಹೆಸರನಲ್ಲ, ಬರೆದ ಭಾವವನಲ್ಲ.

ಮೂಡಿದ ಕ್ಷಣವೇ ಅದೊಂದು ದಾಖಲೆ,

ಅಳಿಸಿ ಸುಳ್ಳು ಮಾಡಲಾಗುವುದಿಲ್ಲ.

ಎದೆಗಣ್ಣಿಗೆ ಕಣ್ಣುಮುಚ್ಚಾಲೆಯಾಡಿಸಿ

ಭ್ರಮೆಗೆ ದೂಡಿದರೂ,

ಶ್ರದ್ಧೆಯ ಪ್ರಭೆಗೆ ಮತ್ತೆ ಸಾಕ್ಷಾತ್ಕಾರ..



ಇಂದು ಎಣಿಸಿದ್ದಾಗಲಿಲ್ಲ,

ನಾಳೆಗೊಂದು ಕನಸಿಲ್ಲೆ ಹುಟ್ಟಿತು.

ಕಾಯುವಿಕೆ ಕ್ಷಣಗಳಿಗೆ ಅರ್ಥ ತುಂಬಿತು.

ನಾಳೆಯೂ ಇಂದಿನ ಪ್ರತಿಬಿಂಬವಾದರೆ,

ನಾಳೆಗಳಿಗೆಲ್ಲ ಗುರಿ ಸ್ಪಷ್ಟವಾದೀತು.

ಕಾಯಬಲ್ಲೆ, ಕಾದು ಕುದಿದು ಬೆಂದಾಗಿದೆ.

ಭಾನುಭೂಮಿಯ ಮಿಲನದವರೆಗೆ,

ಗುಲಗಂಜಿ ಏಕವರ್ಣದ್ದಾಗುವವರೆಗೆ.



ಗುಂಡು ಭೂಮಿಯಲಿ ವಿಮುಖತೆಗೆ

ಮುಖಾಮುಖಿಯಾಗುವ ಆಸೆಯಿದೆ.

ಹೊಸಮುಂಜಾವಿಗೊಂದು ಕನಸು

ನಿರಾಸೆಯ ಗರ್ಭ ಪ್ರಸವಿಸಿದ ವರಕೂಸು.

ಉತ್ಸಾಹವದರ ಉಸಿರು

ನನಸಾಗುತ ಬೆಳೆವುದು ಗೊತ್ತದಕೆ,

ನಿರೀಕ್ಷೆಯಲೇ ಒಂದು ದಿನ

ನಾನಿಲ್ಲವಾಗುವವರೆಗೆ.

Tuesday, January 22, 2013

ನಿಜವೇ ಕದ ಬಡಿದಾಗ....


-------------------------

ತಲೆಬಾಗಿಲಲೇನೋ ಅಸ್ಪಷ್ಟಸದ್ದು,

ಕದ ಬಡಿದದ್ದೇ?.. ಅಪ್ಪಣೆ ಬೇಡಿದ್ದೇ?



ಮನಸು ಏಳುಸುತ್ತಿನ ಕೋಟೆಯರಮನೆಗೆ

ರಾಜಕುಮಾರಿ, ಏಳುಸುತ್ತಿನರಳು ಮಲ್ಲಿಗೆ.

ಇಂದು ಹಲಕಾವಲಿಬಿಗಿಸುರಕ್ಷೆಯೊಳಗೆ.



ಅಂದಿನಂತೆ ಒಂದಷ್ಟೇ ಅಲ್ಲ, ಅದಿನ್ನಾರು ದಾಟಿ,

ನೂರು ಪ್ರಶ್ನೆಯ, ಸಂಶಯದ ಪರಿಹಾರವಾಗಿ,

ಬೇಡ-ತಡೆಗಳ ಹಾರಿ, ನಿರುತ್ಸಾಹ ತೂರಿ ಬರಬೇಕು.



ಕಲಿತ ಪಾಠ ಕಟ್ಟಿದೆ ಗಟ್ಟಿ ಗೋಡೆಯ ಭದ್ರ ಕೋಟೆ,

ಸಲೀಸಾಗಿ ಧುಮುಕಿದ್ದರ ಗಾಯದ ಗುರುತಲ್ಲೇ ಇದೆ.

ಸುಳ್ಳುನಿದ್ದೆಯ ಹಾಸಲಿ ನೆನಪು ಬೋರಲು ಮಲಗಿದೆ.



ನಗುವಂದು ಮೆಚ್ಚಿ ಬಾಗಿಲಲಿತ್ತು ಚಾಚಿ ಹಸ್ತ ಸ್ನೇಹಕೆ,

ಮರುಳು ಮನ ತಲೆಬಾಗಿಲಲೆ ಹಸಿದ ತಿರುಕನಂತೆ,

ತನನೊಡ್ಡಿಕೊಂಡಿತ್ತು, ನಂಬಿಕೆಯೆ ಮೂರ್ತಿವೆತ್ತಂತೆ.



ಭಿಕ್ಷೆಯಾಗಿ ಬಿದ್ದೊಳನಡೆದು ಆರ್ದೃತೆಯಲಿ ಮಿಂದೆದ್ದು,

ಕಾಲ ಮೈಯ್ಯೊರೆಸಿರೆ ಬಣ್ಣ ಕಳಚಿ ನಿಜರೂಪವಲ್ಲಿತ್ತು.

ನಗು, ಮೆಚ್ಚುಗೆ, ಸ್ನೇಹವೊಂದೂ ಅಲ್ಲ, ಬರೀ ನೋವದಾಗಿತ್ತು.



ಬಾಡಿದ ನಂಬಿಕೆ ಮತ್ತೆ ಚಿಗುರದೆ,

ಅಮೃತವೂ ವಿಷದ ಛದ್ಮವೇಷವೆನಿಸಿದೆ.

ಯಾರು ಬಂದವರು..ತಲೆಬಾಗಿಲ ಬಳಿಸಾರಬೇಕಿದೆ...



ಅರೇ..! ಇಂದು ನೋವೇ ಬಂದಿದೆ.

ಆಳದಿಂದೊಳದನಿ :"ಇದು ದಿಟವೆನಿಸುತಿದೆ"

ದಿಟವೇ...

ಏಳು ಬಾಗಿಲ ದಾಟಿಯೂ ಅದು ಸೋತಿಲ್ಲ,

ಭಾವನದಿಯಲಿ ಮಿಂದೂ ಬಣ್ಣ ಬದಲಾಗಿಲ್ಲ,

ಎಂದಿನಂತೆ ಮನವೀಗ ಹಿಂಜಾರುತಿಲ್ಲ,

ನಿಜವನಪ್ಪಿ, ಒಪ್ಪಿ ಮಲಗಿದೆ ಬೆಚ್ಚಗೆ ಹೊದ್ದು


ನನ್ನದಿದು, ಇದ ದಾಟಿ ಚುಚ್ಚುವದ್ದೇನೂ ಇಲ್ಲವೆಂದು.








Monday, January 21, 2013

ಬರೀ ನೆರಳಲ್ಲ ನಾನು


----------------

ಅಂದೇಕೋ ಸೌಮಿತ್ರಿ ಅನ್ಯಮನಸ್ಕ...

ಅಣ್ಣನ ವಿರಹದುರಿಯ ಬಿಸಿಯ ಶಾಖಕೆ

ಎಂದಿಲ್ಲದ್ದು ಮನವಿಂದೇಕೆ ಕುದಿಯುತಿದೆ?!



ಸೀತಾಮಾತೆಯ ಮಾಯಾಮೃಗದಾಸೆಗೆ,

ಅಣ್ಣ ನಿರಾಕರಿಸಿ, ಕೊನೆಗೆ ಮಣಿದದ್ದು,

ತನ್ನ ಕಾವಲಿಗಿರಿಸಿ ಬೇಟೆಗೆ ತೆರಳಿದ್ದು,

ದುರುಳ ಸಂಚಿಗೆ ಅಣ್ಣನ ಕೂಗಿನ ದಿರಿಸು,

ತಾ ಮರುಳಾಗಿ ಸೀತೆಯಾಜ್ಞೆಗೆ ಬಾಗಿ, ನಡೆದದ್ದು..

ರಾವಣನ ಕರೆಗೆ ಲಕ್ಷ್ಮಣರೇಖೆ ದಾಟಿ ಸೀತೆ,

ವಿರಹತಾಪದ ಕೂಪಕಣ್ಣನ ತಳ್ಳಿ ಹೋದದ್ದು....



ಬೆಚ್ಚಿಬಿದ್ದ ಲಕ್ಷ್ಮಣ, ಇದೇಕೆ ಹೀಗಾಗುತಿದೆ?!

ಅರ್ಧ ಲಕ್ಷ್ಮಣರೇಖೆ ಪರಿಚಿತ ಮುಖಚರ್ಯೆಯಾದಂತೆ...

ಊರ್ಮಿಳೆಯದಲ್ಲವೇ....ಕಾಡಿತು ನೆನಪು.

ಮೊದಲನೋಟದ್ದಲ್ಲ, ಕೊನೆಯ ಬಾರಿಯದು

ಮಡುಗಟ್ಟಿದ ನೋವಿತ್ತೇ, ಸಿಟ್ಟಿತ್ತೇ, ದೈನ್ಯತೆಯಿತ್ತೇ..

ಭ್ರಾತೃಪ್ರೇಮದ ದೃಷ್ಟಿಯಾವರಿಸಿದ ಕಣ್ಣು

ಅತ್ತ ನೋಡಿರಲೇ ಇಲ್ಲ....

ನಾರುಟ್ಟು, ಜಡೆಕಟ್ಟಿ ಹಿಂಬಾಲಿಸಿದ ಹೆಜ್ಜೆಗೆ

ಜೈಕಾರಗಳ ನಡುವೆ ಆ ಗೆಜ್ಜೆಯಳು ಕೇಳಿಸಲೇ ಇಲ್ಲ.

ಅವಳು ತಡೆಯಲಿಲ್ಲ, ತಾನು ಕರೆಯಲಿಲ್ಲ....



ವನವಾಸದಿ ನೆರಳಪಾತ್ರದ ನಡಿಗೆ,

ಮೈಯ್ಯ ಜೊತೆ ಮನಕೂ ತಾಗುತಿತ್ತು ಮುಳ್ಳು

ದಾಂಪತ್ಯಸುಖಕೆ, ಸಾಮೀಪ್ಯದ ಸೊಗಸಿಗೆ

ಕಾತರಿಸಿದ ಮನದಲೂ ಹಸಿವೆದಾಹಗಳಿತ್ತು.

ರಾಮನೆದೆಗೊರಗಿದ ಸೀತೆಯ ಸಲ್ಲಾಪ

ಉರಿವುದನಿನ್ನೂ ಉರಿಸುತಿತ್ತು....

ಮೆಟ್ಟಿ ಜಿತಕಾಮ, ಜಿತೇಂದ್ರಿಯನಾಗಹೊರಟಿದ್ದೆ...

ನಗೆಯಶಸ್ತ್ರ ಧರಿಸಿ ಅವರ ಜೋಡಿಗೆ ಕಾವಲಿದ್ದೆ.



ಕೆಲಕ್ಷಣಗಳ ವಿರಹಕೇ ಕಣ್ಣೀರಾದ ರಾಮ,

ಇಷ್ಟೂ ದಿನ ತಾ ಹನಿಸಲಿಲ್ಲ, ಇರಲಿಲ್ಲವೆಂದಲ್ಲ,


ಹರಿಯದಷ್ಟು ಘನವಾಗಿತ್ತು...ತನ್ನೊಡಲ ಧುಮುಗುಟ್ಟುವಿಕೆ

ತನ್ನ ರಾಮಗಿಂದೂ ಅರಿವಾಗದುಳಿಯಿತೇ?!

ಆದರ್ಶದ ಬೆನ್ನತ್ತಿದ ನಡಿಗೆ, ಅತಿಮಾನುಷನಾದೆನೇ?!

ಜೈಕಾರ ತುಂಬಿದ ಕಿವಿ ವಾಸ್ತವಕೆ ಕಿವುಡಾಯಿತೇ?!

ಪತಿಧರ್ಮ ಕಡೆಗಣಿಸಿ ಭ್ರಾತೃಸೇವೆಯ ಪುಣ್ಯ ದಕ್ಕೀತೇ?!

ರಾಮನನುಜನಷ್ಟೇ ಅಲ್ಲದೆ ತನ್ನ ತಾನು,

ಊರ್ಮಿಳೆಯ ಪತಿಯಾಗಿ, ಸೌಮಿತ್ರಿಯಾಗಿ

ಕಂಡ ಮನ ಬೊಬ್ಬಿಟ್ಟಿತು- "ಬರೀ ನೆರಳಲ್ಲ ನಾನು.."

Sunday, January 20, 2013

ಬಾಡಿಗೆಗಿದೆ ದೈವತ್ವ


-------------------

ಕಣ್ಣಿಗೆ ಕಾಣುವ ದೇವರು,

ಅಳಿವ ತಾನಪ್ಪಿ ನಾಳೆಯನುಳಿಸುವ ಶಕ್ತಿ

ಬಾಡಿಗೆಗಿದೆಯಂತೆ...ಇಲ್ಲೀಗ

ಹುಟ್ಟೂ ದುಡ್ಡಿಗೊದಗುವುದಂತೆ.



ಬೇಕಿಲ್ಲ ಪಾಣಿಗ್ರಹಣ,

ವಂಶೋದ್ಧಾರದ ನೆಪಕೆ.

ಬೇಕಿಲ್ಲ ಸಪ್ತಪದಿ,

ತುಳಿವುದಕೆ, ತುಳಿಸಿಕೊಳುವುದಕೆ..

ಬೇಕಿಲ್ಲ ಗೃಹಪ್ರವೇಶ,

ಒಂದ ತೊರೆದು ಇನ್ನೊಂದನಪ್ಪಲಿಕೆ.

ಬೇಕಿಲ್ಲ ಗರ್ಭದಾನಹೋಮ,

ಸತ್ಪುತ್ರಪ್ರಾಪ್ತಿಯ ಆಸೆಗೆ.

ಬೇಕಿಲ್ಲ ಪ್ರಸ್ಥಶಾಸ್ತ್ರ,

ಶುಭಗಳಿಗೆಗೆ ಕಾದು ಬೆರೆವುದಕೆ.



ಬಾಳ್ವೆಯಾಸೆ, ಏಳ್ಗೆಯಾಸೆಗಳಿರದ ಹೆಣ್ಣು

ಹರಿದುದ ಹೊಲಿದು ಜೀವ ತೇಯುತ,

ಹೊಸಹೊಸ ಹರಿಯುವಿಕೆಗೆ,

ಹೊಸಹೊಸ ತೇಪೆಗಳ ಕಲಿಕೆ.

ನಾವೀನ್ಯವೆಂಬುದನೆ ಮರೆತು

ಇಲ್ಲಗಳಿಗೆ ಸೋತು ಶರಣಾದ

ಹೈರಾಣಾದ ಸೃಷ್ಟಿಕಾರ್ಯದ ಕಣ್ಣು.



ನಾಲ್ಕುಗೋಡೆಯ ನಡುವಿನ

ಬೀಜದಾನಕಲ್ಲದೆ,

ಹಳೆಯ ಕೊರತೆ ಹೊಸ ಸಾಧ್ಯತೆಯ

ಒಂದಾಗುವಿಕೆಗೆ ತಲೆಬಾಗಿ,

ಇನ್ನೇನಿರದ ಘಟ್ಟದ ಭಿಕಾರಿಯಂತೆ,

ಹೊಟ್ಟೆಬಟ್ಟೆಯ ಹೆಸರಿಗೆ ಕಂಡರಿಯದೆಡೆಗೆ

ಎಲ್ಲವೆಂದರೆ ಎಲ್ಲ ಬಿಟ್ಟುಕೊಟ್ಟಂತೆ, ಕೊಟ್ಟುಬಿಟ್ಟಂತೆ.



ಹೊಸತನದ ಹುಡುಕುವಿಕೆಗೆ ಬಲಿ

ಹೆಣ್ತನವೆಂದೋ ಬಾಡಿಗೆಗಿತ್ತು.

ನೋಡಿದೋ.. ನಾಗರಿಕತೆಯ ತೆಕ್ಕೆಯಲಿ

ಇಂದು ತಾಯ್ತನವೂ ಬಾಡಿಗೆಗಿದೆ.

ಹೊತ್ತು ಬೆಳೆಸಿದ ದೇಹ ಕಿತ್ತಾಗಲೂ

ಸಿರಿತನಡಿಯಾಳಾಗಿ ನಗುತಿರಬೇಕು.

ಸಂಪತ್ತಿಗೆ ವಾರಸುದಾರನ ಬೆಳೆವ

ಆರೋಗ್ಯಕದು ಒತ್ತಾಸೆಯಾಗಿರಬೇಕು.



ಅನಿಶ್ಚಿತತೆಯಡಿಯೇ ಪ್ರತಿ ಮಾಸ

ಜೀವಸೃಷ್ಟಿಗೆ ಮೊದಲ ಹೆಜ್ಜೆ,

ಜೀವಸತ್ವವ ಬಸಿದು ಗೋಡೆ ಅಣಿಯಾಗಿ,

ಬರುಬಹುದಾದ ಕಂದಮ್ಮಗೊಂದು ಮೆತ್ತೆ.

ಕುಡಿಯೊಡೆಯದ ವಿಧಿಯಾಟದಿ,

ಹೊಟ್ಟೆಗಿಲ್ಲದ ಜುಟ್ಟಿಗಿಲ್ಲದ ಹಸಿವೆಯಲೂ

ಹನಿಹನಿಗೂಡಿದ ರಕ್ತ,

ಧಾರೆಯಾಗಿ ಹರಿದುಹೋದ

ಕಿಬ್ಬೊಟ್ಟೆಯ ನೋವಿನ ನಿರರ್ಥಕತೆಗೂ

ನಗುತ ಸ್ವಾಗತವೀಯುವ ಮನ,

ಹೊತ್ತು, ಕರುಳಬಳ್ಳಿಯಲಿ ಉಣಿಸ ಸಾಗಿಸಿ

ಅದ ತುಂಡರಿಸಿ ಹೆತ್ತ ಕಂದನನೊಪ್ಪಿಸುವಾಗ

ಅಸಹಾಯನಗುವ ಮುಸುಕೊಳಗೆ ಅತ್ತಿತ್ತು.

ಕಣ್ಣಿಗೊತ್ತಿಕೊಂಡ ನೋಟಿನ ಕಂತೆಯ ಬಿಸಿ

ಕಣ್ಣೀರನಾವಿಯಾಗಿಸಿತ್ತು,

ಹಿಂದೆ ತಿರುಗದೆ ಮಂಜುಗಣ್ಣಲಿ

ಮರೆವ ವ್ಯರ್ಥಯತ್ನದಿ

ನಿಷ್ಪಾಪಿ ಹೆಜ್ಜೆ ಸಾಗಿತ್ತು...













Friday, January 18, 2013

ಕೈಮೀರಿದ ಸತ್ಯ


-----------------------

ಇಂದೇಕೋ ಎಂದಿನಂತಿಲ್ಲ

ನಿನ್ನೆಯೇ ಮುಂದುವರಿದಂತೆ,

ಅದಲ್ಲೇ ಸತ್ತ ಭ್ರಾಂತಿ ಸತ್ತಂತಿದೆ.



ಬೆಳಗು ಹೊಸತೆನಿಸದೆ,

ಕತ್ತಲ ವೃದ್ಧಾಪ್ಯದ ಖಾಲಿತನದಂತೆ,

ಮುಗಿವ ಕ್ಷಣದ ನಿರೀಕ್ಷೆ ಹೊತ್ತಂತಿದೆ.



ಜಗದ್ದು ತಡೆ ಇರದ ನಡಿಗೆ.

ಕಾಲೂರುವೆನೆಂದರು ಬಿಡದು,

ಸದ್ದಿರದೆ ಜೊತೆಯ್ಯುವ ಗುಪ್ತಗಾಮಿನಿ.



ಹೆಜ್ಜೆಗಳಿಗರಿವಿಲ್ಲ,

ನಡೆಯದ ಸ್ತಬ್ಧತೆಯೆನಿಸುವುದು

ಅಲೆಯಡಿ ಮರಳಲಿ ಹೂತ ಪಾದದ ಭ್ರಮೆ..



ತಟದ ಮರಳಕಣದ್ದೂ

ಎದೆಯ ಆಸೆಗಳದೂ ಒಂದೇ ಲೆಕ್ಕ.

ಸಾಗರ, ಮತ್ತೆದೆಯೊಳಗದೇ ಸುಭಿಕ್ಷದಾಹ .



ಇದ್ದುದರ ನಡುವೊಂದು ಹುಡುಕಾಟ,

ಪ್ರಾಪ್ತಿ ಪೂರ್ತಿಯಲ್ಲದ ಪರದಾಟ,

ಮಹತ್ತರ ಸಾಧನೆಯ ತಡಕಾಟ.



ಓ ಮನಸೇ,

ಆಗದು, ಆದರೂ ನಿಂತೊಮ್ಮೆ.

ಮೌನದೊಳ ಹೊಕ್ಕೊಮ್ಮೆ,

ಅನಿಸದೇನು ಈಗ ಹೀಗೆ?



ಮುಟ್ಟಿದ್ದೂ, ಮುಟ್ಟಬೇಕಾದ್ದೂ ಸುಳ್ಳು,

ವಶವಲ್ಲದ, ನಿನಗರಿವಿಲ್ಲದ ಆದರೂ

ನಿನದೇ ಆದ ಹೆಜ್ಜೆನಡಿಗೆಯಷ್ಟೆ ಸತ್ಯ.

ಈ ಕ್ಷಣ ಅದೂರಿದ ಬಿಂದುವಷ್ಟೆ ಸತ್ಯ,

ಅರಿವು ಸಾಗುವ ರೇಖೆಯಲ್ಲ,

ಅಜ್ಞಾನವೆಂಬ ವೃತ್ತವೂ ಅಲ್ಲ.

Thursday, January 17, 2013

ಅಸ್ಪಷ್ಟ ಗಳಿಗೆ


----------------------

ಬಹುಶಃ ಒಳಗಿಹುದೊಂದು ಕೂಸು

ದೇಹಕಷ್ಟೆ ವಯಸು,

ಮಾಗಿಲ್ಲ ಮನಸು.

ಇದು ತೂಕವೆನಿಸಿದ್ದು,

ಅನುಭವದ ತೆಕ್ಕೆಗೆ ಹಗುರ.

ನನದಲ್ಲದ ನನಗಿಲ್ಲದ

ಅನುಭವವ ಎಲ್ಲಿಂದ ತರಲಿ?!

ಇದು ಮಹಾ ಎನಿಸಿದ್ದು

ಪಕ್ವತೆಯ ಮಾತಲಿ ಗೌಣ

ನನದಲ್ಲದ ನನಗಿಲ್ಲದ

ಪಕ್ವತೆಯ ಎಲ್ಲಿಂದ ತರಲಿ?!

ನಾ ಏತಿ ಅಂದದ್ದು

ಅನುಭವಕೆ ಪ್ರೇತಿ

ನಾನೋಡೊ ಎತ್ತಂತೆ,

ಪಕ್ವತೆ ನೀರಿಗೆಳೆದಂತೆ.

ನಿಂತೆಡೆಯೆಲ್ಲಿ, ಗುರಿಯೆಲ್ಲಿ?

ನೆಲೆಯೆಲ್ಲಿ, ಆಧರಿಸೊ ನೆಲವೆಲ್ಲಿ?

ಅರಿವ ದಾರಿಯಲಿರುವ ಭ್ರಮೆ,

ಭ್ರಮೆಯೂ ಅದಲ್ಲದ ಅಪಾಯ.

ನೆರೆದ ಜಾತ್ರೆಯ ಸದ್ದಲಿ

ಮೌನ ಮುಸುಕಲಿ ನಿಧಿಯೊಂದು

ಕರೆಯುತಿದೆ-"ಬಾ ಇಲ್ಲಿ ಒಳಗೆ "

ಕೂಗುತಿದೆ-"ಸದ್ದು.. ಯಾರದು ಹೊರಗೆ"

ಬಾಯ್ಮುಚ್ಚಿ ಒಳಹೊಕ್ಕಲೇ,

ಕಣ್ಮುಚ್ಚಿ ನಿಂತುಬಿಡಲೇ,

ಕಿವಿಮುಚ್ಚಿ ಮುನ್ನಡೆಯಲೇ??

ಅಸ್ಪಷ್ಟಗಳಿಗೆ...ಹಿತವೋ-ಅಹಿತವೋ

ಮೈಮನ ಜಡ್ಡಾದಂತೆ,

ಚಿವುಟಿದ್ದೂ, ಹಿಂಡಿದ್ದೂ

ಮೆಲುಸ್ಪರ್ಶದಂತೆ.

ನವಿರುಗರಿ ತಾಕಿದ್ದು

ರಕ್ತ ಜಿನುಗಿಸಿದಂತೆ.



ಜ್ಞಾನದೆತ್ತರಕೇರುವಾ


------------------

ಭಾವಕೆಲ್ಲಿಯ ಸರಳತೆ, ಕ್ಲಿಷ್ಟತೆ?

ಸಹಜಜನಿತ ಅದು ಆತ್ಮಪ್ರೇರಿತ.

ಸಲಿಲಧಾರೆ ಒಮ್ಮೊಮ್ಮೆ,

ಲಾವಾರಸ ಒಮ್ಮೊಮ್ಮೆ.

ಸ್ಫುರಿತ ಬಿಂದುವೂ ಬಾಧ್ಯವಲ್ಲ,

ಅಭಿವ್ಯಕ್ತಿಗೆ ತಿದ್ದುಪಡಿ ಶಕ್ಯವಲ್ಲ.



"ನಾನರಿತುದಷ್ಟೆ ನಿಜ,

ತಲೆತಾಗಿ ಹೋದುದು ಅಸಹಜ"

ಎಂಬವರೇ,

ಕಬ್ಬಿಣದ ಕಡಲೆ ನಮಗೆ,

ಕರಗಿ ನೀರದು ಅಗ್ನಿಜ್ವಾಲೆಗೆ.

ಹಲ್ಲ ಪುಡಿ ಮಾಡುವ ಕಲ್ಲು,

ಧೂಳುಪುಡಿ ಯಂತ್ರದ ಹಲ್ಲಿಗೆ.



ಅಗ್ನಿಗನ್ನವಷ್ಟೇ ಪ್ರಪಂಚವಲ್ಲ,

ಯಂತ್ರದ ಭಾಷೆ ಬರೀ ಅಕ್ಷರವಲ್ಲ.

ಭಿನ್ನ ಕಣಕಣದ ರಚನೆ, ಸಂಯೋಜನೆಯಿರೆ

ಉದ್ದೇಶ, ಫಲಿತಾಂಶ ಒಂದೆಸಮ ಹೇಗೆ?!



ಲೋಕ ನಮ್ಮ ತಣಿಸಲಿಕಲ್ಲ,

ನಾವಲ್ಲಿ ದಣಿದು ತಣಿಯಬೇಕು.

ಗಡಿ ನಾವೇ ಬರೆದುಕೊಂಡಲ್ಲ,

ಮಿತಿಯಿರದುದ ಗುರಿಯೆನಬೇಕು.

ನಿಂತಲ್ಲಿಗೆ ಗಂಗೆ ತಾ ಬರಳು,

ಅತ್ತ ಸಾರುವ ಸಾಧನೆ ಬೇಕು.



ಲೋಕ ತನ್ನ ತಣಿಸದ್ದು,

ಗುರಿ ತನ್ನ ಗೆರೆ ಹೊರಗಿನದು,

ಗಂಗೆ ತಾ ಮೀಯದ್ದು,

ನಿರರ್ಥಕವೆಂದಾದೀತೇ?!



ಬನ್ನಿ ಸಾಗುವ,

ಅರಿವಾಗದುದ ಅರಿವತ್ತ.

ಜ್ಞಾನವೊಂದು ಮುಕುಟಮಣಿ

ಜರೆತವದ ಕೆಳಗಿಳಿಸದು.

ಅವನಿತ್ತ ಸಾಕಷ್ಟರಲಿ ಅಷ್ಟೆಷ್ಟೋ ಬಳಸಿ

ಮೇರುವ ಕುಬ್ಜವೆನ್ನದೆ,

ಅದರೆದೆತ್ತರಕೇರುವಾ.









Wednesday, January 16, 2013

ಇತ್ತ ನೋಡೊಮ್ಮೆ..


------------------

ಮರೆಯಾಗೋ ದಿಶೆಯಲೇಕೆ ನಡೆ ಒಲವೇ?

ಮುಖ ಮಾಡಿ ನಡೆವುದಷ್ಟು ಜಟಿಲವೇ?

ನಾ ಶಾಖವಲ್ಲ, ನೀ ಮಂಜಲ್ಲ.

ನಾ ಹಗಲಲ್ಲ, ನೀ ತಾರೆಯಲ್ಲ.



ಊರಿದ ಹೆಜ್ಜೆಯಡಿಯ ಕುಳಿ ನೋಡು,

ಆಳ ಹೇಳುತಿದೆ ಭಾರವದೆಂದು.

ಎದ್ದ ಧೂಳ ಕಣಕಣವೂ ನೋಡು,

ಕಣ್ತುಂಬಿ ತುಳುಕಿಸಿದೆ ನೋವು.



ಇತ್ತ ನೋಡೊಮ್ಮೆ, ನಾ ಕಣ್ಮರೆ

ನೇಪಥ್ಯಕೊಪ್ಪಿಯೇ ಸರಿದಿರುವೆ

ನಡೆಯುತಿರು, ದಾರಿ ತೋರುತಿರು

ಊನವಕ್ರಗಳ ನೇರಗೊಳಿಸುತಿರು.



ನಾ ಚಿಗಿತಂತೆ ಇನ್ನಷ್ಟು ಚಿಗುರಲಿ

ನೀ ಮೊಳೆಸುವಾತ ಮುನ್ನೋಟವಿರಲಿ.

ನೀನುಳಿದು ನನ್ನೊಳಗೆ, ನಾನಿಲ್ಲದಿರುವೆ

ನಿನ್ನೆದೆ ಬಡಿತದೆಡೆ ನಿಶ್ಯಬ್ಧವಾಗಿರುವೆ.



ಹೀಗೊಂದು ಸ್ವಗತ

---------------

ಹಕ್ಕಿ ತೊರೆದೊಂದು ಪುಕ್ಕ,

ಗಾಳಿಯಲೆಯ ಮೌನತೇರಲಿ

ಮೇಲೇರುತೊಮ್ಮೆ ಕೆಳಗಿಳಿದೊಮ್ಮೆ

ಗಮ್ಯವಿರದ ಯಾನಿ ನಾನು.



ಹಕ್ಕಿಗರಿಯ ಪಾತ್ರದಲ್ಲಿ

ಅದರೊಡಲ ಶಾಖವಾಗಿ,

ಹಾರಾಟಕೊತ್ತಾಸೆಯಾಗಿ,

ಚೆಲುವಿನ ಸೆಲೆಯಾಗಿ,

ನೂರುಬಂಧಗಳಲೊಂದಾಗಿ,

ಜೀವಂತವಾಗಿದ್ದೆ.



ನನ್ನಾಸರೆಯದೇ ಹಾರಾಟ

ಗೊತ್ತಿದ್ದೋ ಇಲ್ಲದೆಯೋ..

ಹಕ್ಕಿಯುದುರಿಸಿದ್ದೋ, ನಾನುದುರಿದ್ದೋ

ಬೇರೆಯಾದ ಆ ಕ್ಷಣ

ಜೀವಚ್ಛವವಾದೆ.



ಗಾಳಿ ತೋರಿದ ದಿಕ್ಕು,

ನನದಲ್ಲದ ನಡಿಗೆ,

ನಾಳೆಗಲ್ಲದ ಯಾನ,

ಸ್ಥಿರವಲ್ಲದ ಸ್ಥಾನ,

ನಾನಲ್ಲದ ನಾನಾದೆ.



ಇರಬೇಕು, ಇರುವೆ.

ಉದುರಿ ಉಳಿವುದೂ ಗೆಲುವೇ.

ಪುಟ್ಟಮನದ ಕೈಗೆ,

ಚಿತ್ರದೊಂದು ಮೈಗೆ

ಅಂಟುವ ಗಳಿಗೆಗೆ

ಕಾದು ಸಾಗುವೆ ಇರದ ಗುರಿಯೆಡೆಗೆ.

-------------------------



















ಇಂದಿಗಡಿಯಿಡದ ಇಬ್ಬನಿಗೆ..


----------------------

ಹೇಳೇ ಇಬ್ಬನಿ,

ಅಷ್ಟು ಭಯಂಕರನೇ ಸೂರ್ಯ?

ಅಷ್ಟು ಹಿತವೇ

ಅವನ ಗೈರು, ಮತ್ತಿರುಳು?

ಅಟ್ಟಿಸುವನೇನೇ,

ಸುಟ್ಟು ಕರಟಿಸುವನೇನೇ?



ನಿಶ್ಯಬ್ಧ ಕನಸ ಸಂಗ,

ಚಂದ್ರತಾರೆ ಜೋಗುಳ,

ಭೂತಾಯಿ ಮಡಿಲು,

ಅವಳ ನಿದ್ರೆಯೊಡಲು,

ಹಸಿರು ಮೆತ್ತೆಯಲಿ

ಕಣ್ಮುಚ್ಚಿ ಮಲಗಿದ್ದೆ...



ಮೂಡಣ ಬಣ್ಣಹೊತ್ತು,

ಹಕ್ಕಿ ಚಿಲಿಪಿಲಿ ಸದ್ದು

ಕರ್ತವ್ಯರಥದಿ ರವಿ,

ಬೆಳ್ಳಗೆ ಬೆಳಗಾಯ್ತು.

ಬಿಸಿಲೆದುರಿಸೆ ಭಯವೇನೆ,

ಕದ್ದೋಡಿದೆಯೇನೆ?



ಹಿತವಲ್ಲದ್ದೆಲ್ಲ ಕೆಡುಕಲ್ಲ,

ಸ್ಥಾವರವಷ್ಟೆ ಸ್ಥಿರವಲ್ಲ,

ಚಲನೆ, ಪರಿವರ್ತನೆ ಜಗದುಸಿರು

ನಿಯಮ ನಿನಗಿರಬಹುದು,

ಎನಗೆ ಸಹಜವೆನ್ನಿಸುತಿಲ್ಲ,

ತೀಕ್ಷ್ಣತೆಗು ಮೆಲುಸ್ಪರ್ಶವಿದೆ,

ನಿಂತೆದುರಿಸುವುದೊಳಿತು.



ಮೂಗಿನ ನೇರದ ಸಲೀಸಿಗೆ,

ವೈಶಾಲ್ಯತೆಯ ಬಲಿ ಸಲ್ಲ.

ಬಯಲಾಗುವ ಅಪಾಯಕೆ,

ಕಳೆದುಹೋಗುವ ಭಯ ಸಲ್ಲ.

ತೆರಕೊಳ್ಳೊ ಚಿಪ್ಪಿಗಷ್ಟೆ,

ಮುತ್ತಾಗುವ ಸ್ವಾತಿಹನಿ.



ಭದ್ರನಿನ್ನೆಗಳು ಇಂದಿಗಡಿಯಿಟ್ಟು,

ನಾಳೆಯ ಕನಸ ಕಾಣಲಿ.

ಕಳಕೊಂಡ ಎಡೆಯಲೆ

ಹೊಸತ ಪಡೆವವಕಾಶ.

ಮನಬಿಚ್ಚಿ ನೋಡೊಮ್ಮೆ

ಕಂಡಿರದ ನಿಚ್ಚಳ ಆಕಾಶ.



ಹೆಚ್ಚೆಂದರೇನೇ??

ಕರಗಿ ನೀನಿಲ್ಲವಾಗಬಹುದು,

ನೀನೇ ಎನುವ ಸಮರ್ಪಣೆಯಲಿ,

ನಾನಿಲ್ಲವಾಗುವ ಸಾರ್ಥಕ್ಯ,

ನೂರು ಹುಟ್ಟು-ಸಾವಿನ

ತಿರುಗಾಲಿಗಿಂತ ಮಿಗಿಲಲ್ಲವೇನೇ?

Tuesday, January 15, 2013

ಇರಲಿಬಿಡು...


--------

ಇಲ್ಲೆಲ್ಲೋ ಬರೆದಂತಿತ್ತು,

ನೀನಲ್ಲಿದ್ದೆಯೆಂದು.

ಪುರಾವೆಗಳೂ ಬಿತ್ತರವೆಂದು.

ಓದಿದೆ, ಓಡಿದೆ, ತಲುಪಿದೆ.

ಬಂದಿದ್ದೆಯಂತೆ, ಹಲ ಕುರುಹಿತ್ತು.

ತೋರಣದಲಿನ್ನೂ ನಿನ್ನುಸಿರ ಘಮವಿತ್ತು

ದಾಟುಹೆಜ್ಜೆ ಮೆಟ್ಟಿದ ರಂಗವಲ್ಲಿ ಕಳೆಗಟ್ಟಿತ್ತು

ಗಾಳಿಯಲ್ಲಿನ ನಿನ ಸ್ಪರ್ಶ ನವಿರೇಳಿಸಿತ್ತು

ನೀನಾಡಿದ ಮಾತು ಮೌನದಲನುರಣಿಸಿತ್ತು.

ನಗು ಮೂಲೆಮೂಲೆಯಲು ಅಚ್ಚೊತ್ತಿತ್ತು.

ಆಶಯಗಳು, ವಂದನೆ-ಅಭಿವಂದನೆಗಳು

ನೀನುದುರಿಸಿದ್ದು ಮಣ್ಣ ಕಣಕಣದಲಿತ್ತು.

ಅಕ್ಕಪಕ್ಕದವರ ಹಾಜರಿ ದಾಖಲಾಗಿತ್ತು,

ಸಾಕ್ಷಿಯಲ್ಲಿತ್ತು, ನೀನಷ್ಟೇ ಇರಲಿಲ್ಲ

ಮುಖದರ್ಶನಕೆ ಕಣ್ಣು ಹಾತೊರೆದಿತ್ತು.

ತುಂಬುವ ಬಿಂಬ ಅಲ್ಲುಳಿದಿರಲಿಲ್ಲ.

ಇರಲಿ ಬಿಡು, ಎಂದಿನಂತೆ,

ತೆರೆದಕಣ್ಣ ಮನವೊಲಿಸುವೆ.

ಮುಚ್ಚಿ, ಮತ್ತೆದೆಯೊಳಗಿಣುಕುವೆ.

ಕುರುಹೂ ಇದೆಯಲ್ಲಿ, ನೀನೂ ....

ಎಲ್ಲಿ ಹೋಗುವೆ? ಮತ್ತೆ ತಡವಿಲ್ಲ,

ಮುಚ್ಚಿದೆವೆಯಡಿ ನಗುತ ನಿಲ್ಲುವೆ..





ಚಿತ್ರದ ಪಾತ್ರ.


------------------------

ಒಂದು ಚಿತ್ರ,

ಬಣ್ಣ-ವಿನ್ಯಾಸ ಹಲಬಗೆ.



ಕಣ್ತಣಿಸಿದ್ದು, ಕಣ್ಣ ಹನಿಸಿದ್ದು,

ಅರಿವಾದದ್ದು, ಗೋಪ್ಯವೆನಿಸಿದ್ದು,

ಸಿರಿಯೆನಿಸಿದ್ದು, ಮರೆಯೆನಿಸಿದ್ದು...

ಹೀಗೆ ಕಲಸುಮೇಲೋಗರದಂತೆ.



ಒಣಗಿದೆಲೆ ಉದುರಿ ಚಿಗುರುಗಳ ಸಿಕ್ಕಲಿ,

ಹೂವಿನ ಪಕಳೆ ಚಿಟ್ಟೆರೆಕ್ಕೆಯಡಿಯಲಿ,

ಮೇಲಾಗಸದ ನೀಲಿ ನೀರಿನುಡುಗೆಯಲಿ,

ಅಳುನಗೆಯ ಬಣ್ಣ ಪ್ರೀತಿ ನೆರಳ ಕಪ್ಪಲಿ...

ಹೀಗೆ ಎತ್ತಣ ಮಾಮರ ಎತ್ತಣ ಕೋಗಿಲೆ..



ಎದುರು ಸಾರಿ ಕೇಳಿತು-"ಕಣ್ಣೊಳ ಬರಲೇ?"

ಒಪ್ಪಿ ದೃಷ್ಟಿ ಪಾಪೆಯಷ್ಟಗಲ ಹಾಯಿಸಿದೆ,

ಎದೆಹಾದಿಯಲಿ ಸಾಗಿ, ಒಳಗಷ್ಟು ಹೊಕ್ಕು,

ಚಿತ್ರವಲ್ಲೂ ಒಂದಿತ್ತು, ಮಿಳಿತವಾಯಿತು.

ಮೇಳ ಸೊಗಸೆನಿಸಿತು, ನನದೆನಿಸಿತು.



ರಚಿಸಿದವರಲೊಂದು ವಿನಂತಿ...

ನನ್ನತನದಂಗ, ಹಿಂತಿರುಗಿಸೆನದಿರಿ.

ಹೊರಗದ, ಅದಿರದ ಎನ್ನೊಳಗ ಕಲ್ಪಿಸದಿರಿ.

ದಾರಿ ನನ್ನೊಳಗಿಗಷ್ಟೇ ಸುಗಮ,

ಹೊರಗಿಗಲ್ಲ, ಹಾಗೊಮ್ಮೆ ಕಿತ್ತರೂ

ರಕ್ತ ಕಣ್ಣೀರು ಚೆಲ್ಲಿ, ಬಣ್ಣ ಗೋಜಲಾಗಿ,

ದಕ್ಕದುಳಿದೀತು ನಿಮಗೂ, ನನಗೂ.....













ನೀನಂದುಕೊಂಡದ್ದಾಗಿಲ್ಲ


-----------------------

ನನಗೊದಗಿದ ವರವೇ ನೀನೆಂದೆಂದಿಗೂ..

ಅದೇ ಸೂಕ್ಷ್ಮಸಂವೇದನೆ, ಸೂಕ್ತಸ್ಪಂದನೆ
  ದೂರಾದಂತಿದ್ದೂ, ಹೊರತಾಗಿಲ್ಲ.

ಮರೆಯಾದಂತಿದ್ದೂ, ಅದು ಮರೆವಲ್ಲ.


ಕಣ್ತೆರೆದರೆ ಕಾಣುವುದದೇ ನೀ ಮೆಚ್ಚಿದ್ದು,

ಕಣ್ಮುಚ್ಚಿದರೆ ಕೈಚಾಚಿ ನೀ ಬಾ ಅಂದದ್ದು,

ಕಿವಿಗೊಟ್ಟಾಗ ನೀ ಕೂಗಿದ ನನ ಹೆಸರು,

ಬಾಯ್ದೆರೆದಾಗ ನೀ ಹಾಡಿಸಿದ ಹಾಡು.


ನೂರಿದ್ದರೂ ತಲುಪಿದ್ದು ನಿನ್ನದೇ ಸಂದೇಶ,

ಹೊಳೆದದ್ದದೇ ಸಾರಾಂಶ, ಉಳಿದದ್ದೂ ಅದೇ.

ಅದಕಳಿವಿಲ್ಲ, ಚಪ್ಪಾಳೆಯಿಲ್ಲ ಕರವೆರಡಿರದೆ,

ನಾನಿನ್ನೂ ಅಪ್ಪಿರುವೆನಲ್ಲಾ...ಅದಿಲ್ಲೇ ಇದೆ.



ಬಂಧುಗಳೇ.. ಒಂದು ಕೋರಿಕೆ

----------------

ಕಣ್ಣಿಗೊಂದು ಪಟ್ಟಿ-

"ನಮ್ಮದೀ ಬಣ್ಣ, ಅವರದದಲ್ಲ"

ಬಾಯಿಗೊಂದು ಮಂತ್ರ-

"ಅವರು ನಾವಲ್ಲ, ನಾವವರಲ್ಲ"

ಮನಸಲೊಂದೇ ತಂತ್ರ-

ಅವರ ತಪ್ಪು ಹುಡುಕುವುದು

ಎದೆಯಲೊಂದೇ ಕಾರ್ಯ-

ಅವರ ದ್ವೇಷಿಸುವುದು


ಬಂಧುಗಳೇ...

ತೊಳೆಯಿರೊಮ್ಮೆ ಮನ,

ಕಳೆಯಿರೊಮ್ಮೆ ಪೂರ್ವಾಗ್ರಹ

ಕಾಲಮೀರಿ ಉಳಿದ ಹಳತು, ಮಲಿನ

ಮಿತಿಮೀರಿದ ದ್ವೇಷ, ಮೈಮನಕೆ ವಿಷ


ಅವರದೂ ನಮದೂ ರಕ್ತ ಒಂದೇ, ಕೆಂಪು.

ಅವರೊಮ್ಮೊಮ್ಮೆ ನಾವೇ, ನಾವು ಅವರು.

ತಪ್ಪೇ ಹುಡುಕುವುದಾದರೆ, ಮೊದಲೇಕಲ್ಲ ನದು?

ಪ್ರೀತಿಯಿಂದ ಸರಳ, ರೋಷದಿಂದಲ್ಲ ಬದುಕು.


ಆದಿಯಿಂದಲು ಮೂಲ ಮನುಜತೆ,


ಅದಕಾಗಿಲ್ಲ, ಕಾಲದ್ದಷ್ಟೇ ಸಂಕ್ರಮಣ.

ಸಲ್ಲದ್ದನೇ ದಾರಿದೀಪವೆನುವ ಮೌಢ್ಯ,

ಸ್ವಸ್ಥ ಸಮಾಜ ಕೆಡಿಸೋ ಅಪಮೌಲ್ಯ.


ನಿನ್ನೆ ಕಳೆದದ್ದು, ಎಳೆದಿಂದಿಗೆ ತರದೆ,

ಇಂದಿನಲಿರುವ, ಮುಂದಷ್ಟೇ ನೋಡುವ.


 ಪರಿವರ್ತನೆ ಜಗದ ನಿಯಮ

ತಲೆಬಾಗಿ ಒಪ್ಪುವಾ, ಅಪ್ಪುವಾ..


ವಿವೇಕಿಗಳ ಮಾತಲಷ್ಟೆಷ್ಟೋ ಕೇಳಿದ್ದು,

ತಿರುಚದೆ, ಅವರ ನಮ್ಮೊಳಾವಾಹಿಸದೆ,

ನಾವು ನಾವಾಗಿರುವ, ಅವರವರಾಗಿರಲಿ

ಕೇಳಿದ್ದ ಅರಿತು, ಅರಗಿಸಿ, ಪರಿಪಾಲಿಸುವಾ.















Wednesday, January 9, 2013

ಅಳಿಯದುಳಿಯುವ ದಾರಿ


-------------------

ತರಗೆಲೆಯುದುರಿ ಮಣ್ಣೊಡಲಿಗೆ,

ಕೊಳೆತು ನೀರಜೊತೆ ತಾ ಸೇರಿ,

ವಿರೂಪದಿ ಗೊಬ್ಬರಗುಂಡಿಯ ದಾರಿ..

ಎದುರಾದ ಎರೆಹುಳದ್ದೊಂದು ಪ್ರಶ್ನೆ.



"ಬುದ್ಧನೇ, ಬದ್ಧನೇ, ಸಿದ್ಧನೇ,

ಯುದ್ಧವೇ, ಹುದ್ದೆಯೇ, ಪ್ರಸಿಧ್ಧಿಯೇ,

ಸತ್ಯವೇ, ವಿನಯವೇ, ಜಯವೇ,

ಎಲ್ಲಿದೆ ಅಳಿಯದುಳಿಯುವ ಹಿರಿಮೆ?"



"ಬೀಜ ಮೊಳೆತು ಹಲಕಾಲ ನಾ

ಮಣ್ಣು, ನೀರು, ಬೆಳಕೊಳಗ ಜೀವಬಿಂದು.

ಆಜ್ಞೆಹೊರಟು ಹೊರಗಿಣುಕಿದ ಕ್ಷಣ

ನಾ, ನನದು, ನನಗೆಂಬ ಹಮ್ಮುಬಿಮ್ಮು.



ತೊಟ್ಟಿನಾಧಾರ, ಗಾಳಿ ಕರುಣೆಯ ಚಲನೆ,

ಬೇರುಣಿಸಿದ ನೀರು, ಕಾಂಡ ತಂದನ್ನ.

ನಾನೆಂದರೆ ಆಕಾರಬಣ್ಣ - ಹುಚ್ಚುಕಲ್ಪನೆ.

ಅಲ್ಲದ್ದು ಭ್ರಮೆಯ ಕೋಟೆಯಲಿ ಜೋಪಾನ.



ಈಗ ಕಾಣುವ ಇದು ಮಾತ್ರ ಶ್ರೇಷ್ಠ

ಬಾಡಿ ಬೇಡವಾಗುದುರಿ, ಕೊಳೆತು, ನಾರಿ,

ಸಾಗುತಿರುವ ಒದುಗುವೆಡೆಗಿನ ದಾರಿ

ಭ್ರಮೆಯೆನಿಸುತಿಲ್ಲ ಅಳಿದೂ ಅಳಿಯದ ಪಾತ್ರ."



ನರನೆಂಬ ನಗಾರಿ.


-----------------------------

ಬಯಲು ಮಾಡಿಸುವಾತ ತಾ ಮರೆಯಲ್ಲಿ,

ಎಲ್ಲ ನೋಡಿ, ಸಾಗೆ ದಾರಿಗೊಡುತಿರುವ.

ತೄಣಮಾತ್ರ ಚಲಿಸಲಿಕು ಕಾರಣೀಭೂತ

ಹೀಯಾಳಿಸದೆ ಸದ್ದಿರದೆ ಎದೆಗಪ್ಪಿರುವ.



ಅದೇ ಅವನಂಶ ಈ ನರ

ತಪ್ಪು ಸಾರುವ ನಗಾರಿ

ನಾನಷ್ಟೆ ದೈವಾಂಶ, ಮಿಕ್ಕೆಲ್ಲ ವ್ಯರ್ಥ

ದೃಷ್ಟಿಗಿರೆ ಈ ಜಡ್ಡು, ನಾಶ ಸೌಹಾರ್ದ.



ಒಣಕಾಷ್ಠ ಹೆಣವಲ್ಲ, ಹಸಿರು ಕಳೆದುಸಿರು

ವೃದ್ಧಿಯವಕಾಶ ಹೊತ್ತ ತುಂಬುಬಸಿರು

ಇಟ್ಟು ಕೊರಡಲು ಕಾಲದಧೀನ ಕರ್ತವ್ಯ,

ಬೂದಿಯಲುದಿಸಿ ಹಸಿರು, ಬರೆವ ಜೀವಕಾವ್ಯ.



ನಾಡಿ ಗೊತ್ತಿಲ್ಲ, ಸಾವ ಸಾರುವ,

ವ್ಯಾಧಿ ಗೊತ್ತಿಲ್ಲ, ಮದ್ದು ಹೇಳುವ,

ಹಾದಿ ಗೊತ್ತಿಲ್ಲ, ಗುರಿ ನೇಮಿಸುವ,

ನರ ಸ್ವಯಂಘೋಷಿತ ಅರೆಸರ್ವಜ್ಞ.

 

ಕೊರೆವ ಹಸಿರ, ಬರೆವ "ಇಲ್ಲಬೇಡ"ಗಳ

ಮುರಿವ ಚಿಗುರ, ಬಿತ್ತಿ ಬರಿ ನೋವ.

ರುಚಿಕೆಟ್ಟ ನಾಲಿಗೆ, ಸಕ್ಕರೆಯೂ ಕಹಿಯೆ

ವಿಷವಾಗವನ ಕೊಲ್ಲುತಿದೆ ಜರೆವ ಹಸಿವೆ

Saturday, January 5, 2013

ಓದಬನ್ನಿ


---------------

ಶರಧಿಯಲೆ ಮೇಲೊಂದು ಹಾಳೆ,

ಒದ್ದೆ, ಆದರೆ ಮುದ್ದೆಯಾಗಿಲ್ಲ.

ಉಳಿಯಲಾರದೆಡೆ ತೇಲುತ

ತಾನಾಗುಳಿದು ಸಾಗಿದೆ



ಉಬ್ಬರದಬ್ಬರ, ಮೆಲ್ಲ ಬಳುಕುವಿಕೆಗೆ

ಹಗಲ ಗಾಂಭೀರ್ಯ, ಇರುಳ ಮೌನಕೆ,

ಜನಜಾತ್ರೆಗೆ, ಏಕಾಂತಕೆ

ರವಿಕಿರಣದ ಬಿಸಿ, ತಿಂಗಳನ ತಂಪಿಗೆ,

ಚಂದ್ರಿಕೆಯ ಹಾಲುಡುಗೆ, ಅದಿಲ್ಲದ ಕಪ್ಪಿಗೆ.

ಹೀಗೆ ಲಕ್ಷ ಅಕ್ಷರ ಇಳಿಸಿಕೊಂಡಿದೆ.



ದಡ ಮುಟ್ಟುವ ಅಲೆಯ ತವಕಕೆ,

ಜೊತೆಬಂದ ಕರಟದ ಖಾಲಿತನಕೆ,

ಧಾವಿಸುವ ವೇಗಕೆ, ಉದ್ವೇಗಕೆ,

ಮತ್ತೆ ಮುಟ್ಟಿದ ಕ್ಷಣ ಭ್ರಮನಿರಸನಕೆ,

ತಗ್ಗಿದ ವೇಗ, ನೀರಗುಳ್ಳೆಯ ಹುಟ್ಟಿಗೆ

ಸಾಕ್ಷಿಯಾಗಿ ಪ್ರತಿ ಏರಿಳಿತಕೆ.





ಓದಬನ್ನಿ ಅಕ್ಕರವೊಂದೂ ಅಳಿಸಿಲ್ಲ

ವಿದ್ಯೆಯಲ್ಲ, ಚರಿತ್ರೆಯಲ್ಲ,

ಕತೆಯಲ್ಲ, ಗೀತೆಯಲ್ಲ.

ಬರಹ ಹಾಳೆಯ, ಅಲೆಯ ಬದುಕು..

ಸಾರಿ ನೀಡಿದ್ದು ಸಂದೇಶವಲ್ಲ,

ತಾನಾಗುಳಿವ ಸತ್ವದಮೃತದ ಗುಟುಕು.

















Friday, January 4, 2013

ಏಕೆ ಮತ್ತು ಹೇಗೆ???

------------------

ಬಾಯಲ್ಲಿ ಜರಡಿಯಿರಲಿ ತಮ್ಮಾ...


ಈ ನೆಲದಿ ನಾವು ನಿನ್ನಣ್ಣಂದಿರು,

ಕಣ್ತೆರೆದು, ತೆರೆಸಿದ್ದು ನಮ್ಮಜ್ಜ

ನೋಡಬಂದು ತಣಿದದ್ದು ನಿನ್ನಜ್ಜ

ನಮ್ಮ ಹೆತ್ತವಳು, ನಿಮ್ಮ ಸಾಕಿದಳು.


ಅಭಿವಂದನೆಗೆಂದು ಚಾಚಿದ ಕೈ,

ಬೆರಳೆಡೆಯಲಿ ತೂರಿಬಂದ ನಿನಗೆ

ಅಂಗೈಗೆರೆ ಕೊರೆದು, ತಿದ್ದಿತೀಡುವ

ಕನಸೀಗ ಏಕೆ ಮತ್ತು ಹೇಗೆ??


ಎಸರಿಗಿತ್ತು ತಿನಿಸಿ ಬೆಳೆಸಿದ ನಗುಮೊಗ,

ಅದರ ಬಿಂಬದೊಂದು ಬಿಂದು ನಿನಗೆ

ಮುಗಿಬಿದ್ದು ಮುಖಮೂತಿ ತಿರುಚುವ

ಆಸೆಯೀಗ ಏಕೆ ಮತ್ತು ಹೇಗೆ??


ಅಡಿನಡೆಸಿ, ಮುಡಿಸವರಿ, ನೆಲೆಯಿತ್ತೆದೆ,

ಆ ನೆಲದೊಂದು ಮಣ್ಣಕಣ ನಿನಗೆ,

ಅದಬಗಿದು ಅಧಿಪತ್ಯ ಸಾಧಿಸುವ

ತೆವಲೀಗ ಏಕೆ ಮತ್ತು ಹೇಗೆ??


ಬಿಗಿಹಿಡಿದ ಅಭಿವ್ಯಕ್ತಿ ಮುತ್ತಹಾರ,

ಸಡಿಲಾದರದೆ ನೋಡು ಮೃತ್ಯುದ್ವಾರ..

ನಿನ್ನ, ನನ್ನವರು ನಮ್ಮ ನೋಡದವರು

ನೋಯ್ವರು, ಸಾಯ್ವರು ನಿನ್ನ ಅಜಾಗ್ರತೆಗೆ.


ವಾಕ್ಸ್ವಾತಂತ್ರ್ಯ ಆತ್ಮರಕ್ಷಣೆಗೆ,

ರಕ್ತಪಾತಕಲ್ಲ, ತಡೆತಡೆದು ನಡೆ, ನುಡಿ.

ಗಾಯವಿರದೆಡೆ ರಕ್ತದ ಹರಿವಿಗೆ

ಋಣಸಂದಾಯ ಸುಲಭವಲ್ಲ, ತಿಳಿ.








ಸಂತೆ


-----------------

ಸಂತೆ ನೆರೆದಿದೆ ಜಗದಗಲ,

ಅಲ್ಲಿದ್ದಿಲ್ಲಿದ್ದಲ್ಲ, ಅದಕೆಲ್ಲೆಯಿಲ್ಲ.

ಬೆಲೆ, ವೇಳೆ ನಿರ್ದಿಷ್ಟವಲ್ಲ,

ತೆರೆದಾಗಿದೆ, ಮುಚ್ಚ್ಚುವುದಿಲ್ಲ.



ಹೆಸರಿದೆ, ಅನುಭವಸಂತೆ....

ಹೊರಗಿದ್ದಲ್ಲದೆ ಒಳಗಣ್ಣಿಗೂ ಸಲುವ

ರಾಶಿರಾಶಿ ಸರಕಿದೆ,

ಎಲ್ಲೋ ಒಮ್ಮೊಮ್ಮೆ ಆಯ್ಕೆಯೂ ಇದೆ.



ಸತ್ಯ, ನಿಷ್ಠೆ, ಪ್ರೀತಿ, ಸೌಜನ್ಯ

ತುಂಬಿರುವ ಪುಟ್ಟ ಚೀಲಗಳು.

ಸುಳ್ಳು, ನೋವು, ದೌರ್ಜನ್ಯ

ತುಳುಕುವ ಭಾರೀ ಮೂಟೆಗಳು.



ನಗು, ಚೆಲುವು-ಒಲವು ಗ್ರಾಮ್ ಲೆಕ್ಕದಲ್ಲಿ,

ಅಸಮಾನತೆ, ಅಸಹಾಯಕತೆ ಕೆಜಿಗಟ್ಟಲೆ.

ಹಣದ ಝಣಝಣವಿಲ್ಲ, ಚಿಲ್ಲರೆಯ ಗೋಜಿಲ್ಲ,

ಅಲ್ಲಿ ಕೊಂಡದ್ದಿಲ್ಲಿ, ಇಲ್ಲಿದ್ದಲ್ಲಿ ವ್ಯಾಪಾರ.



ಹೊರಗೊಬ್ಬ ಕೂತಾತ ಧಣಿಯಿದಕಂತೆ.

ಹೊಕ್ಕ ಹೆಜ್ಜೆಹೆಜ್ಜೆಗು ಬಾಡಿಗೆಯಿದೆಯಂತೆ.

ಹಾದವಗೆ ಪ್ರವೇಶ ಅನಿವಾರ್ಯವಂತೆ,

ನಿಂತುಸಿರಿಗೇ ಹೊರದಾರಿ ತೆರೆವುದಂತೆ.



ಚಕ್ರವ್ಯೂಹವಂತೆ, ಬಿಡುಗಡೆ ದೂರವಂತೆ.

ಕಣ್ಣೀರು, ಕಣ್ಣು ಮಂಜಾಗಿ ದಾರಿತಪ್ಪುವುದಂತೆ.

ಕಂಗೆಡಿಸೆ ಭಾರ, ಸೋಲು ಖಚಿತವಂತೆ.

ನಗುವಿನಾಧಾರವೇ ಹಗುರಾಗಿಸುವುದಂತೆ.







Thursday, January 3, 2013

ಹುಟ್ಟಿಂದ ಕಲ್ಲದು

----------------

ಸಾಗಿದ್ದೆ ದಾರಿ, ತಲುಪಿದ್ದೆ ಗುರಿ.

ಸರಾಗಹಾದಿ, ಇಂತಿಪ್ಪ ಯಾನದಲೊಮ್ಮೆ

ಧುತ್ತೆಂದೊಂದು ಬಂಡೆ...

ಶತಮಾನದಿಂದಿತ್ತು, ಹಾಗೇ...

ಅಲುಗದೆ, ನುಡಿಯದೆ, ಅರಳದೆ, ನೋಯದೆ...

ಇಟ್ಟಿರಿಸಿದಂತೆ, ಗಮನದೊಳ-ಹೊರಗಿರದಂತೆ.

ನಡಿಗೆಗದು ಅಡ್ಡ... ಕಣ್ಣುರಿ......



ಸುತ್ತಿಗೆಯ ತಂದೊಮ್ಮೆ, ಮದ್ದುಗುಂಡಿಂದೊಮ್ಮೆ

ಒಡೆವ ಹುನ್ನಾರ....ಸ್ಥಿರವಸ್ಥಿರಕೆ ಬಾಗಿದಂತೆ

ಒಡೆಯಿತು.... ಅಡ್ಡವಿಲ್ಲವಾಯಿತು..

ಇಲ್ಲವಾಗಿಸಿದ ಜಯದ ಭ್ರಮೆಯದಕೆ,

ಇಲ್ಲವಾಗದುಳಿದ ನಗೆಯಿದಕೆ.....

ದೊಡ್ಡದೀಗ ಸಣ್ಣದಷ್ಟೇ..

ಪುಟ್ಟ ಪುಟ್ಟ ಕಣಕೂ ಅದೇ ಕಲ್ಲೆದೆ, ಗಟ್ಟಿತನ

ಹುಟ್ಟಿಂದ ಕಲ್ಲದು, ಒಡೆದು ಮತ್ತೂ ಕಲ್ಲೇ..

ನೀರೆಂದಾದರೂ ಆದೀತೆ?

----------------------------

ಹೀಗಾಗಬಹುದಿತ್ತು..

--------------------

ನಗೆಯಲ್ಲದ ನಗುವೊಂದು

ಹನಿಯಿಸಿ, ಬೆಳೆಸಿದೆ ನೋವಬೆಳೆ.

ಹೊತ್ತದ್ದು ಭಾವಗರ್ಭ,

ಮೊಳೆಸಿದ್ದು ನಾನೆಂಬ ನಾನೇ..

ಬಿತ್ತಿದ್ದ್ಯಾರು???

ತಪ್ಪು ದಾಟಿಸಿ ಹಗುರಾಗುವ ನಾನು,

ನೀನೆಂದು ತೋರುವ ಬೆರಳ ದೃಷ್ಟಿ

ಅಲ್ಲಿ ಇಲ್ಲಿ ಎಲ್ಲೂ ಇಲ್ಲದೆಡೆಗಿದೆ.

ನಾನಿಲ್ಲದೆಡೆ ಬೀಜ ಬಿತ್ತಲ್ಪಟ್ಟಿದ್ದರೆ,

ನಿರ್ವಿಕಾರತೆ ಹನಿಯಿಸಿದ್ದರೆ,

ನಿನ್ನ, ಅವರೆಲ್ಲರ ನಗುವೇ ಪೋಷಿಸಿ,

ನಲಿವೆಂಬ ಹೂವಿನ ಗಂಧದಲೆಯಲಿ ನಾ

ಕಂಡೂ ಕಾಣದಂತಿಣುಕಬಹುದಿತ್ತು...

ಹೀಗಿರಲಿ ಗೂಡು.


---------------------
ದಾಂಧಲೆಕೋರ ಗಿಡುಗ,

ಸುಮ್ಮನೆ ಹೋಗಲಿಲ್ಲ.

ಗುಬ್ಬಿಮರಿ ಕಚ್ಚಿಕೊಂಡೇ ಹೋಯಿತು..

ಗೂಡು, ಮೆತ್ತೆ, ಎಲ್ಲ ಮುತುವರ್ಜಿಯಿತ್ತು

ಇದ್ದು ಇಲ್ಲದಂತಿರುವ ವಿದ್ಯೆಯಿರಲಿಲ್ಲ

ನಾ-ನೀನೆನುತ ಚಿವ್ ಗುಟ್ಟಿದ್ದೇ...

ಮಾತಲ್ಲ, ಮೃತ್ಯು...

ಗುಟುಕಿಗೆ ತೆರೆದ ಬಾಯಿ ಸದ್ದಲ್ಲದ್ದಿ,

ಇರುವು ಬಯಲಾಗಿ, ತೆರವು ಬಾಳು ..



ಪ್ರೀತಿಯೊಂದು ಗುಬ್ಬಚ್ಚಿ.

ಎದೆಗೂಡೊಳಗೆ ಬೆಚ್ಚಗಿತ್ತು.

ನೋವು ಅದರುಸಿರು,

ಕಂಬನಿ ನರನಾಡಿಯ ರಕ್ತ.

ಕಣಕು, ಹನಿಗು ಲೆಕ್ಕ ಕೇಳಿ,

ನಂದು ನಿಂದೆಂತು... ಸದ್ದೇ ತಾನಾಗಿ.

ಕಾಲ ಕಾಯುತಿತ್ತು ಗಿಡುಗನಾಗಿ,

ಸುತ್ತಿಸುತ್ತಿ ಸಾಗಿ ಬಳಿ

ಹಿಡಿತ ಕೊರಳೊತ್ತಿತು..ಈಗ

ಉಸಿರಿಲ್ಲ, ನಾಡಿಯಿಲ್ಲ, ಪ್ರೀತಿ ಸತ್ತಿತು.



ಗೂಡಿನೊಡೆಯಾ,

ಭದ್ರ ಗೂಡೊಳಗಿರಲಿ

ಮೌನದ ನಡುವಿರಲಿ. ಮೃದುವಾದುದು..

ಸದ್ದಲಿ, ಜಿದ್ದಲಿ ಬಯಲಾದೀತು

ಹೊರಗು ನಲುಗಿಸೀತು,

ಅರಿವಿಲ್ಲದೆ ಅದೇ ಇಲ್ಲವಾದೀತು....







Wednesday, January 2, 2013

ಹೀಗೊಂದು ಸುದ್ಧಿ


------------------------

ಇಂದು ಅವನಿಗವ ಎಂದಿಗಿಂತ ಸನಿಹವಂತೆ

ಕೋಟಿ ಮೈಲಲು ಸಾಮೀಪ್ಯ ಕಾಣಬಲ್ಲ ಪ್ರೇಮ.

ಅವನೊಡಲ ಬೆಂಕಿಯ ಕಣ್ಕುಕ್ಕುವ ಶಾಖವೂ

ಇವಳೆದೆಗಿಂದು ನಿನ್ನೆ ನಾಳೆಗಿಂತ ತಂಪಂತೆ.

ಮೇಲವನ ಕಣ್ಣುಮುಚ್ಚಾಲೆಯಾಟಕೆ

ಕೆಳಗಿವಳು ದಿನಚರಿ ಬರೆದಿಟ್ಟಳು.

ಅವ ಕಣ್ಣುಬಿಟ್ಟಲ್ಲೆ ತಾ ಬೆಳಗ ಕಂಡಳು,

ಅತ್ತ ತಿರುಗಲು ಕಣ್ಮುಚ್ಚಿ ನಿದ್ರಿಸಿದಳು.

ನೀ ಮೇಲೆ, ನಾ ಕೆಳಗೆಂದಿವಳು ಅಳಲಿಲ್ಲ,

ನಾ ಮೇಲೆ ನೀ ಕೆಳಗೆಂದವ ತುಳಿಯಲಿಲ್ಲ

ಎದುರುಬದುರಾದರು, ಮುಗುಳ್ನಕ್ಕರು,

ಪ್ರೇಮಿಸಿದರು, ಸಂಧಿಸಬಯಸಿದರು,

ದೂರವಿದ್ದೇ ಒಂದಾದರು.

ನಗುವ ಹುಟ್ಟಿಸಿ, ಅದನೇ ಬದುಕಿಸಿದರು.

ಬಾನತೇರ ಬಾಗಿಸಿ ಇವಳೆಡೆಗೆ,

ತಲುಪಲಾರದ ದೂರ, ಕ್ಷಣಿಕ ಮಿಲನದ ಸ್ವಪ್ನ

ಮಿಲನವಿಲ್ಲದೇ ಬಿಸಿಲುಬೆಳಕ ಸ್ಖಲಿಸಿ ಅವ,

ಅವಳೊಡಲ ತುಂಬಿ, ಅಸಂಖ್ಯ ಸಂತಾನ ಮೊಳೆಸುವ

ಸದ್ದಿಲ್ಲದ ಬಸಿರು, ಹೆರಿಗೆ.. ಕೋಟಿ ಸಲ ಹೊತ್ತುಹೆತ್ತೂ

ಅಮ್ಮನೆಂದಿವಳು ನಿರೀಕ್ಷೆ ಮಂಡಿಸಳು

ಅಪ್ಪನೆಂದವ ಹೆಸರೂ ಹಚ್ಚುವುದಿಲ್ಲ.

ಮಧ್ಯೆ ಬಂದು, ಮರೆಯಾಗಿಸುವ ಗ್ರಹಣಕೆ

ತಾಳ್ಮೆ, ನಂಬಿಕೆಯುತ್ತರವಿತ್ತವರು.

ಇಂದು ಎಂದಿಗಿಂತ ಸನಿಹ ಬರುವರಂತೆ,

ಮದುವೆಯಿಲ್ಲದ ದಾಂಪತ್ಯ, ಹೆಸರಿಲ್ಲದ ಸಂಬಂಧ

ಮಿಲನವಿಲ್ಲದ ಪ್ರೀತಿ, ಸ್ವಾರ್ಥವಿಲ್ಲದ ಪ್ರೇಮ

ಸಂಭ್ರಮಿಸುವುದಕೆ ಸಾಕ್ಷಿಯಾಗುವಾ

ಸಾಧ್ಯವಾದರೆ ಸ್ವಲ್ಪ ಮೊಗೆದುಕೊಳ್ಳುವಾ,,,,

(ಇಂದು ಸೂರ್ಯ ಭೂಮಿಗೆ ಎಂದಿಗಿಂತ ಹತ್ತಿರಕ್ಕೆ ಅಂದರೆ ೧೪ ಕೋಟಿ ಕಿ ಮೀ ಅಂತರದಲ್ಲಿ ಇರ್ತಾನಂತೆ, ಅವನ ಅತ್ಯಧಿಕ ಬೆಳಕಿನ ಇಂದಿನ ಮಧ್ಯಾಹ್ನವೂ ಭೂಮಿಯ ಓರೆ ಅಕ್ಷದ ಕಾರಣದಿಂದ ತಾಪಮಾನ ಹೆಚ್ಚಾಗದಂತೆ ಇರುವುದಂತೆ. ಇವತ್ತಿನ ದಿನಪತ್ರಿಕೆಯಲ್ಲಿ ನನ್ನನ್ನ ತುಂಬಾ ಸೆಳೆದ ಸುದ್ದಿ...)



.

























ಬೆಳಗು


--------------

ಮುಂಜಾವಿನ್ನೂ ಬೆಳಕಾಗಿಲ್ಲ ,

ತಿರುತಿರುಗಿ ನೋಡುತಾ, ಬೆಳಕಿಗಡಿಯಿಟ್ಟ ದಿನ

ಅಮ್ಮನಿಲ್ಲದ ಶಾಲೆಗಡಿಯಿಡೋ ಕಂದನಂತೆ

ಆಗಸದಿ ಮಿನುಗುವ ಒಂಟಿ ಚುಕ್ಕಿ

ಒಲೆಯುರಿಯೆದುರಿನ ಒಂಟಿ ಮನದಂತೆ.

ತಂಪನಾವರಿಸಿ ಬೀಸೋ ಮೆಲುಗಾಳಿ

ಚಾದರದಡಿ ನಿದ್ದೆ ಹೊದ್ದೆಚ್ಚರದಂತೆ.

ಬಾಗಿಲ ಚಿಲಕ, ಅಂಗಳದ ನೀರಿನ ಸದ್ದು,

ರಾತ್ರಿ ಕನಸಿನ ಸವಿಮೆಲುಕಿನಂತೆ.

ಮೆತ್ತನೇರುವ ನೇಸರನ ನಸುಕೆಂಪು,

ಹಾಸಿಗೆ ಏನೋ ನೆನಪಿಗೆ ನಾಚಿದಂತೆ .

ನೀಲಿಯಿಂದಿಣುಕುವ ರವಿಕಿರಣಗಳು

ಇಚ್ಛೆಯಿಲ್ಲದೆ ಗಡಿಯಾರ ಹೊಕ್ಕ ಕಣ್ಣಂತೆ.

ಹಕ್ಕಿಚಿಲಿಪಿಲಿ, ಕರುಕೊರಳಿನ ಗಂಟೆ

ಮನಸೆದ್ದು ಮೈಮುರಿದ ನೆಟಿಗೆಯಂತೆ.



ಕ್ಷಣಕ್ಷಣವು ಬದಲು ಬಣ್ಣ, ಚರ್ಯೆ ಬಾನಲಿ

ಏರಿ ಬಂದ ರವಿ ಭರವಸೆಯ ತೇರಲಿ

ಚುರುಕು ಬೆಳಕಿಗೆ ಎಳೆಬಿಸಿಲ ಒತ್ತು,

ದಿನಕೀಗ ರವಿಯ ಜೊತೆ, ದಾಪುಗಾಲು



ರವಿಯುದರ ಹಲಪದರ ಬೆಂಕಿಯಂತೆ

ಬೆಳಕಾಗಿಸಿ, ತಿಳಿಬಿಸಿಲಾಗಿಸಿ,

ಅದೇ ಜಗಕನ್ನವಂತೆ.

ಒಂದೊಂದುಯಕು ನೂರು ಅನುಭೂತಿ,

ಉರಿಯ ಮರೆಯ ನಗುವಿನ ಛಾತಿ

ಅಲ್ಲಿಲ್ಲ ತನ್ನುದ್ಧಾರದ ಭೀತಿ.

ಅದಕೆ ಹಂಚಬಲ್ಲ ಅಮಿತ ಪ್ರೀತಿ.



ನೂರು ಸಾಧನೆಯ ಹುಮ್ಮಸ್ಸು

ಕತ್ತಲೊಳಗಿದ್ದ ಎದ್ದುಬಂದ ಬೆಳಕಿಗೆ.

ಅರಿವ ಹೊರಗಿನದಲ್ಲ, ರವಿ ಕರ್ತೃವದಕೆ.

ಪವಾಡವಲ್ಲ, ಬರೀ ಕರ್ತವ್ಯಪರತೆ.

ಒಂದೊಂದು ಜೀವನ ನಿಂತನೆಲೆಯಲೆ

ಅಂಥದ್ದಾಗಲು ಬೇಕು ಮೌನತಪಸ್ಸು.





Tuesday, January 1, 2013

ಎದೆಯಿಂದಾಲಿಸು


------------------------

ತರಗೆಲೆಯುದುರುವ ಮೌನದಿ

ಚಿಗುರೆಲೆ ಹುಟ್ಟೋ ಪಿಸುಮಾತು.

ಮೊಗ್ಗರಳುವ ಮೌನದಿ

ದುಂಬಿಗಾಹ್ವಾನದ ಹಾಡು.

ಹೂವುದುರುವ ಮೌನದಿ

ಅಳುವ ತೊಟ್ಟ ಬಿಕ್ಕಳಿಕೆ.

ಮಂದಮಾರುತದ ಮೌನದಿ

ಗಂಧತೇರ ಯಾನಗಾನ.

ಬೆಟ್ಟ ಉಟ್ಟ ಗಾಢ ಮೌನದಿ

ದೇಗುಲದ ಗಂಟೆಯ ಮಾರ್ದನಿ.

ಗರ್ಭಗುಡಿಯ ದೈವೀಮೌನದಿ

ಭಕ್ತನ ಸವೆದ ಚಪ್ಪಲಿಯ ಸದ್ದು.

ಮನೆಯಂಗಳದ ಶಾಂತಮೌನದಿ

ಹೆಣ್ಮನದ ಕಣ್ಣೀರ ಭೋರ್ಗರೆತ.

ಆಗಸದ ಚಂದ್ರತಾರೆಯ ಮೌನದಿ

ಕತ್ತಲ ಅಸ್ಪಷ್ಟತೆಯಟ್ಟಹಾಸ.

ಕೆಡುಕು ಘಟಿಸದ ಇಂದಿನ ಮೌನದಿ

ನಾಳಿನ ಸಾಲುಸ್ಫೋಟಕದ ಗುಟ್ಟು.

ಪ್ರಕೃತಿಯ ನಗೆಯ ಮೌನದಿ

ಅಳಿವು ಮೊಳೆಯುತಿಹ ಡಂಗುರ.



ನನ್ನ ಮೌನದಲೂ ನಾನಿಲ್ಲ, ನೀನಿಲ್ಲ,

ನಿನ್ನೆನಾಳೆಗಳಿಲ್ಲ.

ಕೇಳಬಲ್ಲೆಯಾದರೆ ಕಿವಿಯಲ್ಲ,

ಎದೆಯಿಂದಾಲಿಸು...ಕಲ್ಪಿಸದಿರು,

ಮೌನವೂ ಇಲ್ಲಿ ಮೌನವಲ್ಲ....

ಹುಟ್ಟಿದ್ದರೂ, ಉಸಿರಿದ್ದರೂ, ಸಾವಿದ್ದರೂ

ಅದನನುವಾದಿಸು,

ನಿಜವನನುಮೋದಿಸು.