Wednesday, January 9, 2013

ಅಳಿಯದುಳಿಯುವ ದಾರಿ


-------------------

ತರಗೆಲೆಯುದುರಿ ಮಣ್ಣೊಡಲಿಗೆ,

ಕೊಳೆತು ನೀರಜೊತೆ ತಾ ಸೇರಿ,

ವಿರೂಪದಿ ಗೊಬ್ಬರಗುಂಡಿಯ ದಾರಿ..

ಎದುರಾದ ಎರೆಹುಳದ್ದೊಂದು ಪ್ರಶ್ನೆ.



"ಬುದ್ಧನೇ, ಬದ್ಧನೇ, ಸಿದ್ಧನೇ,

ಯುದ್ಧವೇ, ಹುದ್ದೆಯೇ, ಪ್ರಸಿಧ್ಧಿಯೇ,

ಸತ್ಯವೇ, ವಿನಯವೇ, ಜಯವೇ,

ಎಲ್ಲಿದೆ ಅಳಿಯದುಳಿಯುವ ಹಿರಿಮೆ?"



"ಬೀಜ ಮೊಳೆತು ಹಲಕಾಲ ನಾ

ಮಣ್ಣು, ನೀರು, ಬೆಳಕೊಳಗ ಜೀವಬಿಂದು.

ಆಜ್ಞೆಹೊರಟು ಹೊರಗಿಣುಕಿದ ಕ್ಷಣ

ನಾ, ನನದು, ನನಗೆಂಬ ಹಮ್ಮುಬಿಮ್ಮು.



ತೊಟ್ಟಿನಾಧಾರ, ಗಾಳಿ ಕರುಣೆಯ ಚಲನೆ,

ಬೇರುಣಿಸಿದ ನೀರು, ಕಾಂಡ ತಂದನ್ನ.

ನಾನೆಂದರೆ ಆಕಾರಬಣ್ಣ - ಹುಚ್ಚುಕಲ್ಪನೆ.

ಅಲ್ಲದ್ದು ಭ್ರಮೆಯ ಕೋಟೆಯಲಿ ಜೋಪಾನ.



ಈಗ ಕಾಣುವ ಇದು ಮಾತ್ರ ಶ್ರೇಷ್ಠ

ಬಾಡಿ ಬೇಡವಾಗುದುರಿ, ಕೊಳೆತು, ನಾರಿ,

ಸಾಗುತಿರುವ ಒದುಗುವೆಡೆಗಿನ ದಾರಿ

ಭ್ರಮೆಯೆನಿಸುತಿಲ್ಲ ಅಳಿದೂ ಅಳಿಯದ ಪಾತ್ರ."



2 comments:

  1. ಈಗ ಕಾಣುವ ಇದು ಮಾತ್ರ ಶ್ರೇಷ್ಠ

    ಬಾಡಿ ಬೇಡವಾಗುದುರಿ, ಕೊಳೆತು, ನಾರಿ,

    ಸಾಗುತಿರುವ ಒದುಗುವೆಡೆಗಿನ ದಾರಿ

    ಭ್ರಮೆಯೆನಿಸುತಿಲ್ಲ ಅಳಿದೂ ಅಳಿಯದ ಪಾತ್ರ."

    ಚಂದನೆಯ ಸಾಲುಗಳು.... ಅರ್ಥವತ್ತಾಗಿದೆ...
    ನಿತ್ಯಸತ್ಯತೆಯೇ ನಾವೆಲ್ಲಾ ಕಾಣೋದು... ಎಂದೋ ಮಾಡಿದ್ದು...
    ಇಂದಿನ ದಿನಕ್ಕಾಗಿ ಮಾತ್ರ ಹೋರಾಡುವ ಜನರ ಮಧ್ಯೆ ಕಾಣಬಯಸಿದರೆ ನಮ್ಮದೇ ತಪ್ಪಾದೀತು....

    ReplyDelete
  2. 'ಎಲೆ ಮರೆ ಕಾಯಿಗಳ ಜೊತೆ ಮಾತುಕತೆ' ಅಂಕಣದಲ್ಲಿ ನಿಮ್ಮ ಪರಿಚಯ ಲೇಖನವಿದೆ.

    ಅನುರಾಧಾಜೀ ಅವರು ಸೂಕ್ಷ್ಮ ಸಂವೇದನೆ ಇರುವ ಕವಿಯತ್ರಿ.

    ಅವರನ್ನು ನನಗೆ ಪುನರ್ ಪರಿಚಯಿಸಿದ ನಿಮಗೆ ನನ್ನ ಶರಣು.

    http://badari-poems.blogspot.in

    ReplyDelete