Thursday, October 20, 2016

(ನಾಚು - ಕಾಡಿಗೆ - ಅಂಚು - ಬೆಂಕಿಪೊಟ್ಟಣ)


ಕತ್ತಲಲಿ ಕನಸೇ ಕದಡಿದ್ದಿರಬೇಕು;
ಘನಗಾಂಭೀರ್ಯಕ್ಕೆ ಕಚಗುಳಿಯಿಟ್ಟಂತಾಗಿ
ನಕ್ಕೂನಗದ ಹಾಗದು ಬಿರಿವಾಗ
ನೆನಪೊಂದು ಒಳಗಿಂದಿಣುಕುತ್ತದೆ;
ಇಷ್ಟಗಲ ಕಣ್ಣರಳಿಸುವಾಗ ಅದು,
ಕರಗಿ ನೀರಾಗಿ ಹರಿದ ಕಾಡಿಗೆಯ ಅವಶೇಷ
ಅಲ್ಲಲ್ಲಿ ಬರೆದ ಗೀಟುಗೆರೆಗಳೊಂದಾಗಿ
ಕಣ್ಣಂಚಿನ ಹೊಸಿಲು ಬರೆಯುತಾವೆ!

ಕಡ್ಡಿಯೊಂದು ತನ್ನ ತಾನೇ ಕೀರಿ
ಕಿಡಿ ಹೊತ್ತಿಸುವಾಗ
ಬೆಂಕಿಪೊಟ್ಟಣ ಬೆಳಕ ಹೆರುತ್ತದೆ.
ಆ ಹುಟ್ಟಿನಡಿ ಎಲ್ಲ ಸ್ಪಷ್ಟವಾಗುವ ನಿಟ್ಟಿನತ್ತ...

ಹೊಸಿಲಲರಳಿದ ಬಳ್ಳಿಹೂ ನಡು ಬಿಡುಬೀಸಾಗಿ
ಬೇಡವೆಂದರೂ ಅಲ್ಲಲ್ಲಿ ಗೋಚರಿಸುವ ಹೆಸರು..
ಅಂಗೈಲರಳಿದ ಮದರಂಗಿಯ ನಡು ಅಡಗುವದೇ ಹೆಸರ
ಅಂದಿನಂತೆಯೇ ನಾಚುತಾ ಹುಡುಕಬಯಸುವ ಮನಸು..
ಮನಸು ಮರೆತದ್ದೋ ನಾಚುವುದನ್ನು;
ಹೆಸರು ಮರೆತದ್ದೋ ಪುಳಕ ಹುಟ್ಟಿಸುವುದನ್ನು!
ಎರಡೂ ನಿರತ ಹಿಡಿಹಿಡಿಯಾಟದಲಿರುವಾಗಲೇ
ನಗು ಖಾಲಿಯಾಗಿ, ಕಾಣೆಯಾಗಿ
ಘನಗಾಂಭೀರ್ಯ ಮತ್ತೆಚ್ಚೆತ್ತುಕೊಳುತದೆ!

Friday, October 14, 2016

(ಎಚ್ಚರ - ಮೊಣಕಾಲು - ಗುಡ್ಡ- ಗೊತ್ತಿದ್ದೇ)ಗೊತ್ತಿದ್ದೂ ಮತ್ತಲ್ಲಿಗೇ
ರಾತ್ರಿಯಲೂ ಸ್ಪಷ್ಟ ಕಾಣುವ ಬಾವಿಯ ಬಳಿಗೇ,
ಹಚ್ಚಹಗಲಲಿ ಚಲಿಸುವ ಪಾದ ಎಡವಿದ್ದೋ
ಹಾದಿಯ ಸುಳ್ಳುಪಳ್ಳು ಮುಳ್ಳಾಗಿ ಕಾಲ್ತೊಡರಿದ್ದೋ,
ಮುಗ್ಗರಿಸಿದ ಶಬ್ದಕೆಲ್ಲವೂ ಬೆಚ್ಚಿಬಿದ್ದಿವೆ!
ಎಲೆ ಪ್ರೀತಿಸುವ ಮನಗಳೇ,
ಹತ್ತಿಸುತ್ತಾರೆ ಗುಡ್ಡ ಮಾತಿನೇಣೀಯಲೇ,
"ನೀನೇ ಇಂದ್ರ ನೀನೇ ಚಂದ್ರ!"
ತಿರುಕನ ಜೋಳಿಗೆಯಲೂ
ಚಿನ್ನದ ಗಣಿಯ ವಿಳಾಸ ತೋರಿಸುತಾರೆ!
ಎಚ್ಚರ ಮೈಮರೆಯುವ ಮನಸುಗಳೇ,
ಪಾಪಿ ಹೋದಲ್ಲಷ್ಟೇ ಅಲ್ಲ;
ತೀರಾ ನಂಬುವವರು ಹೋದಲ್ಲೂ
ಮೊಣಕಾಲುದ್ದ ನೀರೇ ಇರುವುದು...
ಗೊತ್ತಿದ್ದೇ ಮತ್ತೆಮತ್ತೆ ಬೀಳದಿರಿ
ನಂಬಿಸುವ ಮಾತಿನ ಹೊಂಡಕೆ.
ತಿಳಿದವರು ಹೇಳಿದ್ದಾರೆ,
ಪರಾಂಬರಿಸಿ ನೋಡಬೇಕು
ಕಂಡರೂ ಕಣ್ಣಾರೆ, ಕೇಳಿಯೂ ಕಿವಿಯಾರೆ..


(ಸಿಂಹಸ್ವಪ್ನ- ನಡುರಾತ್ರಿ-ದಳ-ಬಹುಮಾನ)

(ಸಿಂಹಸ್ವಪ್ನ- ನಡುರಾತ್ರಿ-ದಳ-ಬಹುಮಾನ)

ಚಂದ್ರನ ತೆಕ್ಕೆಯಲೆತ್ತಿ ತಂದು ಸಂಜೆ,
ಕತ್ತಲ ಕೈಗಿತ್ತು ಹೋಗಿತ್ತು.

ಹೆಗಲಲಿ ಚಂದ್ರನ ಹೊತ್ತು ಕತ್ತಲು
ಮೆಲ್ಲ ನಡುರಾತ್ರಿ ತಲುಪಿತ್ತು.

ಕಂದನ ಸಿಂಹಸ್ವಪ್ನವೇ ಇರಬೇಕು;
ಕನಸಲೇನೋ ಒಂದು ಮತ್ತೆಮತ್ತೆ ಬೆಚ್ಚಿಬೀಳಿಸುತಿತ್ತು.

ಕೊಳದೆದೆಯಲೊಂದು ಕಮಲವರಳುತಿತ್ತು
ದಳದಳಗಳ ನಡು ಬಣ್ಣ ಮೈದಾಳುತಿತ್ತು!
ಕಣ್ಣರಳಿತ್ತು; ಬಣ್ಣಭಾವ ಸೇರಿಯೊಂದು ಹಾಡು;
ಹಾಡ ಗುನುಗುತಾ ಕತ್ತಲು ಮೈಮರೆತಿತ್ತು.

ಕಳ್ಳಚಂದ್ರ ಜಾರಿ ಮೆಲ್ಲ ಕನಸೊಳನುಸುಳಿ
ಭಯದ ಬಳಿಹಾಯ್ದಿದ್ದ;
ತಂಪಾಯ್ತು ಸಿಂಹವೂ, ಸ್ವಪ್ನವೂ,
ಮತ್ತು ಕಂದನ ಕಣ್ಣೂ...

ಮುಚ್ಚಿದ ಕಣ್ಣಿಗೊಂದು ಮುತ್ತಿತ್ತು,
ನಗುವ ತುಟಿಗಿಷ್ಟು ಹೊಳಪಿತ್ತು
ಹೊರಹೊರಟಾಗ ಚಂದ್ರ,
ಕೊಳದೊಡಲಲಿ ಮತ್ತರಳತೊಡಗಿತ್ತು ಚಂದ್ರಬಿಂಬ!

ಗುಲಾಬಿಪಕಳೆ ಗುಂಗಿಂದಾಚೆ ಬಂದಾಗ ಕತ್ತಲು,
ಚಂದ್ರನಾಗಲೇ ಏರಿಯಾಗಿತ್ತು ಮತ್ತೆ ಕತ್ತಲ ಹೆಗಲು!

ಲೋಕ "ತಣಿಸುವ ತಂಗದಿರನವ" ಅಂದರೆ,
ಕಂದ ಕರೆಯಿತು ಚಂದಮಾಮನೆಂದವನ;
ಇದಕಿಂತ ಬೇಕೇ ಮಿಗಿಲೊಂದು ಬಹುಮಾನ?

Saturday, October 1, 2016

ಬಾ ಬಂದುಬಿಡು ಇಲ್ಲಿ
ಬಿಕ್ಕುವೊಂದು ಬಾನಿನಂಥ ಎತ್ತರವೇ,
ಹೊತ್ತು ತೊಟ್ಟಿಲಾಗಲು ಹವಣಿಸಿದೆ
ಮತ್ತು ಮೌನ ಲಾಲಿ ಹಾಡಲು.

ನೀರವ ಬೆಟ್ಟದ ತುದಿಯಲೊಂದು
ಪಚ್ಚೆರಾಶಿ ಹಾಗೇ ಸುಮ್ಮನೆ ಕೂತಿದೆ.
ಪಿಸುನುಡಿವ ಗಾಳಿ ಬಡಿಬಡಿದು ಪ್ರತಿಧ್ವನಿಸುತಿದೆ,
"ನಗುವಿನಷ್ಟೇ ಸಮೃದ್ಧ ನಗದ ನೀನು!"

ಭೋರ್ಗರೆವ ಮಳೆ
ಕಲ್ಲಾಗಿಯೇ ಉದುರಲಿಬಿಡು ಎದೆಯ ಮೇಲೆ.
ನಿನ್ನುಸಿರ ಬಿಸಿಯ ಸತ್ಯಕೆ
ಕರಗಿ ನದಿಯಾದಾವು!

ಬೆರಗೊಂದು ಕರಗದ ಬಣ್ಣರಾಶಿ
ನೀ ಮೂಡುವ ಮುಳುಗುವ ಎರಡೂ ದಿಕ್ಕಲಿ!
ಮಣಿಯಲಿದೆ ಕಾಲ ತಿರುಗುಚಕ್ರದ ಓಟವ
ನೀ ಹಾಡಾಗಿಸುವ ಬಗೆಗೆ!

ಇರಲಿಬಿಡು
ಸಿಡಿಲುಮಿಂಚಲೂ ಚೆಲುವುಂಟು
ಬೆಳಕುಂಟು ಬಣ್ಣಗಳುಂಟು
ಅಪೂರ್ಪದ ಕಣ್ಣು ನನ್ನವು
ಬಿಂಬ ನೀನೆಂದೇ ಭಯಕೆ ಕುರುಡಾಗಿಬಿಟ್ಟವು!

ಬಾ ವಿರಮಿಸು ಇಲ್ಲಿ
ಗೂಡುದೀಪದ ಬಿಸುಪು
ಹಕ್ಕಿಹಾಡಿನ ಇಂಪು
ಮತ್ತು ನನ್ನ ಪ್ರೀತಿಯ ಕಂಪು
ಆರಿಸಲಿವೆ ಸುಡುಬೆಂಕಿ,
ಮೆತ್ತಲಿವೆ ಕೆಂಪು ಕೆಂಡಕೆ ತಂಪು!

ಹೊಗೆಸುರುಳಿಯಿಂದ ಹೊರಬಂದ ದಿಟದ ಘಮವೇ,
ಗಂಧಕಡ್ಡಿಯಾದರೂ,  ಮಂದಧೂಪವಾದರೂ
ಲೋಕವೀಗೀಗ ಹೇಳುವುದಿಷ್ಟೇ-
"ಹೊಗೆ ಹೊಮ್ಮುವುದು ಸುಟ್ಟಾಗಲೇ ತಾನೇ?"

ದೂರದ ಇಳಿಜಾರಲೊಂದು ರಾಗದ ಅವರೋಹಣ,
ಮುರಿದಂತಿದೆ; ಕೊಳಲ ಕೊರಳ ಅಪಶ್ರುತಿಯ ರಿಂಗಣ..
ಇರಲಿಬಿಡು:
ರಾಗವೆಂದರೆ ಆರೋಹಣಾವರೋಹಣಗಳ ಮೊತ್ತ;
ಕೊರಳೆಂದರೆ ಸ್ವರಾಪಸ್ವರಗಳ ಸಂತೆ!
ಬಳುಕುವ ಬೂದು ಚಂದವೇ,
ಏರುಬೀಳು ತಿದ್ದಿ, ಬಣ್ಣ ಹೊದಿಸಹೊರಡದಿರು.
ಲೋಕಕೀಗೀಗ ಕಾಣುವುದಿಷ್ಟೇ-
"ಹೊಗೆಯೆಂದರೊಂದು ನಿರ್ವರ್ಣಮೌನ!"

ಸಾಗುತಿರು ನೀ ಊರ್ಧ್ವಮುಖಿಯಾಗಿ
ಎದೆಗೊತ್ತಿಕೊಳುವ ಅದೇ ಉನ್ಮಾದವಾಗಿ!
ಹೊಕ್ಕುಬಿಡು ನಿಲ್ಲದೆಯೇ
ದಿಗಂತದ ಹೊಕ್ಕುಳಲಿ
ಅದ್ಭುತವೊಂದು ಪುಳಕವಾಗಿ!
ಕಣ್ಣಿಲ್ಲದ ಬಯಲ ಕಿವಿಯಲಿ
ದಿಶೆ ಮೀರಿದ ನಶೆಯ ಗುಟ್ಟಾಗಿ!
ಖಾಲಿಯಾಗಸದ ನೀಲಿಯಲಿ
ಚಿತ್ತಾರವಾಗುವ ಹತ್ತಿಮೋಡವಾಗಿ!
ಬಿಡು, ಲೋಕಕೆ ಗೊತ್ತಿರುವುದಿಷ್ಟೇ-
"ತೂಕದ್ದಲ್ಲ; ಹೊಗೆಯೆಂದರೆ ಬಲುಹಗುರ"