Friday, November 27, 2015

ಜೋಲಿ ಕಟ್ಟಿ ಕತ್ತಲು,
ಲಾಲಿ ಹಾಡುವಾಗ ನೆನಪುಗಳು
ನಿದ್ದೆಯೊಂದು ನಿದ್ದೆಹೋಗಿದೆ.
ಕಣ್ಣ ಹೊಸಿಲಲೇ ಕಾದಿದೆ
ಕಪ್ಪು ಹರವಿನ ಬೆಳ್ಳಿನಕ್ಷತ್ರವಾಗುವ ಕನಸು.
ಕಾಣೆಯಾದ ನಿದ್ದೆ ಹುಡುಕುತಲೋಡೋಡಿ
ಬಿದ್ದೆದ್ದು ಮತ್ತೆ ಮತ್ತೆಚ್ಚರಾಗುವ ಮನಸು..

ಅಂಗಳದ ನೂರು ಚುಕ್ಕೆ ಬೆಸೆಯುತಾ
ಬೆಳಗಿನ ಬೆರಳು ನರ್ತಿಸುವಾಗ
ಬಳ್ಳಿ ಬಳುಕುವಲೆಲ್ಲ ನಕ್ಷತ್ರ ರಂಗೋಲಿ.
ಬೆರಳಂಚಲೇ ಕಾದಿದೆ
ಬಾನ ಚುಕ್ಕಿ ಹೆರುವ ಬೆರಳತುದಿಯ ಕನಸು.
ನಿಲುಕದೆತ್ತರಕೆ ಹಾಕಲು ಏಣಿ
ತುದಿಗಾಲಲಿ ಎಕ್ಕರಿಸುವ ಮನಸು..

ವರದಂತೆ ಬೊಗಸೆದುಂಬಿದ ಕ್ಷಣಗಳ ಕ್ರಮಿಸುತಾ
ಓಡುವ ವಯಸನು ಹಿಂಬಾಲಿಸುವಾಗ
ನಕ್ಷತ್ರ ಮೂಡಿಸುತಾವೆ ಅಂಗಾಲ ಗೆರೆ.
ಪಾದದಡಿಗೇ ತಗಲಿಕೊಂಡಿದೆ
ತಾರೆಮಿನುಗನು ತಲುಪುವ ಹೆಜ್ಜೆಯ ಕನಸು.
ಬರೆಬರೆದು ನಾಳೆಯ ನೀಲಿನಕಾಶೆ
ಮತ್ತೆ ದೂರ ಲೆಕ್ಕ ಹಾಕುವ ಮನಸು.

ಆಸೆಗೇನು ನೂರಿದ್ದವು.
ಇನ್ನೊಂದಷ್ಟು ಕಾಲ ಹೆರುತ್ತಿತ್ತು; ನಾನು ಹೊರುತ್ತಿದ್ದೆ.
ಕೆಲವು ತೀರಿದವುಗಳೆಂದು
ಕೆಲವು ದುಃಖಕ್ಕೆ ಮೂಲವೆಂದು
ಚಿವುಟಲು ಹೇಳಿದೆ; ನಾ ಕಿತ್ತೆಸೆದೇ ಬಿಟ್ಟೆ.
ಕಣ್ಣ ಹೊಸಿಲಿಗೆ, ಬೆರಳ ತುದಿಗೆ, ಪಾದದಡಿಗೆ
ಕನಸ ರಂಗು ಅಂಟಿಸಿದ್ದು ಯಾಕೆ ಹೀಗೆ?
ಬಣ್ಣವ ಬೆಂಬತ್ತುವ ಮೋಡಿಗೆ
ಬಿಳಿಯ ಮನಸ ದೂಡಿದ್ದು ಯಾಕೆ ಹೀಗೆ?
ನೋಡೀಗ ಮಿನುಗು ನೋಡುವಾಸೆಯಿದ್ದಲ್ಲಿ
ತಾನೇ ಮಿನುಗುವ ಕನಸೊಂದು ಹುಟ್ಟಿಬಿಟ್ಟಿದೆ.
ನಿದ್ದೆಹೋಗಿರುವ ನಿದ್ದೆಯಲಿ,
ನೆಲದ ರಂಗೋಲಿಯಲಿ,
ಓಡುವ ವಯಸ ಬೆಂಬತ್ತಿರುವ ಹೆಜ್ಜೆಯಲಿ
ತಂತಾನೇ ಹೊಕ್ಕು
ಪುಟಿಪುಟಿವ ಉತ್ಸಾಹದಲಿ ಹೇಳುತಿದೆ,
ಬಾನೆತ್ತರದ, ಬಾನ ಬಣ್ಣದ, ಬಾನ ಹರವಿನ,
ಬೆಳಗು-ಬೈಗು, ಸೂರ್ಯ-ಚಂದ್ರ,
ನಕ್ಷತ್ರ, ಮತ್ತದರ ಹೊಳಪಿನ ಕತೆ.
"ಆಗಿಹೋದವರು ಆಗುವರೆನುವ
ನಕ್ಷತ್ರವೇ ನಾನಾಗಬೇಕೆನಿಸುವುದೆಂಬಲ್ಲಿಗೆ
ಕಷ್ಟಪಟ್ಟು ಆ ಜೋಡಿಕಣ್ಣಲಿ ಸಿಕ್ಕಿದ್ದ ನಾನು
ಒಂದೋ ಕಳೆದುಹೋಗುತ್ತಿದ್ದೇನೆ,
ಇಲ್ಲಾ ಅಳಿದುಹೊಗುತ್ತಿದ್ದೇನೆ."
ಇದೋ
ಆ ಕತೆಯ ನೆರಳಲಿ ಹುಟ್ಟಿದ್ದು ಈ ಉಪಕತೆ.

Monday, November 23, 2015

ಮೊದಲಿಗೆ ಎರಗುವೆ ಅಮ್ಮ ನಿನ್ನಡಿಗೆ.
ಸ್ತುತಿಯ ಗರಿಯಿದೋ ಈಗ ನಿನ್ನಯ ಮುಡಿಗೆ.

ಕರುನಾಡಿನುದ್ದಗಲ ಚಿರಸಂಚಾರದಲಿ
ಘನಗಿರಿ ವನಸಿರಿಯುಲಿವ ಮೆಲುಗಾನ ನೀನು.
ಹೂ-ಹಸಿರು ಜಲಧಾರೆ ನೀಲಾಂಬರದಲಿ
ಜಗ ಸೆಳೆವ ನೆಲದಾಯಿ ನಗೆಗಾನ ನೀನು.

ನಿನ್ನಂಗಳದಲಿ ಹಬ್ಬಿತದೋ ನೋಡು
ನಾಟ್ಯಹಾಡುಹಸೆ, ಶಿಲ್ಪಚಿತ್ರಕಲೆ ನೂರುಬಗೆಬಳ್ಳಿ.
ಬಾನಷ್ಟಗಲಕು ಕಲೆಯ ಚಪ್ಪರಮಾಡು
ಕಲ್ಪದುದ್ದಕು ಬೀರಿವೆ ಕಂಪು ನೂರಾರು ಹೂವರಳಿ.

ನಿನ್ನ ಸಿಂಗರಿಸುವೆ; ಕಂದನಾಟವು ನನದು
ನಿನ್ನವೇ ಚಿನ್ನದಕ್ಕರವ ನಿನದೇ ಕೊರಳು-ಬೆರಳಿಗಿಟ್ಟು.
ಹೊಗಳಿ ಹಾಡುವೆ ಮತ್ತೆ ತೊದಲುನುಡಿ ನನದು
ನಗುವೆ ಮೆಚ್ಚಿ ನೀ ಒಡವೆ ನಿನದೇ ಹೊಸದಾಗಿ ತೊಟ್ಟು.

ನಿನ್ನೊಡಲ ಕುಡಿಗಳು ನಾವದೆಷ್ಟೋ ಕೋಟಿ
ಸೊಗಕು ನೋವಿಗು ನಿನ್ನ ಮಡಿಲಲ್ಲದಿಲ್ಲ ಬೇರೆ ಗತಿ.
ಕತೆಕಾವ್ಯ ಹೆಣೆವುದೂ ನಿನ್ನೆದೆಯನೇ ಮೀಟಿ
ಅಲ್ಲದ್ದನೂ ಒಪ್ಪಿಸಿಕೊಳುವೆ ಅಮ್ಮಾ, ನಿನದಮಿತ ಪ್ರೀತಿ.

ಪೊಡಮಡುವೆವೇ ತಾಯಿ, ತಡಮಾಡದೆ ಹರಸು
ಅಡಿಗಡಿಗಿಂದು ಸತ್ವಪರೀಕ್ಷೆ; ಸಡಿಲಾಗುತಿದೆ ಒಗ್ಗಟ್ಟು.
ಶಿರಬಾಗಿದಷ್ಟೂ ಮನಗಳಿಗೆ ಮನದಟ್ಟು ಮಾಡು
ಸಮತೆ-ಸಮಾನತೆ, ಸಂತೃಪ್ತಿ-ಸಂಪ್ರೀತಿಗಳ ಗುಟ್ಟು.

Thursday, November 19, 2015


ಕಾಲೂರುವ ನೆಲೆ ಕಳಕೊಂಡೆ,
ನೀ ಮುದ್ದಿಸಿದ ಪಾದವೀಗ ನೆಲಕಿಳಿಯುತಿಲ್ಲ.

ಕಣ್ಣವೆಯಡಿ ಕನಸ ಕಳಕೊಂಡೆ,
ನನಸಾದುದರ ನೆನಪುರಾಶಿಯೇ ಅಲ್ಲೆಲ್ಲ.

ಹೊಸಬೆಳೆಯಾಸೆಯಿರದ ನೀ ತೋಯಿಸಿದ ಎದೆನೆಲ,
ಉಳುವ ನೋವಿನ ನೊಗವೇ ಕಾಣಿಸುತಿಲ್ಲ.

ಹೆಳೆ ಕಾಣದೆ ಹಿಮ್ಮೆಟ್ಟಿದೆ ಬಿರಿವ ಚೆಲುಮೋಡ,
ನೀ ಗೆಜ್ಜೆಕಟ್ಟಿದ ನಗೆನವಿಲು ಸುಮ್ಮಸುಮ್ಮನೆ ಗರಿಬಿಚ್ಚಿದೆಯಲ್ಲ!

ವಸಂತಕೆ ಕಾಯುವುದಿಲ್ಲ ಕೋಗಿಲೆ-ಚಿಗುರೆಲೆ  ,
ಸಂಜೆಗೆ ಕಾಯುವುದಿಲ್ಲ ಸಂಜೆಮಲ್ಲಿಗೆ
ಅಯ್ಯೋ.. ಹೊತ್ತು ಮತ್ತದರ ಪರಿವೆ ನಾ ಕಳಕೊಂಡೆ.
ನನ್ನೊಳಗೀಗ ಋತುಬದ್ಧವಿಲ್ಲ ಕಾಲ.

ಇತ್ತು ಹೋದದ್ದು ನೀನು; ಹೊತ್ತೊಯ್ದದ್ದಲ್ಲ.
ಹೊತ್ತು ಹೊತ್ತು ಹಗುರಾಗಿ
ಮತ್ತೆ ಮತ್ತೆ ಮತ್ತಲಿ
ಕಳಕೊಂಡು ಖಾಲಿಯಾದದ್ದು ನಾನು.

ಇತ್ತು ರಿಕ್ತವಾಗಿಸುತಾ ಹೋಗುವುದು
ಭಕ್ತಿಯ ಶಕ್ತಿಯಂತೆ.
ನೀನು ಪ್ರೀತಿ ಅಂದಿದ್ದೆ,
ಮಾಗಿ ಈಗ ಅದು ಭಕ್ತಿಯಾಗಿದೆಯೇನು?!


Tuesday, November 3, 2015

ಪ್ರತಿಬಾರಿ ಮುಖವೊಂದು ಎದುರಾಗುವಾಗ
"ಇದು ಅದೇ" ಅಂದುಕೊಳ್ಳುತ್ತೇನೆ.
"ನಾನದೇ ಹೌದು" ಮುಖವೂ ಹೀಗನ್ನುವಾಗ
ನವಜಾತ ಉಸಿರೊಂದರಲಿ ಕೊನರಿಕೊಳುತೇನೆ.

ಪ್ರತಿಬಾರಿ ನಗುವೊಂದು ಎದುರಾದಾಗ
ಕಾಲ್ತೊಳೆದು ಒಳಗಾಳಕೆ ಕೈಹಿಡಿದೊಯ್ಯುತೇನೆ.
ಮೊಗದಂಜಲಿ ತುಂಬಿ ಪ್ರತಿನಗೆಯರ್ಪಿಸುವಾಗ
ಸಮರ್ಪಣೆಯ ಧನ್ಯತೆಯಲರಳುತೇನೆ.

ಪ್ರತಿಬಾರಿ ಸಂಪರ್ಕ ಸೇತು ದಾಟಲ್ಪಟ್ಟಾಗ
ಭಾವ-ಭಾಷೆಗಳರಿತು ಮಾತು ಹುಟ್ಟಿದಾಗ
ಪರದೆ ಸರಿಸಿ, ಹೊಸಿಲೆತ್ತಿ ಬದಿಗಿಟ್ಟು
ಒಳಹೊರಗೆಲ್ಲ ಹರಿವ ಸೌಲಭ್ಯಕೆ ಸಮತಟ್ಟಾಗುತೇನೆ.

ಬರೀ ಮಾತಿಂದೆತ್ತರದ ಅನುಭೂತಿಯದಾದಾಗ
ಖುಶಿ ಸಣ್ಣಪುಟ್ಟದಕೂ ಮಾತಿಗೇ ಜೋತುಬೀಳುತೇನೆ.
ಸಂದೇಶವೊಂದೊಂದರಲೂ ಅನನ್ಯತೆ ಕಂಡಾಗ
ಅನೂಹ್ಯ ಪಟ್ಟವೊಂದಕೆ ಅನಭಿಷಿಕ್ತ ಏರುತೇನೆ.

ಗಂಟೆ-ದಿನ-ವಾರ-ತಿಂಗಳು
ಋತುಗಳ ಮಡಿಲಲಿ ಹೊರಳುವಾಗ
ರೂಢಿಯಂತೆ ಕಾಯಿ ದೋರ್ಗಾಯಿ ಕಳಿತು
ಪಕ್ವತೆಯೊಂದಕೆ ನಾನರಿಯದೇ ಅಭ್ಯಸ್ತ, ಪೂರ್ತ ಮಿದುವಾಗುತೇನೆ.

ಒಂದು ಹೊತ್ತು ಕಳಚಿ ತೊಟ್ಟು ಮತ್ತೆ ರೂಢಿಯಂತೆ ಕಳಿತದ್ದುದುರಿದಾಗ
ಅಲ್ಲೆಲ್ಲೋ ಮೇಲಿಂದ ಮತ್ತೆ ಯಾರೂ ದೂಡದೆಯೇ
ಏರಿದ್ದಕೂ ವೇಗವಾಗಿಳಿದು, ಮೊದಲೇ ಮಿದು ನಾನು,
ಸ್ವಯಂ ಅಡಿಗೋಡೋಡಿ ಸಿಲುಕಿ ಅಪ್ಪಚ್ಚಿಯಾಗುತೇನೆ.

ಹೀಗೊಂದು ಉಸಿರಾಟದ ಕೊನೆಯಾಗುತ್ತದೆ.
ಮತ್ತೆ ನಾನೆದ್ದು ಸತ್ತ ಅದೇ ಉಸಿರಿನಾಧಾರದಲಿ
ಬದುಕುತ್ತೇನೆ; ಮತ್ತೆ ಕಾಯುತ್ತೇನೆ ಇನ್ನೊಂದು ಆ ಅದಕಾಗಿ.
ಆ ಮುಖಕಾಗಿ, ನಗುವಿಗಾಗಿ, ಮಾತಿಗಾಗಿ,
ಮತ್ತವೆಲ್ಲ ಅವೇ ಆಗುಳಿವೊಂದು ಸಾಧ್ಯತೆಗಾಗಿ..




ಅಮ್ಮಾ ನಾನು ಇನ್ನೂ ಸ್ವಲ್ಪ ದೊಡ್ಡೋಳಾಗ್ತೀನಮ್ಮಾ
ನಿನ ಸೆರಗ ಮರೆಯಿಂದ ಸರಿಯೋಕೆ
ನಾನೇ ನಾನೆಲ್ಲ ಅರಿಯೋಕೆ..

ನೀ ಕರೆಯದೇ ಎಚ್ಚರಾಗೋಕೆ
ನೀ ಮುದ್ದಿಸದ ಕಣ್ಣ ತೆರೆಯೋಕೆ
ನಿನ ಮೊಗ ಕಾಣದ ಬೆಳಗು ನೋಡಲಿಕೆ
ನಿನನೊರಗದೇ ಎದ್ದು ನಡೆಯಲಿಕೆ
ಅಮ್ಮಾ, ನಾನು ಇನ್ನೂ ಸ್ವಲ್ಪ ದೊಡ್ಡೋಳಾಗ್ಬೇಕಮ್ಮಾ...
ಅಮ್ಮಾ ನಿನ್ನೀ ನಗೆಯೇ ಎಲ್ಲಕು ಚಂದದ ನಗವಮ್ಮಾ

ಬಳೆ-ಓಲೆ-ಜಡೆಬಿಲ್ಲೆ ಹುಡುಕಲಿಕೆ
ಕಣ್ಕಪ್ಪು ಹಣೆಬೊಟ್ಟು ನಾನಿಡಲಿಕೆ
ನೀ ನೆಟಿಕೆಯಲಿ ದೃಷ್ಟಿ ತೆಗೆಯದೆಯೇ
ನಾನೇ ಸಜ್ಜಾಗಿ ಹೊರಡಲಿಕೆ
ಅಮ್ಮಾ,ನಾನು ಇನ್ನೂ ಸ್ವಲ್ಪ ದೊಡ್ಡೋಳಾಗ್ಬೇಕಮ್ಮಾ
ಅಮ್ಮಾ, ನಿನ್ನ ಕಣ್ಣೇ ನನ್ನ ಕನ್ನಡಿಯು ಹೌದಮ್ಮಾ

ನೀ ತುತ್ತಿಡದೆ ಹಸಿವೆ ತಣಿಯೋಕೆ
ನೀ ಮುತ್ತಿಡದೆ ನೋವು ಮರೆಯೋಕೆ
ನೀ ಹೊಗಳದೆಯೆ ಪುಳಕಗೊಳ್ಳೋಕೆ
ಬಯ್ಯದೆಯೆ ಎಡವದೇ ನಡೆಯಲಿಕೆ
ಅಮ್ಮಾ,ನಾನು ಇನ್ನೂ ಸ್ವಲ್ಪ ದೊಡ್ಡೋಳಾಗ್ಬೇಕಮ್ಮಾ
ಅಮ್ಮಾ, ನಿನ ಕಾಳಜಿಯೇ ದಾರಿ ತೋರುವ ಗುರುವಮ್ಮಾ...

ತೋಳ್ದಿಂಬಿರದ ಮಂಚಕೊರಗೋಕೆ
ಕನಸಲಿ ಬೆಚ್ಚಿ ನಿನಪ್ಪದಿರಲಿಕೆ
ಒಂಟಿ ಕೋಣೆಯಲಿ ಒಂಟಿ ಮಲಗೋಕೆ
ಲಾಲಿ ಕತೆಯಿರದೆ ನಿದ್ದೆ ಹೋಗೋಕೆ
ಅಮ್ಮಾ,ನಾನು ಇನ್ನೂ ಸ್ವಲ್ಪ ದೊಡ್ಡೋಳಾಗ್ಬೇಕಮ್ಮಾ
ಅಮ್ಮಾ, ನಿನ್ನ ಸ್ಪರ್ಶದಲೇ ನಾ ನಿರ್ಭಯಳು ನೋಡಮ್ಮಾ..

Monday, November 2, 2015

ಬಿಡು ಲೋಕವೇ,
ಈ ಪ್ರೀತಿಯೇ ಹೀಗೆ..

ಕಾರಿರುಳ ಗರ್ಭದೊಳಗಿಂದ
ಬೆಳ್ಳಂಬೆಳಕ ಕುಡಿಯೊಂದ
ಅಕಾಲ ಬಗೆದು ತೆಗೆಯಬೇಕಂತೆ .

ಗುರುತ್ವದಿಂದ ವಿಮುಖ
ಭಾವದೀವಿಗೆಯಡಿಯ ಕತ್ತಲಲಿ
ಸ್ವಯಂದೀಪ್ತವಾಗಬೇಕಂತೆ .

ಕಾಲದೊಂದು ಜಾಣಮೌನವ
ನಿರೀಕ್ಷೆಯ ಬಂಡೆಗೆ ಬಡಿಬಡಿದು
ಅವಳ/ನ ಹೆಸರ ಮಾರ್ದನಿಸಬೇಕಂತೆ .

ಊರ್ಧ್ವಮುಖಿ ತಾಂಡವಕೆ
ತೊಡಿಸಿ ಮಿತಿಯ ಮೆಲುಗೆಜ್ಜೆ
ಅವನೆ/ಳೆದೆ ಬಡಿತವ ತನಿಯಾಗಿಸಬೇಕಂತೆ .

ಅಷ್ಟೆಷ್ಟೋ ಕಷ್ಟದ ಕೊನೆಗೆ
ಇಷ್ಟಪಟ್ಟದ್ದೆಲ್ಲ ಸಿಕ್ಕಿದ ಗಳಿಗೆ
ಮತ್ತೂ ಒಂದಷ್ಟು ಬೇಕೆನುತ್ತದೆ. .

ತಣಿಸಿ ಒಳಗೊಳಬೇಕೆಂದು ,
ಮಣಿದು ಒಳಗಾಗಬೇಕೆಂದು
ನೀನು ಬೆನ್ನು ಹತ್ತಿದ್ದು ಪ್ರೀತಿಯನ್ನು...
ಬಿಡು ಲೋಕವೇ,
ಈ ಪ್ರೀತಿಯೇ ಹಾಗೆ.
ಸದಾ ಬಾಯಾರಿರುವ ಮತ್ತು
ಬಾಯಾರಿಯೇ ಉಳಿಸಿಬಿಡುವ
ಮರೀಚಿಕೆಯ ಹಾಗೆ.