Wednesday, August 20, 2014

ನಾನು ನಾನೆನಿಸುವುದು



ನಿದ್ದೆಯ ಕೊನೆಯ ಜಾವ
ಎಚ್ಚರದೊಳಹೊಗುವ ಹೊಸ್ತಿಲ ಮೇಲೆ
"ಹೊಸಿಲು ತುಳಿಯಬಾರದಮ್ಮಾ"
ಅಜ್ಜಿಯ, ಅಮ್ಮನ, ಅತ್ತೆಯ,
ಮತ್ತಕ್ಕನದೂ ತುಸುಕ್ಷೀಣ
ದನಿಗಳೆಲ್ಲ ಮೀರಿ ನಿಂತ
ನನ್ನ ಹೆಜ್ಜೆ ಗೆಜ್ಜೆಯುಲಿಯಲಿ
ನನಗೆ ನಾ ನಾನೆನಿಸುತ್ತೇನೆ.

ಜಾಗೃತಿ ಸ್ವಪ್ನಾವಸ್ಥೆಗಳೆಲ್ಲ
ತಪ್ಪೆಂದು ಎದೆತಟ್ಟಿ ಸಾರಿದ್ದು
ಸರಿಯೆನಿಸುತಾ;
ಸರಿಯೆಂದು ಏರಿಸಿದ ಧ್ವಜ
ದಶದಿಕ್ಕಿನ ಏರುವೇಗದ
ಗಾಳಿಗಾಡಿಯಾಡಿ ಚಿಂದಿಯಾಗುತಾ...
ನಡೆದದ್ದು ಮೊತ್ತಕ್ಕೆ ಸೇರಿ,
ನಡೆಯಬೇಕಿದ್ದೂ ನಡೆಯದ್ದು
ಅಲ್ಲಿಂದಲೇ ಸೋರಿ...
ಕೈಗೊಂಡು ಮುದಗೊಳಿಸಿದ್ದು,
ಮತ್ತೆ ಕೈಜಾರಿ ಮತ್ತದೇ
ಕತ್ತಲ ಕಂಬನಿ ಹಗಲಿನಿಬ್ಬನಿಯೆನಿಸಿದ್ದು..

ಇವೆಲ್ಲ ಲೆಕ್ಕಾಚಾರ ಮೀರಿ
ನೀ ನನಗೆ ಬೇಕೇ ಬೇಕೆನಿಸುವ,
ಎಚ್ಚರದ ಅದೇ ಆ ಮೊದಲ ಜಾವ
ನಿದ್ದೆ ಕಳಚಿಹೋಗುವ ಅದೇ ಆ ಹೊಸ್ತಿಲಲಿ
ಒಂದಿಷ್ಟೂ ತಡಬಡಾಯಿಸದ ಹೆಜ್ಜೆಯೂರಿ
ನಿಂತಾಗ, ಮತ್ತಚ್ಚರಿಯೆಂದರೆ ಆಗ ಮಾತ್ರ
ನನಗೆ ನಾ ನಾನೆನಿಸುತ್ತೇನೆ.

Monday, August 18, 2014

ಹೊರಳುಹೊರಳಿಗೂ ಬಿಮ್ಮನರಳಿದ ನೂರು ನೆನಪ ಹೂವು
ಹೊರಾವರಣ ದರ್ಶನಕಿಟ್ಟ ಉತ್ಸವಮೂರ್ತಿ ಮೇಲುದುರಿದವು
ಪುಳಕಿತವೋ, ಮುಳ್ಳಸ್ನಾನವೋ, ಮೂರ್ತಿ ಹುಯ್ಯಿಸಿಕೊಂಡಿತು
ಅಂತೂ ಪುಷ್ಪಾರ್ಚನೆ ಉತ್ಸವಮೂರ್ತಿಯ ಮುಚ್ಚಿಯೇಬಿಟ್ಟಿತು.

ಅಗೋ, ಜನಮನ ತಟ್ಟನೇ ಗರ್ಭಗುಡಿಯತ್ತ ದಾಂಗುಡಿ
ಕದ ಮುರಿಯತೊಡಗಿದೆಯಂತೆ, ಗುಂಪಿಗಿರುವುದಿಲ್ಲ ಬುದ್ಧಿ.
ಮೊದಲೇ ಮರೆಮಾಡಿದ ಅಷಾಡ ಕಳೆದ ಮಿಲನದ ಶ್ರಾವಣ;
ಗಾಳಿಯಲೆಯಲೆಯಲೂ ಉಕ್ಕುವುತ್ಸಾಹ, ದರ್ಶನದ ತಲ್ಲಣ.

ಗರ್ಭಗುಡಿಯೊಳಗಿಂದ ಕ್ಷೀಣ ದನಿಯಾದರೂ ಭಾವ ಸಶಕ್ತವಿದೆಯಲ್ಲಾ!!
ಅಲ್ಲ ಮಂತ್ರವಲ್ಲವೇ ಅಲ್ಲ, ಪೂಜೆ ನಿಂತು ವರ್ಷಗಳೇ ಸಂದಿವೆಯಲ್ಲಾ!!
ಒಳಗೆ ಭಗ್ನಗೊಂಡ ನಗ್ನಮೂರ್ತಿ ಮೆಲ್ಲನುಸುರಿದೆ, ಮಾತನಾಡಿದೆ ಕಲ್ಲು,
"ಗುಟ್ಟು ನಾ, ಅಂತೆಯೇ ಉಳಿಯಬೇಕದಕೀಗ ಹೊರಳುವುದು ನೀ ನಿಲಿಸಬೇಕು."