Wednesday, November 9, 2016

ಬೆರಳ ತುದಿಯಲ್ಲಿ ಸಾಗರ ಅಡಗಿತ್ತೇನೋ ಹುಡುಗಾ?
ಮುಟ್ಟಿದ್ದಕೇ ಮುತ್ತುರಾಶಿ ಮುತ್ತಿದೆ!
ಕಣ್ಣಂಚಿನಲಿ ಸೂರ್ಯನೇ ಉದಯಿಸಿದ್ದೇನೋ ಹುಡುಗಾ?
ನೋಟವೊಂದಕೇ ಬಿಸಿಯೇರಿದೆ!

ನರನಾಡಿಯಲಿ ನಾಚಿಕೆ, ಬೆನ್ನಿಗೇ ಬಯಲಾಗುವ ಬಯಕೆ.
ಎದೆ ಹುಣಿಯಲಿ ಸಾಲುಸಾಲು ಚಿಗುರು ಆಸೆಗರಿಕೆ,
ಬೆಚ್ಚದೆ ಬೆದರದೆ ತೆನೆಯೊಡೆದ ಹಸಿ ಎದೆಗಾರಿಕೆ!

ಬೆಳಗು ಅಂಗಳಕೆ ಬಿತ್ತಿದ ಬಣ್ಣದ ನಡು ನೀನೆ ನಿಂತಿದ್ದೆ
ಬಿಸಿನೀರೊಲೆಯ ಹೊಗೆಸುರುಳಿ ಘಮವೊಯ್ದು ಊರಿಗೆಲ್ಲ ಸಾರಿತ್ತು.
ಕಂಡ ಕಣ್ಣಲೆಲ್ಲ ನೂರು ಪ್ರಶ್ನೆ; ಕೆನ್ನೆಕುಳಿ ಕೆಂಪು ಉತ್ತರಿಸಿತ್ತು!

ಬರಸೆಳೆದು ಮರೆಗೊಯ್ದ ಕಾಲದ ತುಣುಕು; ಗಂಟೆಯೊಂದೀಗ ಕ್ಷಣವಾಯ್ತು!
ಪುರುಷನೋ-ಪರುಷವೋ, ನನ್ನೊಳ-ಹೊರಗು ಬಂಗಾರವಾಯ್ತು!
ಎಳೆಬಿಸಿಲು ಹೊಳೆಹೊಳೆದೆ ನೀನು, ಇಬ್ಬನಿ ಕಣ್ಮುಚ್ಚಿ ಕರಗಿಯೇ ಕರಗಿತು!

ಸೋಪಾನವೊಂದೊಂದರಲೂ ಪ್ರೀತಿ ಮದರಂಗಿಯ ಜೋಡಿಹೆಜ್ಜೆಗುರುತು!
ತುರೀಯದಲಿ ಬಿಳಿಶಂಖದೊಡಲು  ಹೆಸರು ನಿನದೇ ಅನುರಣಿಸಿತ್ತು.
ನಾನೀಗ ಹೆಣ್ಣೆನಿಸಿದ ಗಳಿಗೆಯಿದು ನಿನ್ನ ಗಲ್ಲದಿಂದುದುರಿ ನನ್ನ ಹಣೆಗಿಳಿದಿತ್ತು!

ನಲ್ಲ, ನಾನಲ್ಲ; ಕೈಹಿಡಿದು ನೀನೇ ಮತ್ತೆ ಮತ್ತೆ ಮೇಲೆಮೇಲೇರಿಸಿದ್ದು!
ಮನಸು ಕಣ್ಬಿಟ್ಟಾಗೆಲ್ಲ ಘನಪರಿಮಳ ಒಳಹೊಕ್ಕಿತ್ತು; ಹೊಕ್ಕುಳ ಹೂವರಳಿತ್ತು!
ನೀ ನಡೆದಾಗ ನನ್ನಾಳದೊಳಗೆ, ಮಣ್ಣಿನ ಮನೆ, ಈ ಕಾಯ ದೇಗುಲವಾಯ್ತು!

Thursday, November 3, 2016


ಹೂವುದುರಿತೆಂದು
ಪಚ್ಚೆಯೆಂಬ ಪಚ್ಚೆ ಇಂಚಿಂಚು ಬಾಡುವಾಗ,
ಹೊಳಪೊಂದು ನೆಲಕಿಳಿಯಿತೆಂದು
ಆಗಸವೇ ಬೂದು ಇಳಿಜಾರಲಿ ಅಸ್ತಮಿಸಹೊರಟಾಗ,
ಹಾಡುತಾ ಅಳುತ್ತವೆ ಬಣ್ಣಗಳು, ಹಗಲು ಮತ್ತು ರಾತ್ರಿ..

ಅದೋ ಶಿಖರಾಗ್ರದಲೂ ಬಿಡದ ಆ ಗುಂಗು
ಮಂಜಿನಂತೆ ಮುಸುಕಿ ಧೊಪ್ಪನುರುಳಿಸಿದ ಹಾಗೆ!
ಇದೋ ಈ ಪಾತಾಳದಲೂ ನನದೊಂದು ಗುಂಗು
ಹಾಗೆ ಬಿದ್ದುದ ನೆನೆನೆನೆದು ಬಿಕ್ಕಿದ ಹಾಗೆ!

ಬಂದು ಹೋಗಿಯೂಬಿಟ್ಟೆ,
ನಾ ಗುರುತುಳಿಸಿಕೊಳಲಿಲ್ಲ..
ನಗುತಲೇ ಕಣ್ತುಂಬಿಕೊಳುವ ಸಂಜೆಗಳಲಿ
ಮುತ್ತಿಕ್ಕಿಸಿಕೊಂಡ ಹಣೆ ಹೇಳುವ ಕತೆ
ಖಾಲಿ ಕೆನ್ನೆ ಕಿವಿಗೊಟ್ಟು ಕೇಳುತದೆ!

ಭರತಮಹಾಬಲಿಗೆ ಅಳಿಸಿಹೋದ ಗುರುತುಗಳಲಿ
ವೈರಾಗ್ಯ ಕಾಣಿಸಿತಂತೆ!
ಅಲ್ಲೆಲ್ಲೋ ಗಾಳಿ ಮೈಯ್ಯಲಿ ಗುರುತುಳಿಸಲು ಹೆಣಗಾಡುತಿದೆ;
ನನದೊಂದು ಜೈ ಅಂಥ ಬದುಕಿಗೆ!

ಅವನಾಣತಿಯಂತೆ ಉರುಳುತಿರುವ
ಅವನದೇ ಗುಡಿಯುಳಿಸಲು
ಅವನದೇ ನಾಮಾರ್ಚನೆಯ ಮೊರೆ ಹೊಗುವ ಹಾಗೆ,
ಅತ್ತತ್ತಲೇ ಸಾಗುವ ಪಾದದಡಿ ಮೆತ್ತಿಕೊಳುವ
ಧೂಳಕಣವಾಗುವುದ ಕಲಿತಾಗಿದೆ!

ಸೋಲುವುದಿಲ್ಲ;
ಬಾಳುವುದಿಲ್ಲ ನೆನೆಯದೆ ಒಂದು ಕ್ಷಣವೂ..
ಒಪ್ಪಿಸಿಕೋ ಶೂನ್ಯವನೇ
ನಿನಗಿಷ್ಟವಾದ ಪಕ್ಷದಲಿ..
ಅಪೂರ್ಣವೊಂದು ಅಪೂರ್ಣವೇ ಉಳಿವ ನಿಟ್ಟಿನಲಿ
 ಇಲ್ಲವೇ ಆಗುವ ಹೊತ್ತಿನಲಿ.

ಇದೋ ಹೊರಟೆ
ಸಿಟ್ಟಿಗೆ ಬಣ್ಣದ ರೆಕ್ಕೆ ಹಚ್ಚಿ
ಚಿಟ್ಟೆಯಾಗಿಸುವ ದಿಶೆಗೆ ಬೆರಗಾಗಿ!
ಬೆರಳಿಗೆ ತಂತಿ ಚುಚ್ಚಿ
ಚಿಮ್ಮಿದ ರಕ್ತ ಸ್ವರವಾಗಿಸುವ ನಶೆಗೆ ಶಿರಬಾಗಿ.

ಇಲ್ಲ; ಬರಲಾರೆ ಕೈಹಿಡಿದೊಯ್ವೆನೆನುವ
ಅಣಕು ದೀಪದ ಜೊತೆಗೆ..
ಬೇನಾಮಿ ತೀರಕೊಂದು ಇರದ ಹೆಸರಿಟ್ಟು
ಬಾ ಎನುವ ಕರೆಯ ಜೊತೆಗೆ.

ಅಲ್ಲೊಂದು ಲೋಕವುಂಟಂತೆ
ಹಾದಿಯುದ್ದಕು ನಿನ್ನ ನಿನ್ನೆ ಮೊಹರೊತ್ತಿವೆಯಂತೆ..
ಅಲ್ಲಿ ನೋವು ಅಳಿಸದಂತೆ!
ತನ್ನೊಳಗದು ಮೈ ಮರೆಯುವುದಂತೆ..

ಇಲ್ಲ; ಬರಲಾರೆ ಕತ್ತಲ ಮುಖದೊಂದು
ಅನಪೇಕ್ಷಿತ ನಗೆಯ ಮಿನುಗಾಗಿ..
ತನ್ನಷ್ಟಕೇ ಬಲುತೃಪ್ತ ಮುಚ್ಚುಗಣ್ಣಿನ
ಕಣ್ರೆಪ್ಪೆ ಕುಣಿತದ ಕನಸಾಗಿ..

ತಿನುವ ತುತ್ತುತುತ್ತಲೂ
ನೆನಕೆ ಸಹಿಯೊತ್ತಿರುತಿದ್ದ ಅಂದುಗಳಿಂದ
ಇದೋ ಹೊರಟೆ..
ಕಣ್ಣಯಾನದುದ್ದಕೂ
ಪಸೆಗೆ ಜಲಸಂಸ್ಕೃತಿಯ ಮುಖವಾಡವಿತ್ತು
ನಗುವ ಕೈಗಳ ಪೂಜೆ,
ಅಳುವ ಕೈಗಳ ಮಂತ್ರ-ತಂತ್ರಕೆ
ಮಡಿಲಾಗುವ ಆ ತಾಯಂಥ ತೀರಕೆ..

ಮತ್ತಲ್ಲಿಂದಲೂ ಇದೋ ಹೊರಟೆನೆಂದುಕೊಂಡಿದ್ದೇನೆ,
ಮುತ್ತು-ಹವಳ, ರಾಡಿ-ಬಗ್ಗಡ ದಾಟಿ
ಕಲ್ಲೆಬ್ಬಿಸಿದ ಅಲೆಯುಂಗುರ,
ಕಾಲವೆಸೆದ ಸುನಾಮಿಗಳೂ ಕಂಡಿಲ್ಲದ
ಅಲುಗದ, ಕದಡದ
ಶಾಂತಿಯದಿನ್ನೊಂದು ಮುಖವಾಡವುಟ್ಟ
ತಳದ ಮೌನನೆಲೆಗೆ...