Sunday, March 31, 2013

ನೀ ತೆರಳಿದ ವೇಳೆ..


-------------------
ಬೆಳ್ಳಂಬೆಳಗ್ಗೆ ಖಾಲಿಗೂಡು ನೇತಾಡಿದೆ,
ನೇಣಿಗೊಡ್ಡಿದ ಕೊರಳಂತೆ.
ಚಲಿಸದ, ನೀರವ ಚರಮಗೀತೆ.
ಗಾಳಿಯ, ತೂಗಿದೆಲೆಯ ನೆಪದಲಿ
ಮತ್ತೆಮತ್ತೆ ನೆನಪು ತೂಗಾಡಿಸಿದೆ,
ಚುಚ್ಚಿಚುಚ್ಚಿ ಹೆಣವ ಸಾಯಿಸುತಿದೆ.

ಅದೇ ಪಾರಿಜಾತದ ಗಿಡ,
ಅದೇ ಒಣ ಕಸಕಡ್ಡಿ ಗೂಡು,
ನಿನ್ನೆವರೆಗೆಷ್ಟು ಸೆಳೆದು,
ಕ್ಷಣಕೊಮ್ಮೆ ಬಳಿ ಕರೆದಿತ್ತು!
ಈಗರ್ಥವಾಗಿದೆ ಕಣ್ಣು-ಕಿವಿಯನಲ್ಲ,
ಮನಸನೊಳಗು ಸೂರೆಗೈದದ್ದು...

ಇಂದೊಳಗೆ ಹಸಿದ ದನಿ,
ಬಂದು ತಾ ತಣಿಸೋ ಹನಿ,
ಹೊರಚಾಚುವ ಎಳೆಕೊಕ್ಕು,
ಒಳಗಿಣುಕುವ ಆ ಕೊರಳಿಲ್ಲ.
ಹಾರಿದ್ದೋ, ಆಹಾರವಾದದ್ದೋ...
ಗೂಡು ತೆರವು, ಮರಿ ಕಾಣುತಿಲ್ಲ,

ನಿನ್ನೆ ಹೊಳಪಿತ್ತು, ಇಂದು
ಪಾರಿಜಾತದೆಲೆ ಶುಷ್ಕಪಚ್ಚೆ,
ಹೂವರಳಿದ್ದು ಕನಸಂತೆ, ಉದ್ದಗಲಕೂ
ಒಣಬೀಜ, ಕಾಣೆ ಜೀವಂತಿಕೆ.
ಬಣ್ಣಬಣ್ಣದ ತೋಟದಾವರಣ ಗೌಣ,
ಎದ್ದೊದೆದಿದೆ ಖಾಲಿ ಬಣಬಣ..

ಮರಿ ನೆಲೆಸದ ಗೂಡಲಿ
ಜೀವಯಾನದ ಶೋಕರಾಗ,
ನೀನಿರದ ಕಾಲನಡೆಯ ತಾಳದಿ
ನುಡಿದ ಮರಣಮೃದಂಗ,
ನನ್ನೆದೆಗೂಡೂ ದನಿ ಸೇರಿಸಿ,
ಅಸಹನೀಯ ವೃಂದಗಾನ...

Saturday, March 30, 2013

ಅಹವಾಲು


-------------------
ಪ್ರೀತಿಸುವುದಾದರೆ ಎದುರು ಬಾ,
ಬರೀ ಬಯಕೆಯಾದರೆ ಬೇಡ.
ನಿನ್ನ ಕಣ್ಣಲಿ ಮನಸೇನೋ ಕಂಡಿದೆ,
ಕಣ್ಣು ಬೇರೇನೋ ತೋರುವುದು ಬೇಡೆನಗೆ.

ಪ್ರೇಮ ಮೂರ್ತಿಯಿಲ್ಲದ ದೇಗುಲ,
ದೇಹ ಕಂಭಗಳಾಗಿ ಭೌತಿಕ ಆಧಾರ..
ಆತ್ಮ ಪೂಜಿಪವು ಎರಡೂ ಪರಸ್ಪರ...
ಭಕ್ತಿ ದೀಪ, ನಂಬಿಕೆ ಧೂಪ, ಆರತಿಯಾರಾಧನೆ...
ನಡುವಿನಂತರ ಸ್ಥಿರ ಕಂಭಗಳಿಗೆ, ಆತ್ಮಗಳಿಗಲ್ಲ.
ಪೂಜೆ ಸೇತುವಾಗಲಿದೆ, ಮಿಲನ ದೂರವಿಲ್ಲ..
ವಾಸನೆಯ ಸೆಳೆತ ದೇಹದ ನಿತ್ಯಸತ್ಯ..
ಮಣಿದಪ್ಪಿದರೆ, ದೇಗುಲ ಬೀಳದೇನು?!

ತ್ಯಾಗ ಭ್ರಮೆ, ದೇಹಸುಖ ನಿತ್ಯವಿದರ್ಧ ಸತ್ಯ,
ತಪ್ಪು ಸೋಪಾನವೊಯ್ವ ಎತ್ತರವದು ಮಿಥ್ಯ.
ನಿಂತ ನೆಲೆಯಲಷ್ಟು ಭಾರ ನನ್ನ ಪಾಲು,
ನಾನೇ ಹೊರಬೇಕು ಕುಸಿವವರೆಗೂ..
ನನ್ನಂತೆಯೇ ನೀನು, ನಿನ್ನದೂ ಇರಬಹುದು.
ನಿಂತಲ್ಲೆ ನಿಂತು ದೇಗುಲವುಳಿಸಲಾಗದೇನು?!
ಜಗ ತುಳಿವ ಹಾದಿ ಮೆಟ್ಟದಪೂರ್ವ ಹೆಜ್ಜೆಯೇ
ವಿಭಿನ್ನ, ವಿಶಿಷ್ಠವಲ್ಲವೇನು?!



Friday, March 29, 2013

ಹಳದಿ ಗುಲ್ಮೊಹರ್ ಮರದ ಸಾಲಿನಡಿ..




ಹಳದಿ ಹೊತ್ತು ಹಳದಿ ಚೆಲ್ಲಿದ
ಕಪ್ಪು ತೊಗಟೆಯ ಒಣಕಾಂಡವೇ,
ಎಲ್ಲಿತ್ತು ಇಷ್ಟು ಹುರುಪು, ಹುಮ್ಮಸ್ಸು,
ಮತ್ತಿನ್ನೂ ಹೇಗುಳಿದಿದೆ ಹೊಸತಾಗಿ?!
ಎಲ್ಲಿದೆ ಹಳದಿ ಹೊರಗಟ್ಟಿದ ಹಸಿರು,
ಮತ್ತಿನ್ನೂ ಹೇಗೆ ಜಾಗೃತ ಮರೆಯಾಗಿ?!

ಅದೇ ಮಣ್ಣಲಿ ನಾನೂ ನಿಂತಿರುವೆ,
ನೀರು, ಗಾಳಿ, ಹಗಲು-ರಾತ್ರಿಗಳು..
ಕುಡಿಯೊಡೆದರೂ ಉತ್ಸಾಹ ಹಲಬಾರಿ,
ಕ್ಷಣಕ್ಷಣಕು ಗರ್ಭಪಾತ ನನ್ನೊಳಗೆ.
ಎಚ್ಚೆತ್ತರೂ ಹಸಿರು ನನ್ನಲ್ಲಿ ಕೆಲಬಾರಿ,
ಕಣ್ಮುಚ್ಚುವುದಲ್ಲೇ ಹೊದ್ದು ಮತ್ತೆ.

ಯಾವ ಪಂಚಾಂಗ, ಯಾವ ಶುಭಗಳಿಗೆ
ಅವನಾಗಮನಕೆ, ನಿಮ್ಮ ಮಿಲನಕೆ?!
ಮಾಸವೊಂದರ ಅರಳುವಿಕೆಗೆ
ಹನ್ನೊಂದರ ನಿರೀಕ್ಷೆ...
ಬರೀ ಹಸುರಾಗೇ ಕಾಯುವೆ,
ಹೊಸ ಹಳದಿ ಹೊತ್ತು ಹೆರಲಿಕೆ...

ಬಿಸಿಲ ಬಿಸಿಯೆನ್ನದೆ,
ಮಳೆಗೆ ಮರೆ ಹುಡುಕದೆ,
ಚಳಿಗೆ ಖಾಲಿಯಾದರೂ ಅಳದೆ,
ಬಿಡದೆ ಸೆರಗಂಚಿಗೇ ಅಂಟಿದ್ದಕೆ,
ತೆರಕೊಂಡದ್ದಕೆ ಇತ್ತಳೇ ತಾಯಿ,
ತನ್ನೆದೆಯ ತಾಳ್ಮೆಯಮೃತವ?!

ನನಗೂ ಸ್ವಲ್ಪ ಕೊಡೇ,
ನಾನೂ ಹೊಸತ ಹೆರುವಾಸೆ.
ಅದೇ ಭಯ, ಸಂಶಯ, ಕೋಪತಾಪ,
ಹೆತ್ತ ನಿಷ್ಫಲ ಮಾತೃತ್ವ ಸಾಕಾಗಿದೆ.
ತಾಳ್ಮೆ ಹೊತ್ತು, ನಂಬಿಕೆಗೆ ತುತ್ತಿತ್ತು,
ವಿಶ್ವಾಸಕೆ ರಕ್ತ ಹಂಚಿ, ಪ್ರೀತಿ ಹೆರಬೇಕು.

ಹಳದಿ ಗುಲ್ಮೊಹರ್ ಮರದ ಸಾಲಿನಡಿ..




ಹಳದಿ ಹೊತ್ತು ಹಳದಿ ಚೆಲ್ಲಿದ

ಕಪ್ಪು ತೊಗಟೆಯ ಒಣಕಾಂಡವೇ,

ಎಲ್ಲಿತ್ತು ಇಷ್ಟು ಹುರುಪು, ಹುಮ್ಮಸ್ಸು,

ಮತ್ತಿನ್ನೂ ಹೇಗುಳಿದಿದೆ ಹೊಸತಾಗಿ?!

ಎಲ್ಲಿದೆ ಹಳದಿ ಹೊರಗಟ್ಟಿದ ಹಸಿರು,

ಮತ್ತಿನ್ನೂ ಹೇಗೆ ಜಾಗೃತ ಮರೆಯಾಗಿ?!



ಅದೇ ಮಣ್ಣಲಿ ನಾನೂ ನಿಂತಿರುವೆ,

ಅವೇ ನೀರು, ಗಾಳಿ, ಹಗಲು-ರಾತ್ರಿಗಳು..

ಕುಡಿಯೊಡೆದರೂ ಉತ್ಸಾಹ ಹಲಬಾರಿ,

ಕ್ಷಣಕ್ಷಣಕು ಗರ್ಭಪಾತ ನನ್ನೊಳಗೆ.

ಎಚ್ಚೆತ್ತರೂ ಹಸಿರು ನನ್ನಲ್ಲಿ ಕೆಲಬಾರಿ,

ಕಣ್ಮುಚ್ಚುವುದಲ್ಲೇ ಹೊದ್ದು ಮತ್ತೆ.







ಯಾವ ಪಂಚಾಂಗ, ಯಾವ ಶುಭಗಳಿಗೆ

ಅವನಾಗಮನಕೆ, ನಿಮ್ಮ ಮಿಲನಕೆ?!

ಮಾಸವೊಂದರ ಅರಳುವಿಕೆಗೆ

ಹನ್ನೊಂದರ ನಿರೀಕ್ಷೆ...

ಬರೀ ಹಸುರಾಗೇ ಕಾಯುವೆ,

ಹೊಸ ಹಳದಿ ಹೊತ್ತು ಹೆರಲಿಕೆ...



ಬಿಸಿಲ ಬಿಸಿಯೆನ್ನದೆ,

ಮಳೆಗೆ ಮರೆ ಹುಡುಕದೆ,

ಚಳಿಗೆ ಖಾಲಿಯಾದರೂ ಅಳದೆ,

ಬಿಡದೆ ಸೆರಗಂಚಿಗೇ ಅಂಟಿದ್ದಕೆ,

ತೆರಕೊಂಡದ್ದಕೆ ಇತ್ತಳೇ ತಾಯಿ,

ತನ್ನೆದೆಯ ತಾಳ್ಮೆಯಮೃತವ?!



ನನಗೂ ಸ್ವಲ್ಪ ಕೊಡೇ,

ನಾನೂ ಹೊಸತ ಹೆರುವಾಸೆ.

ಅದೇ ಭಯ, ಸಂಶಯ, ಕೋಪತಾಪ,

ಹೆತ್ತ ನಿಷ್ಫಲ ಮಾತೃತ್ವ ಸಾಕಾಗಿದೆ.

ತಾಳ್ಮೆ ಹೊತ್ತು, ನಂಬಿಕೆಗೆ ತುತ್ತಿತ್ತು,

ವಿಶ್ವಾಸಕೆ ರಕ್ತ ಹಂಚಿ, ಪ್ರೀತಿ ಹೆರಬೇಕು.

Thursday, March 28, 2013

ಒಂದು ಮದುವೆಯಲಿ..


---------------------
ಗಟ್ಟಿವಾದ್ಯ, ಹಿಮ್ಮೇಳಕೆ ತಾಳ,
ಪಟ್ಟೆಸೀರೆಯಂಚು ಸರ್ರೆಂದು,
ಗಂಟೆಜಾಗಟೆಯೊಡನೆ ಮಂತ್ರಘೋಷ
ಹೋಮಧೂಮ, ಕಣ್ಣೊರೆಸಿದ ಕೈಬಳೆ ಕಿಣಿಕಿಣಿ
ಸುಮ್ಮನೋಡಾಡಿದ ಗೆಜ್ಜೆಕಾಲ್ಗಳ ಝಣಝಣ.
ಅಲ್ಲಲ್ಲಿ ಗುಸುಗುಸು, ಮತ್ತಷ್ಟು ಹಾಳುಹರಟೆ
ಒಳಗಲ್ಲಿ ಸಾರು ಕೊತಕೊತ, ಎಣ್ಣೆ ಜಿಟಿಪಿಟಿ,
ಚುರ್ರೆಂಬ ಜಿಲೇಬಿ, ಘಮಘಮ ಒಗ್ಗರಣೆ..

ಶಬ್ಧಸಂತೆಯೊಳಗೆ ಮೌನದೊದ್ದಾಟ ವಿಲವಿಲ
ಸಮೃದ್ಧಿಯೆಡೆ ಬೋರಲು ಪಾತ್ರೆ, ಡಬ್ಬಿಗಳು
ಸಂಭ್ರಮದ ಹಿಂದೆ ತೀರದಾಸೆಗಳು
ತಿನಿಸರಾಶಿಯಡಿ ತನ್ನುಪವಾಸ
ಇಣುಕುಹಾಕಿ ಕಾಡುವಾಗ ತಾನು
ಹೂದೋಟದ ಕಾವಲು, ಮುಳ್ಳಬೇಲಿಯಾದಂತೆ..
ಒಳಗೆ ಮನಮರ್ಕಟನ ಜಿಗಿದಾಟ
ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ.

ಎಳೆದಿತ್ತ ಮತ್ತಿದ್ದಲ್ಲಿಗೇ
ಕಟ್ಟಿ ಹಾಕಿತು ಬುದ್ಧಿ..
ಮೇಲೆ ಕೂತಾಡಿಸುವಾತಗೆ
ಎಲ್ಲ ಸ್ವಸ್ಥಾನ ಸೇರಿದ ನೆಮ್ಮದಿ.
ಆತನದೆರಡೂ ಲೀಲೆಯೇ ಸರಿ,
ಪಾತ್ರ ಹಂಚಿಕೆಯಲಿಷ್ಟು ವಿಪರೀತವೇಕೋ?!
ಗೊಂಬೆಯಾಟವೇ ಸರಿ, ಸೂತ್ರವೆಳೆದೆಳೆದು
ಕೆಲವಕಷ್ಟೇ ನೋವೀವುದೇಕೋ?!.

ಛತ್ರ ದೊಡ್ಡದೇ, ಉಗ್ರಾಣವೂ..
ಕಾವಾತನದಷ್ಟೇ ಬಲುಕಿರಿದು ಕೋಣೆ.
ಮದುವೆ ಉಳ್ಳವರದೇ, ಬಂದವರೂ ಉಳ್ಳವರೇ..
ಎಲ್ಲ ಚೆಲ್ಲಿದ ಹಾಳುಮೂಳು ಕಸಕಡ್ಡಿ
ಹೆಕ್ಕಿ ಶುದ್ಧ ಮಾಡುವರಷ್ಟೇ ನಿರ್ಗತಿಕರು.
ಇರುವುಸಾವಿನ ಪ್ರಶ್ನೆಯುತ್ತರ ಎಟಕುವೆತ್ತರ,
ಈಯದಿರೆ ಯಾರೂ, ಕದಿಯದುಳಿವುದು ಕಷ್ಟ..
ವಿಶ್ವಾಮಿತ್ರನೇ ಸೋತಲ್ಲಿವರು ಗೆಲುವುದು ಕಷ್ಟ..





Wednesday, March 27, 2013

ಅಡಗುವಿಕೆಗಳು


--------------------
ಭುಗಿಲೇಳುವ ಜ್ವಾಲೆಯಲೂ ಪುಟ್ಟಪುಟ್ಟ
ಕಿಡಿ ನಕ್ಷತ್ರಗಳಿವೆ, ಬಿಡುಬಿಡುವಾಗಿವೆ.
ಶಾಖದೆಡೆಯಲಿ ಮುದ ತರುವ ನೋಟ.

ಗಟ್ಟಿ ಉರುಟು ಬಿಳಿಮುತ್ತಲೂ ಹಳೆಯ
ಸ್ವಾತಿಹನಿಯಿದೆ, ಬಳಬಳ ಬಳುಕುತಿದೆ.
ಆಕಾರದೊಳು ಆಕಾರವೇ ಇರದ ಸಾರ.

ಮುಳ್ಳುಕಂಟಿಯ ಬೇಲಿಪೊದೆಯಲೂ ಸಣ್ಣ
ಹಳದಿ ಹೂವ ಹುಟ್ಟಿದೆ, ಮೊಗ್ಗು ಹೊನ್ನಾಗಲಿದೆ.
ಚುಚ್ಚುವಿಕೆಯೊಡಲಲಿ ಅರಳುವ ಸೆಳೆತ.

ಜಗವೇ ಹೀಗಲ್ಲವೇ..
ಕಂಡಂತಿಲ್ಲ, ಕಂಡದ್ದಲ್ಲಿ ಹೊಂದುವದ್ದಲ್ಲ..
ನಾನೂ ಹಾಗೇ...
ಇಲ್ಲೊದಗುವುದಿಲ್ಲ, ಅಲ್ಲಿಗೆ ದಕ್ಕುವುದಿಲ್ಲ.
ನೀನೂ ಹಾಗೇ...
ಬರುವುದಿಲ್ಲ, ಇರುವಲ್ಲಿ ನೀನೆನಿಸುವುದಿಲ್ಲ.

ಮನಸೇ, ಕಣ್ಣು ನಂಬುವ ಕ್ಷಣ,
ನೀನೊಳಗೊಳುವುದಿಲ್ಲ,
ನೀ ನಂಬುವ ನೋಟ,
ಈ ಕಣ್ಣು ಕಾಣುವುದಿಲ್ಲ.

ಪ್ರೇಮಚಂದ್ರಮನ ಶುಭ್ರಬಿಳಿಯಲೂ
ಬಯಕೆಯ ಕಲೆಯಿದೆ, ಕುಳಿಯಾಗುವಷ್ಟಿದೆ.
ಪರಿಪೂರ್ಣತೆಯಲಿ ಸಾಲದೆಂಬ ಅಪವಾದ.

.

Tuesday, March 26, 2013

ಅದೂ ಅಲ್ಲಿಗೇ, ಇದೂ ಅಲ್ಲಿಗೇ


----------------
ಸೋಲಿನ ಮೈದಾನದ ತುಂಬ ಗೀಟುಗಳು
ಬಿಳಿಬಿಳಿ ಕಣ್ಣುಕುಕ್ಕುವ
ಸುಡುವ ಸುಣ್ಣದ ಗೆರೆಗಳು,
ಮಿತಿ, ಅನುಮತಿಗಳ ಸೂಚನೆ
ಒಮ್ಮೊಮ್ಮೆ ಚೌಕಟ್ಟೂ ಆಗುವ ರೇಖೆಗಳು..

ಹಿಂದುಮುಂದೆಲ್ಲಾ ಓಟಗಳು, ಸ್ಪರ್ಧೆಗಳು
ಹುಡುಕಾಟ ಮತ್ತೊಂದಷ್ಟು ಜಿಜ್ಞಾಸೆಗಳು.
ಸತ್ಯ ಬರೆಯಿರಿ, ಸತ್ಯ ನುಡಿಯಿರಿ,
ಸತ್ಯ ಹಾಡಿರಿ, ಸತ್ಯವನೇ ಬಿಡಿಸಿರಿ.
ಕೊನೆಗೋ ಮೊದಲೋ... ಸತ್ಯ ತಲುಪಿರಿ....
ಪ್ರೋತ್ಸಾಹದ ಕೂಗು ಮಾರ್ನುಡಿದು
ಬರುಬರುತ್ತಾ ಕರ್ಕಶವಾದಂತೆ..

ಹಿಡಿವಾಸೆಗೆಲ್ಲಾದರೂ ಕೊನೆಯುಂಟೇ...
ಹಿಡಿತಕ್ಕೆ ಬಂದದ್ದು ಅದಲ್ಲವೆಂಬ ದಿವ್ಯಜ್ಞಾನ ಬೇರೆ...
ಓಟದಲೇ ಬಳಲಿ ಜೀವ, ನಡಿಗೆ ಮರೆತು
ಕೊನೆಗೀಗ ನಿಲ್ಲುವುದನ್ನೂ...
ತಾ ತಾನಲ್ಲದ ಭ್ರಮೆಯ ಮೋಡಿಯೊಳಗೆ.

ಸತ್ಯ ನಿರಾಕಾರ, ಅದೊಂದು ಮೌನ
ನಿರ್ವರ್ಣ, ಅಷ್ಟೇ ಏಕೆ ಅದೊಂದು ನಿರ್ವಾತ..
ಅಲ್ಲಿ ಉಸಿರಿಗೆಡೆಯಿಲ್ಲ, ಹಾಗೆ ನಿರ್ಜೀವವೂ ಹೌದು.
ಅದಕೇನು ವರ್ಣನೆ, ವಿವರಣೆ ಮತ್ತಾಲಾಪನೆ?!
ಸಮೀಪಿಸಿದಂತೆಲ್ಲಾ ದೂರವಾಗುವ ಮೃಗಜಲ
ಆ ಸತ್ಯವೇ ಬೇಕೇಕೆ, ಕಲ್ಪನೆ ಸಾಲದೇ?

ಕಲ್ಪನೆ ಚಿತ್ರ, ದನಿ, ಅಕ್ಷರ, ಹಾಡು
ಹೀಗೇ..ಏನಾದರೂ ಆದೀತು,
ಅಲ್ಲಿ ಗೆರೆಯಿಲ್ಲ, ಮಿತಿ-ಅನುಮತಿಗಳಿಲ್ಲ.
ಹೇಗೆಂದರೆ ಹಾಗೆ, ಎಲ್ಲೆಂದರಲ್ಲಿ ತೂರಿ
ತುಂಬುವುದೂ ಗೊತ್ತದಕೆ, ಮತ್ತಡಗುವುದೂ..

ಸತ್ಯವಲ್ಲಷ್ಟೇ ಇದೆ ಕೊನೆಯೆಂಬಲ್ಲಿ
ಎಲ್ಲ ನಡಿಗೆ, ಓಟಗಳೂ ಆ ಕಡೆಗೇ ಹೌದು
ಕಲ್ಪನೆಯೂ ಒಯ್ಯುವುದು, ಸತ್ಯ ಶೋಧನೆಯೂ...
ನಿರಾಸೆಯ ತುತ್ತುಣಿಸುವ
ಶ್ವಾಸಗಟ್ಟುವ ಪಂದ್ಯವೇಕೆ,
ಉಮೇದೇ ಉಸಿರಾದ
ಗೆದ್ದ ಸ್ವಪ್ನದ ಹಾರುನಡಿಗೆಯಾಗದೇ?!








ಅವ ಹೇಳೇ ಇಲ್ಲ..

---------------

ಬರೆದಾತಗಷ್ಟೇ ಗೊತ್ತು ಚಿತ್ರ ಯಾತರದೆಂದು
ಹಾಳೆ, ಲೇಖನಿ, ಬಣ್ಣ, ಈ ಕಣ್ಣಿಗೂ ಅಲ್ಲ.
ಜೀವತುಂಬಿದ ಬೆರಗು ಆತನದೆ ಕೈಚಳಕ,
ಚಲಿಸುತಿವೆ ಒಳಗೆಲ್ಲ, ತಳಕಚ್ಚಿ ಕೂತಿಲ್ಲ...

ಗಂಡೊಂದು ಹೆಣ್ಣೊಂದರಂತಿದೆ,
ಹಕ್ಕಿಯೋ, ಮೃಗವೋ,
ಚಿಟ್ಟೆಯೋ ನರನೋ ತಿಳಿಯುತಿಲ್ಲ..
ದೇಹ, ಕೈಕಾಲು, ತಲೆ, ಮುಖ ಎಲ್ಲ ಇವೆ
ಮನಸಿದೆಯೇ... ಕಾಣುತಿಲ್ಲ.

ಕಣ್ಣೆರಡಿವೆ, ಅಳುವದೋ ನಗುವದೋ..
ಬಾಯ್ದೆರೆದಿವೆ, ಮಾತಿಗೋ, ತುತ್ತಿಗೋ..
ಗಂಟಲುಬ್ಬಿವೆ, ಹಾಡಿಗೋ, ದುಗುಡಕೋ...
ದೇಹ ಬಾಗಿವೆ ಭಾರಕೋ, ಶರಣಾಗಿಯೋ
ಗೊತ್ತಾಗುತಿಲ್ಲ.

ನಡುವಲೇನೋ ಹುಯ್ದಾಡಿದಂತಿದೆ-
ಅತ್ತಿಂದಿತ್ತ-ಇತ್ತಿಂದತ್ತ, ಇದ್ದಂತೆ-ಮತ್ತಿಲ್ಲದಂತೆ.
ಜಲದಲೆ ಈಜಾಡಿಸುವ ಖಾಲಿಬುರುಡೆಯಂತೆ.
ಗಾಳಿಯಲೆ ಹೊತ್ತ ದೂರದ ಕೊಳಲುಲಿಯಂತೆ..
ದೃಢವಾಗಿ ನಿಲುತಿಲ್ಲ...

ಒಮ್ಮೆ ತೇಲುತ, ಒಮ್ಮೆ ಮುಳುಗಿ.
ಒಮ್ಮೆ ಕುಂಟುತ, ಒಮ್ಮೆ ರಭಸದಿ.
ಒಮ್ಮೆ ಬೆಳಗುತ, ಒಮ್ಮೆ ಮಸುಕಾಗಿ.
ಒಮ್ಮೆ ನೀಡುತ, ಒಮ್ಮೆ ಬರೀ ಬೇಡಿ.
ಒಮ್ಮೆ ತೀವ್ರಕೇರುತ, ಒಮ್ಮೆ ಮೌನವಾಗಿ..
ಸ್ಥಿರವಾಗಿ ಉಳಿದಿಲ್ಲ....

ಪ್ರೀತಿಯೋ, ಭ್ರಾಂತಿಯೋ...
ನಿರ್ನಾಮದಾಸೆಯೋ, ನಿಸ್ಸೀಮ ಪ್ರೇಮವೋ..
ಇದ್ದುಸಿರಗಟ್ಟಿಸಿ, ತನ್ನುಸಿರ ತುಂಬುವಾಸೆಯೋ..
ಸಾವೋ, ಜೀವಾಮೃತದ ಗುಟುಕೋ..
ತುಂಬಿ ತುಳುಕುತಿರುವುದು ಸತ್ಯ,
ಸಾರ ಸ್ಪಷ್ಟವೆನಿಸುತ್ತಿಲ್ಲ...

ಬಣ್ಣಬಣ್ಣದ್ದು, ನೂರು ರೇಖೆ, ಬಿಂದುಗಳ,
ಅಷ್ಟೇ ಬಾಗುಬಳುಕುಗಳ, ಅಸೀಮ ವೃತ್ತ, ಚೌಕಗಳ
ಅಪ್ರತಿಮ ಸಮಾಗಮ..
ಚಿತ್ರ ಸುಂದರವೇನೋ ನಿಜ,
ಸರಿಯೋ-ತಪ್ಪೋ ಹೋಲಿಸಬಹುದಾದದ್ದಿಲ್ಲ,
ಲೌಕಿಕವೋ-ಅಲೌಕಿಕವೋ ಅವ ಹೇಳೇ ಇಲ್ಲ...



Monday, March 25, 2013

ಹುಣ್ಣಿಮೆಯ ಹಿಂದಿನಿರುಳೇ ನೀನು?

---------------

ನಿಶೆ ಹರಡಿ ಕರಿಹೆರಳ,
ಗಿರಗಿರನೆ ಇಳೆಸಖಿಯ
ಜೊತೆಗೂಡಿ ತಿರುಗಿದ್ದಕೆ
ಉದ್ವೇಗದ ಉತ್ಸಾಹದ ಬೆವರಹನಿ
ಚಿಮ್ಮಿ, ಚೆಲ್ಲಿ ಚುಕ್ಕಿತಾರೆ ಹೊಳೆದಂತೆ...
ಬಿಳಿತೆಳುಪರದೆ ಹಿಂದೆ ಕಪ್ಪುಚೆಲುವೆ,
ನಾಚಿ ಅರೆಗಣ್ಣ ತುಂಡುಪಾಪೆ ಚಂದ್ರನಂತೆ..
ನಾಳೆ ಬಾನು ಸುರಿವ ಪ್ರೀತಿಯ
ಹಾಲಮಳೆಗಾಗಿ ಕಾದು ನಿಂತಂತೆ..
ಹುಣ್ಣಿಮೆಯ ಮುನ್ನಾದಿನದೊಂದು ರಾತ್ರಿ.

ಒಳಗೆ ವೈಶಾಖದ ಧಗೆ,
ತಂಪರಸಿ ಹೊರನಡೆದ ತನುಮನ,
ಕಲ್ಪವೃಕ್ಷದ ನೆರಳ ಹಾಸಿನಾಶ್ರಯಕೆ..
ಗರಿಯೆಳೆಯೆಳೆ ಬೆಳ್ಳಿ ಲೇಪ ಹೊದ್ದು ಮಿರಮಿರ
ಮೌನಕೆ ಸಡ್ಡು ಹೊಡೆವ ಬಾವಲಿರೆಕ್ಕೆ ಸದ್ದು ಪರಪರ.
ಮೆಲ್ಲಬೀಸಿತು ಗರಿ... ಬೆವರಪಸೆ ಹೀರಿದ ಗಾಳಿ,
ಮೈಯ್ಯ ಉಷ್ಣವ ತಲುಪಿದ್ದು ತಂಪಾಗಿ..
ಸಣ್ಣಗಾಳಿಯಲೆ, ದೊಡ್ದಸಾಂತ್ವನ.
ಯಾಕೋ ಹಿಂದೋಡಿ ಮತ್ತೆ ಮನ ಹಗಲ ತೆಕ್ಕೆಗೆ.

ನೀ ಬಂದು ಹೋದೆ, ಛಾಪಿಳಿಸಿ ಹೋದೆ.
ಖಾಲಿ ಮನದಂಗಳದ ಬಿಸಿಯುಸಿರು
ಹಿರಿತನದ ಛಾಯೆಯಡಿ
ವಾತ್ಸ್ಯಲ್ಯದ ಲೇಪದಲಿ,
ಮಿರಮಿರ ಮಿಂಚಿದ್ದೂ ಹೌದು,
ತಂಪಾದದ್ದೂ ಹೌದು.
ಕೊರತೆಗೊಂದು ಸಡ್ಡು ಹೊಡೆದ ಆ ಕರೆ
ನಾನಲ್ಲದ್ದುದ ನಾನಾಗಿಸಿದ್ದೂ ಹೌದು.
ಸಾಂತ್ವನದ ಹಿರಿಸೊಡರು ಕಿರು ಅಸ್ತಿತ್ವವೇ,
ರಾತ್ರಿಯ ಬೆಳಕಿಗೊಯ್ವ ಸಾಧ್ಯತೆಯ ಹೊಳಪಲಿ
ನಿನಗೊಂದು ಪ್ರಶ್ನೆ....

ನಾಳೆ ಬರಲಿರುವ ಹುಣ್ಣಿಮೆಯ
ಮುನ್ನಾದಿನದಿರುಳೇನೋ ನೀನು?!






Saturday, March 23, 2013

ಹೋಗಿ ಬಿಡುವ ಮಾತು ಬೇಡ...

---------------------------

ನಿನ್ನ ತಪ್ಪಲ್ಲ ಬಿಡು, ಕಹಿಯಷ್ಟೇ ಉಂಡು
ಅರಗಿಸಿಕೊಂಡಿರುವೆ, ಇನ್ನೇನುಣಿಸಬಲ್ಲೆ?
ನನ್ನೆದುರೂ ಎಲ್ಲ ಇತ್ತು, ಎಲ್ಲ ಉಂಡರೂ,
ನಾ ಕಹಿಯನರಗಿಸಿಲ್ಲ, ಕಹಿಯುಣಿಸಲಾರೆ.
ಕಪಟವೆನಬೇಡ, ಇದು ಅತಿ ವಿನಯವೂ ಅಲ್ಲ.
ಸುಳ್ಳು ಬಿರುದು ಹಿಂಡಿ ಕಣ್ಣೀರಾಗಿಸುತ್ತದೆ.
ಇದ್ದುದೆಲ್ಲ ನೀಡಬಲ್ಲೆ, ಇಲ್ಲದ್ದಲ್ಲವಲ್ಲಾ?!

ತಾಳ್ಮೆಯೊಂದು ಶಕ್ತಿ ಒಲವೇ, ದೌರ್ಬಲ್ಯವಲ್ಲ.
ನಾ ನಗುವುದಾದರೆ ನಿನ್ನ ಪ್ರೀತಿಸಿದ್ದಕ್ಕೆ, ಇನ್ನೇನೂ ಅಲ್ಲ.
ನಾ ಪ್ರೀತಿಸುತ್ತಿರುವುದು, ಮುಂದೆ ಪ್ರೀತಿಸುವುದೂ
ಅಂದೊಮ್ಮೆ ನೀನೆನ್ನ ಪ್ರೀತಿಸಿದ್ದಕ್ಕೆ, ಇನ್ನೇನೂ ಅಲ್ಲ.
ನನ್ನೊಳಗೆ ಬೇಡಿಯಿಲ್ಲ, ಸರಪಳಿಯಿಲ್ಲ ಅಷ್ಟೇಕೆ,
ಬಾಗಿಲೂ ಇಲ್ಲ ಬಂಧಿಸುವುದಕೆ, ಎಲ್ಲ ಮುಕ್ತ ಮುಕ್ತ
ಹಾಂ....ಪ್ರೀತಿಗಷ್ಟೇ... ಇನ್ನೇನಕೂ ಅಲ್ಲ.

ಗಾಳಿ ನಿಂತೊಡೆ ಬೂದಿ ಕೆಂಡ ಮುಚ್ಚುವುದು,
ಆರಿಸಿ, ತಣಿಸುವುದಿಲ್ಲ.
ಮಾತೂ ನಿಂತು ಒಮ್ಮೊಮ್ಮೆ ಪ್ರೀತಿಯ ಮುಚ್ಚುವುದು..
ಅದಲ್ಲವಾಗಿಸುವುದಿಲ್ಲ.
ಮಾತ ಹೊರಡಿಸಿ ಮುತ್ತಾಗಿಸುವಾ.
ಸರಸದ ಗಾಳಿಗೆ ಬೂದಿ ಹಾರಿ, ಕೆಂಡ ನಿಗಿನಿಗಿಸೆ
ಮೌನ ವಿರಳವಾಗದೇ ವಿಧಿಯಿಲ್ಲ...

ವಿಷ ಬಿತ್ತಲು ಬರುವುದಾದರೂ ಹದವಾದೆದೆಯಿದೆ,
ಅಮೃತವಷ್ಟೇ ಬೆಳೆವ ಸತ್ವವಿದೆ.
ಹೋದರೂ ಬರುತಿರು,
ಹೋಗಿಬಿಡುವ ಮಾತು ಬೇಡ.
ಯಾಕೆಂದರೆ ನಿನಗೆಂದೂ ತಡೆಯೆನ್ನಲಿಲ್ಲ..

ಪ್ರಶ್ನೆಯೆದುರು ಬಗ್ಗಬೇಡ
ಮತ್ತಷ್ಟು ಕುಗ್ಗಿಸುತ್ತದೆ,
ಇಲ್ಲಿ ಉತ್ತರವೆಂಬುದಿಲ್ಲ.
ಸಂಶಯವದ ನೋಯಿಸೀತು, ಆದರೆ
ಪ್ರೀತಿ ಆತ್ಮದ ಉಸಿರು, ಆತ್ಮ ಸಾಯುವುದಿಲ್ಲ.







Sunday, March 17, 2013

ನೀನೇ ಹೇಳು...


---------

ನೀ ನೆಟ್ಟ ದಿನವೂ ಹೀಗೇ ಇತ್ತು

ಏನೋ ನೋವು...

ಕಲ್ಲಾಗಿದ್ದುದಕೆ ಮನಸು,

ಬಲವಾಗಿಯೇ ನೀ ಹೊಡೆಯಬೇಕಿತ್ತು,

ಮೊದಲ ಕೆಲ ಹೊಡೆತಗಳು ನಿನ್ನ ಬೆವರಿಳಿಸಿತ್ತು....

ಒಂದು ಗೀರಾದದ್ದೇ ಸರಿ ನೋಡು,

ಆಮೇಲೆಲ್ಲ ಸರಾಗ,

ನೀ ತೋಡುತಲೇ ಹೋದೆ,

ಗುಳಿಯಾಗುತಲೇ ಹೋಯಿತು..

ನೀ ನೆಟ್ಟೆ, ಅದು ತೆಕ್ಕೆಯೊಳ ಸೇರಿಸಿಕೊಂಡಿತು....



ನೀ ಕಿತ್ತ ದಿನವೂ ಹಾಗೆಯೇ ಇದೆ,

ಒಂದಲ್ಲ, ನೂರು ನೋವು..

ಇಂದೂ ಅದೇ ಹರಿಯುತಿದೆ,

ಕಣ್ಣೀರಲ್ಲ, ಕೆಂಪು, ಬಿಸಿಬಿಸಿ ರಕ್ತ....

ಅಂದು ನೀ ಆಳಕಿಳಿಸಿದೆ ಅಂದುಕೊಂಡೆ,

ಅದು ಹೊರಭಿತ್ತಿಯಷ್ಟೇ ಹೊಕ್ಕಿತ್ತು...

ಆಮೇಲೆ ಬೇರಿಳಿದದ್ದು, ನಾ ನನ್ನನೆರೆದದ್ದು,

ಅದು ಜೀವವಾಗಿದ್ದು, ಅರಳಿ, ಹೂವಾಗಿದ್ದು.

ಕಂಪು ಬೀರಿ ಇರುವು ಜಗಜ್ಜಾಹೀರಾಗಿದ್ದು,

ಜೊತೆಗೆ ನನ್ನ ಹೆಸರಳಿಸಿ ತಾನೇ ತಾನು ಮೆರೆದದ್ದು...



ಕೀಳುವುದೇ ಆಗಿದ್ದರೆ ಇಷ್ಟೇಕೆ ಬೆಳೆಯಬಿಟ್ಟೆ?

ಆಳಕಿಳಿವ ಮುಂಚೆ ಸುಲಭವಿತ್ತು ನಿನಗೂ, ನನಗೂ..

ಇರಲಿಬಿಡು,

ನೆಟ್ಟಾಗಲೂ ಬಾಗಿಲ ಬಡಿದು, ಕಾವಲನತ್ತ ಕಳಿಸಿ

ಹೊಡೆದು ಗುಳಿ ತೋಡಿ ಶ್ರಮಪಟ್ಟು ನೋಯಿಸಿದೆ,

ಕಿತ್ತಾಗಲೂ ಮುಚ್ಚಿದ್ದ ಗಾಯಗುಳಿ

ಮತ್ತೆ ಹಸಿಮಾಡಿ

ಹೆಪ್ಪುಗಟ್ಟಿದ್ದ ರಕ್ತಧಾರೆಯಿಳಿಸಿ,

ಕೆಡಿಸಿ ಶ್ರಮಪಟ್ಟೇ ನೋಯಿಸಿದೆ...



ಅದರೀಗ ನನದಿಲ್ಲ, ನೀನೂ ಇಲ್ಲದೆ

ನಾ ಹೆಸರಿಲ್ಲದವಳಾಗಿರುವೆ,

ಮನಸೀಗ ಕಲ್ಲಲ್ಲ, ಹೂವಷ್ಟು ಮಿದು,

ನಾ ಜಗದೆದುರು ನಿಂದಿರುವೆ,

ನೀನಿರದೆ ಒಡ್ಡಿಕೊಂಡಿರುವೆದೆಗಿಂದು

ಕಾವಲಿಲ್ಲ, ಬಾಗಿಲೂ ಇಲ್ಲ, ಎಲ್ಲ ನೀ ಮುರಿದಿರುವೆ...

ಹೇಗೆನ್ನ ರಕ್ಷಿಸಿಕೊಳಲಿ,

ನೆನಪುಗಳಿಂದ, ಕನಸುಗಳಿಂದ,

ಆಸೆಗಳಿಂದ ಮತ್ತೆ ನಿನ್ನಂಥವರಿಂದ?!





Wednesday, March 13, 2013

ಬಿಡದೆ ಕಾಡುವ ಅಳಲು


-------------
ತೊಡಗಲಾರದ ಅಳಲು,
ಸುಮ್ಮನೇ ಕಾಡಿದ್ದಕೆ,
ಗುರಿಯ ಮರೆಯಲೆಲ್ಲೋ ನಿಂತು,
ತುಡಿತದ ತಾಳಕ್ಕೆ ಕುಣಿದ ಆಸೆ,
ಶ್ರೀಗಣೇಶಾಯನಮಃ ಎನುತಲೇ,
ಗಾಳಿಗಾಡಿದ ಕೆಸುವಿನೆಲೆಯಿಂದುದುರಿದ
ಹನಿಯಂತೆ ಜಾರಿ ಹೋಗಿದೆ....

ಮಿಣಮಿಣನುರಿವ ಕಿರುಹಣತೆ ಆತ್ಮವಿಶ್ವಾಸ,
ಒಂದಷ್ಟು ಸುರಿದು ಯತ್ನದೆಣ್ಣೆ,
ಪ್ರೋತ್ಸಾಹದ ಕೈಯ್ಯೆರಡರ ರಕ್ಷಣೆ,
ಶ್ರದ್ಧೆಯೇ ಮೈವೆತ್ತ ಮನವು
ಗುರಿಯ ದೇವನಾಗಿರಿಸಿ,
ಸದಾ ನೆಲೆಸಿತ್ತು ದೇಹದೇಗುಲದಿ......


ದೃಢಗೊಳದ ಎಳಸು ಹಂಬಲದ್ದು.
ಆಸೆಯೇ ಉಸಿರಾಗಿ,
ಸಾಧನೆಯೇ ನಾಡಿಯಾಗಿ,
ಕಣಕಣ ಜೀವಜಲದಿ ಯತ್ನ ಪ್ರತಿಫಲಿಸಿ,
ಯೋಜನೆಯಾಗರಳದ ಯೋಚನೆಯಾಗೇ
ಉಳಿದ ಮುರುಟುಮೊಗ್ಗು..

ಧ್ಯಾನ ತಲುಪದ ಶಕ್ತಿಕೆಂದ್ರ,
ಅದ್ಯಾವ ಮೂಲೆಯಲಡಗಿತೋ ಹಣೆಯ ಬಿಟ್ಟು!?
ಉದ್ದೀಪನಗೊಳದ ಚಕ್ರಗಳು,
ಸಮಾಧಿಯತ್ತ ಮುಖವೂ ಮಾಡವು....
ಎಡವಿದ್ದಾದರೆ ಅದೆಲ್ಲಿ,
ತಡೆಯಬೇಕಾದರೆ, ಮುನ್ನಡೆವುದಾದರೆ ಅದೆಲ್ಲಿ?!

ಸಂಧಿಗ್ಧತೆಗೆ ತಕ್ಕಡಿಯೊಂದು ತಟ್ಟೆ,
ಇನ್ನೊಂದರಲಿ ನನದೆಲ್ಲವನಿಟ್ಟೆ..
ಅದೇ ತೂಗುತಿದೆ, ನನದೇನೂ ಇಲ್ಲದಂತೆ, ಅಲ್ಲದಂತೆ..
ಭಾರವಾಗುವುದೋ, ಹಗುರಾಗುವುದೋ..
ಇನ್ನೊಂದಷ್ಟು ಪ್ರಶ್ನೆಗಳಾ ತಟ್ಟೆ ಸೇರಿ,
ಅದಿನ್ನೂ ತೂಕವಾಗುತಿದೆ,
ನಾ ತೃಣವೆಂಬಂತೆ ಮೇಲೆ ಮೇಲೆ...













ಅಮ್ಮ ಹೀಗನುತಿರಬಹುದೇ?!..


----------------------
ಆ ಮನೆಯ ಸೂತಕದಲ್ಲಿ,
ಮಡಿಲಲಾಡಿದ ಅನುಬಂಧಗಳು..
ಕಣ್ಣೀರು ಸುರಿಸುತಲೇ ಕೈ
ತಡಕಾಡಿ ರಾಶಿಯಿಂದೆತ್ತುತಿವೆ.
"ಇದು ನನ್ನ ಮದುವೆಯದು,"
"ಇದು ಬಾಣಂತನಕೆ ನಾನಿತ್ತದ್ದು,"
"ಇದು ನನ್ನ ಗೃಹಪ್ರವೇಶದ್ದು,"
ಮನಗಳಿಲ್ಲಿಂದಲ್ಲಿಗೆ ಜಾರಿ,
ಆ ಶುಭಗಳಿಗೆಗಳೊಳಗೆ,
ಸವಿ ನೆನಪುಗಳೊಳಗೆ..
ಅಳುಗಳು ಮೆಲುನಗುಗಳ ತೆರೆಮರೆಗೆ..

ಸತ್ತಮ್ಮನ ಮನವಿನ್ನೂ ಕಳಚಿಕೊಂಡಿಲ್ಲ,
ಅಲ್ಲೇ ಸುತ್ತಮುತ್ತಾಡುತ್ತಾ,
ಅಳುವ ಕಂದಮ್ಮಗಳ ಕಣ್ಣೀರೊರೆಸಲು
ಎಂದಿನಂತೆ ಕೈ ಚಾಚಿ ಒಡ್ಡುತಿದೆ.
ಕೈ ತಲುಪುವ ಮೊದಲೇ ಆವಿಯಾದ
ಕಣ್ಣೀರ ಅಲ್ಪಾಯುಸ್ಸಿಗೆ,
ತಾ ಬಿಟ್ಟು ನಡೆದುದ ಹಂಚುವ ಪ್ರಕ್ರಿಯೆಕೆ,
ಮೂಕಸಾಕ್ಷಿ ತಾನೇ ಕಣ್ಣೀರಾಗ ಹೊರಟಿದೆ.
ಆದರೆ ಅಳಲಾಗದ, ಹಗುರಾಗಲಾರದ,
ಅಸಹಾಯಕತೆ ಸಾವಾಗಿ ಬಂದೆರಗಿಯಾಗಿದೆ.

"ಕಪಾಟು, ತಿಜೋರಿ ಖಾಲಿಯಾಗಿಸಿದ
ಕಂದಮ್ಮಗಳೇ, ಇಲ್ಲೂ ಒಂದಿದೆ ಪೆಟ್ಟಿಗೆ..
ತೆಗೆದಾದರೂ ನೋಡಿ,
ನಾ ಹೊಲಿದ ಮೊದಲ ಕೂಸಿನ ಕುಲಾವಿ,
ಟೊಪ್ಪಿ, ಸಾಕ್ಸ್- ಸ್ವಲ್ಪ ಹರಿದಿದೆ, ಬಣ್ಣ ಮಾಸಿದೆ ಅಷ್ಟೇ...
ಮೊದಲ ಹಲಗೆ, ಬಳಪ, ಪುಸ್ತಿಕೆ, ಪೆನ್ಸಿಲ್...
ಇಲ್ಲ ಎಸೆದಿಲ್ಲ, ಮುರಿದು ಚೂರಾಗಿವೆ ಅಷ್ಟೇ...
ಮೊದಲ ಚೀಲ, ತಿಂಡಿ ಡಬ್ಬ, ಮೊದಲ ಶೂ,
ಮೊದಲ ಮೊಗ್ಗಿನ ಜೆಡೆಯ ಫೋಟೋ,
ಮೈನೆರೆದಂದಿನ ಚೊಂಬು, ಲೋಟೆ, ಚಾಪೆ,
ಯಾವುವೂ ಇಲ್ಲವಾಗಿಲ್ಲ, ಹಳೆಯದಾಗಿವೆ ಅಷ್ಟೇ...

ಅದಷ್ಟೇ ಅಲ್ಲ, ಇಲ್ಲೊಳಗೂ ಒಂದಿದೆ
ಭದ್ರ ಮುಚ್ಚಿದ ಡಬ್ಬಿ, ಕಂಡರೂ ಕಂಡೀತು
ಕಣ್ಮುಚ್ಚಿ ಮನದಿಂದ ಮುಚ್ಚಳ ತೆಗೆಯಿರಿ..
ಮೊದಲ ಜ್ವರಕೆ ನಾನೋಡಿಸಿದ ನನ್ನ ನಿದ್ದೆ,
ಮೊದಲ ತೊದಲುನುಡಿಗೆ, ಬೀಳುಹೆಜ್ಜೆಗೆ
ನನ್ನ ಸಂಭ್ರಮ, ಮತ್ತಾತಂಕವೂ...
ಮೊದಲ ದಿನ ಶಾಲೆಗೆ ಹೊರಟಾಗಿನ
ನನ್ನ ಕಣ್ಣೀರ ಹನಿಗಳು...
ಮೊದಲ ಬಹುಮಾನದ ಆನಂದಾಶ್ರು,
ಮೊದಲ ಸೋಲಿನ ಪೆಟ್ಟಿನ ಗಾಯ,
ನಿಮ್ಮ ಬಾಣಂತನದಿ ನಾ ಸವೆಸಿದ
ಬೆನ್ನ ಹುರಿಗೋಲು,
ನಿದ್ರಾರಹಿತ ರಾತ್ರಿಗಳು,
ಮತ್ತೆ ನಿಮ್ಮ ಕಂದಮ್ಮಗಳ
ಈ ಎಲ್ಲಾ ಮೊದಲುಗಳು....

ಇಲ್ಲ ಮಕ್ಕಳೇ, ನಾ ನೆನಪಿಟ್ಟಿಲ್ಲ,
ನೀವಿತ್ತ ಸೀರೆಗಳು, ಒಡವೆಗಳು, ಐಷಾರಾಮಗಳು..
ಆದರೆ, ನೀವಿತ್ತ ಸುಖದ ಹಿನ್ನೆಲೆಯ ನೆನಪು,
ಸಂದರ್ಭ, ಧನ್ಯತಾಭಾವ, ಆ ಹೆಗ್ಗಳಿಕೆಗಳು..
ಹಾಂ.. ಕೆಲಕೆಲವು ನೋವು, ಹೀಯಾಳಿಕೆ
ತಿರಸ್ಕಾರ, ಅಸಡ್ಡೆ, ಉಪೇಕ್ಷೆಗಳು..
ನಿಮ್ಮನಿಮ್ಮ ಪಾಲಿನ ಜಾಗದಲೇ ಭದ್ರವಾಗಿವೆ.
ದಯವಿಟ್ಟು ಅವುಗಳ ಜೊತೆಗೊಯ್ದು ಬಿಡಿ ಇವನೂ.
ಒಯ್ಯಲಾರೆ ಜನ್ಮಜನ್ಮಾಂತರಕೆ ಜೊತೆಗೆ ನಾನವನು."







Tuesday, March 12, 2013

ನಿದ್ರಾಮಾತೆಯ ಮಡಿಲ ಕೂಸು ಕನಸು.

ಮುದ್ದಿಸುವಾಸೆಯ ಮುಚ್ಚಿದ ಕಣ್ಣ ಪಾಲು.
ಹೊತ್ತು ಮನದೆಡೆಗೆ ಕಣ್ಣ ದಾಪುಗಾಲು
ನನಸಾಗಿಸುವ ಮನದಾತುರದ
ಯತ್ನದ ಸಿಕ್ಕಲಿ ಸಿಕ್ಕಿ ಹರಿದು ಚಿಂದಿಚೂರು...

ಜಗಕೆಲ್ಲಕೂ ಆತುರ,
ಬಿತ್ತಿದ್ದು ಮೊಳೆವ ಮೊದಲೇ ಕೆದಕಿ,
ಎಳೆ ಬೇರ ಚುಚ್ಚಿ ಚಿವುಟುವ ಪರಿ
ತಾನೇ ತಿಳಿಯದ ತನ್ನ ಧಾವಂತಕೆ
ತನದೇ ಯತ್ನದ ವ್ಯರ್ಥ ಬಲಿ...

ಮೂಲೆಯ ಕಸ, ಮಾಡಿನ ಬಲೆ,
ಬಾಡಿದ ತೋಟ ಅಣಕಿಸುತಾವೆ...
ಮುಗಿವ ಮುನ್ನವೇ ಮುಗಿಸಿದ,
ಫಲಿತವಲ್ಲದ ಕಾರ್ಯಗಳು,
ಕೊಂದ ಕ್ಷಣಗಳ ಲೆಕ್ಕ ಕೇಳುತಾವೆ.

ಇಂದಲಿದ್ದು ನಾಳೆಗೆ ಲಂಘಿಸಲಿಕೆ
ಮನವೇನು ಮರ್ಕಟನೇ?!
ಒಂದಿರಬೇಕು ಗುರಿ, ಗುರು...
ಕಂಡಕಂಡಲ್ಲಿ ತೊಡಗಿಸಿಕೊಳಲು,
ಮೈಮನವೇನು ಸಹಸ್ರಬಾಹುವೇ?!

ಕನಸು ಕನಸಾಗರಳಲಿ,
ತನ್ನಷ್ಟಕ್ಕೇ ಬೆಳೆಯಲಿ, ಮನವಾವರಿಸಲಿ.
ಹಂಬಲದ ಬೀಜ ಬಿತ್ತಲಿ, ಯತ್ನದ ಬಳ್ಳಿ
ವಿಶ್ವಾಸದ ಸುತ್ತ ಹಬ್ಬಲಿ, ಹೂವರಳಿ,
ಮನದಂಗಳ ಸಫಲತೆಯಲಿ ಕಂಗೊಳಿಸಲಿ...









Sunday, March 10, 2013

ಅವನಿರುವುದು ಹೀಗೆ....


-------------------

ಬಂದಿದೆ ಮತ್ತಿನ್ನೊಂದು ಉಪವಾಸದ ದಿನ,

ಜಾಗರಣೆಯ ರಾತ್ರಿ.

ಒಂದುದಿನದ ಅನ್ನತ್ಯಾಗದ ಪ್ರತಿ,

ಉಳಿದೆಲ್ಲವಕೆ ಸುಖ ಕೇಳೋ ಶಿವರಾತ್ರಿ.



ತಿನದೆ ಕಳೆದ, ತಿಂಡಿಯತ್ತ ಇನ್ನುಳಿದ

ಗಳಿಗೆ ಲೆಕ್ಕ ಹಾಕುತಾ,

ಅಲ್ಲಲ್ಲಿ ಒಮ್ಮೊಮ್ಮೆ ಶಿವನ ಹೆಸರು

ಮೈಕಲಿ ಕೇಳಿದಾಗಷ್ಟೇ ನೆನೆಯುತಾ..



ಸಣ್ಣ ಸರತಿಯ ದೇಗುಲವ ದಾಟುವ ಹೆಜ್ಜೆ

ಒಳನಡೆಯದು, "ಇದು ನಮ್ಮವರು ಹೋಗುವದ್ದಲ್ಲ..."

ಇದರ ಶಿವ ಅವರವನಲ್ಲವಂತೆ.

ಲಿಂಗವೊಂದೇ, ಭೇದ ಮನದ ಬಿಂಬದಲಷ್ಟೇ.



ಢಂಬಾಚಾರವೆಂಬರಷ್ಟು ಜನ,

ಮಹಾಕಾರಣಿಕ ಆಚಾರವೆಂಬರಷ್ಟೇ ಜನ..

ಹಾಗಂದರೂ, ಹೀಗಂದರೂ...

ಅದೇ ಮಾಸದದೇ ದಿನ ಬಂದೇ ಬರುವುದು ಹಬ್ಬ.



ವಿಧಾತ ದಯಾಮಯ, ಇದ್ದರೂ ನಮ್ಮೊಳಗೇ,

ಇಲ್ಲವಾದರೂ ನಮ್ಮೊಳಗೇ...

ಮುತ್ತುವ ಕತ್ತಲ ಹಗಲಾಗಿಸಿಯೇ ಶುದ್ಧನವ,

ನಂಬಿದವರದೂ, ನಂಬದವರದೂ..



ಸೂರ್ಯ ಸುಡುವಷ್ಟು ಬಿಸಿಯೆನುತಾ,

ನಿಲುಕದೆಷ್ಟೆತ್ತರವೆನುತಾ,

ಬಿಟ್ಟೋಡಿದನೆನುತಾ ರಾತ್ರಿ ಮೇಲ್ನೋಡಿ ಉಗಿವಂತೆ,

ಅವನನಳೆಯುತಾ ಒಂದಷ್ಟು ನಿಂದೆ, ಮತ್ತಿನ್ನೇನೇನೋ..



ಹೆಸರವನದಾದರೂ ಉಪವಾಸಕೆ

ತನುಶುದ್ಧಿಯಾಗುವುದು ನಮದೇ.

ಮಾಡದುಳಿದ ಪಕ್ಷ ಅವ ಕೇಳುವುದಿಲ್ಲ,

ಅಳುಕು, ನಿರುತ್ತರ ಸಂಶಯವೂ ನಮದೇ.



ಅವನಲಿ ಪರೀಕ್ಷೆಯಿಲ್ಲ, ನಿರೀಕ್ಷೆಯೂ ಇಲ್ಲ,

ಅವನದೇನಿದ್ದರೂ ಏಕಮುಖ ಪ್ರೀತಿ.

ತಪ್ಪಿಗೆ ಪಾಠ, ಒಪ್ಪಿಗೊಂದು ವರವಿತ್ತು,

ಅಮಿತ ಜೀವರಾಶಿಗೆ ಅಸೀಮ ಪ್ರೇಮ.

ನಿಷ್ಕಳಂಕ, ನಿಷ್ಕಾರಣ, ನಿಷ್ಕಾಮ ಪ್ರೇಮ....

------------------------------------------------



Saturday, March 9, 2013

ನಿನ್ನೆ (ಮಾರ್ಚ್ ೮) ಅನ್ನಿಸಿದ್ದು, ಇವತ್ತು ಬರೆದದ್ದು...

--------------------
ಅದೊಂದು ಉರಿವ ಬೆಂಕಿಗೋಳ..
------------------------

ಚರ ಜಡದ ಮಿಲನದಲಿ
ಸೃಷ್ಟಿಯ ಓಂಕಾರ.
ಹೆಸರಿಲ್ಲ, ಗುರುತಿಲ್ಲದ
ಬರೀ ಮಾಂಸದ ಮುದ್ದೆ.
ಒಳಗೆ ಮಾರ್ದನಿಸಿದ ಅದೇ
ಓಂಕಾರದ ಮೆಲು ಬಾಲಗಾನ.
ಪಟಪಟನೆ ಮುಚ್ಚಿತೆಗೆವ
ಎವೆಗಳ ನಡುವದೇ ಕಣ್ಣು,
ಸಂವೇದನೆ ನೂರು.
ನಿದ್ದೆಯಲೂ ಜಾಗೄತಿ,
ಮುಖ ಸಮ್ಮಿಶ್ರ ಭಾವತೇರು..
ನಿರಾಕಾರ, ನಿರ್ಲಿಂಗ ಆತ್ಮ
ತೊಟ್ಟುಡುಗೆಯ ಹೆಸರಷ್ಟೆ ಸ್ತ್ರೀ...

ಬೆಳೆದ ಚೈತನ್ಯಕೆ
ಮೊಲದ ವೇಗ, ಚುರುಕು..
ಪುಟ್ಟ ಹೆಜ್ಜೆಯ ಪುಟುಪುಟು ಓಟ,
ಬೀಳದಂತೆ ಎಡವಂತೆ ನಡೆಸುವ
ಜವಾಬ್ದಾರಿಗೆ, ಕೈಜಾರುವ ಭಯಕೆ,
ಹಿಡಿಯಬಯಸುವ ಜನಕ,
ಪ್ರಶ್ನೆ, ತಡೆ, ಮಿತಿ ಸಂಹಿತೆ
ಮೀರಿದ ಶಕ್ತಿಯ ಪರಿಗೆ ಚಕಿತ,
ಒಳಗೊಳಗೇ ದಣಿಯುತಾನೆ.
ಅದು ಹುಮ್ಮಸ್ಸೇ ಅಸ್ತಿತ್ವವಾದ ಚೇತನ!

ಚೈತನ್ಯ ಬೆಳೆಯುತಿದೆ,
ಅಕಾರ, ಆಚಾರ-ವಿಚಾರದಲ್ಲೂ,
ಸೌಂದರ್ಯದ ಸಾಕಾರದಲ್ಲೂ..
ಜಿಂಕೆಯಂತೆ ನೆಗೆವ,
ಪುಟಿದು ಚಿಮ್ಮುವ ಉತ್ಸಾಹ.
ಅದೃಶ್ಯ ಸರಪಳಿ ಹಿಡಿದು
ಹಿಂಬಾಲಿಸುವ ಜನಕ.
ಹಿಡಿಯಲಾಗದ, ತಡೆಯಲಾಗದ
ಓಟಕೆ ಸೋಲುತಾನೆ.
ಅದು ಚಲನಶೀಲತೆಯ ನಿತ್ಯೋತ್ಸವ!


ಹಲವು ಅಡೆತಡೆ ಮೀರಿ,
ಪ್ರಶ್ನೆಗುತ್ತರಿಸಿ, ದಾಟಿ,
ಹಾರಿ ಬಂದ ಚೈತನ್ಯವೀಗ
ತನ್ನ ಸಮರ್ಥಿಸಿ, ಬೆಂಬಲಿಸಿ
ನಿರೂಪಿಸಿ, ಕಾಪಿಟ್ಟುಕೊಳುವ
ಘರ್ಷಣೆಯಲಿ ಹತ್ತಿ ಉರಿದು
ನೊಂದು, ಬೆಂದು ಕೆಂಪು ಬಿಸಿಗೋಳ....
ಮಾತು ಕಿಡಿ, ಉಗುಳು ಬೆಂಕಿ,
ಉಸಿರುಸಿರೂ ಹೊಗೆಯಾಡುತಿದೆ...
ಅದು ಬೂದಿಮುಚ್ಚಿದ ನಿಗಿನಿಗಿ ಕೆಂಡದುಂಡೆ!

ಹಕ್ಕ ಭಿಕ್ಷೆಯಂತೀವ ಸೋಗಲಿ
ಚೈತನ್ಯಕೆ ಸರಪಳಿಯ ವರ
ಕರಿಮಣಿಯ ವೇಷಾಂತರ...
ಚಿನ್ನದ ಲೇಪಕೆ ಉರಿವ ಚರ್ಮ,
ಕತ್ತ ಬಿಗಿತಕೆ ಉಸಿರು ಭಾರ...
ಗೋಳವನಾವರಿಸುವ ಕೈ, ಬಿಸಿ ತಾಳದೆ
ಆ ಹಿಡಿಯಿಂದ ಈ ಹಿಡಿಗೆ...
ಬಿಸುಡಲ್ಪಟ್ಟು ಗಾಳಿಗಾಡಿ
ಗೋಳವಿನ್ನೂ ಧಗ ಧಗ...
ಅದು ತನ್ನುರಿಗೇ ಬೂದಿಯಾಗುವ ಒಳಗುದಿ..

ಆಗದೆ ಕೈಚೆಲ್ಲಿ ಕೂತಿದೆ ಜಗ,
ಹಿಂತಿರುಗದೆ ಮುನ್ನಡೆದಿದೆ ಗೋಳ
ತೂಕ ಕಳಕೊಂಡು ಗಾಳಿಗೇರಿದೆ,
ಮೇಲೇರುತಾ ಕೆಂಪಳಿದು
ಕಾಮನಬಿಲ್ಲ ಬಣ್ಣದ ಗಾಳಿಪಟವಾಗಿ,
ಪಟದ ಮೈಯೆಲ್ಲ ಹೂವರಳಿ,
ಮತ್ತೆ ಓಂಕಾರ ಅನುರಣಿಸಿದೆ...
ಜಗ ಅಲವತ್ತುಕೊಳ್ಳುತಿದೆ
ಛೇ.. ಕೈಯ್ಯೊಳಗಿರಿಸಿಯಲ್ಲ,
 ಕೈಹಿಡಿದು ನಡೆಯಬೇಕಿತ್ತು...

Friday, March 8, 2013

(ನಮ್ಮಂಗಳದ ಗಿಡದಲ್ಲಿ ಹಕ್ಕಿಯೊಂದು ಕಟ್ಟಿದ ಗೂಡಿನ ಬಗ್ಗೆ ನಾನೂ ಮಗಳೂ, ಮಾತಾಡಿಕೊಂಡ ಮಾತುಗಳೇ ಇವು.)

------------------------------------------

ಹಕ್ಕಿಗೂಡು
------------------
"ಪುಟ್ಟಿ ನೋಡು ಹಕ್ಕಿ ಗೂಡು
ಕಟ್ಟಿ ಹೇಗೆ ಕೂತಿದೆ!
ಕೊಕ್ಕನಷ್ಟೆ ಚಾಚಿ ಹೊರಗೆ,
ಕಣ್ಣ ಹೇಗೆ ಮುಚ್ಚಿದೆ!"

"ಅಮ್ಮ ಬಿಡೇ, ಅತ್ತ ನಡೆದು
ಒಮ್ಮೆ ಒಳಗೆ ಇಣುಕುವೆ,
ಹಕ್ಕಿಗೂಡು ಎಷ್ಟು ಚೊಕ್ಕ,
 ನಾನೂ ನೋಡಬಯಸುವೆ."

"ಬೇಡ ಚಿನ್ನಿ, ಗೂಡ ಸನಿಹ
ಸಾರಬಾರದೀಗಲೇ.
ಇಣುಕಬಹುದು ಒಳಗೆ ಹಕ್ಕಿ
ಖಾಲಿ ಮಾಡಿದಾಗಲೇ..

ಹಕ್ಕಿನೋಡು, ಬಿಸಿಲುಮಳೆಗೆ
ಚಳಿಗೆ ತಾನು ಅಳುಕದೆ,
ಮೊಟ್ಟೆಯಿಡುವ ವೇಳೆಗಷ್ಟೆ
ಪೊರೆಯೆ ಗೂಡು ಕಟ್ಟಿದೆ.

ನಾಳೆ ಮೊಟ್ಟೆಯೊಡೆದು ಬರುವ
ಮರಿಗಳ ಸಲುವಾಗಿಯೇ,
ಹುಡುಕಿ, ಹೆಕ್ಕಿ ಕಸ ಕಡ್ಡಿಯ
ಸೂರು ಸಜ್ಜು ಮಾಡಿದೆ.

ಇದ್ದರಲ್ಲಿ ಇರಲುಬಹುದು
ಹಕ್ಕಿ ತತ್ತಿ ಒಂದೆರಡು,
ಇಟ್ಟರತ್ತ ಹೆಜ್ಜೆ ನೀನು,
ಹಕ್ಕಿಯೆದೆಯೆ ಹಾರುವುದು..

ಕಂದ ಭೂಮಿ ನಮ್ಮದೆಷ್ಟೋ,
ಎಲ್ಲ ಜೀವಸಂಕುಲದ್ದು.
ನಿರ್ಭಯ ನಿರಾಳ ಬಾಳು,
ಅವಕಷ್ಟೇ ಹಕ್ಕಿನದ್ದು..

ತಾಳು ಕೆಲದಿನದ ಕಾಲ,
ತತ್ತಿಯು ಮರಿಯಾಗುವುದು,
ಮರಿ ಹಾರಿದ ದಿನವೇ ಹಕ್ಕಿ
ಗೂಡು ಖಾಲಿ ಮಾಡುವುದು

ಕಣ್ಣಿನಾಸೆ, ತಿನ್ನುವಾಸೆಗೆಂದೂ
ಹಿಂಸೆಯಪ್ಪದಿರು,
ಸಣ್ಣಪುಟ್ಟ ಹೆಜ್ಜೆಗಳಲೇ,
ಮಾನವತೆಯ ಮೆರೆಯುತಿರು."

"ಬೇಡ ಬಿಡೇ ಅಮ್ಮ ಇಂದು
ಗೂಡನಂದೇ ನೋಡುವೆ,
ಅಟ್ಟಿ ಬೆಕ್ಕು, ಕಾಗೆ, ಗಿಡುಗ
ತತ್ತಿ ನಾನೂ ಕಾಯುವೆ."

Wednesday, March 6, 2013

ಅವಳ ಸ್ವಗತವೂ, ನಾನೂ..


-------------------
ಕಾದು ನಿಂತಿದ್ದೇನೆ,
ಕುರುಡಾಗಿ, ಕಿವುಡಾಗಿ
ಅಕ್ಕಪಕ್ಕಕೊಂದು ದೃಷ್ಟಿ ಚುಕ್ಕೆಯಾಗಿ.

ಬೋಳು ಮೈ,
ಹಾಳು ಕೊಂಪೆಯಂತೆ,
ಪಚ್ಚೆ ಬಿಡಿ, ಏನೂ ಇರದ ನಿರ್ವರ್ಣವಾಗಿ.

ನಿರ್ಜೀವ ಕಳೆ,
ಗತವೈಭವವೊಂದು ಕನಸೆಂಬಂತೆ,
ಅಲುಗಲೇನೂ ಇಲ್ಲದ ಮೃತನಿಶ್ಚಲತೆಯಾಗಿ.

ಅಕ್ಕ ಪಕ್ಕ ನಳನಳಸಿದೆ
ಹಸಿರ ಹೊತ್ತು ಬಸಿರಾಗಿ,
ನಾಳಿನ ಸಮೃದ್ಧಿಗೆ ಮುನ್ನುಡಿಯಾಗಿ.

ಹಾದು ಹೋಗುವ ಕಣ್ಣಿಗೆ ನನ್ನೆಡೆ ಕುರುಡು.
ಮೆಚ್ಚುಗೆಯ ಮೆಲುನೋಟಕೆ ಇತ್ತ ಬಿಡುವಿಲ್ಲ.
ತಪ್ಪಿಯೂ ನನನದು ನೇವರಿಸುವುದಿಲ್ಲ.

ಇಲ್ಲ, ನಾನು ಸತ್ತಿಲ್ಲ,
ಒಳಗೊಂದು ಮೂಲೆಯಲಿ
ಒಣ ಆವರಣದಲಿ ಜೀವಂತಿಕೆ ಕಾಯುತ್ತಿದೆ.

ಅಗೋ, ಯುಗಪುರುಷನ ಶಲ್ಯದಂಚು,
ಹೊಂಗೆ ಹೂವರಳಿದ ಪರಿಮಳ,
ಅದರ ಒನಪುವಯ್ಯಾರ,
ಸುತ್ತ ದುಂಬಿ ಹಿಂಡು,
ಸುದ್ಧಿ ತಂದಿದೆ, ಯುಗಾದಿ ಬರುತಿದೆ.

ಜೊತೆಗೆ ಬರುತಾನೆ ನಾ ಕಾದವ,
ಸ್ಪರ್ಶ ಮಾತ್ರದಿ ಪ್ರಾಣವೆಬ್ಬಿಸಿ,
ಸಾವಿನ ನೆರಳೋಡಿಸಿ,
ನನ್ನ ಯೌವ್ವನಕೊಯ್ಯುವವ...

ಬೋಳು ಗುಲ್ಮೊಹರ್
ವರುಷ ಕಾಲದ ವಿರಹಿತೆ..
ಅವಳ ಸ್ವಗತಕೆನ್ನೊಳಗೊಂದು ಸಂಚಲನ.

ವರುಷದಿಂದಲ್ಲ, ಅಂದೊಮ್ಮೆ ಬೋಳಾದಾಗಿಂದ
ನಾನೂ ಕಾದಿದ್ದೇನೆ, ಅರಳಿಸುವವಗಾಗಿ
ಅವ ಬರಲೇ ಇಲ್ಲ...

ಬರುವ ಭರವಸೆಯೂ ಇಲ್ಲ, ಮರದಂತೆ.
ಕಾಲ ಜಾರಿಸಿದ ಒಂದೊಂದು ಮರಳಕಣವೂ,

ಮೈಮನವ ಮಾಗಿಸುತಲೇ ಸಾಗಿದೆ.

ಮನಸೀಯದೆ ಮರಕೆ ಮರುಕಳಿಸುವ ವಯಸಿತ್ತ.
ಮತ್ತೆಮತ್ತೆ ಹುಟ್ಟಿ ಸಾವುದಕೆ ಅದಳುವುದಿಲ್ಲ,
ಕಣ್ಣಿರದ, ಕಣ್ಣೀರಿರದ ಮರ ಬರಿದೇ ಕಾಯುತದೆ,

ಮನಸು ವಯಸುಗಳ ಬಂಧಿಸಿ ಕಾಲದ ಸಿಕ್ಕಲಿ,
ಮನುಜಗೆ ಚಿಗುರಿ, ಮಾಗಿ, ಬಾಡಿ,
ಮತ್ತೆ ಚಿಗುರಲಾಗದ ಮಿತಿಯಿತ್ತ.

ಪ್ರಕೃತಿಯ ತೂಗು ತಕ್ಕಡಿಯಲೆಂದೂ ಸಮತೂಕ.
ಇತ್ತಷ್ಟೇ ಕಳೆದಲ್ಲಿ, ಕಳೆದಷ್ಟೇ ಇತ್ತಿಲ್ಲಿ,
ಮಾತೆಯೆನಿಸುತಾಳೆ.

ಮಾಗುವುದಕೊದಗದೇ
ಬಾಡುವುದಕಳುವ ಮನುಜ
ಹತಭಾಗ್ಯನೆನಿಸುತಾನೆ.

Tuesday, March 5, 2013

ಅವನ ಲೆಕ್ಕಿಸಬೇಕಿಲ್ಲ.

--------------------
ತನ್ನ ಹಸುವನ್ನು ಹೂಳಿ ಬಂದಾತ,
ಮಿಂದು, ಉಂಡು, ಮಲಗೆದ್ದವ
ಪಕ್ಕದ ಮನೆಯ ಬೆಕ್ಕಿನ ಸಾವಿಗೆ
ಶೋಕಾಚರಣೆಯಿಲ್ಲದ್ದಕೆ ಧಿಕ್ಕಾರ ಹಾಕಿದ.

ಪಕ್ಕದಂಗಳದ ಕಸಕೆ ಮುಖ ಮುರಿವಾತ,
ವಾಸನೆಯೆನುತ ಮೂಗು ಮುಚ್ಚುವಾತ,
ಮಗುವಿನ ಬಹಿರ್ದಶೆಯ ಅವಸರಕೆ
ಅದೇ ಅಂಗಳದ ಬೇಲಿಯ ಮರೆ ಬಳಸಿದ.

ಪಕ್ಕದವನ ಗಾಯಕೆ ಅಸಡ್ಡೆಯ ಉರಿಯಿತ್ತಾತ
ನೋವಿಗುಪೇಕ್ಷೆಯೇ ಮದ್ದೆಂದಾತ
ಕಣ್ಣಲಿ ಬಿದ್ದ ಪುಟ್ಟ ಕೀಟ ಚುಚ್ಚಿದ್ದಕೆ,
ಅದ ಹಿಚುಕಿ ಕೊಡ ಕಣ್ಣೀರಲಿ ಮುಳುಗಿಸಿದ.

ಪರರ ತಪ್ಪು ಹೆಕ್ಕಿ,
ಭೂತಕನ್ನಡಿಯಿಟ್ಟು ವಿಶ್ಲೇಷಿಸಿ,
ಅಭ್ಯಸಿಸಿ, ವಿವರಿಸಿ, ಜಗದೆದುರು
ಸಂಶೋಧನೆಯನೇ ನಡೆಸಿ ತೋರುವನದು
ದೊರೆತ ಶೂನ್ಯ ಫಲಿತಾಂಶಕೆ ದಿವ್ಯ ನಿರ್ಲಕ್ಷ್ಯ.

ತಾ ಹೇತುದು ಅದಲ್ಲ,
ಪರರದಷ್ಟೇ ಅಮೇದ್ಯವೆನುವವ,
ನರ ಹೇಗಾದಾನು?!
ನಾಲಿಗೆ ಬೇಕಾಬಿಟ್ಟಿ ಹರಿಯ ಬಿಟ್ಟವ,
ಬೋಧಕ ಹೇಗಾದಾನು?!
ಕಣ್ಣಿಗೆ ಬೇಧದ ಪಟ್ಟಿಕಟ್ಟಿದವ,
ನಾಯಕ ಹೇಗಾದಾನು?!
ಸ್ವರತಿಯಲಿ ಸದಾ ನಿರತನವ,
ಮುಂದಾಳು ಹೇಗಾದಾನು?!
ಗುಣವ ಮತ್ಸರದಿ ತೂಗುವವ,
ಸಹೃದಯಿ ವೀಕ್ಷಕ ಹೇಗಾದಾನು?!







Monday, March 4, 2013

ನಾನೆದ್ದು ಅಳಿದಾಗ..

---------------
ಎಚ್ಚರಾದರೂ ಕಣ್ತೆರೆಯದ ಸೋಗು,
ಸಲುವ ಸಲ್ಲದಿರುವ ಭ್ರಮೆ,
ಶಾಂತವಾಗಿಸುವ ಧ್ಯಾನದ
ಮೈತುಂಬ ಮುಳ್ಳುಮುಳ್ಳು.
ಜಾಗೃತವಾಗದ ಚಕ್ರಗಳು,
ಉದ್ದೀಪನ ಕ್ರಿಯೆ ಜಾಳುಜಾಳು.

ಅಹಂಕಾರದ ಹೊಟ್ಟೆಹಸಿವೆಗೆ
ತುಂಬಿದಷ್ಟೂ ಹೆಚ್ಚುವ ಆಳಗಲ.
ಹಸಿವದನು ಸಾವಿಗೊಯ್ಯುವವರೆಗೂ
ಕಣ್ಮುಚ್ಚಿ, ಕಿವಿಮುಚ್ಚಬೇಕು,
ಮಾತು ತಂತಾನೇ ಉಡುಗಿ,
ಅಸಡ್ಡೆಯ ನಿರ್ವಾತ ಉಸಿರುಗಟ್ಟಿಸೀತು.

ನಾ ಪ್ರೇಮದೊಳಗೆ,
ಸಾಗರದೆದುರು ಕುಂಭ ತುಂಬ ಜಲ.
ಗುರುತಿದ್ದರೂ ತೃಣವಷ್ಟೇ.
ತಿಳಿದೂ ಜಾಣಕುರುಡು, ಜಾಣಕಿವುಡು.
ಅರಿವು ಮರೆಗೋಡೆಯಾದ ಕಣ್ಣುಮುಚ್ಚಾಲೆ.
ಅಡಗಿದ್ದೂ ನಾನೇ, ಹುಡುಕಿದ್ದೂ ನಾನೇ.
ಉರುಳಿಹೋದದ್ದು ಮಾತ್ರ ಕ್ಷಣರಾಶಿ.

ಹೊಂದುವಾಸೆಯ ಗಾಢ ಕಪ್ಪು
ವಾಸ್ತವದ ಬಣ್ಣಗಳ ನುಂಗಿದೆ.
ಖಾಲಿ ಒಡಲ ಹೊತ್ತು ಬಿಳಿ
ದೂರ ನಿಂತು ಅಳುತಿದೆ.
ಬಣ್ಣದಾಗರ ನಿರ್ವರ್ಣವಾಗಿ
ನಿರ್ವೀರ್ಯತೆಯ ಮೆರೆದು,
ಸಾಂತ್ವನಕೆ, ಸಂತೈಕೆಗೆ
ಒಂದಪ್ಪುಗೆಗೆ ಕಾದಿದೆ.

ಬಂಡೆದ್ದ ಮನಕೆ ಬಿಳಿ
ಬೋಳುಮರವಪ್ಪಿದ ಬನ್ನಳಿಗೆಯಂತೆ,
ಪರಾವಲಂಬಿ ಹುಳುವಿನಂತೆ,
ಕಾಣುವುದು, ಮತ್ತದು ಕಲ್ಲು
ತೂರುವುದೂ ತಪ್ಪಿಲ್ಲ ಬಿಡಿ.
ಜಗಕೆ ಗೆದ್ದದ್ದಷ್ಟೇ
ಸಬಲ ಮತ್ತು ಸಮ್ಮತ.
ಬಿಳಿಯುಳಿಯಲು ಮತ್ತೆ ಬಣ್ಣ ಹೊರಬೇಕು.

ನಿದ್ದೆ ಸೋತು ನಾನೆದ್ದು,
ಧ್ಯಾನಕಿಳಿದು ಅಳಿಯಬೇಕು.
ಚಕ್ರ ಹೂವಂತರಳಬೇಕು,
ಆಗ ನಿಂತೀತು ಕಣ್ಣುಮುಚ್ಚಾಲೆ,
ಆಸೆಯಳಿದ ಬಣ್ಣದ ಚೆಲುವು,
ಬಿಳಿಯ ಹೊಕ್ಕೀತು, ಮನ ಒಪ್ಪೀತು.
ದ್ವೈತವಲ್ಲ, ಅದ್ವೈತವೂ ಅಲ್ಲದ
ವಿಶೇಷ ಮತ ಪ್ರೇಮದ್ದು.
ಇದ್ದೂ ಇಲ್ಲದಂತಿದ್ದು ನಾನು
ಬರೀ ನೀನುಳಿವ ಪರಿಯದ್ದು.