Wednesday, March 13, 2013

ಬಿಡದೆ ಕಾಡುವ ಅಳಲು


-------------
ತೊಡಗಲಾರದ ಅಳಲು,
ಸುಮ್ಮನೇ ಕಾಡಿದ್ದಕೆ,
ಗುರಿಯ ಮರೆಯಲೆಲ್ಲೋ ನಿಂತು,
ತುಡಿತದ ತಾಳಕ್ಕೆ ಕುಣಿದ ಆಸೆ,
ಶ್ರೀಗಣೇಶಾಯನಮಃ ಎನುತಲೇ,
ಗಾಳಿಗಾಡಿದ ಕೆಸುವಿನೆಲೆಯಿಂದುದುರಿದ
ಹನಿಯಂತೆ ಜಾರಿ ಹೋಗಿದೆ....

ಮಿಣಮಿಣನುರಿವ ಕಿರುಹಣತೆ ಆತ್ಮವಿಶ್ವಾಸ,
ಒಂದಷ್ಟು ಸುರಿದು ಯತ್ನದೆಣ್ಣೆ,
ಪ್ರೋತ್ಸಾಹದ ಕೈಯ್ಯೆರಡರ ರಕ್ಷಣೆ,
ಶ್ರದ್ಧೆಯೇ ಮೈವೆತ್ತ ಮನವು
ಗುರಿಯ ದೇವನಾಗಿರಿಸಿ,
ಸದಾ ನೆಲೆಸಿತ್ತು ದೇಹದೇಗುಲದಿ......


ದೃಢಗೊಳದ ಎಳಸು ಹಂಬಲದ್ದು.
ಆಸೆಯೇ ಉಸಿರಾಗಿ,
ಸಾಧನೆಯೇ ನಾಡಿಯಾಗಿ,
ಕಣಕಣ ಜೀವಜಲದಿ ಯತ್ನ ಪ್ರತಿಫಲಿಸಿ,
ಯೋಜನೆಯಾಗರಳದ ಯೋಚನೆಯಾಗೇ
ಉಳಿದ ಮುರುಟುಮೊಗ್ಗು..

ಧ್ಯಾನ ತಲುಪದ ಶಕ್ತಿಕೆಂದ್ರ,
ಅದ್ಯಾವ ಮೂಲೆಯಲಡಗಿತೋ ಹಣೆಯ ಬಿಟ್ಟು!?
ಉದ್ದೀಪನಗೊಳದ ಚಕ್ರಗಳು,
ಸಮಾಧಿಯತ್ತ ಮುಖವೂ ಮಾಡವು....
ಎಡವಿದ್ದಾದರೆ ಅದೆಲ್ಲಿ,
ತಡೆಯಬೇಕಾದರೆ, ಮುನ್ನಡೆವುದಾದರೆ ಅದೆಲ್ಲಿ?!

ಸಂಧಿಗ್ಧತೆಗೆ ತಕ್ಕಡಿಯೊಂದು ತಟ್ಟೆ,
ಇನ್ನೊಂದರಲಿ ನನದೆಲ್ಲವನಿಟ್ಟೆ..
ಅದೇ ತೂಗುತಿದೆ, ನನದೇನೂ ಇಲ್ಲದಂತೆ, ಅಲ್ಲದಂತೆ..
ಭಾರವಾಗುವುದೋ, ಹಗುರಾಗುವುದೋ..
ಇನ್ನೊಂದಷ್ಟು ಪ್ರಶ್ನೆಗಳಾ ತಟ್ಟೆ ಸೇರಿ,
ಅದಿನ್ನೂ ತೂಕವಾಗುತಿದೆ,
ನಾ ತೃಣವೆಂಬಂತೆ ಮೇಲೆ ಮೇಲೆ...













2 comments:

  1. ತೃಣದಲ್ಲೂ ಸಹ ಅದೇ ಚೈತನ್ಯವಿದೆ,ಅದೇ ಜೀವನವಿದೆ. ಅದರಲ್ಲೂ ಸಹ ದರ್ಶನ ಸಿಕ್ಕೀತು.
    ಉತ್ತಮ ಕವನ.

    ReplyDelete
    Replies
    1. ಇದ್ರೂ ಇರಬಹುದು.. ಅಲ್ವಾ ಸುನಾತ್ ಅವ್ರೆ...ಆದ್ರೆ ದರ್ಶನವಾಗುವ ಸಂದರ್ಭದ್ದೆ ದೊಡ್ಡ ತೊಂದ್ರೆ, ತುಂಬಾ ದೂರ ಇದೆ ಅದು...

      Delete