Saturday, March 23, 2013

ಹೋಗಿ ಬಿಡುವ ಮಾತು ಬೇಡ...

---------------------------

ನಿನ್ನ ತಪ್ಪಲ್ಲ ಬಿಡು, ಕಹಿಯಷ್ಟೇ ಉಂಡು
ಅರಗಿಸಿಕೊಂಡಿರುವೆ, ಇನ್ನೇನುಣಿಸಬಲ್ಲೆ?
ನನ್ನೆದುರೂ ಎಲ್ಲ ಇತ್ತು, ಎಲ್ಲ ಉಂಡರೂ,
ನಾ ಕಹಿಯನರಗಿಸಿಲ್ಲ, ಕಹಿಯುಣಿಸಲಾರೆ.
ಕಪಟವೆನಬೇಡ, ಇದು ಅತಿ ವಿನಯವೂ ಅಲ್ಲ.
ಸುಳ್ಳು ಬಿರುದು ಹಿಂಡಿ ಕಣ್ಣೀರಾಗಿಸುತ್ತದೆ.
ಇದ್ದುದೆಲ್ಲ ನೀಡಬಲ್ಲೆ, ಇಲ್ಲದ್ದಲ್ಲವಲ್ಲಾ?!

ತಾಳ್ಮೆಯೊಂದು ಶಕ್ತಿ ಒಲವೇ, ದೌರ್ಬಲ್ಯವಲ್ಲ.
ನಾ ನಗುವುದಾದರೆ ನಿನ್ನ ಪ್ರೀತಿಸಿದ್ದಕ್ಕೆ, ಇನ್ನೇನೂ ಅಲ್ಲ.
ನಾ ಪ್ರೀತಿಸುತ್ತಿರುವುದು, ಮುಂದೆ ಪ್ರೀತಿಸುವುದೂ
ಅಂದೊಮ್ಮೆ ನೀನೆನ್ನ ಪ್ರೀತಿಸಿದ್ದಕ್ಕೆ, ಇನ್ನೇನೂ ಅಲ್ಲ.
ನನ್ನೊಳಗೆ ಬೇಡಿಯಿಲ್ಲ, ಸರಪಳಿಯಿಲ್ಲ ಅಷ್ಟೇಕೆ,
ಬಾಗಿಲೂ ಇಲ್ಲ ಬಂಧಿಸುವುದಕೆ, ಎಲ್ಲ ಮುಕ್ತ ಮುಕ್ತ
ಹಾಂ....ಪ್ರೀತಿಗಷ್ಟೇ... ಇನ್ನೇನಕೂ ಅಲ್ಲ.

ಗಾಳಿ ನಿಂತೊಡೆ ಬೂದಿ ಕೆಂಡ ಮುಚ್ಚುವುದು,
ಆರಿಸಿ, ತಣಿಸುವುದಿಲ್ಲ.
ಮಾತೂ ನಿಂತು ಒಮ್ಮೊಮ್ಮೆ ಪ್ರೀತಿಯ ಮುಚ್ಚುವುದು..
ಅದಲ್ಲವಾಗಿಸುವುದಿಲ್ಲ.
ಮಾತ ಹೊರಡಿಸಿ ಮುತ್ತಾಗಿಸುವಾ.
ಸರಸದ ಗಾಳಿಗೆ ಬೂದಿ ಹಾರಿ, ಕೆಂಡ ನಿಗಿನಿಗಿಸೆ
ಮೌನ ವಿರಳವಾಗದೇ ವಿಧಿಯಿಲ್ಲ...

ವಿಷ ಬಿತ್ತಲು ಬರುವುದಾದರೂ ಹದವಾದೆದೆಯಿದೆ,
ಅಮೃತವಷ್ಟೇ ಬೆಳೆವ ಸತ್ವವಿದೆ.
ಹೋದರೂ ಬರುತಿರು,
ಹೋಗಿಬಿಡುವ ಮಾತು ಬೇಡ.
ಯಾಕೆಂದರೆ ನಿನಗೆಂದೂ ತಡೆಯೆನ್ನಲಿಲ್ಲ..

ಪ್ರಶ್ನೆಯೆದುರು ಬಗ್ಗಬೇಡ
ಮತ್ತಷ್ಟು ಕುಗ್ಗಿಸುತ್ತದೆ,
ಇಲ್ಲಿ ಉತ್ತರವೆಂಬುದಿಲ್ಲ.
ಸಂಶಯವದ ನೋಯಿಸೀತು, ಆದರೆ
ಪ್ರೀತಿ ಆತ್ಮದ ಉಸಿರು, ಆತ್ಮ ಸಾಯುವುದಿಲ್ಲ.13 comments:

 1. ಅನುರಾಧ,
  ಮೊದ ಮೊದಲು ತಮ್ಮ ಈ ಉದ್ದುದ್ದ ಕವಿತೆಗಳನ್ನು ಓದುವಷ್ಟು ತಾಳ್ಮೆ ಅಥವಾ ಪುರುಸೊತ್ತು ನನ್ನಲ್ಲಿ ಇದ್ದಿರಲಿಲ್ಲ.

  ಆದರೆ ಈಗ ಅದು ರೂಢಿ ಆಗಿದೆ.

  ಏಕೆಂದರೆ ತಾವು ನನಗೆ ರೂಢಿ ಮಾಡಿಸಿದ್ದೀರಿ

  ಅದೆಲ್ಲಿಂದ ವಿಷಯಗಳನ್ನು ಆರಿಸಿಕೊಳ್ಳುತ್ತೀರೋ, ಪದಗಳನ್ನು ಪೋಣಿಸುತ್ತೀರೋ ಆ ಸರಸ್ವತಿ ಮಾತೆಗೇ ಗೊತ್ತು.

  ಆಕೆ ತಮ್ಮನ್ನು ಸದಾ ಹರಸುತ್ತಿರಲಿ.

  ಸದಾ ಬರೆಸುತ್ತಿರಲಿ.

  ReplyDelete
  Replies
  1. ಸಣ್ಣವಳಾಗಿ ಅಣ್ಣನ ತಾಳ್ಮೆ ಪರೀಕ್ಷಿಸಿದಂತಾಯಿತು, ಕ್ಷಮೆ ಇರಲಿ. ಆಶೀರ್ವಾದ ಹೀಗೆಯೇ ಇರಲಿ ಅಣ್ಣ.

   Delete
 2. ಅಕ್ಕಾ ನಿನ್ನ ಕವನ ಓದುವಾಗ ಎಷ್ಟೋ ಬಾರಿ ಅಂದುಕೊಂಡಿದ್ದೇನೆ...
  ಒಂದು ಬಾರಿ ಪೆನ್ನನ್ನು ಹಾಳೆಗೆ ಹಚ್ಚಿದ ಮೇಲೆ ಭಾವಗಳನ್ನೆಲ್ಲಾ ಕಕ್ಕಿ..
  ಕವನ ಮುಗಿಯಿತು ಎಂದಾದ ಮೇಲೇ ಪೆನ್ನನ್ನು ಎತ್ತಿ ಕೈಕುಡುಗಿಬಿಡುತ್ತೀಯೇನೋ ಎಂದು...
  ನನಗನ್ನಿಸಿದ್ದಿದು....
  ದಿನಂ ಪ್ರತಿ ಹೊಸ ಸ್ವಾದ...
  ಒಂದು ದಿನ ಕೂಡಾ ತಪ್ಪದೇ....
  ಶುಕ್ರಿಯಾ....

  ReplyDelete
  Replies
  1. ನಿಜ ರಾಘವ, ನಾನು ಬರೆಯುವುದೇ ಹಗುರಾಗಲಿಕ್ಕೆ, ಒಳ್ಳೆಯದಾಗಿರಲಿ, ಕೆಟ್ಟದಾಗಿರಲಿ,ಕಾಡುವ ಭಾವಗಳಿಂದ..ಒಮ್ಮೊಮ್ಮೆ ಪರಕಾಯಪ್ರವೇಶದಿಂದ ಮತ್ತೆ ಕೆಲವೊಮ್ಮೆ ಸ್ವಂತ ಅನುಭವದಿಂದ ಕೆಲವುಸಲ ಒಳಗು ತುಂಬಾ ಭಾರವಾಗಿ ಬಿಡುತ್ತದೆ ನೋಡಿ, ಖಾಲಿ ಮಾಡಿದರಷ್ಟೇ ಹೊಸತಕ್ಕೆ ಜಾಗವಾಗುವುದಲ್ಲ್ವಾ...thanks a lot for reading n encouraging me.

   Delete
 3. ಅಮೃತವಷ್ಟೇ ಬೆಳೆವ ಸತ್ವವಿದೆ, ಇಷ್ಟು ಸಾಕು ಸದಾಶಯ ಈಡೇರುತ್ತದೆ

  ReplyDelete
 4. ಪ್ರೀತಿಯೆನ್ನುವುದು ತನ್ನ ಸತ್ವ ಮತ್ತು ಸತ್ಯ ಸಹಿತ ಪ್ರಕಟಗೊಂಡಿದೆ ಈ ಕವಿತೆಯಲ್ಲಿ. ಪ್ರೀತಿಯಲ್ಲಿ ಸೋತಂತೆ, ಮತ್ತೆ ಎದ್ದು ನಿಂತಂತೆ, ಆತ್ಮೀಯತೆಯ ಬೆಸಗೊಂಡಂತೆ ಮತ್ತೆ ತನ್ನ ಅಸ್ತಿತ್ವವ ಗುರ್ತಿಸಿಕೊಂಡಂತೆ, ಕಾರಣಗಳೇ ಇಲ್ಲದೇ ಮತ್ತೆ ಪ್ರೀತಿಯ ಆಲಂಗಿಸಿಕೊಂಡಂಥ ಭಾವಗಳನ್ನು ಬಿತ್ತುತ್ತದೆ ಈ ಕವಿತೆ. ಬಹಳ ಹಿಡಿಸಿತು ಅನಕ್ಕ

  ಕಡೆಗೆ ’ಪ್ರೀತಿ ಆತ್ಮದ ಉಸಿರು, ಆತ್ಮ ಸಾಯುವುದಿಲ್ಲ.’ ಎಂಬಲ್ಲಿಗೆ ಕವಿತೆಯನ್ನು ಉಪಸಂಹರಿಸಿದ್ದು ಚೆಂದವೆನಿಸಿತು :)

  - ಪ್ರಸಾದ್.ಡಿ.ವಿ.

  ReplyDelete
  Replies
  1. ಹೆತ್ತವರಿಗೆ ಹೆಗ್ಗಣ ಮುದ್ದು ಅಂತಾರಲ್ಲಾ, ಹಾಗೆ ಪ್ರಸಾದುಗೆ ಅಕ್ಕ ಬರೆದದ್ದೆಲ್ಲಾ ಹಿಡಿಸುತ್ತದೆ ಅಲ್ಲವಾ...ಥ್ಯಾಂಕ್ಸ್ ಪ್ರಸಾದ್..ಎಲ್ಲ ಕವನನ್ನೂ ಒಳಹೊಕ್ಕು ಅಭಿಪ್ರಾಯ ಕೊಡ್ತಿರೋದಕ್ಕೆ

   Delete
 5. ಹೇಳಲು ಪದಗಳಿಲ್ಲ,ಆಡಲು ಮಾತು ಬರುತ್ತಿಲ್ಲ ಅನು. ನಿನಗೆ ಶರಣು ಎಂಬ ಮಾತಿಲ್ಲದೆ ಬೇರೊಂಬುದಿಲ್ಲ. ಮೂಖ ವಿಸ್ಮಿತನಾದೆ ಈ ನಿನ್ನ ಕವನ ಓದಿ. ನನ್ನ ಹ್ರಧಯವನ್ನು ಮತ್ತೊಮ್ಮೆ ವಿಮರ್ಶಿಸಿಕೊಳ್ಳುವಂತಾಯಿತು. ನಿಜವಾದ ಪ್ರೀತಿ ಮತ್ತು ಸ್ನೇಹ ಎಂಬುದೇ ಜೀವನ ಎಂದು ಬದುಕುತ್ತಿರುವ ನನಗೆ ನಿನ್ನ ಈ ಕವನ ಅಮ್ರುತವನ್ನು ಕುಡಿಸಿದಂತಾಯಿತು. ಧನ್ಯವಾದಗಳು.

  ReplyDelete
  Replies
  1. ನನ್ನ ಕವಿತೆ ನಿಮಗೆ ಸಮಾಧಾನ ಕೊಟ್ಟಿದ್ದರೆ ತುಂಬಾ ಸಂತೋಷ ನಾಗರಾಜ್ , ಧನ್ಯವಾದ.

   Delete
 6. ನಿಮ್ಮ ಕವನಗಳು ಇಷ್ಟವಾಗುತ್ತವೆ.

  ReplyDelete
 7. ಅಮೃತವಷ್ಟೇ ಬೆಳೆವ ಸತ್ವವಿದೆ, ಇಷ್ಟು ಸಾಕು ಸದಾಶಯ ಈಡೇರುತ್ತದೆ

  ReplyDelete