Wednesday, February 27, 2013

ಅವನಲ್ಲ, ಅಕ್ಷರವಿಳಿದವು.

--------------------
ಅದೇ ರಾತ್ರಿ, ಅದೇ ಚಂದ್ರ,
ಅದೇ ಚಂದ್ರಿಕೆ...ಬಂದಾಗೆಲ್ಲ
ಒಮ್ಮೊಮ್ಮೆ ಮುದ್ದು ಸುರಿಸಿ,
ಒಮ್ಮೊಮ್ಮೆ ಕಾಡಿ ಬಿಡುವವು...

ಬರೀ ಕತ್ತಲೆಯೇ ಇರುಳು,
ಅಸ್ಪಷ್ಟತೆಯಷ್ಟೇ ಹೊರಲು?
ಸಂಧ್ಯೆ ರವಿಯ ಸಾರುವ ರಥ,
ಚಂದ್ರ ಮಲಗೋ ಮಡಿಲು,
ರಾತ್ರಿರಾಣಿಯ ಉಯ್ಯಾಲೆ,
ತಾರೆ ಜೋಗುಳದ ಶ್ರುತಿ
ಕಣ್ಣು-ನಿದಿರೆಯ ಕಳ್ಳಭೇಟಿಯ ತಾಣ,
ಜಗಕೆ ಕಪ್ಪಿನ ಸಾಕ್ಷಾತ್ಕಾರ
ಹೀಗೆ ಹಲ ಕಾರ್ಯಗಳ ಸರದಾರ.

ಬರೀ ದರ್ಪಣವೇ ಚಂದ್ರ,
ನಮ್ಮೊಳಗ ಬಿಂಬಿಸಲು?
ಇರುಳ ಮುದ್ದಿನ ಕಂದ,
ತಾರೆಗಳ ಮನದಿನಿಯ,
ಚಂದ್ರಿಕೆಯ ಬಾಳಸಖ,
ಇಳೆಯ ಪ್ರೇಮಾರ್ಥಿ,
ರವಿಪ್ರಭೆಯ ಬಾಡಿಗೆದಾರ,
ಹಲ ಪಾತ್ರಗಳೊಡೆಯನವ...

ಬರೀ ಬೆಳಕೇ ಚಂದ್ರಿಕೆ
ನಮ್ಮಿರುಳ ದಾರಿಗೊದಗಲು?
ಕಪ್ಪಲಡಗಿದ ಬಿಳಿ,
ಚಂದ್ರನ ಪೂರ್ಣತೆಗೆ ಬೇಲಿ,
ಕತ್ತಲೊಡಲಿಗೊಂದು ಸಾಂತ್ವನ,
ತಾರೆ ತೂತಾಗಿಸಿದ ಬಿಳಿ ಚಾದರ,
ರಾತ್ರಿಯಟ್ಟಹಾಸಕೆ ಕಟೆಚ್ಚರ
ಹೀಗೆ ಹಲ ರೂಪಗಳೊಡತಿ.

ಹುಣ್ಣಿಮೆಯೊಂದು ರಾತ್ರಿ ಚಂದ್ರ
ಜಾಜಿಯೆಲೆಯ ಜಾರುಬಂಡೆಯಾಗಿಸಿ
ಜಾರುತಿದ್ದ ಎಲ್ಲ ಮರೆತು..
ನಾ "ಬಿದ್ದ ನೋಡೀಗ" ಎನುತ
ಧರೆಗಿಳಿವುದನೇ ಕಾಯುತಿದ್ದೆ
ಎಲ್ಲ ಮರೆತು...
ಅವ ನೆಲಕಿಳಿಯದ ಅಳಹೀಗಷ್ಟು
ಅಕ್ಷರ ಹಾಳೆಗುದುರಿ ಸಂತೈಸಿದವು.
ಮೌನದ ವಿಜಯಪಥ

---------------------
ಹಠಮಾರಿ ಮೌನ,
ಹೊಳೆಯ ಸುಳಿಯಂತೆ,
ಹೊರವರ್ತುಲದಲಿದ್ದುದನೂ
ಒಳಗೆಳೆದುಕೊಳುವುದು.
ಓಟಅಟ್ಟಿಸಿ ಬರುವ
ಕಬಂಧ ಬಾಹುವಾಗುವುದು.

ಉರಿವ, ಉರಿಸುವದನೆಲ್ಲ
ಭರಿಸುವ ಶಾಂತ ಧರೆ
ಜ್ವಾಲಾಮುಖಿಯಾಗೊಮ್ಮೆ
ಹೊರಗುಗುಳುವುದಕೆ,
ವಿನಾಶದ ಹಿಂದಿನ ಶಾಂತಿಗೆ,
ಆರುವ ಮುನ್ನ ಧಗಧಗಿಸುವ
ಜ್ವಾಲೆಯ ಅಲ್ಪಾಯುಸ್ಸಿಗೆ,
ಹೆದರಿ ಜೀವ ಮುದುಡಿ ಕೂತಿದೆ.

ಹರಸಾಹಸಕೂ ಬಗ್ಗದ
ಪೂರ್ವ ತಯಾರಿಯದರದು.
ತಾನು ತಾನಾಗುಳಿವಲ್ಲಿ,
ಬೇರೆಲ್ಲ ಮರೆಯಲಿರಿಸಿದೆ.
ಉಮ್ಮಳಿಸುವ ಅಳು
ಕಣ್ಣೀರ ಮೂಕಧಾರೆಯಾಗಿ,
ನಗುವೂ, ಬಿಕ್ಕುವಿಕೆಯೂ,
ದನಿಯುಡುಗಿ ಕೂತಿವೆ.

ಸೋಲು-ಗೆಲುವಲ್ಲ,
ಗುರಿ ಇದ್ದಲ್ಲೇ ಇದೆ.
ನಿರ್ವಿಕಾರತೆಯಲ್ಲ,
ಆಸೆ-ನಿರಾಸೆ ನೂರಿದೆ
ಸ್ಥಿತಪ್ರಜ್ಞತೆಯೂ ಅಲ್ಲ,
ಭಾವತೀವ್ರತೆಯಿದೆ.
ಬರೀ ದಿವ್ಯಮೌನವೆಲ್ಲದರ
ಜೊತೆ ಗುದ್ದಾಡಿ ಗೆಲ್ಲುತಿದೆ.

ಯಾರಿಗೆ ಬೇಕಿತ್ತೀ ಭಾಗ್ಯ,
ಮೌನ ಬಂಗಾರದ ವರ?!
ಎದುರಿದ್ದವಗೆ ಗಾಂಭೀರ್ಯದ
ಅಪರಾವತಾರ,
ಒಳಗಿನ ಗುಟ್ಟು ದೇವನೇ ಬಲ್ಲ..
ಮೌನದೊಗೆತನ ನಿಭಾಯಿಸಿ
ಕಳೆದುಹೋಗುವುದೊಮ್ಮೆ,
ಕಳಕೊಳ್ಳುವುದೊಮ್ಮೆ.

ಮರೆಮಾಚುವುದು ಕರಗತವದಕೆ
ನೋವಿನೊಡನೆ, ಸುಳ್ಳನೂ,
ಪ್ರೀತಿಯೊಡನೆ, ದ್ವೇಷವನೂ.
ಮಾತು ಬಯಲಾಗಿಸಿ
ಹಗುರಾಗಿಸಿದರೆ,
ಮೌನ ಸಂಗ್ರಹಿಸಿಟ್ಟು,
ಭಾರವಾಗಿಸುವುದು.

ಇದಲ್ಲ, ಬೇರೆಯದು ತಾ...

----------------------------------
ಚಿನ್ನದ್ದೇ ಇರಬಹುದು,
ನೀನಿತ್ತ ಸರಿಗೆ.
ನನ್ನ ಪಾಲಿನ
ಬಾಳಭಾರ ತಡೆದೀತೇ?!

ನೆಲಕಂಟಿವೆ ನನ್ನ ತಾರೆಗಳು,
ಆಗಸ ಖಾಲಿಖಾಲಿ,
ಜೀರುಂಡೆ ಗುಂಯ್ಗುಡದ,
ಬಾವಲಿಯೂ ಹಾರದ,
ಕನಸು ಕೈಜಾರಿ ಹೋದ
ಇರುಳ ಯಾತ್ರೆಯಲಿ
ನಿದ್ದೆಯದೂ ಗೈರು.
ಸೂರ್ಯನಿರದೆ ಹಗಲೂ

ರಕ್ತ ಹೆಪ್ಪುಗಟ್ಟಿದ ನೀಲಿ.
ಮರುಭೂಮಿಯಲುದುರಿ
ಮೊಳೆವಾಸೆಯ ಬೀಜದ
ನಿರರ್ಥಕತೆಯಂತೆ ಭಾರ ಭಾರ.

ಶೂನ್ಯದೊಳಗೆ ಅಂಕಿಗಳ, ಕಪ್ಪಿನೊಳಗೆ ಬಣ್ಣಗಳ
ಹುಡುಕುವ ವ್ಯರ್ಥ ಯತ್ನಕೆ
ಕಣ್ಣಿರುವ ಸೌಭಾಗ್ಯದ
ವ್ಯರ್ಥ ಬೆಂಬಲ.
ಮುಗಿಯದ ದಾರಿಗೆ
ಸುಳ್ಳು ಸೂಚನಾಫಲಕ,
ಅಳಿಸಿಹೋದ ಮೈಲಿಗಲ್ಲುಗಳು.
ಕೆಲವೊಮ್ಮೆ ನೆಲದಲಿ,
ಕೆಲವೊಮ್ಮೆ ಎದೆಯಲಿ
ಮೂಡುವ ಆಳದ
ಹೆಜ್ಜೆಗುರುತೂ ಬಲುಭಾರ.

ಒದಗದ, ಸತ್ವವಾಗದ್ದೇ
ಉಂಡು ಮೈ ಭಾರ..
ಹಿಂಜಾರುವುದ ಮುಂದೆಳೆವ
ನಡಿಗೆ ಬಲು ನಿಧಾನ,
ಅದಕೆ ಮೈ ಕರಗಿಲ್ಲ,
ಸಿಕ್ಕಿದ್ದನೆಲ್ಲ ಸಿಕ್ಕಿಸಿಕೊಂಡ
ರ್ಮಕೆ ಮನಸೂ ಭಾರ, ಬಿಸುಡದ ಜಾಯಮಾನಕೆ
ತೂರಿಸಲೂ ಜಾಗವಿಲ್ಲ.
ಬರೀ ತೂಕ..ತೂಕ..
ಕೆಳಗೇ ಜಗ್ಗುವ ಭಾರ

ಸಾಲದು ಒಲವೇ,
ನೀನಿತ್ತುದು ನನ್ನನೆತ್ತಲು
ಹೋಗು ಬಲವಾದುದನೆತ್ತಿ ತಾ.
ಕಾಲು ನಿಧಾನ ಹುದುಗುತಿವೆ,
ಕಾಲದ ಕೆಸರಸುಳಿಯಲಿ.
ಮುಳುಗುವ ಮುನ್ನ ಎತ್ತಿಕೋ
ನನ್ನ ನಿನ್ನೆದೆಯೆತ್ತರಕೆ.

ಬಂಡೆ ಬಂಡೆಯಾಗುಳಿದಿದೆ.

----------------------
ಮೊರೆವ ಸಾಗರದ
ಮೈಲುದ್ದ ಸಾಗುವ ಶಬ್ಧ,
ಸಾಲುಸಾಲು ತೆರೆ,
ಮೆಲ್ಲ ಕಚಗುಳಿಯಿಡುವ
ನೂರಾರು ಜಲಚರಗಳು,
ನಿಟ್ಟಿಸುವ ಎಷ್ಟೋ ಕಣ್ಣೋಟ,
ತೇಲುವ, ಮುಳುಗುವ
ಜೀವ-ನಿರ್ಜೀವಗಳು,
ಮೇಲೆ ಹತ್ತಿಳಿವ ನೊರೆರಾಶಿ,
ದೇವಗೆಂದೆಸೆವ ನಾಣ್ಯಗಳು.

ಹೀಗೆ ಅದೆಷ್ಟೋ ಅಸ್ತಿತ್ವಗಳ
ನಡು ನಿಂತ ಹೆಬ್ಬಂಡೆ
ಶತಮಾನಗಳಿಂದ ಏಕಾಂಗಿ.
ನಿಷ್ಟುರ, ನಿರ್ದಯಿ ಮೌನವಷ್ಟೇ
ಆಸ್ತಿಯಾದ ಒಂಟಿತನ,
ಏಕಾಂತದ ಸೆಳೆತಕಿಲ್ಲಿ
ಅಯಸ್ಕಾಂತದ ಬಲ.

ಬಳಿ ಸಾರುವರ ತುಳಿತಕೊಮ್ಮೆ,
ಮೈಚಾಚಲು ಹಾಸಾಗಿ ಒಮ್ಮೆ,
ಧ್ಯಾನಕೆ ಆಸನವಾಗೊಮ್ಮೆ,
ಮೆಚ್ಚುಗೆಗೆ, ಕಣ್ಣೀರಿಗೆ,
ವಿಸ್ಮಯಕೆ, ಒಮ್ಮೊಮ್ಮೆ ಭಯಕೂ
ಸಾಕ್ಷಿಯಾಗುತಾ,
ತಾನೇನೆಂಬುದನೇ
ಮರೆತಿದೆ.

ಪ್ರಣಯಕೆ, ಮುನಿಸಿಗೆ,
ನಿರೀಕ್ಷೆಗೆ, ಹತಾಶೆಗೆ,
ಕಾಮದಾಟಾಟೋಪಕೆ,
ಕಂದಮ್ಮಗಳ
ಕಣ್ಣುಮುಚ್ಚಾಲೆಯಾಟಕೆ,
ಜಗಳಕೆ, ಕೊನೆಗೊಮ್ಮೆ
ಆತ್ಮಹತ್ಯೆಗೂ ಒದಗಿ
ಸವೆದು ಸವಕಲಾಗಿದೆ.

ಮೇಲ್ಹಾಸು ಪಚ್ಚೆಕಂದು
ಪಾಚಿಯಾಗಿದ್ದರೂ
ಮೃದ್ವಂಗಿಗಳ ಎಡೆಬಿಡದ
ಒಡನಾಟಕೂ ಒಂದಿಷ್ಟೂ
ಮಿದುವಾಗಿಲ್ಲ, ಬದಲಾಗಿಲ್ಲ.
ಆನೆಗಾತ್ರದ ಅಲೆಹೊಡೆತಕೂ
ಕಿಮ್ಮಕ್ ಎಂದಿಲ್ಲ,
ಬಂಡೆ ಬರೀ ತಾನಾಗುಳಿದಿದೆ
ಅದಕೆ ಒಂಟಿಯಾಗಿದೆ.

---------------------

Monday, February 25, 2013

ಅತ್ತ ನಡೆವಾಗ ಪ್ರಶ್ನೆ ತಡೆದಿದೆ...

-------------------
ಇಂದು ರಕ್ತಸುರಿದ ಗಾಯದ ನೋವು ಕಾಡಿ,
ಹರಿಯದ ಕಣ್ಣೀರ ಪಸೆ ಮಿದುಮಾಡಿ ಎದೆನೆಲವ
ಸದ್ದಿಲ್ಲದೊಂದು ಪ್ರಶ್ನೆಯಲ್ಲಿ ಮೊಳೆತಿದೆ...
ನನ್ನೆಲ್ಲಾ ಪ್ರಶ್ನೆಯೂ ನಿನಗೇ, ಉತ್ತರವೂ...
ಸಂಶಯದ ಬೀಜದ ಮೊಳಕೆ,
ಸಂಶಯಿಸಿಯೇ ತಲೆಯೆತ್ತಿದೆ....

ಹಿಂದಡಿಯಿಟ್ಟೀತು, ಒಮ್ಮೆ ಕಣ್ಹಾಯಿಸಿಬಿಡು
ಇದ್ದರೆ ಉತ್ತರದ ಹನಿಯುಣಿಸು,
ವಿಚಿತ್ರ ಬೆಳೆಯಿದು, ನೀ ಹನಿಯಿಸೆ
ಮುರುಟಿ ಇಲ್ಲವಾದರೂ ಆದೀತು, ಅಥವಾ
ದಟ್ಟವಾಗೆದ್ದು ನನನೇ ಮರೆ ಮಾಡೀತು.
ಹಾದರದ ಕೂಸಂತೆ ಅಲ್ಲದೆಡೆ ಮೂಡಿಬಿಟ್ಟಿದೆ
ಳಿಸುವುದು-ಉಳಿಸುವುದು ನಿನಗೆ ಬಿಟ್ಟದ್ದು..

ನಾಳೆ ನಾನಳಿವ ಕ್ಷಣ ಹೇಳಿಕಳಿಸದೆಯೂ
ಮರೆಯಿಂದೀಚೆ ಬರುವೆಯಾ?
ಸುಕ್ಕುಚರ್ಮ, ಸಿಕ್ಕಿ ಹಾಕಿಕೊಂಡ ಉಸಿರಿಗೆ
ಉಕ್ಕಿ ಬರುವ ವಾಕರಿಕೆ ಅಡಗಿಸಿ,
ನಡೆಯಿರದ ಕಾಲು, ಹಾಡಿರದ ಬಾಯಿಗೆ
ತಡೆದು ತಿರುಗಿಸುವ ಅಸಹ್ಯ ಮೆಟ್ಟಿ,
ಕಣ್ಣಲಿ ಕಣ್ಣ ನೆಡುವೆಯಾ ಅಂದಿನಂತೆ?
ಕಣ್ಣೀರ ಮುತ್ತಲೊರೆಸುವೆಯಾ ಅಂದಿನಂತೆ?
ಮುಂದಿಗೂ ನೀನೇ ಬೇಕೆಂಬೆಯಾ ಅಂದಿನಂತೆ?

ಉಳಿದುಸಿರಿನ ಲೆಕ್ಕ ಜಟಿಲವಾಗುತ ಸಾಗಿದೆ
ಗುಣಿಸಿ ಭಾಗಿಸಿ ಶೇಷ ಶೂನ್ಯವಾಗಿಸುವೆಯಾ?
ಸುಳ್ಳಿನಿಂದಲೇ ಸರಿ, ಲೆಕ್ಕ ಮುಗಿಸಿಬಿಡು,
ಪೊಳ್ಳಾದರೂ ಆಶ್ವಾಸನೆಯ ಸಾಲ ಕೊಡು,
ಸಾವು ಸಾಲ ತೀರಿಸೀತು...
ಚಿತೆಯ ಬೂದಿ ಕರುಳಕುಡಿಗಂತೆ,
ನನ್ನದದಿಲ್ಲ, ಬರೆದು ಬಿಡುವೆ ನಿನ್ನ ಹೆಸರಿಗೆ.
ಒಯ್ಯುವೆಯಂತೆ ಬೇಕಾದಷ್ಟು,
ನಿನ್ನರಮನೆಯ ನಂದನ ಹೂವರಳಿಸುವಷ್ಟು..


ಹೀಗೊಂದು ಆಹ್ವಾನ ನಿನಗೆ

----------------
ಗೊತ್ತು, ನಿನಗೂ ಅಗತ್ಯವಿಲ್ಲ, ನನಗೂ
ನಂಬಿಸುವ, ಒಪ್ಪಿಸುವ ಜರೂರಿಂದು ಉಳಿದಿಲ್ಲ..
ಆದರೂ ತುಂಬಿ ಹೊರ ತುಳುಕಿದ ಹನಿಗಳಿವು,
ಬೇಕಿದ್ದರೆ ಬಿಸಿಹಸ್ತ ಚಾಚು, ತುಸು ತಂಪೆನಿಸೀತು.

ಗೊತ್ತು, ಈ ನಗು ನಿನಗೊಂದು ಪ್ರಶ್ನೆ...
ನೀ ಹೊರಟ ಕ್ಷಣವೂ ನಾನತ್ತಿರಲಿಲ್ಲ,
ಈಗ್ಯಾಕೆ ಅತ್ತೇನು, ನಗೆಯಷ್ಟೇ ನನಗೆ ಸ್ವಂತ.
ಈ ನಗು ಸಾಮಾನ್ಯವಲ್ಲ, ನನ್ನೊಲವೇ..
ಕಿತ್ತು ತಿನ್ನುವಳುವಿಗೂ, ಮೆಟ್ಟಿ ಹಿಸುಕೋ ನೋವಿಗೂ
ದಟ್ಟ ಮುಳ್ಳಿನ ಪರದೆಯಾಗುವುದು,
ಮುಳ್ಳು ಮಾತ್ರ ನನ್ನ ಚುಚ್ಚುತಲೇ ಸಾಗುವುದು.

ಗೊತ್ತು, ಈ ಮೌನವೂ ನಿನಗೊಂದು ಪ್ರಶ್ನೆ.
ನೀನಿದ್ದಾಗ ಅಪರಿಚಿತವಿತ್ತು, ಈಗ ಬಲುಆಪ್ತ.
ನೀ ಹೋಗುತ್ತಾ ಪರಿಚಯಿಸಿ ಹೋದೆಯಲ್ಲಾ,
ಇದೂ ಸಾಮಾನ್ಯವಲ್ಲ ಒಲವೇ...
ಮಾತು ಹುಟ್ಟದಂತೆ, ಹುಟ್ಟಿದರೂ ದನಿಯಾಗದಂತೆ
ಮುತುವರ್ಜಿಯ ಶಿಸ್ತು ನೇಮಿಸುವುದು.
ಶಿಸ್ತು ಮಾತ್ರ ನನ್ನುಸಿರುಗಟ್ಟಿಸುತಲೇ ಸಾಗುವುದು.

ಗೊತ್ತಾ, ನಾ ದೃಶ್ಯವಾಗಿರಲೇ ಇಲ್ಲ,
ನೀ ಮೀಯಿಸಿದ್ದು, ಆಮೇಲೆ ಹೊಳೆದು ನಾ ಕಾಣಿಸಿದ್ದು.
ಈಗ ದೃಷ್ಟಿಯಡಿಯಿದ್ದು ನಿಸ್ಸಹಾಯಕಳು,
ಜಗದ ಗಮನವೂ ಸಾಮಾನ್ಯವಲ್ಲ ಒಲವೇ...
ಬಿಟ್ಟೆನೆಂದರೂ ಬಿಡದ ಮಾಯೆಯಂತೆ
ಬಿಗಿಯಾಗಿ ಹೊರಗೆಳೆದು ಮನ ಖಾಲಿ ಮಾಡುವುದು
ಬಿಗಿ ಮಾತ್ರ ನನ್ನ ಕತ್ತು ಹಿಸುಕುತಲೇ ಸಾಗುವುದು

ನೀನಿಲ್ಲದ ನನ್ನಿರುವು
ಅದರ ಸುತ್ತುಮುತ್ತು,
ಕವನ-ಕಥನಗಳು,
ಕ್ರಿಯೆ-ಪ್ರತಿಕ್ರಿಯೆಗಳು,
ಬೆಳಗು-ಬೈಗು ಪ್ರಶ್ನೆಗಳಾಗಿ
ನಿನ್ನ ರೊಚ್ಚಿಗೆಬ್ಬಿಸಿದ್ದೂ ಗೊತ್ತು..

ಜಗ ಕಂಡದ್ದು ನನ್ನರ್ಧ ಸತ್ಯ,
ಇನ್ನರ್ಧವ ನೀನು, ನೀನಷ್ಟೇ ಕಾಣಬಹುದು
ಇಣುಕಿದರಾಗದು, ಶೋಧಿಸಲೇಬೇಕು.
ಇಚ್ಛೆಯಿದ್ದರೆ ಹೇಳು,
ಬಗೆದು ತೋರುವೆ ನನ್ನೊಳಗ, ಹುಡುಕಿಕೋ..
ನಂಬುವುದಾದರೆ ಕೇಳು,
ಇರುವುದಲ್ಲಿ ನಿನದೇ ಬಿಂಬ, ಅದರಲುತ್ತರ ಕಂಡುಕೋ..

Sunday, February 24, 2013

ಅಬ್ಜಾರಣ್ಯ ಬೆಳಕಾಯಿತು


----------------------

ಬಿಳಿಯುಟ್ಟು, ಬೆಳ್ಳಿಯಾಭರಣ ತೊಟ್ಟು,

ಬೆಳ್ಳಿಕಿರೀಟದ ಸುರಸುಂದರಾಂಗ.

ಹೊಳೆಹೊಳೆವ ಮೈಕಾಂತಿ,

ಶುಭ್ರಶ್ವೇತ ವ್ಯಕ್ತಿತ್ವ....

ಕಣ್ಣಿಂದೇಕೋ ನಸುಮಂಕು,

ಕಪ್ಪು ಕೂದಲಡಿ ತಲೆತುಂಬ

ಕಾಡಿದ ಪ್ರಶ್ನೆಗಳೂ ಮಬ್ಬುಕಪ್ಪು..ತಂದೆಗೇನು, ಇಪ್ಪತ್ತೇಳಲ್ಲ,

ನೂರು ಸಂತಾನಕೂ

ನೂರ್ಮಡಿಸಿಯೋ, ವಿಭಜಿಸಿಯೋ

ವಾತ್ಸಲ್ಯ ಸಮಹಂಚಿಕೆಯಾದೀತು..

ಪ್ರೇಮ ಏಕದಳಧಾನ್ಯ, ಹೇಗೊದಗೀತು?!

ಎರಡೂ ಆಗದು, ಆದರೆ ಚೂರುಚೂರಷ್ಟೇ..

ತನ್ನರಿವಿರದೇ ಮೊಳೆತ ಪ್ರಜಾಪತಿಯ

ಪುತ್ರಿಯರೆಲ್ಲರ ಧಾರೆಯ ನಿರ್ಧಾರಕೆ,

ತಾ ಬಲಿಯಾಗೆ, ದಕ್ಷಗೆ ಬೆಂಬಲವಿತ್ತ ದೈವ

ಅನಿವಾರ್ಯಒಪ್ಪಿಗೆಯ ಮೌನ ತನಗೇಕಿತ್ತದ್ದು?ರೋಹಿಣಿ ತನ್ನ ಮನದರಸಿ,

ಉಳಿದವರು ಮನೆಗಷ್ಟೇ..

ರೋಹಿಣಿಗಿತ್ತ ಒಂದು ಪ್ರೀತಿ ಮುತ್ತಿಗೂ

ಒಂದೇ, ಎರಡೇ ಇಪ್ಪತ್ತಾರು ಪ್ರಶ್ನಾರ್ಥನೋಟ

ಆರ್ತನಿರೀಕ್ಷೆ, ನಿರಾಸೆ ಮತ್ತಾಪಾದನೆಗಳು.

ಇಲ್ಲದ್ದ ತಾನೆಲ್ಲಿಂದ ತಂದು ಕೊಡಲಿ?!

ಎಲ್ಲ ಇದ್ದೇ ಬೆಳೆದವರಿಗೆ ಇಲ್ಲದ್ದ ಹೇಗೆ ತೋರಿಸಲಿ?ಅಸಮಾಧಾನದ ಹೊಗೆ ತವರ ತಲುಪಿ,

ಅಲ್ಲಿ ಭುಗಿಲೆದ್ದ ಕೋಪ, ನಭಕದರ ತಾಪ.

ಚೆಲುವಿನೊಡೆಯ ಶಶಾಂಕಗೆ

ವ್ಯಕ್ತಿತ್ವ ನಶಿಸುವ ಶಾಪ..

ಸೊರಗುತ ಸಾಗಿರುವಾತಗೆ ಪ್ರೀತಿಯುಣಿಸಿ,

ಪುಷ್ಟಿ ಮಾಡಲೆತ್ನಿಸುವ ರೋಹಿಣಿ

ಫಲವಿಲ್ಲದ ಸಾಧನೆಗೆ ಕೊರಗುತಾಳೆ.ಭಕ್ತರಾಧೀನ ಶಿವನ ನೆನಪು,

ಕಾರ್ಮೋಡದೆಡೆ ಮಿಂಚಿನಗೆರೆಯ ಹೊಳಪು...

ತಪಗೈದು ಶಾಪದ ತಾಪವಿಳಿಸುವ ಆಸೆ,

ಚಂದ್ರ ಅಡಿಯಿರಿಸಿದ ಆ ಕಾಡಿನೊಳಗೆ.

ದಟ್ಟಕಾನನದ ಕಡುಪಚ್ಚೆಯಡಿಯ ಕಪ್ಪು,

ತಾರಾಪತಿಯ ಅರೆಕಾಂತಿಗೂ ಬೆಳ್ಳನೆ ಬೆಳಗಿ,

ಅಬ್ಜಾರಣ್ಯ ಬೆಳಕಾಯಿತು..ತಪಕೆ ಮೆಚ್ಚಿದ ಶಿವ, ತಿಂಗಳನಿಗೆ

ಪಕ್ಷವೆರಡರ ತಿಂಗಳಿನವಧಿಯಿತ್ತ...

ಪಕ್ಷವೊಂದು ಕ್ಷೀಣವಾಗಿಸಿದರೆ,

ಮುಂದಿನದರಲಿ ವೃದ್ಧಿಯಾಗೆಂದ..

ಹುಣ್ಣಿಮೆ, ಅಮಾವಾಸ್ಯೆಗಳ ವ್ಯಾಖ್ಯಾನಿಸಿ,

ಶುಕ್ಲ, ಕೃಷ್ಣಪಕ್ಷಗಳ ನೇಮಿಸಿದ...ಉಡುಪತಿ ತಪಗೈದು ವಿರಾಜಿಸಿದ

ಜಾಗವೇ ಉಡುಪಿ,

ಚಂದ್ರನ ಪರಿಪಾಲಿಸಿದ ಈಶ್ವರನೇ

ಚಂದ್ರಮೌಳೀಶ್ವರ ಎಂದಾಯಿತು.(ನಾನು ಓದಿದ ಪೂರ್ಣಪ್ರಜ್ಞ ಕಾಲೇಜಿನ ಆವರಣದೊಳಗೆ ಈ ಅಬ್ಜಾರಣ್ಯವಿದ್ದ ಜಾಗವಿದೆ, ಅಲ್ಲೀಗ ನಾಗಮಂಡಲದ ತಯಾರಿಯ ಸಂಭ್ರಮವಂತೆ, ತವರಿಂದ ಬಂದ ಆ ಸುದ್ಧಿ ನನ್ನೊಳಗೆ ಮೂಡಿಸಿದ ಸಾಲುಗಳಿವು)

ಓ ಮೈ ಗಾಡ್ ಎಂಬ ನನಗೆ ತುಂಬಾ ಹಿಡಿಸಿದ ಹಿಂದಿ ಚಿತ್ರವೊಂದರ ಮೇರೆ ನಿಶಾನ್ ಎಂಬ ಹಾಡು ಮನಸಲ್ಲಿ ಅಚ್ಚೊತ್ತಿದೆ. ಕುಮಾರ್ ಅನ್ನುವವರ ಸಾಹಿತ್ಯವನ್ನು ಕೈಲಾಶ್ ಖೇರ್ ತುಂಬಾ ಆಪ್ತವೆನಿಸುವ ರೀತಿ ಹಾಡಿದ್ದಾರೆ. ಹೀಗೂ ಇರಬಹುದಾದ ದೇವರ ಮನೋಸ್ಥಿತಿಯ ಬಗ್ಗೆ ಯಾವತ್ತಾದರೂ ನಾವು ಚಿಂತಿಸಿದೀವಾ?! ಭಾವಾನುವಾದದ ಪ್ರಯತ್ನ ಮಾಡಿದೀನಿ, ಓದಿನೋಡಿ.


ಲೋಕ ಮನುಷ್ಯರ ನಡುವೆ ನನ್ನ ಕಾಣೆ ಮಾಡಿ

ಅಂಗಡಿಯ ಚಿತ್ರಗಳಲಿ ವಿರಾಜಮಾನ ಮಾಡಿದೆ.

ನನ್ನಿವೇ ಕೈಗಳಿಂದ, ಅಲ್ಲ, ಮಣ್ಣಿಂದಲ್ಲ,

ಭಾವರಸಗಳಿಂದ ನಾ ಸೃಜಿಸಿದ ಈ ಲೋಕದಲ್ಲಿ

ಇಂದು ಹುಡುಕುತ್ತಾ ಅಲೆಯುತ್ತಿದ್ದೇನೆ

ನಾನೆಲ್ಲಿ, ನನ್ನ ಗುರುತೆಲ್ಲಿ?!ನಡೆವಾಗ ಬಿಡದೆ ಹಿಂದೆ ಛಾಯೆಯಾಗಿ

ನಿನ ತಾಪಕೆ ತಂಪೆರೆಯುವ ನೆರಳಾಗಿ,

ಬಾಳಪಥದುದ್ದಕೂ ಸಂಗಾತಿಯಾಗೊದಗಿದೆ,

ನೀ ಮಾತ್ರ ಉತ್ತರಕೇ ಪ್ರಶ್ನೆ ಹುಡುಕಿದೆ,

ಬೆಳಕ ಸ್ಪಷ್ಟತೆಯಲೂ ತಡಕಾಡಿದೆ,

ಎಲ್ಲಿ, ಯಾಕೆ ಕಳೆದು ಹೋದೆ?!

ನಾನೆಲ್ಲಿ, ನನ್ನ ಗುರುತೆಲ್ಲಿ?!ಈ ಹಕ್ಕಿ, ಹರಿವ ನೀರು ನೋಡು

ನನ್ನಿಂದ ಹುಟ್ಟಿ, ನೆಲಮುಗಿಲ ನಡುವೆ

ನನ್ನ ಮತವನೇ ಸಾರಿ ಬಾಳಿವೆ.

ನೀನು, ನಿನ್ನ ಹಣೆಬರಹ, ಬಾಳಪಟದ ಭಾವಚಿತ್ರಗಳು

ನನ್ನಿಂದಲೇ ಮೂಡಿಯೂ ಯಾಕೆ ಮೂಕವಾಗಿವೆ?!

ನಾನೆಲ್ಲಿ, ನನ್ನ ಗುರುತೆಲ್ಲಿ?!

Saturday, February 23, 2013

ನೀನ್ಯಾತಕಾದೆಯೋ

-----------------
ಬತ್ತದ ಬಾವಿಯೊರತೆ ಅಲ್ಲಿದೆ,
ಮಗೆದಷ್ಟೂ ಒಸರುವುದು.

ಕುಡಿದರೂ, ಚೆಲ್ಲಿದರೂ
ನೀರೇ ಅದು, ಆಗದು ಬೇರೇನೂ.

ಬಣ್ಣವಿಲ್ಲದೆ ಪಾರದರ್ಶಕ,
ಆಕಾರವಿಲ್ಲದ ನಿರಹಂಕಾರ.

ಕಲಕದೇ ನಿಟ್ಟಿಸು,
ನಿನ್ನ ನೋಡಬಹುದು,

ಕಲಕಿ ನಿಟ್ಟಿಸಿದರೆ,
ಬಿಂಬ ನಿನದೇ ಮುರಿವುದು.

ಕ್ಷಣಕಾಲ ಕುಲುಕಾಡಿ
ಮತ್ತದು ಶಾಂತ,

ಕಲಕದಿರುವ ತನಕ
ನೀನೇ ವಿಭ್ರಾಂತ.

ಮೆಳ್ಳೆಗಣ್ಣು ಮೊಂಡುಮೂಗು
ಕಂಡರದು ನಿನದೇ, ಅದರದಲ್ಲ...

ಪರೀಕ್ಷೆಗದು ಸರ್ವಸನ್ನದ್ಧ
ಗಟ್ಟಿ ಅಸ್ತಿತ್ವ, ಬಲು ಪರಿಶುದ್ಧ.

ಕೆಸರೆಲ್ಲೆಡೆ ಇದೆ,
ನಿನ್ನಲೂ, ಅದರಲೂ.

ನಿನದೆಲ್ಲಿದೆಯೋ ಗೊತ್ತಿಲ್ಲ,
ಅದರದು ತಳಸೇರಿ ಮೌನ..

ಎದ್ದರೂ ಅಲ್ಲೊಮ್ಮೊಮ್ಮೆ
ಅದು ಅಡಿಗೇ ತಳ್ಳುವುದು.

ನಿನದು ಹಾಗಲ್ಲ, ನಿನನೇ
ಕರಗಿಸಿ ಮರೆಸುವುದು..

ನೀ ಕುಡಿದು ಸವಿಯೆನಲಷ್ಟೇ
ಅದು ಧನ್ಯವಲ್ಲ,

ಮೊಳೆಸುವುದು, ಬೆಳೆಸುವುದು

ತೊಳೆದು ಬೆಳಗಿಸುವುದು

ಜೀವಚೈತನ್ಯವದೆಂದು,
ಅವನಾರಿಸಿದ ಧನ್ಯತೆಯಿಹುದಲ್ಲಾ...
ತನ್ನಿರುವೇ ಅದಕೆ ಪ್ರೋತ್ಸಾಹ
ಎಲ್ಲ ಕಾಲಕು ಒಂದೇ ತರದುತ್ಸಾಹ

ಕೇಳದು ಗುರುತು-ಸಮ್ಮಾನ,
ಬತ್ತದುಳಿವುದದರ ಬಹುಮಾನ.

ವ್ಯರ್ಥ ಶೋಧಿಸದಿರು,
ಮಲಿನವಲ್ಲಿಲ್ಲ,

ನೀನ್ಯಾತಕಾದೆಯೋ,
ಎಲ್ಲೂ ಒದಗಿಲ್ಲಅವನ ಕರಿಯೇ ತಾಯೀ...

--------------------
ಬೀದಿ ಕೊನೆಯಲ್ಲಿ ಸಾಣೆ ಹಿಡಿವಾತನ
ಮಶೀನಿನ ಕಿರ್ರನೆ ಶಬ್ಧ...
ರೇಜಿಗೆ ತರುತ್ತಿದ್ದುದು, ಇಂದು ತಾರದೆ
ಬೇಗ ಬಳಿಬರಲೆನಿಸಿತ್ತು...
ಕಾದು ಕೂತ ಕಾಲು ಮೇಲೇಳಲೊಲ್ಲವು
ಎಲ್ಲಕ್ಕಿಂತ ತುರ್ತಿದೆಂಬಂತೆ.

"ಚೂರಿ, ಚಾಕು, ಕತ್ತಿ, ಮಚ್ಚು.. ಸಾಣಾ..ರಿಪೇರಿ..."
ನನ್ನೆದುರೇ, ನನ್ನೆದೆಗಿಳಿದ ಶಬ್ಧಗಳು.
ನೂರು ಮಾತಿದ್ದರೂ ಬಿಟ್ಟಬಾಯಿ ಮೂಕ,
ಒಳಗೆ ಗುಂಯ್ಗುಡುವ ಪ್ರಶ್ನೆ ದುಂಬಿಹಿಂಡಂತೆ-
"ಆಗಲೇ ಬಿಡದೆ ಮುರಿಯುತಿವೆ, ಕೊಚ್ಚುತಿವೆ
ಇನ್ನಷ್ಟು ಚೂಪಾಗಿಸಬೇಕೇನಪ್ಪಾ?
ಕಳೆದ ಆಯುಧಪೂಜೆಗೆ ತೊಳೆದು ಕೈಮುಗಿದಾಗ
ಹೊಳೆಯುತಿದ್ದವು, ಈಗ ತುಕ್ಕೂ ಹಿಡಿದಿಲ್ಲ..
ನಾ ಮುರಿವವಳಲ್ಲ, ಕೊಚ್ಚುವಳಲ್ಲ,
ನೀನವನೀಗ ಚೂಪಾಗಿಸಬೇಕಿಲ್ಲ..."

ಕಣ್ಣೋದಿದವನಂತೆ ಮುಂದೆ ಸಾಗಿದ್ದ...
ಮತ್ತದೇ ಶಬ್ಧಗಳು ನೆರೆಮನೆಯೆದುರಿಗೆ....
ಮನ ವಿಹ್ವಲ - ಅವರು ಚೂಪಾಗಿಸಿದರೆ?!
ಬೇಡ, ಮುರಿವವು-ಕೊಚ್ಚುವವು ಯಾರದಾದರೂ
ಚೂಪಾಗುವುದೇ ಬೇಡ, ಅವನ ಕೂಗಿದೆ- "ಬಾಪ್ಪಾ..".
ಕೇಳಿದೆ- ನನಗರಿವಿಲ್ಲದೇ ದಯನೀಯವಾಗಿ..

"ಬಡ್ಡಾಗಿದೆ ಭ್ರಾತೃತ್ವ, ತುಕ್ಕಾಗಿದೆ ಸಮಾನತೆ,
ಅಂತಃಕರಣ, ಕರುಣೆ ಹರಿದು ಚಲ್ಲಾಪಿಲ್ಲಿ,
ಸಂಪರ್ಕಕೊಂಡಿ ಕಳಚಿ ಸಂಬಂಧ ಸಡಿಲವಿಲ್ಲಿ,

ಚೂಪಾಗಿಸಿ, ತುಕ್ಕು ಕೆರೆದು,
ಮುರಿದವಕೆ ರಿಪೇರಿ ಸಾಧ್ಯವೇ?
ಬಂಧ ಬಿಗಿಯಾಗಿಸುವೆಯಾ?
ಮನುಷ್ಯತ್ವ ಮೊಂಡಾಗಿದೆ, ಸಾಣೆಹಿಡಿಯಬಲ್ಲೆಯಾ?"

ಎಂದೂ ಎತ್ತದವ ಅಂದು ಮುಖವೆತ್ತಿದ,
ನನ್ನ ಕಂಬನಿಯ ಮರಿ ಅವನ ಕಣ್ಣಲ್ಲಿ.
ಕಣಕಣದಿ ಪ್ರತಿಫಲಿಸಿ ಸಹಾನುಭೂತಿ,
ಅವನ ನಿತ್ಯಮೌನ ಮಾತಾಗಿತ್ತು...
"ಹೀಗೆ ಸಾಣೆ ಹಿಡಿವ ಮಶೀನಿದಲ್ಲ ಅವ್ವಾ,
ಈ ರಿಪೇರಿಗಾಗೋ ಉಪಾಯವೆನ್ನಲಿಲ್ಲ.."
ಜೋಡಿಸಿದ ಕೈಯ್ಯೆತ್ತಿ ಅಕಾಶ ತೋರಿದ
ಅಸಹಾಯ ನಗು ಗುಣುಗುಣಿಸಿದಂತಿತ್ತು...
"ಅವನ ಕರಿಯೇ ತಾಯೀ".

Friday, February 22, 2013


ನಿಟ್ಟುಸಿರು ನಿರಾಳವಾಯಿತು.

----------------------
ಕಾಲ್ಮುರಿದುಕೊಂಡು
ಮೂಲೆ ಸೇರಿದ ದಿನಗಳು
ಎದ್ದೆದ್ದು ಬಂದು ಕಾಡಿಹವು
ಅವೇ ವಿಷಯಗಳ
ಹೊಸಹೊಸ ರೂಪಗಳು..

ನೇತು ಹಾಕಿದ ಸೌಟು
ಗಾಳಿಗಾಡಿದ ಹಾಡಿಗೆ
ಸೋರುವ ನಲ್ಲಿನೀರಿನ
ತಟಪಟ ಲಯಕೆ
ಕೈಯ್ಯತ್ತ ಸಾಗಿ
ನಾಟ್ಯದ ಜೊತೆ ನೀಡಬಯಸಿದೆ,
ಅಡುಗೆ ಮನೆ "ಮುದವಿಲ್ಲಿದೆ, ಬಾ" ಎನ್ನುತಿದೆ,
ಮುರಿದೆನ್ನ ಕಾಲ ಕಟ್ಟಿಹಾಕಿದ ಮಂಚ ಅಣಕಿಸಿದೆ..

ಯಾರೋ ಬರೆದ
ರಂಗೋಲಿಯ ಸೊಟ್ಟಗೆರೆ,
ತುಳಸಿಯ ಹಿಂದುಮುಂದು
ಬೋಳುನೆಲ ಕಾಡಿದೆ,
ಮನದೊಳಗಿನ ಮುದ್ದುಕಲ್ಪನೆ
ಚಿತ್ರವಾಗಬಯಸಿದೆ
ಅರಸಿನ-ಕುಂಕುಮದ ಬಟ್ಟಲೆನ್ನ ಕರೆದಿದೆ,
ಎತ್ತಿಕೊಳಲಾಗದ ನೋವ ಮುಂಜಾವು ಅಣಕಿಸಿದೆ...

ಮುಚ್ಚಿದ ಬಾಗಿಲ
ಕರೆಘಂಟೆ ಕೂಗುತಿದೆ,
ಕಾದ ಎದೆ ಹೇಳಿದೆ-
"ಯಾರೋ ಬಂದ ಹಾಗಿದೆ".
ಮೂಲೆಯ ನಿಶ್ಚಲಮೌನದ
ಕಿವಿ ನೆಟ್ಟಗಾಗಿದೆ,
ಶಬ್ಧದುಡುಗೆ ತೊಟ್ಟು ಎದುರುಗೊಳ್ಳಬಯಸಿದೆ,
ತೆವಳುವ ಮಾತ ತಲುಪದ ನಾಲ್ಕು ಹೆಜ್ಜೆ ಅಣಕಿಸಿದೆ..

ತೋಟದ ಮೊಗ್ಗು,
ಪಾರಿಜಾತಗಿಡದ ಹಕ್ಕಿಗೂಡು,
ಆ ಮನೆ ಬೆಕ್ಕಿನ ಮರಿ,
ಬೀದಿಯ ಬಸುರಿನಾಯಿ,
ಏನಾಗಿವೆಯೋ....ಹೇಗಾಗಿವೆಯೋ...
ಕಣ್ಮುಚ್ಚಿ ನೆನೆದ ಘಳಿಗೆ..

ಕಾಲಿತ್ತ ದೇವಗೆ, ನಡಿಗೆ ಕಲಿಸಿದ ಅಮ್ಮಗೆ,
ಚಲನಶೀಲತೆಯ ಅದಮ್ಯ ಉತ್ಸಾಹಕೆ,
ನಾಳೆ ಮತ್ತದರ ಪುನರುತ್ಥಾನದ ಸಾಧ್ಯತೆಗೆ
ನಮಿಸಿ ಮನ ಶರಣೆಂದಿತು....
ನಿಟ್ಟುಸಿರು ಮೈಮುರಿದು ನಿರಾಳವಾಯಿತು.


ಚಂದ ನೋಡು

---------------------
ಹೇಳಬೇಕಿತ್ತು ನೂರು,
ಬಾಯಿಯಿಂದ ಬಾಯಿಗೆ ಹಾಕಿ ಬೀಗ,
ಒಳಗವನು ನೀ ಭದ್ರವಾಗಿರಿಸುತ್ತಿದ್ದಾಗಲೇ
ಹೇಗೋ ನಾಚಿಕೆ ಮಾತ್ರ ಹೊರನುಸುಳಿ ಬಂದು
ಕೆನ್ನೆಕುಳಿಗಳಲಿ ಮನೆಮಾಡಿ ಕೂತ ಚಂದ ನೋಡು..

ಹಾಡಬೇಕಿತ್ತು ನೂರು,
ನಿನ್ನೊಳಗಿನ ರಾಗತಾಳ ಹಿಮ್ಮೇಳದಲ್ಲಿ
ಪ್ರೇಮದ ಮೌನಗಾನ ನೀ ಸವಿಯುತಿದ್ದಾಗಲೇ,
ಹೇಗೋ ನಮ್ಮ ಹೆಸರ ಅಕ್ಷರಗಳು ಪಲುಕುಗಳಾಗಿ
ಲಯದಿ ತೇಲಿ ಜೀವಗಾನದಾಲಾಪವಾದ ಚಂದ ನೋಡು..

ನೋಡಬೇಕಿತ್ತು ನೂರು,
ಮುಚ್ಚಿದೆವೆಯಡಿ ಮೂಡಿದ ನಿನ್ನ ಬಿಂಬ,
ಕಂಡು ಮನಸಾರೆ ನಾ ತಣಿಯುತ್ತಿದ್ದಾಗಲೇ,
ಹೇಗೋ ವಿರಹದ ಕಲ್ಪನೆ ಅದರುದ್ದಗಲಕು ಹರಡಿ
ಒಳಗಿಂದ ಹೊರಹರಿದು ಕಣ್ತುಂಬಿ ನಿಂತ ಚಂದ ನೋಡು..

ಒಲವೇ, ನೀನಿಲ್ಲಿರುವ ಕ್ಷಣ ಚಂದ,
ನೀನಿಲ್ಲಿಲ್ಲದ್ದು ಅದಕಿಂತಲೂ ಚಂದ,
ನಿನ್ನ ಹೊಂದುವಾಸೆ ಬೆಳ್ಮುಗಿಲು
ಹೊಂದಿದ ತೃಪ್ತಿ ಬೆಳ್ಳಕ್ಕಿ ಸಾಲು
ಅದ ಧರಿಸಿ ಇದು, ಇದ ಹೊತ್ತು ಅದು
ನನ್ನ ಇಂದು ನಾಳೆಗಳನಾಗಿಸಿವೆ
ಏಳು ಬಣ್ಣದಾಗರ ಶುಭ್ರ ಬಿಳಿಯ ಬಾನು.
ಸಿಕ್ಕಸಿಕ್ಕಲ್ಲಿ ಬಾಂಬ್!!!???

--------------------------
ಕಣ್ಮುಚ್ಚಿ ಕ್ಷಣದಲೇ ಮನೆಮಾರು ಕೆಡಹುವರೇ,
ನಿಮದೂ ಇರಬಹುದಲ್ಲವೇ ಪುಟ್ಟದೊಂದು ಸೂರು?
ಗುಟ್ಟು ಮುಚ್ಚಿಡುವ ಗೋಡೆ ಬಾಗಿಲುಗಳದು,
ನಗು-ಅಳು ಹುಟ್ಟಿಸುವ ಕೋಣೆ-ಕಿಟಕಿಗಳದು,
ಬೆಸೆವ-ಬೇರ್ಪಡಿಸುವ ಹೊಸಿಲು-ಮೆಟ್ಟಿಲುಗಳದು..

ಯೋಚಿಸದೇ ನಿಷ್ಪಾಪಿಗಳ ರಕ್ತ ಹರಿಸುವರೇ,
ನಿಮದೂ ಇರಬಹುದಲ್ಲವೇ ರಕ್ತಸಂಬಂಧಗಳು?
ತಪ್ಪು-ಒಪ್ಪುಗಳ ನುಂಗಿ ನನ್ನದೆನಿಸುವವು,
ಕಣ್ಣರಿಯದೇ ಕರುಳರಿವ ತಂಪು ವಾತ್ಸಲ್ಯದವು,
ನಿಸ್ವಾರ್ಥ ಹಾರೈಕೆ ಅಕ್ಷಯವಾಗೋ ಹಕ್ಕಿನವು...

ಮನಮುಚ್ಚಿ ಸಿಕ್ಕಲ್ಲಿ ಸಾವಸಾಧನ ಸಿಕ್ಕಿಸುವರೇ,
ನಿಮದೂ ಇದ್ದಿರಬಹುದಲ್ಲವೇ ಒಂದು ಬಾಲ್ಯ?
ಅದರಲೊಂದು ಮೂರು ಚಕ್ರದ ಸೈಕಲ್,
ತಂಗಿಯ ಪುಟ್ಟಗೊಂಬೆ, ಶಾಲೆಯ ತಿಂಡಿ ಡಬ್ಬ,
ಹೇಗೆ ಬಳಸಿದಿರಿ ಅವನೇ ಕೊಲುವ ಉದ್ದೇಶಕೆ?

ತಡರಾತ್ರಿ ಬರುವ ಅಪ್ಪನ ನಿದ್ದೆಗೆಟ್ಟು ಕಾದವರೇ,
ಕಾವ ಕಂಗಳು ನಿರಾಸೆಗೊಳುವ ನೋವಿನರಿವಿಲ್ಲವೇ?
ದೇಗುಲದ ಪ್ರಸಾದಕೆ, ಕುಂಕುಮವಿಡುವ ಅಮ್ಮನ ಕೈಗೆ
ಕಾದವರೇ, ಅಂಥದೊಂದು ದಿನ ಅಮ್ಮ ಬರದಿರುತ್ತಿದ್ದರೆ?
ಕುಸಿದ ಜೀವನಾಧಾರಅಳಿವಿನ ಶಾಪದ ಅಳುಕಿಲ್ಲವೇ?


ಹಾರಿದ ನೆತ್ತರಬಿಂದು, ಮಾಂಸದ ತುಣುಕಿನತ್ತ
ಗೆಳೆಯನ ತರಚುಗಾಯಕತ್ತ ಮುಗ್ಧತೆ ಕುರುಡಾಯಿತೇ?
ಸಕ್ಕರೆಕಡ್ಡಿ, ಬೂಂದಿ, ಪೆಪ್ಪರಮಿಂಟು ಚಪ್ಪರಿಸಿದವರೇ,
ಅದೇ ನೀವು, ನಿಮಗೀಗ ವಿನಾಶ ಹೇಗೆ ರುಚಿಸಿತು?
ದ್ವೇಷ ಕೊಳ್ಳಲು ಆ ನಾಲಿಗೆಯ ಮಾರಿಕೊಂಡಿರಾ?

Thursday, February 21, 2013

ಎತ್ತಣಿಂದೆತ್ತ ಸಂಬಂಧವಯ್ಯಾ....
-------------------------------
ಇಂದೂ ಬರಲಿಲ್ಲ ಅವ, ಕಸ ಒಯ್ಯುವವ
ಇನ್ಯಾರಿಗಿಲ್ಲದಷ್ಟು ಕಾದು ಡಬ್ಬಿ ಒಳಗಿಡುವಾಗ
"ವಾರದ ರಜೆಯೋ, ಮುಷ್ಕರವೋ,
ಅನಾರೋಗ್ಯವೋ" - ಮನಸು ಚಿಂತಿಸುವುದು.
ಎತ್ತಣಿಂದೆತ್ತ ಸಂಬಂಧವಯ್ಯಾ....

ಮನೆಯೊಳ ಹೊರಗಿನ ಗಲೀಜೆತ್ತುವಾಗ
ವಾಸನೆಗೆ, ಹಾರುವ ಧೂಳಿಗೆ
ಮೂಗಿಲ್ಲದವನಂತೆ, ಕಣ್ಣಿಲ್ಲದವನಂತೆ
ನಿರ್ವಿಕಾರತೆಯಲೇ ಮುಳುಗಿರುತಾನೆ,
ಬೇತಾಳ ಪ್ರಶ್ನೆಯಾಗುತ್ತಾನೆ..

ಸಣ್ಣ ಕಟ್ಟು, ದೊಡ್ಡ ಕಟ್ಟು,
ಪಿಜ್ಜಾ ಕಾರ್ನರ್ ನ, ಮಕ್ಕಳಾಟಿಕೆಯ,
ಹೊಸಬಟ್ಟೆಯ ಖಾಲಿಡಬ್ಬಗಳು,
ಮುರಿಯದ, ಹಳೆಯದಷ್ಟೇ ಆದ ಮೆಟ್ಟುಗಳು..
ಏನೂ ಅನಿಸದಂತೆ ಸುಡುವದರ ಜೊತೆ ಸೇರಿಸುತಾನೆ..

ಮುರುಕು ಚಪ್ಪಲಿ, ಹರಕು ಬಟ್ಟೆ, ಕುರುಚಲು ಗಡ್ಡ
ಕಂದನ ಆಸೆಗಣ್ಣು, ಸಂಗಾತಿಯ ಬರಿಗಾಲು ಕಾಡವೇ?
ಅವನ ನಿರ್ಭಾವುಕ ಮೌನ ನನ್ನ ಕಾಡುತ್ತದೆ...
ಆಸೆ ಮೆಟ್ಟಿ ನಿಂತವನೇ?!- ಕ್ಷಣಕಾಲ ಅಸೂಯೆಯೂ..
ಕುತೂಹಲದ ಭಾರಕೆ ಬಾಗಿ ಕಾದುನಿಂತ ಆ ದಿನ....

ನಾನಿಟ್ಟ ಕಸದ ದೊಡ್ಡ ಮೂಟೆಯೆತ್ತಿದ ಕಣ್ಣು
ಕಲ್ಲಂತೆ ನಿಂತ ನನ್ನ ಕಣ್ಣಿಗೆ ತಾಕಿತ್ತಷ್ಟೇ..
ಉರಿವ ಕೆಂಪು ಕಣ್ಣು, ವೀಳ್ಯದೆಲೆ ಕೆಂಪಿನ ತುಟಿಯ
ಹೇಳಲಾಗದ ಹೇಳಬಾರದ ಸಿಟ್ಟು ಸುಡುವಷ್ಟು ಬಿಸಿ...
ಮೂಟೆಯಿಂದೀಚೆ ಇಣುಕಿದ್ದ ಚಪಾತಿಗಳು ಅಣಕಿಸಿದ್ದವು.

ಅದು ಮೌನವೂ ಅಲ್ಲ, ನಿರ್ವಿಕಾರತೆಯೂ ಅಲ್ಲ,
ಅಸಹಾಯಕತೆ ಅಸಹನೀಯವಾದ ನೋವು
ಅದು ಮತ್ತೂ ಬೆಳೆದು ಕಂದನ, ಸಂಗಾತಿಯ
ಚಿತ್ರದೊಳ ಸೇರಿ ಕೆಂಪಾದ ರೋಷ, ತಿರಸ್ಕಾರ.
ಅನಿವಾರ್ಯ, ಅವಿಭಾಜ್ಯ ಅಂಗವೇನೋ ಆಗಿದ್ದ,
ಆ ದಿನ ಇನ್ನೂ ಹತ್ತಿರದವನೆನಿಸಿದ್ದ...ಕನಸಜಾಲ


-----------------

ನಿದ್ದೆಯಾವರಣದೊಳಗೆ ಕನಸು ಮೂಡುತಿತ್ತು

ಅರೆಬರೆ ಅರಿವಿನ ಜೋಪಾನ,

ಅರೆ ಮರೆವಿನ ಸೋಪಾನಒಂದಷ್ಟು ನಗು, ಒಂದಷ್ಟು ಅಳು

ಒಂದಷ್ಟು ನಿಜ, ಮತ್ತಷ್ಟೇ ಸುಳ್ಳುಗಳು.

ಪರಿಚಿತ ಬಯಕೆ, ಅಪರಿಚಿತ ಆಸೆಗಳು

ನಮ್ಮವರು, ನಮ್ಮವರಲ್ಲದವರು

ಹಲ ಪದಾರ್ಥದಿ ನೇಯ್ವ ಕನಸ ಬಲೆ,

ಒಮ್ಮೊಮ್ಮೆ ಮುಂದುವರೆದು,

ಒಮ್ಮೊಮ್ಮೆ ತುಂಡಾಗಿ,

ಮನಸ ಜೇಡ ಹೆಣೆಯುತಲೇ ಸಾಗುವುದು,

ಭಾವಾನುಭವ ಒಳಗೆ ಬಂಧಿಯಾಗುವುದು.ನಿದ್ದೆಯಳಿದಾಗ ಕಣ್ಣಷ್ಟೇ ಅಲ್ಲ,

ಮನಸೂ ವಾಸ್ತವತೆಯ ಬೆಳಕಲಿ ನೋಡುತ್ತದೆ-

ಭ್ರಮೆಯ ಪೊರೆ ಕಳಚಿದ ಹಾವೊಮ್ಮೆ,

ಭರವಸೆಯ ಸಂದೇಶದ ಓಲೆಯೊಮ್ಮೆ,

ಒಮ್ಮೊಮ್ಮೆ, ಅರ್ಥವಾಗದ ಅಚ್ಚರಿ ಕನಸು.

ಇಂದಿನೊಳಗಿನ ಬಂಧಕಲ್ಲಿ ಅದೇ ಪಾತ್ರ,

ನಿನ್ನೆಯದು ಇಂದಿಗಿಳಿದು ಬಡವಾದರೂ,

ಪುಷ್ಟಿಯಾದರೂ ಕನಸಲದಕೆ ನಿನ್ನೆಯದೇ ಪಾತ್ರ.

ಭಾವಭಾವಗಳ ಅಕಾರವಾಗಿಸುವ

ಹಂಸಕ್ಷೀರ ನ್ಯಾಯಕೆ,

ಅಂತರಾಳ ಮಾರ್ಗದರ್ಶಕ,

ಕನಸು ಚಿತ್ರಫಲಕ.ನಾನೂ ಕಲಿಯಬೇಕೇ?


-----------------

ಅಮ್ಮನ ಅಡುಗೆ ಮನೆ ಎದುರಾಗಲೆಲ್ಲ

ಹಲ ಅನಿಸಿಕೆಗಳ ಅಮ್ಮನ ಮನ

ಒಳಕರೆದಂತೆ, ಬೆತ್ತಲಾಗಬಯಸಿದಂತೆ...ಸಕ್ಕರೆ ಡಬ್ಬದ ತುಪ್ಪದ ಇರುವೆ

ಕರೆಯದೆ, ಬಯಸದೆ ಬಂದ ಭಾವ

ಸ್ವಾರ್ಥವಷ್ಟೇ ಕುರುಹಾದ ವಾಸನೆಸಾಸುವೆ ಡಬ್ಬದಲಡಗಿ ಕೂತ ಕಾಸು

ಮುಚ್ಚಿಟ್ಟ ಕಾದಿರಿಸಲ್ಪಟ್ಟ ಭಾವ

ನಾಳೆಗಳ ಕನಸಾದ ಝಣಝಣ...ಮೇಲೆ ಜಂತಿಯ ಆಸ್ತಿ ಕೈವಸ್ತ್ರ,

ಕೊಳಕು, ಚೆಲ್ಲಿದ್ದು, ಉಕ್ಕಿದ್ದು ಒರೆಸಿದ ಭಾವ

ಮೂಲೆಸೇರಿದ ಹತಾಶೆ ಕಪ್ಪುಕಪ್ಪುಬಾಗಿಲ ಹಿಂದಿನ ಮೂಲೆಯ ಕಸಬರಿಗೆ

ಬಿಡದೆ ಹರಡುವ ಕಸವ ಗುಡಿಸುವ ಭಾವ

ಸುಸ್ತು ಅದ ಹೊರಹಾಕಿ ಎತ್ತಿಎತ್ತಿ.ಮಸಾಲೆ ಡಬ್ಬದ ಬಿಗಿಯಾದ ಮುಚ್ಚಳ

ಜತನವಾಗಿಟ್ಟ ಬಲುತೀಕ್ಷ್ಣ ಕಂಪು ಭಾವ

ಹೊರಬಾರದ ಅಮೂಲ್ಯ ಘಮಘಮಎತ್ತರದಿ ಬೋರಲ್ಹಾಕಿದ ತಿಂಡಿ ಡಬ್ಬ,

ಹಸಿವೆ ತಣಿಸಿ ತೃಪ್ತವಾಗುವ ಧನ್ಯತಾಭಾವ

ಕೋರಿಕೆಯಿಲ್ಲದೆ ಇಂದು ಖಾಲಿಖಾಲಿಅರೆ ತುಂಬಿದ ಅಕ್ಕಿ-ಉದ್ದಿನ ಡಬ್ಬ

ಅರ್ಧ ತಣಿದ ಬಾಯಾರಿದ ಘಟ್ಟದ ಭಾವ

ನಿರಾಸೆ ಭರವಸೆಗೆ ಕಾಯುವ ಹಪಹಪಿಒಲೆಮೇಲೆ ಕಾಯಿಸಲಿಟ್ಟ ಎಣ್ಣೆಬಾಣಲಿ

ಕುದಿವ ಒಳಗಲಡಗಿದ ಆರ್ದ್ರಭಾವ

ತಿಂಡಿಗಂಟುವ ಅನಗತ್ಯ ಎಣ್ಣೆ ಪಸೆಪಸೆಅಮ್ಮ ಮಾತ್ರ ಮರೆಮಾಡಿದ್ದೊ, ಬಯಲಾದದ್ದೋ...

ನಾ ಎದುರಾಗಲೆಲ್ಲ..

ಊರುಗೋಲು ಕಿತ್ತೆಸೆದು ನಗುವನಾಧರಿಸಿ,

ನೋವ ವಾತ್ಸಲ್ಯದಡಿಗೊತ್ತಿ ಸ್ವಾಗತಿಸಿ,

ಮತ್ತೆ ಚಿಗಿತು ಅರಳಿದಂತೆ...ಅಡುಗೆ ಮನೆ ಹೇಳಿದ್ದೂ

ಅಮ್ಮ ತೋರಿದ್ದೂ ಹೊಂದಿಕೊಳ್ಳದೆ

ಮತ್ತೆ ಎಂದಿನಂತೆ ಗೊಂದಲ ಹೊತ್ತು

ವಾಪಾಸಾಗುತ್ತೇನೆ ನನ್ನ ಅಸ್ತಿತ್ವಕೆ..

ಮತ್ತದೇ ಅಡುಗೆಮನೆ, ಇರುವೆ ಸಾಲು

ಅದೇ ಡಬ್ಬಗಳು, ಮಸಿಬಟ್ಟೆ.....

ಯೋಚಿಸುತ್ತೇನೆ,

ಕಲಿಯಬೇಕೇ ನಾನೂ ಅಮ್ಮನಂತೆ?

ಬತ್ತಲು ಅಡುಗೆಮನೆಗೆ ನಗೆಯುಡಿಸಿ,

ಖಾಲಿಗಳ ನಗೆಯಲೇ ತುಂಬುವುದನ್ನು.

Tuesday, February 19, 2013

ಅಮ್ಮಾ, ನಿನಗೆ


---------------------

ನಿನಗೆಂದೇ ಎತ್ತಿರಿಸಿದ್ದೆ

ಜತನದಿಂದೊಂದಷ್ಟು ಕ್ಷಣ

ನೀನೆನಗೆ ಈ ಬಾಳಿನುಡುಗೊರೆಯಿತ್ತ ದಿನ.ಹೊತ್ತಷ್ಟೂ ತಿಂಗಳಕಾಲ,

ಗಾಳಿನೀರನ್ನಗಳ ತುತ್ತುಣಿಸಿ,

ದೇಹದೊಂದು ತುಂಡು ನನ್ನ ಪೊರೆದಿದ್ದೆ.ಉಗುಳಲೂ ನುಂಗಲೂ ಆಗದ ಬಿಸಿತುಪ್ಪ

ನಿನ್ನೆಲ್ಲ ಸತ್ವ ಹೀರಿದ ನನ್ನ ಅಸ್ತಿತ್ವ

ನಿನನೊದ್ದುದನೂ ನಕ್ಕು ಸುಖಿಸಿದ್ದೆ.ಶುಭದೆಡೆಗಿತ್ತು ನೋವುಣುತ ನೀ ಕಾದ ಗಳಿಗೆ

ನಗುಹಾಸಿನ ಈ ಬಾಳಹಾದಿಯೇ ಸಾಕ್ಷಿಯದಕೆ

ಆದರೆ,ಹೆಣ್ಣು ಹೆತ್ತ ಸೃಷ್ಟಿಕಾರ್ಯಕಿಲ್ಲ ಹೆಗ್ಗಳಿಕೆ.ಹೆಣ್ಣುಹುಟ್ಟಿದ ಕುವಾರ್ತೆಗೆ ಹಿಮ್ಮೇಳ ನನ್ನ ಅಳು.

ನೀನಷ್ಟೇ ನಕ್ಕದ್ದಲ್ಲಿ, ರಕ್ತವೂ ನಿನದೇ ಹರಿದದ್ದು.

ಅರೆಬಿರಿದ ಕಣ್ಣು ಕೇಳಿದ್ದವಂತೆ, "ಹೇಗಿದೆ ಕಣ್ಣು-ಕೂದಲು?"ಒಳಗೂ ಹೊರಗೂ ನಿನ್ನತನವೆರೆದೇ ಕಾದೆ,

ತಾಳುವ ಶಕ್ತಿಯೆಲ್ಲ ಧಾರೆಯೆರೆದೆರೆದು ಬೆಳೆಸಿದೆ,

ಜಗಕೆ ದೈವ ಸಾಕ್ಷಾತ್ಕಾರದೊಂದು ಸಾಧ್ಯತೆಯಾದೆ.ಆ ದಿನ ನನದಲ್ಲ, ಅಮ್ಮ, ನಿನದು, ನಿನದಷ್ಟೇ..

ನೀ ಸೃಷ್ಟಿಸಿದ್ದು, ನಿನ್ನ ಅಭಿನಂದಿಸಬೇಕು,

ಅಭಿವಂದಿಸಬೇಕು, ಹರಸಬೇಕಾ ಘನಕಾರ್ಯಕೆ.ನೋಡು, ಜಗದಗಲದ ವಾರ್ತೆ- ಹಾರೈಕೆಯಲಿ,

ಕಾಣೆಯಾಯ್ತು ನಿನ್ನ ಹಕ್ಕಿನ ಆ ನಾಲ್ಕಾರು ಕ್ಷಣ...

ಕೇಳಬೇಕಿತ್ತು ನಿನ್ನ.....

"ಅಮ್ಮಾ, ಯಾವ ಹೊತ್ತಲೇ ನೀನನ್ನ ಹೆತ್ತದ್ದು?

ತುಂಬ ನೋಯಿಸಿದೆನೇನೆ, ಕರ್ಕಶವೇ ನಾನತ್ತದ್ದು?

ಕರುಳಬಳ್ಳಿ ಕತ್ತರಿಸೆ ಕಿತ್ತುಕೊಂಡಂತನಿಸಿತೇನೇ?

ಇತ್ತೇನೇ ನನರೂಪ ನೀ ಕನಸಲಿ ಕಂಡಂತೆ?

ಹೀಗೇ ಇನ್ನೇನೇನೋ....ಪ್ರಶ್ನೆಗಳ...

ನಿನನೊಯ್ಯಬೇಕಿತ್ತು ಮತ್ತೆ ಆ ಗರಿಮೆಗೆ,

ಜಗದ ಅತಿ ಎತ್ತರ ನೀ ಮುಟ್ಟಿದ ಹೊನ್ನ ಕ್ಷಣಕೆ.ಇರಲಿ ಬಿಡು, ಕಾಯುವಾ ಇನ್ನೊಂದು ಸಲಕೆ,

ಹತ್ತು ಮತ್ತೆರಡಷ್ಟೇ ಮಾಸ ಮತ್ತಲ್ಲಿ ತಲುಪಲಿಕೆ

ಮೊದಲೆದ್ದು ನೆನೆವಾಗಲೇ ನಿನ್ನ ಕರೆವೆ,

ನಾ ಕೇಳಬೇಕಾದ್ದೆಲ್ಲ ಆಗಲೇ ಕೇಳಿಬಿಡುವೆ.

Monday, February 18, 2013

ರಾಧಾಕೃಷ್ಣರ ಹಿಂದೆ ಮುಂದೆ.

------------------------------
ಕೃಷ್ಣನ ಕೊಳಲಲಿ ರಾಧೆಯುಸಿರೇ ಗಾನ,
ರಾಧೆ ಕಣ್ಣಲಿ ಕೃಷ್ಣನೊಲವೇ ಲೋಕ.
ಜಗಕಿಂದೂ ಈ ಬಂಧವೊಂದು ಸೋಜಿಗ.

ಯಾರೋ ಮೋಹನ ಯಾವ ರಾಧೆಗೋ ಎಂದು
ವಿರಹದುರಿಯ ಬಿಸಿಯಲಿ,
ರಾಧಾಸಮೇತಾ ಕೃಷ್ಣಾ ಎನುತಾ
ಸಮ್ಮಿಲನದ ಸೊಗಸಲಿ
ತಮ್ಮಲೊಂದಾಗಿಸುವ ಲೋಕಕೆ
ರಾಧಾಕೃಷ್ಣರು ಅಲ್ಲಲ್ಲಿ ಅಂತೆಯೇ ಒದಗುತಾರೆ.

ಅತೃಪ್ತ ಹೆಣ್ಣಿನೊಡಲಿನಾಸೆಯ ದ್ಯೋತಕ,
ಪತಿಯಲ್ಲದವನ ಹಿಂದೆ ಜಾರಿದ ಜಾರೆ,
ವ್ಯರ್ಥ ಸುಳ್ಳನ ಬಲೆಹೊಕ್ಕ ಪೆದ್ದು ನೀರೆ,
ಸಿಗದವಗೆ ಜಗವ ನೀವಾಳಿಸೊಗೆದ ಪಾತಕಿ
ರಾಧೆಗೋ ಬಣ್ಣಬಣ್ಣದ ವ್ಯಕ್ತಿ ಚಿತ್ರಣ...

ವಯಸೆನ್ನದೆ ಹೆಣ್ಣ ಸೆಳೆವ, ವರಿಸೆ ಕದ್ದೊಯ್ಯುವ,
ಸಾವಿರಾರು ಮಂದಿಯ ವರಿಸಿ ಮರೆತವ,
ಸೀರೆಕದ್ದವ, ಕೋತಿಸುತೆಯನೂ ಬಿಡದವ,
ರಾಧೆಯನಷ್ಟೇ ವರಿಸದುಳಿದವ, ಹೆಣ್ಣಿಗನವ
ಹೀಗೆ ಕೃಷ್ಣಗೂ ಅಷ್ಟೇ ಬಿರುದು-ಬಾವಲಿ...

ನಮ್ಮೊಳಗಿನ ಕೆಡುಕನವರ ಮಧ್ಯೆ,
ಅವರೊಳಗಿನ ಪಾವಿತ್ರ್ಯತೆಯ ನಮ್ಮಲ್ಲಿ,
ಹುಡುಕಿ ಸಿಗದೆ, ವ್ಯರ್ಥ ಆರೋಪಿಸುವ ನಿರ್ಬಲರೇ,
ಅವರು ನಿರ್ಬಲರಲ್ಲ, ಪ್ರೇಮವೇ ಮತ್ತು ಪ್ರೇಮವಷ್ಟೇ
ಲವಾದ ಸದೃಢ ಮನಸ್ಕರು, ಸರಳ ಮನಗಳು.
ಅವರ ಕಾಡದ ಪ್ರಶ್ನೆಗಳ ನಿಮ್ಮ ಮನದಿ ಹೊರಡಿಸಿ,
ಅವರು ನೋಡದ ಕ್ಲಿಷ್ಟತೆಯ ಅವರೊಳು ಆರೋಪಿಸಿ,
ಅಲಿಲ್ಲದ ಅಶುದ್ಧತೆ, ಅಸ್ಪಷ್ಟತೆಯ ನಿಮ್ಮೊಳಾವಾಹಿಸಿ,
ಅವರ ವಿಮುಖರಾಗಿಸುವುದು ಕನಸಲೂ ಸುಳ್ಳು.
ಅದ ಕಲ್ಪಿಸುವ ವಿಕೃತ ತೃಪ್ತಿಗೆ ಕೈ ಚಾಚದಿರಿ.

ಪ್ರಶ್ನಿಸದಿರಿ, ಆರೋಪಿಸದಿರಿ, ಅವಾಹಿಸಿಕೊಳದಿರಿ,
ಸಾಧ್ಯವಾದರೆ ಅನುಮೋದಿಸಿ, ಮತ್ತು ಅನುಸರಿಸಿ.
ಆಕೆ ಅವನಲೆ ಮೈಮರೆತರೂ, ವ್ರಜವ ಬಿಟ್ಟಿರಲಿಲ್ಲ
ಆತ ಸಂಪರ್ಕ ತೊರೆದೂ, ಪ್ರೇಮ ಅಧೋಮುಖಿಯಾಗಲಿಲ್ಲ.
ಅವರೊಳಗೆ ಅದೆಂದೂ ಊರ್ಧ್ವಮುಖಿಯೇ...

ನನ್ನೊಲವಿನ ಲೋಕವೇ, ನಂಬಿಕೆಯೆಂದೂ ಕೃಶವೇ.
ವಿರಹದ ಕಣ್ಣೀರನೇ ಮೆತ್ತಿಮೆತ್ತಿ ದೃಢ ಪಡಿಸಬೇಕು.
ಸಂಶಯದ ಗಾಳಿಗಾಡಾಡಿ ಮುರಿಯಲೆಳಸಿದಾಗ
ಕಣ್ಮರೆ ಪ್ರೇಮಿಯ ನೆನಪು ಅಂಟಿಸುವ ಗೋಂದಾಗಬೇಕು.
ಅಂಥದ್ದೊಂದು ಮಾತ್ರ ಅವರಂಥದ್ದಾದೀತು...
ಯುಗಗಳೇ ಕಳೆದರೂ ಸೆಳೆವಷ್ಟು ಹಸಿರಾಗಿದ್ದು,
ಕೋಟಿ ಪರವಿರೋಧಗಳಲೂ ಹಾಗೇ ಗೆದ್ದುಳಿದೀತು.

Saturday, February 16, 2013

ಗಾನಯಾನ


---------------

ಏಳು ಸ್ವರದ ಬಟ್ಟಲಲ್ಲಿ,

ನೂರು ರಾಗ ಜನಿಸಿತು..

ನೂರು ರಾಗದೊಡಲಿನಿಂದ

ಅಸಂಖ್ಯ ಭಾವ ಹೊಮ್ಮಿತು..

ಭಾವ ಲಹರಿಯೆಳೆಯ ಹೆಕ್ಕಿ

ಅರ್ಥ ಗೂಡು ಕಟ್ಟಿತು

ಭಾಷೆ ತತ್ತಿಯೊಡೆದು

ಅಕ್ಷರ ರಾಶಿ ಹುಟ್ಟಿತು.

ಸೇರಿ ಒಪ್ಪುವಂಥವೆಲ್ಲ

ಗುಂಪು ಶಬ್ಧವಾಯಿತು..

ಶಬ್ಧ ಸಾಲುಸಾಲುಗಳಿಗೆ,

ಲಯ ನಡಿಗೆಯ ಕಲಿಸಿತು.

ಯತಿ ನಿಲಿಸಿ ಅರ್ಥದೆಡೆಗೆ

ಅವಲೋಕನ ಕೊಡಿಸಿತು.

ಪ್ರಾಸ ಓರೆಕೋರೆ ತಿದ್ದಿ,

ದೃಷ್ಟಿ ಚುಕ್ಕೆಯಿಟ್ಟಿತು.

ಸಿದ್ಧ ಕವಿತೆ ನಾಚಿ ಮೆಲ್ಲ

ಹೊಸಿಲ ದಾಟಿ ಹೊರಟಿತು.

ದನಿ ಹಾಗೇ ಸಾಗುತಿತ್ತು

ಕವಿತೆಯದನು ಸೆಳೆಯಿತು.

ಮಿಲನ ಫಲಿಸಿ ಜನಿತ ಗಾನ,

ಪ್ರಕೃತಿ ನೋಡಿ ಮೆಚ್ಚಿತು.

ಮಡಿಲಲಿರಿಸಿ ಜತನಮಾಡಿ

ಸೂಕ್ತ ನೆಲೆಯ ಹುಡುಕಿತು.

ಗಾನಯಾನ ಶುಭವೇಳೆಗೆ

ಗುರಿಯ ಮುಟ್ಟಿಬಿಟ್ಟಿತು.

ನರನ ಕಂಠ ಮನದ ನಡುವೆ

ಮನೆಯ ಮಾಡಿ ಬಿಟ್ಟಿತು.

ಪ್ರಕೃತಿ ಒಂದು ಸೃಷ್ಟಿಯೊಳಗೆ

ಇನ್ನೊಂದನ್ನಿಟ್ಟಿತು.

ತಾಳಮೇಳ ಬೆರೆತ ಮೋಡಿ

ಜಗಕೇ ವರವಾಯಿತು.Friday, February 15, 2013

ಅರಿಕೆಯಷ್ಟೇ, ಇನ್ನೇನಲ್ಲ..
----------------------
ಇಂದು ನೆನಪಿಸುತಿದೆ,
ಬಣ್ಣಗೆಟ್ಟ ಉಗುರಿಗೆ ಬಣ್ಣಹಚ್ಚಿದ್ದು,
ಮುರಿದ ಕೈಯಳಲಿಗೆ ತಲೆ ಬಾಚಿದ್ದು,
ಬಾಗಗೊಡದ ಬಸಿರಹೊಟ್ಟೆ ಮೀಯಿಸಿದ್ದು,
ಸೌಟು ಮುಟ್ಟದವ ಜ್ವರಕೆ ಗಂಜಿ ಬೇಯಿಸಿದ್ದು
ಹೀಗೇ....
ನಾ ಕೇಳಿದ್ದಕ್ಕಲ್ಲ, ಕೇಳದೆಯೇ ನೀನೊದಗಿದ್ದು..

ಎದುರು ಬದುರು ಕುರ್ಚಿಗಳಲಿ
ನಿಟ್ಟಿಸುತ ತಾಸೆಷ್ಟೋ ಕಳೆದು,
ಹುಣ್ಣಿಮೆಗೂ ಅಮಾವಾಸ್ಯೆಗೂ,
ತಕ್ಕುದಾದ ಹಾಡು ನುಡಿದು,
ಕಣ್ಣ, ಕೈಯ್ಯ ಬೆಸೆದುಕೂತು,
ಹಸಿವೆ-ನಿದ್ರೆ ಮೀರಿ ವೇಳೆ ಸವಿದದ್ದು..

ಅಂದಿನೊಡಲಿಂದಲೇ ಬಂದ ಇಂದು ಅಂತಿಲ್ಲ.
ಕುರ್ಚಿಯೆರಡಿವೆ, ಒಂದನೊಂದು ನೋಡುತಿಲ್ಲ,
ಹಾಡೂ ಸಾಕಷ್ಟಿವೆ, ರಾಗದೊಳಗೆ ಕೂರುತಿಲ್ಲ,
ಕಣ್ಣು ಮಂಜುಮಂಜು, ದೃಷ್ಟಿ ಶುದ್ಧವಿಲ್ಲ,
ಕೈ ಬೆಸೆದರೂ ಗಾಳಿ ತೂರದ ಬಿಗಿತವಿಲ್ಲ,
ಇದ್ದೂ, ಇದಲ್ಲ ಅನಿಸುವ ಯಾವವೂ ಆಪ್ತವಲ್ಲ..

ಇಂದೇನು ಬಂತೋ,
ಅಕಾರ, ಬಣ್ಣ, ದನಿಯಿಲ್ಲದ್ದು
ನನ್ನ ನಿನ್ನ ಪಾಲು ಮಾಡಿದ್ದು,
ಕಳ್ಳನಂತೆ ಸದ್ದಿಲ್ಲದೆ ನಡು ನುಸುಳಿ,
ಇದ್ದುದ ಸೂರೆಗೈದು, ಅಲ್ಲೆಲ್ಲ
ಅಳತೆಗೊದಗದ ದೂರ ತಂದಿಟ್ಟದ್ದು.

ಕಾಲವೇ, ವಯಸೇ, ಭ್ರಮನಿರಸನವೇ,
ಅನುಭವವೇ, ಪಕ್ವತೆಯೇ, ಏಕತಾನತೆಯೇ,
ಪರಸ್ಪರ ಹೊಂದಿ ಒಂದಾದ ಕುರುಹೇ,
ನಂಬಿಕೆಯೇ, ಭರವಸೆಯೇ, ವಿಶ್ವಾಸವೇ..
ಅಥವಾ.....
ನಿಜವಾಗಿಯೂ ನಾವು ದೂರಾಗಿದ್ದೇವೆಯೇ?

ಇಂದೂ ಉಗುರು ಬಣ್ಣಗೆಟ್ಟಿದೆ,
ನೋಡುವರಿಲ್ಲೆಂದು..
ವಯಸಿಗೆ ಶರಣಾಗಿ ಕೈಗಳು,
ಕೂದಲ ತುರುಬು ಕಟ್ಟಲಾರವು..
ಹೊತ್ತ ಹೊಟ್ಟೆಯಲ್ಲ, ಆಧರಿಸುವ ಬೆನ್ನು
ಬಾಗಗೊಡುತಿಲ್ಲ,
ಮಾಡಿದ್ದೇ ಮಾಡಿ, ಬಡಿಸಿ, ತೊಳೆದು
ಜೋಡಿಸಿ, ಅಡುಗೆ ಕೈಲಾಗುತಿಲ್ಲ...
ಅದೇ ಅವಳೇ ನಾನು, ಈಗಲೂ ಕೇಳಲಾರೆ,
ನೀನಾಗಿ ಒದಗಬೇಕು...
ವೇಳೆ ಬಹಳವಿಲ್ಲ, ಈಗ ಸವಿಯಲೇಬೇಕು,
ಮತ್ತದಕೆ ಕಣ್ಣು-ಕೈ ಬೆಸೆಯಲೇಬೇಕು


ಹೀಗೊಂದು ಗಳಿಗೆ.


----------------

ಹಾರಿಬಂದ ಪುಕ್ಕ ಪಕ್ಕ ಕೂತಿತು,

ಬಳಿಸಾರಿತು, ಮೆಲ್ಲ ಮೈಯೇರಿತು,

ನೇವರಿಸಿತು, ಕಚಗುಳಿಯಿಟ್ಟಿತು,

ಮುದ್ದುಮುದ್ದಾಗಿ ಪಿಸುಗುಟ್ಟಿತು..ಹಾರಿಬಂದ ಚಂದಕೋ, ಬಣ್ಣದಂದಕೋ,

ನವಿರು ಸ್ಪರ್ಶಕೋ, ಮುಕ್ತ ಸ್ನೇಹಕೋ,

ಮೈಮರೆಯಿತು, ಮನಸೊಪ್ಪಿತು..

ಕ್ಷಣಗಳಲದು ಪ್ರೀತಿಪಾತ್ರವಾಯಿತು.ನಗುತಿರುವಂತಿತ್ತು, ನಗಿಸಿತು..

ಕಣ್ಣರೆಪ್ಪೆ ಮುಟ್ಟಿತು, ಕಣ್ಣೊರೆಸಿತು..

ತುಟಿ ಬಿಡಿಸಿ, ಮೌನವ ಮಾತಾಗಿಸಿತು..

ಕೆನ್ನೆ ಸವರಿ, ಕುಳಿಯ ಚೆಲುವು ತುಂಬಿತು..ಕೈಯ್ಯಲಿಟ್ಟು ದಿಟ್ಟಿಸಿತು ಕಣ್ಣು,

ಅಲ್ಲೂ ಹನಿ ಕಣ್ಣೀರಿತ್ತು,

ಕಿತ್ತಲ್ಪಟ್ಟ ನೋವಿತ್ತು,

ಒಂಟಿತನದ ಅಳಲಿತ್ತು.ಸ್ವತಂತ್ರವದರ ಬಾಳ್ವೆ,

ಬಂಧನದ ಬಯಕೆ.

ಬಂಧದಲಿ ತೊಳಲುವೆಮಗೆ,

ಸ್ವಾತಂತ್ರ್ಯದ ಆಸೆ.ತೊರೆಯಲ್ಪಟ್ಟದ್ದು,

ಹಾತೊರೆದು ನನ್ನ ಸಂಗ ಸಾರಿತು..

ನೂರು ಸಂಗಗಳ ನಡುವೆ ನನಗೆ,

ಒಂಟಿಪುಕ್ಕ ಆಪ್ತವೆನಿಸಿತು..

ಕವಿತೆಯ ಹುಟ್ಟು.

---------------------
ಎದೆಯತೋಟ, ಹಚ್ಚ ಹಸಿರು,
ಹತ್ತುಹಲವು ಹೂಗಳು..
ಮುಳ್ಳುಮೆದೆಯ ಬೇಲಿಯೊಂದು,
ಚಿಲಕ ಜಡಿದ ಬಾಗಿಲು.

ಹಾರಿ ಬರುವ ಭಾವಭೃಂಗ,
ಗಾಳಿಯವಕೆ ವಾಹನ.
ಹೇಳಿಕೇಳೋ ಪ್ರಶ್ನೆಯಿಲ್ಲ,
ಬೇಲಿ-ಕದದ ಗೋಜಿಲ್ಲ.

ರೆಕ್ಕೆತುಂಬ ಚಿತ್ರನೂರು,
ವೃತ್ತ, ಚೌಕ, ಗೆರೆಗಳು.
ಬಣ್ಣ ಸೇರಿ ಹತ್ತುಹಲವು,
ನೀರೆ ಸೆರಗ ಮರಿಗಳು.

ರೆಕ್ಕೆ ಬಡಿದು ಮೂಡಿ ಶಬ್ಢ,
ಮಂದಗಾನವಾಗಿದೆ,
ಬಣ್ಣದಷ್ಟೇ ರಾಗಗಳಿವೆ,
ಹೃದಯ ಲಯಕೆ ಒದಗಿದೆ.

ಕೋಪಮುನಿಸು, ತಾಪವಿರಹ,
ಒಮ್ಮೆ ತೀಕ್ಷ್ಣರೂಪದಿ,
ರೋಷಸಿಟ್ಟು, ಕೆಚ್ಚುರೊಚ್ಚು,
ಒಮ್ಮೆ ಪಶ್ಚಾತ್ತಾಪದಿ..

ಪ್ರೇಮಕಾಮ, ಸ್ನೇಹಮೋಹ,
ಒಮ್ಮೆ ನಿರ್ವಿಕಾರದಿ,
ಅಚ್ಚುಮೆಚ್ಚೋ, ಬರೀ ಹುಚ್ಚೋ,
ಮತ್ತೆ ಅಧಿಕಾರದಿ.

ಶುದ್ಧಭಕ್ತಿ ಆರಾಧನೆ,
ಮುಕ್ತಿಯಾಸೆ ಜಾಡಲಿ,
ನಂಬಿಕೆಟ್ಟ ಮೇಲೆ ಎಲ್ಲ
ಕೊಚ್ಚಿಹೋದ ನೋವಲಿ..

ಹೊಂದಿದ್ದೆಲ್ಲ ಶೂನ್ಯವೆಂಬೋ
ವೈರಾಗ್ಯದ ರಾಗದಿ,
ಕೊಡವಿ ಕಿತ್ತುಹಾಕುವಂಥ
ಸರ್ವಸಂಗತ್ಯಾಗದಿ..

ಇಂಥ ಮಿಶ್ರಬಣ್ಣದೆರಕ
ಹೊಯ್ದ ರೆಕ್ಕೆ ಹಾಡಲಿ,
ನೋವ ರಾಗ ಬಲುಗಾಢ,
ಸುಖದ ಛಾಯೆ ಚಂಚಲೆ.

ಹೂವ ಹೀರಿ ಹಾರಿಕುಣಿದು
ಭಾವಭೃಂಗ ಕಟ್ಟಿ ಗೂಡ
ಮೊಟ್ಟೆಯಿಟ್ಟು ಕೊಟ್ಟು ಶಾಖ,
ಹುಟ್ಟಿ ಕವಿತೆ ಎದ್ದಿತು..

Wednesday, February 13, 2013

ತಿರುವ ಬಯಸಿದ ಅಂತ್ಯ


--------------------

ಸಾವಿನರಮನೆಯ ಹೊಸಿಲಲಿ ರಾಜಕುಮಾರಿ,
ಅಸೌಖ್ಯವೆಳೆತಂದಿತ್ತು ಬಿಡುಗಡೆಯ ಸ್ವರ್ಗದಂಚಿಗೆ.

ಕಾದಿದೆ ಬೇಕಾದ್ದ ತಿನುವ, ಕಹಿಮದ್ದುಗುಳುವ,
ನೋವ ಸೋಲಿಸುವ ಸ್ವತಂತ್ರ ಅರಸೊತ್ತಿಗೆ.

ನಗುತ ಬಲಗಾಲೆತ್ತಿ ಒಳಗಡಿಯಿಡಲಾಶಿಸುತಾ,
ಮೈಮನದ ಅಳಲಿಗೆ ತಿಲಾಂಜಲಿಯರ್ಪಿಸುತಾಳೆ.

ನಗೆಕಣ್ಣನೊಮ್ಮೆ ಹಿಂದೆ ಹೊರಳಿಸಿದೆ ಕೊನೆಯಾಸೆ

ಅದೋ.. ಕಾದಿದ್ದ ಪ್ರೇಮ ಕಣ್ತುಂಬಿ ಕೈಚಾಚಿ ಕರೆಯುತಿದೆ..

ಎಲ್ಲಿದ್ದೆ ಇಷ್ಟುದಿನ, ನಾನಿರದೆ ಹೇಗಿದ್ದೆ...
ನೂರು ಪ್ರಶ್ನೆಯೆಳೆ ಹಿಡಿದು ಕಾಲಿತ್ತ ಎಳೆಯುತಾಳೆ.

ಮೌನದ ನೂರುಮಾತುಗಳ ಅರ್ಥೈಸಿಕೊಳುತಾ,
ಬತ್ತಲೆ ನಿರುತ್ತರಕೆ ಕ್ಷಮೆಯುಡುಗೆ ಕೊಡುತಾಳೆ.

ಈಗಾಕೆಗೆ ಅರಮನೆಯೂ ಬೇಕಿಲ್ಲ, ಸ್ವಾತಂತ್ರ್ಯವೂ..
ನೋವಿಗೂ, ಪಥ್ಯಕೂ, ಮದ್ದಿಗೆಲ್ಲಕೂ ಸೈ ಅನ್ನುತಾಳೆ.

ಭಾರಕೆ ಕಣ್ಣೆವೆ ಮುಚ್ಚುತಿವೆ, ಆಕೆ ಬಿಡಿಸುತಾಳೆ,
ಅರೆ ಉಸಿರು ಹೊರಗುಳಿದುದ, ಒಳಗೆಳೆಯುತಾಳೆ.

ಮುಗಿದು ಬತ್ತಿಯೂ ಎಣ್ಣೆಯೂ ದೀಪವಾರುತಿದೆ,
ಕಂಡವರ, ಕಾಣದವರ ಎಣ್ಣೆ-ಬತ್ತಿಗೆ ಬೇಡುತಾಳೆ.

ಸಾವ ಯಾಚಕಿಯಾಗಿದ್ದವಳು ಕ್ಷಣದ ಹಿಂದೆ,
ಅದೇ ವಿಧಿಯಲಿಂದು ಕೆಲಕ್ಷಣಗಳ ಬೇಡುತಾಳೆ.

ವರವೋ, ಶಾಪವೋ- ಬಿಲ್ಲುಬಿಟ್ಟು ಹೊರಟ ಬಾಣ,
ತಲುಪಲವಳ ಧಾವಿಸಿದೆ ಸಾವು, ಅವಳೋಡುತಾಳೆ.

ಕಾಲ ಹಾಡಿದೆ ಬಾಳಗಾನದ ಕೊನೆಯ ಚರಣ,
ತಾನೇ ಶ್ರುತಿಯಾಗಿದ್ದಳು, ಈಗ ಕಿವಿಮುಚ್ಚುತಾಳೆ.

ಮುದ್ದಿಸಿ ಆಮಿಷವೊಡ್ಡಿ ಕೈಹಿಡಿದೊಯ್ಯುತಿದೆ ಸಾವು,
ವ್ಯರ್ಥ ಕೈಕಾಲು ಬಡಿದು ಕೂಸಂತೆ ಬರೆನೆನುತಾಳೆ.

ಅಸಹಾಯಕತೆ ಕೈಚೆಲ್ಲಿ ಬಸವಳಿದು ಕೂತಿದೆ,
ಪ್ರೇಮವದರೊಳು ಬಂಧಿ ನಿಂತಲ್ಲೇ ನಿಂತಿದೆ...

ಇಷ್ಟೆಲ್ಲಾ ಬೇಕೇ?

--------------------

ಪರಿಚಯ ಸಂಪರ್ಕದ ಮೂಲ,
ಸಂಪರ್ಕ ಸಂಬಂಧಕೆ..ಇದುವರೆಗೆ,
ಹರಿದಷ್ಟೇ ಸಲೀಸು ನೀರು ತಗ್ಗಿಗೆ.

ಸಂಬಂಧ ಅನುಬಂಧವಾಗುವೆಡೆ
ಎಚ್ಚರಿರಬೇಕು, ನಿಧಾನಿಸಬೇಕು..
ಹರಿಯುವಿಕೆಗಲ್ಲಲ್ಲಿ ನಿರ್ಬಂಧ ಬೇಕು.

ಅನುಬಂಧವದಷ್ಟೇ ಅಲ್ಲ, ಶಾಪವದಕೊಂದು
ಹಿಂದೆ ನೋವು, ನಿರಾಸೆಗಳ ಒಡಹುಟ್ಟು.
ಸಿಹಿಕಹಿಗಳಲಲ್ಲಿ ಕಹಿಯ ತೂಕವೆ ಮೇಲು.

ಮದ್ದು ಜಡ್ಡುಜೀವ ತಡೆದುಣ್ಣುವಂತೆ,
ನಾಳೆಗೀ ಕ್ಷಣವ ಬಲಿಕೊಡಲೇಬೇಕು..
ಕಳಕೊಳುವ ಛಾತಿಗಷ್ಟೇ ಸಾಧ್ಯ ಈ ಹೆಜ್ಜೆ.

ಸಂಖ್ಯೆಯಲ್ಲ, ಉಳಿವೇ ಬಲ ಅನುಬಂಧಕೆ,
ಕೆಸರಲುಳಿವಂತೆ ಕಮಲ ಬೇಸರಿಸದೆ,
ಬಂಧ ಕಾಯಬೇಕು ಪರಿಗೆ ದಿಗಿಲಾಗದೆ.

ಗಳಿಕೆ ಹಿರಿದಲ್ಲ, ಉಳಿಸಿಕೊಳುವುದು..
ಕಳವಳವ ದಾಟಿಯಷ್ಟೇ ಭದ್ರನೆಲೆ ಇಹುದು.
ದಾಟುವ ಕಾಲಿಗಷ್ಟೇ ಸೂಕ್ತ ಈ ಸವಾಲು.

ಉದುರುವುದಕೇ ಎಳಸುವಂತೆ ಹಣ್ಣೆಲೆ
ಪಕ್ವವಾಗುತ ತೊಟ್ಟು ಬಲಹೀನವಂತೆ,
ಕಳಚುವುದ ಬಲಗೊಳಿಸೆ ಬೇಕು ಬಲುತಾಳ್ಮೆ .

Tuesday, February 12, 2013


(ಬದರಿನಾಥ ಪಳವಳ್ಳಿಯವರ ಜೋಕಾಲಿ ಆ ಲಹರಿಯ ನನ್ನ ಬಾಲ್ಯದ ನೆನಪುಗಳನ್ನೂ ಬಡಿದೆಬ್ಬಿಸಿತು. ಇನ್ನೂ ಸರಣಿ ಮುಂದುವರೀತಾ ಇದೆ..
ಇಷ್ಟರವರೆಗಿನವು ಅಕ್ಷರವಾದವು, ಇನ್ನುಳಿದವು ನನ್ನ ತೂಗುವ ಉಯ್ಯಾಲೆಯಾಗುತ್ತಾವೆ..)
----------------------------------------------------
ಇಂದ್ಯಾಕೋ ನಿನ್ನ ನೆನಪು..
---------------

ನಿನ್ನೆ ಮೊನ್ನೆಯಂತಿದೆ ಆ ದಿನ..
ನೀ ಮೊದಲ ಬಾರಿ
ನನ್ನ ಚಂದ ಅಂದ ದಿನ...

ಹಳ್ಳಿಮನೆ, ಮೊದಲಸೊಸೆ,
ಮೈಮುರಿವ ಕೆಲಸದೆಡೆ,
ಹರಿದ ಕಪ್ಪು ಸೀರೆಯಲಮ್ಮ
ಹೊಲಿದ ಚೂಡಿದಾರ ನಾ ತೊಟ್ಟಾಗ
ನೀ ಕರಡಿಯೆಂದದ್ದು ನಾನತ್ತದ್ದು..

ನವರಾತ್ರಿ ಉತ್ಸವದಿ ಮೊದಲಸಲ
ವೇದಿಕೆಯೇರಿ ಹಾಡಿದಾಗ,
ಎತ್ತರಿಸಿದ ದನಿ ಕೈಕೊಟ್ಟದ್ದು,
ಹತ್ತಾರು ಚಪ್ಪಳೆಗಳ ಮಧ್ಯೆಯೂ
ನಿನ್ನ "ಕಿಸಕ್ಕ್" ಕೇಳಿಸಿದ್ದು, ನಾನತ್ತದ್ದು.

ಮನೆಯ ಮೊದಲ ಹೆಣ್ಮಗು ನಾ
ಮೈನೆರೆದಾಗ ಊರಿಗೂಟ ಹಾಕಿಸಿದ್ದು,
ಮೂಲೆಯಲಿ ಒಂಟಿಯಾಗಳುವ ನನ್ನ
ಕ್ಷುದ್ರಪ್ರಾಣಿಯಂತೆ ನೋಡಿ ಸಾಗಿದ್ದು..
ಮುಸುಮುಸು ಅಳು ತಾರಕಕೇರಿದ್ದು..

ಬೇಲಿಯ ದಪ್ಪಕಳ್ಳಿಯೆಲೆಯಲಿ,
ರಂಗುರಂಗಾದ ಕತೆ ಕೆತ್ತಿ,
ನನ್ನ ಹೆಸರ ಮೂಡಿಸಿದ ಪಾಪಿಗಳು
ಊರೆಲ್ಲ ಗುಲ್ಲು, ನಡುಗುತಿದ್ದ ನನ್ನ
ಪರಕೀಯಳಂತೆ ನೋಡಿದ್ದು, ನಾನತ್ತದ್ದು..

ಊರಕಣ್ಮಣಿಯ ಮದುವೆ,
ಮನೆಮುಂದೆ ಚಪ್ಪರದ ಭರಾಟೆಯಲಿ
ಗಂಟು ಹಾಕುತ ನೀ ಕಾಲ್ಜಾರಿ ಬಿದ್ದಾಗ
ನಾ ನಕ್ಕೆ, ನೀ ಮೊದಲೆಂಬಂತೆ ನಿಟ್ಟಿಸಿ,
"ಮದುಮಗಳೇ ನೀನೆಷ್ಟು ಚಂದ" ಅಂದದ್ದು....

ಮತ್ತೆ ನಡೆದ ದಾರಿಯಲೆಂದೂ
ನೀ ಅಳಿಸಿರಲೇ ಇಲ್ಲ ನೋಡು..
ಇಂದ್ಯಾಕೋ ಮಗಳು ಆ ಹುಡುಗನತ್ತ
ಕೈ ತೋರಿ ಮೂತಿಯುಬ್ಬಿಸಿದಾಗ,
ಬೊಗಸೆಕಣ್ಣು ಮೆಲ್ಲ ನೀರಾದಾಗ
ಮತ್ತೆ ನೆನಪು ಕಣ್ಣ ಕೊಳವಾಗಿಸಿದೆ...Monday, February 11, 2013

ನೀನೇ ನೀನೇ...ಬರೀ ನೀನೇ..


--------------

ಹೀಗಿರಬಹುದೇ ಸ್ವರ್ಗದ ವಸಂತ?ನಿನ್ನಾಗಮನ, ನಿನದೊಂದು ನೋಟ,

ಅದರಲ್ಲಿ ತುಂಬಿದ ಪ್ರೀತಿಯ ಮಾಟ

ನಾ ಕಾದು ಬಂದ ಕ್ಷಣವ ತುಂಬಿದ ನೀನು,

ನಿನ್ನ ನಗುಮೊಗದ ಚಿತ್ರ...ನಿನ್ನ ಕರೆ, ನುಡಿಯ ದನಿಯಾದ ಒಲವು,

ಅದರಲ್ಲಿ ತುಂಬಿದ ನೈಜತೆಯ ಚೆಲುವು

ನಾ ಕೇಳಿದ್ದು ನೀ ಹೇಳಿದ್ದು ಸವಿಸವಿಜೇನು,

ಎದೆಹಕ್ಕಿಯ ಚಿಲಿಪಿಲಿ ಗಾನ...ನಿನ್ನ ಸಂದೇಶ, ಸಾರವಾದ ಪ್ರೇಮ,

ಅದರಲ್ಲಿ ತುಂಬಿದ ಸಮೃದ್ಧಿ ಅಸೀಮ,

ನಾ ಓದಿ, ಅರ್ಥೈಸಿದ್ದು-ನಿನಗೆ ನಾ, ನನಗೆ ನೀನು,

ಅಕ್ಷರವಲ್ಲದ ಭಾಷೆಯ ಮಾತು....ನಿನ್ನೆದೆಯೊಳಗೆ ನಾನಿಣುಕಿದಾಗ,

ಸಂಶಯವ ಕಣ್ಣೀರು ತೊಳೆದು,

ದೃಷ್ಟಿಯ ಸತ್ಯ ಹಸನಾಗಿಸಿ,

ನಂಬಿಕೆಯ ದೇವಬೆಳೆ ಬಿತ್ತಿ,

ತಾಳ್ಮೆ ಹರಿಸಿ ಪೋಷಿಸಿ,

ನಳನಳಿಸುವ ಬಾಳನಂದನವೀಗ


ಒಳಹೊರಗೆಲ್ಲ ಬರೀ ಹಸಿರು..


ಹೀಗಿರಬಹುದೇ ಸ್ವರ್ಗದ ವಸಂತ?

Saturday, February 9, 2013

ಗಲ್ಲುಗಂಭದ ಸುತ್ತ ಕನಸು


---------------------

ಅಂದೊಂದು ಗಲ್ಲು ಇಂದೂ ಒಂದು,

ಹಿಂದೆಷ್ಟೋ...ಮುಂದೆಷ್ಟೋ...ಒಂದು ಸಾವಸರಣಿಯ ಆ ತುದಿಯಲೂ ಅವನೆ

ಈ ತುದಿಯಲೂ ಅವನೇ...

ಅಲ್ಲಿ ಸತ್ತವರಾರೋ, ಇಲ್ಲವನೇ ಸತ್ತ.ಅಪರಾಧಿ ಸತ್ತು ಅಪರಾಧವುಳಿದರೆ,

ಈ ಗಲ್ಲು ಕೊಲೆಗಳ ಕೊನೆಯಾದೀತೇ?

ಸಾಯಿಸಬೇಕಾದ್ದು ಜೊತೆಗಿನ್ನೇನೂ ಇಲ್ಲವೇ?ಮತ್ಸರವ ಬಿತ್ತಿ ಬೆಳೆಸಲು ಗೆಲುವು ಫಲಿಸೀತೇ?.

ಗೆಲುವನಷ್ಟೇ ಬೆನ್ನತ್ತಿ ಅಂತಃಸತ್ವ ಬೆಳಗೀತೇ?

ಅಂತಃಸತ್ವ ಮರೆಮಾಡೋ ಮೌಢ್ಯಕಲ್ಲವೆ ಬೇಕು ಗಲ್ಲು?ಸುಳ್ಳಿನತ್ತ ನಡೆಸುವವ ಗುರುವಾದಾನೇ?

ಗುರುವಿರದೆ ವಿಶ್ವಬಾಂಧವ್ಯದ ಗುರಿಸಾಧನೆಯೇ?

ವಿಶ್ವಬಂಧುತ್ವ ಕೊಲುವ ಪ್ರತ್ಯೇಕತಾವಾದಕಲ್ಲವೆ ಬೇಕು ಗಲ್ಲು?ಧರ್ಮವ ಜಾತಿಮತವಾಗಿಸಿದ್ದು ಸಂಪ್ರದಾಯವೇ?

ಸಂಪ್ರದಾಯದ ಹೆಸರಲಿ ವಿಭಜನೆ ತರವೇ?

ವಿಭಜಿಸಿ ಬಲಗೆಡಿಸುವ ಮತಾಂಧತೆಗಲ್ಲವೆ ಬೇಕು ಗಲ್ಲು?ಮುಂದಿದ್ದು ತಪ್ಪುದಾರಿಗೊಯ್ಯುವವ ನಾಯಕನೇ?

ಬೇಳೆಬೇಯಿಸಲು ಸೌಹಾರ್ದವ ಉರಿಸುವುದೇ?

ಉದ್ಧಾರದ ಹೆಸರಲಿ ವಿನಾಶಕೊಯ್ಯುವಗಲ್ಲವೇ ಬೇಕು ಗಲ್ಲು?ಅಷ್ಟು ಸಾವಿಗೊಂದು ಮರಣದಂಡನೆಯೇ?

ಗಲ್ಲು ಉತ್ತರವೂ ಅಲ್ಲ, ಉಪಾಯವೂ...

ಸಾಯಿಸಬೇಕಾದು ಬೇರೆಯಿದೆ, ಬೆಳೆಯುತಿದೆ,

ಬೇರೂರುತಿದೆ, ಬೇರ್ಪಡಿಸುತಿದೆ, ಬಲವಾಗುತಿದೆ.ಮನುಜಗೆ ಮನುಜನೆ ಬಂಧು, ಜಾತಿ-ಮತವಲ್ಲ..

ನೆಲವೊಂದೆ, ಜಲವೊಂದೆ ನಾವೆಲ್ಲರೊಂದೇ

ಈ ನಿಲುವಿನಡಿಪಾಯದ ನ್ಯಾಯಾಲಯದೊಳಗೆ,

ಗಲ್ಲುಗಂಭಕೆ ಮರಣತೀರ್ಪೆಂಬ ಕನಸು ನನದೀಗ...ನೆಲದಲಿದ್ದ ಧೂಳ ಕಣ ಗಾಳಿ ಕೈವಶ


ಏರಿತ್ತು ದೇಗುಲದ ಕಳಶ.

ಎಲ್ಲ ನಿಟ್ಟಿಸಿದ್ದು ತನನೇ ಎನಿಸಿ,

ತಾ ಬಲು ಘನವೆನಿಸಿ,

ನಿಮ್ನದೃಷ್ಟಿಗೊದಗಿದ ನೆಲವಾಸಿಗಳೆಲ್ಲ

ಈಗ ಬಲು ತೃಣವೆನಿಸಿ,.....

ತುದಿ ಚೂಪು ಚುಚ್ಚಿತೆನಿಸಿ,

ಕಳಶವೂ ಸರಿಯಿಲ್ಲೆನಿಸಿ,

ಮೆರೆವಾಗ ಮರೆತಿತ್ತು...

ಗಾಳಿಗೆ ಕೆಳಗಿಳಿಸುವುದೂ ಗೊತ್ತು.

ಹಾಗೆ ಕೆಳಗಿಳಿದೊಂದು ಕ್ಷಣ,

ಕಳಶವೂ ಕೆಳಗಿಳಿವುದ ಎದುರುನೋಡಿ,

ಕಣ್ಣು ಚುಚ್ಚಲು ಕಾದಿತ್ತು...

Thursday, February 7, 2013

ನಾವೇಕೆ ಹೀಗೆ?


--------------------

ಇರುವೆಗಳಂತೇಕೆ ನಾವಿಲ್ಲ?

ನೋಡಲ್ಲಿ....

ಗುರುತಿಲ್ಲ, ಕಾರ್ಯಕಾರಣವಿಲ್ಲ,

ಉದ್ದೇಶವಿಲ್ಲ, ಪ್ರಯೋಜನದರಿವಿಲ್ಲ,

ಎದುರಾದ ಇನ್ನೊಂದಕೆ ಭಾವಸ್ಪರ್ಶದ ಮುತ್ತಿತ್ತು,

ಅದೆಲ್ಲಿಗೋ ಇದೆಲ್ಲಿಗೋ ಮರುಗಳಿಗೆಗೆ.


  ಹಕ್ಕಿಗಳಂತೇಕೆ ನಾವಿಲ್ಲ?

ನೋಡಲ್ಲಿ.....

ಗೂಡುಕಟ್ಟಿ, ಮೊಟ್ಟೆಯಿಟ್ಟು, ಕಾಪಾಡಿ,

ಕಾವಿತ್ತು, ಮರಿಮಾಡಿ, ಗುಟುಕಿತ್ತು,

ಹಾರಾಟ ಕಲಿಸಾಟ.. ಕರ್ತವ್ಯವೆಂದಷ್ಟೇ ಮಾಡಿದ್ದು.

ಮರುದಿನವೆ ಮರಿ ಹೊರಗೆ, ತಾಯೊಳಗೆ.


ಮರದಂತೇಕೆ ನಾವಿಲ್ಲ?

ನೋಡಲ್ಲಿ...

ಬಿತ್ತಿದವರಾರೋ, ನೀರುಣಿಸಿದ್ದು ಯಾರೋ,

ಋಣಸಂದಾಯದ, ಬೆಲೆಕಟ್ಟುವ ಗೋಜಿಲ್ಲ

ಗಾಳಿನೆರಳು ಹೂಹಣ್ಣಿತ್ತು ಒದಗುವುದಷ್ಟೇ ಗೊತ್ತು,


ಉರುವಲು ಕಡಿದವಗೆ, ಉರಿದು ಬೂದಿ ಪೊರೆದ ನೆಲಕೆ.


ಸಿಗುವುದರ, ಉಳಿವುದರ ಲೆಕ್ಕಾಚಾರ ನಮಗಷ್ಟೇ...

ಬಾಳಯಾನದ ಹೆಜ್ಜೆಹೆಜ್ಜೆಗೂ,

ಭಾವಸಿಂಚನದ ಹನಿಹನಿಗೂ,

ಸ್ನೇಹಕೂ, ಪ್ರೇಮಕೂ, ಅನುಬಂಧಕೂ,

ಸ್ಪಂದನೆಗೂ, ಅಭಿನಂದನೆ-ಅಭಿವಂದನೆಗೂ..

ಶುರುವಿಗೇ ಕೊನೆಯ ಅಂದಾಜಿಸುವ ಲೆಕ್ಕ.


  ನಿರೀಕ್ಷೆ, ಪರೀಕ್ಷೆ, ಪ್ರತಿಫಲಾಪೇಕ್ಷೆಯ ಕೂಡಿಕಳೆದು

ಸಂಶಯ ಭೀತಿಗಳ, ವಕ್ರಚಿಂತನೆಗಳ ಗುಣಿಸಿ

ನಂಬಿಕೆ ವಿಶ್ವಾಸವ ಅಹಂಕಾರದಿಂದ ಭಾಗಿಸಿ

ಕೊನೆಗುಳಿವುದು ಕಂಗೆಡಿಸುವ ಖಾಲಿತನವಷ್ಟೇ.
ಒಳನೋಟ


--------------------

ಹಕ್ಕಿ ನಾನಲ್ಲವೆಂದು ಅರಿವಾದ ಕ್ಷಣವೇ,

ರೆಕ್ಕೆಯಿಲ್ಲವೆಂಬ ಅಳಲು ದೂರಾಗಿ,

ನೆಲಕೂರಿದ ಕಾಲೆಡೆಗಿನ ದೃಷ್ಟಿ ಬದಲಾಗಿ,

ನಡಿಗೆ ಹಾರಾಟದ ಪ್ರತಿಬಿಂಬವೆನಿಸಿತು.ಒಲವು ಜಡವಲ್ಲ ಎಂದರಿವಾದ ಕ್ಷಣವೇ,

ಉಳಿಸಿ ಬೆಳೆಸಿ ಕೊಟ್ಟುಪಡೆವ ಭ್ರಮೆಯಳಿದು

ಒಳತಿರುಗಿದ ದೃಷ್ಟಿಯಲ್ಲೇ ದೃಢವಾಗಿ,

ಭಾವಮಥಿಸಿದ ನವನೀತವೇ ಪ್ರೇಮವೆನಿಸಿತು.ಗುರಿಸಾಧನೆಯೆ ಹಿರಿದಲ್ಲವೆನಿಸಿದ ಕ್ಷಣವೇ,

ಓಡಿ ಮುಟ್ಟಿ ವಶವಾಗಿಸುವ ಧಾವಂತವಳಿದು,

ಯತ್ನದ ಹಾದಿ ಹಿಡಿದ ಹೆಜ್ಜೆ ನಿರಾಳವಾಗಿ,

ಕ್ಷಣದ ತಪಕೆ ಮುಂದಿನ ಕ್ಷಣವೇ ವರವೆನಿಸಿತು.ನೋವು-ನಲಿವು ಸ್ಥಿರವಲ್ಲವೆನಿಸಿದ ಕ್ಷಣವೇ,

ನಕ್ಕಳುತ ಏರಿಬೀಳುವ ಜಾಯಮಾನವಳಿದು,

ಬಂದದ್ದೆಲ್ಲ ಬರಲೆಂದು ಮನ ಸಜ್ಜಾಗಿ,

ನಿರ್ಲಿಪ್ತತೆ ತೋರಣವಾದ ಪರಿ ಪಕ್ವವೆನಿಸಿತು.ಗುರುವೂ ಅರಿವೂ ಹೊರಗಿಲ್ಲ,  ಎಲ್ಲಾ ಒಳಗೇ.

ಗಳಿಗೆಗಳಿಗೆಗು ಕಲಿಯಲೆಷ್ಟೋ ಪಾಠಗಳು...

ಪೂರ್ವತಯಾರಿ ಬೇಕಿರದ ಪರೀಕ್ಷೆಗಳು....

ಒಳಗಿನ ಪ್ರಶ್ನೆಗೆ ಒಳಗೇ ಉತ್ತರ...ಆಪ್ತವೆನಿಸಿತು.

Wednesday, February 6, 2013

ನಿನಗೆನ್ನ ಬಿಟ್ಟರುಂಟೇ....


-------------------

ಇನ್ನೆಷ್ಟು ಭಾರವೋ ಕಂದಾ.....

ಹೊತ್ತು ಸುಸ್ತಾಗದೇ?

ಯುಗಗಳಿಂದ ಭರಿಸುತಿರುವೆ,

ಅದೇ ಬೇಜಾರೆನಿಸದೇ?ಕಳ್ಳನೆಂದರು, ಸುಳ್ಳನೆಂದರು,

ಕಪಟಿ-ಸ್ತ್ರೀಲೋಲನೆಂದರು,

ಸ್ವಜನ-ಪಕ್ಷಪಾತಿಯೆಂದರು,

ನಕ್ಕೆಲ್ಲಕೂ ಸರಿಯೆನುವೆಯಲ್ಲಾ,

ತಕ್ಕ ಉತ್ತರವಿಲ್ಲದಿಹುದೇ?ಪುಟ್ಟಗುಡಿಯಲಿ ಮುಟ್ಟದಿರಿಸಿ,

ಕೊಟ್ಟದ್ದ ಬಿಟ್ಟು ಕೆಟ್ಟದ್ದೇ ಕೇಳಿ,

ಏಳುಬೀಳಲಿ ನೀ ಹಿಡಿದೆತ್ತುವುದ

ನಿನ್ನಾಟಕೆ ದಾಳವಾಗಿಸಿದ್ದೆನುವರು.

ಕೊಟ್ಟು, ಎತ್ತಿ, ಸಾಕಾಗದೇ?ಸಿಕ್ಕನೆನುತ ಒಳಗಿರುವನ ಹೊರಗರಸಿ,

ಉಸಿರುಸಿರಲಿಹ ನಿನ್ನ ಒಪ್ಪಿ ಅಪ್ಪರು.

ಎತ್ತಿ ಒಮ್ಮೊಮ್ಮೆ, ಕುಕ್ಕಿ ಒಮ್ಮೊಮ್ಮೆ,

ಭಾವದಲೆಯಲಿ ನಿನ್ನ ಚೆಂಡಾಗಿಸುವರು.

ಹೀಗೂ ಒದಗುವುದುಂಟೇ?!ಬಿಟ್ಟುಬಿಡೆಲ್ಲ, ಕಾದಿದೆ ಮಡಿಲು ಹರಡಿ

ಕಣ್ಮುಚ್ಚಿ ಮಲಗೊಮ್ಮೆ ಹಾಡುವೆ ಲಾಲಿ

ನಿದ್ದೆಯಲಿ ನಿನ್ನಳುನಗುವ ನೋಡಬೇಕು,

ಮಗು ನೀನೆನಗೆ, ಮಕ್ಕಳಾಟಿಕೆಯೆ ಸಾಕು.

ಅವರೊಪ್ಪುವ ಕಳ್ಳಸುಳ್ಳಮಳ್ಳನೇ

ಅವರ ಕಾಯಲಿ ಬಿಡು,

ಕ್ಷಣಕಾಲ ವಿರಮಿಸೋ,

ನನ್ನ ಬಿಟ್ಟರೆ ನಿನ್ನ ಕೇಳುವವರುಂಟೇ?!

ನಿರುತ್ತರನವನಲ್ಲ...


------------------

ಗಾಳಿಬೀಸುವ ಶಬ್ಧವೂ ಮರೆ,

ಸ್ತಬ್ಧ ಜಗದೆಲ್ಲ ಚಲನವಲನ ..

ಕೂಗು, ಕರೆ, ಸಾರುವಿಕೆಯಿಲ್ಲ,

ಬ್ರಹ್ಮಾಂಡ ಹೊದ್ದಿದೆ ಮೌನ.ಉಸಿರಾಟವೂ ನಿಂತಂತೆ,

ಪ್ರಾಣವಷ್ಟೇ ಒಳಗುಳಿದಂತೆ..

ಗಂಟೆ ಮುಳ್ಳೂ ದನಿಯುಡುಗಿ,

ಸಮಯವಷ್ಟೆ ನಿಶ್ಯಬ್ಧ ನಡೆದಂತೆ..ಸಾಗರವೂ ಮೊರೆತ ನಿಲ್ಲಿಸಿ,

ಅಲೆ ಸದ್ದಿಲ್ಲದಾಡುವ ಪೋರನಂತೆ...

ನೋವು-ನಲಿವುಗಳು ಜೋಮುಗಟ್ಟಿ

ಮೈಮನ ಸ್ಪರ್ಶಹೀನವಾದಂತೆ..ಜೀವನಾಡಿ ನುಡಿಸೊತ್ತು ಕಳವಾಗಿ,

ಅರ್ಥಾನರ್ಥಗಳು ಅಡಗಿಕೂತಂತೆ.

ಹಕ್ಕಿರೆಕ್ಕೆಬಡಿತವೂ ಬಾಯ್ಮುಚ್ಚಿ,

ಜಗದ ಶಬ್ಧನಿಧಿ ಕಳೆದುಹೋದಂತೆ.ದೇವನುತ್ತರಿಸುವ ವೇಳೆ ಹೀಗಿರುವುದು

ಮುಚ್ಚಿ ಒಂದು, ಇನ್ನೊಂದು ತೆರೆವುದು

ಕಿವಿ-ಕಣ್ಣಿಗಲ್ಲ, ಅದೊಂದು ಭಾಸವಷ್ಟೇ.

ಅದೃಶ್ಯ ಭಾವಸೇತು ಅಲ್ಲಿಂದ ಆತ್ಮಕಷ್ಟೇ..ನಿಜ, ಮೌನ ಕಗ್ಗಂಟು, ಸಿಕ್ಕು, ಅಸ್ಪಷ್ಟ.

ಇದ್ದುದು-ಇಲ್ಲದ್ದು ಹೊತ್ತ ಬರೀ ಗೊಂದಲ..

ಒಳಹೊಕ್ಕಿ ತಾಳ್ಮೆಬಳಸಿ ತಡೆತರಿದು

ಗುಪ್ತನಿಧಿ ಆ ಉತ್ತರದ ಬಳಿಸಾರಬೇಕು.ನಿರುತ್ತರನವನಲ್ಲ, ನಾವು ಕೇಳಿಸಿಕೊಳ್ಳುತಿಲ್ಲ,

ನಿಷ್ಕಾರುಣನಲ್ಲ, ಮಮತೆ ನಾವುಣ್ಣುತಿಲ್ಲ,

ಆನುಭವದೂರನಲ್ಲ, ನಾವವನ ಸಾರುತಿಲ್ಲ,

ಮೇಲೆಲ್ಲೂ ಕೂತಿಲ್ಲ, ನಾವೊಳ ಸೇರಿಸುತ್ತಿಲ್ಲ.Tuesday, February 5, 2013

ಅಚ್ಚರಿಯೇನಿಲ್ಲ..


-----

ಅಚ್ಚರಿಯೇನಿಲ್ಲ, ಒಮ್ಮೊಮ್ಮೆ....

ಅರ್ಥವಾಗದ ಭಾವವೂ ಆಪ್ತವೆನಿಸಿದರೆ,

ಕೆಸುವಿನೆಲೆಗಂಟದ ಹನಿಯ ನಂಟಿನ ಹಾಗೆ..

ಬೆರಳೆಣಿಕೆಯ ಮಾತುಗಳೂ ಬೇರೂರಿದರೆ,

ಒಂದಗುಳು ಚರಿಗೆಯನ್ನದ ಪ್ರತಿನಿಧಿಯಾದ ಹಾಗೆ..

ನಾಲ್ಕು ಹೆಜ್ಜೆಯ ನಂಟು ಜೀವಿತದ ಗಂಟಾದರೆ,

ಸಪ್ತಪದಿ ಜನ್ಮದ ಜೊತೆಗೆ ನಾಂದಿಯಾಗುವ ಹಾಗೆ..

ಅಳಿದು, ಮುಗಿಯಿತೆನಿಸಿದ್ದೊಂದು ಜೀವತಳೆದರೆ,

ಇಲ್ಲದಂತಿಹ ಗೆಡ್ಡೆ ಸಕಾಲ ಚಿಗಿತು ಇರುವ ತೋರುವ ಹಾಗೆ..

ಬಂಧ ಮೌನ-ದೂರ-ದೂರುಗಳ ಮೀರಿ ಉಳಿದರೆ,

ಅಪ್ಪಳಿಸಿ ಹೊಡೆದಷ್ಟೂ ಚೆಂಡು ಪುಟಿದೇಳುವ ಹಾಗೆ..


ಹೆಚ್ಚೇನಲ್ಲ, ಅಚ್ಚರಿಯ ಮೀರಿ

ಒಂದೇ ಪವಾಡ ಬಯಸಿದೆ ಜೀವ,

ವಿವರಣೆ, ಸಮರ್ಥನೆಗಳಾವುದೂ ಹನಿಯದೆ,

ಮೊಳೆತೀತೆ ಒಣಗಿದ ಸ್ನೇಹಬೀಜ?

ಯಾಚನೆ, ಹರಕೆ-ಹಾರೈಕೆಯ ಚಪ್ಪರವಿಲ್ಲದೆ,

ಹಬ್ಬೀತೇ ನಂಬಿಕೆಯ ಬಳ್ಳಿ?


ಅಚ್ಚರಿಯೇನಿಲ್ಲ,

ವಿಧಿಯಿಚ್ಛೆಗೆ ಇದೂ ಹೀಗೆ ನಡೆದರೆ,

ಅಂದು ಆ ಚರಣ ತಾಗಿ ಕಲ್ಲು ಹೆಣ್ಣಾದ ಹಾಗೆ,

ಸ್ಪರ್ಶಮಣಿ ಸಂಗದಲಿ ಮಣ್ಣು ಹೊನ್ನಾದ ಹಾಗೆ.

Monday, February 4, 2013

ಮುಗಿಯದ ರಾತ್ರಿ..


------------------------------

ಕತ್ತಲಲ್ಲ, ರಾತ್ರಿ ಬಹಳ ಕಾಡುತಿದೆ..

ನಿದ್ರೆಯೊಮ್ಮೆ ಪ್ರೌಢೆಯಂತೆ ಮಡಿಲಿತ್ತರೆ

ಒಮ್ಮೆ ತರಳೆಯಂತೆ ಕಣ್ಣುಮುಚ್ಚಾಲೆ..

ಕಿರಿಯದಕೆ ಇತ್ತ ಅಮ್ಮನ ಗಮನಕಳುವಂತೆ

ಮೊದಲ ಕೂಸು, ನಾ ನಿದ್ದೆಗತ್ತಂತಿದೆ.....ನಿದ್ದೆಗೊಡದ ರಾತ್ರಿಯಲಿ ಅಜ್ಜಿಯ ನೆನಪು.

ಅಜ್ಜನಿಲ್ಲದ ಹತ್ತನೆಯ ವರ್ಷವೂ ಬೆಚ್ಚಿಬೀಳಿಸಿದ

ಧಿಗ್ಗನೆದ್ದು ಕೂರಿಸಿದ ಆತನ ಕಹಿಕನಸು

ಆಕೆ ಬೆಚ್ಚಿದ್ದಕೆ ನಾ ಬೆಚ್ಚಿ, ಎಚ್ಚರಾಗಿ

ಬಾಚಿ ತಬ್ಬುವ ಅಜ್ಜಿಯೆದೆಬಡಿತದ ಲಾಲಿಗೆ

ಮತ್ತೆ ಬೆಚ್ಚನೆ ಸೆರಗೊಳಹೊಕ್ಕ ಆ ನಿದ್ದೆಯಲಿ

ಸಂವಹಿಸಲ್ಪಟ್ಟ ಆಕೆ ಈಗ ಮೈದುಂಬಿ ಬಂದಂತೆ...ರಾತ್ರಿಗಳಲಿ ಸೀತಕ್ಕನೂ ಕಾಡುತಾಳೆ.

ಹಗಲು ಒಂಟಿ ಮನೆಯೊಳಗೆ ಒಂಟಿ ಯುವತಿ.

ರಾತ್ರಿ ನೂರಾಳು ಮನೆಯೆದುರು ಸರದಿಗೆ ಕಾದು,

ಥೇಟ್ ಆಕೆಯ ನಾಯಿಯಂತೆ ಸುರಿಸುತ್ತ ಜೊಲ್ಲು.

ಕ್ಲಾಸಲ್ಲಿ ಪಕ್ಕ ಕೂರುತಿದ್ದವಳು ತಾತನೋರಗೆಯ

ನಾಯಕರನೊತ್ತಿ ಕೂತು ನಕ್ಕದ್ದು ಅಂದೊಂದು ಒಗಟು.

ನೂರುತ್ತರ ಹೊತ್ತುತಂದಾಕೆ ಈಗ ನನ್ನೊಳಗಾವರಿಸಿದಂತೆ...ಮುರಿದ ಮೊದಲನೆ ಗೊಂಬೆ, ಕಿರುಬನೊಯ್ದ ಮೊದಲ ಕರು,

ಕಳೆದ ಮೊದಲನೆಯ ಕೊಡೆ, ಶಾಲೆಯ ಮೊದಲನೆ ಹೊಡೆತ,

ಮೊದಲ ಕಳ್ಳತನ ಬಯಲಾಗೆ ಅಮ್ಮ ಅಪ್ಪಿ ಬರೀ ಅತ್ತದ್ದು,

ನಾ ಕಲಿಸಿದ ತಂಗಿಯ ಮೊದಲನುಡಿ, ಮೊದಲ ಸ್ಪರ್ಧೆ,

ಮೊದಲ ಪರೀಕ್ಷೆ, ಮೊದಲ ಸೋಲು-ಗೆಲುವು,

ಮೊದಲ ನಿರಾಕರಣೆ, ಮೊದಲ ಸ್ನೇಹ, ಕೋಪ-ರಾಜಿ,

ಮೊದಲ ನಾಟಕದ ಪಾತ್ರ, ಸುಟ್ಟ ಮೊದಲ ಪ್ರೇಮ ಪತ್ರ...ಹೀಗೆ ಹರಡಿ ಸಾವಿರಾರು ಅಂದಿನ ಮೊದಲುಗಳು,

ನಿಶೆಯಂಗಳದಿ ಸದ್ದಿರದ ಗಲಾಟೆಗೋಜಲು.

ಶಾಂತಿಪ್ರಿಯೆ ನಿದಿರೆ ಮಾರುದೂರ ಸಾಗಿಹಳು

ಮಾತಿಲ್ಲ, ಕತೆಯಿಲ್ಲ, ಮೌನವೂ ಅಲ್ಲದ ಬರೀ ನಿಶ್ಯಬ್ಧ.

ಶಬ್ಧಲೋಕದ ಲೀಲೆಯೊಳು ಮುಳುಗುವ,

ಒಳಗೆನ್ನನಷ್ಟೇ ಕಾಣುವ ಹಂಬಲ ಬೆನ್ನತ್ತಿದೆ ಬೆಳಗ.

ದಾಪುಗಾಲಿಗು ಮೀರಿ ಬೆಳೆವ ರಾತ್ರಿ ಬಹಳ ಕಾಡಿದೆ.Sunday, February 3, 2013

ಇದಕುತ್ತರವಿದೆಯೇ..


------------------------

ಕಾಡಮೂಲೆಯಲೊಂದು ಬೀಜ ಮೊಳೆತಿದೆ,

ಪುಷ್ಟ ಕಾಂಡ, ಪಚ್ಚೆ ಎಲೆಗಳು,

ಮೊಗ್ಗು ಬಿರಿದು, ಬಿಳಿಯ ಹೂಗಳು.
ನಾಡಲೊಂದು ದೊಡ್ಡ ಮನೆ,


ಅಂಗಳದಿ ಅದೇ ಕಾಂಡ, ಅದೇ ಎಲೆ,
ಅದೇ ಮೊಗ್ಗು ಬಿರಿದದೇ ಹೂಗಳು.ನಾಡಲೊಂದು ಹೆಸರು, ಹೂವಿಗಷ್ಟು ಬೆಲೆ,

ಕಾಡಲೇನೂ ಇಲ್ಲ, ಹೂವಿನದು ಅಜ್ಞಾತನೆಲೆ.

ಎರಡೂ ಕಡೆ ಹರಡಿತ್ತದೇ ಚೆಲುವ ಬಲೆ.ನಾಡಿನದು ಮನೆಯಂಗಳದ್ದು

ಅದರದೆಲ್ಲ ಮನೆಯೊಡೆಯನದಷ್ಟೇ ಸೊತ್ತು

ಕಾಡಲಿ ಗಿಡದ್ದು, ವನದೇವಿಯ ನಾಸಿಕದ ನತ್ತು.ಕಾಡಲದ ಕಂಡ ನಾಡಿಗೊಂದು ಜಿಜ್ಞಾಸೆ....

ಕಾಡಲ್ಲಿ ಬಿತ್ತಿದ್ದು ಯಾರು, ಆರೈಕೆಯಿತ್ತವರಾರು?

ಬೀಜ, ನೀರು-ಸಾರಗಳ ಕಾಡು ಕದ್ದೊಯ್ದಿತೇ?ಬಾಯಿಗೊಂದು ಮಾತು, ಮನಸಿಗೊಂದು ದೂರು

ದಾಖಲಾಗಿದೆ ನಾಡ ನ್ಯಾಯದೇವತೆಯಲ್ಲಿ.

ಜಾಥಾ, ಧಿಕ್ಕಾರ, ಘೋಷಣೆ-ಪ್ರಶ್ನೆಗಳೂ ಹುಟ್ಟಿವೆ.ಕಾಡು ನಗುತಿದೆ ನಾಡಿನಳುಕಿಗೆ, ಅಭದ್ರತೆಗೆ.

ಕೇಳಿದೆ-"ಗಾಳಿ ಯಾರಪ್ಪನ ಮನೆಯ ಆಸ್ತಿ?

ಯಾವ ದೊಣ್ಣೆನಾಯ್ಕನ ಅಪ್ಪಣೆ ಬೇಕದಕೆ?ಅದೇ ಬೇಕಾದ್ದನೊಯ್ದಿದೆ, ಬೇಕಾದಲ್ಲಿಳಿಸಿದೆ.

ಗಾಳಿಯೂರಿದ ಬೀಜಕುಂಟು ನೆಲದ ನೀರು,

ವನದೇವತೆಯ ಮಡಿಲು, ರವಿಯ ಬೆಳಕು.

ಈಗ ಬಂಧಿಸಿರಿ ಗಾಳಿಯ ಸಾಧ್ಯವಾದರೆ..

ಹೊತ್ತೊಯ್ಯಿರಿ, ವಿಚಾರಿಸಿರಿ, ನಾಡಿನಮೂಲ್ಯ

ಆಸ್ತಿಯದ ಬೇನಾಮಿ ನೆಲದಲೂರಿದ್ದು ಯಾಕೆ?ಪ್ರಶ್ನಿಸಿ ನೆಲ, ರವಿ, ವನದೇವಿಯ ಸಾಧ್ಯವಾದರೆ..

ಹೆಸರಿಲ್ಲದ ಜನ್ಮವದು, ಮೊಳೆಸಿ ಬೆಳೆಸಿದ್ದು ಯಾಕೆ?

ಅಲ್ಲರಳಬಾರದಿತ್ತದು, ಅರಳಿಸಿದ್ದು ಯಾಕೆ?"Saturday, February 2, 2013

ಸಾಮೀಪ್ಯಕಿಲ್ಲ ಪರೀಕ್ಷೆ, ವಿರಹಕಷ್ಟೇ...


ಪ್ರೇಮದಲಿಲ್ಲ ಪ್ರಶ್ನೆ, ಪರೀಕ್ಷೆಯಲಷ್ಟೇ..

--------------------------

ಕಾಡಿದರೆ ದೂರ ಎದೆಗವುಚಿದ್ದರ ಸಾಕ್ಷಿ

ಕಾಡದಿದ್ದರದು ಎದೆಗೂಡಿಂದ ಮುಕ್ತ ಪಕ್ಷಿ

----------------------------------

ನಿತ್ಯಸ್ತುತ್ಯ ಪ್ರೇಮದೇವ ಮತ್ತವನ ಲೀಲೆ

ತಿರುಗಿ ನೋಡದ ಹೆಜ್ಜೆ ಥೇಟ್ ಬಿಟ್ಟ ಶರಮಾಲೆ
----------------------------------------
ನೋವಿಗಳದ, ಕಣ್ಣೀರಿಗಂಜದ,


ನಗುವ ಬೆನ್ನಟ್ಟಿ ಎದುರಾದ ಹತಾಶೆಗಳುಕದ

ನಾನಿಲ್ಲವಾಗುವ, ನಿನ್ನೊಳಗೇ ಉಸಿರಾಡುವ

ನಿನ್ನೆಡೆಗಿನ ಮುಳ್ಳನಡಿಗೆಯೂ ಹಾಯೆನಿಸುವ

ಮೂರ್ಖತನದ ಪರಮಾವಧಿಯೇ ಪ್ರೇಮ


Friday, February 1, 2013

ಮುಂದಿನ ಹೆಜ್ಜೆ


---------------

ನೀನಲ್ಲೇ ಇರುವೆಯೆಂದು ಚಾಚಿದ ಕೈ,

ಕಬಂಧ ಬಾಹುವಾಗುತಲೇ ಸಾಗಿದೆ.

ಹಿಂದುಳಿದದ್ದು ನೀನೋ, ಮುನ್ನಡೆದದ್ದು ನಾನೋ ..

ಕೈಯ್ಯ ಅಸ್ತಿತ್ವ ಶುರುವಾದಲ್ಲಿ ಉಳುಕಿನ ನೋವು.ಹೊಂದಿದ್ದೆಲ್ಲ ಹಳೆಯ ಮಾತು,

ಅಂದೆಂಬುದೊಂದು ಕನಸು ಎನ್ನುತಿದೆ,

ಸುಳ್ಳ ಹಸೆಯೇರಿದ ಸುಖವುಣ್ಣೊ ಬಯಕೆ

ಆತ್ಮವಂಚನೆಯದಕೆ ಜೋಡಿಯಂತೆ.ಇರುಳಲೂ ಕಾಣಿಸುವ ಬಾವಿ,

ಹಗಲಲಿ ಬಿದ್ದ ಪೆದ್ದುತನಕೇನು ಹೇಳಲಿ?

ಸಂಪರ್ಕಗಳೆಲ್ಲ ಸಂಬಂಧಗಳಾಗವು,

ಆಗಲೂಬಾರದೆಂಬುದ ಹೇಗೆ ಮನಗಾಣಿಸಲಿ?ಮೆಚ್ಚುವಾಸೆ ಬಾಳನು ನಾ ನಾನೆಂಬ ನಿಜಕೆ,

ಸಂತಾನ, ಸಂಬಂಧ, ಅನುಬಂಧವೆಂದಲ್ಲ,

ಮುಂದಿನ ಹೆಜ್ಜೆಯತ್ತಲೇ, ಹೌದು, ತರಿದೆಲ್ಲ,

ಮನದೇಕಾಂತದ ಜೊತೆ ಮುಕ್ತ ವಿಕಾಸದೆಡೆಗೆ