Tuesday, February 5, 2013

ಅಚ್ಚರಿಯೇನಿಲ್ಲ..


-----

ಅಚ್ಚರಿಯೇನಿಲ್ಲ, ಒಮ್ಮೊಮ್ಮೆ....

ಅರ್ಥವಾಗದ ಭಾವವೂ ಆಪ್ತವೆನಿಸಿದರೆ,

ಕೆಸುವಿನೆಲೆಗಂಟದ ಹನಿಯ ನಂಟಿನ ಹಾಗೆ..

ಬೆರಳೆಣಿಕೆಯ ಮಾತುಗಳೂ ಬೇರೂರಿದರೆ,

ಒಂದಗುಳು ಚರಿಗೆಯನ್ನದ ಪ್ರತಿನಿಧಿಯಾದ ಹಾಗೆ..

ನಾಲ್ಕು ಹೆಜ್ಜೆಯ ನಂಟು ಜೀವಿತದ ಗಂಟಾದರೆ,

ಸಪ್ತಪದಿ ಜನ್ಮದ ಜೊತೆಗೆ ನಾಂದಿಯಾಗುವ ಹಾಗೆ..

ಅಳಿದು, ಮುಗಿಯಿತೆನಿಸಿದ್ದೊಂದು ಜೀವತಳೆದರೆ,

ಇಲ್ಲದಂತಿಹ ಗೆಡ್ಡೆ ಸಕಾಲ ಚಿಗಿತು ಇರುವ ತೋರುವ ಹಾಗೆ..

ಬಂಧ ಮೌನ-ದೂರ-ದೂರುಗಳ ಮೀರಿ ಉಳಿದರೆ,

ಅಪ್ಪಳಿಸಿ ಹೊಡೆದಷ್ಟೂ ಚೆಂಡು ಪುಟಿದೇಳುವ ಹಾಗೆ..


ಹೆಚ್ಚೇನಲ್ಲ, ಅಚ್ಚರಿಯ ಮೀರಿ

ಒಂದೇ ಪವಾಡ ಬಯಸಿದೆ ಜೀವ,

ವಿವರಣೆ, ಸಮರ್ಥನೆಗಳಾವುದೂ ಹನಿಯದೆ,

ಮೊಳೆತೀತೆ ಒಣಗಿದ ಸ್ನೇಹಬೀಜ?

ಯಾಚನೆ, ಹರಕೆ-ಹಾರೈಕೆಯ ಚಪ್ಪರವಿಲ್ಲದೆ,

ಹಬ್ಬೀತೇ ನಂಬಿಕೆಯ ಬಳ್ಳಿ?


ಅಚ್ಚರಿಯೇನಿಲ್ಲ,

ವಿಧಿಯಿಚ್ಛೆಗೆ ಇದೂ ಹೀಗೆ ನಡೆದರೆ,

ಅಂದು ಆ ಚರಣ ತಾಗಿ ಕಲ್ಲು ಹೆಣ್ಣಾದ ಹಾಗೆ,

ಸ್ಪರ್ಶಮಣಿ ಸಂಗದಲಿ ಮಣ್ಣು ಹೊನ್ನಾದ ಹಾಗೆ.













No comments:

Post a Comment