Sunday, February 24, 2013

ಅಬ್ಜಾರಣ್ಯ ಬೆಳಕಾಯಿತು


----------------------

ಬಿಳಿಯುಟ್ಟು, ಬೆಳ್ಳಿಯಾಭರಣ ತೊಟ್ಟು,

ಬೆಳ್ಳಿಕಿರೀಟದ ಸುರಸುಂದರಾಂಗ.

ಹೊಳೆಹೊಳೆವ ಮೈಕಾಂತಿ,

ಶುಭ್ರಶ್ವೇತ ವ್ಯಕ್ತಿತ್ವ....

ಕಣ್ಣಿಂದೇಕೋ ನಸುಮಂಕು,

ಕಪ್ಪು ಕೂದಲಡಿ ತಲೆತುಂಬ

ಕಾಡಿದ ಪ್ರಶ್ನೆಗಳೂ ಮಬ್ಬುಕಪ್ಪು..



ತಂದೆಗೇನು, ಇಪ್ಪತ್ತೇಳಲ್ಲ,

ನೂರು ಸಂತಾನಕೂ

ನೂರ್ಮಡಿಸಿಯೋ, ವಿಭಜಿಸಿಯೋ

ವಾತ್ಸಲ್ಯ ಸಮಹಂಚಿಕೆಯಾದೀತು..

ಪ್ರೇಮ ಏಕದಳಧಾನ್ಯ, ಹೇಗೊದಗೀತು?!

ಎರಡೂ ಆಗದು, ಆದರೆ ಚೂರುಚೂರಷ್ಟೇ..

ತನ್ನರಿವಿರದೇ ಮೊಳೆತ ಪ್ರಜಾಪತಿಯ

ಪುತ್ರಿಯರೆಲ್ಲರ ಧಾರೆಯ ನಿರ್ಧಾರಕೆ,

ತಾ ಬಲಿಯಾಗೆ, ದಕ್ಷಗೆ ಬೆಂಬಲವಿತ್ತ ದೈವ

ಅನಿವಾರ್ಯಒಪ್ಪಿಗೆಯ ಮೌನ ತನಗೇಕಿತ್ತದ್ದು?



ರೋಹಿಣಿ ತನ್ನ ಮನದರಸಿ,

ಉಳಿದವರು ಮನೆಗಷ್ಟೇ..

ರೋಹಿಣಿಗಿತ್ತ ಒಂದು ಪ್ರೀತಿ ಮುತ್ತಿಗೂ

ಒಂದೇ, ಎರಡೇ ಇಪ್ಪತ್ತಾರು ಪ್ರಶ್ನಾರ್ಥನೋಟ

ಆರ್ತನಿರೀಕ್ಷೆ, ನಿರಾಸೆ ಮತ್ತಾಪಾದನೆಗಳು.

ಇಲ್ಲದ್ದ ತಾನೆಲ್ಲಿಂದ ತಂದು ಕೊಡಲಿ?!

ಎಲ್ಲ ಇದ್ದೇ ಬೆಳೆದವರಿಗೆ ಇಲ್ಲದ್ದ ಹೇಗೆ ತೋರಿಸಲಿ?



ಅಸಮಾಧಾನದ ಹೊಗೆ ತವರ ತಲುಪಿ,

ಅಲ್ಲಿ ಭುಗಿಲೆದ್ದ ಕೋಪ, ನಭಕದರ ತಾಪ.

ಚೆಲುವಿನೊಡೆಯ ಶಶಾಂಕಗೆ

ವ್ಯಕ್ತಿತ್ವ ನಶಿಸುವ ಶಾಪ..

ಸೊರಗುತ ಸಾಗಿರುವಾತಗೆ ಪ್ರೀತಿಯುಣಿಸಿ,

ಪುಷ್ಟಿ ಮಾಡಲೆತ್ನಿಸುವ ರೋಹಿಣಿ

ಫಲವಿಲ್ಲದ ಸಾಧನೆಗೆ ಕೊರಗುತಾಳೆ.



ಭಕ್ತರಾಧೀನ ಶಿವನ ನೆನಪು,

ಕಾರ್ಮೋಡದೆಡೆ ಮಿಂಚಿನಗೆರೆಯ ಹೊಳಪು...

ತಪಗೈದು ಶಾಪದ ತಾಪವಿಳಿಸುವ ಆಸೆ,

ಚಂದ್ರ ಅಡಿಯಿರಿಸಿದ ಆ ಕಾಡಿನೊಳಗೆ.

ದಟ್ಟಕಾನನದ ಕಡುಪಚ್ಚೆಯಡಿಯ ಕಪ್ಪು,

ತಾರಾಪತಿಯ ಅರೆಕಾಂತಿಗೂ ಬೆಳ್ಳನೆ ಬೆಳಗಿ,

ಅಬ್ಜಾರಣ್ಯ ಬೆಳಕಾಯಿತು..



ತಪಕೆ ಮೆಚ್ಚಿದ ಶಿವ, ತಿಂಗಳನಿಗೆ

ಪಕ್ಷವೆರಡರ ತಿಂಗಳಿನವಧಿಯಿತ್ತ...

ಪಕ್ಷವೊಂದು ಕ್ಷೀಣವಾಗಿಸಿದರೆ,

ಮುಂದಿನದರಲಿ ವೃದ್ಧಿಯಾಗೆಂದ..

ಹುಣ್ಣಿಮೆ, ಅಮಾವಾಸ್ಯೆಗಳ ವ್ಯಾಖ್ಯಾನಿಸಿ,

ಶುಕ್ಲ, ಕೃಷ್ಣಪಕ್ಷಗಳ ನೇಮಿಸಿದ...



ಉಡುಪತಿ ತಪಗೈದು ವಿರಾಜಿಸಿದ

ಜಾಗವೇ ಉಡುಪಿ,

ಚಂದ್ರನ ಪರಿಪಾಲಿಸಿದ ಈಶ್ವರನೇ

ಚಂದ್ರಮೌಳೀಶ್ವರ ಎಂದಾಯಿತು.



(ನಾನು ಓದಿದ ಪೂರ್ಣಪ್ರಜ್ಞ ಕಾಲೇಜಿನ ಆವರಣದೊಳಗೆ ಈ ಅಬ್ಜಾರಣ್ಯವಿದ್ದ ಜಾಗವಿದೆ, ಅಲ್ಲೀಗ ನಾಗಮಂಡಲದ ತಯಾರಿಯ ಸಂಭ್ರಮವಂತೆ, ತವರಿಂದ ಬಂದ ಆ ಸುದ್ಧಿ ನನ್ನೊಳಗೆ ಮೂಡಿಸಿದ ಸಾಲುಗಳಿವು)









No comments:

Post a Comment